ಹುತ್ತ – ಸಣ್ಣಕತೆ

ಮುಂಜಾನೆಯಷ್ಟೇ ಸಣ್ಣ ಮಳೆ ಬಂದು ಹಸಿಯಾಗಿದ್ದ ನೆಲ, ಎಳೆ ಬಿಸಿಲಿನ ಕಿರಣಗಳಿಗೆ ಒಣಗುತ್ತಿತ್ತು. ಮುತ್ತಲ ತೊಗಟೆಯನ್ನೆಲ್ಲ ತನ್ನ ಕತ್ತಿಯಿಂದ ಹೆರೆದು ತೆಗೆದು, ಒರಗಿ ಕುಳಿತುಕೊಳ್ಳುವುದಕ್ಕೆ ಹದ ಮಾಡಿಕೊಂಡಿದ್ದ ಮಧುಕರ, ನಿಶ್ಚಿಂತನಾಗಿ ಕುಳಿತು ಎದುರಿಗಿದ್ದ ಗಗನಚುಂಬಿ ಮಾವಿನ ಮರದ ಬೃಹತ್ ಬುಡದಲ್ಲಿ ಎದ್ದಿದ್ದ ಹುತ್ತವನ್ನೇ ನೋಡುತ್ತಿದ್ದ.

ಆ ಮಾವಿನ ಮರದ ಸುತ್ತ ಅವನ ದನಗಳು ಮೇಯುತ್ತ ಅಲೆಯುತ್ತಿದ್ದವು. ಅದೆಷ್ಟು ದಿನಗಳಾದವೋ, ನಿತ್ಯ ಹುತ್ತವನ್ನು ದಿಟ್ಟಿಸುತ್ತ ಕುಳಿತುಕೊಳ್ಳುವುದು. ಮೊದಮೊದಲ ದಿನಗಳಲ್ಲಿ ದುಃಖಿತನಾಗಿ ಆ ಗಿಡಕ್ಕೆ ಒರಗಿ ಬಿಕ್ಕುತ್ತಿದ್ದಾಗ, ಈ ಹುತ್ತವನ್ನು ನೋಡುವುದು ಎದೆಯನ್ನು ಹಗುರಾಗಿಸುತ್ತಿತ್ತು. ಎವೆಯಿಕ್ಕದೇ ಹುತ್ತವನ್ನು ನೋಡುತ್ತಿದ್ದರೆ, ದುಃಖವೇ ನೀರಾಗಿ ಕಣ್ಣಿನಿಂದ ಇಳಿಯುತ್ತಿತ್ತು. ಹಾಗೆ ಹಗುರಾದವ, ದೃಷ್ಟಿಯನ್ನು ಮೇಲಕ್ಕೆ ಹರಿಸಿ, ವಿಶಾಲವಾಗಿ ಬೆಳೆದು ನಿಂತ ಮಾವಿನ ಮರವನ್ನು ಕೆಳಗಿನಿಂದ ಮೇಲಕ್ಕೆ ನೋಡುತ್ತಿದ್ದ. ಮರದಾಚೆ ಒಂದು ದನ ಮೇಯುತ್ತಿದ್ದರೆ ಕಾಣುತ್ತಿರಲಿಲ್ಲ, ಅಷ್ಟು ಹರವಾದ ಕಾಂಡ. ಅದೆಷ್ಟೋ ಎತ್ತರದವರೆಗೆ ಕಂಬದಂತೆ ನಿಂತಿದೆ – ಅನಂತರದಲ್ಲಿ ಒಂದು ವಿಫುಲವಾಗಿ ಎಲೆಗಳನ್ನು ತುಂಬಿಕೊಂಡ ಕೊಂಬೆ, ಇನ್ನೂ ಮೇಲೆ ಒಂದು, ಆ ಕೊಂಬೆಯ ಮೇಲೆ ನಾಲ್ಕು ಹೆಜ್ಜೇನು ಗೂಡುಗಳು, ಇನ್ನೂ ಮೇಲೆ ಮರದ ಸಮೃದ್ಧ ಹಸಿರಿನ ತಲೆ. ಆ ತಲೆಗೆ ಹಿನ್ನೆಲೆಯಲ್ಲಿ ಚಂದ್ರಗುತ್ತಿಯ ಗುಡ್ಡ. ಈ ಮರ ಕೋಟೆಗಿಂತ ಎತ್ತರ ಇದೆ ಅಂದುಕೊಳ್ಳುತ್ತಿದ್ದ. ಗುಡ್ಡದ ದಟ್ಟ ಹಸಿರು, ಅದರ ಮೇಲೆ ಕಣ್ತುಂಬುವ ನೀಲಿ, ಆ ನೀಲಿಯಲ್ಲಿ ತೇಲುವ ಹತ್ತಿಹಗುರ ಮೋಡಗಳು. ಮರಕ್ಕೆ ಒರಗಿದವ ಹಾಗೇ ಜಾರಿ, ಮಲಗಿಬಿಡುತ್ತಿದ್ದ – ಹಗಲೇರುತ್ತಿದ್ದುದನ್ನು ಲೆಕ್ಕಿಸದೇ. ಮಧ್ಯಾಹ್ನದ ಹೊತ್ತಿಗೆ ಅವನ ಅಮ್ಮ ಜಾನಕಿ ಊಟ ಕಟ್ಟಿಕೊಂಡು ಬರುವವರೆಗೆ.

ಮೊದಮೊದಲು ಮಗನ ಸ್ಥಿತಿಯನ್ನು ನೋಡಿ ಕಣ್ಣೀರು ಹಾಕುತ್ತಿದ್ದಳು. ನಂತರ ಪರಿಸ್ಥಿತಿಗೆ ಒಗ್ಗಿಕೊಂಡಂತೆ ನಿಟ್ಟುಸಿರು ಬಿಡುತ್ತಾ ಅವನನ್ನು ಎಬ್ಬಿಸಿ ಊಟ ಕೊಡುತ್ತಿದ್ದಳು. ಅವನು ಊಟ ಮಾಡುತ್ತಿದ್ದರೆ, ಅವನ ಬಿಳಿಚುಗೊಂಡ ಕೆನ್ನೆಯನ್ನೇ ಸವರುತ್ತಿದ್ದಳು. ಆ ಚರ್ಮ ರೋಗ ಕುತ್ತಿಗೆಯಿಂದ ಮುಖವನ್ನೂ, ಎದೆಯಿಂದ ಕೈಗಳನ್ನೂ ಆವರಿಸುತ್ತ ಹೋಗುತ್ತಿತ್ತು. ಕಾಲುಗಳಂತೂ ಈಗಾಗಲೇ ಬೆಳ್ಳಬೆಣ್ಣೆಯಾಗಿದ್ದವು. ರೋಗ ಉಲ್ಬಣಗೊಳ್ಳುತ್ತಿದ್ದಂತೆ, ಜೊತೆಯಾಟದ ಗೆಳೆಯರು ದೂರಸರಿದರು, ಶಾಲೆಯಲ್ಲಿ ಸಹಪಾಠಿಗಳು ಅಸಹ್ಯಿಸಿದರು. ಅಲ್ಲಿಗೆ ಅವನ ಓದು ಮುಗಿಯಿತು. ಈ ಕಾಡಿನ ಅಂಚಿನಲ್ಲಿ ಒಂದೆರೆಡು ಎತ್ತುಗಳು, ನಾಲ್ಕು ದನಗಳು, ವಿಶಾಲವಾದ ಬಯಲು ಮತ್ತು ಮಿತಿಯಿಲ್ಲದೇ ಹಬ್ಬಿಕೊಂಡ ಆಕಾಶ. ಇದಿಷ್ಟೇ ಅವನ ಲೋಕ. ಹೀಗೇ ಒಂದು ದಿನ ಬಯಲಿನಲ್ಲಿ ದನಗಳನ್ನು ಮೇಯಿಸುತ್ತ ನಡೆದು ಬಂದವನ ಗಮನ ಸೆಳೆದದ್ದು ಹುತ್ತ. ಹತ್ತಿರ ಹೋದ. ತನಗಿಂತ ಎತ್ತರ ಇದೆ. ಕೈ ಎತ್ತಿದರೆ ತುದಿ ನಿಲುಕದಷ್ಟು. ಬದಿಯಲ್ಲಿ ಅನೇಕ ಕವಲು ಗೋಪುರಗಳು. ಒಂದೂ ಬಾಯಿತೆರೆದಿಲ್ಲ. ಒಂದರ ತುದಿ ಮುರಿದು ನೋಡೋಣ ಅಂದುಕೊಂಡ – ಆದರೆ ತಕ್ಷಣ ಅದರಿಂದ ಒಂದು ಸರ್ಪ ಹೆಡೆಯೆತ್ತಿದರೆ? ಸಹವಾಸ ಬೇಡ ಅಂದುಕೊಳ್ಳುತ್ತ, ತುಸು ದೂರದಲ್ಲಿದ್ದ ಮುತ್ತಲ ಮರದ ಕಡೆ ಹೋದ. ಚಾಚಿಕೊಂಡ ಅದರ ನೆರಳಲ್ಲಿ ಕುಳಿತುಕೊಂಡ. ಬೆನ್ನಿಗೆ ಚುಚ್ಚಿದ ಅದರ ತೊಗಟೆಯನ್ನೆಲ್ಲ ಕತ್ತಿಯಿಂದ ಹೆರೆದು ತೆಗೆದು ಒರಗಿದ. ಕುಳಿತರೆ ಎದುರಿಗೆ ನೇರವಾಗಿ ಹುತ್ತ. ಹಾವು ಹೊರಬಂದರೆ ಹೇಗೆ ಬಂದೀತು? ಆ ಗೋಪುರದ ತುದಿಯನ್ನು ಮುರಿದು? ಹಕ್ಕಿ ಮೊಟ್ಟೆಯೊಡೆದು ಬರುವಂತೆ? ನೋಡೋಣ ಅಂದುಕೊಂಡ.

ತಿಂಗಳುಗಳು ಕಳೆದವು. ಒಂದು ಹಾವೂ ಆ ಹುತ್ತವನ್ನೊಡೆದು ಬರಲಿಲ್ಲ. ಕ್ರಮೇಣ ಹಾವಿನ ಸಂಗತಿ ಮರೆತುಹೋಗಿ, ಹುತ್ತವನ್ನು ನೋಡುವುದೇ ಒಂದು ಅಭ್ಯಾಸವಾಯಿತು. ಮಾವಿನ ಮರಕ್ಕೆ ಅಂಟಿಕೊಂಡಂತೆ ಬೆಳೆದ ಹುತ್ತ, ಅದರ ಮೇಲೆ ಸರಳ ರೇಖೆಯಲ್ಲಿ ಬೆಳೆದು ನಿಂತ ಮಾವಿನ ಮರ, ಮರದಿಂದ ಹೊರಬಿದ್ದ ಹರವಾದ ಕೊಂಬೆಯೊಂದು ಮತ್ತೆ ಕವಲೊಡೆದು ಮೇಲೆದ್ದಿದೆ. ನಡುವಿನಲ್ಲಿ ದಟ್ಟ ಹಸಿರಿನ ಬಂದನಿಕೆ ಹಬ್ಬಿ ಕುಳಿತಿದೆ. ಹುತ್ತ ನೋಡುತ್ತಿದ್ದವನು ಬಂದನಿಕೆಯನ್ನು ನೋಡಬೇಕೆಂದರೆ ತಲೆಯನ್ನೆತ್ತಲೇಬೇಕು. ಒಮ್ಮೊಮ್ಮೆ ಹುತ್ತವನ್ನೇ ದಿಟ್ಟಿಸುತ್ತ ಕುಳಿತಿರುತ್ತಿದ್ದ. ಇನ್ನೊಮ್ಮೆ ಆ ಕಿವುಚು ಎಲೆಗಳ ಹಸಿರು ಗುಚ್ಚವನ್ನು.

ಒಂದು ದಿನ ಆ ಬಂದನಿಕೆ ನಡುವೆ ಕಪ್ಪಾಗಿರುವುದು ಏನೋ ಕಂಡು ಸೂಕ್ಷ್ಮವಾಗಿ ನೋಡಿದ. ಅದರಲ್ಲಿ ಹಣ್ಣಿನ ಗೊಂಚಲೊಂದಿತ್ತು. ನಾಲ್ಕೈದು ಕಳಿಯುತ್ತಿದ್ದರೆ, ಒಂದಷ್ಟು ಇನ್ನೂ ಹಸಿರು ಕಾಯಿಗಳು ಎಲೆಗಳ ನಡುವೆ ಮರೆಮಾಚಿಕೊಂಡಿದ್ದವು. ಎರಡು ಮೂರು ದಿನಗಳಲ್ಲಿಯೇ ಇಡೀ ಗೊಂಚಲು ಕಪ್ಪಾಯಿತು. ಮತ್ತೊಂದು ದಿನದಲ್ಲಿ ಹಣ್ಣುಗಳು ಬಿರಿಯತೊಡಗಿದವು. ಬಿರಿದ ಹಣ್ಣುಗಳಿಂದ ನೇರಳೇ ಬಣ್ಣದ ರಸದ ಹನಿಯೊಂದು ನೇರವಾಗಿ ಹುತ್ತದ ತುದಿಯ ಮೇಲೆ ಬೀಳುವುದನ್ನು ಮಧುಕರ ನೋಡಿದ. ಹುತ್ತ ಅದನ್ನು ಹೀರಿ ಮೊದಲಿನಂತಾಯಿತು. ನಂತರ ಒಂದೊಂದೇ ಹನಿಗಳು ಬೀಳುತ್ತ ಹೋದವು. ಹಾಗೆ ಬೀಳುತ್ತಿರುವಾಗ ಅವನು ಬಂದನಿಕೆಯ ಹಣ್ಣಿನ ಗೊಂಚಲನ್ನೇ ನೋಡುತ್ತಿದ್ದು, ರಸದ ಹನಿಯೊಂದು ಉದುರುತ್ತಿದ್ದಂತೆ ಅದರ ಜೊತೆಗೇ ತನ್ನ ಕುತ್ತಿಗೆಯನ್ನು ಕೆಳಗಿಳಿಸುತ್ತಿದ್ದ. ಒಂದೆರೆಡು ದಿನಗಳಲ್ಲಿಯೇ ಕುತ್ತಿಗೆ ಸ್ಥಿರಗೊಂಡು, ಕೇವಲ ಕಣ್ಣುಗಳು ಮಾತ್ರ ಮೇಲಿನಿಂದ ಕೆಳಗಿಳಿಯುತ್ತಿದ್ದವು. ಈ ನಡುವೆ ಮತ್ತೊಂದೆರೆಡು ಗೊಂಚಲು ಹಣ್ಣುಗಳು ರಸ ಸುರಿಸತೊಡಗಿ, ಅವನ ಕಣ್ಣುಗಳಿಗೆ ಹೆಚ್ಚಿನ ಕೆಲಸವಾಯಿತು.

ಒಮ್ಮೆ ಕಣ್ಣುಗಳನ್ನು ಸ್ವಲ್ಪವೂ ಮೇಲೆ ಕೆಳಗೆ ಮಾಡದೇ, ಒಂದೇ ದಿಟ್ಟಿಯಲ್ಲಿ ಹನಿ ಬೀಳುವುದನ್ನು ನೋಡಬೇಕು ಎಂದುಕೊಂಡು ಪ್ರಯತ್ನಿಸಿದ. ಆದರೆ, ಮೇಲಿನ ಅರ್ಧ ನೋಡುವಷ್ಟರಲ್ಲಿ ಹನಿ ಹುತ್ತದ ಮೇಲೆ ಬಿದ್ದಿರುತ್ತಿತ್ತು. ಇನ್ನು ಕೆಳಗಿನ ಅರ್ಧದ ಮೇಲೆ ಗಮನ ಹರಿಸುತ್ತಿದ್ದರೆ, ಹನಿ ಬೀಳುವುದೇ ಗೊತ್ತಾಗುತ್ತಿರಲಿಲ್ಲ. ಹೀಗಿರುವಾಗ ಒಂದು ದಿನ ಮಧುಕರನಿಗೆ, ಕಿಂಚಿತ್ತೂ ಕಂಪನವಿಲ್ಲದೇ ರಸದ ಹನಿಯೊಂದು ಹಣ್ಣಿನಿಂದ ಒಸರಿ ಹುತ್ತದ ಮೇಲೆ ಬಿದ್ದು, ಸಿಡಿದು, ಇಂಗುವುದನ್ನು ನೋಡುವುದು ಸಾಧ್ಯವಾಯಿತು.

ಬೆನ್ನು ನೇರವಾಗಿಸಿಕೊಂಡು, ಕಣ್ಣನ್ನು ಸ್ಥಿರವಾಗಿಸಿಟ್ಟುಕೊಂಡು ನಿಶ್ಚಲನಾಗಿ ಕುಳಿತುಕೊಂಡರೆ, ಜಗತ್ತಿನ ಉಳಿದ ಎಲ್ಲ ವ್ಯಾಪಾರಗಳೂ ಮರೆಯಾಗಿ ಕೇವಲ ಹನಿಯೊಂದು ಹುತ್ತದ ಮೇಲೆ ಬೀಳುವ ಕ್ರಿಯೆಯೊಂದೇ ಅವನ ಪಾಲಿಗೆ ಉಳಿದಿರುತ್ತಿತ್ತು. ಒಂದೊಂದು ಹನಿ, ತನ್ನದೇ ಸಮಯ ತೆಗೆದುಕೊಂಡು, ಲೀಲೆಯಲ್ಲಿ ಹಣ್ಣಿನಿಂದಿಳಿದು ಬೀಳುತ್ತ, ಹುತ್ತಕ್ಕೆ ಅಪ್ಪಳಿಸಿ ಮರೆಯಾಗುತ್ತಿದ್ದುದಕ್ಕೆ ಅವನು ಸಾಕ್ಷಿಯಾಗಿ ಕುಳಿತಿರುತ್ತಿದ್ದ.

ಆದರೆ ಇಷ್ಟು ದಿನದಲ್ಲಿ ಆ ದೊಡ್ಡ ಹುತ್ತದ ಮೇಲ್ಭಾಗ ಹಣ್ಣಿನ ರಸ ಹೀರಿ ನೇರ‍ಳೆ ಬಣ್ಣಕ್ಕೆ ತಿರುಗಿದ್ದುದು ಅವನ ಗಮನಕ್ಕೇ ಬಂದಿರಲಿಲ್ಲ. ಒಂದು ಮುಂಜಾನೆ ಆ ಹುತ್ತದ ಗೋಪುರದ ಮೇಲೆ ಸೂರ್ಯನ ಕಿರಣಗಳು ಬಿದ್ದು ಅದು ಹೊಳೆಯುತ್ತಿದ್ದುದನ್ನೇ ಹುತ್ತವನ್ನು ನೋಡುತ್ತ ಕುಳಿತಿದ್ದ. ಹನಿ ಬೀಳುತ್ತಾ, ತೇವಗೊಳ್ಳುತ್ತಿದ್ದ ಅದನ್ನೇ ಎವೆಯಿಕ್ಕದೇ ದಿಟ್ಟಿಸುತ್ತಿದ್ದವ, ಒಂದು ಕ್ಷಣ ಎದ್ದು ನಿಂತ. ನಡೆದು ಹೋಗಿ ಹುತ್ತದ ಮೇಲ್ಭಾಗವನ್ನು ಮುರಿದು ನುಂಗುವಂತೆ ತಿಂದ.

೦-೦-೦-೦

ಸಂಜೆ ಮನೆಗೆ ಬಂದ ಮಧುಕರ ನೇರವಾಗಿ ಹಾಸಿಗೆ ಬಿಚ್ಚಿಕೊಂಡು ಮಲಗಿಬಿಟ್ಟ. ಊಟಕ್ಕೆ ಕರೆದರೂ ಏಳಲಿಲ್ಲ. ಮಧ್ಯಾಹ್ನವೂ ಊಟವನ್ನು ಬಯಲ ಹಕ್ಕಿಗಳಿಗೆ ಚೆಲ್ಲಿದ್ದ. ಮರುದಿನ ಮುಂಜಾನೆ ರೊಟ್ಟಿ ಕಟ್ಟಿಕೊಂಡು ಹೋಗಿ, ದನಗಳಿಗೆ ತಿನ್ನಿಸಿದ. ತಾನು ನೇರಳೆಗೊಂಡಿದ್ದ ಇನ್ನೊಂದು ಹುತ್ತದ ತುದಿಯನ್ನು ಮುರಿದು ತಿಂದ. ಸಂಜೆ ಮತ್ತೆ ಮನೆಗೆ ಹೋದವನೇ ತಲೆತುಂಬ ಕಂಬಳಿ ಹೊತ್ತುಕೊಂಡು ಮಲಗಿದ. ರಾತ್ರಿ ಊಟಕ್ಕೆ ಸಜ್ಜುಗೊಳಿಸಿ ಅವನ ಬಳಿ ಬಂದ ಜಾನಕಿ, ಗಾಢ ನಿದ್ದೆಯಲ್ಲಿದ್ದ ಮಗನ ತಲೆಯ ಮೇಲಿನಿಂದ ಕಂಬಳಿ ಹೊದಿಕೆಯನ್ನು ತೆಗೆದಳು. ಮೂಲೆಯಲ್ಲಿದ್ದ ಚಿಮಣಿ ದೀಪ ಅವನ ಮುಖದವರೆಗೂ ಚಾಚುತ್ತಿರಲಿಲ್ಲ. ಕಿಟಕಿಯಿಂದ ಬಂದ ತಿಂಗಳ ಬೆಳಕಿನಲ್ಲಿ ಕಂಡ ಮುಖವನ್ನು ನೇವರಿಸಿದವಳು ನೋಡುತ್ತಾಳೆ, ಇನ್ನೇನು ಕೆನ್ನೆಗಳನ್ನು ಕಬಳಿಸಿ ಮೂಗಿನ ಕಡೆಗೆ ಸಾಗುತ್ತಿದ್ದ ಬಿಳಿತೊನ್ನು ಕೆನ್ನೆಗಳನ್ನು ಬಿಟ್ಟು ಕೆಳಜಾರಿದೆ. ಅವಸರಿಸಿ ಕಂಬಳಿ ತೆಗೆದು ನೋಡಿದಳು. ಕೈಗಳ ಮೇಲಿಂದ, ಕಾಲುಗಳಿಂದ ಆ ಬಿಳುಪು ಮರೆಯಾಗುತ್ತಿದೆ. ಎಚ್ಚರಿಸಲು ನೋಡಿದಳು, ಅಷ್ಟರಲ್ಲೇ ಅವನು ಕಣ್ಣುಬಿಟ್ಟ. “ಇವತ್ತು ಉಣ್ಣಲ್ಲ” ಅಂದ. ಜಾನಕಿ ಮತ್ತೆ ಒತ್ತಾಯಿಸಲಿಲ್ಲ. ತೆಗೆದಿದ್ದ ಕಂಬಳಿಯನ್ನು ಅವನ ಮೇಲೆ ಹೊದಿಸಿ ಅಡಿಗೆ ಕೋಣೆಗೆ ಹೋದಳು. ಮಧುಕರ ನಿಶ್ಚಿಂತನಾಗಿ ಮಲಗಿದ, ಆದರೆ ಜಾನಕಿಗೆ ಆ ರಾತ್ರಿ ನಿದ್ದೆ ಬರಲಿಲ್ಲ.

ಮುಂಜಾನೆ ಎದ್ದವನು ರೊಟ್ಟಿ ತಿನ್ನದೇ ಗಂಟುಕಟ್ಟಿಕೊಂಡು ಹೊರಟಾಗ ಏನೂ ಅನ್ನಲಿಲ್ಲ. ಆದರೆ ಸ್ವಲ್ಪ ಹೊತ್ತಿನ ನಂತರ ಜಾನಕಿ ಅವನನ್ನು ಹಿಂಬಾಲಿಸಿದಳು. ಅವನೊಡನೆ ನಡೆದ ದನಗಳಿಗೆ ತಾವು ತಲುಪಬೇಕಾದ ಸ್ಥಳ ಗೊತ್ತಿತ್ತು, ಮಧುಕರನಿಗೆ ಹುತ್ತ. ಅಲ್ಲಿ ತಲುಪಿದ ಮೇಲೆ, ರೊಟ್ಟಿಗಳನ್ನು ದನಗಳಿಗೆ ತಿನ್ನಿಸಿದ. ಆನಂತರ ಮತ್ತೊಂದು ಹುತ್ತದ ತುದಿಯನ್ನು ಮುರಿದು ತಿಂದ. ಮರವೊಂದರ ಹಿಂದೆ ನಿಂತು ಇಣುಕಿ ನೋಡುತ್ತಿದ್ದ ಜಾನಕಿ ನಿಂತಲ್ಲೇ ಬೆವರಿದಳು.

ಲಗುಬಗೆಯಿಂದ ಮನೆಗೆ ನಡೆದವಳ ಮನಸ್ಸಿನ ತುಂಬ ಆಶಂಕೆ, ಚಡಪಡಿಕೆ. ಇದಕ್ಕೇನು ಉತ್ತರವಿದ್ದೀತು? ಮನೆಯ ಹತ್ತಿರ ಬರುತ್ತಿದ್ದಂತೆ ಪಕ್ಕದ ಮನೆಯ ಮುದುಕ ಬಂದು ಕಟ್ಟೆಯ ಮೇಲೆ ಕುಳಿತು, ಬಾಯ್ತುಂಬ ಕವಳ ತುಂಬಿಕೊಂಡು ಅತ್ತೆಯ ಜೊತೆಗೆ ಮಾತನಾಡುತ್ತಿದ್ದುದನ್ನು ಗಮನಿಸಿ ಹೆಜ್ಜೆ ನಿಧಾನಿಸಿದಳು. ಏರುಹೊತ್ತಿನ ಬಿಸಿಲಿಗೆ ಹಪ್ಪಳ ಹರಡುತ್ತ ಮುದುಕಿ ಏನನ್ನೋ ಹೇಳುತ್ತಿದ್ದವಳು ಜಾನಕಿ ಬರುವುದನ್ನು ಗಮನಿಸಿ ಸುಮ್ಮನಾದಳು. ಆದರೆ ತನ್ನದೇ ಲೋಕದಲ್ಲಿದ್ದ ಮುದುಕ, ’ಶಿವ ಅದಾನವಾ, ಮಾಯಕಾರ. ಯಾವ ರೂಪದಾಗ ಬರ್ತಾನೋ ಯಾರ ಕಂಡಾರ’, ಅಂದ.

ಹೊಸ್ತಿಲು ದಾಟುತ್ತಿದ್ದ ಜಾನಕಿ ಒಂದು ಕ್ಷಣ ಅಲ್ಲಿಯೇ ನಿಂತಳು. ಮನಸ್ಸಿನ ದುಗುಡವೆಲ್ಲ ಹರಿದಂತಾಯಿತು. ದೇವರ ಕೋಣೆಗೆ ಹೋಗಿ, ಮುಂಜಾನೆ ಹಚ್ಚಿದ್ದ ದೀಪಕ್ಕೆ ಇನ್ನೊಂದಿಷ್ಟು ಎಣ್ಣೆ ಸುರಿದು, ಮತ್ತೆ ಊದಿನಕಡ್ಡಿ ಹಚ್ಚಿಟ್ಟು ’ಎಲ್ಲ ನಿನ್ನಿಚ್ಚೆ’ ಅಂದು ಹೊರಗೆ ಬಂದು ಕಟ್ಟೆಯ ಮೇಲೆ ಕುಳಿತಳು. ಅಂಗಳದಲ್ಲಿ ಕುಳಿತಿದ್ದ ಮುದುಕಿ, ಯಾವತ್ತೂ ಇಲ್ಲದೇ ಮುಂಜಾನೆಯೇ ಹೀಗೆ ಅಚಾನಕ್ಕಾಗಿ ಕಟ್ಟೆಯ ಮೇಲೆ ಬಂದು ಕುಳಿತ ಸೊಸೆಯನ್ನು ನೋಡಿ ಬೆರಗಾದಳು. ಆಕೆಯ ಮುಖ ಬೆಳಗುತ್ತಿತ್ತು.

ಮರುದಿನ, ಮಧುಕರ ತಡವಾಗಿ ಎದ್ದ. ಎರಡು ದಿನದಿಂದ ರಾತ್ರಿ ಊಟವನ್ನೇ ಮಾಡಲಿಲ್ಲ, ಏನಾಯಿತೋ ಎಂದು ಮುದುಕಿ ಮಗನ ಬಳಿ ಹೇಳುತ್ತಿದ್ದಳು. ಮೂರು ದಿನಗಳಿಂದ ತಾನು ಮಗನ ಮುಖವನ್ನೇ ನೋಡಿರಲಿಲ್ಲ ಅನ್ನುವುದು ಗಂಗಾಧರನಿಗೆ ನೆನಪಾಯಿತು. ರೊಟ್ಟಿ ತಟ್ಟುತ್ತಿದ್ದ ಹೆಂಡತಿಯನ್ನು ನೋಡಿದರೆ ಆಕೆಯ ಮುಖದಲ್ಲಿ ಎಂದೂ ಕಾಣದ ನಿಶ್ಚಿಂತತೆಯಿತ್ತು. ತಕ್ಷಣ ಮಗ ಮಲಗಿದ್ದಲ್ಲಿಗೆ ಹೋಗಿ ಮುಖತುಂಬ ಹೊದ್ದಿದ್ದ ಹೊದಿಕೆಯನ್ನು ತೆಗೆದ. ನಿರಾಮಯ ಭಾವದಲ್ಲಿ ಮಲಗಿದ್ದ ಮಗನ ಮುಖದಲ್ಲಿ ಒಂದು ಬಿಳಿ ಚುಕ್ಕಿಯೂ ಇರಲಿಲ್ಲ. ಅವನ ತಾಯಿಯೂ ಹಿಂದೆ ಬಂದು ನಿಂತು ನೋಡುತ್ತಿದ್ದಳು. ಅವಸರದಲ್ಲಿ ಪೂರ್ತಿ ಹೊದಿಕೆ ಸರಿಸಿ ನೋಡಿದವ ಚಕಿತತೆಯಲ್ಲಿ ಹೆಂಡತಿಯಿದ್ದಲ್ಲಿಗೆ ನಡೆದ. ಹೇಗಾಯಿತು ಇದು ಎಂದು ಕೇಳಿದರೆ, ಪಕ್ಕದಲ್ಲಿ ಅತ್ತೆಯಿದ್ದುದರಿಂದಲೋ ಏನೋ, ಜಾನಕಿ ಏನೂ ಹೇಳಲಿಲ್ಲ. ಮಧುಕರ ತಾನಾಗಿ ಏಳುವವರೆಗೆ ಮೂವರೂ ಕಾದರು. ಅಲ್ಲಿಯವರೆಗೆ ಅವನ ಅಜ್ಜಿ ಲೋಬಾನ ಹಚ್ಚಿಕೊಂಡು ‘ಶಿವ ಶಿವಾ’ ಅನ್ನುತ್ತ ಮನೆ ಒಳಹೊರಗೆ ಸುತ್ತಿದಳು. ಮಧುಕರ ಎದ್ದು ಹೊರಬಂದ ಕೆಲವೇ ನಿಮಿಷಗಳಲ್ಲಿ ಇಡೀ ಊರಿಗೆ ಸುದ್ದಿ ಹಬ್ಬಿತು.

೦-೦-೦-೦

ಮಧುಕರನ ಮನೆ ಅಂಗಳ ತುಂಬ ಜನ ಕೂಡಿದ್ದರು. ಬೆರಗಿನಿಂದ ತಮ್ಮತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತ ಅವನನ್ನೇ ನೋಡುತ್ತ. ಅವರ ನಡುವೆ ಅದೇ ಬಿಳಿತೊನ್ನಿನ ನಲವತ್ತರ ಹರೆಯದ ಮದುವೆಯಿಲ್ಲದ ಹೆಣ್ಣೊಬ್ಬಳಿದ್ದಳು. ಅವಳು ಮುಂದೆ ಬಂದು ಅವನ ಕೈಯನ್ನೇ ಸವರಿ ನೋಡಿದಳು. ಮಧುಕರ ಆಶಾಭಾವ ತುಂಬಿದ್ದ ಅವಳ ಕಣ್ಣುಗಳನ್ನೇ ನೋಡಿದ. “ನಾಳೆ ಬಾ, ನಿನಗೆ ಔಷಧಿ ಕೊಡುತ್ತೇನೆ” ಅಂದ. ತಕ್ಷಣ ಕಿಕ್ಕಿರಿದಿದ್ದ ಜನರಲ್ಲಿ ಕೆಲವರು ತಮಗೂ ಔಷಧಿ ಬೇಕು ಎಂದು ಮುಂದೆ ಬಂದರೆ, ಇನ್ನೂ ಕೆಲವರು ಅನುಮಾನಿಸಿದರು. ಅಲ್ಲಿಂದ ಹೊರಬಿದ್ದ ಜನ ತಲೆಗೊಂದರಂತೆ ಮಾತನಾಡಿಕೊಂಡರು. ‘ದನ ಕಾಯೋವನಿಗೆ ಯಾವುದೋ ದೇವತಿ ಒಲದಾಳ’, ‘ಆ ಮಾವಿನ ಮರದಾಗ ಯಕ್ಷಿ ಬಂದೇತಂತ’, ‘ಜಾನಕಿ ಹರಕಿ ಫಲ ನೀಡೇತಿ’, ‘ಹುಡುಗಗ ನಾಗರ ಮಣಿ ಸಿಕ್ಕೇತಿ’ ಎಂಬೆಲ್ಲ ಸಾಧ್ಯತೆಗಳನ್ನು ತಮ್ಮ ತಮ್ಮ ಕಲ್ಪನೆಗನುಸಾರವಾಗಿ ಹೇಳಿಕೊಳ್ಳುತ್ತ ಮನೆ ಕಡೆಗೆ ಹೋದರು. ಆ ದಿನ ಬಹುಪಾಲು ಜನರು ನಿದ್ದೆ ಮಾಡಲಿಲ್ಲ.  

ಮರುದಿನ ಮುಂಜಾನೆಯೇ ಎದ್ದು ಹುತ್ತದ ಬಳಿ ಹೋಗಿದ್ದ ಮಧುಕರ ಹಣ್ಣಿನ ರಸದಿಂದ ತೊಯ್ದಿದ್ದ ಅಷ್ಟೂ ಮಣ್ಣನ್ನು ಕಿತ್ತುಕೊಂಡು ಬಂದು ಅದರಿಂದ ಲಿಂಗವೊಂದನ್ನು ನಿರ್ಮಿಸಿ ಪೂಜೆ ಮಾಡಿದ. ಅಷ್ಟುಹೊತ್ತಿಗೆ ಬಂದ ತೊನ್ನಿರುವ ಮಹಿಳೆಗೆ ಮೂರು ದಿನಕ್ಕಾಗುವಷ್ಟು ಔಷಧಿ ಕೊಟ್ಟು ಅದು ಮುಗಿಯುವವರೆಗೂ ಮನೆಯಿಂದ ಹೊರಬರಬೇಡ ಎಂದು ಹೇಳಿದ. ಮೂರನೆಯ ದಿನ ಮಧುಕರನ ಮನೆಯವರೆಗೆ ನಡೆದುಬಂದ ಆಕೆಯನ್ನು ಇಡೀ ಊರು ಮೂಕವಿಸ್ಮಿತವಾಗಿ ವೀಕ್ಷಿಸಿತು.

ಅದಾಗಿ ಮೂರು ದಿನ ಔಷ್ಕಳೆದಿರಲಿಲ್ಲ, ಎಲ್ಲೆಲ್ಲಿಂದಲೋ ಜನರು ತಾವರೆಕೆರೆಗೆ ಎಂಬ ಬಸ್ಸಿಲ್ಲದ ಹಳ್ಳಿಗೆ ದಂಡಿಯಾಗಿ ಬರತೊಡಗಿದರು. ಚಂದ್ರಗುತ್ತಿವರೆಗೆ ಬಸ್ಸಿನಲ್ಲಿ ಬಂದವರು ಅಮ್ಮನವರ ಗುಡಿಗೆ ಹೋಗುತ್ತಾರೆಂದುಕೊಂಡರೆ, ಸಿಕ್ಕಸಿಕ್ಕವರಲ್ಲಿ ’ತಾವರೆಕೆರೆಗೆ ಹೋಗೋದು ಹೆಂಗೆ, ಯಾರೋ ಔಷಧಿ ಕೊಡ್ತಾರಂತಲ’ ಎಂದೆಲ್ಲ ಕೇಳಿ ಕಾಲ್ನಡಿಗೆಯಲ್ಲಿಯೇ ಬಂದರು. ಬಂದವರು ನೋಡುತ್ತಾರೆ, ಓಣಿಯುದ್ದಕ್ಕೂ ಒಂದು ಸಾಲು ಜನ ನಿಂತಿದ್ದಾರೆ. ಈಗಾಗಲೇ ಊರಿನವರೆಲ್ಲ ಒಂದಾವರ್ತಿ ಔಷಧಿ ತೆಗೆದುಕೊಂಡಾಗಿತ್ತು. ಹದಿಹರೆಯದವರಿಂದ ಹಿಡಿದು ಮುದುಕರವರೆಗೂ ಸರತಿಸಾಲಿನಲ್ಲಿ ನಿಂತು ಔಷಧಿ ತೆಗೆದುಕೊಂಡು ಹೋಗಿದ್ದರು. ಹೀಗೆ ಊರಿಗೂರೇ ತಮ್ಮ ಮನೆಯ ಮುಂದೆ ನಿಂತಾಗ ಅಸಹನೆಗೊಂಡ ಜಾನಕಿ ಮೂರನೆ ದಿನದಿಂದ ತಲೆಗೆ ನೂರು ರುಪಾಯಿ ತೆಗೆದುಕೊಂಡೇ ಔಷಧಿ ಕೊಡುವಂತೆ ಗಂಡನಿಗೆ ಹೇಳಿದಳು. ಹೊಲಗದ್ದೆ ಕೆಲಸ ಬಿಟ್ಟು ಗಂಗಾಧರ ಜಗಲಿ ಬಳಿ ಕುಳಿತು ಹಣ ತೆಗೆದುಕೊಳ್ಳತೊಡಗಿದ. ಹೊತ್ತುಹೊತ್ತಿಗೆ ಜಾನಕಿ ಬಂದು ಸಂಗ್ರಹಗೊಂಡಿದ್ದ ನೋಟಿನ ಕಟ್ಟನ್ನು ಎತ್ತಿಕೊಂಡು ಒಳಗೊಯ್ಯುತ್ತಿದ್ದಳು. ಇದನ್ನು ನೋಡುತ್ತಿದ್ದ ಎದುರುಮನೆಯ ಕಮಲಾಕ್ಷ ಮಾತ್ರ ಒಳಗೊಳಗೆ ಬೇಯುತ್ತಿದ್ದ.

ನೋಡುವ ತನಕ ನೋಡಿ, ಮೆಲ್ಲಗೆ ಕಟ್ಟೆಯಿಳಿದು ಸರತಿಯಲ್ಲಿ ನಿಂತಿದ್ದವರನ್ನು ಗಮನಿಸುತ್ತಾ ಸಾಲಿನ ತುದಿಯವರೆಗೆ ನಡೆದ ಕಮಲಾಕ್ಷ, ಬಿಸಿಲಲ್ಲಿ ನಿಂತಿದ್ದ ಜನರಲ್ಲಿ ಒಂದಿಬ್ಬರನ್ನು ಕರೆದು ಊರು ಇತ್ಯಾದಿ ವಿಚಾರಿಸಿದ. ನಿಧಾನಕ್ಕೆ ‘ಈ ಔಷಧಿಯೆಲ್ಲ ಪ್ರಯೋಜನ ಇಲ್ಲರೀ’ ಎಂದು ಹೇಳಿ ನೋಡಿದ. ಅವನ ಮಾತನ್ನ ಯಾರೂ ತಲೆಗೆ ಹಾಕಿಕೊಂಡಂತೆ ಕಾಣಲಿಲ್ಲ. ಸುಮ್ಮನೇ ಲೈಟಿನ ಕಂಬಕ್ಕೆ ಕಾಲು ಕೊಟ್ಟುಕೊಂಡು ಬೀಡಿ ಸೇದುತ್ತ ಜನರನ್ನು ಗಮನಿಸಿದ. ಗಂಡಸರು ಬಿಸಿಲಿನ ತಾಪ ತಡೆಯಲು ತಲೆಗೆ ಟವೆಲ್ ಕಟ್ಟಿಕೊಂಡು ಅತ್ತಿತ್ತ ನೋಡುತ್ತಿದ್ದರೆ, ಹೆಂಗಸರು ಸೆರಗನ್ನೇ ತಲೆಗೆ ಮುಚ್ಚಿಕೊಂಡು ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತ ನಿಂತಿದ್ದರು. ಅವರಲ್ಲಿ ಒಬ್ಬಾಕೆಯ ಸೊಂಟದಲ್ಲಿ ಇಳಿಯುತ್ತಿದ್ದ ಬೆವರಹನಿಯನ್ನು ದಿಟ್ಟಿಸಿನೋಡಿ, ಆಕೆ ಕಣ್ಣು ಕೆಕ್ಕರಿಸಿದಾಗ ಅಲ್ಲಿಂದ ಕಾಲುಕಿತ್ತ. ಮನೆಯ ಕಡೆಗೆ ನಡೆಯುತ್ತ ಓಣಿಯ ಪ್ರತಿ ಮನೆಯಲ್ಲಿಯೂ ಒಂದೊಂದು ಮಣ್ಣಿನ ಬಿಂದಿಗೆ ನೀರನ್ನು ತುಂಬಿಸಿಟ್ಟಿದ್ದನ್ನು ಗಮನಿಸಿದ. ಸರತಿಸಾಲಿನಲ್ಲಿದ್ದ ಜನ ಹೋಗಿ ಹೋಗಿ ಕುಡಿದು ಬರುತ್ತಿದ್ದರು. ಏನೋ ಹೊಳೆದಂತಾಗಿ ಮನೆಕಡೆಗೆ ಹೆಜ್ಜೆಹಾಕಿದ. ಮನೆಯೆದುರು ಬಂದವರಿಗೆ ನೀರು ಕೊಡುತ್ತಿದ್ದ ಹೆಂಡತಿಯನ್ನು ಒಳಗೆ ಕರೆದ. ಕೆಲವೇ ನಿಮಿಷಗಳಲ್ಲಿ ತುಂಬಿದ ಗಡಿಗೆಯೊಂದಿಗೆ ಪ್ರತ್ಯಕ್ಷನಾದ ಕಮಲಾಕ್ಷ ‘ಯಾರಿಗೆ ಮಜ್ಜಿಗೆ, ಯಾರಿಗೆ ಮಜ್ಜಿಗೆ’ ಎಂದು ಕೂಗಲು ಪ್ರಾರಂಭಿಸಿದ. ನಾಲ್ಕೈದು ಜನ ಅನುಮಾನಿಸಿದಂತೆ ಮಾಡಿ ಅವನ ಎದುರು ಬಂದು ನಿಂತರು. ‘ಎರೆಡು ರೂಪಾಯಿ ಅಷ್ಟೇ’ ಎಂದು ಮೆಲ್ಲಗೆ ಹೇಳುತ್ತಾ ಲೋಟದಲ್ಲಿ ಸುರಿದು ಕೊಟ್ಟ.

ಆದರೆ ಆ ಮೆಲುದನಿಯ ಉಪಾಯ ಹೆಚ್ಚುಹೊತ್ತು ಫಲಿಸಲಿಲ್ಲ. ಅವನ ಪಕ್ಕದ ಮನೆಯವರೂ ಒಂದು ಮಜ್ಜಿಗೆ ಗಡಿಗೆ ತಂದು ಸ್ವಲ್ಪ ಜೋರಾಗಿಯೇ ‘ಮಜ್ಜಿಗೆ, ಎರೆಡು ರೂಪಾಯಿ’ ಎಂದು ಕೂಗಿದರು. ಆ ಸಂಜೆ ಓಣಿಯವರೆಲ್ಲ ಕರೆದ ಹಾಲಿಗೆ ಹೆಪ್ಪು ಹಾಕಿಟ್ಟು ಮುಂಜಾನೆ ಹಾಲಿಲ್ಲದ ಚಹ ಕುಡಿದರು. ಮರುದಿನ ಯಾರ ಮನೆಯಲ್ಲಿಯೂ ನೀರು ತುಂಬಿದ ಬಿಂದಿಗೆ ಇಡಲಿಲ್ಲ. ಮಜ್ಜಿಗೆಯ ಜೊತೆಗೆ, ಬೇಯಿಸಿದ ಶೇಂಗಾ, ಸವತೆಕಾಯಿ ಹೋಳು ಇತ್ಯಾದಿ ಮಾರುತ್ತ ತಮ್ಮ ತಮ್ಮ ಮನೆಯ ಜಗಲಿಗಳನ್ನು ಅಂಗಡಿಗಳನ್ನಾಗಿಸಿದರು.

ಆದರೆ, ಆ ಊರಿನವರು ತಕ್ಷಣಕ್ಕೆ ಗಮನಿಸದಿದ್ದ ಇನ್ನೊಂದು ಸಂಗತಿಯಿತ್ತು – ಓಣಿಯ ಮೊದಲ ಮನೆಯ ರಾಮನಾಥ ಪೂಜಾ ಸಾಮಾಗ್ರಿಗಳ ಒಂದು ಅಂಗಡಿಯನ್ನು ತೆರೆದುಬಿಟ್ಟಿದ್ದ. ‘ಹಣ್ಣುಕಾಯಿ ಮಾಡಿಸಿಕೊಂಡು ಔಷಧಿ ತೆಗೆದುಕೊಳ್ಳಿ, ಒಳ್ಳೆಯದಾಗ್ತದೆ’ ಎನ್ನುತ್ತ ಊರಿಗೆ ಬಂದವರಿಗೆಲ್ಲ ಹೇಳುತ್ತ ಮಾರಾಟ ಮಾಡತೊಡಗಿದ. ಮರುದಿನ ಮತ್ತೊಂದೆರೆಡು ಮನೆಗಳವರು ಹಣ್ಣುಕಾಯಿ ಮಾರತೊಡಗಿದರು. ನೋಡನೋಡುತ್ತಿದ್ದಂತೆ ಇಡೀ ಓಣಿ ಮಾರುಕಟ್ಟೆಯಾಗಿ ಬದಲಾಯಿತು.

ಈ ಮಧ್ಯೆ ಸುಮ್ಮನೆ ಬಂದು ಔಷಧಿ ತೆಗೆದುಕೊಂಡು ಹೋಗುತ್ತಿದ್ದವರು ಪೂಜೆಗೆ ಹಣ್ಣುಕಾಯಿಗಳನ್ನು ತಂದಾಗ ಮಧುಕರನಿಗೆ ಅದೇ ದೊಡ್ಡ ಕೆಲಸವಾಗಿಹೋಯಿತು. ಅವನ ಗೆಳೆಯಂದಿರಿಬ್ಬರು ಮನೆಯ ಆಂಗಳದಲ್ಲಿ ತೆಂಗಿನಕಾಯಿ ಒಡೆದುಕೊಡುವ ಕೆಲಸಕ್ಕೆ ನಿಂತರು, ಪ್ರತೀ ಕಾಯಿಗೆ ಒಂದು ರೂಪಾಯಿ ‘ಕಾಣಿಕೆ’ ತೆಗೆದುಕೊಳ್ಳುತ್ತ.

ಈ ನಡುವೆ ಕಮಲಾಕ್ಷನಿಗೆ ತನ್ನ ಮನೆ ಓಣಿಯ ಕೊನೆಯ ಮನೆಯಾದ್ದರಿಂದ ಮತ್ತು ಗಂಗಾಧರನ ಮನೆಯ ಹತ್ತಿರವೇ ಇದ್ದುದರಿಂದ ತನಗೆ ನಷ್ಟವಾಗುತ್ತಿದೆ ಅನ್ನಿಸಿತು. ಬಹಳ ದಿನ ನಡೆಯುವುದಿಲ್ಲ ಈ ಔಷಧಿ ವ್ಯವಹಾರ ಅಂತ ತನಗೆ ತಾನೇ ಹೇಳಿಕೊಂಡರೂ ಬೇರೇನಾದರೂ ಮಾಡಬೇಕು ಅಂದುಕೊಂಡ. ಈ ನಡುವೆ ಊರಿನವರಲ್ಲಿ ಅನೇಕರು ಔಷಧಿಯ ಫಾರ್ಮುಲಾ ಏನೆಂಬುದನ್ನು ಕಂಡುಹಿಡಿಯಲು ಪ್ರಯತ್ನ ನಡೆಸಿದ್ದರು.

೦-೦-೦-೦

ಮುಂಜಾನೆ ಕೆರೆಯ ಕಡೆ ಹೊರಟ ಜನ, ಇಡೀ ದಿನ ಹೊಲಗಳಲ್ಲಿ ದುಡಿಯುವ ಜನ, ಸಂಜೆ ಕಟ್ಟೆಗಳಲ್ಲಿ ಕುಳಿತ ಜನರು ಆ ಔಷಧಿ ಏನಿರಬಹುದು ಎಂದು ಗುಟ್ಟುಗುಟ್ಟಾಗಿ ಚರ್ಚೆ ಮಾಡುತ್ತಿದ್ದರು. ಬಾವಿಕಟ್ಟೆಗಳ ಬಳಿ ನೀರಿಗೆ ಬಂದ ಹೊತ್ತಿನಲ್ಲಿ, ಬಟ್ಟೆ ತೊಳೆಯುತ್ತ ಕೆರೆ ದಂಡೆಯ ಮೇಲೆ ಕುಳಿತ ಹೊತ್ತಿನಲ್ಲಿ ಹೆಂಗಸರು ಈ ಔಷಧಿಯದೇ ಚರ್ಚೆ ಮಾಡುತ್ತಿದ್ದರು. ಹೊರಗೆ ಏನು ಚರ್ಚೆ ಮಾಡುತ್ತಿದ್ದರೋ ಅವರ ಮನಸ್ಸಿನಲ್ಲಿ ಅದಕ್ಕಿಂತ ನೂರುಪಟ್ಟು ಹೆಚ್ಚು ಕಲ್ಪನೆಗಳು ಮೂಡುತ್ತಿದ್ದವು. ಒಂದು ಅಪರೂಪದ ಹೂವು ಅರಳಿ ಇಡೀ ಊರನ್ನು ಘಮಘಮಿಸುವಂತೆ ಮಾಡಿದಂತೆ ಇಡೀ ಊರಿನ ಜನರ ಮನಸ್ಸಿನಲ್ಲಿ, ಭಾವದಲ್ಲಿ ಈ ಔಷಧಿಯ ಘಟನೆ ಲಹರಿಯಾಗಿ ಸುಳಿಯುತ್ತಿತ್ತು.

ಅವರಲ್ಲೇ ಒಂದಷ್ಟು ಜನ, ಕಮಲಾಕ್ಷನೂ ಕೂಡಿದಂತೆ, ಈ ಔಷಧಿಯ ಫಾರ್ಮುಲಾ ಕಂಡುಹಿಡಿಯಲೇಬೇಕೆಂದು ನಿರ್ಧರಿಸಿ, ಊರಿನ ದನಗಾಹಿ ಹುಡುಗನೊಬ್ಬನನ್ನು ಸೇರಿಸಿಕೊಂಡು ಮಧುಕರ ಎಲ್ಲೆಲ್ಲಿ ದನಕಾಯುತ್ತ ನಡೆದಾಡುತ್ತಿದ್ದನೋ ಆ ಜಾಗದಲ್ಲೆಲ್ಲ ಹುಡುಕಾಟ ಪ್ರಾರಂಭಿಸಿದರು. ಹಾಗೆ ಹುಡುಕುತ್ತ ಆ ಮಾವಿನ ಮರದ ಬಳಿ ಬಂದಾಗ ಇಡೀ ಹುತ್ತ ಕಾಣೆಯಾಗಿದ್ದುದನ್ನು ಕಂಡರು. ಮನೆಗೆ ಬಂದು ಆ ಮೊದಲು ತೆಗೆದುಕೊಂಡಿದ್ದ ಔಷಧಿಯನ್ನು ಪರಿಶೀಲಿಸಿದಾಗ ಅದು ಹುತ್ತದ ಮಣ್ಣೇ ಹೌದು ಎಂಬುದು ಅವರಿಗೆ ಖಾತರಿಯಾಯಿತು. ಆದರೆ, ಆ ಮಣ್ಣಿಗೆ ಬೇರೆ ಏನು ಸೇರಿಸಿರಬಹುದು, ಅದು ಯಾಕೆ ನೇರಳೆ ಬಣ್ಣದಲ್ಲಿದೆ ಎಂಬುದು ಅವರಿಗೆ ಗೊತ್ತಾಗಲಿಲ್ಲ.

ಅದಾಗಿ ಇನ್ನೂ ಎರಡು ದಿನ ಕಳೆಯುವಷ್ಟರಲ್ಲಿಯೇ ಊರಿನ ಐದಾರು ಮನೆಗಳ ಮುಂದೆ ತಾವೂ ಔಷಧಿ ಕೊಡುತ್ತೇವೆ ಎಂದು ಕುಳಿತುಬಿಟ್ಟರು. ಊರಿನಲ್ಲಿ ಸಿಕ್ಕ ಸಿಕ್ಕ ಹುತ್ತಗಳನ್ನೆಲ್ಲ ಒಡೆದು ಮಣ್ಣು ಸಂಗ್ರಹಿಸಿ ಯಾವ್ಯಾವುದೋ ಎಲೆ-ಹಣ್ಣುಗಳ ಬಣ್ಣ ಸೇರಿಸಿ ಔಷಧಿ ಸಿದ್ಧಗೊಳಿಸಿಕೊಂಡಿದ್ದರು. ಈಗಾಗಲೇ ಊರಿನಲ್ಲಿ ಬೀಡುಬಿಟ್ಟಿದ್ದ ಜನರು ಇವರನ್ನೇನೂ ನಂಬಲಿಲ್ಲವಾದರೂ, ಊರಿಗೆ ಹೊಸತಾಗಿ ಬಂದ ಜನ ಈ ಹೊಸ ಔಷಧಿ ಕೊಡುವವರ ಮನೆಯ ಮುಂದೆ ಸಾಲು ನಿಂತರು. ಹೀಗೆ ಮತ್ತೊಂದಿಷ್ಟು ಜನ ಔಷಧಿ ಕೊಡುವವರು ಸಿದ್ಧರಾಗಿದ್ದನ್ನು ಜಾನಕಿ ಗಮನಿಸಿ ನೋಡಿದಳು. ಆ ರಾತ್ರಿ ಆಕೆಗೆ ನಿದ್ದೆ ಬರಲಿಲ್ಲ.

೦-೦-೦-೦

ನಾವು ಹೀಗೆ ಜನರಿಗೆ ಸಹಾಯ ಅಗಲಿ ಎಂದು ಮಾಡಿದ ಕೆಲಸ ಊರಿನ ಜನರ ನಡುವೆಯೇ ಪೈಪೋಟಿ ತಂದೊಡ್ಡಿದೆ. ಮುಂಜಾನೆ ಎದ್ದು, ಕಲ್ಗುಡಿಯ ಶಿವನನ್ನು ನೆನಪಿಸಿಕೊಂಡು ದುಡಿಮೆಗೆ ಹೊರಡುತ್ತಿದ್ದ, ಒಬ್ಬರಿಗೊಬ್ಬರು ಅನುವಾಗುತ್ತಿದ್ದ ಜನರು ಹೀಗೆ ಪರಸ್ಪರ ಸ್ಪರ್ಧೆಗೆ ಇಳಿದಿದ್ದಾರೆ. ಜೊತೆಗೆ ನೀರಿಗೆ ಬರುತ್ತಿದ್ದ, ಬಟ್ಟೆ ತೊಳೆಯಲು ಕೆರೆಗೆ ಬರುತ್ತಿದ್ದ ಜೊತೆಗಾತಿಯರೆಲ್ಲ ಮೊದಲಿನಂತಿಲ್ಲ. ಒಬ್ಬಳು ಬಹಳ ಗೌರವದಿಂದ ಮಾತನಾಡಿಸುತ್ತಾಳೆ, ಇನ್ನೊಬ್ಬಳು ಮುಖ ತಿರುಗಿಸುತ್ತಾಳೆ. ಊರ ಜನ ತಮ್ಮ ದುಡಿಮೆಯನ್ನು, ಹೊಲಗದ್ದೆಗಳನ್ನು ಮರೆಯುತ್ತಿದ್ದಾರೆ, ಸಂಬಂಧಗಳನ್ನು ಮರೆಯುತ್ತಿದ್ದಾರೆ. ‘ಏನಾಗಿ ಹೋಯಿತು ಇದು’ ಅಂತೆಲ್ಲ ಯೋಚಿಸಿದಳು. ಬಾವಿಕಟ್ಟೆಯಲ್ಲಿ ನಿಂತು ಕಲ್ಗುಡಿಯ ಕಡೆ ಮುಖಮಾಡಿ, ‘ಇದೇನು ಮಾಡಿದೆ ಶಿವನೇ’  ಅಂದಳು.

ಶಿವನೇ ಮಾಡಿದನೇ? ಎರಡು ವರ್ಷಗಳಾದವು – ಒಂದು ರಾತ್ರಿ ಹಿತ್ತಲಲ್ಲಿದ್ದ ಹುಲ್ಲಿನ ಮೆದೆಗೆ ಬಿದ್ದ ಬೆಂಕಿ, ಪಕ್ಕದ ಕೊಟ್ಟಿಗೆಗೂ ಬಾಯಿ ಹಾಕಿತ್ತು. ಕಟ್ಟಿದ್ದ ಎತ್ತುಗಳಲ್ಲೊಂದು ಬೆಂಕಿಯಿಂದ ತಪ್ಪಿಸಿಕೊಳ್ಳಲು ಹೋಗಿ ಹಿತ್ತಲಿನ ಗುಂಡಿಗೆ ಬಿದ್ದು ಸತ್ತುಹೋಯಿತು. ಎಲ್ಲರಂತೆ ಇದ್ದ ಮಗ ಇದ್ದಕ್ಕಿದ್ದಂತೆ ರೋಗಿಯಾಗಿ, ಓದು ಬಿಟ್ಟು ದನಗಾಹಿಯಾದ. ಊರ ಜನರ ಹಂಗಿಗೆ ಅವನಷ್ಟೇ ಅಲ್ಲ, ತಾನೂ ಗುರಿಯಾದೆ. ಮನೆಯ ಮುದುಕಿ, ‘ನಿತ್ಯನೇಮಗಳಲ್ಲಿ ಸೊಸೆ ತಪ್ಪಿರಬೇಕು ಅದರಿಂದಲೇ ಈ ದರಿದ್ರ ಅಂಟಿಕೊಂಡಿತು’ ಅಂದಳು ಕೂಡಾ. ಈ ದುಗುಡವನ್ನೆಲ್ಲ ಹೇಳಿಕೊಳ್ಳಲು ಯಾರಿದ್ದರು, ಕಲ್ಗುಡಿಯ ಶಿವನನ್ನು ಬಿಟ್ಟು?

ತಾನು ಒಂದು ದಿನ ಕಲ್ಗುಡಿಗೆ ಹೋಗಿ ಮಹಾಮೃತ್ಯುಂಜಯನ ಮುಂದೆ ಕುಳಿತು ಹಠದಲ್ಲಿ ಹರಕೆ ಮಾಡಿಕೊಂಡಿದ್ದನ್ನು ನೆನಪುಮಾಡಿಕೊಂಡಳು. ‘ನಿನ್ನಲ್ಲಿ ಶಕ್ತಿಯಿದ್ದರೆ ನನ್ನ ಮಗನನ್ನು ಮೊದಲಿನಂತೆ ಮಾಡು, ಊರ ಜನರಿಗೆ ಪಾಠ ಕಲಿಸು’ ಎಂದು ಹರಕೆ ಹೊತ್ತಿದ್ದಳು. ಮಗನನ್ನು ಮೊದಲಿನಂತೆ ಮಾಡು ಅಂದಿದ್ದರೆ ಸಾಕಿತ್ತೇ? ಊರ ಜನರಿಗೆ ಪಾಠ ಕಲಿಸು ಅನ್ನಬಾರದಿತ್ತೇ? ಹೊತ್ತ ಹರಕೆ ಹೀಗೇ ವರವೂ ಆಗಿ, ಶಾಪವೂ ಆಗಿ ಬರಬಹುದೆಂದು ತಾನು ಅಂದುಕೊಂಡೇ ಇರಲಿಲ್ಲ.

ಹೀಗೇ ಒಂದು ದಿನ ರಾತ್ರಿಯಿಡೀ ನಿದ್ದೆಯಿಲ್ಲದೇ ಹೊರಳುತ್ತಿದ್ದವಳು, ನಸುಕಿಗೆ ಮುನ್ನ ಗಂಡನನ್ನು ಎಬ್ಬಿಸಿದಳು ಜಾನಕಿ. ಆತನ ಹೆಗಲ ಚೀಲಕ್ಕೆ ನೋಟುಗಳನ್ನು ತುಂಬಿಕೊಟ್ಟು, ಜೊತೆ ಎತ್ತುಗಳು, ಕರೆಯುವ ಹಸುಗಳನ್ನು ಕೊಂಡು ತರುವಂತೆ ಹೇಳಿದಳು. ಪ್ರತಿದಿನ ಮೊರ ತುಂಬುವಷ್ಟು ನೋಟುಗಳು ಬಂದು ಬೀಳುತ್ತಿದ್ದರೆ, ಜಗಲಿಯ ಮೇಲೆ ಕುಳಿತು ಏಣಿಸಿಕೊಳ್ಳುತ್ತಿದ್ದ ಗಂಗಾಧರ. ಹೊಲಗದ್ದೆಯ ಕಡೆ ತಿರುಗಿ ನೋಡಿ ತಿಂಗಳುಗಳೇ ಕಳೆದವು. ಈ ಹೊತ್ತಿನಲ್ಲಿ ದನಗಳನ್ನು ತಂದು ಏನು ಮಾಡುವುದು ಎಂದು ಕೇಳಿದ. ನಿಟ್ಟುಸಿರು ಬಿಟ್ಟ ಜಾನಕಿ, “ಇದು ಊರಿಗೆ ಹಿಡಿದಿರೋ ಮಬ್ಬು. ಇಂದೋ ನಾಳೆನೋ ಕರಗಬೇಕು. ಅದು ನೋಡೋಣ. ನೀವು ಹೊರಡಿ” ಅಂದಳು.

ಆ ಹೊತ್ತಿಗೆ, ಮಗ-ಸೊಸೆ ಬೆಳಬೆಳಿಗ್ಗೆ ಹೀಗೆ ಗುಸುಗುಸು ಮಾತನಾಡುತ್ತಿರುವುದನ್ನು ಕೇಳಿಸಿಕೊಳ್ಳುತ್ತ ಗೋಡೆಯ ಹಿಂದೆ ನಿಂತಿದ್ದ ಮುದುಕಿ ಅವರೆದುರಿಗೆ ಬಂದಳು. ಮಗ ತನ್ನ ಕಡೆ ನೋಡಿದಾಗ, ಸೊಸೆಯ ಮಾತಿನಲ್ಲಿ ಸತ್ಯ ಇದೆ ಎಂಬಂತೆ ತಲೆಯಾಡಿಸಿದಳು. ತಾಯಿಯೂ ಅಣತಿ ನೀಡಿದಾಗ ಗಂಗಾಧರ ಮರುಮಾತನಾಡಲಿಲ್ಲ.

೦-೦-೦-೦

ಮರುದಿನ ಮುಂಜಾನೆ ಊರಿಗೆ ಒಂದು ದೊಡ್ಡ ಕಾರು ಬಂದು ಸಾಲಿನಲ್ಲಿ ನಿಂತಿತು. ಅದರಿಂದ ಇಬ್ಬರು ಯುವಕರು ಇಳಿದರು. ಒಬ್ಬ ಕೆಂಪು ಅಂಗಿಯವ, ಇನ್ನೊಬ್ಬ ಕಪ್ಪು ಅಂಗಿಯವ. ನಂತರ, ಹಿಂಬಾಗಿಲುಗಳಿಂದ ಮಧ್ಯವಯಸ್ಸಿನ ಗಂಡ-ಹೆಂಡತಿ ಮತ್ತು ಇನ್ನೊಬ್ಬ ವ್ಯಕ್ತಿ ಇಳಿಯುವುದನ್ನು ಗಮನಿಸಿದ ಕಮಲಾಕ್ಷ ಅವರ ಬಳಿಗೆ ಹೋದ.

ಒಂದು ಕ್ಷಣ ಎಲ್ಲಿಗೆ ಹೋಗುವುದು ಎಂದು ಅರ್ಥವಾಗದೇ ಸಾಲುಗಟ್ಟಿ ನಿಂತಿದ್ದ ಜನರನ್ನು ನೋಡುತ್ತಾ ನಿಂತ ಆ ದಂಪತಿಗಳನ್ನು ಪುಸಲಾಯಿಸಿ, ತಾನು ಔಷಧಿ ಕೊಡಿಸುತ್ತೇನೆ ಎಂದು ತನ್ನ ಮನೆಯ ಕಡೆಗೆ ಕರೆದುಕೊಂಡು ಹೋದ. ಬಾಗಿಲ ಅಂಚಿನಲ್ಲಿ ನಿಂತಿದ್ದ ಅವನ ಹೆಂಡತಿ ಅವರಿಗೆ ನೀರು ಕೊಟ್ಟು ಕಟ್ಟೆಯ ಮೇಲೆ ಕುಳ್ಳಿರಿಸಿದಳು. ಮನೆಯ ಒಳಗಿನಿಂದ ಔಷಧಿ ಎಂದು ಹೇಳಿ ಒಂದು ಪೊಟ್ಟಣವನ್ನು ತಂದುಕೊಟ್ಟ ಕಮಲಾಕ್ಷ ಅದಕ್ಕೆ ಐನೂರು ರೂಪಾಯಿ ಎಂದು ಹೇಳಿದ.

ಆದರೆ ದಂಪತಿಗಳಿಬ್ಬರೂ ಎದುರಿನ ಮನೆಯ ಮುಂದಿದ್ದ ಜನರ ಸಾಲನ್ನೇ ನೋಡುತ್ತಿದ್ದರು. ಬಹಳಷ್ಟು ಜನ, ರಾತ್ರಿ ನಿದ್ದೆ ಕೂಡಾ ಮಾಡದೇ ನಿಂತಿದ್ದಿರಬೇಕು, ಬಿಸಿಲು ಕೂಡಾ ಏರುತ್ತಿದ್ದರಿಂದ ಆಯಾಸಗೊಂಡು ನಿಂತಿದ್ದರು. ಒಂದು ಕಡೆ ಒಡೆದ ಕಾಯಿಗಳ ಚಿಪ್ಪಿನ ತುಂಡುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕಾಯಿ ನೀರೇ ಕಾಲುವೆಯಾಗಿ ಹರಿಯುತ್ತಿತ್ತು.

ತಕ್ಷಣ ಎದ್ದ ಅವರಿಬ್ಬರೂ ಆ ಜನರ ಸಾಲಿನ ಗುಂಟ ಹಿಂದಕ್ಕೆ ಹೋಗಿ ತಮ್ಮ ಪಾಳಿಗಾಗಿ ನಿಂತರು. ಅವರೊಂದಿಗೆ ಬಂದಿದ್ದ ಇಬ್ಬರು ಯುವಕರೂ ಕೂಡಾ ಅವರ ಹಿಂದೆ ಹೋದರು, ಆದರೆ ಸಾಲಿನಲ್ಲಿ ನಿಲ್ಲದೇ ಅವರ ಪಕ್ಕದಲ್ಲಿಯೇ ನಿಂತರು. ಸ್ವಲ್ಪ ಹೊತ್ತು ನಿಂತು, ಸಾಲು ಮುಂದಕ್ಕೆ ಸರಿಯುತ್ತಲೇ ಇಲ್ಲ ಎನ್ನಿಸಿದಾಗ ಅವರಲ್ಲೊಬ್ಬ, “ಅಮ್ಮ, ಹೀಗೆ ಒಂದು ಸುತ್ತು ಹೋಗಿ ಬರುತ್ತೇವೆ” ಎಂದು ಹೇಳಿ ಇಬ್ಬರೂ ಕಾರು ಹತ್ತಿ ಹೋದರು. ಅವರು ಅತ್ತ ಹೋಗುತ್ತಿದ್ದಂತೆಯೇ ದಂಪತಿಗಳ ಹತ್ತಿರ ಬಂದು ನಿಂತ ಕಮಲಾಕ್ಷ.

“ಸುಲಭದಲ್ಲಿ ಕೊಟ್ಟರೆ ಬಿಟ್ಟು ಹೋದಿರಿ” ಅಂದ. “ನಿಮ್ಮಂತವರು ಈ ಜನರ ಮಧ್ಯೆ ಎಷ್ಟು ಹೊತ್ತು ನಿಲ್ಲುತ್ತೀರಿ. ಅದಕ್ಕೇ ನಾನೇ ನಿಂತು ತಂದಿಟ್ಟದ್ದು.”

ರೇಷ್ಮೆ ಉಟ್ಟಿದ್ದ ಆ ಮಹಿಳೆ ತನ್ನ ಕೊರಳ ಚಿನ್ನದ ಸರವನ್ನು ಸರಿಮಾಡಿಕೊಳ್ಳುತ್ತಾ ಅವನನ್ನೇ ನೋಡಿದಳು. “ನೋಡಪ್ಪಾ, ಎರಡು ದಿನ ಕಾರಲ್ಲಿ ಪ್ರಯಾಣ ಮಾಡಿ ಬಂದಿದ್ದೇವೆ. ಇಲ್ಲಿ ಒಂದರ್ಧ ದಿನ ನಿಲ್ಲುವುದು ಕಷ್ಟವೇ? ಇದು ದೇವರ ಪ್ರಸಾದವಂತೆ. ನಾವೇ ನಿಂತು ಪೂಜೆ ಮಾಡಿಸಿ ತೆಗೆದುಕೊಂಡರೇ ಶ್ರೇಷ್ಠ. ನಿನಗೂ ಕಷ್ಟವಾಗುವುದು ಬೇಡ” ಎಂದು ಹೇಳಿ ತನ್ನ ಬ್ಯಾಗ್ ತೆಗೆದು ನೂರು ರೂಪಾಯಿ ಅವನ ಎದುರು ಹಿಡಿದಳು.

“ಇದೆಲ್ಲ ಬೇಡ ಅಮ್ಮ. ನಾನೂ ಇದನ್ನು ದೇವರ ಕೆಲಸ ಅಂತಲೇ ಮಾಡುತ್ತಿದ್ದೇನೆ. ಇನ್ನೂ ಎಷ್ಟು ಹೊತ್ತು ಇರುತ್ತೀರೋ ಗೊತ್ತಿಲ್ಲ. ನಿಮಗೆ ಏನಾದರೂ ಸಹಾಯ ಬೇಕಿದ್ದರೆ ಹೇಳಿ. ನಾನು ಮನೆಯಲ್ಲಿಯೇ ಇರುತ್ತೇನೆ”, ಎಂದು ಹೇಳಿದ ಕಮಲಾಕ್ಷ, ಅಲ್ಲಿಂದ ನಡೆದ.

ಸುಮ್ಮನೇ ನೂರು ರೂಪಾಯಿಗೆ ಮಾತು ಮುಗಿದು ಹೋಗಿಬಿಡುವುದು ಬೇಡವಾಗಿತ್ತು ಕಮಲಾಕ್ಷನಿಗೆ. ಹಾಗಾಗಿಯೇ ನಯವಾಗಿ ನಿರಾಕರಿಸಿ ಹಿಂದಕ್ಕೆ ಬಂದಿದ್ದ. ಆದರೆ, ಹೇಗೆ ಮುಂದುವರೆಯುವುದು ಎಂದು ತಿಳಿಯಲಿಲ್ಲ. ತಕ್ಷಣ ನೆನಪಾಯಿತು, ಆ ದಂಪತಿಗಳನ್ನು ಇಳಿಸಿದ ಇಬ್ಬರು ಯುವಕರು ಕಾರನ್ನು ಹಾಗೆಯೇ ತಿರುಗಿಸಿಕೊಂಡು ಹೋಗಿಬಿಟ್ಟಿದ್ದರು. ತಿರುಗಿದ ಚಕ್ರಗಳು ಮಾಡಿದ ಗುರುತು ಇನ್ನೂ ಆ ಮಣ್ಣುದಾರಿಯ ಮೇಲೆ ಹಾಗೇ ಇತ್ತು. ಚಕ್ರಗಳು ಹೋಗಿರಬಹುದಾದ ದಾರಿಯನ್ನೇ ದಿಟ್ಟಿಸಿದ.

೦-೦-೦-೦

ಆ ಕಾರು ಊರಿನಿಂದಾಚೆ ಕಾಡಿನ ದಾರಿಯಲ್ಲಿ ನಿಂತಿತ್ತು. ಒಂದು ಕಡೆ ಹೊಲ-ಗದ್ದೆಗಳು, ಇನ್ನೊಂದು ಕಡೆ ಹರಿಯುತ್ತಿರುವ ಸಣ್ಣದಾದ ತೊರೆ. ತೊರೆಗೆ ಬಾಗಿದ ಮರದ ಟೊಂಗೆಗಳಲ್ಲಿ ಹಕ್ಕಿಗಳು ಅತ್ತಿಂದಿತ್ತ ಹಾರುತ್ತಿದ್ದವು. ಏರುಬಿಸಿಲಿನಲ್ಲಿ ಪೈರುಗಳ ಮೇಲೆ ಏರೋಪ್ಲೇನ್ ಚಿಟ್ಟೆಗಳು ಸುಮ್ಮನೇ ಅಲೆಯುತ್ತಿದ್ದವು.

ಕಾರಿನಿಂದ ಮುಂದೆ ಮರಳುದಾರಿಯಲ್ಲಿ ಇಬ್ಬರು ನಡೆದ ಹೆಜ್ಜೆ ಗುರುತುಗಳಿದ್ದವು. ಮುಂದೆ ಸಾಗಿದಂತೆ ಹೆಜ್ಜೆ ಗುರುತುಗಳು ಆಳವಾಗಿ ಊರಿದಂತಿದ್ದು, ಒಂದೆಡೆಯಲ್ಲಿ ತೊರೆಯ ದಿಕ್ಕಿನಲ್ಲಿ ತಿರುಗಿ ಕಾಣೆಯಾಗಿದ್ದವು.

ಕಾಣೆಯಾದಲ್ಲಿ ತೊರೆಯ ಅಲೆಗಳು ಉಕ್ಕಿ ಏಳುತ್ತಿದ್ದವು. ತೊರೆಯ ಆಚೆಗೆ ಮರಗಳ ನಡುವೆ ಯಾವುದೋ ಓಟದ ಸದ್ದು. ಪ್ರಾಣಿಗಳು ಬೇಟೆಗಿಳಿದಿದ್ದಂತೆ ಕೇಳಿಸುತ್ತಿತ್ತು. ಅಡವಿಯ ನಡುವೆ ಎಲೆಗಳು ಹಾರುತ್ತಿದ್ದರೆ, ಯುವಕರಿಬ್ಬರು ಏದುಸಿರು ಬಿಡುತ್ತ ಓಡುತ್ತಿದ್ದರು. ಅವರ ಮುಂದೆ ಹಳ್ಳಿಯ ಹುಡುಗಿಯೊಬ್ಬಳು ಜಿಂಕೆಯಂತೆ ನೆಗೆದು ಓಡುತ್ತಿದ್ದಳು. ಯುವಕರ ಕಣ್ಣಿಗೆ ಅವಳ ಕೆನೆಹಾಲಿನಂತಹ ಮೀನಖಂಡಗಳಷ್ಟೇ ಕಾಣುತ್ತಿದ್ದವು.

ಕಾಡು ಹಿಂದಕ್ಕೋಡುತ್ತಿತ್ತು – ಏದುಸಿರುಬಿಡುತ್ತ. ದೊಡ್ಡದೊಡ್ಡ ಮರಗಳು, ಮುಳ್ಳುಪೊದೆಗಳು, ಒಂದರ ಹಿಂದೊಂದು, ಎಷ್ಟು ಸಾಧ್ಯವೋ ಅಷ್ಟು ಓಡುತ್ತಿದ್ದವು. ಅವುಗಳ ಮೇಲೆ ಮಂಗಗಳು ದಿಕ್ಕು ಲೆಕ್ಕಿಸದೇ ಹಾರುತ್ತಿದ್ದವು, ಹಕ್ಕಿಗಳು ನೆಲೆನಿಲ್ಲುವ ಧೈರ್ಯ ಮಾಡದೇ ಆಕಾಶದಲ್ಲೇ ಚಡಪಡಿಸುತ್ತಿದ್ದವು. ನಿಮಿಷಗಳ ಈ ಆವೇಗ ಒಮ್ಮೆಲೇ ಸ್ತಬ್ದವಾದಂತೆ ಮರಗಳೆಲ್ಲ ನಿಂತುಬಿಟ್ಟವು. ಕಾಡು ಹಿಂದಕ್ಕೆ ತಿರುಗಿ ನೋಡಿತು.

ಓಡುತ್ತಿದ್ದ ಹುಡುಗಿ ಮರದ ಬೇರೊಂದಕ್ಕೆ ಕಾಲು ತಾಗಿ ಕೆಳಗೆ ಬಿದ್ದಿದ್ದಳು. ಬಿದ್ದವಳು ತಿರುಗಿ ಕುಳಿತು ತನ್ನ ಹಿಂದೆ ಬಂದವರನ್ನು ನೋಡುತ್ತಿದ್ದಳು. ಹತ್ತು ಹೆಜ್ಜೆಯ ಅಂತರದಲ್ಲಿ ಒಬ್ಬ ನಿಂತಿದ್ದಾನೆ. ಹಾಕಿದ ಬೂಟುಗಳಿಗೆ ಮಣ್ಣು ಮೆತ್ತಿದೆ. ನೀಲಿ ಪ್ಯಾಂಟು ಕೆಂಪು ಅಂಗಿ. ತೀಕ್ಷ್ಣವಾದ ಕಣ್ಣುಗಳು. ತಕ್ಷಣ ಇನ್ನೊಬ್ಬನ ಕಣ್ಣುಗಳನ್ನು ನೋಡಿದಳು. ಮತ್ತೆ ಮುಂದೆ ನಿಂತವನ ಕಣ್ಣುಗಳನ್ನು ನೋಡಿದಳು. ಅವನ ಕಣ್ಣುಗಳು ಹೆಚ್ಚು ಉಗ್ರವಾಗಿವೆ. ಹಿಂದಿದ್ದವನ ಕಣ್ಣುಗಳನ್ನು ಮತ್ತೆ ನೋಡಿದಳು.

ಆತನೂ ಆಕೆಯ ಕಣ್ಣುಗಳನ್ನು ದಿಟ್ಟಿಸಿ ನೋಡಿದ. ನಿಶ್ಚಿಂತವಾಗಿ ಹರಿಯುತ್ತಿದ್ದ ತೊರೆಯ ಅಂಚಿನಲ್ಲಿ ಕಲ್ಲು ಚಪ್ಪಡಿಯ ಮೇಲೆ ಕುಳಿತಿದ್ದ ಹೆಣ್ಣು. ಉಟ್ಟಿದ್ದ ಲಂಗವನ್ನು ಮೊಣಕಾಲವರೆಗೆ ಎತ್ತಿಕಟ್ಟಿ ತನ್ಮಯತೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ಹೆಣ್ಣು. ಬಾಗಿದ ಮರಗಳ ಅಂಚಿನಿಂದ ಇಳಿದುಬಂದ ಬೆಳಕಿನಲ್ಲಿ ಅರೆತೆರೆದ ಸ್ತನಗಳು. ಮೇಲೆ ಗಾಳಿಗೆ ತೊನೆಯುವ ಗೀಜಗನ ಗೂಡುಗಳು.

ಇನ್ನೇನು ಚಾಚಿದ ಕೈಗೆ ಸಿಗಬೇಕು ಅನ್ನುವಷ್ಟರಲ್ಲಿ ತೊರೆಗೆ ಜಿಗಿದು, ಕಾಡುದಾರಿಯಲ್ಲಿ ಓಡಿ, ಇಲ್ಲಿ ಬಂದು ಬಿದ್ದಿದ್ದಾಳೆ. ಈವರೆಗೂ ಅವಳ ಕಣ್ಣುಗಳನ್ನು ನೋಡುವ ಅವಕಾಶವೇ ಆಗಿರಲಿಲ್ಲ. ಆ ಕಣ್ಣುಗಳನ್ನೇ ದಿಟ್ಟಿಸಿ ನೋಡಿದ. ಆಕೆಯೂ ನೋಡುತ್ತಿದ್ದಾಳೆ.

ಕಪ್ಪು ಅಂಗಿ. ಅದೇ ಮಣ್ಣು ಮೆತ್ತಿದ ಬೂಟುಗಳು. ಹದಿನೈದು ಹೆಜ್ಜೆ ಹಿಂದೆ ನಿಂತಿದ್ದಾನೆ. ಆ ಹದಿನೈದು ಹೆಜ್ಜೆಯನ್ನು ಅಳೆಯುತ್ತಿರುವಳೋ ಎಂಬಂತೆ ಆ ಮಧ್ಯದ ನೆಲದಲ್ಲಿ ದೃಷ್ಟಿ ಹರಿಸಿದಳು. ಆತ ನಿಂತಲ್ಲಿಂದ ತನ್ನ ಪಾದಗಳಿರುವಲ್ಲಿಯವರೆಗೆ ನೆಲದ ಬಣ್ಣ ಬೇರೆ. ತನ್ನ ಪಾದಗಳಿಂದ ಈಚೆಗೆ ದಟ್ಟ ಹಸಿರು. ಇಷ್ಟು ದೂರದಿಂದ ಓಡಿ ಬಂದ ಆಯಾಸ ಕಳೆಯುವಂತೆ ಆಹ್ಲಾದಕರ ತಂಪು ಕಾಡಿನಿಂದ ಸೂಸಿ ಮೈಯನ್ನು ಆವರಿಸುತ್ತಿದೆ. ತಲೆಯೆತ್ತಿ ಮೇಲೆ ನೋಡಿದಳು. ದಟ್ಟ ಮರಗಳ ಕಾಡೊಂದರ ಅಂಚಿನಲ್ಲಿ ಕುಳಿತಿದ್ದಾಳೆ. ಒಮ್ಮೆಲೇ ಬೆಚ್ಚಿಬಿದ್ದಳು ಹುಡುಗಿ.

‘ಕಲ್ಗುಡಿ!’ ಅಂದಳು ಬೆರಗಿನಲ್ಲಿ.

ತಾನು ಕಲ್ಗುಡಿಯ ಕಾಡನ್ನು ತಲುಪಿದ್ದೇನೆ ಎನ್ನುವುದು ಖಚಿತವಾಯಿತು ಅವಳಿಗೆ. ಎರಡೂ ಅಂಗೈಗಳನ್ನು ನೆಲಕ್ಕೂರಿ ತನ್ನ ಪಾದಗಳನ್ನು ಒಳಗೆಳೆದುಕೊಂಡಳು.

ಇದೆಲ್ಲ ಒಂದು ನಿಮಿಷದಲ್ಲಿ ನಡೆದುಹೋಗಿತ್ತು. ಆ ಒಂದು ನಿಮಿಷ ಸುದಾರಿಸಿಕೊಳ್ಳುತ್ತಿದ್ದ ಕೆಂಪಂಗಿಯವ, ತನ್ನೆದುರು ಅಸಹಾಯಕಳಾಗಿ ಬಿದ್ದಿದ್ದ ಹುಡುಗಿಯನ್ನು ನೋಡಿದ. ಇನ್ನು ತನ್ನ ಕೈಗೆ ದೊರಕಿದಂತೆ ಎಂದುಕೊಂಡು ನಾಲ್ಕು ಹೆಜ್ಜೆ ಮುಂದೆ ಇಡುವಷ್ಟರಲ್ಲಿ, ಕಪ್ಪಂಗಿಯವನು ಅವಸರದಲ್ಲಿ ಬಂದು ಅವನ ರಟ್ಟೆ ಹಿಡಿದು ತಡೆದ. ತಿರುಗಿ ನೋಡಿದರೆ ಬೇಡವೆಂದು ತಲೆಯಾಡಿಸಿದ. ಕೆಂಪಂಗಿಯವನು ಆತನನ್ನು ದೂಡಿ ಮುಂದಕ್ಕೆ ನಡೆದ. ಹಿಂದಕ್ಕೆ ಬಿದ್ದ ಕಪ್ಪಂಗಿಯವನು ಹುಡುಗಿಯ ಕಣ್ಣುಗಳನ್ನು ನೋಡುವುದನ್ನು ಬಿಟ್ಟಿರಲಿಲ್ಲ. ಈಗ ನೋಡಿದರೆ ಆ ಕಣ್ಣುಗಳಾಚೆ ಆಕಾಶವೇ ತೆರೆದುಕೊಂಡಿದೇನೋ ಎಂಬಂತಹ ಆಳ.

ಕೆಂಪಂಗಿಯವನು ಹೋಗಿ ಹುಡುಗಿಯನ್ನು ಹಿಡಿಯಲು ಕೈ ಚಾಚಿದನಷ್ಟೇ. ನೀಲಿ ಮಿಂಚೊಂದು ಕಾಡೊಳಗಿಂದ ಸುಳಿದು ಬಂದು ಆತನ ಕೈಯನ್ನು ಸ್ಪರ್ಷಿಸಿ ಅದೇ ವೇಗದಲ್ಲಿ ಹಿಂದಕ್ಕೆ ಹೋಯಿತು.

೦-೦-೦-೦

ಸಂಜೆ ಇಳಿಯುತ್ತಿದ್ದ ದಟ್ಟ ಕಾಡಿನ ದಾರಿಯಲ್ಲಿ ಕಾರು ಓಡುತ್ತಿತ್ತು. ಡ್ರೈವ್ ಮಾಡುತ್ತಿದ್ದ ಕಪ್ಪಂಗಿಯ ಯುವಕನ ಪಕ್ಕ ಕುಳಿತಿದ್ದ ಕಮಲಾಕ್ಷ ದಾರಿ ತೋರಿಸುತ್ತಿದ್ದ.

“ಇಂಥ ಭಯಾನಕ ಕಾಡನ್ನು ನಾನು ಎಲ್ಲಿಯೂ ನೋಡಿಲ್ಲ” ಅಂದ ಕಪ್ಪಂಗಿಯವ. ಎರಡೂ ದಿಕ್ಕಿನಲ್ಲಿ ಗಾಳಿ ಸುಳಿಯೇಳುತ್ತಿದ್ದರೆ ಅತ್ತ ಇತ್ತ ನೋಡದೇ ಕಾರು ಓಡಿಸುತ್ತಿದ್ದ. ಆತನ ಕಣ್ಣಲ್ಲಿ ವಿಚಿತ್ರ ದುಗುಡವಿತ್ತು. ಆಗಾಗ ಮಧ್ಯದ ಕನ್ನಡಿಯಿಂದ ಹಿಂದೆ ಕುಳಿತ ಮೂವರನ್ನು ನೋಡುತ್ತಿದ್ದ.

“ಇಲ್ಲಿ ಸಾಮಾನ್ಯ ಮನುಷ್ಯರು ಬರುವುದಿಲ್ಲ” ಅಂದ ಕಮಲಾಕ್ಷ. ಆತನಿಗೆ ಈ ಕಾಡು ಪರಿಚಯವಿತ್ತು.

“ಕಲ್ಗುಡಿ?” ಅಂದ ಕಪ್ಪಂಗಿಯವನು. ಕಮಲಾಕ್ಷ ತಕ್ಷಣಕ್ಕೆ ಉತ್ತರಿಸಲಿಲ್ಲ. ತಕ್ಷಣ ಏನು ಹೇಳಬೇಕು ಎಂಬುದು ತಿಳಿಯದೇ ಸುಮ್ಮನಾದ.

ಕಪ್ಪಂಗಿಯವನು ಮಧ್ಯದ ಕನ್ನಡಿಯಿಂದ ಹಿಂದೆ ಕುಳಿತವರನ್ನು ನೋಡಿದ. ಮೈ ಹಸಿರುಗಟ್ಟಿದ್ದ ಮಗನ ತಲೆಯನ್ನು ತೊಡೆಯ ಮೇಲಿಟ್ಟುಕೊಂಡು ಆಗಾಗ ಮುಂದೆ ನೋಡುತ್ತ, ಮಗನನ್ನು ನೋಡುತ್ತ ಕುಳಿತಿದ್ದ ತಾಯಿ. ಯಾವುದೇ ಮಾತಿಲ್ಲದೇ ಗಂಭೀರತೆಯಿಂದ ಹೊರಗೆ ನೋಡುತ್ತಿದ್ದ ತಂದೆ.

“ಕಲ್ಗುಡಿ ಬೆಳಕಿನ ಕಾಡು. ನಾವು ಈಗ ಹೋಗುತ್ತಿರುವುದು ಕತ್ತಲ ಕಾಡಿಗೆ”, ಅಂದ ಕಮಲಾಕ್ಷ.

“ಕಲ್ಗುಡಿ”, ಆ ಹುಡುಗಿಯ ಬಾಯಿಯಿಂದ ಬಿದ್ದ ಮೊದಲ ಪದ. ಕಾಡಿನ ಆವರಣದೊಳಕ್ಕೆ ಹೇಗೆ ಕಾಲುಗಳನ್ನು ಎಳೆದುಕೊಂಡಳು. ಆವರೆಗೆ ಇದ್ದ ಭಯವೆಲ್ಲ ನಿಶ್ಚಿಂತೆಯಾಗಿ ಬದಲಾಯಿತು. ಆ ಕ್ಷಣದಲ್ಲಿಯೇ ಯಾವುದೋ ಭಯ ಹುಟ್ಟಿತ್ತು. ಆದರೆ ರೋಹನ್‌ಗೆ ಅದು ಯಾವುದೂ ಕಾಣಲಿಲ್ಲ ಅನ್ನಿಸುತ್ತದೆ.

“ಎಂಥ ಬೆಳಕಿನ ಕಾಡು. ಅದು ಬೆಳಕು ಜಾಸ್ತಿ ಆದರೂ ಏನೂ ಕಾಣುವುದಿಲ್ಲ ಅಂತಾರಲ್ಲ, ಹಾಗೆ” ಅಂದ ಕಮಲಾಕ್ಷ, ತಾನು ಹೋಗುತ್ತಿರುವ ಜಾಗದಲ್ಲಿ ಸುಮ್ಮನೆಯೂ ಕಲ್ಗುಡಿಯನ್ನು ಹೊಗಳುವಂತಿಲ್ಲ ಅನ್ನುವುದನ್ನು ನೆನಪಿಸಿಕೊಳ್ಳುತ್ತಾ.

ನಂತರ ಏನಾಯಿತು ನನಗೂ ಕಾಣಲಿಲ್ಲ. ಸುಮ್ಮನೇ ಒಂದು ನೀಲಿಪ್ರಭೆಯ ಬೆಳಕು ಕಾಡಿನಿಂದ ಸುಳಿದು ಬಂದಂತೆ ಕಂಡಿತು. ಬಂದ ವೇಗದಲ್ಲಿಯೇ ಅದು ಹಿಂದಕ್ಕೆ ಹೋಯಿತು. ಅಷ್ಟೇ. ಕೈಚಾಚಿದ್ದ ರೋಹನ್ ಅಲ್ಲಿಯೇ ಉರುಳಿಬಿದ್ದ.

“ನಿಲ್ಲಿಸು” ಅಂದ ಕಮಲಾಕ್ಷ. ಗಾಡಿ ನಿಲ್ಲುತ್ತಿದ್ದಂತೆ ದೊಂದಿ ಹಿಡಿದ್ದಿದ್ದ ಇಬ್ಬರು ಕಾಣಿಸಿಕೊಂಡರು. ಕಮಲಾಕ್ಷ ಇಳಿದು ಅವರೊಡನೆ ಮಾತನಾಡಲು ಆರಂಭಿಸಿದಾಗ ಕಪ್ಪಂಗಿಯ ಯುವಕ ನಿಟ್ಟುಸಿರು ಬಿಟ್ಟ. ಹೊರಗಿಳಿದು ನೋಡಿದಾಗ, ಕಾಡಿನ ನಡುವೆ ದೊಡ್ಡ ಕಲ್ಲು ಬಂಡೆ. ಬರೀ ಬಂಡೆಯಲ್ಲ, ಗುಹೆ. ಅದರೊಳಗಿನಿಂದ ಬೆಳಕು ಬರುತ್ತಿದೆ. ಸುತ್ತೆಲ್ಲ ಕಾಡುಗತ್ತಲೆ.

ರೋಹನ್‌ನನ್ನು ಎತ್ತಿಕೊಂಡು ಒಳಗೆ ಹೋದರು.

ಒಳ ಹೋಗುತ್ತಿದ್ದಂತೆ ಬೆರಗಿನಿಂದ ಸುತ್ತ ನೋಡುತ್ತಿದ್ದ ಕಪ್ಪಂಗಿಯ ಯುವಕ. ಒಳಗಡೆ ಒಂದು ಅರಮನೆಯೇ ಇದ್ದಂತಿದೆ. ಅತ್ತಿಂದಿತ್ತ ಓಡಾಡುತ್ತ ತಮ್ಮಲ್ಲೇ ಮಗ್ನರಾಗಿದ್ದ ಜನರು.

“ಇದೊಂದು ಮಾಂತ್ರಿಕ ಲೋಕ” ಎಂದು ಪಿಸುಗುಟ್ಟಿದ ಕಮಲಾಕ್ಷ.

ರೋಹನ್‌ನನ್ನು ಒಂದು ಕೋಣೆಯ ಒಳಗಡೆ ಕರೆದುಕೊಂಡು ಹೋಗಿ  ಮಲಗಿಸಿದರು. ಸ್ವಲ್ಪ ಹೊತ್ತಿನಲ್ಲಿಯೇ ಆರಡಿಗಿಂತ ಎತ್ತರವಿದ್ದ, ಜಟೆ ಬಿಟ್ಟಿದ್ದ ವ್ಯಕ್ತಿಯೊಬ್ಬ ಒಳಗೆ ಬಂದ. ಬಂದವರೆಲ್ಲ ಸುತ್ತ ನಿಂತಿದ್ದರೆ, ಮಲಗಿದ್ದ ರೋಹನ್‌ನ ಕೈ ಹಿಡಿದುಕೊಂಡು ಕೇಳಿದ.

“ಈ ಬಳ್ಳಿ ಕಟ್ಟಿದ್ದು ಯಾರು?”

“ನಾನೇ” ಅಂದ ಕಪ್ಪಂಗಿಯವ.

ರೋಹನ್ ಉರುಳಿ ಬೀಳುತ್ತಿದ್ದಂತೆಯೇ ಎದ್ದು ನಿಂತಳು ಆ ಹುಡುಗಿ. ಮುಂಗೈಯಲ್ಲಿ ರಕ್ತ ಕಾಣಿಸಿಕೊಳ್ಳುತ್ತಿದ್ದಂತೆ ತಾನು ಹೋಗಿ ಅವನನ್ನು ಹಿಡಿದುಕೊಂಡಿದ್ದನ್ನು ನೆನಪುಮಾಡಿಕೊಂಡ ಕಪ್ಪಂಗಿಯವ. ಆ ಹುಡುಗಿ ಯಾವುದೋ ಪೊದೆಯೊಳಗೆ ನುಗ್ಗಿ ಬಳ್ಳಿಯೊಂದನ್ನು ಎಳೆದುಕೊಂಡು ಬಂದಳು. ಅದನ್ನು ರೋಹನ್‌ನ ತೋಳಿಗೆ ಕಟ್ಟಿದಳು. ಯಾವುದೋ ಎಲೆಗಳನ್ನು ಅಂಗೈಯಲ್ಲಿ ಹಿಂಡಿ ರಕ್ತ ಬಂದ ಜಾಗದಲ್ಲಿ ಹಿಂಡಿದಳು. ಹಿಂಡಿದ ಎಲೆಯನ್ನು ಒತ್ತಿ, ಮೇಲೊಂದು ಎಲೆಯನ್ನು ಮುಚ್ಚಿ ಬಳ್ಳಿಯಿಂದ ಮುಚ್ಚಿದಳು.

“ಸುಳ್ಳು” ಅಂದ ಜಟಾಧಾರಿ. “ನೀವು ಹೊರಗಿನಿಂದ ಬಂದವರಂತೆ ಕಾಣುತ್ತೀರಿ. ಈ ಬಳ್ಳಿ, ಈ ಎಲೆ ಕಲ್ಗುಡಿ ಜನರಿಗೆ ಅಷ್ಟೇ ಪರಿಚಿತ”.

ಕಪ್ಪಂಗಿಯವನು ಮಾತನಾಡಲಿಲ್ಲ. ಆ ಹುಡುಗಿ ಕಾರಿನವರೆಗೆ ರೋಹನ್‌ನನ್ನು ಎತ್ತಿಕೊಂಡು ಬರಲು ಸಹಾಯ ಮಾಡಿದಳು. ಹಿಂದಿನ ಸೀಟಿನಲ್ಲಿ ಕುಳಿತು ರೋಹನ್‌ನ ತಲೆಯನ್ನು ತೊಡೆಯ ಮೇಲಿಟ್ಟುಕೊಂಡು ಬಾಯಿಯಿಂದ ಹೊರಬರುತ್ತಿದ್ದ ನೊರೆಯನ್ನು ಒರೆಸುತ್ತಿದ್ದಳು. ಆಕೆಯ ಹೆಸರು ಏನೆಂದು ಕೇಳಲೂ ಸಮಯವಾಗಲಿಲ್ಲ.

“ನೀವೆಲ್ಲ ಹೊರಗೆ ಕುಳಿತಿರಿ. ವಿಷದ ಅಂಶ ಮೈ ಸೇರಿದೆ”, ಅಂದ ಜಟಾಧಾರಿ.

ಹೊರಬಂದು ಹಾಸಿದ್ದ ಚಾಪೆಯ ಮೇಲೆ ಕುಳಿತರು. ಗುಹೆಯ ಗೋಡೆಗೆ ಒರಗಿದ ಕಪ್ಪಂಗಿಯ ಯುವಕ ರೋಹನ್‌ನ ತಂದೆ-ತಾಯಿಯರನ್ನು ನೋಡಿದ. ತಾಯಿ ಇನ್ನೂ ಅಳುತ್ತಲೇ ಇದ್ದಳು. ತಂದೆ ಮಾತ್ರ ಯಾವುದೇ ಭಾವವನ್ನೂ ತೋರಿಸದೇ ಕುಳಿತಿದ್ದ. ಕಮಲಾಕ್ಷ ಅವನಿಗೆ ಕಲ್ಗುಡಿ ಅನ್ನುವ ಊರು ಎಂತಹದ್ದು ಎಂದು ವಿವರಿಸುತ್ತಿದ್ದ.

“… ಕಲ್ಗುಡಿಯನ್ನ ಯಾವುದೋ ವ್ಯವಸ್ಥೆ ನೋಡಿಕೊಳ್ಳುತ್ತಿದೆ. ನಮಗೆ ಗೊತ್ತಿರುವುದು ಎಂದರೆ ಒಂದು ಸರ್ಪವ್ಯೂಹ ಇದೆ ಅನ್ನುವುದು ಮಾತ್ರ. ಆದರೆ ಆ ಸರ್ಪಗಳನ್ನು ಕೂಡಾ ಯಾರೂ ಸ್ಪಷ್ಟವಾಗಿ ಕಂಡಿಲ್ಲ” ಎಂದು ಹೇಳುತ್ತಿದ್ದ.

ಕಪ್ಪಂಗಿಯವನು ನೆನಪಿಸಿಕೊಂಡ. ಸರ್ಪವೇ ಅದು? ಏನೋ ಮಿಂಚು ಹರಿದಂತೆ ಆಗಿತ್ತು. ಅದೇ ವೇಗ. ಆ ಹುಡುಗಿ ನೋಡಿದ್ದಳೇನೋ? ಕೇಳಬಹುದಿತ್ತು. ಆದರೆ ಸಮಯ ಎಲ್ಲಿತ್ತು. ಊರು ಹತ್ತಿರಾಗುತ್ತಿದ್ದಂತೆಯೇ, “ನಾನು ಇಲ್ಲಿ ಇಳಿಯುತ್ತೇನೆ” ಅಂದವಳು, ಕಾರು ನಿಲ್ಲಿಸುತ್ತಿದ್ದಂತೆ ಕತ್ತಲಲ್ಲಿ ಮಾಯವಾಗಿದ್ದಳು. ಯಾರಿಂದ ತಪ್ಪಿಸಿಕೊಳ್ಳಲು ನೀರಿಗೆ ಹಾರಿ, ಮರಮಟ್ಟು ಅನ್ನದೇ ಓಡಿದಳೋ, ಅವನನ್ನೇ ಮಡಿಲಲ್ಲಿ ಮಲಗಿಸಿಕೊಂಡು ಬಂದು ಬಿಟ್ಟು ಹೋದಳು. ಈ ಹೆಂಗಸರ ಮನಸ್ಸತ್ವ ಅರ್ಥವಾಗುವುದಿಲ್ಲ, ಅಂದುಕೊಂಡ. ರೋಹನ್‌ಗೆ ಚಿಕಿತ್ಸೆ ನೀಡುತ್ತಿದ್ದ ಕೋಣೆಯ ಕಡೆ ನೋಡಿದ. ಇನ್ನು ಎಷ್ಟುಹೊತ್ತೋ ಅಂದುಕೊಳ್ಳುತ್ತ ಗೋಡೆಗೆ ಇನ್ನಷ್ಟು ಒರಗಿದ.

೦-೦-೦-೦

ಗಂಗಾಧರ ಊರಿಗೆ ಬಂದಾಗ ನೀರವ ರಾತ್ರಿ ಸ್ವಾಗತಿಸಿತು. ಕೊಂಡುತಂದ ಗೋವುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ, ಜೊತೆ ಬಂದವನನ್ನು ಮನೆಗೆ ಕಳಿಸಿದ. ಬಚ್ಚಲಿಗೆ ಹೋಗಿ ಮುಖ ತೊಳೆದು ಒಳಗೆ ಬಂದವನಿಗೆ ಜಾನಕಿ ನಡೆದ ವಿಚಾರ ಹೇಳಿದಳು.

ಕಾರಿನಿಂದ ಇಳಿಸಿ ಕಟ್ಟೆಯ ಮೇಲೆ ಮಲಗಿಸಿದರು. ಆಗಲೇ ಯಾರೋ ತೋಳಿಗೆ ಬಳ್ಳಿ ಕಟ್ಟಿದ್ದರು. ಮೈ ವಿವರ್ಣವಾಗಿತ್ತು. ಮಧುಕರ ಗಾಯದ ಜಾಗಕ್ಕೆ ಔಷಧಿಯನ್ನು ಒತ್ತಿ ಮತ್ತೆ ಕಟ್ಟಿದ. ಅದನ್ನೇ ಒಂದೆರೆಡು ಗುಳಿಗೆಯನ್ನು ಮಾಡಿ ಬಾಯಿಗೂ ಹಾಕಿದರು. ಮೈಬಿಗುವು ಕಡಿಮೆಯಾದಂತೆ ಕಂಡಿತು. ಆದರೆ ಅವನು ಎಚ್ಚರಗೊಳ್ಳಲಿಲ್ಲ.

ಅದೇ ಸಮಯಕ್ಕೆ “ತನಗೆ ವಿಷ ತೆಗೆಯುವವರು ಗೊತ್ತಿದ್ದಾರೆ” ಎಂದು ಹೇಳಿ ಕಮಲಾಕ್ಷ ಅವರನ್ನು ಕರೆದುಕೊಂಡು ಹೋಗಿದ್ದ.

ಗಂಗಾಧರ ಹೆಂಡತಿಯ ಮುಖವನ್ನು ನೋಡಿದ. ಮುಂಜಾನೆಯಷ್ಟೇ ಹೇಳಿದ್ದಳು, ಇದು ಬಹಳ ದಿನ ನಡೆಯುವ ವ್ಯಾಪಾರ ಅಲ್ಲ ಎಂದು. ಔಷಧಿಗಾಗಿ ಬಂದವರು ಯಾರ್ಯಾರದೋ ಕಟ್ಟೆಯ ಮೇಲೆ ಮಲಗಿ ರಾತ್ರಿ ಕಳೆಯುತ್ತಿದ್ದರು. ಇಂದು ನೋಡಿದರೆ ಓಣಿಯ ಕಟ್ಟೆಗಳಲ್ಲಿ ಅಷ್ಟೇನೂ ಜನರಿಲ್ಲ. ಆದರೆ ನಾಳೆ ಬರುತ್ತಾರೆ. ಬೇರೆ ಬೇರೆ ಊರುಗಳಿಂದ. ಮತ್ತೆ ಎಂದಿನಂತೆ ಸಂತೆ. ಸುಮ್ಮನೇ ಕುಳಿತಿದ್ದ ಮಗನನ್ನು ನೋಡಿದ.    

“ನಮ್ಮಿಂದ ಯಾವ ತಪ್ಪು ಆಗಿಲ್ಲ. ಒಳ್ಳೆಯ ಕೆಲಸ ನಿಲ್ಲಿಸುವುದು ಬೇಡ” ಅಂದ.

೦-೦-೦-೦

ರಾತ್ರಿ ಇಳಿಯುತ್ತಿದ್ದ ದಟ್ಟ ಕಾಡಿನ ದಾರಿಯಲ್ಲಿ ಕಾರು ಓಡುತ್ತಿತ್ತು. ಡ್ರೈವರ್ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಕಪ್ಪಂಗಿಯವ ಮಧ್ಯದ ಕನ್ನಡಿಯಿಂದ ನೋಡಿದ. ರೋಹನ್ ತಾಯಿಯ ಮಡಿಲಲ್ಲಿ ಮಲಗಿದ್ದ. ಆಕೆ ಇನ್ನೂ ಅಳುತ್ತಿದ್ದಳು.

ಗುಹೆಯ ಗೋಡೆಗೊರಗಿದ್ದಾಗ ನಿದ್ದೆಯ ಮಂಪರು ಹತ್ತಿತ್ತು. ಯಾರೋ ಎಬ್ಬಿಸಿದರು. ಒಳಗೆ ಹೋದಾಗ ರೋಹನ್‌ಗೆ ಎಚ್ಚರವಾಗಿತ್ತು. ಆದರೆ ಇನ್ನೂ ಹಾಸಿಗೆಯ ಮೇಲೆಯೇ ಇದ್ದ.

“ಬದುಕಿದ್ದಾನೆ, ಆದರೆ…” ಅಂದ ಜಟಾಧಾರಿ.

ರೋಹನ್‌ನನ್ನು ಮೆಲ್ಲಗೆ ಏಳಿಸಿ ಕೂರಿಸಿದರು. ತಾಯಿ ತಲೆ ನೇವರಿಸುತ್ತಿದ್ದರೆ, ಇಡೀ ದಿನದಲ್ಲಿ ಮೊದಲ ಬಾರಿಗೆ ಮಾತನಾಡಿದ:

“ಅಮ್ಮಾ, ನನಗೆ ಏನೂ ಕಾಣಿಸುತ್ತಿಲ್ಲ.”

ತಂದೆ ಆಗಲೂ ಏನೂ ಮಾತನಾಡಲಿಲ್ಲ. ಆದರೆ, ಇನ್ನೇನು ರೋಹನ್‌ನನ್ನು ಕರೆದುಕೊಂಡು ಊರಿಗೆ ಹೊರಡುವುದು ಎಂದು ನಿರ್ಧರಿಸಿ ಹೊರಗೆ ಹೊರಟಾಗ, ಅವನು ಜಟಾಧಾರಿಯನ್ನು ಉದ್ದೇಶಿಸಿ ಅಂದ ಮಾತು, ಕಾಡು ದಾಟಿ ರಸ್ತೆಯಲ್ಲಿ ಕಾರು ಓಡುತ್ತಿದ್ದರೆ, ನೆನಪಾಗಿ ಮೈ ನಡುಗಿತು.

“ಆ ಸರ್ಪವ್ಯೂಹವನ್ನ ನಾಶಮಾಡಬೇಕು”.

ರೋಹನ್‌ನನ್ನು ಕಾರಿನ ಹಿಂಭಾಗದಲ್ಲಿ ಕೂರಿಸುತ್ತಿದ್ದರೆ, ತಾನೇ ಡ್ರೈವಿಂಗ್ ಸೀಟಿನಲ್ಲಿ ಕುಳಿತ. ಕಳೆದ ಹತ್ತು-ಹದಿನೈದು ತಾಸಿನಲ್ಲಿ ಒಂದೂ ಮಾತನಾಡದ ಅಂಕಲ್ ಮನಸ್ಸಿನಲ್ಲಿ ಏನು ಆಲೋಚನೆಗಳು ಓಡುತ್ತಿದ್ದವೋ? ಏನಾಯಿತು ಎಂದು ತನ್ನನ್ನೂ ಕೇಳಲಿಲ್ಲ. ಇದ್ದಕ್ಕಿದ್ದಂತೆ ಆಡಿದ ಮಾತು.

“ನಾವೂ ಅದಕ್ಕೇ…” ಅಂದ ಒಬ್ಬ ಶಿಷ್ಯನನ್ನು ತಡೆದ ಜಟಾಧಾರಿ, “ನಾವು ಅಂತದ್ದನ್ನೆಲ್ಲ ಮಾಡುವವರಲ್ಲ. ನಮ್ಮ ಧ್ಯೇಯವೇ ಬೇರೆ” ಅಂದ.

ಅಂಕಲ್ ಕೋಟಿನೊಳಗಿನಿಂದ ಒಂದು ಬ್ಲ್ಯಾಂಕ್ ಚೆಕ್ ತೆಗೆದು, ಜೊತೆಗೆ ಒಂದು ವಿಸಿಟಿಂಗ್ ಕಾರ್ಡ್ ತೆಗೆದು ಅವನ ಮುಂದಿಟ್ಟ.

“ಎಷ್ಟು ಬೇಕಾಗುತ್ತದೆ? ಫೋನ್ ಮಾಡಿ” ಅಂದ.

“ದುಡ್ಡಿನಿಂದ ಏನು ಬೇಕಾದರೂ ಮಾಡಬಹುದು ಅನ್ನೋ ಮೂರ್ಖರ ಹತ್ತಿರ ಏನು ಮಾತನಾಡುವುದು. ಹೊರಡಿ ಇಲ್ಲಿಂದ” ಅಂದ ಜಟಾಧಾರಿ. ಆದರೆ, ಹೊರಡುವ ಹೊತ್ತು ಚೆಕ್ ಎತ್ತಿಕೊಳ್ಳಲು ಹೋದರೆ, ಅವನು ಆಡಿದ್ದೇ ಬೇರೆ.

“ಇಟ್ಟು ಹೋಗಿ, ಸಮಯ ಬಂದಾಗ ತಿಳಿಸುತ್ತೇವೆ”.

ಕಾರಿನ ವೇಗ ಹೆಚ್ಚುತ್ತಲೇ ಇತ್ತು. ಇಷ್ಟು ಸ್ಪೀಡಾಗಿ ಹೋಗುತ್ತಿದ್ದಾನೆ ಎಂದರೆ, ಇನ್ನು ಎಂತಹ ಸ್ಪೀಡಿನಲ್ಲಿ ಹಿಂದಿರುಗಿ ಬರಬಹುದು ಅಂದುಕೊಂಡ ಕಪ್ಪಂಗಿಯವ. ಮಗ ಗೊತ್ತಿಲ್ಲದೇ ಮುಟ್ಟಲು ಹೋಗಿ ಕಣ್ಣು ಕಳೆದುಕೊಂಡ. ಅಪ್ಪ ಗೊತ್ತಿದ್ದೂ ಮುಟ್ಟಲು ಸಿದ್ಧನಾಗಿದ್ದಾನೆ. ಏನು ಕಾದಿದೆಯೋ ಅನ್ನಿಸಿತು. ಸೀಟಿಗೊರಗಿ ಕಣ್ಣುಮುಚ್ಚಿದ.

೦-೦-೦-೦

ನಸುಕಿನಲ್ಲಿ ಎದ್ದು, ಬಚ್ಚಲ ಒಲೆಗೆ ಕಟ್ಟಿಗೆ ತರಲು ಹಿತ್ತಲಿಗೆ ನಡೆದಾಗ, ಜಾನಕಿಗೆ ಮಾವಿನಮರದ ಬಳಿ ನಿಂತಿದ್ದ ವಿಶ್ವಾಮಿತ್ರರು ಕಂಡರು. ಮಗನನ್ನು ಕರೆದುಕೊಂಡು ಬಾ ಅಂದರು.

ಮಗನನ್ನು ನಿದ್ರೆಯಿಂದೆಬ್ಬಿಸಿ ಅವರ ಬಳಿ ಕಳಿಸಿದಳು. ಅವಳ ತರಾತುರಿಗೆ ಗಂಡ ಮತ್ತು ಅತ್ತೆ ಇಬ್ಬರೂ ಎದ್ದು ಕುಳಿತರು.

“ಕಲ್ಗುಡಿಯ ಅವಧೂತರು ಬಂದಿದ್ದಾರೆ” ಏಳಿ ಅಂದಳು. ಮೂವರೂ ಅವಸರದಲ್ಲಿ ಎದ್ದು ಹಿತ್ತಲಿಗೆ ಹೋದರು.

ವಿಶ್ವಾಮಿತ್ರರ ಎದುರು ಮಧುಕರ ನಿಂತಿದ್ದ. ಕಲ್ಗುಡಿ ಎಂಬ ಊರಿನ ಅಂಚಿನಲ್ಲಿರುವ ಕಾಡಿನಲ್ಲಿ ಮನೆಮಾಡಿಕೊಂಡಿರುವ ಇವರು ಸನ್ಯಾಸಿಯೋ, ಸಂಸಾರಸ್ಥನೋ ಗೊತ್ತಾಗುವುದಿಲ್ಲ. ಎಂದಿಗೂ ಯಾರ ಮನೆಗೂ ಹೋಗಿದ್ದಿಲ್ಲ. ಮಹಾಯೋಗಿ ಅನ್ನುತ್ತಾರೆ ಜನ. ಎಂದೋ ಒಂದು ದಿನ ಇವರನ್ನು ನೋಡಲು ಹೋಗಬೇಕು ಅನ್ನುವ ಆಸೆ ಮನಸಿನಲ್ಲಿತ್ತು. ಇಂದು ತಾವೇ ಬಂದಿದ್ದಾರೆ, ಅಂದುಕೊಂಡ ಗಂಗಾಧರ.

“ಶಿವನೇ ಬಂದಂತಾಯಿತು” ಅನ್ನುತ್ತ ಕೈಮುಗಿದಳು ಮುದುಕಿ. ಬಾಗಿಲ ಬಳಿಯೇ ನಿಂತು ಮೂವರೂ ಮಗ ವಿಶ್ವಾಮಿತ್ರರೊಂದಿಗೆ ಮಾತನಾಡುವುದನ್ನು ಕೇಳಿಸಿಕೊಳ್ಳುತ್ತಿದ್ದರು.

“ಏನು ಮಾಡ್ತಿದ್ದೀಯ ನೀನು” ಅಂದರು ವಿಶ್ವಾಮಿತ್ರರು. ಮಧುಕರ ಮಾತನಾಡಲಿಲ್ಲ.

“ಔಷಧಿ ಸಿದ್ಧವಾಗಿದ್ದುದು ನಿನಗಾಗಿ ಮಾತ್ರ. ಅದನ್ನೇ ಊರವರಿಗೆಲ್ಲ ಹಂಚಲು ಹೋದೆ. ಸರಿ, ಈಗ ನಿಲ್ಲಿಸುವ ಕಾಲ ಬಂದಿದೆ” ಅಂದರು.

ಮಧುಕರನಿಗೆ ದೊಡ್ಡ ಮಾವಿನಮರ ನೆನಪಾಯಿತು. ಅದರ ಟೊಂಗೆಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬಂದನಿಕೆಯ ಹಣ್ಣುಗಳು. ಅದರಿಂದ ತೊಟ್ಟಿಕ್ಕಿದ ರಸ, ನೀಲಿ ತಿರುಗಿದ ಹುತ್ತ. ಪ್ರಕೃತಿ ನನಗಾಗಿ ಮಾಡಿದ ಔಷಧವೇ?

“ಆದರೆ, ಜನರಿಗೆ ಒಳ್ಳೆಯದೇ ಆಗುತ್ತಿದೆಯಲ್ಲ” ಅಂದ ಮಧುಕರ.

“ಕಳಿತ ಹಣ್ಣು. ಕೊಳೆಯುವುದಕ್ಕೆ ಎಷ್ಟುಹೊತ್ತು ಬೇಕು?” ಕೈಯಲ್ಲಿದ್ದ ಮಾವಿನ ಹಣ್ಣನ್ನು ಅವನಿಗೆ ಕೊಡುತ್ತಾ ವಿಶ್ವಾಮಿತ್ರರು ಹೇಳಿದರು.

ತಾನೇನೂ ಮಾಡಿರಲಿಕ್ಕಿಲ್ಲ. ಆದರೆ, ಯಾವುದೋ ಊರಿನವರಿಗೆ ಕಲ್ಗುಡಿಯಲ್ಲಿ ಹಾವು ಕಚ್ಚಿದ್ದಕ್ಕೆ ತಾನೂ ಕಾರಣ ಹೌದು ಅಂದುಕೊಂಡ ಮಧುಕರ. ಕೊಳೆಯಲು ಆರಂಭವಾಗಿದೆಯೇ?

ಆ ಹಣ್ಣನ್ನು ಅವನಿಗೆ ನೀಡುತ್ತಾ ಹೇಳಿದರು, “ಇಂದೇ ತಿಂದು ಮುಗಿಸು. ನಾಳೆಯಿಂದ ನೀನು ಶಾಲೆಗೆ ಹೊರಡಬೇಕು”.

ಹಣ್ಣು ತೆಗೆದುಕೊಂಡ ಮಧುಕರ ಕಣ್ಮುಚ್ಚಿ ನಮಸ್ಕರಿಸಿದ. ಕಣ್ತೆರೆದು ನೋಡಿದಾಗ ವಿಶ್ವಾಮಿತ್ರರು ಅಲ್ಲಿರಲಿಲ್ಲ.