ಬಚ್ಚಲು ಮನೆಯಲ್ಲಿಯೇ ಏಕೆ ಹೆಚ್ಚಿನ ಐಡಿಯಾಗಳು ಹೊಳೆಯುತ್ತವೆ?

ಮೈಮೇಲೆ ನೀರು ಸುರಿಯುತ್ತಿದ್ದರೆ, ಇದ್ದಕ್ಕಿದ್ದಂತೆ ಮನಸ್ಸಿನಲ್ಲೊಂದು ಶವರ್ ತೆರೆದುಕೊಂಡಂತೆ ಕಥಾ ಲಹರಿ ಬಿಚ್ಚಿಕೊಳ್ಳುತ್ತದೆ. ಎಷ್ಟುಹೊತ್ತು ಅಲ್ಲಿದ್ದೆವೋ, ಎಷ್ಟು ನೀರು ಅನ್ಯಮನಸ್ಕತೆಯಲ್ಲಿ ಸುರಿದುಕೊಂಡೆವೋ ಗೊತ್ತಾಗುವುದಿಲ್ಲ. ಕಥೆಗಾರರಿಗಷ್ಟೇ ಅಲ್ಲ, ಮನೆ ಕಟ್ಟುವವರಿಗೆ, ಸಾಫ್ಟ್‌ವೇರ್ ಕೋಡ್ ಬರೆಯುವವರಿಗೆ ಎಲ್ಲರಿಗೂ ಹೀಗೆ ಸ್ನಾನಗೃಹದಲ್ಲಿರುವಾಗಲೇ ಹೊಸ ಆಲೋಚನೆ ಹೊಳೆಯುತ್ತವೆ. ಇದಕ್ಕೆ ಒಂದಷ್ಟು ವೈಜ್ಞಾನಿಕ ಕಾರಣಗಳನ್ನು ಹುಡುಕುವುದು ಮತ್ತು ನಾವೇ ಹೊಸ ಐಡಿಯಾಗಳು ಹುಟ್ಟುವಂತಹ ಸ್ಥಿತಿಯನ್ನು ನಿರ್ಮಿಸಿಕೊಳ್ಳುವುದು ಹೇಗೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ.

ಬಚ್ಚಲು ಮನೆ ಸೇರುತ್ತಿದ್ದಂತೆ ಹೀಗೆ ಐಡಿಯಾಗಳು ಯಾಕೆ ಬರುತ್ತವೆ ಅನ್ನುವುದಕ್ಕೆ ಇರಬಹುದಾದ ಸಾಧ್ಯತೆಗಳನ್ನು ಮೊದಲು ಪಟ್ಟಿಮಾಡೋಣ:

  • ಕೆಲಸದ ಒತ್ತಡ, ಟ್ರಾಫಿಕ್ ಸದ್ದು, ಹೊಗೆ ವಾಸನೆ, ಟಿವಿ, ಮ್ಯೂಸಿಕ್ – ಹೀಗೆ ನಿರಂತರವಾಗಿ ಇಂದ್ರಿಯಗಳ ಮೇಲೆ ಪ್ರಹಾರ ನಡೆಯುತ್ತಲೇ ಇರುತ್ತದೆ. ಬಚ್ಚಲಿಗೆ ಬಂದ ತಕ್ಷಣ ಅದೆಲ್ಲ ಒಂದು ಕ್ಷಣ ನಿಂತುಹೋಗುತ್ತದೆ. ಆ ಒಂದು ಕ್ಷಣದಲ್ಲಿ ಮೆದುಳಿನ ಕೆಲಸ ಕಡಿಮೆ ಆಗುತ್ತದೆ. ಹೀಗೆ ಮನಸ್ಸು ಹಗುರಾಗುವುದರಿಂದಾಗಿ ಮನಸ್ಸಿನಲ್ಲಿ ಕ್ರಿಯೆಟಿವ್ ಯೋಚನೆಗಳು ಹೊಳೆಯುತ್ತವೆ.
  • ಎಲ್ಲ ಕೆಲಸಗಳಿಂದ, ಎಲ್ಲ ಆಲೋಚನೆಗಳಿಂದ ವಿರಾಮ ಪಡೆದ ಸ್ಥಿತಿಯಲ್ಲಿ ಸ್ನಾನ ಎನ್ನುವುದು ಒಂದು ಚಿಕ್ಕ ವಿಹಾರವೇ ಆಗುತ್ತದೆ. ಅದಕ್ಕೆ ಮನಸ್ಸು, ದೇಹ ಸಿದ್ಧಗೊಳ್ಳುತ್ತದೆ. ಹೀಗೆ ನಿಶ್ಚಿಂತಗೊಂಡ ಸ್ಥಿತಿಯಲ್ಲಿ ಮನಸ್ಸು ಹೊಸ ಆಲೋಚನೆಗಳಿಗೆ, ಐಡಿಯಾಗಳಿಗೆ ತೆರೆದುಕೊಳ್ಳುತ್ತದೆ.
  • ತಂಪಾದ ಅಥವಾ ಬೆಚ್ಚಗಿನ ನೀರಿನಲ್ಲಿ ಮೀಯುವುದರಿಂದಾಗಿ.
  • ಎಷ್ಟೋ ಬಾರಿ ಮನಸ್ಸನ್ನು ಒಂದು ಸಮಸ್ಯೆಯ ಮೇಲೆ ಎಷ್ಟು ಕೇಂದ್ರೀಕರಿಸಿರುತ್ತೇವೆಂದರೆ ನಮಗೆ ಆ ನಾವು ಅನೇಕ ಸಾಧ್ಯತೆಗಳ ಕಡೆಗೆ ತೆರೆದುಕೊಳ್ಳುವುದೇ ಇಲ್ಲ. ಆದರೆ, ಸ್ನಾನದ ಸಮಯದಲ್ಲಿ ಮನಸ್ಸನ್ನು ಈ ಎಲ್ಲ ಆಲೋಚನೆಗಳಿಂದ ಮುಕ್ತಗೊಳಿಸುವ ಕಾರಣದಿಂದಾಗಿ ಒಳಮನಸ್ಸಿನಿಂದ ಈ ಸ್ಪೂರ್ತಿಯ ಆಲೋಚನೆಗಳು ಹೊರಬರುತ್ತವೆ.
  • ಸ್ನಾನಗ್ರಹದ ಚಿಕ್ಕ ನಾಲ್ಕುಗೋಡೆಯ ಮಧ್ಯೆ ಸಿಗುವ ಏಕಾಂತದ ಕಾರಣಕ್ಕಾಗಿ.
  • ಸ್ನಾನ ಕೂಡಾ ಒಂದು ರೀತಿಯಲ್ಲಿ ಧ್ಯಾನದಂತೆ, ನಾವು ಮೈ ಮತ್ತು ಮನಸ್ಸಿನ ಮೇಲೆ ಗಮನಹರಿಸುತ್ತೇವೆ ಆದ್ದರಿಂದ ಮನಸ್ಸು ಶಾಂತಗೊಳ್ಳುತ್ತದೆ, ಹಾಗಾಗಿ.

ಆದರೆ ಇವೆಲ್ಲಕ್ಕಿಂತ ಮುಖ್ಯವಾಗಿ ಇನ್ನೊಂದು ಕಾರಣ ಇದೆ, ಅದು ನೀರು ಮತ್ತು ನೀರಿನ ಸ್ವಭಾವ.

ನಮ್ಮ ದೇಹದಲ್ಲಿ ಸುಮಾರು 50-75% ನಷ್ಟು ಭಾಗ ನೀರೇ ಇದೆ, ಅಂದರೆ ನಾವು ಹೆಚ್ಚಾನೆಚ್ಚು ನೀರಿನಿಂದಲೇ ಮಾಡಲ್ಪಟ್ಟಿದ್ದೇವೆ. ಈ ಕಾರಣದಿಂದಲೇ ನೀರಿನ ಸಮೀಪಕ್ಕೆ ಹೋಗುತ್ತಿದ್ದಂತೆ ನಮ್ಮ ದೇಹ ಅದರೊಡನೆ ತನ್ಮಯತೆಯನ್ನು ಸಾಧಿಸುತ್ತದೆ. (ಸಣ್ಣ ಮಕ್ಕಳಲ್ಲಿ ನೀರಿನ ಅಂಶ ವಯಸ್ಕರಿಗಿಂತ ಹೆಚ್ಚಿರುತ್ತದೆ. ಮಕ್ಕಳು ನೀರನ್ನು ಕಂಡರೆ ಉತ್ಸಾಹಗೊಳ್ಳುವುದನ್ನು ಗಮನಿಸಿ.) ನದಿ, ಜಲಪಾತಗಳು, ಅಥವಾ ಕೆರೆಯ ದಂಡೆಯ ಬಳಿ ಹೋದ ತಕ್ಷಣ ಅಥವಾ ದಾರಿಯಲ್ಲಿ ನಲ್ಲಿಯೊಂದರಿಂದ ನೀರು ಸುರಿಯುತ್ತಿದ್ದುದನ್ನು ನೋಡಿದರೂ ಒಂದು ಕ್ಷಣ ಚೇತೋಹಾರಿ ಭಾವ ಹುಟ್ಟುತ್ತದೆ. ಇದಕ್ಕೆ ನಮ್ಮೊಳಗೆ ಇರುವ ನೀರೇ ಕಾರಣ ಅಲ್ಲವೇ? ನೀರಿಗೆ ನೀರಿನೆಡೆಗೆ ಇರುವ ಸೆಳೆತ ಅಲ್ಲವೇ?

ನದಿ ದಂಡೆಗಳಲ್ಲಿ ನಾಗರೀಕತೆಗಳು ಅರಳಿದ್ದಕ್ಕೆ ಮತ್ತು ಮನುಷ್ಯರು ಜೀವಿಸುವುದಕ್ಕಾಗಿ ಅಂತಹ ಪ್ರದೇಶಗಳನ್ನು ಹುಡುಕಿಕೊಂಡು ಹೋಗುವುದಕ್ಕೆ ಕೇವಲ ದಿನನಿತ್ಯದ ಬಳಕೆ ಅಥವಾ ಕೃಷಿಯಂತಹ ಕಾರಣ ಮಾತ್ರ ಮಾತ್ರ ಇದ್ದಿರಲಾರದು. ನೀರಿನ ಸಮೀಪದಲ್ಲಿ ಮನುಷ್ಯ ಬಹಳ ಬೇಗ ನಿಶ್ಚಿಂತ ಮನಸ್ಥಿತಿಯನ್ನು ತಂದುಕೊಳ್ಳುತ್ತಾನೆ, ಧ್ಯಾನ ಸುಲಭವಾಗುತ್ತದೆ, ಮನಸ್ಸು ಸೃಜನಶೀಲವಾಗುತ್ತದೆ. ಹೀಗಾಗಿಯೇ ನಾವು ಭಾರತೀಯರು ಎಲ್ಲ ಮೂಲಗಳ ನೀರನ್ನೂ ಶಿವನ ನೆತ್ತಿಯಿಂದ ಇಳಿದ ಗಂಗೆಯೇ ಅನ್ನುತ್ತೇವೆ, ಅವುಗಳನ್ನು ಪೂಜಿಸುತ್ತೇವೆ.

ನೀರಿನ ನೆನಪುಗಳು

ನೀರಿನಿಂದ ನಮ್ಮ ಮನಸ್ಥಿತಿ ಬದಲಾಗುತ್ತದೆ ಅನ್ನುವುದಷ್ಟೇ ಅಲ್ಲ, ನಮ್ಮ ಆಲೋಚನೆಗಳು ನೀರನ್ನು ಕೂಡಾ ಬದಲಾಯಿಸುತ್ತವೆ ಎಂದು ಜಪಾನಿನ ವಿಜ್ಞಾನಿ ಮಸರು ಎಮೊಟೊ ಹೇಳಿದ್ದಾನೆ. ‘ದ ಹಿಡನ್ ಮೆಸೇಜಸ್ ಆಫ್ ವಾಟರ್’ ಎಂಬ ಪುಸ್ತಕದಲ್ಲಿ ಎಮೊಟೊ ನೀರಿಗೂ ನೆನಪುಗಳಿರುತ್ತವೆ ಎಂಬುದನ್ನು ಪ್ರಾಯೋಗಿಕವಾಗಿ ವಿವರಿಸುತ್ತಾನೆ.

ನೀವು ನೀರಿನ ಸಮೀಪ ಇದ್ದಾಗ ನಿಮ್ಮ ಮನಸ್ಸಿನಲ್ಲಿ ಆನಂದದ, ಒಳ್ಳೆಯ ಯೋಚನೆಗಳಿದ್ದರೆ, ಆ ನೀರು ಒಂದು ರೀತಿಯ ಕ್ರಿಸ್ಟಲ್ ಆಕಾರಕ್ಕೆ ತಿರುಗಿದರೆ, ನಿಮ್ಮ ಮನಸ್ಸಿನಲ್ಲಿ ಬೇಸರದ, ದುಃಖದ ಯೋಚನೆಗಳಿದ್ದರೆ ಆಗ ನೀರಿನ ಅಣುಗಳು ಚೆಲ್ಲಾಪಿಲ್ಲಿಯಾಗಿ ಹರಡಿಹೋಗುಗುತ್ತವೆ. ನಿರಂತರವಾಗಿ ನಮ್ಮ ಆಲೋಚನೆಗಳ ಮೂಲಕ ನಮ್ಮ ಮೈಯೊಳಗಿನ ನೀರನ್ನು ನಾವು ಹೇಗೆ ಪ್ರಭಾವಿಸುತ್ತೇವೆ, ಅದು ನಮ್ಮ ದೇಹದ ಕ್ರಿಯೆಗಳ ಮೇಲೆ, ಮತ್ತು ಆ ಮೂಲಕ ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅಂದರೆ, ನೀರು ನಮ್ಮನ್ನು ಒಳ್ಳೆಯ ರೀತಿಯಲ್ಲಿ ಪ್ರಭಾವಿಸಲು ಅವಕಾಶ ಮಾಡಿಕೊಟ್ಟರೆ ಅದು ನಮ್ಮನ್ನಷ್ಟೇ ಬದಲಾಯಿಸುವುದಿಲ್ಲ, ತಾನೂ ಬದಲಾಗುತ್ತದೆ, ಅಲ್ಲವೇ?

ಈಗ ನೀರನ್ನು ಬಳಸಿಕೊಂಡು ಸೃಜನಶೀಲತೆಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ನೋಡೋಣ. ಈ ಲೇಖನದಲ್ಲಿ ಅಂತಹ ಒಂದು ಉಪಾಯದ ಕುರಿತು ಮಾತ್ರ ವಿವರಿಸುತ್ತೇನೆ. ಇದೊಂದನ್ನು ಮಾಡಿ ನೋಡಿ.

ಕ್ರಿಯೇಟಿವಿಟಿಯನ್ನು ಹೆಚ್ಚಿಸಿಕೊಳ್ಳಲು ನೀರನ್ನು ಬಳಸಿಕೊಳ್ಳುವುದು ಹೇಗೆ?

ಹಳ್ಳಿಗಳಲ್ಲಿ ಜೀವಿಸುವ ಜನರಿಗೆ ಬಾವಿ, ಕೆರೆ, ತೊರೆಗಳಂತಹ ನೀರಿನ ಮೂಲಗಳು ಅನೇಕ ಸಿಗುತ್ತವೆ. ಅವುಗಳನ್ನು ದೈನಂದಿನ ಕೆಲಸಗಳಿಗೆ ಬಳಸಿಕೊಳ್ಳುವುದನ್ನು ಬಿಟ್ಟರೆ ಎಷ್ಟು ಜನ ಆ ಜಲಮೂಲಗಳ ಕಡೆಗೆ ಹುಟ್ಟುವ ಸೆಳೆತಕ್ಕೆ ತೆರೆದುಕೊಳ್ಳುತ್ತಾರೆ? ಕೇವಲ ಸಾಂಗತ್ಯಕ್ಕಾಗಿ ಬಾವಿ, ಕೆರೆಗಳನ್ನು ಹುಡುಕಿಕೊಂಡು ಹೋಗುತ್ತಾರೆ? ನೀವು ಹಳ್ಳಿಗಳಲ್ಲಿ ಜೀವಿಸುವವರಾದರೆ, ಕೆರೆ, ಬಾವಿಗಳ ಸನ್ನಿದಿಯಲ್ಲಿ ಕುಳಿತು ನೋಡಿ – ನಿಮ್ಮೊಳಗೆ ಏನು ಬದಲಾವಣೆಗಳಾಗುತ್ತವೆ ನೋಡಿ.

ನಗರಗಳಲ್ಲಂತೂ ಹೀಗೆ ನಿತ್ಯ ಏಕಾಂತವಾಗಿರುವ ಸಂದರ್ಭ ಸಿಗುವುದೇ ಕಷ್ಟ. ಇರುವುದರಲ್ಲಿ, ಸ್ನಾನದ ಮನೆಯಲ್ಲಿಯೇ ಹೀಗೆ ಏಕಾಂತ ಮತ್ತು ನೀರಿನ ಸಂಸರ್ಗ ಎರಡೂ ಲಭ್ಯವಾಗುವುದು. ಆದರೆ ನೀರಿನ ನೆನಪುಗಳನ್ನೇ ಬಳಸಿಕೊಂಡು ಸೃಜನಶೀಲತೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಒಂದು ಉಪಾಯ ಇದೆ.  

ಸುಲಭ ಸೂತ್ರ: ನೀವು ಅನೇಕ ಜಲಪಾತಗಳನ್ನು, ನದಿ-ಸಮುದ್ರಗಳನ್ನು ನೋಡಿಬಂದಿರುತ್ತೀರಲ್ಲವೇ, ದಿನಕ್ಕೊಮ್ಮೆ ಒಂದು ಆರಾಮಾದ ಸ್ಥಳದಲ್ಲಿ ಕುಳಿತು ಆ ಜಲಪಾತದ ಅಡಿಗೆ ನಿಂತಿದ್ದನ್ನು, ನದಿಯಲ್ಲಿ ಈಜಿದ್ದನ್ನು ನೆನಪುಮಾಡಿಕೊಳ್ಳಿ. ಅದನ್ನು ಈಗತಾನೇ ನಡೆಯುತ್ತಿದೆ ಎಂಬ ಭಾವವನ್ನು ಅನುಭವಿಸಿ. ಇದರಿಂದ ಏನು ಪ್ರಯೋಜನ?

ಹೀಗೆ ನೀವು ಮಾಡುತ್ತಿದ್ದಂತೆ ನಿಮ್ಮ ಮನಸ್ಸು ಮತ್ತು ದೇಹ ಪ್ರತಿಸ್ಪಂದಿಸುತ್ತದೆ. ಹೀಗೆ ನಿಮ್ಮ ಕಲ್ಪನೆಯಲ್ಲಿ ನೀವು ನೀರಿನ ಸಂಸರ್ಗವನ್ನು ಹೊಂದುತ್ತಿದ್ದಂತೆ, ಮನಸ್ಸು ತಾನಾಗಿಯೇ ಹಗುರಾಗುತ್ತದೆ. ಆಗ ನಿಮ್ಮಲ್ಲಿ ಕ್ರಿಯೇಟಿವಿಟಿ ಅರಳುತ್ತದೆ. (ಕವಿ ವಿಲಿಯಮ್ ವರ್ಡ್ಸ್‌ವರ್ಥ್ ತನ್ನ ಪ್ರಸಿದ್ಧ ಕವಿತೆ ’ಟಿಂಟರ್ನ್ ಆಬೆ’ಯಲ್ಲಿ ತಾನು ಇದೇ ಪ್ರಯೋಗ ಮಾಡಿದ್ದರ ಕುರಿತು ಹೇಳುತ್ತಾನೆ.)

ಇದು ಕೂಡಾ ಒಂದು ಧ್ಯಾನದ ಪ್ರಕ್ರಿಯೆಯೇ. ಪ್ರಯತ್ನಿಸಿ ನೋಡಿ. ನಿಮ್ಮ ಅನುಭವಗಳನ್ನು ಕೆಳಗೆ ಹಂಚಿಕೊಳ್ಳಿ.

1 comment

  1. ಒಂದು ಉಪಯುಕ್ತ ವಿಷಯದ ಬಗ್ಗೆ ತಿಳಿದುಕೊಂಡ ಸಂತೋಷ.

Leave a Reply

Your email address will not be published. Required fields are marked *