ಕುಂಕುಮ ಮೆತ್ತಿದ ಕುಂಬಳಕಾಯಿ, ನಿಂಬೆಹಣ್ಣುಗಳ ಹಿಂದಿದೆ ನಂಬಿಕೆಯ ಮಹಾಶಕ್ತಿ

ಮೊನ್ನೆ ಸ್ನೇಹಿತೆಯೊಬ್ಬರ ಮನೆಗೆ ಹೋಗಿದ್ದೆವು. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಅರವಳಿಕೆ ತಜ್ಞೆಯಾಗಿರುವ ಆಕೆಗೊಂದು ಸಮಸ್ಯೆ ಇದೆ.

ಹಗಲು-ರಾತ್ರಿ ಎರಡು ಮೂರು ದಿನ ನಿರಂತರ ಕೆಲಸ ಮಾಡುವ ಆಕೆ ಡ್ಯೂಟಿ ಮುಗಿಸಿ ಪ್ಲ್ಯಾಟಿಗೆ ಬಂದ ತಕ್ಷಣ ಶುರುವಾಗುವ ಭಯ ದೆವ್ವಗಳದ್ದು. ಗಂಡ ಹೆಂಡತಿ ಬೇರೆ ಬೇರೆ ಪಾಳಿಗಳಲ್ಲಿ ಕೆಲಸ ಮಾಡುವ ದಿನಗಳಲ್ಲಿ ಆಕೆ ಒಂಟಿಯಾಗಿರಬೇಕು.

‘ಆಕೆಯ ಔಷಧಿ ಹೆಚ್ಚುಕಡಿಮೆಯಾಗಿ ಎಷ್ಟು ಜನ ಸತ್ತಿರುತ್ತಾರೋ, ಅವರೆಲ್ಲ ಎಲ್ಲಿ ದೆವ್ವಗಳಾಗಿ ಅಪಾರ್ಟ್‌ಮೆಂಟ್ ಒಳಗೆ ಬಂದುಬಿಡುತ್ತವೋ ಎಂಬ ಭಯ ಆಕೆಗೆ’ ಎಂದು ಮರಳಿ ಬರುವಾಗ ನಾವು ನಗೆಯಲ್ಲಿ ಮಾತನಾಡಿಕೊಂಡೆವು.

ಆದರೆ ಗಂಭೀರ ವಿಚಾರ ಎಂದರೆ ಡಾಕ್ಟರ್ ಕೂಡಾ ದೆವ್ವಗಳಿಗೆ ಹೆದರುತ್ತಾರೆ ಎಂಬುದು.

ಆಕೆಗೆ ತಕ್ಷಣಕ್ಕೆ ಪರಿಹಾರ ಎಂದು ಆಂಜನೇಯನ ಫೋಟೋ ಒಂದನ್ನು ಬೆಡ್‌ರೂಮಿನಲ್ಲಿಟ್ಟುಕೊಳ್ಳಲು ಹೇಳಿದೆ.

ಇಂತಹ ಪರಿಹಾರಗಳಿಗೆ ಬಹಳಷ್ಟು ಜನ ನಗುತ್ತಾರೆ.

ಡಾಕ್ಟರ್ ಆಗಿ ಆಕೆ ವೈಜ್ಞಾನಿಕ ಚಿಂತನೆಯನ್ನು ಬೆಳಸಿಕೊಂಡಿರಬೇಕಿತ್ತು, ಆಕೆ ವಿಜ್ಞಾನವನ್ನು ಸರಿಯಾಗಿ ತಿಳಿದುಕೊಂಡಿದ್ದರೆ ದೆವ್ವ ಇಲ್ಲ ಎಂಬುದು ತಿಳಿಯುತ್ತಿತ್ತು, ಆಕೆ ಮನೋವೈದ್ಯರನ್ನು ಭೇಟಿ ಮಾಡಬೇಕು, ಎಂದೆಲ್ಲ ಹೇಳುತ್ತಾರೆ.

ನಾವು ಬಹಳ ಬುದ್ಧಿವಂತರಾಗಿಬಿಟ್ಟಿದ್ದೇವೆ, ಚಿಂತನೆಗಳ ಮೂಲಕವೇ ಎಲ್ಲವನ್ನೂ ಪರಿಹರಿಸಿಬಿಡುತ್ತೇವೆ ಎಂದುಕೊಂಡರೆ ಅಷ್ಟು ಸುಲಭವೇ? ಮನುಷ್ಯನ ಮನಸ್ಸಿನ ಸ್ವರೂಪ ಅಷ್ಟು ಸರಳ ಅಲ್ಲ.

ಮನುಷ್ಯ ನಿರಂತರವಾಗಿ ಆಲೋಚನೆಗಳನ್ನು ಮಾಡುತ್ತಾನೆ, ಆದರೆ ಆತ ಆಲೋಚನೆಗಳಲ್ಲಿ ಬದುಕುವುದಿಲ್ಲ – ನಂಬಿಕೆಯಲ್ಲಿ ಬದುಕುತ್ತಾನೆ. ಅಂದರೆ, ಮನುಷ್ಯನ ಜೀವನವನ್ನು ಆತನಲ್ಲಿ ಗಾಢವಾಗಿ ಬೇರೂರಿರುವ ನಂಬಿಕೆಗಳು ನಡೆಸುತ್ತವೆ.

ಒಬ್ಬ ದೇವರಿಲ್ಲ ಅನ್ನುತ್ತಾನೆ, ಆತ ಅದನ್ನು ನಂಬಿಕೊಂಡಿದ್ದಾನೆ. ಇನ್ನೊಬ್ಬ ದೇವರಿದ್ದಾನೆ ಎಂದು ನಂಬಿಕೊಂಡಿದ್ದಾನೆ – ಅವರಿಬ್ಬರ ಆಲೋಚನೆಗಳಷ್ಟೇ ಅಲ್ಲ, ಜೀವನ ಶೈಲಿ ಕೂಡಾ ಅವರ ಈ ನಂಬಿಕೆಗಳ ಆಧಾರದ ಮೇಲೆಯೇ ಅವಲಂಬಿತವಾಗಿರುತ್ತದೆ.

ನಾನು ಚಿಕ್ಕವನಿದ್ದಾಗ, ಮನೆಯಿಂದ ಯಾವುದೇ ಊರಿಗೆ ಹೊರಟರೆ ಸಾಕು, ನಮ್ಮ ಅಮ್ಮ ಅಥವಾ ಅಪ್ಪ ಒಂದು ಚಿಟಿಕೆ ಕುಂಕುಮವನ್ನು ಕಾಗದವೊಂದರಲ್ಲಿ ಕಟ್ಟಿ ಜೇಬಿನಲ್ಲಿಡುತ್ತಿದ್ದರು. ಚಂದ್ರಗುತ್ತಿಯ ದೇವಿಯ ಆ ಕುಂಕುಮ ಪ್ರಸಾದ ನನ್ನನ್ನು ರಕ್ಷಿಸುತ್ತದೆ ಎನ್ನುವುದು ಅವರ ನಂಬಿಕೆ. ಇಲ್ಲದಿದ್ದರೆ, ಅವರ ಮನಸ್ಸಿನಲ್ಲಿ ನಾನು ಊರು ತಲುಪುವವರೆಗೂ ಏನೇನೋ ಶಂಕೆಗಳು.

ಒಂದು ಚಿಟಿಕೆ ಕುಂಕುಮ ಮನಸ್ಸಿನಲ್ಲಿ ಉದ್ಭವಿಸಬಹುದಾದ ಆ ಎಲ್ಲ ಶಂಕೆಗಳನ್ನು ಕಡಿಮೆ ಮಾಡಿಬಿಡುತ್ತದೆ. ನೋಡಿ, ಇದೊಂದು ಮನಃಶ್ಶಾಸ್ತ್ರೀಯ ಉಪಾಯ ಅಲ್ಲವೇ?

ಹಾಗೆಯೇ, ನೀವು ಯಾವುದೇ ವ್ಯಕ್ತಿಗೆ ದೆವ್ವ ಅನ್ನುವುದು ಇಲ್ಲ ಎಂದು ಎಷ್ಟೇ ಉಪದೇಶ ಮಾಡಿ, ನಡುರಾತ್ರಿ ಒಂಟಿಯಾಗಿದ್ದಾಗ, ಅಪಾರ್ಟ್‌ಮೆಂಟ್‌ ಬಿಲ್ಡಿಂಗಿನ ಎಂಟನೇ ಮಹಡಿಯ ಬಾಲ್ಕನಿಯಲ್ಲಿ ನಿಂತು ದೂರ ರಸ್ತೆಯ ವಾಹನ ದಟ್ಟಣೆಯನ್ನು ದಿಟ್ಟಿಸುತ್ತಿದ್ದಾಗ ಯಾವುದೋ ದಿಕ್ಕಿನಿಂದ ದೆವ್ವವೊಂದು ಕಾಣಿಸಿಕೊಂಡು ವಿಕಾರವಾಗಿ ನಕ್ಕುಬಿಟ್ಟರೆ?

ಅಂತಹ ಭಯದ ಕ್ಷಣದಲ್ಲಿ ನಿಮ್ಮ ಯಾವ ವೈಜ್ಞಾನಿಕ ಚಿಂತನೆಗಳು ಕೆಲಸಕ್ಕೆ ಬರುತ್ತವೆ? ಯಾವ ಪರಿಣಾಮ ಬೀರುತ್ತವೆ?

ಜೀವನದಲ್ಲಿ ಉದ್ಭವಿಸುವ ವಿಷಮ ಪರಿಸ್ಥಿತಿಗಳ ಎದುರು ಯಾವುದೇ ವಿಚಾರ ಧಾರೆಗಳು ಪರಿಣಾಮ ಬೀರುವುದಿಲ್ಲ. ಏಕೆಂದರೆ ಮನುಷ್ಯ ಆಲೋಚನೆಗಳಲ್ಲಿ ಜೀವಿಸುವುದಿಲ್ಲ, ಆತ ನಂಬಿಕೆಗಳಲ್ಲಿ ಜೀವಿಸುತ್ತಾನೆ.

ದೆವ್ವ ಭೂತಗಳು ಮನುಷ್ಯನ ಆಂತರಿಕ ಮನಸ್ಸಿನಲ್ಲಿ ಎಷ್ಟು ಆಳವಾಗಿ ಮೂಡಿವೆ ಎಂದರೆ ಅವು ನಮ್ಮ ಸುಪ್ತ ಮನಸ್ಸಿನಲ್ಲಿ ಗಾಢ ನಂಬಿಕೆಗಳಾಗಿ ಬೆಳೆದಿವೆ. ಅವುಗಳನ್ನು ವೈಚಾರಿಕವಾಗಿ ಚಿಂತಿಸುವ ಮೂಲಕ ಬದಲಿಸುವುದು ಸಾಧ್ಯವಿಲ್ಲ.

ಹಾಗಾಗಿ, ಇಂತಹ ನಂಬಿಕೆಗಳು ಉಂಟುಮಾಡುವ ಸಮಸ್ಯೆಗಳನ್ನು ಹೊಸ ರೀತಿಯ ನಂಬಿಕೆಗಳ ಮೂಲಕವೇ ತೊಡೆಯಬೇಕು.

ಆದ್ದರಿಂದಲೇ ಇಷ್ಟೊಂದು ಆಚರಣೆಗಳು.

ಕುಂಕುಮ ತುಂಬಿದ ಕುಂಬಳಕಾಯಿ ಒಡೆಯುವುದು, ನಿಂಬೆಹಣ್ಣುಗಳನ್ನು ವಾಹನಗಳ ಗಾಲಿಗಿಟ್ಟು ಓಡಿಸುವುದು ಈ ಎಲ್ಲವೂ ನಾವು ತನ್ನ ಮನಸ್ಸಿನ ಸಮಾಧಾನಕ್ಕಾಗಿ, ಮನಸ್ಸಿಗೆ ಶಕ್ತಿ ತುಂಬಿಕೊಳ್ಳುವುದಕ್ಕಾಗಿ ಮಾಡಿಕೊಂಡ ಆಯೋಜನೆಗಳು.

ಈ ಆಚರಣೆಗಳ ಮೂಲಕ ನಾವು ನಮ್ಮ ಮನೋಭಾರಗಳನ್ನು ಹೊರಹಾಕುತ್ತೇವೆ – ಅಶುಭದ ಆಲೋಚನೆಗಳನ್ನು ಹೊರಹಾಕಿ, ಇನ್ನು ಮುಂದೆ ಶುಭವೇ ಜರುಗಲಿದೆ ಎಂದು ನಂಬುತ್ತೇವೆ.

ನಂಬಿಕೆಗಳ ಶಕ್ತಿ

ಮನುಷ್ಯ ತನ್ನೊಳಗೆ ಅಮಿತವಾದ ಶಕ್ತಿಯಿದೆ, ತನ್ನ ಜೀವನದಲ್ಲಿ ಎಲ್ಲವನ್ನೂ ತಾನೇ ಮಾಡಿಕೊಳ್ಳಬಲ್ಲೆ ಎಂದು ಸುಲಭದಲ್ಲಿ ನಂಬಿಕೊಳ್ಳಲಾರ. ಆದ್ದರಿಂದಲೇ ಆತ ತನಗಿಂತ ದೊಡ್ಡದಾದ ಒಂದು ಶಕ್ತಿಯನ್ನು ಆಶ್ರಯಿಸುತ್ತಾನೆ.

ಸಮಗ್ರ ಅಸ್ತಿತ್ವವನ್ನು ಯಾವುದೋ ಒಂದು ಚೈತನ್ಯ ನಡೆಸುತ್ತಿದೆ ಎಂದು ನಂಬುತ್ತಾನೆ, ಅಂತಹ ಚೈತನ್ಯದ ಜೊತೆಗೆ ಆತ್ಮೀಯ ಮತ್ತು ಆಳವಾದ ಬಂಧವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಾನೆ.

ಒಮ್ಮೆ ಇಂತಹ ಸರ್ವವ್ಯಾಪಿ ಚೈತನ್ಯದೊಂದಿಗೆ ಬಂಧ ಬೆಳೆಸಿಕೊಂಡುಬಿಟ್ಟರೆ, ಅದು ತನ್ನ ಜೀವನದ ಆಗುಹೋಗುಗಳನ್ನು ನೋಡಿಕೊಳ್ಳುತ್ತದೆ, ಎಲ್ಲವೂ ಶುಭವಾಗುತ್ತದೆ ಎಂದು ನಂಬುತ್ತಾನೆ.

ಉದಾಹರಣೆಗೆ, ನಿಮ್ಹಾನ್ಸ್‌ನಲ್ಲಿ ಸಂಜೆ ಡ್ಯೂಟಿ ಮುಗಿಸಿ ಮನೆಗೆ ಬಂದು ಒಂಟಿಯಾಗಿ ಮಲಗುವ ಹುಡುಗನಿಗೆ ನೀವು ದೆವ್ವಗಳಿಲ್ಲ, ದುಷ್ಟಶಕ್ತಿಗಳಿಲ್ಲ ಎಂದು ಎಷ್ಟೇ ಹೇಳಿದರೂ, ಸಮಾಧಾನವಾಗುವುದಿಲ್ಲ. ದೇವರಕೋಣೆಯಲ್ಲಿರುವ ವಿಭೂತಿ ಉಂಡೆಯನ್ನು ಹಾಸಿಗೆ ಪಕ್ಕದಲ್ಲಿಟ್ಟುಕೊಂಡು ಮಲಗಿದರೇ ಸಮಾಧಾನ. ಅದು ಆತನ ನಂಬಿಕೆ.

ಅದೇ ರೀತಿ ನಮ್ಮ ಹಳ್ಳಿಹಳ್ಳಿಗಳಲ್ಲಿ ಜನ ಊರ ಹೊರಗೆ ಹನುಮನ ಗುಡಿಯಿದೆಯೆಂದರೆ ಯಾವ ದುಷ್ಟಶಕ್ತಿಯೂ ಊರಿನೊಳಗೆ ಕಾಲಿಡುವುದಿಲ್ಲ ಎಂದು ನಂಬುತ್ತಾರೆ. ಇಂತಹ ಗಾಢ ಭಕ್ತಿ ಮತ್ತು ನಂಬಿಕೆಯಲ್ಲಿ ಇಡೀ ಊರು ನಿಶ್ಚಿಂತತೆಯ ನಿದ್ದೆಗೆ ಜಾರುತ್ತದೆ.

ಹೀಗೆ ಭಕ್ತಿಯ ಮಾರ್ಗ ಕೂಡಾ ಮನುಷ್ಯನ ಮನಸ್ಸಿನಲ್ಲಿ ಜೀವಿಸುವ ಶಕ್ತಿಯನ್ನು ತುಂಬಿಕೊಳ್ಳುವ ಮತ್ತು ಆ ಮೂಲಕ ಜೀವನವನ್ನು ಸಂತುಲಿತಗೊಳಿಸಿಕೊಳ್ಳುವ ಪ್ರಯತ್ನವೇ.

ಆದರೆ, ಜೀವನವನ್ನು ಸಂತುಲಿತಗೊಳಿಸಿಕೊಳ್ಳುವುದಕ್ಕೆ ಸದ್ವಿಚಾರಗಳು ಸಾಕಾಗುವುದಿಲ್ಲ, ಸದ್ವಿಚಾರಗಳು ವಿಷಮ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವುದಿಲ್ಲ. ಆದ್ದರಿಂದಲೇ ಸತ್‌ನಂಬಿಕೆಗಳನ್ನು ಬೆಳೆಸಿಕೊಳ್ಳಬೇಕು.

ಆದರೆ ಒಬ್ಬ ಪಿಜಿ ಡಾಕ್ಟರ್ ಹತ್ತಿರ ನೀವು ಈ ವಿಚಾರಗಳನ್ನು ಎಷ್ಟು ಎಂದು ವಿವರಿಸಲು ಸಾಧ್ಯವಿದೆ?

ನೀವು ಎಷ್ಟೇ ವೈಚಾರಿಕವಾಗಿ ಮಾತನಾಡಿದರೂ ಅದು ಅವರ ರಾತ್ರಿಯ ಒಂಟಿತನದಲ್ಲಿ ಬೆಂಬಲಕ್ಕೆ ನಿಲ್ಲುವುದಿಲ್ಲ. ಅವರ ಮನಸ್ಸಿನಲ್ಲಿ ಹೊಸತೊಂದು ನಂಬಿಕೆ ಬಂದರೆ ಮಾತ್ರ ಆ ನಂಬಿಕೆ ಮಾತ್ರ ಅವರನ್ನು ಕಾಪಾಡಬಲ್ಲುದು.

ಹಾಗಿದ್ದರೆ ಹೊಸ ನಂಬಿಕೆಯನ್ನು ಹೇಗೆ ಬೆಳೆಸಿಕೊಳ್ಳುವುದು?

ಹೊಸದೊಂದು ಭಾವವನ್ನು ಮನಸ್ಸಿಗೆ ತಂದುಕೊಂಡು ಅದನ್ನು ಅಭ್ಯಾಸ ಮಾಡುವ ಮೂಲಕ.

ಸಾಮಾನ್ಯವಾಗಿ 21 ದಿನಗಳವರೆಗೆ ಯಾವುದೇ ಒಂದು ವಿಚಾರದ ಭಾವವನ್ನು ಗಾಢವಾಗಿ ಅಭ್ಯಾಸ ಮಾಡಿದರೆ, ಆ ವಿಚಾರ ನಂಬಿಕೆಯಾಗಿ ಬದಲಾಗುತ್ತದೆ.

ಆ ನಂಬಿಕೆಯ ಶಕ್ತಿಯಿಂದ ಜೀವನದ ಸವಾಲುಗಳನ್ನು ಎದುರಿಸುವುದು ಸುಲಭವಾಗುತ್ತದೆ.

ಈ ಕುರಿತಂತೆ 21-ದಿನಗಳ ಒಂದು ಭಕ್ತಿಸೂತ್ರದ ಆನ್‌ಲೈನ್ ಕೋರ್ಸ್ ಮಾಡುವ ಕುರಿತು ಯೊಚಿಸುತ್ತಿದ್ದೇನೆ.

ತಾವೇ ಸ್ವತಃ ಅಧ್ಯಯನ ಮಾಡಿ ಅಭ್ಯಾಸ ಮಾಡುವ, ಇಬುಕ್, ವರ್ಕ್‌ಬುಕ್‌ಗಳು ಮತ್ತು ಪ್ರಶ್ನೋತ್ತರಗಳ ಮೂಲಕ ಒಂದು ಪೂರ್ಣರೂಪದ ಕೋರ್ಸ್ ಮುಗಿಸಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ರೀತಿಯಲ್ಲಿ ಇರುತ್ತದೆ ಈ ಕೋರ್ಸ್.

ಇಂತಹ ಕೋರ್ಸ್ ಅಗತ್ಯವಿದೆಯೇ? ನಿಮಗೇನೆನ್ನಿಸುತ್ತದೆ?

Leave a Reply

Your email address will not be published. Required fields are marked *