ಯಾವುದರ ಬಗ್ಗೆ ಬರೆಯಲಿ ಎಂಬ ಪ್ರಶ್ನೆ ಇರುವವರಿಗೆ ಇದು. ಮುಂಜಾನೆಯಿಂದ ಸಂಜೆಯವರೆಗೆ ನಾವು ಅನೇಕ ವಿಷಯಗಳ ಕುರಿತು ಚಿಂತಿಸುತ್ತಿರುತ್ತೇವೆ, ಮಾತನಾಡುತ್ತಿರುತ್ತೇವೆ. ಆಗಾಗ ಹೊಸ ಐಡಿಯಾಗಳು ಚಿಟ್ಟೆಯಂತೆ ಹಾರಿ ಬಂದು ಹೋಗುತ್ತಿರುತ್ತವೆ. ಆದರೆ, ಅವುಗಳನ್ನು ಹಿಡಿದುಕೊಂಡರೆ ಒಂದು ಚಿಕ್ಕ ಲೇಖನವಾದರೂ ಆಗುತ್ತದೆ. ಆದರೆ, ಗಮನ ಕೊಡದಿದ್ದರೆ ಹಾಗೇ ಹಾರಿ ಹೋಗುತ್ತದೆ. ಹೀಗೇ ನಿರ್ಲಕ್ಷ್ಯ ಮಾಡುತ್ತಿದ್ದರೆ, ಮತ್ತೆ ಚಿಟ್ಟೆಗಳು ಬರುವುದೇ ಇಲ್ಲ. ಹಾಗಾಗಿ ಎಚ್ಚೆತ್ತುಕೊಳ್ಳಬೇಕು. ಮೊದಲು ಮಾಡಬೇಕಾದ ಕೆಲಸ, ಆ ಐಡಿಯಾ ಎಷ್ಟು ಚಿಕ್ಕದೇ ಇರಲಿ, ಅದನ್ನು ಮೊದಲು ಬರೆದಿಟ್ಟುಕೊಳ್ಳಬೇಕು. ಈಗ ನಮ್ಮೆಲ್ಲರ ಬಳಿಯಲ್ಲಿಯೂ ಸ್ಮಾರ್ಟ್ ಫೋನ್ ಇರುವುದರಿಂದ, ಐಡಿಯಾಗಳನ್ನು ಬರೆದಿಟ್ಟುಕೊಳ್ಳುವುದು ಸುಲಭ.
ಹೀಗೆ ಐಡಿಯಾಗಳನ್ನು ಬರೆದಿಟ್ಟುಕೊಳ್ಳುವುದಕ್ಕೆ ಸಹಕಾರಿಯಾದ ಮೂರು ಆಪ್‌ಗಳ ಕುರಿತು ಇಲ್ಲಿ ಬರೆದಿದ್ದೇನೆ. ಬರಹಗಾರರಿಗೆ ಇದೆಲ್ಲ ಮುಖ್ಯ:
ಗೂಗಲ್ ಕೀಪ್:- ಇದು ನನ್ನ ನಿತ್ಯ ಬಳಕೆಯ ಅಪ್ಲಿಕೇಶನ್. ತಕ್ಷಣಕ್ಕೆ ಫೋನ್ ನಂಬರ್, ಯಾರದೋ ಹೆಸರು ಅಥವಾ ವಿಳಾಸ, ಕೊಳ್ಳಬೇಕಾದ ವಸ್ತುಗಳ ಅಥವಾ ಮಾಡಬೇಕಾದ ಕೆಲಸಗಳ ಪಟ್ಟಿ ಮಾಡಿಕೊಳ್ಳಲು ಇರುವ ಆಪ್. ಜೊತೆಗೆ ಒಂದು ಲೇಖನ, ಕತೆಯ (ಅಥವಾ ಒಂದು ಸಂಭಾಷಣೆ, ಕವಿತೆಯ ಸಾಲು) ಕುರಿತು ಮನಸ್ಸಿನಲ್ಲಿ ಯಾವುದೇ ವಿಚಾರ ಬಂದರೂ ಬರೆದಿಟ್ಟುಕೊಳ್ಳಲು ಇದು ಅತ್ಯಂತ ಸಹಕಾರಿ. ಚಿತ್ರ ಲೇಖನ ಬರೆಯುವವರಿಗೆ ತಕ್ಷಣಕ್ಕೆ ಫೋಟೋ ತೆಗೆದು ಆ ಚಿತ್ರದ ಕುರಿತ ನೋಟ್ ಸಹಾ ಸೇರಿಸಿ ಇಟ್ಟುಕೊಳ್ಳಬಹುದು. ನಿಮ್ಮ ಎಲ್ಲಾ ನೋಟ್ಸ್‌ಗಳು ನಿಮ್ಮ ಗೂಗಲ್ ಡ್ರೈವ್‌ನಲ್ಲಿ ಸಂರಕ್ಷಿಸಲ್ಪಟ್ಟಿರುತ್ತವೆ.
ಎವರ್‌ನೋಟ್:- ಬರಹಗಾರರಿಗೆ ಲೇಖನಗಳನ್ನು ಅಥವಾ ಕತೆ, ಕಾದಂಬರಿಗಳನ್ನು ಓದುತ್ತಿರುವಾಗ ಹೆಚ್ಚಾಗಿ ಐಡಿಯಾಗಳು ಹೊಳೆಯುತ್ತವೆ. ಜೊತೆಗೆ ಯಾವುದೋ ಲೇಖನದಿಂದ, ಕವಿತೆ ಅಥವಾ ಕತೆಯಿಂದ ಉಪಯುಕ್ತ ಅನ್ನಿಸುವ ಭಾಗವನ್ನು ಆಯ್ದು ಒಂದುಕಡೆ ಇಟ್ಟುಕೊಳ್ಳುವುದಕ್ಕೆ ಅತ್ಯಂತ ಸೂಕ್ತ ಅಪ್ಲಿಕೇಶನ್ ಅಂದರೆ ಎವರ್‌ನೋಟ್. ಒಂದಿಡೀ ಪ್ಯಾರಾವನ್ನು ಸುಮ್ಮನೇ ಕಾಪಿ-ಪೇಸ್ಟ್ ಮಾಡಿಟ್ಟುಕೊಳ್ಳುವುದು, ಬರೆದು ನೋಟ್ಸ್ ಮಾಡುವುದಕ್ಕಿಂತ ಎಷ್ಟೋ ಸುಲಭ. ನೇರವಾಗಿ ಡೆಸ್ಕ್‌ಟಾಪ್ ನಿಂದ ಕೂಡಾ (ಒಂದು ಪ್ಲಗ್ ಇನ್ ಅಳವಡಿಸುವ ಮೂಲಕ) ಆಯ್ದ ಪುಟಗಳನ್ನು, ಆಯ್ದ ಸಾಲುಗಳನ್ನು, ಚಿತ್ರಗಳನ್ನು ನೇರವಾಗಿ ನಿಮ್ಮ ಎವರ್‌ನೋಟ್ ಅಪ್ಲಿಕೇಶನ್‌ಗೆ ಸೇರಿಸಬಹುದು. ಅಲ್ಲದೇ ಬರೆಯುವಷ್ಟು ಸಮಯವಿಲ್ಲದಿದ್ದಾಗ, ನಿಮ್ಮ ಐಡಿಯಾಗಳನ್ನು ದ್ವನಿಮುದ್ರಿಸಿ ಕೂಡಾ ಇಟ್ಟುಕೊಳ್ಳಬಹುದು. ಮತ್ತು ನಿಮ್ಮ ನೋಟ್ಸುಗಳಿಗೆ ಟ್ಯಾಗ್ ಸೇರಿಸುವ ಮೂಲಕ ವರ್ಗೀಕರಿಸಿಟ್ಟುಕೊಳ್ಳಬಹುದು. ಸದ್ಯ, ನನ್ನ ಎವರ್‌ನೋಟ್ ಮೊಬೈಲ್ ಅಪ್ಲಿಕೇಶನ್ನಿನ್ನಲ್ಲಿ 218 ನೋಟ್ಸ್ ಇವೆ.
ಮೊಬೈಸಲ್ ನೋಟ್ಸ್:- ಇದು ಗೂಗಲ್ ಕೀಪ್‌ನಂತೆಯೇ ತಕ್ಷಣಕ್ಕೆ ನೋಟ್ಸ್ ಮಾಡಿಕೊಳ್ಳಲು ಬಳಕೆಯಾಗುತ್ತದೆಯಾದರೂ, ಸಮಯಾವಕಾಶವಿದ್ದಾಗ ಕುಳಿತು ಮಾಡಬೇಕಾದ ಕೆಲಸ (ಅಂದರೆ ಬರೆಯಬೇಕಾದ ಲೇಖನಗಳು, ಸಣ್ಣ ವಿವರಣೆಗಳು) ಗಳನ್ನು ವ್ಯವಸ್ಥಿತವಾಗಿ ಬರೆದಿಟ್ಟುಕೊಳ್ಳಬಹುದು. ಈ ಆಪ್ ಬಳಸಲು ಪ್ರಾರಂಭಿಸಿದಂದಿನಿಂದ ಐಡಿಯಾಗಳು ಶೇಖರಗೊಳ್ಳುತ್ತಿವೆ. ಮತ್ತು ಅದನ್ನು ನೋಡಿದಾಗಲೆಲ್ಲ ಬರೆಯಬೇಕು ಅನ್ನಿಸುತ್ತಿದೆ.
ಇನ್ನು, ಯಾವ ವಿಷಯದ ಕುರಿತು ಬ್ಲಾಗ್ ಬರೆಯುವುದು ಎಂಬ ಪ್ರಶ್ನೆ ಅನೇಕರಿಗೆ ಇದೆ. ನಾನು ಎಲ್ಲದರ ಕುರಿತು ಬರೆಯುತ್ತೇನೆ ಎನ್ನುತ್ತ ಒಂದಷ್ಟು ಕವಿತೆಗಳು, ಕತೆಗಳು, ಸಿನೆಮಾ ವಿಮರ್ಶೆ, ಪ್ರವಾಸಾನುಭ, ಜೀವನಾನುಭವ ಇತ್ಯಾದಿಗಳನ್ನು ಒಂದು ಬ್ಲಾಗಿನಲ್ಲಿ ತುಂಬುತ್ತೇವೆ. ಆದರೆ ಹೀಗೆ ಮಾಡಿದಾಗ ಆ ಬ್ಲಾಗಿಗೆ ಒಂದು ಐಡೆಂಟಿಟಿ ಅನ್ನುವುದು ಇರುವುದೇ ಇಲ್ಲ. ಹಾಗಾಗಿ ಬ್ಲಾಗಿಗರು ಒಂದು ಬ್ಲಾಗ್ ಪ್ರಾರಂಭಿಸುವ ಮೊದಲು, ಯಾವುದಾದರೂ ಒಂದು ಕ್ಷೇತ್ರದ ಕುರಿತು ಮಾತ್ರ ಬ್ಲಾಗ್ ಬರೆಯುತ್ತೇನೆ ಎಂದು ನಿರ್ಧಾರ ಮಾಡಬೇಕಾಗುತ್ತದೆ. ಒಂದು ಕ್ಷೇತ್ರದ ಆಯ್ಕೆ (Developing a niche) ಯಾಕೆ, ಅದರಿಂದ ಏನು ಪ್ರಯೋಜನ ಎಂಬುದರ ಕುರಿತು ಇಲ್ಲಿ ಓದಿ.