ಜನಿಸುತ್ತ ಪ್ರತೀ ಮನುಷ್ಯನೂ ಮಹಾಚೈತನ್ಯವಾಗಿ ಜನಿಸುತ್ತಾನೆ.
ಆದರೆ ಜೀವನಾನುಭವಗಳು ಮನುಷ್ಯನನ್ನು ಅತ್ಯಂತ ಕುಬ್ಜನನ್ನಾಗಿಸಿಬಿಡುತ್ತವೆ. ಆತ ತನ್ನೊಳಗೊಂದು ಮಹಾಚೈತನ್ಯವಿದ್ದೂ, ಮಹಾಸಾಮರ್ಥ್ಯವಿದ್ದೂ ತಾನು ಯಾತಕ್ಕೂ ಬಾರದವನು ಎಂಬ ನಂಬಿಕೆಯಲ್ಲಿ ಬದುಕತೊಡಗಿಬಿಡುತ್ತಾನೆ. ಅತ್ಯಂತ ಬಡತನದಲ್ಲಿ ಮತ್ತು ನಿರಾಸೆಯಲ್ಲಿ.
ಆದರೆ ಈ ಮಹಾಚೈತನ್ಯವನ್ನು ಮತ್ತೆ ಕಂಡುಕೊಳ್ಳಲು, ಅದನ್ನು ಬಳಸಿಕೊಂಡು ಜೀವನದಲ್ಲಿ ಉನ್ನತಿಯನ್ನು ಕಾಣಲು ಯಾವುದಾದರೂ ಮಾರ್ಗವಿದೆಯೇ?
ನಮಸ್ತೆ, ನಾನು ರಾಘವ ಮೈತ್ರೇಯ. ಈ ಮೂಲಕ ನಿಮಗೆ ನಿಮ್ಮೊಳಗಿನ ಮಹಾಚೈತನ್ಯವನ್ನು ಜಾಗೃತಗೊಳಿಸಿಕೊಳ್ಳುವ, ಮತ್ತು ಅದನ್ನು ಬಳಸಿಕೊಂಡು ನಿಮ್ಮ ಗುರಿಗಳನ್ನು ತಲುಪುವ ಕಲೆಯನ್ನು ಕಲಿಸಲಿದ್ದೇನೆ.
ನಾನೇನು ಕಲಿಸುತ್ತೇನೆ?
ನೀವು ಭೂಮಿಯಲ್ಲಿ ಏನನ್ನು ಪಡೆಯಲಾರಿರೋ, ಅದನ್ನು ಸ್ವರ್ಗದಲ್ಲಿ ಕೂಡಾ ಪಡೆಯಲಾರಿರಿ. ಆದ್ದರಿಂದ, ನನಗೆ ಸ್ವರ್ಗ ನರಕಗಳ ಕುರಿತು ಮಾತನಾಡುವ ಆಸಕ್ತಿಯಿಲ್ಲ. ಏನಿದ್ದರೂ ಇಲ್ಲಿ ನೀವು ಏನು ಮಾಡಬೇಕೆಂದುಕೊಂಡಿದ್ದೀರಿ ಆ ಕುರಿತು ಮಾತ್ರ. ಆದ್ದರಿಂದ ಇಲ್ಲಿ ಡಾಂಬಿಕ ತತ್ವಜ್ಞಾನವಿಲ್ಲ. ನೀವು ತಕ್ಷಣದಲ್ಲಿ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದಂತಹ ಮಾರ್ಗಸೂತ್ರಗಳ ಕುರಿತು ಮಾತ್ರ ಬರೆಯುತ್ತೇನೆ.
ಮೊದಲಿಗೆ ನಾನು ಕಲಿಸುತ್ತಿರುವ ಸೂತ್ರದ ಕುರಿತು ನಿಮಗೆ ತಿಳಿದಿದೆ. ಆದರೆ, ಅದರ ಮೂಲ ರಹಸ್ಯ, ಅದನ್ನು ವೈಜ್ಞಾನಿಕವಾಗಿ ಪಾಲಿಸಬೇಕಾದ ಹಂತಗಳು ಮತ್ತು ಅದರಿಂದ ಪ್ರಯೋಜನಗಳನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಕೂಡಾ ತಿಳಿದುಕೊಳ್ಳಬೇಕು.
ಬಹಳ ಹಿಂದಿನಿಂದ ಮಹಾರಾಜರು, ಮಹಾವೀರರು ಮತ್ತು ಮಹಾಕವಿ-ಶಿಲ್ಪಿಗಳು ಈ ಸೂತ್ರವನ್ನು ಬಳಸಿ ಮಹತ್ತನ್ನು ಸಾಧಿಸಿದ್ದಾರೆ. ಅದೇ ಭಕ್ತಿಯ ಸೂತ್ರ.
ಭಕ್ತಿಯ ಸೂತ್ರವನ್ನು ಬಳಸಿಕೊಂಡು ನೀವು ಹೇಗೆ ನಿಮ್ಮ ಪ್ರತಿದಿನದ ಸಮಯವನ್ನು ಅತ್ಯಂತ ಸದುಪಯೋಗಪಡಿಸಿಕೊಳ್ಳಬಹುದು, ನಿಮ್ಮ ಶಕ್ತಿಯನ್ನು ನಿಮ್ಮ ಉನ್ನತಿಯ ಕಡೆ ಹರಿಸಬಹುದು, ಜನಮೆಚ್ಚುವಂತಹ ಉದ್ಯಮಗಳನ್ನು ಸ್ಥಾಪಿಸಬಹುದು ಮತ್ತು ಕುಟುಂಬ ಸಾಮರಸ್ಯವನ್ನು ಹೇಗೆ ಹೊಂದಬಹುದು ಈ ಎಲ್ಲದರ ರಹಸ್ಯಗಳನ್ನು ಈ ಸೂತ್ರದಲ್ಲಿ ಕಲಿಸಲಾಗುತ್ತದೆ.
ಜೊತೆಗೆ, ಈವರೆಗೆ ಭಕ್ತಿಸೂತ್ರ ಬಳಸಿ ಮಹತ್ತನ್ನು ಸಾಧಿಸಿದವರ ಕಥೆಗಳನ್ನು, ಅವರು ಅನುಸರಿಸಿದ ಮಾರ್ಗಗಳನ್ನು ಕೂಡಾ ಹೇಳುತ್ತೇನೆ.
ಹೆಚ್ಚಾನೆಚ್ಚು ಜನರಿಗೆ ಇಡೀ ಜೀವನಕ್ಕೆ ಭಕ್ತಿಯ ಸೂತ್ರವೊಂದೇ ಸಾಕು, ಅದು ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತದೆ.
ನಿಮಗೆ ಈ ಮಾರ್ಗ ತಕ್ಕುದಲ್ಲ ಎನ್ನಿಸಿದರೆ, ಮುಂದಿನ ವರ್ಷ ನೀವು ಬೇರೊಂದು ಸೂತ್ರವನ್ನು ಕಲಿಯಬಹುದು.
ಈ ವೆಬ್‌ಸೈಟ್‌ನ ರಚನೆ ಮತ್ತು ಸ್ವರೂಪ
ಈ ವೆಬ್‌ಸೈಟ್ ಯಾವುದೇ ಜಾಹೀರಾತುಗಳಿಲ್ಲದೇ (ಈ ವೆಬ್‌ಸೈಟ್ ಮಾಹಿತಿಗಳನ್ನು ಹೊರತುಪಡಿಸಿ) ಶುದ್ಧ ಓದಿಗೆ ತಕ್ಕುದಾಗಿರುವಂತೆ ರಚಿಸಲಾಗಿದೆ.
ಇಲ್ಲಿ ವ್ಯಕ್ತಿವಿಕಸನ ವಿಷಯಗಳನ್ನು ಮಾತ್ರ ಕಲಿಸಲಾಗುತ್ತದೆ. ಅಂತಹ ಪ್ರತಿಯೊಂದು ವಿಷಯಕ್ಕೂ ಒಂದು ಮುಖಪುಟವಿದ್ದು, ಲೇಖನಗಳನ್ನು ಪುಸ್ತಕಗಳಲ್ಲಿರುವಂತೆ ಪರಿವಿಡಿಯ ಸ್ವರೂಪದಲ್ಲಿ ವಿಂಗಡಿಸಲಾಗಿರುತ್ತದೆ ಮತ್ತು ಸಂಬಂಧಿತ ಲೇಖನಗಳನ್ನು ಹುಡುಕಲು ಸುಲಭವಾಗುವಂತೆ ಲಿಂಕ್ ಮಾಡಲಾಗಿರುತ್ತದೆ. (ಇದಿಷ್ಟು ಹೊರತುಪಡಿಸಿ ನನ್ನ ಕವಿತೆಗಳು ಮತ್ತು ಕಥೆಗಳಿರುತ್ತವೆ.)
ಪ್ರತಿ ಲೇಖನಗಳ ನಂತರ ಪ್ರಶ್ನೆಗಳಿದ್ದಲ್ಲಿ ಕಮೆಂಟ್ ಬಾಕ್ಸ್‌ನಲ್ಲಿ ಬರೆಯಿರಿ, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಾಗುತ್ತದೆ.
ಹೆಚ್ಚಿನ ವಿವರಗಳಿಗಾಗಿ ಕುರಿತು ಪುಟ ನೋಡಿ.