ಬರಹಗಾರರನ್ನು ಕಾಡುವ ಮೂರು ಪ್ರಮುಖ ಪ್ರಶ್ನೆಗಳು ಮತ್ತು ಅವುಗಳನ್ನು ಪರಿಹರಿಸಿಕೊಳ್ಳುವ ಬಗೆ

ಒಂದು ಮರಳುಗೂಡನ್ನು ಹೇಗೆ ಬೇಕಾದರೂ ಮಾಡಬಹುದು, ಅದು ನಿಮ್ಮಿಷ್ಟ. ಆದರೆ ಒಂದು ಕಲಾಕೃತಿಯ ಅಥವಾ ಒಂದು ಉತ್ಪನ್ನದ ವಿಚಾರಕ್ಕೆ ಬಂದರೆ ಅದನ್ನು ಮಾಡಿದ ತಕ್ಷಣ ಕೆಲಸ ಮುಗಿಯುವುದಿಲ್ಲ. ಅದು ಇತರರಿಗೆ ಇಷ್ಟವಾಗಬೇಕು. ಇಷ್ಟವಾಗುತ್ತದೆಯೋ ಇಲ್ಲವೋ ಎಂಬ ಪ್ರಶ್ನೆಯನ್ನು ಮೀರುವುದು ಒಂದು ಸವಾಲು. ಬರಹಗಾರರಿಗೆ ಕೂಡಾ ಇಂತಹ ಅನೇಕ ಪ್ರಶ್ನೆಗಳಿವೆ. ಇಲ್ಲಿ ಮೂರು ಪ್ರಶ್ನೆಗಳ ಕುರಿತು ಬರೆದಿದ್ದೇನೆ. ಓದಿ, ನಿಮ್ಮ ವಿಚಾರ ಹಂಚಿಕೊಳ್ಳಿ. 

೧. ನಾನೀಗ ಬರೆಯುತ್ತಿರುವುದು ಏನೂ ಉಪಯುಕ್ತ ಅನ್ನಿಸುತ್ತಿಲ್ಲ

ನಿಮ್ಮ ಬರವಣಿಗೆಯನ್ನು ಪ್ರಾರಂಭಿಸುತ್ತಿದ್ದಂತೆ, ಅಥವಾ ತಕ್ಷಣಕ್ಕೆ ಹೊಳೆದ ಒಂದಷ್ಟು ಪ್ಯಾರಾಗಳನ್ನು ಬರೆದು ಇನ್ನೇನು ಬರೆಯಲಿ ಎಂದು ಯೋಚಿಸುವ ಸಮಯದಲ್ಲಿ ಈ ಪ್ರಶ್ನೆ ಹುಟ್ಟುತ್ತದೆ. ಆದರೆ ನೋಡಿ, ಯಾವತ್ತೂ ಮೊದಲ ಒಂದು ಸುತ್ತಿನ ಬರವಣಿಗೆ ಕೇವಲ ಡ್ರಾಫ್ಟ್ ಆಗಿರುತ್ತದೆ – ಅಂದರೆ ಅದು ಹೆಚ್ಚೆಂದರೆ ನಿಮ್ಮ ಲೇಖನದ ಸ್ಕೆಲೆಟನ್ ಆಗಿರುತ್ತದೆ. ಅದಕ್ಕಿಂತ ಹೆಚ್ಚು ನಿರೀಕ್ಷೆ ಮಾಡಿಕೊಂಡು ನೀವು ಬರೆಯಲು ತೊಡಗಿದರೆ ಆಗ ಇದು ಚೆನ್ನಾಗಿಲ್ಲವೇನೋ, ಇನ್ನೂ ಹೇಗೋ ಬರೆಯಬಹುದಿತ್ತೇನೋ ಎಂಬ ಅನುಮಾನಗಳು ಕಾಡತೊಡಗುತ್ತವೆ.

ಯಾವತ್ತೂ ಇದನ್ನು ಮಾಡಿ:

  1.       ಯಾವುದೋ ಒಂದು ವಿಚಾರ/ಕತೆಯನ್ನು ಬರೆಯಬೇಕು ಅನ್ನಿಸಿದ ತಕ್ಷಣ, ಸುಮ್ಮನೇ ಬರೆಯುತ್ತ ಹೋಗಿ. ಅದಕ್ಕಾಗಿ ಇಂಟರ್ನೆಟ್ ರೀಸರ್ಚ್, ಶಬ್ದಗಳ ಅರ್ಥವನ್ನು ಹುಡುಕುವುದು, ನಿಮ್ಮ ಬರವಣಿಗೆಯನ್ನು ತಿದ್ದುತ್ತ ಮುಂದುವರೆಯುವುದು ಇದನ್ನೆಲ್ಲ ಮಾಡಬೇಡಿ.
  2.       ಈ ಪ್ರಾರಂಭದ ಬರೆಯುವ ಹಂತದಲ್ಲಿ ನಿಮ್ಮ ಸ್ಪೂರ್ತಿ (Muse) ಕೆಲಸ ಮಾಡುತ್ತಿರುತ್ತದೆ. ಅದು ನಿಮಗೆ ಒಂದು ವಿಷಯದ ಕುರಿತಂತೆ ಕೇವಲ ಒಂದು ಸ್ಕೆಲೆಟನ್ ನೀಡುತ್ತದೆ. ಸುಮ್ಮನೇ ಬರೆಯುವ ಮೂಲಕ ಅದನ್ನು ಹಿಡಿದಿಟ್ಟುಕೊಳ್ಳಿ – ನಲ್ಲಿಯಲ್ಲಿ ನೀರು ಬಂದಾಗ ಹಿಡಿದಿಟ್ಟುಕೊಳ್ಳುವಂತೆ. ಆಮೇಲೆ ಸೋಸುತ್ತೀರೋ, ಕಾಯಿಸುತ್ತೀರೋ ನಿಮಗೆ ಬಿಟ್ಟಿದ್ದು.
  3.       ನೀವು ಬರೆಯುವ ಕೆಲವು ವಿಚಾರಗಳು ನಿಮಗೆ ತಪ್ಪೆನಿಸಿದ್ದರೂ, ಬರೆಯುವ ಆವೇಗದಲ್ಲಿ ಬಂದದ್ದನ್ನೆಲ್ಲ ಪುಟಗಳಲ್ಲಿ ದಾಖಲಿಸುತ್ತ ಹೋಗಿ. ಏಕೆಂದರೆ ನಿಮ್ಮ ಸ್ಪೂರ್ತಿ ಕೆಲಸ ಮಾಡುತ್ತಿರುವಾಗ ನೀವು ಅದಕ್ಕೆ ಅಡ್ಡಿಯಾಗಬಾರದು.
  4.       ಒಮ್ಮೆ ಸ್ಕೆಲೆಟನ್ ಪೂರ್ತಿಯಾಗಿ ಬರೆದಾಯಿತು ಅಂತಾದರೆ ನೀವು ಮೊದಲ ಹಂತದ ತಿದ್ದುವಿಕೆ, ನಂತರ ಒಮ್ಮೆ ಜೋರಾಗಿ ಓದಿಕೊಳ್ಳುವುದು, ನಂತರ ಇನ್ನೊಂದು ಹಂತದ ತಿದ್ದುವಿಕೆ ಇತ್ಯಾದಿ ಮಾಡಿ ಬರಹ ಸಿದ್ಧಗೊಳಿಸಬಹುದು.
  5.       ಹಾಗಾಗಿ, ಬರೆಯುತ್ತಿರುವುದು ಚೆನ್ನಾಗಿಲ್ಲವೇನೋ ಅನ್ನುವ ಆಲೋಚನೆ ಬಂದಾಗಲೆಲ್ಲಾ, ‘ಇದು ಕೇವಲ ಡ್ರಾಫ್ಟ್’ ಅಂತ ನಿಮಗೆ ನೀವೇ ಹೇಳಿಕೊಳ್ಳಿ. ಆಗ ಎಲ್ಲ ಅನುಮಾನಗಳು ಮಾಯವಾಗುತ್ತವೆ.

೨. ನಾನೀಗ ಬರೆಯುತ್ತಿರುವುದನ್ನು ನೋಡಿದರೆ ’ಇಂತಿಂತವರು’ ನಗಬಹುದು.

ಅವರು ಯಾರ್ಯಾರೋ ಇರುತ್ತಾರೆ – ಸ್ನೇಹಿತರು, ಸ್ನೇಹಿತರಲ್ಲದವರು, ‘ದೊಡ್ಡ’ ಲೇಖಕರು – ಪಾಪ ಅವರ ಪಾಡಿಗೆ ಅವರಿರುತ್ತಾರೆ. ನಾವೇ ಅವರನ್ನು ಮನಸ್ಸಿಗೆ ತಂದುಕೊಂಡು ಅವರು ಇದನ್ನು ಓದಿದರೆ ಏನಂದುಕೊಳ್ಳುತ್ತಾರೋ ಎಂಬ ಯೋಚನೆಯಲ್ಲಿರುತ್ತೇವೆ.

ನಿಮ್ಮ ಬರವಣಿಗೆಯ ಕುರಿತು ಮಹತ್ವಾಕಾಂಕ್ಷೆಯಿದ್ದಷ್ಟೂ ಇಂತಹ ಚಡಪಡಿಕೆಯಿರುತ್ತದೆ. ಇಂತಹ ಆಲೋಚನೆ ಬಂದಾಗಲೆಲ್ಲ ಹೀಗೆ ಮಾಡಿ:

  1.       ಮೊದಲನೆಯದಾಗಿ, ನೀವು ನಿಮಗಾಗಿ ಬರೆದುಕೊಳ್ಳುತ್ತಿದ್ದೀರಿ – ಬರೆಯುವ ಆನಂದಕ್ಕಾಗಿ ಬರೆಯುತ್ತಿದ್ದೀರಿ. ಅದನ್ನು ಯಾವುದೋ ಪತ್ರಿಕೆಗೆ ಕಳಿಸುವುದು, ಪುಸ್ತಕವಾಗಿ ಪ್ರಕಟಿಸುವುದು ನಂತರದ ಹಂತ. ಆದರೆ ಬರೆಯುವ ಕಾಲದಲ್ಲಿ ಅದು ನಿಮ್ಮ ಆನಂದಕ್ಕಾಗಿಯೇ ಬರೆಯುವಂತಹದ್ದು.
  2.       ಇಲ್ಲದಿದ್ದರೆ, ಯಾವುದಾದರೂ ಒಬ್ಬ ನಿರ್ದಿಷ್ಟ ವ್ಯಕ್ತಿಗಾಗಿ ಬರೆಯಿರಿ. ಗೆಳತಿಗಾಗಿ, ಮಗನಿಗಾಗಿ ಅಥವಾ ಶಿಷ್ಯನಿಗೆ ಹೀಗೆ ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದರೂ ನಿಮ್ಮ ಮನಸ್ಸು ಸುಲಭದಲ್ಲಿ ಏಕಾಗ್ರಗೊಳ್ಳುತ್ತದೆ.

ನಾನೂ ಈ ಲೇಖನವನ್ನು ಬರೆಯುವಾಗ ‘ದೊಡ್ಡ’ ಲೇಖಕರನ್ನು ಗಮನದಲ್ಲಿಟ್ಟುಕೊಳ್ಳುತ್ತಲೇ ಇಲ್ಲ, ಇದನ್ನು ಈಗಿನ್ನೂ ಹೊಸತಾಗಿ ಬರವಣಿಗೆ ಆರಂಭಿಸುವವರ ಸಲುವಾಗಿ ಬರೆಯುತ್ತಿದ್ದೇನೆ. ಹಾಗಾಗಿ ಈ ಲೇಖನ ಅವರಿಗೆ ಸಹಾಯ ಮಾಡಲಿ ಎಂಬ ಆಶಯವಿರುವುದರಿಂದ ಈ ಲೇಖನವನ್ನು ನೋಡಿ ಯಾರು ಏನಂದುಕೊಳ್ಳುತ್ತಾರೋ ಎಂಬ ಚಿಂತೆಯಿಲ್ಲ.

೩. ನಾನಿನ್ನೂ ಸಿದ್ಧನಾಗಿಲ್ಲ.

ಇದು ಬಹಳ ದೊಡ್ಡ ಪ್ರಶ್ನೆ. ಮೇಲಿನ ಎರಡು ಪ್ರಶ್ನೆಗಳನ್ನೂ ದಾಟಿಕೊಂಡು ಹೇಗೋ ನಿಮ್ಮ ಬರವಣಿಗೆಯನ್ನು ನೀವು ಮುಂದುವರೆಸಬಹುದು, ಆದರೆ ‘ನಾನಿನ್ನೂ ಸಿದ್ಧನಾಗಿಲ್ಲ’ ಎಂಬ ಭಾವನೆ ಬಂತೆಂದರೆ ಅಲ್ಲಿಗೆ ನೀವು ಕೆಲಸ ನಿಲ್ಲಿಸಿಯೇ ಬಿಡುತ್ತೀರಿ.

ಯಾಹೂಗೆ ಸಿಇಓ ಆದ ಹೊಸತರಲ್ಲಿ ಮರಿಸ್ಸಾ ಮೇಯರ್ ಆಡಿದ ಮಾತುಗಳಿವು: I always did something I was a little not ready to do, I think that’s how you grow. When theres that moment of `Wow, I’m not really sure I can do this’, and you push through those moments, that’s when you have a breakthrough’.

ಈ ‘ನಾನಿನ್ನೂ ಸಿದ್ಧನಾಗಿಲ್ಲ’ ಎಂಬುದೊಂದು ವ್ಯಸನ. ಒಮ್ಮೆ ಅದು ನಿಮ್ಮನ್ನು ಹಿಡಿದುಕೊಂಡರೆ ಬಿಡುವುದೇ ಇಲ್ಲ. ನೀವು ಯಾವಾಗ ಸಿದ್ಧನಾಗಿದ್ದೇನೆ ಅಂದುಕೊಳ್ಳುತ್ತೀರಿ ಹೇಳಿ..

  1.       ಎಷ್ಟು ವಯಸ್ಸಾಗಬೇಕು ನಿಮಗೆ?
  2.       ಎಷ್ಟು ಪುಸ್ತಕಗಳನ್ನು, ಯಾವ್ಯಾವ ಲೇಖಕರನ್ನು ಓದಿ ಮುಗಿಸಬೇಕು?
  3.       ಯಾವ ಅನುಭವಗಳು ಆಗಬೇಕು?

ಮನಶ್ಶಾಸ್ತ್ರದ ಒಂದು ಗುಟ್ಟನ್ನು ನಿಮಗೆ ಹೇಳುತ್ತೇನೆ, ಎಲ್ಲಿಯವರೆಗೆ ನೀವು ‘ನಾನಿನ್ನೂ ಸಿದ್ಧನಾಗಿಲ್ಲ’ ಅಂದುಕೊಳ್ಳುತ್ತೀರೋ ಅಲ್ಲಿಯವರೆಗೆ ನಿಮ್ಮ ಸ್ಪೂರ್ತಿ ಕೂಡಾ ದೂರ ಉಳಿಯುತ್ತದೆ. ನೀವು ಇಂದಿನಿಂದಲೇ ’ನಾನು ಈಗ ಸಿದ್ಧ’ ಎಂದುಕೊಂಡು ಬರೆಯಲು ತೊಡಗಿ, ತಕ್ಷಣ ನಿಮ್ಮ ಸ್ಪೂರ್ತಿ, ನಿಮ್ಮ ಮನಸ್ಸು ಎಲ್ಲವೂ ಸಿದ್ಧಗೊಳ್ಳುತ್ತವೆ. ನೀವು ಈಗಾಗಲೇ ಬರಹಗಾರರಿದ್ದೀರಿ, ಬರೆಯಬೇಕಷ್ಟೇ.

Leave a Reply

Your email address will not be published. Required fields are marked *