ನಿಮ್ಮ ಫೋನನ್ನು ನಿಮ್ಮ ಪರ್ಸನಲ್ ಬ್ಯಾಂಕ್ ಮಾಡಿಕೊಳ್ಳುವುದು ಹೇಗೆ

ಡಿಮೊನೆಟೈಸೇಶನ್ ಸಮಯದಲ್ಲಿ ಒಂದೆರೆಡು ದಿನ ಬ್ಯಾಂಕ್ ಮುಂದೆ ನಿಂತಿದ್ದು ಹೌದಾದರೂ, ಇನ್ನು ಮುಂದೆ ಜೀವನ ಪೂರ್ತಿ ಬ್ಯಾಂಕ್ ಮುಂದೆ ನಿಲ್ಲುವ ಪ್ರಮೇಯ ತಪ್ಪುವ ಲಕ್ಷಣಗಳು ಕಾಣುತ್ತಿವೆ. ಯುಪಿಐ ಪಾವತಿ ಬಂದಾಗಿನಿಂದ ಇನ್ನು ಮುಂದೆ ಬ್ಯಾಂಕ್‌ನವರಿಗೆ ಕೆಲಸ ಕಡಿಮೆ ಆಗುತ್ತಿದೆ, ನಮ್ಮ ಹಣಕಾಸಿನ ವ್ಯವಹಾರಗಳೂ ಬಹಳ ಸುಲಭವಾಗಿವೆ.

ಇನ್ನುಮುಂದೆ ಯಾರಿಗಾದರೂ ಹಣ ಕಳಿಸಬೇಕಾದರೆ ಮೊದಲಿನಂತೆ ಬ್ಯಾಂಕಿಗೆ ಹೋಗಿ ಕಾಯುವುದಾಗಲೀ, ಇಡೀ ಖಾತೆಯ ವಿವರಗಳನ್ನು ನೆನಪಿಟ್ಟುಕೊಳ್ಳುವುದಾಗಲೀ ಅಗತ್ಯವಿಲ್ಲ.

ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ಫೇಸ್) ನಿಮಗೆ ಗೊತ್ತಿರಬೇಕು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದವರ ಒಂದು ಹೊಸ ವ್ಯವಸ್ಥೆ ಇದು. ಈಗ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ವಿಳಾಸ ಅಥವಾ ಟ್ವಿಟ್ಟರ್ ಹಾಂಡಲ್‌ನಂತಹ ಒಂದು ವಿಳಾಸ (ಉದಾಹರಣೆಗೆ raghavendra@icici) ಇದ್ದರೆ ಸಾಕು ಅದಕ್ಕೆ ಹಣ ಕಳಿಸಿದರೆ ಅದು ನಿಮ್ಮ ಖಾತೆಗೆ ಹೋಗಿ ಬೀಳುತ್ತದೆ. ಹೀಗೆ ಯುಪಿಐ ಬಳಸಿ ಹಣ ಕಳಿಸುವ ವ್ಯವಸ್ಥೆಯನ್ನು ನಮಗೆ ನೀಡುವ ಅಪ್ಲಿಕೇಶನ್‌ಗಳಲ್ಲಿ ಪ್ರಮುಖವಾದವು ಭೀಮ್ ಮತ್ತು ಫೋನ್‌ಪೇ (PhonePe). ಈ ಲೇಖನದಲ್ಲಿ ಮುಖ್ಯವಾಗಿ ಫೋನ್‌ಪೇ ಬಗ್ಗೆ ಬರೆಯುತ್ತಿದ್ದೇನೆ. ಬಳಸಿ ನೋಡಿ.

ಹಣ ಕಳಿಸುವಿಕೆ

ಮೊದಲೇ ತಿಳಿಸಿದಂತೆ, ನೀವು ನಿಮ್ಮ ಮನೆಯವರಿಗೆ, ಸ್ನೇಹಿತರಿಗೆ ಅಥವಾ ವ್ಯವಹಾರಗಳಿಗೆ ಸಂಬಂಧಿಸಿ ಹಣ ಕಳಿಸಲು ಬ್ಯಾಂಕಿಗೆ ಹೋಗುವ ಅಗತ್ಯವಿಲ್ಲ. ಫೋನ್ ಪೇ ಬಳಸಿ ನೀವು ನೇರವಾಗಿ ಹಣ ಕಳಿಸಬಹುದು. ಈ ಅಪ್ಲಿಕೇಶನ್ನಿನಲ್ಲಿ ಮೂರು ರೀತಿಯಲ್ಲಿ ಹಣ ಕಳಿಸುವ ಅವಕಾಶ ಇದೆ.

  • ನಿಮ್ಮ ಮೊಬೈಲ್ ಸಂಪರ್ಕಗಳಿಗೆ:

ನಿಮ್ಮ ಮೊಬೈಲ್ ಸಂಪರ್ಕದಲ್ಲಿರುವವರು ಈಗಾಗಲೇ ಫೋನ್ ಪೇ ಅಪ್ಲಿಕೇಶನ್ ಬಳಸುತ್ತಿದ್ದರೆ, ನೀವು ಅವರ ಮೊಬೈಲ್ ಸಂಖ್ಯೆಯನ್ನು ಆಯ್ಕೆಮಾಡಿ ಹಣ ಕಳಿಸಿದರೆ, ಅದು ಅವರ ಖಾತೆಗೆ ತಕ್ಷಣ ರವಾನೆಯಾಗುತ್ತದೆ.

  • ವಿಪಿಎ ಮೂಲಕ:

ನೀವು ಫೋನ್‌ಪೇ ಗೆ ನೋಂದಾಯಿಸಿದಾಗ ನಿಮಗೆ ಎರಡು ರೀತಿಯ ವಿಪಿಎ ಅಥವಾ ವರ್ಚುವಲ್ ಪೇಮೆಂಟ್ ಅಡ್ರೆಸ್‌ಗಳು ದೊರೆಯುತ್ತವೆ. ಅವು raghavendram@ybl ಅಥವಾ 99XXXXXX16@ybl ಮಾದರಿಯಲ್ಲಿರುತ್ತವೆ. ಈ ವಿಳಾಸವನ್ನು ಕೊಟ್ಟರೆ ಯಾರೂ ಫೋನ್‌ಪೇ ಅಥವಾ ಯಾವುದೇ ಯುಪಿಐ ಬಳಸುತ್ತಿರುವ ಬ್ಯಾಂಕಿನಿಂದ ನಿಮಗೆ ಹಣ ಕಳಿಸಬಹುದು.

  • ಬ್ಯಾಂಕ್ ಖಾತೆಗಳಿಗೆ

ಒಮ್ಮೆ ಒಬ್ಬರ ಹೆಸರು, ಖಾತೆಯ ಸಂಖ್ಯೆ, ಐಎಫ್ ಎಸ್ ಸಿ ಕೋಡ್ ನಮೂದಿಸಿ ಹಣ ಕಳಿಸಿ. ಫೋನ್‌ಪೇ ಈ ವಿವರಗಳನ್ನು ನೆನಪಿನಲ್ಲಿಟ್ಟುಕೊಂಡಿರುತ್ತದೆ. ಮುಂದಿನ ಬಾರಿ ಅವರ ಹೆಸರನ್ನು ಆಯ್ಕೆಮಾಡಿ ಪಾವತಿ ಮಾಡಿ.    

ಈ ಎಲ್ಲ ಪಾವತಿಗಳಿಗೆ ನೀವು ಪ್ರತೀ ಬಾರಿ ಒಟಿಪಿ ಅಥವಾ ಆರು ಅಂಕಿಯ ಕೋಡ್ ನಮೂದಿಸುವ ಅಗತ್ಯವಿಲ್ಲ. ನೀವು ಮೊದಲ ಬಾರಿ ನೋಂದಾಯಿಸುವಾಗ ಬ್ಯಾಂಕ್ ಖಾತೆಗೆ ಆಯ್ಕೆಮಾಡಿಕೊಂಡ ನಾಲ್ಕು ಅಂಕಿಯ ಪಿನ್ ನಮೂದಿಸಿದರೆ ಸಾಕು, ಹಣ ತಕ್ಷಣ ರವಾನೆಯಾಗುತ್ತದೆ.

ಇತರೆ ಪ್ರಯೋಜನಗಳು:

  • ನಿಮ್ಮ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಕ್ಷಣದಲ್ಲಿ ಹಣ ಕಳಿಸಿಕೊಳ್ಳಬಹುದು. ಕೆಲವೊಮ್ಮೆ ನಿಮ್ಮ ಒಂದು ಎಟಿಎಂ ಕಾರ್ಡ್ ಮರೆತು ಬಂದಿರುತ್ತೀರಿ, ಕಳೆದುಹೋಗಿರುತ್ತದೆ ಅಥವಾ ಅದರ ಕಪ್ಪುಪಟ್ಟಿ ಕಿತ್ತು ಹೋಗಿರುತ್ತದೆ. ಆಗ ಆ ಖಾತೆಯ ಹಣವನ್ನು ಇನ್ನೊಂದು ಖಾತೆಗೆ ಕಳಿಸಿಕೊಂಡು ಬಳಸಬಹುದಾಗಿದೆ. ನೀವು ಒಂದಕ್ಕಿಂತ ಹೆಚ್ಚು ಡೆಬಿಟ್ ಕಾರ್ಡ್‌ಗಳನ್ನು ಜೊತೆಗೆ ಒಯ್ಯುವ ಅಗತ್ಯವಿರುವುದಿಲ್ಲ.  
  • ಕೆಲವೊಮ್ಮೆ ಅಂಗಡಿಗಳಿಗೆ, ಬೇರೆ ಊರುಗಳಿಗೆ ಹೋದಾಗ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದಿದ್ದರೆ ನಿಮ್ಮ ಕುಟುಂಬದವರು ಅಥವಾ ಗೆಳೆಯರಲ್ಲಿ ಹಣಕ್ಕಾಗಿ ಕೋರಿಕೆ ಕಳಿಸಬಹುದು. ನೀವು ಕೋರಿಕೆ ಕಳಿಸಿದ ತಕ್ಷಣ ಅವರಿಗೆ ಎಸ್‌ಎಂಎಸ್ ಮತ್ತು ಬ್ಯಾಂಕ್‌ನಿಂದ ಪಾಪ್-ಅಪ್ ಸಂದೇಶ ಬರುತ್ತದೆ. ಆಗ ಅವರು ನಿಮಗೆ ಹಣ ಕಳಿಸಬಹುದು.
  • ಬಿಲ್ ಹಂಚಿಕೊಳ್ಳುವುದು: ಗೆಳೆಯರೊಂದಿಗೆ ಸಿನೆಮಾ, ರೆಸ್ಟೋರೆಂಟ್‍ಗಳಿಗೆ ಹೋದಾಗ ಬಿಲ್ ಹಂಚಿಕೊಳ್ಳುವುದು ಈಗ ಸುಲಭ. ಬಿಲ್ ಹಂಚಿಕೆಯನ್ನು ಆಯ್ಕೆಮಾಡಿ ಸ್ನೇಹಿತರ ದೂರವಾಣಿ ಸಂಖ್ಯೆ (ಅವರೂ ಫೋನ್‌ಪೆ ಬಳಸುತ್ತಿದ್ದರೆ) ಅಥವಾ ವಿಪಿಎ ಆಯ್ಕೆ ಮಾಡಿದಾಗ, ಈ ಅಪ್ಲಿಕೇಶನ್‌ ತಾನಾಗಿಯೇ ಎಲ್ಲರೊಂದಿಗೆ ಸಮನಾಗಿ ಹಂಚಿಕೆ ಮಾಡಿ ಅವರಿಗೆ ಕೋರಿಕೆ ಸಲ್ಲಿಸುತ್ತದೆ.

ರೀಚಾರ್ಜ್ ಮತ್ತು ಬಿಲ್ ಪಾವತಿ

ಪೆಟಿಎಂ ಅಥವಾ ಅಂತಹ ಇತರ ಅಪ್ಲಿಕೇಶನ್‌ಗಳನ್ನು ಬಳಸಿ ಮೊಬೈಲ್, ಡೇಟಾಕಾರ್ಡ್, ಡಿಟಿಎಚ್, ಬ್ರಾಡ್‌ಬ್ಯಾಂಡ್, ಎಲೆಕ್ಟ್ರಿಸಿಟಿ ಇತ್ಯಾದಿ ರೀಚಾರ್ಜ್ ಮತ್ತು ಬಿಲ್ ಪಾವತಿಗಳನ್ನು ನೀವು ಈಗಾಗಲೇ ಮಾಡುತ್ತಿದ್ದಿರಬಹುದು. ಆದರೆ ಫೋನ್‌ಪೇನಲ್ಲಿ ಇನ್ನೂ ಸುಲಭದ ಹಂತಗಳಲ್ಲಿ ಪಾವತಿ ಮಾಡಬಹುದು. ಇದರಲ್ಲಿ ಏರ್‌ಟೆಲ್  ಮೊಬೈಲ್/ಡೇಟಾ ಕಾರ್ಡ್‌ ಪಾವತಿ ಲಭ್ಯವಿಲ್ಲ.

ರಿಮೈಂಡರ್‌ಗಳು

ಹೊಸ ತಿಂಗಳು ಆರಂಭವಾಗುತ್ತಿದ್ದಂತೆ ಹಾಲು, ಪೇಪರ್‌ನ ಬಿಲ್ ಕೊಡುವುದು, ಡ್ರೈವರ್, ಮನೆಕೆಲಸದವರಿಗೆ ಸಂಬಳ ಕೊಡುವುದು, ಮನೆಯವರಿಗೆ ತಿಂಗಳ ಖರ್ಚಿಗೆ ಹಣಕೊಡುವುದು – ಇದಿಷ್ಟು ಮೊದಲ ವಾರದ ಹಣಕಾಸಿನ ವ್ಯವಹಾರ. ಒಂದಷ್ಟು ನೆನಪಿರುತ್ತವೆ, ಒಂದಷ್ಟು ಮರೆತುಹೋಗುತ್ತವೆ.

ಆದರೆ ಫೋನ್‌ಫೇನಲ್ಲಿ ಹೊಸದಾಗಿ ಸೇರಿಸಲಾಗಿರುವ ಈ ಜ್ಞಾಪನೆ ವೈಶಿಷ್ಟ್ಯ ಈ ನಿಯಮಿತ ವ್ಯವಹಾರಗಳನ್ನು ಸುಲಭವಾಗಿಸುತ್ತದೆ. ನೀವು ತಿಂಗಳಿಗೊಮ್ಮೆ (ಅಥವಾ ವಾರಕ್ಕೊಮ್ಮೆ, ಮೂರು ತಿಂಗಳು, ಅರ್ಧವಾರ್ಷಿಕ ಮತ್ತು ವಾರ್ಷಿಕವಾಗಿ ಕೂಡಾ) ಪಾವತಿಸಬೇಕಾದ ಬಿಲ್ಲುಗಳು, ಕೊಡಬೇಕಾದ ಸಂಬಳಗಳು ಮತ್ತು ಪಾಕೆಟ್ ಮನಿ ಎಲ್ಲವನ್ನೂ ಮೊದಲೇ ರಿಮೈಂಡರ್ ಹಾಕಿಟ್ಟುಕೊಳ್ಳಬಹುದು. ಸರಿಯಾದ ದಿನಾಂಕಕ್ಕೆ ನೀವು ಮಾಡಬೇಕಾದ ಪಾವತಿಗಳನ್ನು ಈ ಅಪ್ಲಿಕೇಶನ್ ನೆನಪಿಸುತ್ತದೆ. ಮತ್ತು ಒಂದು ನಿಮಿಷದ ಒಳಗೆ ನೀವು ಈ ಪಾವತಿಗಳನ್ನು ಮಾಡಿ ಮುಗಿಸಬಹುದು.

ಕ್ಯೂಆರ್ ಕೋಡ್

ನೀವು ಈಗಾಗಲೇ ಪೇಟಿಎಂ ಬಳಸಿ ಅಂಗಡಿಗಳಲ್ಲಿ ಹಣ ಪಾವತಿ ಮಾಡಿರಬಹುದು. ಇದೇ ರೀತಿಯ ಫೋನ್‌ಪೇ ಕ್ಯೂಆರ್ ಕೋಡ್‌ಗಳು ಕೂಡಾ ಇನ್ನು ಮುಂಡೆ ಅಂಗಡಿಗಳಲ್ಲಿ ಕಾಣಿಸಿಕೊಳ್ಳಲಿವೆ. ಅಲ್ಲಿಯವರೆಗೆ ಕಾಯಬೇಕು.

ಜೊತೆಗೆ ಫೋನ್‌ಪೇ ಈಗ ಫ್ಲಿಪ್‌ಕಾರ್ಟ್ ಸಂಸ್ಥೆಯ ಭಾಗವಾಗಿರುವುದರಿಂದಾಗಿ ಫ್ಲಿಪ್‌ಕಾರ್ಟ್, ಮಿಂಥ್ರಾ, ಜಬಾಂಗ್‌ನಂತಹ ಇ-ಕಾಮರ್ಸ್ ಜಾಲತಾಣಗಳಲ್ಲಿ ನೇರ‍ವಾಗಿ ಫೋನ್‌ಪೇ  ಬಳಸಿ ಹಣ ಪಾವತಿ ಮಾಡಬಹುದು.

ಇನ್ನು, ಬ್ಯಾಂಕುಗಳಲ್ಲಿ ಹಣ ತುಂಬುವ, ತೆಗೆಯುವ ಕೆಲಸ ಕಡಿಮೆ ಆಗುವುದರಿಂದ ಬ್ಯಾಂಕಿನವರು ಇನ್ನು ರೈತರಿಗೆ, ಉದ್ಯಮಗಳಿಗೆ ಸಾಲಸೌಲಭ್ಯ, ಸಲಹೆಸೂಚನೆಗಳನ್ನು ನೀಡುವಂತಹ ಪ್ರೊಡಕ್ಟಿವ್ ಕೆಲಸಗಳ ಬಗ್ಗೆ ಆಲೋಚಿಸಬಹುದಾಗಿದೆ.

ಗೂಗಲ್ ಪ್ಲೇ ಸ್ಟೋರ್‌ ಮೂಲಕ ಫೋನ್‌ಪೇ ಇನ್‌ಸ್ಟಾಲ್ ಮಾಡಿಕೊಳ್ಳಿ: PhonePe

3 comments

Leave a Reply

Your email address will not be published. Required fields are marked *