ಮೋಡ ತನ್ನಷ್ಟಕ್ಕೇ ಕದಲುವುದಿಲ್ಲ..

>

ಮೋಡ ತನ್ನಷ್ಟಕ್ಕೇ ಕದಲುವುದಿಲ್ಲ
ಸೂರ್ಯರಶ್ಮಿಗಳನ್ನೂ ಕದಲಿಸುತ್ತದೆ
ಮರದ ನೆರಳನ್ನೂ ಕದಲಿಸುತ್ತದೆ
ನೆರಳನ್ನೇ ದಿಟ್ಟಿಸುತ್ತಿದ್ದವಳು
ಕಣ್ಣನ್ನು ಕದಲಿಸುತ್ತಾಳೆ.
ಎಲ್ಲಿ ಹೋಗಿತ್ತು ಮನಸ್ಸು
ಒಂದು ಮುಗುಳ್ನಗೆಯೊಂದಿಗೆ ಮರಳಿ ಬಂತು.
ನಿನ್ನೆಯೆಲ್ಲ ಉರಿವ ಬಿಸಿಲು,
ಸಂಜೆಯ ಹೊತ್ತಿಗೆ
ಚೆಂಡುಹೂಗಳ ಕಂಪು ಬೀಸಿ ಬರುತ್ತಿತ್ತು,
ಬಲಿಯತೊಡಗಿವೆ ಬತ್ತದ ಕಾಳುಗಳು
ಪೈರುಹಸಿರೆಲ್ಲ ಬಣ್ಣ ಬದಲಿಸುತ್ತಿದೆ,
ಲಂಗವನ್ನೊದೆಯುತ್ತ ನಡೆದವಳ ಸುತ್ತ
ಚಿಟ್ಟೆಗಳ ದಂಡು.
ನೀಲಿಯಲ್ಲಿ ತೇಲುತ್ತಿದ್ದವು ಮೋಡಗಳು
ಪಶ್ಚಿಮದಂಚಿನಲ್ಲಿ ಬಣ್ಣ ಚೆಲ್ಲಿತ್ತು.
ಒಂದೊಂದೆ ಹೆಜ್ಜೆಯಿಡುತ್ತಿದ್ದಳು,
ಕಣ್ಣರಳಿಸುತ್ತಿದ್ದಳು.
ಯಾವುದೋ ಕಂಪು ಕರೆದಂತೆ,
ಯಾವುದೋ ತಂಪು ತೆರೆದಂತೆ,
ಯಾವುದೋ ಸೊಂಪು ಸೆಳೆದಂತೆ,
ರೂಪವಿಲ್ಲದವನು ದನಿಮಾಡದೆ ಕರೆದಂತೆ
ಬೆರಗುಗೊಳ್ಳುತ್ತಾಳೆ, ಬಣ್ಣಗೊಳ್ಳುತ್ತಾಳೆ.
ಸೆಳೆಯುತ್ತಿದೆ ಇನ್ನೂ ಅದೇ ಭಾವ,
ಏನದು ತುಂಬಿತಲ್ಲ ನನ್ನ ತುಂಬ,
ಕೇಳಿಕೊಳ್ಳುತ್ತ ಕಳೆದುಹೋಗುತ್ತಾಳೆ.
ಹೊರಗೆ ಬಿಸಿಲು ಕದಲುತ್ತದೆ, ನೆರಳು ಕದಲುತ್ತದೆ
ಕಣ್ಣು ಕದಲುತ್ತದೆ, ಮರಳಿಬರುತ್ತಾಳೆ.

Leave a Reply

Your email address will not be published. Required fields are marked *