ನಮ್ಮ ಪ್ರತಿಕ್ರಿಯಾಶೀಲತೆ ನಮ್ಮ ಸೃಜನಶೀಲತೆಯನ್ನು ಕೊಲ್ಲುತ್ತಿದೆಯೇ?

ಸಾಮಾಜಿಕ ಮಾಧ್ಯಮಗಳು ಈಗಂತೂ ಒಂದು ದೊಡ್ಡ ಶಕ್ತಿಯ ಕೇಂದ್ರಗಳಾಗಿವೆ. ಜಾಲತಾಣಿಗರು ಒಂದು ವಿಚಾರವನ್ನು ಕೈಗೆತ್ತಿಕೊಂಡರೆ ಅದು ಎಂತೆಂತಹ ಸಾಮಾಜಿಕ ಪರಿಣಾಮಗಳಿಗೆ ಈಡಾಗಬಹುದೋ ಊಹಿಸಲು ಸಾಧ್ಯವಿಲ್ಲ. ಈ ಹೊಸ ಮಾಧ್ಯಮದಿಂದಾಗಿ ಈಜಿಪ್ಟಿನಲ್ಲಿ ಒಂದು ಕ್ರಾಂತಿಯೇ ನಡೆದುಹೋಯಿತು. ಇತ್ತೀಚೆಗೆ ನಮ್ಮಲ್ಲಿಯೇ ಫೇಸ್‌ಬುಕ್‌ನ ಮೋಸದಬಲೆ ಫ್ರೀ-ಬೇಸಿಕ್ಸ್ ಅನ್ನು ಬೆಂಬಲಿಸಿದ ಪ್ಲಿಪ್‌ಕಾರ್ಟ್ ವಿರುದ್ಧವಾಗಲೀ, ‘ದೇಶ ಅಸಹಿಷ್ಣುವಾಗಿದೆ’ ಎಂದ ಆಮಿರ್ ಖಾನ್ ಪ್ರತಿನಿಧಿಸುತ್ತಿದ್ದ ಸ್ನ್ಯಾಪ್‌ಡೀಲ್ ವಿರುದ್ಧವಾಗಲೀ ಟ್ವಿಟರ್ ಬಳಕೆದಾರರು ವ್ಯಕ್ತಪಡಿಸಿದ ವಿರೋಧ ಈ ಮಾಧ್ಯಮಗಳ ಸಾಮರ್ಥ್ಯವನ್ನು ತೋರಿಸುತ್ತದೆ.

ಆದರೆ, ಟ್ವಿಟರ್‌ನಲ್ಲಿ ಟ್ರೆಂಡ್ ಆಗುವ ಸುದ್ದಿಗಳನ್ನು ನೋಡಿದರೆ, ಹೆಚ್ಚಿನವು ನಿಜಕ್ಕೂ ಯಾರಿಗೂ ಪ್ರಯೋಜನವಿಲ್ಲದ ಸುದ್ದಿಗಳೇ ಆಗಿರುತ್ತವೆ. ಉದಾಹರಣೆಗೆ ಹೇಳುವುದಾದರೆ ಇತ್ತೀಚಿನ ಸ್ಟ್ಯಾಂಡ್-ಅಪ್ ಕಮೇಡಿಯನ್ ತನ್ಮಯ್ ಭಟ್‌ನ ಸ್ನ್ಯಾಪ್‌ಚಾಟ್ ವೀಡಿಯೋ. ಜೊತೆಗೆ ಬಹಳಷ್ಟು ಪ್ರತಿಕ್ರಿಯೆಗಳು ಯಾರನ್ನೋ ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿರುತ್ತವೆ, ಇಲ್ಲವೇ ಯಾರೋ ತಮ್ಮ ಕೆಲಸವನ್ನು ಸರಿಯಾಗಿ ಮಾಡಲಿಲ್ಲ ಅನ್ನುತ್ತಿರುತ್ತವೆ. ಮತ್ತು ಪ್ರತಿಯೊಂದಕ್ಕೂ ಸಾವಿರಾರು ಪ್ರತಿಕ್ರಿಯೆಗಳು.

ಭ್ರಷ್ಟಾಚಾರಗಳು, ಕೊಲೆ-ಅತ್ಯಾಚಾರಗಳಂತಹ ಸುದ್ದಿಗಳು ಪ್ರಕಟವಾದಾಗ ತಪ್ಪುಮಾಡಿದವರನ್ನೆಲ್ಲ ಗುಂಡಿಟ್ಟು ಸಾಯಿಸಬೇಕು, ಇಡೀ ದೇಶ ಬದಲಾಗಬೇಕು ಎಂದೆಲ್ಲ ಮಾತನಾಡುತ್ತೇವೆ. ಆದರೆ, ನೋಡಿ ಅಂತಹ ಉದ್ವೇಗದಿಂದ ಏನೂ ಪ್ರಯೋಜನ ಆಗುವುದಿಲ್ಲ, ಜೊತೆಗೆ ಆ ಕ್ಷಣದಲ್ಲಿಯೇ ನಾವು ಅತ್ಯಂತ ಕಡಿಮೆ ಸೃಜನಶೀಲರಾಗಿರುತ್ತೇವೆ. ಆ ಕ್ಷಣದ ಉದ್ವೇಗ ನಮ್ಮಿಂದ ಏನನ್ನೂ ಮಾಡಿಸುವುದಿಲ್ಲ. ಸ್ವಲ್ಪ ಸಮಯದ ನಂತರ ಆ ಕಾವು ಕಡಿಮೆಯಾಗುತ್ತದೆ ಮತ್ತು ನಾವು ಆದದ್ದನ್ನೆಲ್ಲ ಮರೆತು ನಮ್ಮ ನಿತ್ಯ ಜೀವನಕ್ಕೆ ಮರಳುತ್ತೇವೆ. ಆದರೆ, ಹಾಗೆ ಮರಳಿದ ನಂತರದಲ್ಲಿಯೂ ಆ ಉದ್ವೇಗದ ಏದುಸಿರು ಇನ್ನೂ ಅನೇಕ ತಾಸುಗಳವರೆಗೆ ನಮ್ಮಲ್ಲಿರುತ್ತದೆ.

ಗಮನಿಸಿ ನೋಡಿ, ಒಂದೋ ನೀವು ಒಂದು ಸೃಜನಶೀಲ ಕ್ರಿಯೆಯಲ್ಲಿ ತೊಡಗುತ್ತೀರಿ, ಅಥವಾ ಬೇರೆಯವರ ಕೆಲಸಗಳ ಕುರಿತು ಪ್ರತಿಕ್ರಿಯೆಯಲ್ಲಿ ತೊಡಗುತ್ತೀರಿ. ಈ ಎರಡನ್ನೂ ಒಟ್ಟಿಗೇ ಮಾಡುವುದು ಸಾಧ್ಯವಿಲ್ಲ. ಒಂದು ವೇಳೆ ನಮ್ಮ ಮನಸ್ಸು ಹೀಗೆ ಪ್ರತಿಕ್ರಿಯೆಯನ್ನು ನೀಡುವುದನ್ನೇ ಅಭ್ಯಾಸ ಮಾಡಿಕೊಂಡುಬಿಟ್ಟರೆ ನಮ್ಮ ಸೃಜನಶೀಲ ಕ್ರಿಯೆಯೂ ಕೂಡಾ ಪ್ರತಿಕ್ರಿಯಾತ್ಮಕವಾದದ್ದೇ ಆಗುತ್ತದೆ. ಕವಿಗಳೆಲ್ಲ ಬಂಡಾಯಗಾರರಾದಾಗ ಅವರ ಕವಿತೆಗಳ ಗತಿ ಏನಾಗಿದೆ ಎಂಬುದು ಫೇಸ್‌ಬುಕ್‌ನಲ್ಲಿ ಸಕ್ರಿಯವಾಗಿರುವ ನಿಮಗೆಲ್ಲ ಗೊತ್ತು.

“ಯಾವುದನ್ನು ಗದ್ಯರೂಪದಲ್ಲಿ ಬರೆಯಬಹುದೋ, ಅದನ್ನು ಪದ್ಯರೂಪಕ್ಕೆ ಇಳಿಸಬಾರದು. ನಮ್ಮ ಎಲ್ಲ ತಿಳುವಳಿಕೆಗಳನ್ನು ಮೀರಿ ಅವ್ಯಕ್ತದೆಡೆಗೆ ಕೈಚಾಚಿದಾಗ ಮಾತ್ರ ಕಾವ್ಯಧಾರೆಗೆ ನಾವು ತೆರೆದುಕೊಳ್ಳುತ್ತೇವೆ.”

ನನಗೂ ಕೂಡಾ ಯಾವುದೋ ಒಂದು ಘಟನೆ ನಡೆದಾಗ ಅದಕ್ಕೆ ಪ್ರತಿಕ್ರಿಯೆ ನೀಡಬೇಕೆಂದು ತೀವ್ರವಾಗಿ ಅನ್ನಿಸುತ್ತದೆ. ಆದರೂ ನಾನು ನನ್ನನ್ನು ನಿಯಂತ್ರಿಸಿಕೊಳ್ಳುತ್ತೇನೆ. ಒಂದು ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಆ ಪ್ರತಿಕ್ರಿಯೆ ನೀಡದಿದ್ದರೂ ನನ್ನೊಳಗೇ ಆ ಸರಿತಪ್ಪುಗಳ ತಾಕಲಾಟಗಳು ಇದ್ದೇ ಇರುತ್ತವೆ. ಆದರೆ, ಇದರಿಂದ ಒಂದು ನನಗೆ ಅರ್ಥವಾಯಿತು – ಈ ಎಲ್ಲ ಪ್ರತಿಕ್ರಿಯೆಗಳಿಂದ ನನ್ನೊಳಗೆ ಗೊಂದಲಗಳು ಹುಟ್ಟುತ್ತಿವೆಯೇ ಹೊರತೂ ಇದರಿಂದ ಯಾರಿಗೂ ನಿಜಕ್ಕೂ ಏನೂ ಪ್ರಯೋಜನವಾಗುತ್ತಿಲ್ಲ. ನನ್ನದು ನಿಜಕ್ಕೂ ಪ್ರತಿಕ್ರಿಯೆಯೇ ಹೊರತೂ ಸೃಜನಶೀಲವಾದ ಕ್ರಿಯೆಯೇನೂ ಅಲ್ಲ ಎಂದು.

ಆದರೆ, ಜಗತ್ತಿನಲ್ಲಿ ಒಳಿತು-ಕೆಡುಕು ಇದೆ, ಅದರ ಮಧ್ಯೆಯೇ ನಾವು ಬದುಕುತ್ತಿದ್ದೇವೆ – ಪ್ರತಿಕ್ರಿಯಿಸದೇ ಇರುವುದು ಹೇಗೆ ಎಂದು ನಮಗೆಲ್ಲ ಅನ್ನಿಸುತ್ತದೆ. ಆದರೆ ಈ ಚರ್ಚೆಗಳನ್ನು ನೋಡುತ್ತಿದ್ದರೆ – ಉದಾಹರಣೆಗೆ ಎಡಪಂತೀಯ ಬಲಪಂತೀಯ ಚರ್ಚೆಗಳು – ನೀವು ಎಂತಹ ಒಳ್ಳೆಯ ವಿಚಾರವನ್ನೇ ಹೇಳಿ, ಅದಕ್ಕೊಂದು ವಿರುದ್ಧ ದಿಕ್ಕಿನ ವಾದ ಸದಾ ಸಿದ್ಧವಿರುತ್ತದೆ. ತೀರಾ ‘ವಸುಧೈವ ಕುಟುಂಬಕಂ’ ಎಂಬ ಅತ್ಯುನ್ನತ ಸದಾಶಯದ ಕುರಿತೂ ತಿರಸ್ಕಾರದ ದನಿಯಲ್ಲಿ, ತಿರುಚಿ ಬರೆದವರಿದ್ದಾರೆ. ಹಾಗಾಗಿ, ಈ ಚರ್ಚೆಗಳು ನಿಜಕ್ಕೂ ನಮ್ಮನ್ನು ಎಲ್ಲಿಗೂ ಒಯ್ಯುವುದಿಲ್ಲ. ಏನೇ ಒಳ್ಳೆಯ ವಿಚಾರ ಹೇಳಿ, ತಪ್ಪು ಹುಡುಕುವ ಜನರಿದ್ದಾರೆ. ಇದು ಹೀಗೇ ಮುಂದುವರೆದರೆ ನಮ್ಮಲ್ಲಿ ಒಳಿತನ್ನು ಗುರುತಿಸುವ ಕ್ಷಮತೆಯೇ ಕಳೆದುಹೋಗಬಹುದು.

ಹಾಗಾಗಿ ಪ್ರತಿಕ್ರಿಯೆಗಳನ್ನು ಬಿಟ್ಟು ಸೃಜಿಸುವ ಕ್ರಿಯೆಯ ಕಡೆ ಮನಸ್ಸು ಹಾಕುವುದು ಉತ್ತಮ ಅಂದುಕೊಂಡೆ. ನೀವು ಏನನ್ನೋ ಒಂದನ್ನು ಕಟ್ಟಲು ತೊಡಗಿ ನೋಡಿ, ಆಗ ನಿಮಗೆ ಈ ಜಗತ್ತಿನ ಎಲ್ಲ ಒಳಿತು-ಕೆಡುಕುಗಳ ಕುರಿತು ಕಾರುಣ್ಯಭಾವ ಹುಟ್ಟುತ್ತದೆ, ಮತ್ತು ನೀವು ನಿಮ್ಮ ಕೆಲಸವನ್ನು ಮುಂದುವರೆಸಿಕೊಂಡುಹೋಗುತ್ತೀರಿ. ನಿಜವಾಗಿ ಸೃಜನಶೀಲನಾದ ಮನುಷ್ಯ ಅತ್ಯಂತ ಸರಳ ಮತ್ತು ಅಹಿಂಸಾಪರನಾಗಿರುತ್ತಾನೆ, ಅಲ್ಲವೇ?

ಈ ಅನಗತ್ಯ ಚರ್ಚೆಗಳ ವಿಷವರ್ತುಲದಿಂದ ನಾನಂತೂ ಹೊರ ಬಂದಿದ್ದೇನೆ. ಈ ಜಾಲತಾಣಗಳಲ್ಲಿ ಕಳೆಯುತ್ತಿದ್ದ ಸಮಯವನ್ನು ನನಗೆ ಮತ್ತು ಇತರರಿಗೂ ಹೆಚ್ಚು ಪ್ರಯೋಜನಕಾರಿಯಾಗಿ ಮಾಡುವ ಉದ್ದೇಶದಿಂದ ಹೊಸ ರೂಪದಲ್ಲಿ ಬ್ಲಾಗ್ ಬರೆಯುತ್ತಿದ್ದೇನೆ.

ನನ್ನ ಹೊಸ ಬ್ಲಾಗ್ ಸ್ವರೂಪ ಹೀಗಿದೆ:

  • ಬ್ಲಾಗ್ ಯುಗ ಆರಂಭವಾದ ಹೊಸತರಲ್ಲಿ ನಾವೆಲ್ಲ ಕತೆ, ಕವಿತೆ ಲಹರಿಗಳಂತಹ ಲೇಖನಗಳನ್ನು ಬರೆಯುತ್ತಿದ್ದೆವು – ಅಂದರೆ ಹೆಚ್ಚಾಗಿ ನಮಗಾಗಿ ಬರೆದುಕೊಳ್ಳುತ್ತಿದ್ದೆವು. ಈ ಹೊಸ ಬ್ಲಾಗ್ ಓದುಗರಿಗೆ ಸ್ಪೂರ್ತಿ, ಜ್ಞಾನ ಮತ್ತು ಮನರಂಜನೆ ನೀಡುವಂತದ್ದಾಗಿರಬೇಕು.
  • ಒಂದು ನಿರ್ದಿಷ್ಟ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಬರೆಯಬೇಕು (ನನಗೆ ಎರಡು-ಮೂರು ಕ್ಷೇತ್ರಗಳಲ್ಲಿ ಬರೆಯುವ ಆಸಕ್ತಿಯಿರುವುದರಿಂದಾಗಿ ನಾಲ್ಕು ಉಪ ಬ್ಲಾಗ್ ಗಳನ್ನು ಮಾಡಿದ್ದೇನೆ. ವಿಸ್ಮಯ ವಿಜ್ಞಾನ, ದಿನನಿತ್ಯಕ್ಕೆ ಪ್ರಯೋಜನಕಾರಿಯಾಗುವ ಆಧ್ಯಾತ್ಮ ಮತ್ತು ಬರವಣಿಗೆಯ ಕಲೆಯ ಕುರಿತಾದ ‘ಅಕ್ಷರಧಾಮ’ ಇವು ಪ್ರಮುಖ. ಉಳಿದಂತೆ ನನ್ನ ಕತೆ-ಕವಿತೆಗಳು).

ಈ ಸೃಜನಶೀಲ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಕುರಿತೇ ಚರ್ಚೆ ಮಾಡತೊಡಗಿದರೆ ಅದು ಮುಗಿಯುವಂತದ್ದಲ್ಲ. ಆದರೆ, ಈ ಚರ್ಚೆಯನ್ನು ಮೂಲಭೂತ ಪ್ರಶ್ನೆಗೆ ಇಳಿಸಿದರೆ – ಯಾವುದು ನಿಮ್ಮನ್ನು ನಿಜಕ್ಕೂ ಆನಂದದಲ್ಲಿ ಇರಿಸುತ್ತದೆ? – ಬಹುಶಃ ನಮ್ಮ ಆಯ್ಕೆ ಸುಲಭವಾಗುತ್ತದೆ.

ಇಡೀ ಬ್ರಹ್ಮಾಂಡ ನಿರಂತರವಾಗಿ ಅರಳುತ್ತಿದೆ ಎಂಬುದನ್ನು ವಿಜ್ಞಾನ ಹೇಳುತ್ತದೆ, ಆಧ್ಯಾತ್ಮವೂ ಅದೇ ವಿಚಾರ ಹೇಳುತ್ತದೆ – ‘ಗಹನೋ ಕರ್ಮಣೋ ಗತಿಃ’ – ಇಡೀ ಅಸ್ತಿತ್ವದ ಕರ್ಮದ ಕೊಂಡಿಗಳು ಎಲ್ಲೆಲ್ಲಿ ಬೆಸೆತುಕೊಂಡಿವೆಯೋ ಗೊತ್ತಿಲ್ಲ, ಆದರೆ ಅಸ್ತಿತ್ವ ನಿರಂತರವಾಗಿ ಕೆಲಸ ಮಾಡುತ್ತಿದೆ, ನಿರಂತರವಾಗಿ ಬದಲಾಗುತ್ತಿದೆ ಮತ್ತು ನಿರಂತರವಾಗಿ ಒಳಿತಿನ ಕಡೆಗೇ ಸಾಗುತ್ತಿದೆ.

ನಾವು ಈ ಒಳಿತನ್ನು ಗುರುತಿಸುವುದು ಮತ್ತು ಅದರಲ್ಲಿ ಭಾಗಿಯಾಗುವುದನ್ನು ಬಿಟ್ಟು ಬೇರೇನು ಸಾಧ್ಯವಿದೆ? ಭಾಗಿಯಾಗಬೇಕೆಂದಾದರೆ ನಾವೂ ಕೂಡಾ ನಿರಂತರವಾಗಿ ಸೃಜನಶೀಲರಾಗಿರುವುದೂ ಅನಿವಾರ್ಯ. ನಮ್ಮೊಳಗಿನ ಶಕ್ತಿ ಕಟ್ಟುವುದರಲ್ಲಿ ತೊಡಗದಿದ್ದರೆ ಅದು ಕೆಡುಹುವುದರಲ್ಲಿ ತೊಡಗುತ್ತದೆ – ಅದು ಮೂಲಭೂತವಾಗಿ ಕಟ್ಟುವುದು ಅಥವಾ ಕೆಡುಹುವುದು ನಮ್ಮನ್ನೇ.

Leave a Reply

Your email address will not be published. Required fields are marked *