ನೀವೂ ನಾಯಕರಾಗಬೇಕೆ? ಇದೊಂದೇ ಸುಲಭ ಸೂತ್ರ ಸಾಕು

ನಾಯಕನಾಗುವುದು ಹೇಗೆ ಎಂಬುದು ಬಹುಶಃ ನಮ್ಮೆಲ್ಲರ ಪ್ರಶ್ನೆ.

ನಾಯಕತ್ವ ಅನ್ನುವುದು ಸುಲಭವಲ್ಲ. ನಾಯಕನೆಂದರೆ ಕೇವಲ ರಾಜಕೀಯಕ್ಕೆ, ಆಫೀಸಿನ ಬಾಸ್ ಆಗುವುದಕ್ಕೆ ಸಂಬಂಧಿಸಿದ ವಿಷಯವಲ್ಲ, ಮನೆಯ ಯಜಮಾನನಾಗುವುದೂ ಒಂದು ಸವಾಲಿನ ಕೆಲಸವೇ.

ಒಂದು ತಂಡಕ್ಕೆ ನಾಯಕನಾಗುವುದೆಂದರೆ – ಅಲ್ಲಿ ಅನೇಕ ಮನಸ್ಸುಗಳಿರುತ್ತವೆ, ಅನೇಕ ರೀತಿಯ ಆಲೋಚನೆಗಳಿರುತ್ತವೆ, ಅನೇಕ ರೀತಿಯ ಆಸೆ-ಆಕಾಂಕ್ಷೆಗಳಿರುತ್ತವೆ – ಅವುಗಳನ್ನೆಲ್ಲ ಹೇಗೆ ನಿಭಾಯಿಸಬೇಕು ಎನ್ನುವುದು ಬಹುಮುಖ್ಯ ಪ್ರಶ್ನೆ. ಅದಕ್ಕಾಗಿ ಹೊಸದೊಂದು ಮನಸ್ಥಿತಿಯನ್ನೇ ನಮ್ಮದಾಗಿಸಿಕೊಳ್ಳಬೇಕಾಗುತ್ತದೆ.

ಆದರೆ, ’ನಾಯಕನಾಗುವುದು ಹೇಗೆ’ ಅನ್ನುವುದು ಒಂದು ಅರ್ಥಹೀನ ಪ್ರಶ್ನೆ. ಏಕೆಂದರೆ, ನಾಯಕನಾಗುವುದು ಹೇಗೆ ಎಂಬ ಪ್ರಶ್ನೆ ಬಂದ ತಕ್ಷಣ ನಾಯಕನಾಗುವುದು ಯಾವುದಕ್ಕೆ ಎಂಬ ಪ್ರಶ್ನೆ ಏಳುತ್ತದೆ. ರಾಜಕೀಯ ನಾಯಕನಾಗಬೇಕೆ, ಟೀಮ್ ಲೀಡರ್ ಆಗಬೇಕೆ, ಅಥವಾ ಮನೆಯ ಯಜಮಾನನಾಗಬೇಕೆ? ನಿಜಕ್ಕೂ ಯಾವುದು ನಿಮ್ಮ ಮನಸ್ಸಿನಲ್ಲಿದೆ?

ರಾಜಕೀಯ ನಾಯಕನಾಗಬೇಕು ಅಂದುಕೊಳ್ಳಿ – ಮೊದಲು ನಿಮಗೊಂದು ಕಾರ್ಯಕ್ಷೇತ್ರ, ಒಂದು ಮತಕ್ಷೇತ್ರ ಅಂತ ಆಯ್ಕೆ ಮಾಡಿಕೊಳ್ಳುತ್ತೀರಿ, ಆ ಕಾರ್ಯಕ್ಷೇತ್ರದಲ್ಲಿರುವ ಅತ್ಯಂತ ದೊಡ್ಡ ಮತ್ತು ಪ್ರಮುಖ ಸಮಸ್ಯೆ ಏನು ಎಂಬುದನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೀರಿ, ಅದಕ್ಕಾಗಿ ಜನರನ್ನು ಒಗ್ಗೂಡಿಸುತ್ತೀರಿ ಅಂತಾದರೆ ನೀವು ನಾಯಕರಾಗುತ್ತೀರಿ.

ಉದಾಹರಣೆಗಾಗಿ ನೋಡುವುದರೆ, ನಮ್ಮ ದೇಶದ ಅತ್ಯಂತ ಗೌರವಾನ್ವಿತ ನಾಯಕ ಎಂದೇ ಪರಿಗಣಿಸಲ್ಪಡುವ ಮಹಾತ್ಮಾ ಗಾಂಧಿ ತಾನೊಬ್ಬ ನಾಯಕನಾಗಬೇಕು ಎಂದು ಹೊರಡಲೇ ಇಲ್ಲ. ಭಾರತ ಆಂಗ್ಲರ ಆಧೀನದಲ್ಲಿದ್ದುದು ಅವರ ಎದುರಿಗಿದ್ದ ಮುಖ್ಯ ಸಮಸ್ಯೆಯಾಗಿತ್ತು ಮತ್ತು ಭಾರತದ ಸ್ವಾತಂತ್ರ್ಯ ಅವರ ಗುರಿಯಾಗಿತ್ತು. ಝಾರ್ ರಾಜರಿಂದ ರಷ್ಯನ್ನರನ್ನು ಮುಕ್ತಗೊಳಿಸಿದ ಲೆನಿನ್, ಅಥವಾ ಚೀನಾದ ಮಹಾಕ್ರಾಂತಿಯ ನಾಯಕ ಮಾವೋ, ಅಥವಾ ಅಮೇರಿಕಾದ ವರ್ಣಭೇಧನೀತಿಯ ವಿರುಧ್ಧ ಹೋರಾಡಿದ ಮಾರ್ಟೀನ್ ಲೂಥರ್ ಕಿಂಗ್ – ಇವರ್ಯಾರಿಗೂ ನಾಯಕನಾಗುವುದು ಗುರಿಯಾಗಿರಲಿಲ್ಲ. ಅವರ ಎದುರು ಒಂದು ದೊಡ್ಡ ಸಮಸ್ಯೆಯಿತ್ತು ಮತ್ತು ಅವರು ಅದರ ಪರಿಹಾರಕ್ಕಾಗಿ ಹೋರಾಡಲು ಸಿದ್ಧರಾದರು.

ಆಗಿ ಹೋದ ನಾಯಕರು ಅಥವಾ ಪ್ರಸ್ತುತ ಯಾವುದೇ ರಾಜಕಾರಣಿಯನ್ನು ನೋಡಿ – ನಾವು ಯಾರನ್ನು ಗೌರವಿಸುತ್ತೇವೆ, ಯಾವುದೋ ಗುರಿಗಾಗಿ ಹೋರಾಡುವವರನ್ನೋ ಅಥವಾ ಕುರ್ಚಿಗಾಗಿ ಹೊಡೆದಾಡುವವರನ್ನೋ?

ಎರಡನೆಯದಾಗಿ,  ನೀವು ಒಂದು ಸಂಸ್ಥೆಯ ಉದ್ಯೋಗಿಯಾಗಿದ್ದು ಒಂದು ಪ್ರೊಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದೀರಿ ಅಂತಾದರೆ, ಆ ಪ್ರೊಜೆಕ್ಟ್ ಟೀಮ್‌ಲೀಡರ್ ಆಗುವುದು ಹೇಗೆ ಎಂಬುದು ನಿಮ್ಮ ಪ್ರಶ್ನೆ.

ಆ ಪ್ರೊಜೆಕ್ಟ್‌ನಲ್ಲಿ ಈಗಾಗಲೇ ಟೀಮ್‌ಲೀಡರ್ ಆಗಿರುವವರನ್ನು ಗಮನಿಸಿ. ಅವರಿಗೆ ಬಹುಶಃ ಆ ಪ್ರೊಜೆಕ್ಟ್ ಬಗ್ಗೆ ತಂಡದ ಎಲ್ಲರಿಗಿಂತ ಹೆಚ್ಚು ಗೊತ್ತಿರುತ್ತದೆ, ಅವರು ಆ ಪ್ರೊಜೆಕ್ಟ್‌ಗಾಗಿ ಉಳಿದ ಎಲ್ಲರಿಗಿಂತ ಹೆಚ್ಚು ಕೆಲಸ ಮಾಡುತ್ತಿರುತ್ತಾರೆ ಮತ್ತು ಅವರಿಗೆ ಉಳಿದ ಎಲ್ಲರಿಗಿಂತ ಆ ಪ್ರೊಜೆಕ್ಟ್ ಸಫಲಗೊಳ್ಳಬೇಕಾದ ಒತ್ತಡ ಮತ್ತು ಜವಾಬ್ದಾರಿ ಇರುತ್ತದೆ, ಅಲ್ಲವೇ?

ನೀವು ಯಾವುದೇ ಒಂದು ಪ್ರೊಜೆಕ್ಟ್ ಕುರಿತು ಎಲ್ಲರಿಗಿಂತ ಹೆಚ್ಚು ತಿಳಿದುಕೊಳ್ಳಲು, ಅದನ್ನು ಸಫಲಗೊಳಿಸಲು ಇನ್ನೂ ಉತ್ತಮ ಮಾರ್ಗಗಳನ್ನು ಕಂಡುಕೊಳ್ಳಲು ಮತ್ತು ಅದಕ್ಕಾಗಿ ಹೆಚ್ಚಿನ ಸಮಯ ತೊಡಗಿಸಿಕೊಳ್ಳಲು ಸಿದ್ಧರಿದ್ದೀರಾ? ಹಾಗಿದ್ದರೆ ನೀವು ನಾಯಕರಾಗಬಲ್ಲಿರಿ.

ಹಾಗೆಯೇ, ನಿಮಗೆ ಯಾರನ್ನು ಕಂಡರೆ ಗೌರವ ಮತ್ತು ಯಾರನ್ನು ಕಂಡರೆ ಗೌರವವಿರುವುದಿಲ್ಲ ಗಮನಿಸಿದ್ದೀರಾ? ತನ್ನ ಪ್ರೊಜೆಕ್ಟ್ ಬಗ್ಗೆ ಸರಿಯಾಗಿ ತಿಳಿದುಕೊಂಡಿರದ, ತಿಳಿದುಕೊಳ್ಳಲು ಪ್ರಯತ್ನವನ್ನೂ ಪಡದ, ಆದರೆ ತನಗೆ ಎಲ್ಲವೂ ಗೊತ್ತಿದೆ ಎಂಬಂತೆ ನಟಿಸುವ, ಇತರರ ಮೇಲೆ ಅಧಿಕಾರ ಚಲಾಯಿಸುವ ಟೀಮ್ ಲೀಡರ್ ಕುರಿತು ನಿಮಗೆ ಏನನ್ನಿಸುತ್ತದೆ? ಪ್ರಾಯಶಃ ನೀವು ಇಂತಹ ಟೀಮ್ ಲೀಡರ್ ಆಗಲು ಇಷ್ಟಪಡುವುದಿಲ್ಲ ಅಂದುಕೊಳ್ಳುತ್ತೇನೆ.

ಮೂರನೆಯದಾಗಿ, ಒಂದು ಮನೆಯ ಯಜಮಾನನ ಉದಾಹರಣೆ ತೆಗೆದುಕೊಳ್ಳೋಣ. ಯಜಮಾನನಾದವನು ಮನೆಯ ಎಲ್ಲ ಸದಸ್ಯರನ್ನೂ ಒಂದೇ ರೀತಿಯಲ್ಲಿ ನೋಡುತ್ತಾನೆ ಮತ್ತು ಪ್ರತಿಯೊಬ್ಬರ ಯೋಗಕ್ಷೇಮದ ಹೊಣೆ ಹೊರುತ್ತಾನೆ. ಪ್ರತಿಯೊಂದರಲ್ಲೂ ಮನೆಯ ಎಲ್ಲರಿಗೂ ಸಮಪಾಲು ದೊರೆಯುವಂತೆ ನೋಡಿಕೊಳ್ಳುತ್ತಾನೆ. ಜೊತೆಗೆ, ತನಗಿಂತ ಇತರರ ಅಗತ್ಯಗಳು ಅವನಿಗೆ ಮುಖ್ಯವಾಗುತ್ತವೆ. ಇಂತಹ ಜವಾಬ್ದಾರಿಯನ್ನು ತೆಗೆದುಕೊಳ್ಳದಿದ್ದ ಪಕ್ಷದಲ್ಲಿ ಆ ವ್ಯಕ್ತಿಯನ್ನು ಮನೆಯವರು ಅಥವಾ ಹೊರಗಿನವರು ಗೌರವದಿಂದ ನೋಡುವುದಿಲ್ಲ.   

ಹಾಗಿದ್ದರೆ ನಾಯಕನಾಗಬೇಕಾದವನಿಗೆ ಇರಬೇಕಾದ ಮುಖ್ಯ ಗುಣಗಳು ಇವು:

  1. ಆತ ಮೊದಲು ತನ್ನದೇ ಆದ ಒಂದು ಕಾರ್ಯಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಆ ಕಾರ್ಯಕ್ಷೇತ್ರದ ಅತ್ಯಂತ ದೊಡ್ಡ ಮತ್ತು ಪ್ರಮುಖ ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕು.
  2. ಆತ ಯಾವುದೇ ಸಮಸ್ಯೆಯನ್ನು ಆಯ್ದುಕೊಳ್ಳಲಿ, ಅದರ ಕುರಿತು ಸಮಗ್ರವಾಗಿ ಅರಿಯಲು ಪ್ರಯತ್ನಿಸಬೇಕು ಮತ್ತು ಅದನ್ನು ಪರಿಹರಿಸಲು ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಿದ್ಧನಿರಬೇಕು.
  3. ಆತ ತನ್ನ ಕಾರ್ಯಕ್ಷೇತ್ರದಲ್ಲಿರುವವರ ಯೋಗಕ್ಷೇಮ ತನಗಿಂತಲೂ ಮುಖ್ಯ ಎಂದು ಪರಿಗಣಿಸಿ ಅದಕ್ಕಾಗಿ ಸಿದ್ಧನಿರಬೇಕು.

ನಮಗೆ ನಾಯಕತ್ವದ ಗುಣಗಳ ಪಾಠ ಮಾಡುವಾಗ ಆತ ಧೈರ್ಯವಂತನಾಗಿರಬೇಕು, ಆತ ಕರುಣಾಳುವಾಗಿರಬೇಕು ಅಂತೆಲ್ಲ ಹೇಳುತ್ತಾರೆ. ಆದರೆ ನೋಡಿ, ಈ ಯಾವುದೂ ನೀವು ನೇರವಾಗಿ ನಾಯಕನಾಗಲು ಸಹಾಯ ಮಾಡುವುದಿಲ್ಲ.

ನಾಯಕತ್ವಕ್ಕೆ ಬಹಳ ಸರಳ ಮತ್ತು ಸುಲಭ ಸೂತ್ರ ಇದು: “ಒಂದು ಸಮಸ್ಯೆಯನ್ನು ಆಯ್ಕೆಮಾಡಿಕೊಳ್ಳಿ ಮತ್ತು ಅದನ್ನು ಪರಿಹರಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಿ”.

ಇಷ್ಟು ಸಾಕು, ಉಳಿದ ಎಲ್ಲ ನಾಯಕತ್ವದ ಗುಣಗಳನ್ನು ಪಡೆದುಕೊಳ್ಳಲು ನೀವು ಯಾವುದೇ ಪರಿಶ್ರಮ ಪಡಬೇಕಾಗಿಲ್ಲ. ಏಕೆಂದರೆ, ಆ ಎಲ್ಲ ನಾಯಕತ್ವದ ಗುಣಗಳು ಈಗಾಗಲೇ ನಿಮ್ಮಲ್ಲಿವೆ. ಅವುಗಳಿಗೆ ಒಂದು ದಿಕ್ಕು-ಗುರಿ ಅನ್ನುವುದನ್ನು ನೀವಿನ್ನೂ ನೀಡಿಲ್ಲ ಅಷ್ಟೇ. ಪ್ರಯತ್ನಿಸಿ ನೋಡಿ.

Leave a Reply

Your email address will not be published. Required fields are marked *