ಶಂಕರದೇವ ಮತ್ತು ಅಸ್ಸಾಮಿನ ಭಕ್ತಿ ಕ್ರಾಂತಿ

ಯಾವುದೇ ಧಾರ್ಮಿಕ ಪಂಥವಾಗಲಿ, ಅದು ಕಾಲಕ್ರಮೇಣ ತನ್ನ ಮೂಲ ಸತ್ವವನ್ನು ಕಳೆದುಕೊಂಡು ಕರ್ಮಠವಾಗುತ್ತ ಹೋಗುತ್ತದೆ.

ಧಾರ್ಮಿಕ ಪಂಥಗಳು ಭಕ್ತ ಮತ್ತು ಭಗವಂತನ ನಡುವೆ ಬಂಧವನ್ನು ಹುಟ್ಟುಹಾಕಲು ಮಾರ್ಗಗಳಾಗಿವೆ. ಪ್ರತಿಯೊಂದು ಪಂಥವೂ ತನ್ನದೇ ಆದ ಮಾರ್ಗ ಮತ್ತು ಆಚರಣೆಗಳನ್ನು ಅನುಸರಿಸುತ್ತದೆ. ಕರ್ಮಠವಾಗುವುದು ಎಂದರೆ, ಭಕ್ತ-ಭಗವಂತನ ಬಂಧಕ್ಕಿಂತ ಮಾರ್ಗಗಳು ಮತ್ತು ಆಚರಣೆಗಳೇ ಪ್ರಮುಖವಾಗಿ ಹೋಗುವುದು. ಹೀಗಾದಾಗ, ಮೂಲ ಗುರಿ ಮರೆತುಹೋಗುತ್ತದೆ.

ಆಗಾಗ, ಆ ಕರ್ಮಠತೆಯನ್ನು ಕಳೆಯುವ ಮತ್ತು ಹೊಸ ಮಾರ್ಗ ಸೂಚಿಸುವ ಧಾರ್ಮಿಕ ಮಾರ್ಗದರ್ಶಿಗಳು ಎಲ್ಲಾ ಧರ್ಮದಲ್ಲಿಯೂ ಬೇಕು.

ಮಧ್ಯಕಾಲೀನ ಯುಗದಲ್ಲಿ ಅಸ್ಸಾಮಿನಲ್ಲಿ ಅಂತಹ ಒಬ್ಬ ಸಂತರು ಆಗಿಹೋದರು. ಅವರು ಮಾಡಿದ ಕಾರ್ಯ ಇಂದಿನವರೆಗೂ ಇಡೀ ಅಸ್ಸಾಮಿನ ಜನತೆಯ ಆಧ್ಯಾತ್ಮಿಕ ಮತ್ತು ಸಾಮಾಜಿಕ ಜೀವನದಲ್ಲಿ ಹಾಸುಹೊಕ್ಕಾಗಿದೆ. ಆ ಸಂತರ ಹೆಸರು ಶಂಕರದೇವ.

ಶಂಕರದೇವ (1449-1569) ಹುಟ್ಟಿದ್ದು ಮಧ್ಯ ಅಸ್ಸಾಮಿನ ನಾಗಾಂವ್ ಜಿಲ್ಲೆಯ ಬೊರ್ಡೋವಾ ಎಂಬ ಹಳ್ಳಿಯಲ್ಲಿ, ಶಿರೋಮಣಿ ಎಂದು ಕರೆಯಲಾಗುವ ದಂಡನಾಯಕ ಮತ್ತು ಜಮೀನುದಾರಿ ಕಾಯಸ್ಥ ಮನೆತನದಲ್ಲಿ. ಹದಿನೈದನೇ ಶತಮಾನದಲ್ಲಿ ಅಸ್ಸಾಮಿನಲ್ಲಿ ಆಗ ಶಾಕ್ತ ಪಂಥ ಬಹಳ ಪ್ರಚಲಿತವಾಗಿತ್ತು. ಶಂಕರದೇವ ಅವರ ಕುಟುಂಬ ಕೂಡಾ ಶಾಕ್ತ ಪಂಥವನ್ನೇ ಅನುಸರಿಸುತ್ತಿತ್ತು.

ಶಾಕ್ತ ಪಂಥ ಎಂದರೆ ಶಿವ ಮತ್ತು ಶಕ್ತಿಯರನ್ನು, ಮತ್ತು ದುರ್ಗೆಯನ್ನು ಮುಖ್ಯ ದೈವವಾಗಿ ಪೂಜಿಸುವ ಪಂಥ. ಪುರಾತನ ಕಾಲದಿಂದ ಶಾಕ್ತ ಪಂಥ ಬಹಳ ಗಾಢವಾಗಿ ಬೇರೂರಿತ್ತು. ಎಷ್ಟರಮಟ್ಟಿಗೆ ಅಂದರೆ, ಶಾಕ್ತ ಪಂಥದವರು ನರಬಲಿಯನ್ನು ಕೂಡಾ ಮಾಡಲಾಗುತ್ತಿತ್ತು.

ಇಂತಹ ಸಂದರ್ಭದಲ್ಲಿ, ದಕ್ಷಿಣದಿಂದ ಬೀಸಿದ ನವ-ಭಕ್ತಿ ಪಂಥದ ಗಾಳಿ ಅಸ್ಸಾಮಿನಂತಹ ಈಶಾನ್ಯರಾಜ್ಯವನ್ನು ಕೂಡಾ ಪ್ರಭಾವಿಸುವ ಕಾಲ ಬಂದಿತ್ತು.

ಶಂಕರದೇವ ಏಳು ವರ್ಷ ವಯಸ್ಸಿನಲ್ಲಿದ್ದಾಗ ತಂದೆತಾಯಿ ಇಬ್ಬರನ್ನೂ ಕಳೆದುಕೊಳ್ಳುತ್ತಾರೆ. ನಂತರ ಅವರ ಅಜ್ಜಿಯ ಜೊತೆ ಬೆಳೆಯುತ್ತಾರೆ. ನಂತರ, ಹನ್ನೆರಡನೇ ವಯಸ್ಸಿನಿಂದಲೇ ಕವಿತೆ ಬರೆಯುವುದನ್ನು ಪ್ರಾರಂಭಿಸುತ್ತಾರೆ. ಛತ್ರಸಾಲ್ ಎಂದು ಕರೆಯಲ್ಪಡುವ ಶಾಲೆಯಲ್ಲಿ ಕಲಿಯುವ ಅವರು ಚಿಕ್ಕಂದಿನಿಂದಲೇ ಯೋಗಾಭ್ಯಾಸ ಪ್ರಾರಂಭಿಸಿ ನಿರಂತರವಾಗಿ ಅಭ್ಯಾಸ ಮಾಡುತ್ತಾರೆ. ಆದ್ದರಿಂದಲೇ ಇರಬಹುದು ಅವರು ನೂರಾ ಇಪ್ಪತ್ತು ವರ್ಷ ಬದುಕಿದ್ದರು.

ಶಿಕ್ಷಣದ ನಂತರ ತಂದೆಯ ಸ್ಥಾನವಾಗಿದ್ದ ಶಿರೋಮಣಿ ಭೂಯಾನ್ (ಭೂಮಾಲಿಕರ ನಾಯಕ) ಜವಾಬ್ದಾರಿಯನ್ನು ವಹಿಸಿಕೊಳ್ಳಲು ತಮ್ಮ ಊರಿಗೆ ಹಿಂದಿರುಗುತ್ತಾರೆ. ಇಪ್ಪತ್ತರ ವಯಸ್ಸಿನಲ್ಲಿ ಅವರಿಗೆ ಸೂರ್ಯವತಿ ಎಂಬ ಕನ್ಯೆಯೊಂದಿಗೆ ಮದುವೆಯಾಗಿ ಮನು ಎಂಬ ಮಗಳು ಜನಿಸುತ್ತಾಳೆ. ಮಗಳು ಜನಿಸಿದ ಒಂಬತ್ತು ತಿಂಗಳಿಗೆ ಪತ್ನಿಯ ಮರಣವಾಗುತ್ತದೆ. ಅನಂತರ ಅವರು ಮಗಳನ್ನು ಬೆಳೆಸುವ ಜವಾಬ್ದಾರಿಯನ್ನು ಹೊರುತ್ತಾರೆ.

ಆದರೆ, ತಮ್ಮ ಓದಿನ ಸಮಯದಿಂದಲೂ ಅವರಿಗೆ ಇದ್ದ ತೀರ್ಥಯಾತ್ರೆಯ ಹಂಬಲ ಹಾಗೇ ಉಳಿದಿರುತ್ತದೆ. ಮಗಳು ಯುಕ್ತ ವಯಸ್ಸಿನವಳಾದಾಗ ಅವಳನ್ನು ಮದುವೆ ಮಾಡಿ, ಅಳಿಯ ಹರಿಗೆ ಕುಟುಂಬದ ಜವಾಬ್ದಾರಿಯನ್ನು ಕೊಟ್ಟು, ಹನ್ನೆರೆಡು ವರ್ಷಗಳ ದೀರ್ಘ ತೀರ್ಥಯಾತ್ರೆಗೆ ಹೊರಟುಬಿಡುತ್ತಾರೆ.

ಈ ತೀರ್ಥಯಾತ್ರೆಯನ್ನು ಪ್ರಾರಂಭಿಸಿದಾಗ ಅವರಿಗೆ ಮೂವತ್ತೆರೆಡು ವರ್ಷ. ತಮ್ಮ ಜೊತೆಗೆ ಹದಿನೇಳು ಜನರನ್ನು ಕೂಡಿಸಿಕೊಂಡು ಅವರು ಪುರಿ, ಮಥುರೆ, ದ್ವಾರಕೆ, ವೃಂದಾವನ, ಗಯಾ, ರಾಮೇಶ್ವರಂ, ಅಯೋಧ್ಯಾ, ಸೀತಾಕುಂಡ ಮತ್ತು ಇತರ ಪ್ರಮುಖ ವೈಷ್ಣವ ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡುತ್ತಾರೆ. ಈ ಮಧ್ಯೆ ಪುರಿ ಜಗನ್ನಾಥ ಕ್ಷೇತ್ರದಲ್ಲಿ ಕೆಲವು ವರ್ಷಗಳವರೆಗೆ ವಾಸವಿರುತ್ತಾರೆ. ಈ ಹನ್ನೆರಡು ವರ್ಷಗಳಲ್ಲಿ ಆಗ ಭಾರತದಾದ್ಯಂತ ಬೆಳಗುತ್ತಿದ್ದ ಹೊಸ ಭಕ್ತಿ ಪರಂಪರೆ ಅವರ ಮೇಲೆ ಪ್ರಭಾವ ಬೀರುತ್ತದೆ. ಅವರು ಈ ಅವಧಿಯಲ್ಲಿ ತಮ್ಮ ಕಾವ್ಯ ಕೃಷಿಯನ್ನು ಮುಂದುವರೆಸುತ್ತಾರೆ ಮತ್ತು ಬೃಜಾವಳಿ ಭಾಷೆಯಲ್ಲಿ ಭಕ್ತಿಗೀತೆಗಳ ರಚನೆಯನ್ನು ಪ್ರಾರಂಭಿಸುತ್ತಾರೆ.

ಹನ್ನೆರೆಡು ವರ್ಷಗಳ ನಂತರ ಊರಿಗೆ ಹಿಂದಿರುಗಿದಾಗ ಶಿರೋಮಣಿ ಅಧಿಕಾರ ಸ್ಥಾನ ಅವರಿಗಾಗಿ ಕಾದಿರುತ್ತದೆ. ಆದರೆ, ಆ ಅಧಿಕಾರವನ್ನು ತಿರಸ್ಕರಿಸಿ, ಅವರು ಬೋರ್ಡೋವಾಗೆ ಹಿಂತಿರುಗಿ ಅಲ್ಲಿ ಒಂದು ದೇವಗೃಹವನ್ನು ಕಟ್ಟಿ ಅಲ್ಲ ತಮ್ಮನ್ನು ಭೇಟಿ ಮಾಡಲು ಬರುವ ಜನರಿಗೆ ಭಕ್ತಿ ಬೋಧನೆಯನ್ನು ಮಾಡಲು ಪ್ರಾರಂಭಿಸುತ್ತಾರೆ.

ಏಕಶರಣ ಧರ್ಮ ಮತ್ತು ಸಾಮಾಜಿಕ ಕ್ರಾಂತಿ

ಮಿಥಿಲೆಯ ಜಗದೀಶ ಮಿಶ್ರಾ ಎಂಬುವವರು ಬೋಧಿಸುವ ಭಾಗವತ ಪುರಾಣದ ವಿವರಣೆ ಶಂಕರದೇವ ಅವರ ಮನಸ್ಸಿನ ಮೇಲೆ ಗಾಢ ಪ್ರಭಾವವನ್ನು ಬೀರುತ್ತದೆ. ಅವರಿಗೆ ಭಾಗವತಕ್ಕಿಂತ ಇನ್ನೊಂದಿಲ್ಲ, ಕೃಷ್ಣನೇ ಏಕೈಕ ದೇವ, ದೇವರ ನಾಮವೇ ಏಕೈಕ ಧರ್ಮ ಎನ್ನಿಸುತ್ತದೆ. ಇದರ ಆಧಾರದ ಮೇಲೆ ಅವರು ಏಕಸರಣ ಎಂಬ ಧರ್ಮವನ್ನು ಸ್ಥಾಪಿಸುತ್ತಾರೆ. ಅನಂತರ ಅವರು ಕೀರ್ತನ ಘೋಷ ರಚನೆಯನ್ನು ಆರಂಭಿಸುತ್ತಾರೆ.

ಏಕಶರಣ ಎಂದರೆ, ಏಕದೈವಕ್ಕೆ ಶರಣಾಗುವುದು ಎಂದು ಅರ್ಥ. ಶಂಕರದೇವ ಕೃಷ್ಣನೇ ಪರಮದೈವ, ಕೃಷ್ಣಭಕ್ತಿಯೇ ಪರಮ ಪಥ ಎಂದು ನಂಬಿ ಬೋಧಿಸಿದರು.

ಏಕಶರಣ ಧರ್ಮದ ಮೂಲ ಸಿದ್ಧಾಂತ:

ಶ್ರೀಮಂತ ಶಂಕರದೇವ ಅವರು ಜನರಿಗೆ ತಮ್ಮ ಏಕಶರಣ ಧರ್ಮಕ್ಕೆ ದೀಕ್ಷೆಯನ್ನು ನೀಡುವ ಕಾರ್ಯ ಒಂದು ಮಹಾನ್ ಸಾಮಾಜಿಕ ಕ್ರಾಂತಿ ಕೂಡಾ ಆಯಿತು. ಏಕಶರಣ ಧರ್ಮದ ಧಾರ್ಮಿಕ ಮತ್ತು ಸಾಮಾಜಿಕ ಪರಿಣಾಮಗಳು:

 1. ಶಂಕರದೇವ ಅವರು ವೈಷ್ಣವ ಪಂಥವನ್ನು ಬೋಧಿಸಲು ಪ್ರಾರಂಭಿಸಿದ ಸಮಯದಲ್ಲಿ ಶಾಕ್ತ ಪಂಥ ಬಹಳ ದೀರ್ಘ ಕಾಲದಿಂದ ಜನಜೀವನದ ಭಾಗವಾಗಿತ್ತು. ಶಾಕ್ತ ಪಂಥದಲ್ಲಿ ಪುರೋಹಿತರು ಬಹಳ ಶಕ್ತಿಶಾಲಿಯಾಗಿದ್ದರು. ಅವರು ಅಧಿಕಾರಶಾಹಿಗಳನ್ನು ಮೆಚ್ಚಿಸಲು ಮತ್ತು ಅವರನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಅವರು ಪೂಜಾವಿಧಾನಗಳನ್ನು ಬಹಳ ಕಠಿಣಗೊಳಿಸಿದ್ದರು. ಅಲ್ಲದೇ ಸಾಮಾನ್ಯ ಜನರ ಮೇಲೆ ಅವರ ದಬ್ಬಾಳಿಕೆ ಮಿತಿ ಮೀರಿತ್ತು. ಅವರನ್ನು ಕಂಡರೆ ಜನ ಭಯಪಡುತ್ತಿದ್ದರು.

  ನವವೈಷ್ಣವ ಭಕ್ತಿ ಭಗವಂತ ಮತ್ತು ಭಕ್ತನ ನಡುವೆ ಪುರೋಹಿತರ ಅಗತ್ಯವಿಲ್ಲ ಎಂಬುದನ್ನು ಸಾರಿದರು. ಅವರು, ಏಕಶರಣ ದೀಕ್ಷೆ ನೀಡುವ ಮೂಲಕ ಜನರಿಗೆ ನೇರವಾಗಿ ಭಗವಂತನೊಂದಿಗೆ ಬಂಧವನ್ನು ನಿರ್ಮಿಸಿದರು.
 2. ಶಂಕರದೇವ ತಮ್ಮ ಧಾರ್ಮಿಕ ಬೋಧನೆಯನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಭಾರತದ ಇನ್ನಿತರ ಭಾಗಗಳಲ್ಲಿ ಇರುವಂತೆ ವರ್ಣವ್ಯವಸ್ಥೆ ಪ್ರಚಲಿತವಿತ್ತು. ಶಂಕರದೇವ ಅವರು ಈ ವ್ಯವಸ್ಥೆಯನ್ನು ಧಿಕ್ಕರಿಸಿ ಎಲ್ಲಾ ಜಾತಿ-ವರ್ಗದವರಿಗೂ ವೈಷ್ಣವಪಂಥಕ್ಕೆ ದೀಕ್ಷೆ ನೀಡಿದರು.
 3. ಶಂಕರದೇವ ಬೃಹತ್ ದೇವಾಲಯಗಳ ಪರ್ಯಾಯವಾಗಿ”ನಾಮ್‌ಘರ್’ ಎಂದು ಕರೆಯಲ್ಪಡುವ ಕೀರ್ತನಗೃಹಗಳನ್ನು ನಿರ್ಮಿಸಿದರು. ಈ ಕೀರ್ತನಗೃಹಗಳಲ್ಲಿ ಮೂರ್ತಿಗಳ ಬದಲಾಗಿ ಭಾಗವತವನ್ನು ಇರಿಸಲಾಗಿರುತ್ತದೆ. ಅಲ್ಲಿ ಯಾವುದೇ ಮಂತ್ರೋಚ್ಚಾರಣೆ ಪೂಜೆಗಳ ಪ್ರಕ್ರಿಯೆ ಇರುವುದಿಲ್ಲ.
 4. ಶಾಕ್ತ ಪಂಥದಲ್ಲಿ ಭಗವದ್-ಪ್ರೀತ್ಯರ್ಥವಾಗಿ ಮಾಡುವ ಆಚರಣೆಗಳು ದೀರ್ಘ ಮತ್ತು ಅತಿ ಕಠಿಣವಾಗಿದ್ದವು. ದಾಸ್ಯಭಕ್ತಿಯನ್ನೇ ಪ್ರಧಾನವಾಗಿಸಿಕೊಂಡ ಶಂಕರದೇವರ ಏಕಶರಣ ಧರ್ಮ ಕೇವಲ ಭಗವನ್ನಾಮ ಸ್ಮರಣೆ ಮತ್ತು ಕೀರ್ತನೆ ಸಾಕು ಎಂದು ಬೋಧಿಸಿತು.

ಪ್ರಾರಂಭದಲ್ಲಿ ಬಹಳ ಉತ್ಸುಕತೆಯಿಂದ ಶಂಕರದೇವ ಏಕಶರಣ ಧರ್ಮಕ್ಕೆ ಜನರಿಗೆ ದೀಕ್ಷೆಯನ್ನು ನೀಡತೊಡಗುತ್ತಾರೆ. ಜನರು ಕೂಡಾ ಬಹಳ ಉತ್ಸುಕತೆಯಿಂದ ಹೊಸ ಧರ್ಮದ ಆಚಾರಗಳನ್ನು ಪಾಲಿಸಲು ಆರಂಭಿಸುತ್ತಾರೆ.

ಈ ಮಧ್ಯೆ ಶಂಕರದೇವ ಅವರನ್ನು ಅವರ ಪ್ರಮುಖ ಶಿಷ್ಯನಾದ ಮಾಧವದೇವ ಭೇಟಿ ಮಾಡುತ್ತಾರೆ. ಶಕ್ತಿ ದೇವತೆಯ ಆರಾಧಕರಾಗಿದ್ದಾ ಮಾಧವದೇವ ಅವರು ಶಂಕರದೇವರೊಡನೆ ದೀರ್ಘ ಚರ್ಚೆಯನ್ನೇ ನಡೆಸುತ್ತಾರೆ. ಈ ಚರ್ಚೆ ಮತ್ತು ನಂತರದಲ್ಲಿ ಮಾಧವದೇವ ವೈಷ್ಣವ ಧರ್ಮ ದೀಕ್ಷೆಯನ್ನು ಸ್ವೀಕರಿಸುವ ಘಟನೆ ಅಸ್ಸಾಂ ನ ಆಧ್ಯಾತ್ಮಿಕ ದಿಕ್ಕು ಶಾಕ್ತ ಪರಂಪರೆಯಿಂದ ನವವೈಷ್ಣವ ಪರಂಪರೆಯ ಕಡೆಗೆ ಹೊರಳುವಲ್ಲಿ ಈ ಚರ್ಚೆ ಮಹತ್ವವಾದದ್ದು.

ಶಂಕರದೇವ ಅವರ ಏಕಸರಣ ಧರ್ಮಕ್ಕೆ ಮಾರು ಹೋದ ಮಾಧವದೇವ ತನ್ನ ಹೊಸ ಗುರು ಮತ್ತು ಧರ್ಮವನ್ನು ಬಹಳ ಶ್ರದ್ಧೆಯಿಂದ ಪಾಲಿಸುತ್ತಾರೆ. ಈಗಲೂ ಅಸ್ಸಾಮಿನಲ್ಲಿ ಶಂಕರದೇವ ಮತ್ತು ಮಾಧವದೇವರನ್ನು ಏಕರೂಪದಲ್ಲಿ ನೋಡುತ್ತಾರೆ.

ಆದರೆ ಪೂರ್ವ ಅಸ್ಸಾಮಿನ ಅಹೋಂ ರಾಜರು ಶಾಕ್ತ ಧರ್ಮದ ಪೂಜಕರಾಗಿದ್ದು, ಅವರ ಪುರೋಹಿತರು ಕೂಡಾ ಶಾಕ್ತ ಸಂಪ್ರದಾಯದವರಾದ್ದರಿಂದ ಶಂಕರದೇವರನ್ನು ಸಂಪ್ರದಾಯ ವಿರೋಧಿ ಎಂದು ದೂಷಿಸುತ್ತಾರೆ.

ಈ ಮಧ್ಯೆ ಅಸ್ಸಾಮಿನಲ್ಲಿ ಅನೇಕ ರಾಜಕೀಯ ಪಲ್ಲಟಗಳು ಉಂಟಾಗುತ್ತವೆ. ಅದರಿಂದಾಗಿ ಶಂಕರದೇವ ತಮ್ಮ ಶಿಷ್ಯವೃಂದ ಮತ್ತು ಕುಟುಂಬದೊಡನೆ ಪಶ್ಚಿಮ ಅಸ್ಸಾಂ ಭಾಗಕ್ಕೆ ಪಲಾಯನ ಮಾಡಬೇಕಾಗಿಬರುತ್ತದೆ. ದೀರ್ಘಕಾಲದ ಪ್ರಯಾಣದ ನಂತರ ಪಟಬೌಸಿ ಎಂಬ ಸ್ಥಳದಲ್ಲಿ ಬಂದು ಉಳಿಯುತ್ತಾರೆ. ಅಲ್ಲಿ ಒಂದು ಕೀರ್ತನ್‌ಘರ್ ಪ್ರಾರಂಭಿಸಿ ಜನರಿಗೆ ತಮ್ಮ ಹೊಸ ಧರ್ಮದ ಬೋಧನೆ ಮತ್ತು ದೀಕ್ಷೆ ನೀಡಲು ಪ್ರಾರಂಭಿಸುತ್ತಾರೆ.

ಈ ಸಂದರ್ಭದಲ್ಲಿ, ಶಂಕರದೇವ ಹೊಸ ಧರ್ಮದ ಬೋಧನೆ ಮಾಡಿ ಜನರ ಮನಸ್ಸನ್ನು ಕೆಡಿಸುತ್ತಿದ್ದಾನೆ ಎಂಬ ಆರೋಪ ಕೇಳಿಬರುತ್ತದೆ. ಆಗ ಕೋಚ್ ರಾಜ ನರ ನಾರಾಯಣ ಶಂಕರದೇವರನ್ನು ಬಂಧಿಸಬೇಕೆಂದು ಆಜ್ಞೆ ಮಾಡುತ್ತಾನೆ. ಆದರೆ ಕೋಚ್ ಸೈನ್ಯದ ಜನರಲ್ ಆಗಿದ್ದ ಹಾಗೂ ಶಂಕರದೇವರ ದೂರದ ಸಂಬಂಧಿಯೂ ಆಗಿದ್ದ ಚಿಲರಾಯಿ ಎಂಬಾತ ಒಮ್ಮೆ ಶಂಕರದೇವ ಅವರೊಡನೆ ಮಾತನಾಡಬೇಕೆಂದು ಕೇಳಿಕೊಳ್ಳುತ್ತಾನೇ.

ರಾಜನ ಆಜ್ಞೆಯಂತೆ ಅರಮನೆಗೆ ಬಂದ ಶಂಕರದೇವ ಅಲ್ಲಿರುವ ರಾಜ ಪಂಡಿತರು ಮಾಡುವ ಆರೋಪಗಳಿಗೆಲ್ಲ ಉತ್ತರ ನೀಡುತ್ತಾರೆ. ಅನಂತರ ರಾಜ ಅವರನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿ ಅವರಿಗೆ ಆಸ್ಥಾನದಲ್ಲಿ ಪಂಡಿತ ಸ್ಥಾನ ನೀಡುತ್ತಾನೆ, ಮತ್ತು ಅವರ ಧಾರ್ಮಿಕ ಬೋಧನೆಗಳಿಗೆ ಅನುವು ಮಾಡಿಕೊಡುತ್ತಾನೆ. ನಂತರ ಶಂಕರದೇವ ಆಸ್ಥಾನದಲ್ಲಿದ್ದುಕೊಂಡು ತಮ್ಮ ಕಾರ್ಯಗಳನ್ನು ಮುಂದುವರೆಸುತ್ತಾರೆ. ಅವರ ಕಾರ್ಯಕ್ಕೆ ಚಿಲರಾಯಿ ನಿರಂತರ ಬೆಂಬಲ ನೀಡುತ್ತಾನೆ.

ಕೊನೆಯಲ್ಲಿ ಶಂಕರದೇವ ಅವರು ತಮ್ಮ ಶಿಷ್ಯಂದಿರಾದ ಮಾಧವದೇವ ಮತ್ತು ಠಾಕೂರ್ ಆಟಾ ಅವರಿಗೆ ತಮ್ಮ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಸೂಚಿಸಿ ಪಟಬೌಸಿಯನ್ನು ಬಿಡುತ್ತಾರೆ. ಮುಂದೆ ಅವರು ಕೋಚ್‌ಬೆಹಾರ್‌ನ ಬೆಲಾದೊಂಗಾ ಎಂಬಲ್ಲಿ ಉಳಿಯುತ್ತಾರೆ. ಅಲ್ಲಿ ತಮ್ಮ ೧೨೦ನೇ ವಯಸ್ಸಿನಲ್ಲಿ ಈ ಮಹಾ ಸಂತರು ಭಗವದ್ಗತಿಯನ್ನು ಹೊಂದುತ್ತಾರೆ.್

ಸತ್ರಗಳು ಮತ್ತು ಕೀರ್ತನಗೃಹಗಳು

ಶಂಕರದೇವ ಅವರು ತಮ್ಮ ಜನ್ಮಸ್ಥಳವಾದ ಬಾರ್ಡೋವಾದಲ್ಲಿ 1494 ರಲ್ಲಿ ಮೊದಲ ಸತ್ರ ಎಂದು ಕರೆಯಲಾಗುವ ವೈಷ್ಣವ ಮಠಗಳನ್ನು ಸ್ಥಾಪಿಸಿದರು.

ನಂತರ ಅವರು ಅಸ್ಸಾಂ ರಾಜ್ಯಾದ್ಯಂತ ಸಂಚಾರ ಮಾಡಿ ಬ್ರಹ್ಮಪುತ್ರಾ ಕಣಿವೆಯುದ್ದಕ್ಕೂ ಅನೇಕ ಸತ್ರಗಳನ್ನು ಸ್ಥಾಪಿಸಿದರು. ಮುಂದೆ ಅವರ ಶಿಷ್ಯಂದಿರಾದ ಮಾಧವದೇವ ಮತ್ತು ದಾಮೋದರ ದೇವ ಸತ್ರಗಳನ್ನು ಸಾಂಘಿಕ ರೂಪ ನೀಡಿದರು. ಇವುಗಳಿಗೆ ಆ ಕಾಲದಲ್ಲಿ ರಾಜಧನ ಸಹಾಯ ಕೂಡಾ ದೊರೆಯುತ್ತಿತ್ತು.

ಶಂಕರದೇವ ಅವರ ಮರಣದ ನಂತರ ದಾಮೋದರ ದೇವ ಮಹಾಪುರುಷೀಯ ಪಂಥವನ್ನು ಬಿಟ್ಟು ದಾಮೋದರೀಯ ಪಂಥ ಎಂಬ ಉಪ-ಪಂಥವನ್ನು ಸ್ಥಾಪಿಸಿದರು. ಕಾಲಾಂತರದಲ್ಲಿ ಮೂಲ ಪಂಥದಿಂದ ಮತ್ತೆ ಮೂರು ಪಂಥಗಳು ರಚನೆಗೊಂಡವು. ಅವುಗಳನ್ನು ಸನ್ನತಿ (ಬ್ರಹ್ಮ, ಪುರುಷ, ಕಾಲ, ನಿಕಾ) ಎಂದು ಕರೆಯಲಾಗುತ್ತದೆ.

ಅಂದಿನಿಂದ ಈವರೆಗೆ ಸತ್ರಗಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಾಗಿ ರಾಜ್ಯಾದ್ಯಂತ ವ್ಯಾಪಿಸಿದ್ದು, ಸುಮಾರು 900 ಸತ್ರಗಳು ಅಸ್ಸಾಮಿನಲ್ಲಿವೆ. ಪ್ರತಿಯೊಂದು ಸತ್ರಕ್ಕೂ ಒಬ್ಬ ಗುರು ಇದ್ದು, ಅವರನ್ನು ಸತ್ರಾಧಿಕಾರಿ ಎಂದು ಕರೆಯುತ್ತಾರೆ. ಈ ಸತ್ರಗಳು ಹತ್ತಾರು ಎಕರೆಗಳಷ್ಟು ಜಾಗದಲ್ಲಿರುವ ಮಠಗಳಾಗಿದ್ದು, ಸತ್ರಗಳಲ್ಲಿ ಕೇಂದ್ರಭಾಗವಾಗಿ ಭಜನೆ ಕೀರ್ತನೆಗಳಿಗಾಗಿ ನಾಮ್‌ಘರ್ ಎಂದು ಕರೆಯಲಾಗುವ ಕೀರ್ತನಗೃಹಗಳಿರುತ್ತವೆ. ಇವುಗಳ ಗರ್ಭಗುಡಿಯನ್ನು ಮಣಿಕೂಟ ಎಂದು ಕರೆಯಲಾಗುತ್ತಿದ್ದು, ಅಲ್ಲಿ ಭಾಗವತವನ್ನು ಇಟ್ಟಿರಲಾಗುತ್ತದೆ.

ಈ ನಾಮ್‌ಘರ್‌ಗಳಲ್ಲಿ ಜಾತಿಪಂಥಗಳ ಬೇಧವಿಲ್ಲದೇ ಯಾರು ಬೇಕಾದರೂ ಕೀರ್ತನೆಗಳನ್ನು ಹಾಡಿಸಬಹುದಾಗಿದೆ ಮತ್ತು ಪ್ರಸಾದ ಹಂಚಬಹುದಾಗಿದೆ.

ಸತ್ರಗಳು ಕೇವಲ ಆಧ್ಯಾತ್ಮಿಕ ಮಾರ್ಗದರ್ಶನದ ಜೊತೆಗೆ, ಇವುಗಳು ಕಲೆ ಮತ್ತು ಸಾಂಸ್ಕೃತಿಕ ಜೀವನಕ್ಕೆ ಕೂಡಾ ಬೆಂಬಲ ನೀಡುತ್ತಿದ್ದು, ಇವು ವಸತಿ ಶಾಲೆಗಳಂತೆ ಕೂಡಾ ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ವಿದ್ಯಾರ್ಥಿಗಳು ಸತ್ರೀಯ ಸಂಗೀತ, ನರ್ತನ, ಚಿತ್ರಕಲೆ, ಕೆತ್ತನೆ ಕಲೆ ಮುಂತಾದವುಗಳನ್ನು ಕಲಿಯುತ್ತಾರೆ. ರಾಜ್ಯದ್ಯಂತ ಸತ್ರಗಳಲ್ಲಿ ಶಾಲೆ ಕಾಲೇಜುಗಳು ಕೂಡಾ ಇವೆ.

ಇದಲ್ಲದೇ ಸತ್ರಗಳ ಹೊರತಾಗಿಯೂ ಊರಿಗೊಂದರಂತೆ, ಕೆಲವು ಕಡೆ ಮನೆಗೊಂದರಂತೆ ನಾಮ್‌ಘರ್‌ಗಳಿವೆ. ಈ ನಾಮ್‌ಘರ್ ಅಥವಾ ಸತ್ರಗಳಲ್ಲಿ ಯಾವುದೇ ಮೂರ್ತಿಗಳ ಬದಲಾಗಿ ಭಾಗವತ ಗ್ರಂಥವಿರುತ್ತದೆ.

ಈ ಎರಡು ಆಧ್ಯಾತ್ಮಿಕ ಕೇಂದ್ರಗಳು ಇಡೀ ಅಸ್ಸಾಮಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಜನಜೀವನದೊಂದಿಗೆ ಗಾಢವಾಗಿ ತಳುಕು ಹಾಕಿಕೊಂಡಿವೆ.

ಪ್ರಾಚೀನ ಶಾಕ್ತ ಪರಂಪರೆಯಿಂದ ನವ ವೈಷ್ಣವ ಪರಂಪರೆಯೆಡೆಗೆ ಇಡೀ ಅಸ್ಸಾಂ ನಡೆಗೆ ಈ ಸತ್ರಗಳ ಪಾತ್ರ ದೊಡ್ಡದು. ಇವುಗಳು ಜನರನ್ನು ಜಾತಿಮತಗಳ ತಾರತಮ್ಯಗಳಿಂದ ಬಿಡಿಸಿ ಸಮಾಜದಲ್ಲಿ ಸಮಾನತೆಯನ್ನು ಸೃಷ್ಠಿಸಿದವು.

ಏಕಸರಣ ಧರ್ಮ ಪಥದಲ್ಲಿ ಸಾಗುವವರಿಗೆ ಸತ್ರಗಳಲ್ಲಿ ಸತ್ರಾಧಿಕಾರಿಗಳು ದೀಕ್ಷೆಯನ್ನು ನೀಡುತ್ತಾರೆ. ಅನಂತರದಲ್ಲಿ, ಮತ್ತೆ ಯಾವುದೇ ಪಂಡಿತ ಪುರೋಹಿತರ ಅಗತ್ಯ ಉಳಿಯುವುದಿಲ್ಲ. ಭಕ್ತ ನೇರವಾಗಿ ಭಗವಂತನೊಂದಿಗೆ ಜೀವಿಸಲು ಪ್ರಾರಂಭಿಸುತ್ತಾನೆ.

ಹೀಗೆ, ಶಂಕರದೇವ ಮತ್ತು ಅವರ ಶಿಷ್ಯ ಮಾಧವದೇವ ಮಾಡಿದ ಕಾರ್ಯಗಳು ಅಸ್ಸಾಮಿನ ಜನಜೀವನದಲ್ಲಿ ಹೊಸ ಧಾರ್ಮಿಕ ದಿಕ್ಕನ್ನು ತೋರಿಸಿದವು. ಮತ್ತು ಕಳೆದ ಐದುನೂರು ವರ್ಷಗಳಿಂದ ಅವರು ತೋರಿಸಿದ ಮಾರ್ಗದಲ್ಲಿ ನಡೆದು ಜನ ಸುಖಿಯಾಗಿದ್ದಾರೆ.

1 comment

 1. BTC may be the latest or last chance to get rich in this era. It will reach $200000 next year or the next year.

  BTC has increased 20 times in the last year, and other coins have increased 800 times!!!

  Think about only $2 a few years ago. Come to the world’s largest and safest virtual currency exchange Binance to Get free rewards. Don’t miss the most important opportunity in life!!!

  https://hi.switchy.io/91xl

Leave a Reply

Your email address will not be published. Required fields are marked *