‘ಅಭೀಪ್ಸೆ’ ಕಾದಂಬರಿ – ನಾಂದಿ

ನಾಂದಿ

ಅದು ಕಲ್ಗುಡಿ ಎಂಬ ಊರಿಗೆ ಹೊಂದಿಕೊಂಡಂತಿದ್ದ ಕಾಡಿನಲ್ಲಿರುವ ಒಂಟಿ ಮನೆ. ಗಾಢ ಕತ್ತಲಿದ್ದ ಆ ಮಧ್ಯರಾತ್ರಿಯ ಹೊತ್ತಿನಲ್ಲಿ ಮನೆಯ ಮುಂದಿನ ಕಟ್ಟೆಯ ಮೇಲೆ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿದ್ದ ವಿಶ್ವಾಮಿತ್ರರು ಎದ್ದು ಮನೆಯೊಳಗೆ ನಡೆದಾಗ, ಅವರ ಸಾನಿಧ್ಯದಲ್ಲಿ ಕುಳಿತಿದ್ದ ಅವರ ಮಡದಿಗೆ ಅಚ್ಚರಿಯಾಯಿತು. ಎಂದೂ ಇಷ್ಟು ಬೇಗ ಧ್ಯಾನದಿಂದ ಎದ್ದವರಲ್ಲ. ಅವರೂ ಎದ್ದು ಒಳಗೆ ಹೋದಾಗ, ವಿಶ್ವಾಮಿತ್ರರು ಮಿಣುಕು ದೀಪ ಹಿಡಿದುಕೊಂಡು ತಮ್ಮ ಗ್ರಂಥ ಭಂಡಾರದಿಂದ ಒಂದು ಪುಟ್ಟ ಪುಸ್ತಕವನ್ನು ತೆಗೆದುಕೊಂಡು ಏನನ್ನೋ ಹುಡುಕುತ್ತಿರುವುದನ್ನು ಕಂಡರು. ಅವರ ಕೈಯಲ್ಲಿದ್ದ ದೀಪವನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಾ ಕೇಳಿದರು, “ಪುಸ್ತಕಗಳೆಲ್ಲ ನಿರ್ಜೀವ ಅನ್ನುತ್ತಿದ್ದಿರಿ. ಇವತ್ತೇನು, ಧ್ಯಾನವನ್ನು ಅರ್ಧದಲ್ಲೇ ನಿಲ್ಲಿಸಿ ಈ ಪುಸ್ತಕ ಹುಡುಕಿಕೊಂಡು ಬಂದಿರಿ?”

ವಿಶ್ವಾಮಿತ್ರರು ಮುಗುಳ್ನಕ್ಕರು. ಕಣ್ಣರಳಿಸಿಕೊಂಡು ಆ ಪುಟ್ಟ ಪುಸ್ತಕದ ಒಂದೊಂದೇ ಪುಟವನ್ನು ತಿರುಗಿಸುತ್ತ ನೋಡಿದರು. ನೋಡುತ್ತಲೇ ಹೇಳಿದರು, “ಹೌದು. ಪುಸ್ತಕ ಒಂದು ನಿರ್ಜೀವ ವಸ್ತುವೇ. ಆದರೆ, ಅದರೊಳಗಿನ ದರ್ಶನ ಜೀವನದಲ್ಲಿ ಸಂಭವಿಸಿದಾಗ ಮಾತ್ರ ಆ ಪುಸ್ತಕಕ್ಕೆ ಜೀವ ಬರುತ್ತದೆ.”

“ಅಂದರೆ ಹೇಗೆ? ಪುಸ್ತಕಗಳನ್ನು ಪಠಿಸುತ್ತ ಅವುಗಳ ದರ್ಶನ ನಮ್ಮ ಜೀವನದಲ್ಲಿ ಸಂಭವಿಸೊ ಹಾಗೆ ಮಾಡಬಹುದೇ?”

“ಹಾಗಲ್ಲ ಅನಸೂಯಾ, ಪುಸ್ತಕಗಳಿಂದ ಜೀವನ ಸಂಭವಿಸಿಲ್ಲ. ಜೀವನದಿಂದಲೇ ಪುಸ್ತಕಗಳು ಹುಟ್ಟಿದ್ದು. ಹಾಗಾಗಿ, ಪುಸ್ತಕಗಳ ಕಂಠಪಾಠದಿಂದ ಆಗಲೀ, ಅವುಗಳಲ್ಲಿ ಇರೋ ನಿಯಮಗಳನ್ನು ಪಾಲನೆ ಮಾಡೋದ್ರಿಂದಾಗಲೀ ಸತ್ಯದ ದರ್ಶನ ಆಗುವುದಿಲ್ಲ. ಆದರೆ ಸತ್ಯದ ದರ್ಶನ ಆದಾಗ, ಆ ಪುಸ್ತಕಗಳ ಜೀವ ಮಿಸುಕುತ್ತದೆ.”

ಅಷ್ಟು ಹೇಳಿದ ವಿಶ್ವಾಮಿತ್ರರು, ಆ ಪುಸ್ತಕದಿಂದ ಒಂದು ಶ್ಲೋಕವನ್ನು ಓದಿದರು:

“ಸ ಯ ಏಷೋ ಅಣಿಮೈತತ್ ಆತ್ಮ್ಯಮಿದಂ ಸರ್ವಂ ತತ್ ಸತ್ಯಂ ಸ ಆತ್ಮಾ ತತ್ತ್ವಮಸಿ ಶ್ವೇತಕೇತೋ..”

(ಯಾವುದು ಸೂಕ್ಷ್ಮತಮವಾದ ಈ ಜಗನ್ಮೂಲವೋ ಅದರಿಂದ ಜಗತ್ತೆಲ್ಲವೂ ಆತ್ಮವಂತವಾಗಿದೆ. ಅದು ಸತ್ಯವು. ಅದು ಆತ್ಮನು. ಓ ಶ್ವೇತಕೇತು, ಅದು ನೀನಾಗಿರುವೆ.)

“ನನಗೆ ಅರ್ಥ ಆಗುತ್ತಿಲ್ಲ”, ಅವರ ಮಡದಿ ಅನುಮಾನಿಸುತ್ತಾ ಹೇಳಿದರು. “ಆದರೆ, ಇವತ್ತು ಯಾಕೆ ಧ್ಯಾನದ ಅರ್ಧದಲ್ಲೇ ಎದ್ದು ಬಂದು ಈ ಪುಸ್ತಕ ನೋಡುತ್ತಿದ್ದೀರಿ?”

“ಯಾಕೆ ಅಂದರೆ…. ಈ ಪುಸ್ತಕದಲ್ಲಿರುವ ಸತ್ಯ, ಜೀವ ಪಡೆದುಕೊಳ್ಳುವುದಕ್ಕಾಗಿ ಚಡಪಡಿಸುತ್ತಿದೆ.”

Leave a Reply

Your email address will not be published. Required fields are marked *