ಬುದ್ಧಿವಂತರಾದವರು ತಮ್ಮ ಕಾರ್ಯದ ಫಲಿತಾಂಶದ ಕುರಿತು ಏಕೆ ಚಿಂತಿಸುವುದಿಲ್ಲ ಗೊತ್ತೇ?

ಬುದ್ಧಿಯುಕ್ತೋ ಜಹಾತೀಹ ಉಭೇ ಸುಕೃತದುಷ್ಕೃತೇ।
ತಸ್ಮಾದ್ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಮ್॥ ॥೫೦॥

(ಅರ್ಥ – ಬುದ್ಧಿವಂತನಾದ ಪುರುಷನು ತನ್ನ ಕರ್ಮದಿಂದ ಹುಟ್ಟುವ ಪುಣ್ಯ ಮತ್ತು ಪಾಪಗಳೆರಡನ್ನೂ ತ್ಯಜಿಸುತ್ತಾನೆ ಮತ್ತು ಕೇವಲ ತನ್ನ ಕರ್ಮದಲ್ಲಿ ಮನಸ್ಸಿಡುತ್ತಾನೆ. ಈ ಕರ್ಮಕೌಶಲವೇ ಯೋಗ.)

ಈ ಶ್ಲೋಕವನ್ನು ಬಹಳ ಸರಳ ಉದಾಹರಣೆಯಿಂದ ವಿವರಿಸಬೇಕೆಂದರೆ, ಕೆರೆ ನೀರಿನಲ್ಲಿ ಒಂದು ಕಲ್ಲು ಎಸೆದಾಗ ಅಲೆಗಳೇಳುತ್ತವೆ. ನಾವು ಕಲ್ಲಿನ ಗಾತ್ರ, ತೂಕ ಮತ್ತು ಎಸೆಯುವ ವೇಗವನ್ನು ನಿಯಂತ್ರಿಸಬಹುದೇ ಹೊರತೂ ಕಲ್ಲು ನೀರಿನಲ್ಲಿ ಬಿದ್ದ ನಂತರದಲ್ಲಿ ಆಗುವ ಪರಿಣಾಮಗಳು – ಎಷ್ಟು ಅಲೆಗಳು ಏಳುತ್ತವೆ, ಎಷ್ಟು ದೂರ ಹರಡುತ್ತವೆ ಮತ್ತು ಈ ಅಲೆಗಳಿಂದ ಜಲಚರಗಳ ಮೇಲೆ ಯಾವ ಪರಿಣಾಮ ಉಂಟಾಗಬಹುದು – ನಮ್ಮ ನಿಯಂತ್ರಣದಲ್ಲಿ ಇಲ್ಲ.

ಇಡೀ ಅಸ್ತಿತ್ವ (The whole existence) ಒಂದು ಸಮಗ್ರತೆಯಲ್ಲಿದೆ. ಅಂದರೆ, ಇಡೀ ಅಸ್ತಿತ್ವದಲ್ಲಿ ಪ್ರತಿಯೊಂದೂ ಇನ್ನೊಂದಕ್ಕೆ ಸೇರಿಕೊಂಡೇ ಇವೆ. ಕಾಲು ಬೆರಳಿಗೆ ಸೊಳ್ಳೆ ಕಚ್ಚಿದರೆ ಇಡೀ ದೇಹಕ್ಕೆ ಹೇಗೆ ಗೊತ್ತಾಗುತ್ತದೆಯೋ ಹಾಗೆ ಜಗತ್ತಿನ ಪ್ರತಿಯೊಂದೂ ಘಟನೆಯೂ ಇಡೀ ಅಸ್ತಿತ್ವದ (The Universe) ಅರಿವಿನಲ್ಲಿಯೇ ನಡೆಯುತ್ತಿವೆ. ಕಾಡಿನಲ್ಲಿ ಜಿಂಕೆಯೊಂದು ಮರಿ ಹಾಕುತ್ತಿದ್ದರೆ ಅದು ಅಲ್ಲಿ ಒಂಟಿಯಲ್ಲ, ಇಡೀ ಅಸ್ತಿತ್ವವೇ ಆ ಪ್ರಜನನ ಕ್ರಿಯೆಗೆ ಸಹಕರಿಸುತ್ತಿರುತ್ತದೆ.

ಹಾಗೆಯೇ, ನಮ್ಮ ಪ್ರತಿಯೊಂದು ಕ್ರಿಯೆಯೂ – ಅಷ್ಟೇ ಅಲ್ಲ ಪ್ರತಿಯೊಂದು ಮಾತು, ಆಲೋಚನೆ ಮತ್ತು ಭಾವನೆಯೂ – ಅಸ್ತಿತ್ವಕ್ಕೆ ಗೊತ್ತಾಗುತ್ತದೆ ಮತ್ತು ಅಸ್ತಿತ್ವದ ಮೇಲೆ ಪರಿಣಾಮ ಬೀರುತ್ತಿರುತ್ತದೆ.

ಹಾಗಾಗಿ, ನಾವು ಒಂದು ಕೆಲಸ ಮಾಡಿದಾಗ, ಅದರ ರಿಪಲ್ ಎಫೆಕ್ಟ್ ಯಾವ ಮಟ್ಟದ್ದಿರುತ್ತದೆ ಎನ್ನುವುದನ್ನು ನಮಗೆ ಊಹಿಸಲೂ ಸಾಧ್ಯವಿಲ್ಲ. ಆದ್ದರಿಂದಲೇ ಕೃಷ್ಣ ‘ಗಹನೋ ಕರ್ಮಣೋ ಗತಿಃ’ ಅನ್ನುತ್ತಾನೆ. ಪರಿಣಾಮವನ್ನು ಊಹಿಸಲೂ ಸಾಧ್ಯವಿಲ್ಲದಿರುವಾಗ ಅದನ್ನು ನಿಯಂತ್ರಿಸಲೂ ನಮ್ಮಿಂದ ಸಾಧ್ಯವಿಲ್ಲ. ನಮ್ಮ ಕೆಲಸದ ಪರಿಣಾಮ ಸುಖವನ್ನೂ ತರಬಹುದು ಅಥವಾ ದುಃಖವನ್ನು. ನಮ್ಮ ನಿಯಂತ್ರಣ ಇರುವುದು ಕೇವಲ ಕೆಲಸದಲ್ಲಿ ಮಾತ್ರ. ನಾವು ದ್ವನಿಯನ್ನು ಮಾತ್ರ ಮಾಡಬಹುದು, ಆದರೆ ಅಷ್ಟದಿಕ್ಕುಗಳಿಂದ ಬರುವ ಪ್ರತಿಧ್ವನಿಯನ್ನು ಹೇಗೆ ನಿಯಂತ್ರಿಸುತ್ತೀರಿ?

ಹಾಗಂತ ಕೆಲಸದ ಪರಿಣಾಮ ನನ್ನ ಕೈಯಲ್ಲಿಲ್ಲ ಎಂಬ ಕಾರಣಕ್ಕೆ ನಾನು ಯಾವುದೇ ಕೆಲಸವನ್ನು ಮಾಡುವುದಿಲ್ಲ ಅನ್ನಲಾಗುವುದಿಲ್ಲ. ಏಕೆಂದರೆ, ಇಡೀ ಅಸ್ತಿತ್ವ ನಿರಂತರವಾಗಿ ಕೆಲಸ ಮಾಡುತ್ತಿದೆ (the universe is changing and expanding continuously). ಅದರ ಭಾಗವಾದ ನಾವು ಕೆಲಸ ಮಾಡದೇ ಇರಲಾಗುವುದಿಲ್ಲ. ಕೆಲಸವನ್ನು ಬಿಟ್ಟ ತಕ್ಷಣ ನಾವು ಜಡವಾಗುತ್ತೇವೆ.

ಹೀಗೆ ನಿರಂತರ ಚಟುವಟಿಕೆಯಲ್ಲಿರುವ ಅಸ್ತಿತ್ವಕ್ಕೆ ಯಾವುದೇ ಫಲಿತಾಂಶದ ಆಸೆಯಿಲ್ಲ. ಹಾಗಾಗಿ ಇಡೀ ಅಸ್ತಿತ್ವ ಒಂದು ಲೀಲೆ. (ನನಗೆ ಯಾವಾಗಲೂ ಅಚ್ಚರಿಯಾಗುತ್ತದೆ – ನಾವು ಕೊಲೆ-ಸುಲಿಗೆ ಧರ್ಮ-ಕರ್ಮ ಅಂತೆಲ್ಲ ಮಾತನಾಡುತ್ತೇವೆ, ಆದರೆ ಒಂದು ಭೂಕಂಪ, ಜ್ವಾಲಾಮುಖಿ, ಸುನಾಮಿಗಳು ಬಂದು ಸಾವಿರಾರು ಜನರನ್ನು ಕ್ಷಣದಲ್ಲಿ ಕೊಂದುಹಾಕಿಬಿಡುತ್ತವೆ. ಅಲ್ಲಿ ಯಾವ ಪಾಪಕರ್ಮದ ಕುರುಹೂ ಇರುವುದಿಲ್ಲ.)

ಆದ್ದರಿಂದ, ಯಾವ ವ್ಯಕ್ತಿ ಎಲ್ಲ ಫಲಿತಾಂಶಗಳ ಆಸೆ ಬಿಟ್ಟು ತನ್ನ ಕೆಲಸ ಮಾಡಿಕೊಂಡು ಹೋಗುತ್ತಾನೆ, ಆತ ಈ ಅಸ್ತಿತ್ವದ ಲೀಲೆಯಲ್ಲಿ ಭಾಗಿಯಾಗುತ್ತಾನೆ. ಆಗ ಅವನನ್ನು ಯಾವುದೇ ಸುಖ ದುಃಖಗಳು ಬಾಧಿಸುವುದಿಲ್ಲ.

ಇಲ್ಲಿ ಒಂದು ದೊಡ್ಡ ಪ್ರಶ್ನೆ ಬರುತ್ತದೆ – ಆದರೆ ನಾನು ಎಲ್ಲ ಆಸೆಗಳನ್ನು ಬಿಟ್ಟರೆ ನನ್ನ ಜೀವನದ, ನನ್ನ ಕುಟುಂಬದ ಗತಿಯೇನು?

ನಾವು ಧ್ವನಿ ಮಾಡಿದಾಗ ಅದಕ್ಕೆ ಅಷ್ಟದಿಕ್ಕುಗಳಿಂದ ಉತ್ತರ ಬರುತ್ತದೆ ಅಂದೆನಲ್ಲ, ನೋಡಿ, ಆ ಉತ್ತರ ನಮ್ಮ ದನಿಯೇ ಆಗಿರುತ್ತದೆ. ಅದು ಬೇರೆ ಯಾರದ್ದೋ ದನಿ, ದೇವರದ್ದೂ ಕೂಡಾ, ಆಗಿರುವುದಿಲ್ಲ. ಅಂದರೆ, ನಾವು ಮಾಡುವ ಕೆಲಸ ಹೇಗಿರುತ್ತದೆಯೋ ಅದಕ್ಕೆ ಬರುವ ಫಲಿತಾಂಶ ಕೂಡಾ ಅದಕ್ಕೆ ತಕ್ಕಂತದ್ದೇ ಆಗಿರುತ್ತದೆ ಮತ್ತು ಹತ್ತು, ನೂರುಪಟ್ಟು ದೊಡ್ಡದಾಗಿರುತ್ತದೆ.

ಗಮನಿಸಿ ನೋಡಿ, ದಾರಿಯಲ್ಲಿ ಭಿಕ್ಷುಕನೊಬ್ಬನಿಗೆ ಐದು ರೂಪಾಯಿ ಕೊಟ್ಟು ಬಂದ ದಿನ ನಮ್ಮೊಳಗೆ ಹುಟ್ಟುವಷ್ಟು ಆನಂದ ಯಾವ ಪಾರ್ಟಿಯಲ್ಲೂ ಸಿಗುವುದಿಲ್ಲ. (ಆದ್ದರಿಂದಲೇ ನಮ್ಮ ಋಷಿಗಳು ನಿರಂತರವಾಗಿ ಸೇವೆ ಮಾಡಿ ಅನ್ನುತ್ತಾರೆ. ಸೇವೆ ಅಂದರೆ ನಿಷ್ಕಾಮ ಕರ್ಮ. ಅದರ ಫಲಿತಾಂಶಗಳು ನಾವು ಮಾಡುವ 9-5 ಉದ್ಯೋಗಗಳಿಗಿಂತ ಹೆಚ್ಚು ಪ್ರತಿಫಲ ನೀಡುತ್ತವೆ.)

ಇನ್ನೊಂದು ಸಂಗತಿ ನೆನಪಿಡಿ, ಈ ಸಮಷ್ಠಿ (ಈ ಅಸ್ತಿತ್ವ ಅಥವಾ ಅದನ್ನು ದೇವರು ಅಂತ ಕರೆಯೋಣ) ನಮ್ಮ ಶತ್ರು ಅಲ್ಲ, ಅದು ನಮ್ಮ ಪ್ರತಿಧ್ವನಿ. ಅದು ಬೃಹತ್ ಪ್ರತಿಧ್ವನಿ. ನಾವು ನಮ್ಮೊಳಗೆ ಹೇಗಿರುತ್ತೇವೆಯೋ ಹಾಗೇ ನಮ್ಮ ಜಗತ್ತು ಸಿದ್ಧಗೊಳ್ಳುತ್ತದೆ.

ಸರಿ, ಹಾಗಿದ್ದರೆ ಒಳ್ಳೆಯದನ್ನು ಮಾಡಿ ಅದರ ಪರಿಣಾಮವನ್ನು ಆನಂದಿಸುವ ಬದಲು ಅ ಫಲಿತಾಂಶವನ್ನೂ ಬಿಟ್ಟುಬಿಡಬೇಕು ಏಕೆ?

ನಾವು ಒಳ್ಳೆಯ ಕೆಲಸ ಮಾಡುತ್ತಿದ್ದಾಗ ಅದರ ಪರಿಣಾಮವಾಗಿ ಬಂದ ಒಳ್ಳೆಯದನ್ನು ಆನಂದಿಸುವಲ್ಲಿ ಮೈಮರೆತು ನಮ್ಮ ಕೆಲಸವನ್ನೇ ಮರೆತರೆ ಆ ಬಂದ ಒಳ್ಳೆಯದು ಕೂಡಾ ಬಹಳ ಬೇಗ ಕಳೆದುಹೋಗುತ್ತದೆ. ಹಾಗಾಗಿ, ಫಲಿತಾಂಶ ಹೇಗೇ ಇರಲಿ, ಬುದ್ಧಿವಂತರಾದವರು ತಮ್ಮ ಕೆಲಸವನ್ನು ಯಾವುದೇ ತಡೆಯಿಲ್ಲದೇ ಮುಂದುವರೆಸಿಕೊಂಡು ಹೋಗುತ್ತಾರೆ.

ಫಲಿತಾಂಶಕ್ಕೆ ಕಟ್ಟುಬಿದ್ದ ತಕ್ಷಣ ಅದು ಲೀಲೆಯಾಗಿ ಉಳಿಯುವುದಿಲ್ಲ. ಈ ಲೀಲೆಯಲ್ಲಿರುವುದೇ ಕರ್ಮಕೌಶಲ, ಇದೇ ಯೋಗ.

4 comments

  1. ಅದ್ಭುತ. ಒಪ್ಪಿದೆ ನಿಮ್ಮ ಮಾತು. ಅತಿ ಗುಹ್ಯವಾದದ್ದನ್ನು ತುಂಬಾ ಸರಳವಾಗಿ ಅರ್ಥ ಆಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೀರಿ.
    ಇಡೀ ಅಸ್ತಿತ್ವ (The whole existence) ಒಂದು ಸಮಗ್ರತೆಯಲ್ಲಿದೆ. ಇಡೀ ಅಸ್ತಿತ್ವದಲ್ಲಿ ಪ್ರತಿಯೊಂದೂ ಇನ್ನೊಂದಕ್ಕೆ ಸೇರಿಕೊಂಡೇ ಇವೆ ಎನ್ನುವುದರ ಬಗ್ಗೆ ಸೂಕ್ತವಾದ ವಿವರಣೆಯೊಂದಿಗೆ ತಿಳಿಸಿಕೊಟ್ಟಿದ್ದೀರಿ.
    ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸವು ತುಂಬಾ ಶ್ರೇಷ್ಠವಾಗಿರುತ್ತದೆ, ಸಫಲವು ನಿಶ್ಚಿತವಾಗಿರುತ್ತದೆ, ಸ್ವ ಕಲ್ಯಾಣ ಮತ್ತು ಲೋಕ ಕಲ್ಯಾಣಕಾರಿಯಾಗಿರುತ್ತದೆ.
    ತಮ್ಮ ವಿಚಾರಧಾರೆಯನ್ನು ಈ ಮೂಲಕ ಹಂಚಿಕೊಂಡಿದ್ದಕ್ಕೆ ತಮಗೆ ಮನಃಪೂರ್ವಕ ಧನ್ಯವಾದಗಳು.

Leave a Reply

Your email address will not be published. Required fields are marked *