ನಿನಗಿನ್ನೂ ನೆನಪಿದೆಯೇ,
ಪಶ್ಚಿಮರಶ್ಮಿ ಸುರಿದಿದ್ದ ನೀಲಗಿರಿಗಳ ದಾರಿಯಲ್ಲಿ
ನಡೆಯುತ್ತಿದ್ದ ನಾವು ಒಮ್ಮೆಲೇ ನಿಂತರೆ,
ಇದ್ದಕ್ಕಿದ್ದಂತೆ ಎದ್ದ ಸುಳಿಗಾಳಿಯೊಂದು
ನಮ್ಮೆದುರೇ ದಾಟಿ ಹೋಗಿದ್ದು?
ಎರೆಡು ಹೆಜ್ಜೆಗಳು ಮುಂದಿಟ್ಟಿದ್ದರೆ
ನಮ್ಮನ್ನೂ ಸುತ್ತಿಸಿಕೊಂಡು ಹೋಗುತ್ತಿತ್ತು
ಎಂದು ನಕ್ಕಿದ್ದು?
ಸುಳಿಗಾಳಿ ಹೀಗೆ ಸುಳಿವಾಗ ಮಿಡತೆಗಳು ಸಿಡಿದೋಡುತ್ತವೆ,
ಇರುವೆಗಳು ನೆಲವನ್ನಪ್ಪುತ್ತವೆ,
ಎಲೆಗಳು ಪಟಪಟಿಸಿ, ಹಸಿರಲ್ಲಿ ಗವಿಯುತ್ತಿದ್ದ ಹುಲ್ಲು ಹೂಗಳ ಗಂಧ
ಮೋಡಗಳ ಕಡೆ ಮುಖ ಮಾಡುತ್ತದೆ.
ನೋಡನೋಡುತ್ತಲೇ, ಬಯಲ ಸುಳಿಗಾಳಿ ಬೇಲಿಯಂಚಿನಲ್ಲಿ ಮರೆಯಾಗುತ್ತದೆ.
ಏನು ಗಾಳಿಯ ಈ ಅವತಾರ? ಏನು ಈ ಲೀಲೆ?
ಒಮ್ಮೆಮ್ಮೆ ಅನ್ನಿಸುತ್ತದೆ,
ಪವನಸುತನೇ ಹೀಗೆ ಸುಳಿದು, ದುರಿತಗಳನ್ನು ಹರಿಸುತ್ತಾನೆ ಎಂದು.
ನಾವು ನಡೆದು ಹೋದಮೇಲೆ ಅಲ್ಲಿ ಮತ್ತೆ ಗಂಧವಾಹ ಅರಳಿರಬೇಕು,
ಕಾರಂಜಿಯಂತೆ.
ಈಗಲೂ ಆಗಾಗ ಸುಳಿಗಾಳಿಗಳು ಏಳುತ್ತ ಇರುತ್ತವಲ್ಲ
ಎದೆಯಲ್ಲಿ, ಇದ್ದಕ್ಕಿದ್ದಂತೆ.
ಎಂದೋ ಅರಳಿದ ಮಲ್ಲಿಗೆಯ ಘಮ ಮತ್ತೆ ಹೊರಳಿದಂತೆ.
ಆಗ,
ಒಬ್ಬರನ್ನೊಬ್ಬರು ನೋಡಿ ಮುಗುಳುನಗುತ್ತೇವೆ.