ಪದ್ಮಪಾದ ಮತ್ತು ಬರಹಗಾರರ ಸ್ಪೂರ್ತಿಯ ರಹಸ್ಯ

ಸಾಹಿತಿಗಳು, ಕವಿಗಳು ತಮಗೆ ದೈವಿಕ ಸ್ಪೂರ್ತಿ ದೊರೆಯುತ್ತದೆ, ಹಾಗಾಗಿ ಶ್ರೇಷ್ಟವಾದದ್ದನ್ನು ರಚಿಸುತ್ತೇವೆ (ಹಾಗಾಗಿ ನಾವು ಶ್ರೇಷ್ಟರು?!) ಅನ್ನುತ್ತಾರೆ.

ಇಲ್ಲ ಅಂತದ್ದೇನಿಲ್ಲ, ಎಲ್ಲಾ ರೀತಿಯ ಸೃಜನಶೀಲತೆಯೂ ಮನುಷ್ಯಪ್ರಯತ್ನದಿಂದ ಸಾಧ್ಯವಾಗುತ್ತದೆ – ಕತ್ತಿ ಮಸೆಯುವುದಕ್ಕೂ, ಕವಿತೆ ಹೊಸೆಯುವುದಕ್ಕೂ ಅಷ್ಟೇ ಚಾತುರ್ಯ ಬೇಕಾಗುತ್ತದೆ – ಅದು ಚಾತುರ್ಯ ಅಷ್ಟೇ ಅಂತ ಇತರರು ವಾದ ಮಾಡುತ್ತಾರೆ.

ಆದರೆ ಅನೇಕ ವಿಜ್ಞಾನಿಗಳು, ಸಂಶೋಧಕರು ಕೂಡಾ ತಾವು ಪ್ರಯತ್ನದ ತುತ್ತತುದಿಯೇರಿಯೂ ಸಫಲತೆಯನ್ನು ಪಡೆಯದೇ ನಿಂತಿದ್ದಾಗ, ಯಾವುದೋ ಕೈ ತಮ್ಮನ್ನು ಹಿಡಿದೆತ್ತಿತು ಅನ್ನುವುದನ್ನು ಹೇಳಿದ್ದಾರೆ.

ಸುಮ್ಮನೇ ಒಂದಷ್ಟು ಉದಾಹರಣೆಗಳನ್ನು ನೋಡುವುದಾದರೆ, ಕೋಲರಿಜ್ ತನ್ನ ಕವಿತೆ ‘ಕುಬ್ಲಾ ಖಾನ್’ ಬರೆದಿದ್ದೂ ಕನಸಿನಲ್ಲಿ ಕಂಡದ್ದನ್ನೇ. ಅಪೀಮಿನ ಔಷಧಿ ಸೇವಿಸಿದ್ದ ಕೋಲರಿಜ್ ನಿದ್ದೆಯಲ್ಲಿದ್ದಾಗ ಮುಂಗೋಲಿಯನ್ ದೊರೆ ಕುಬ್ಲಾ ಖಾನ್ ಕುರಿತು ಕನಸು ಬೀಳುತ್ತದೆ. ಆ ಕನಸಿನಲ್ಲಿ ಕಂಡದ್ದನ್ನೇ ಎದ್ದ ಮೇಲೆ ಲಿಪ್ಯಂತರ ಮಾಡತೊಡಗುತ್ತಾನೆ. ಆದರೆ, ನಡುವೆ ಯಾರೋ ಬಂದು ಮಾತನಾಡತೊಡಗಿ ಅವನ ಬರೆಯುವಿಕೆಗೆ ದಕ್ಕೆ ಬರುತ್ತದೆ. ಬಂದವರೊಡನೆ ಮಾತು ಮುಗಿಸಿ ಕವಿತೆ ಮುಂದುವರೆಸಲೆಂದು ನೋಡಿದರೆ, ಅವನಿಗೆ ನೆನಪಿರುವುದಿಲ್ಲ. ಆನಂತರ ಹೊಸದೇನನ್ನೋ ಸೇರಿಸಿ ಕವಿತೆಯನ್ನು ಪೂರ್ಣಗೊಳಿಸುವ ಬದಲು ಅದನ್ನು ಅಷ್ಟಕ್ಕೇ ಬಿಟ್ಟುಬಿಡುತ್ತಾನೆ ಕೋಲರಿಜ್. ಆ ಕವಿತೆ ಇಂಗ್ಲೀಷ್ ಸಾಹಿತ್ಯದ ಅತ್ಯಂತ ಮಹತ್ವದ ಹಾಗೂ ಪ್ರಸಿದ್ಧ ಕವಿತೆಯಾಗಿದೆ.

ಇದಲ್ಲದೇ ಮೇರಿ ಶೆಲ್ಲಿಯ ಇಂಗ್ಲೀಷ್ ಕಾದಂಬರಿ `ಫ್ರಾಂಕನ್‌ಸ್ಟೀನ್’ ಸಹಾ ಕನಸಿನಿಂದ ಸ್ಪೂರ್ತಗೊಂಡಿದೆ. ಇತ್ತೀಚೆಗೆ ಜಗತ್ಪ್ರಸಿದ್ಧವಾದ ಹ್ಯಾರಿ ಪಾಟರ್ ಸರಣಿಯ ಕತೆ ಕೂಡಾ ರೈಲಿನಲ್ಲಿ ಪ್ರಯಾಣ ಮಾಡುವ ಸಮಯದಲ್ಲಿ ಮನಸಿನಲ್ಲಿ ಮೂಡಿಬಂದ ಚಿತ್ರಣ ಎಂದು ಲೇಖಕಿ ಜೆ.ಕೆ.ರೌಲಿಂಗ್ ಹೇಳಿದ್ದಾಳೆ.

ಇನ್ನು ಕನ್ನಡದ ಮಾತಿಗೆ ಬಂದರೆ, ಬೇಂದ್ರೆಯವರು ತನ್ನನ್ನೂ, ತನ್ನೊಳಗಿನ ಕವಿಯನ್ನೂ ಪೂರ್ಣ ಬೇರೆಯಾಗಿಸಿಯೇ ನೋಡುತಾರೆ. ನಾನೋ ಲಿಪಿಕಾರ, ನಾರಾಣಪ್ಪನೇ ಕವಿ ಎಂದು ಕುಮಾರವ್ಯಾಸ ನುಡಿದಂತೆ ಬೇಂದ್ರೆಯವರೂ ಅಂಬಿಕಾತನಯ ದತ್ತನೇ ಕವಿ ಎನ್ನುತ್ತಾರೆ. ಅಂದರೆ ಬೇಂದ್ರೆಯವರೂ, ಕುಮಾರವ್ಯಾಸನೂ ಕಾಣದ ಯಾವುದೋ ಸ್ಪೂರ್ತಿಯ ಕುರಿತು ತುಂಬ ಸ್ಪಷ್ಟವಾಗಿ ಮಾತನಾಡುತ್ತಾರೆ.

ಕವಿಗಳು ಮೊದಲೇ ಕಲ್ಪನಾ ಜೀವಿಗಳು, ಸುಮ್ಮನೇ ಏನೋ ಕಲ್ಪಿಸಿಕೊಂಡು ಹೇಳುತ್ತಾರೆ ಅನ್ನಬಹುದು. ಆದರೆ ವಿಜ್ಞಾನದಲ್ಲಿಯೂ ಇಂತಹ ಘಟನೆಗಳು ಲೆಕ್ಕವಿಲ್ಲದಷ್ಟು ಜರುಗಿವೆ.

ಹೊಲಿಗೆ ಯಂತ್ರವನ್ನು ಕಂಡುಹಿಡಿದ ವಿಜ್ಞಾನಿಯ ಹೆಸರು ಎಲಿಯಾಸ್ ಹೋವ್. ಆತ ಕೈಹೊಲಿಗೆಯ ಬದಲಾಗಿ ಒಂದು ಹೊಲಿಗೆಯ ಯಂತ್ರವನ್ನು ಕಂಡುಹಿಡಿಯಬೇಕೆಂದು ವರ್ಷಗಟ್ಟಲೇ ಪ್ರಯತ್ನಿಸಿ, ಹತಾಶನಾಗಿ ಒಂದು ದಿನ ಇದು ಸಾಧ್ಯವಿಲ್ಲ ಎಂದು ಕೈಬಿಡುತ್ತಾನೆ. ಆ ರಾತ್ರಿ ನರಭಕ್ಷಕರು ಅವನನ್ನು ಕಾಡಿಗೆ ಹೊತ್ತುಕೊಂಡು ಹೋದಂತೆ ಕನಸು ಬೀಳುತ್ತದೆ. ಆ ಜನರು ಅವನನ್ನು ಕಟ್ಟಿಹಾಕಿ ಬೆಂಕಿಯ ಸುತ್ತಲೂ ಭರ್ಚಿ ಹಿಡಿದುಕೊಂಡು ನರ್ತಿಸುತ್ತಾರೆ. ಅವರು ಹಿಡಿದುಕೊಂಡಿದ್ದ ಭರ್ಚಿಗಳ ತುದಿಗೆ ರಂಧ್ರವಿರುವುದನ್ನು ಆತ ಗಮನಿಸುತ್ತಾನೆ. ಎದ್ದ ಮೇಲೆ ಆ ಕನಸು ಅವನಿಗೆ ನೆನಪಾಗುತ್ತದೆ. ಕೈಹೊಲಿಗೆಯ ಸೂಜಿಯಲ್ಲಿ ಬುಡ ಭಾಗದಲ್ಲಿ ದಾರ ಪೋಣಿಸುವುದಕ್ಕೆ ರಂಧ್ರವಿರುತ್ತದೆ. ಆದರೆ ಹೊಲಿಗೆಯ ಯಂತ್ರದ ಸೂಜಿಗೆ ತುದಿಯಲ್ಲಿ ರಂಧ್ರ ಮಾಡಿ ದಾರ ಪೋಣಿಸುವ ಆಲೋಚನೆ ಆ ಕನಸಿನಲ್ಲಿ ಕಂಡ ಭರ್ಚಿಗಳಿಂದಾಗಿ ಸಾಧ್ಯವಾಗುತ್ತದೆ. ಇದು ಹೊಲಿಗೆ ಯಂತ್ರದ ಆವಿಷ್ಕಾರ ಸಾಧ್ಯವಾಗಲು ಅತ್ಯಂತ ಮಹತ್ವವಾದ ಅಂಶ.

ಬೆಂಜಿನ್ (C6H6) ನ ರಾಸಾಯನಿಕ ಸಂರಚನೆಯನ್ನು ಕಂಡುಹಿಡಿಯುವುದು ಅಸಾಧ್ಯವೆನ್ನಿಸಿದ್ದ ಸಮಯದಲ್ಲಿ ಫ್ರೆಡರಿಕ್ ಅಗಸ್ಟ್ ಕೆಕ್ಯುಲ್ ಎಂಬ ವಿಜ್ಞಾನಿಗೆ ಒಂದು ಕನಸು ಬೀಳುತ್ತದೆ. ಅದರಲ್ಲಿ ಹಾವೊಂದು ತನ್ನ ಬಾಲವನ್ನು ಕಚ್ಚಿಕೊಂಡು ವೃತ್ತಾಕಾರದಲ್ಲಿರುವ ಚಿತ್ರಣವನ್ನು ಆತ ನೋಡುತ್ತಾನೆ. ಅದು ಬೆಂಜಿನ್‌ನ ಸಂಯೋಜನೆಯನ್ನು ಚಿತ್ರಿಸಲು ಸಹಾಯ ಮಾಡುತ್ತದೆ.

ಕವಿಯೂ ವಿಜ್ಞಾನಿಯಂತೆ ಉಳಿದೆಲ್ಲವನ್ನೂ ಬಿಟ್ಟು ತಾನು ಆಯ್ಕೆ ಮಾಡಿದ ವಸ್ತುವಿನ ಮೇಲೆ ಕೇಂದ್ರೀಕರಿಸುತ್ತಾನೆ. ಆದರೆ ವಿಜ್ಞಾನಿ ಅದನ್ನು ವಸ್ತುವಾಗಿ ನೋಡಿದರೆ, ಕವಿ ಅದನ್ನು ಸಬ್ಜೆಕ್ಟ್ ಆಗಿ ನೋಡುತ್ತಾನೆ, ಅಂದರೆ ಅದರಲ್ಲಿ ಪ್ರವೇಶಿಸಿ, ಅದರ ಮೂಲಕ ನೋಡುತ್ತಾನೆ.

ನಿಮಗೆ ಆಚಾರ್ಯ ಶಂಕರರ ಶಿಷ್ಯ ಪದ್ಮಪಾದನ ಕಥೆ ನೆನಪಿದೆಯೇ?

ಸನಂದನ ಆಚಾರ್ಯ ಆದಿಶಂಕರರ ಶಿಷ್ಯರಲ್ಲೊಬ್ಬ. ಅತನಿಗೆ ಗುರುವಿನ ಕುರಿತು ಆಳವಾದ ಶ್ರದ್ಧೆ ಮತ್ತು ಭಕ್ತಿಯಿರುತ್ತದೆ. ಶಂಕರರಿಗೆ ಪದ್ಮಪಾದನ ಮೇಲೆ ಮಾತ್ರ ಹೆಚ್ಚಿನ ಪ್ರೀತಿ ಎಂದು ಉಳಿದ ಶಿಷ್ಯಂದಿರಿಗೆ ಅಸೂಯೆ, ಸಿಟ್ಟು. ಅವರು ಈ ವಿಚಾರವನ್ನು ಶಂಕರರಿಗೆ ಅನೇಕ ಬಾರಿ ಹೇಳುತ್ತಿರುತ್ತಾರೆ, ಆದರೆ ಅವರು ಅದಕ್ಕೆ ಉತ್ತರವಾಗಿ ಏನೂ ಹೇಳುವುದಿಲ್ಲ. ಆದರೆ ಶಿಷ್ಯಂದಿರಿಗೆ ಉತ್ತರ ಹೇಳುವ ದಿನ ಬಹಳ ಬೇಗ ಬರುತ್ತದೆ.

ಶಂಕರರು ಕಾಶಿಯಲ್ಲಿದ್ದಾಗ ಒಂದು ದಿನ ಗಂಗೆಯಲ್ಲಿ ಮೀಯುತ್ತಿರುತ್ತಾರೆ. ಇನ್ನೊಂದು ದಡದಲ್ಲಿ ಸನಂದನ ಅವರ ಬಟ್ಟೆಗಳನ್ನು ಒಣಗಿಸುತ್ತಿರುತ್ತಾನೆ. ಸ್ನಾನ ಮುಗಿಸಿ ಸನಂದನನಿಗೆ ತನ್ನ ಒಣಗಿದ ಬಟ್ಟೆಯನ್ನು ತರುವಂತೆ ಹೇಳುತ್ತಾರೆ. ಗುರುಗಳು ಹಸಿ ಬಟ್ಟೆಯಲ್ಲಿಯೇ ಇರುವುದನ್ನು ನೋಡಿದ ಆತ ಒಣಬಟ್ಟೆಗಳನ್ನು ತೆಗೆದುಕೊಂಡು ತುಂಬಿ ಪ್ರವಹಿಸುತ್ತಿದ್ದ ಗಂಗೆಯ ಮೇಲೆಯೇ ಓಡಿ ಬರುತ್ತಾನೆ. ಆಗ ಆತ ನದಿಯ ಮೇಲೆ ನಡೆಯಲು ಅನುವಾಗುವಂತೆ ಆತ ಪಾದ ಇಟ್ಟಲ್ಲಿ ಒಂದೊಂದು ಪದ್ಮ ಎದ್ದು ಆಸರೆ ನೀಡುತ್ತದೆ. ಹಾಗಾಗಿ, ಶಂಕರರು ಸನಂದನನನ್ನು ಪದ್ಮಪಾದ ಎಂದು ಹೆಸರಿಡುತ್ತಾರೆ.

ಇಲ್ಲಿ ಎರೆಡು ರೀತಿಯ ಪ್ರಶ್ನೆಗಳು ಏಳುತ್ತವೆ:

  1. ಇದು ಕಟ್ಟುಕತೆ, ಇಂತದ್ದೆಲ್ಲ ನಡೆಯಲು ಸಾಧ್ಯವೇ ಇಲ್ಲ ಎನ್ನುವುದು ವಿಚಾರವಾದಿಗಳ ವಾದವಾಗಿರುತ್ತದೆ.
  2. ಆದರೆ, ಇದು ಹೇಗೆ ಸಾಧ್ಯ? ನಮ್ಮಿಂದಲೂ ಸಾಧ್ಯವೇ ಅನ್ನುವುದು ಆಸಕ್ತರ ಪ್ರಶ್ನೆ.

ಇದು ಕಟ್ಟುಕತೆ ಅಂದ ತಕ್ಷಣ ಅಲ್ಲಿ ಮತ್ತೆ ಚಿಂತನೆಗೆ, ಪ್ರಯೋಗಗಳಿಗೆ ಅವಕಾಶವೇ ಇಲ್ಲ. ಹಾಗಾಗಿ ಮೊದಲ ಪ್ರಶ್ನೆ ಇಲ್ಲಿ ನಿರರ್ಥಕ. ಎರಡನೆಯದಾಗಿ, ಹೇಗೆ ಸಾಧ್ಯ, ನನಗೂ ಸಾಧ್ಯವೇ ಅನ್ನುವುದು.

ಕತೆಯನ್ನು ಒಮ್ಮೆ ನೆನಪಿಸಿಕೊಳ್ಳಿ, ಇಲ್ಲಿ ಪದ್ಮಪಾದ ತಾನೇ ಪದ್ಮಗಳನ್ನು ಸೃಷ್ಠಿಸಿಕೊಳ್ಳಲಿಲ್ಲ, ಅವನ ಲಕ್ಷ್ಯ ಕೇವಲ ಗುರುವಿನ ಬಳಿ ಹೋಗುವುದಾಗಿತ್ತು. ಮತ್ತು ತಾನು ಅಲ್ಲಿಗೆ ಹೋಗುತ್ತೇನೆ ಎಂಬ ನಂಬಿಕೆಯಿತ್ತು. ಹೀಗೆ ಮನಸ್ಸು ತನ್ನ ಗುರಿಯ ಕಡೆ ಕೇಂದ್ರೀಕೃತವಾಗಿದ್ದಾಗ, ಎಲ್ಲ ರೀತಿಯ ಬೆಂಬಲಗಳು ವಿಶ್ವದ ಅನೇಕ ದಿಕ್ಕಿನಿಂದ ಬರತೊಡಗುತ್ತವೆ. ಏಕೆಂದರೆ, ಇಡೀ ವಿಶ್ವ ಏಕಭಾವದಲ್ಲಿದೆ. ಇದು ಅನುಭಾವ ಜ್ಞಾನ.

ಇನ್ನು, ಹೂವುಗಳ ಮೇಲೆ ಕಾಲಿಟ್ಟರೆ ಅವು ಅಪ್ಪಚ್ಚಿಯಾಗುವುದಿಲ್ಲವೇ? ಇದಕ್ಕೂ ಕೂಡಾ ತತ್ವಜ್ಞಾನದ ವಿವರಣೆಯನ್ನೇ ನೀಡಬಹುದು, ದುಃಖದಲ್ಲಿ ನಮ್ಮ ದೇಹ ಎಷ್ಟು ಭಾರವೆನ್ನಿಸುತ್ತದೆ, ಆದರೆ ಆನಂದದಲ್ಲಿ ನಾವು ಎಷ್ಟು ಹಗುರೆನ್ನಿಸುತ್ತದೆ – ಹಕ್ಕಿಯಂತೆ ಹಾರುತ್ತಿದ್ದೇನೆ ಅಂದುಕೊಳ್ಳುತ್ತೇವೆ. ಆದರೆ, ಧ್ಯಾನದ ಉನ್ನತ ಸ್ತರಕ್ಕೆ ಏರುವ ಮನುಷ್ಯ ವಿಶ್ವದೊಂದಿಗೆ ಏಕತ್ರಭಾವದಲ್ಲಿರುತ್ತಾನೆ. ಹಾಗಾಗಿ ಇಡೀ ವಿಶ್ವ ಆತನನ್ನು ಕಾಯುತ್ತಿರುತ್ತದೆ.

ಇಂತಹ ಸಂಗತಿಗಳು ನಮ್ಮ ನಿತ್ಯಜೀವನದ ಭಾಗವಾಗಿರುವುದಿಲ್ಲವಾದ್ದರಿಂದ ನಮಗೆ ಅಸಂಗತವಾಗಿ ಏಕೆ ಕಾಣಿಸುತ್ತವೆ. ನಾವು ವಿಚಾರ ಮತ್ತು ವೈಚಾರಿಕತೆಯನ್ನೇ ನಮ್ಮ ಜೀವನದ ಆಧಾರವಾಗಿಸಿಕೊಂಡಿರುವುದರಿಂದ, ನಮ್ಮ ಇನ್ನೂ ಆಳವಾದ ಸಾಧ್ಯತೆಗಳನ್ನು ನಂಬಲೂ, ಪ್ರಯತ್ನಿಸಲೂ ಸಾಧ್ಯವಾಗುತ್ತಿಲ್ಲ. ನಮಗೆ ಭೌತಿಕ ವಿಜ್ಞಾನ ಪರಿಚಯವಿದ್ದಷ್ಟು ಆತ್ಮದ ವಿಜ್ಞಾನದ ಪರಿಚಯವಿಲ್ಲವಾದ್ದರಿಂದ ಇವು ನಂಬಲು ಕಷ್ಟವಾದ ವಿಷಯಗಳಾಗುತ್ತವೆ, ಇರಲಿ.

ಇನ್ನು ಬರವಣಿಗೆಯ ವಿಚಾರಕ್ಕೆ ಬಂದರೆ, ಯಾವುದೋ ಒಂದು ಕ್ಷಣದಲ್ಲಿ ಈ ಸ್ಪೂರ್ತಿದೇವತೆ ಪ್ರಕಟಗೊಳ್ಳುತ್ತಾಳೆ. ಹಾಗೆ ಪ್ರಕಟಗೊಂಡ ಕ್ಷಣದ ಕುರಿತು ಒಮ್ಮೆ ಯೋಚಿಸಿ – ಆದು ಅಚಾನಕ್ಕಾಗಿ ಆಗಿರುವುದಿಲ್ಲ. ಒಂದೋ ನೀವು ಯಾವುದೋ ಚಿಂತನೆಯಲ್ಲಿ ಮುಳುಗಿದ್ದಾಗ ಅದಕ್ಕೆ ಉತ್ತರವಾಗಿ ಬಂದಿರುತ್ತದೆ, ಅಥವಾ ನೀವು ಆಳವಾದ ಮೌನದಲ್ಲಿರುವಾಗ ಅದು ಪ್ರಕಟಗೊಂಡಿರುತ್ತದೆ. ಆದರೆ, ಅದು ನಿಮ್ಮಿಂದಲೇ ಬಂದಿರುತ್ತದೆ.

ಹಾಗಿದ್ದರೆ ಬರಹಗಾರರು ಸ್ಪೂರ್ತಿ ಪಡೆಯಲು ಏನು ಮಾಡಬೇಕು?

ಇಂಗ್ಲೀಷಿನಲ್ಲಿ ಒಂದು ಮಾತಿದೆ, Leap and the net appears ಅಂತ. ಇದು ಪದ್ಮಪಾದನ ಕತೆಯ ಹಾಗೆಯೇ. ಬರಹಗಾರರು, ಸುಮ್ಮನೇ ಬರೆಯಲು ಪ್ರಾರಂಭಿಸಬೇಕು ಅಷ್ಟೇ. ನಿಮಗೆ ಇಡೀ ಕತೆ ಗೊತ್ತಿರಬೇಕು ಅಂತಿಲ್ಲ, ಆದರೆ ಬರೆಯಲು ತೊಡಗಿದಾಗ ಮಾತ್ರ ಒಂದೊಂದೇ ಸಾಲುಗಳು ಎದ್ದು ನಿಮಗೆ ಆಸರೆ ನೀಡುತ್ತವೆ.

ಸುಲಭ ಸೂತ್ರ: ಸ್ಪೂರ್ತಿಯ ಕುರಿತು ಚಿಂತಿಸಬೇಡಿ. ಪದ್ಮಪಾದನೂ ಪದ್ಮಗಳ ಕುರಿತು ಚಿಂತಿಸಲಿಲ್ಲ. ಎದ್ದು ಬರೆಯಲು ತೊಡಗಿ, ಮುಂದಿನ ದಾರಿ ಕಾಣಿಸುತ್ತದೆ.

ನೀವೇನೂ ಇಡೀ ಕತೆಯನ್ನು ಒಮ್ಮೆಗೇ ಬರೆಯುವುದಿಲ್ಲ, ಒಂದು ಅಕ್ಷರ, ಒಂದು ಪದ ಮತ್ತು ಒಂದು ವಾಕ್ಯವನ್ನು ಮಾತ್ರ ಒಮ್ಮೆ ಬರೆಯುತ್ತ ಹೋಗುತ್ತೀರಿ. ಹೀಗೆ, ಮೊದಲ ಒಂದು ಹೆಜ್ಜೆ ನೀವಿಟ್ಟರೆ ಸಾಕು ನಿಮ್ಮ ಸ್ಪೂರ್ತಿದೇವತೆ ಸಾವಿರ ಹೆಜ್ಜೆಯಿಟ್ಟು ನಿಮ್ಮ ಬಳಿ ಬರುತ್ತಾಳೆ.

ಎಲ್ಲಿಯವರೆಗೆ ನೀವು ನಿಮ್ಮ ಸ್ಪೂರ್ತಿದೇವತೆಗಾಗಿ ಕಾಯುತ್ತೀರಿ, ಆಕೆ ಕೂಡಾ ಕಾಯುತ್ತಿರುತ್ತಾಳೆ. ಏಕೆಂದರೆ ನಿಮ್ಮ ಸ್ಪೂರ್ತಿದೇವತೆ, ಆ ಮಹಾನ್ ಚೈತನ್ಯ ಬೇರೆ ಯಾರೂ ಅಲ್ಲ, ಅದು ನೀವೇ.

 

2 comments

  1. ನಿಜವಾಗಲೂ ಬರಹಗಾರರಿಗೆ ತುಂಬಾ ಸ್ಪೂರ್ತಿದಾಯಕವಾಗಿದೆ ನಿಮ್ಮ ಬರಹ.

Leave a Reply

Your email address will not be published. Required fields are marked *