‘ಓಹೋ ನಿಮ್ಮದೂ ಬ್ಲಾಗ್ ಇದೆಯಾ? ಯಾವುದರ ಬಗ್ಗೆ ಬರೆಯುತ್ತೀರಿ?’
‘ಎಲ್ಲದರ ಬಗ್ಗೆಯೂ – ಕವಿತೆ, ಕತೆ, ಸಿನೆಮಾ ವಿಮರ್ಶೆ ಹೀಗೆ..’
‘ಓಹೋ ಹಾಗೆ..’
ಎಲ್ಲದರ ಬಗ್ಗೆಯೂ ಅನ್ನುವಾಗ ನಿಮಗೆ ಗರ್ವವಾಗುತ್ತದೆಯೋ ಅಥವಾ ಸಂಕೋಚವೋ?
ಅದಿರಲಿ,
ನೀವು ನಿರಂತರವಾಗಿ ಬ್ಲಾಗ್ ಬರೆಯುತ್ತೀರಾ? ನನಗಂತೂ ನಿರಂತರವಾಗಿ ಬರೆಯಲು ಬಹಳ ಕಾಲದವರೆಗೆ ಸಾಧ್ಯವಾಗಲೇ ಇಲ್ಲ. ಯಾಕೆ ಹೀಗೆ, ಒಂದಷ್ಟು ಸಮಯದ ನಂತರ ಬ್ಲಾಗ್ ಅಪ್‌ಡೇಟ್ ಮಾಡಲು ಯಾಕೆ ಸಾಧ್ಯವಾಗುವುದಿಲ್ಲ ಅಂತ ಯೋಚಿಸಿದಾಗ ಒಂದು ಕಾರಣ ಸ್ಪಷ್ಟವಾಗಿ ಕಾಣಿಸಿತು.
ನಮ್ಮ ಬ್ಲಾಗಿನಲ್ಲಿ ಒಂದಷ್ಟು ಕವಿತೆಗಳು, ಕತೆಗಳು, ಸಿನೆಮಾ ವಿಮರ್ಶೆ, ಪ್ರವಾಸಾನುಭ, ಜೀವನಾನುಭವ ಇತ್ಯಾದಿಗಳನ್ನು ಬರೆಯುತ್ತೇವೆ. ಆದರೆ ಅದು ನಮ್ಮ ಬ್ಲಾಗಿಗೆ ಒಂದು ಐಡೆಂಟಿಟಿಯನ್ನು ದೊರಕಿಸಿಕೊಡುತ್ತದೆಯೇ? ಬರೆದದ್ದನ್ನು ಪ್ರಕಟಿಸಬೇಕು ಎಂಬುದರ ಹೊರತಾಗಿ ಅದಕ್ಕೊಂದು ನಿರ್ದಿಷ್ಟ ಗುರಿ ಇದೆಯೇ?
ನನ್ನ ಈ ಮೊದಲಿನ ಬ್ಲಾಗುಗಳಲ್ಲಿ ಅಂತಹ ನಿರ್ದಿಷ್ಟ ಗುರಿ ಇರಲಿಲ್ಲ. ’ನಾನು’ ಬರೆಯುತ್ತಿದ್ದೇನೆ ಅನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ಐಡೆಂಟಿಟಿ ಅದಕ್ಕಿರಲಿಲ್ಲ. ಒಂದು ಆಯ್ದ ಕ್ಷೇತ್ರದ ಕುರಿತು ಬರೆಯುತ್ತಿರಲಿಲ್ಲ, ನನ್ನ ಬ್ಲಾಗಿನಿಂದ ಓದುಗರಿಗೆ ಏನಾದರೂ ಪ್ರಯೋಜನ, ಅಥವಾ ಅವರು ಮತ್ತೆ ನನ್ನ ಬ್ಲಾಗಿಗೆ ಮರಳಿ ಬರುವುದಕ್ಕೆ ಕಾರಣವಾದಂತಹ ವಿಷಯ? ಇವು ಯಾವುದೂ ಇರಲಿಲ್ಲ.
ಹೀಗಾಗಿಯೇ ಓದುಗರಿಗೆ ಆಸಕ್ತಿ ಹುಟ್ಟಿಸುವ, ಅವರಿಗೆ ಏನನ್ನಾದರೂ ಕಲಿಸುವ ಉದ್ದೇಶದಿಂದ ಒಂದು ವಿಷಯಾಧಾರಿತ ಬ್ಲಾಗ್ ಮಾಡಬೇಕೆಂದು ನಿರ್ಧರಿಸಿದೆ. ಹೀಗೆ ಹುಟ್ಟಿಕೊಂಡಿದ್ದು ’ಅಕ್ಷರಧಾಮ’.
ಒಂದು ನಿರ್ದಿಷ್ಟ ವಿಷಯದ ಕುರಿತು ಬ್ಲಾಗ್ ಯಾಕೆ ಮಾಡಬೇಕು, ಅದರಿಂದ ಏನು ಪ್ರಯೋಜನ ಎಂಬುದು ನಿಮ್ಮ ಪ್ರಶ್ನೆಯೇ? ಮುಂದೆ ಓದಿ.
ಒಂದು ಕ್ಷೇತ್ರದ ಆಯ್ಕೆ (Developing a niche) ಯಾಕೆ, ಅದರಿಂದ ಏನು ಪ್ರಯೋಜನ?
Teaching is the best way of learning ಅನ್ನುತ್ತಾರೆ. ಒಂದು ನಿರ್ದಿಷ್ಟ ಕ್ಷೇತ್ರದ ಕುರಿತು ನೀವು ಅಧ್ಯಯನ ಮಾಡಿ, ಬರೆಯಲು ಪ್ರಾರಂಭಿಸಿದಾಗ ನೀವು ನೂರಾರು ಜನರಿಗೆ ಆ ಕ್ಷೇತ್ರದ ಕುರಿತು ಕಲಿಸುತ್ತೀರಿ, ಅದಕ್ಕಿಂತ ಹೆಚ್ಚಾಗಿ ನೀವು ಕ್ಷೇತ್ರದಲ್ಲಿ ಪರಿಣತರಾಗುತ್ತೀರಿ.
ವಿಷಯಾಧಾರಿತ ಬ್ಲಾಗ್ ಎಂದರೆ ಒಂದು ನಿರ್ದಿಷ್ಟ ಕ್ಷೇತ್ರದ ಕುರಿತು – ಕನ್ನಡದ ಕವಿಗಳು, ಆಂಡ್ರಾಯ್ಡ್ ಫೋನುಗಳು, ಕರ್ನಾಟಕದ ಪಕ್ಷಿಗಳು, ಹೊಸ ರುಚಿ, ಹೀಗೆ – ನಿರಂತರವಾಗಿ ಬರೆಯಲ್ಪಡುವ ಬ್ಲಾಗ್.
ಹೀಗೆ ಒಂದು ಕ್ಷೇತ್ರದ ಕುರಿತು ಬರೆಯಲು ಆರಂಭಿಸಿದಾಗ ನಿಮ್ಮ ಬ್ಲಾಗಿಗೆ ಒಂದು ನಿರ್ದಿಷ್ಟ ಗುರಿ ಮತ್ತು ಸ್ಪಷ್ಟತೆ ಇರುತ್ತದೆ.
ಯಾವುದೇ ಒಂದು ಕ್ಷೇತ್ರದ ಕುರಿತು ಒಂದು ಬ್ಲಾಗ್ ಪೋಸ್ಟ್ ಬರೆಯುವುದಕ್ಕೆ ಒಂದಷ್ಟು ಸಂಶೋಧನೆ, ಅಧ್ಯಯನ ಮಾಡುವುದು ಅಗತ್ಯವಿರುತ್ತದೆ. ಎಷ್ಟೋ ಬಾರಿ ಹೀಗೆ ಅಧ್ಯಯನ ಮಾಡುತ್ತಿದ್ದಾಗಲೇ ಇನ್ನೊಂದು (ಅಥವಾ ಹೆಚ್ಚು) ಲೇಖನಕ್ಕೆ ಐಡಿಯಾ, ಸಾಮಗ್ರಿ ದೊರೆಯುತ್ತದೆ. ಒಂದು ವಿಷಯದ ಕುರಿತು ಬ್ಲಾಗ್ ಮಾಡುವುದಾದರೆ ಈ ಅಧ್ಯಯನ ಹೆಚ್ಚು ಪೂರಕವಾಗಿರುತ್ತದೆ ಮತ್ತು, ನಾಲ್ಕೈದು ಲೇಖನಗಳನ್ನು ಬರೆಯುತ್ತಿದ್ದಂತೆ ಆ ಒಂದು ಕ್ಷೇತ್ರದ ಬಗ್ಗೆ ಆಸಕ್ತಿ ಕೂಡಾ ಹೆಚ್ಚಾಗುತ್ತದೆ.
ವಿಷಯಾಧಾರಿತ ಬ್ಲಾಗ್ ನಿಮ್ಮ ಜ್ಞಾನವನ್ನು ವಿಸ್ತಾರಗೊಳಿಸುತ್ತದೆ.
ಒಂದು ವಿಷಯದ ಕುರಿತು ನಿರಂತರವಾಗಿ ಬರೆಯುವುದೆಂದರೆ, ಅದರ ವಿಭಿನ್ನ ಆಯಾಮಗಳ ಕುರಿತು ಆಳವಾಗಿ ಓದಿ ತಿಳಿದುಕೊಳ್ಳಬೇಕಾಗುತ್ತದೆ, ಚಿಂತನೆ ಮಾಡಬೇಕಾಗುತ್ತದೆ. ಆದರೆ ವಿಷಯಾಧಾರಿತ ಬ್ಲಾಗ್ ಬರವಣಿಗೆಯಲ್ಲಿ ನೀವು ಬರೆದಷ್ಟೂ ಬರವಣಿಗೆ ಸುಲಭವಾಗುತ್ತದೆ ಮತ್ತು ಹೊಸ ವಿಷಯಗಳು ಹೊಳೆಯುತ್ತಾ ಹೋಗುತ್ತವೆ.
ನಿಮ್ಮಲ್ಲಿ ಪರಿಣತಿ ಹೆಚ್ಚುತ್ತಿದ್ದಂತೆ ನೀವು ಆಯ್ಕೆಮಾಡಿಕೊಂಡ ಕ್ಷೇತ್ರದ ಬಗ್ಗೆ ಹೊಸ ಸಂಗತಿಗಳನ್ನು ಬರೆಯುವುದು ಸುಲಭವಾಗುವುದರ ಜೊತೆಗೆ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.
ನಿರ್ದಿಷ್ಟ ಓದುಗ ವರ್ಗ ಬೆಳೆಯುತ್ತದೆ
ನೀವು ಈಗಾಗಲೇ ಪ್ರಸಿದ್ಧ ಲೇಖಕರಾಗಿದ್ದರೆ, ನೀವು ಯಾವ ವಿಷಯದ ಕುರಿತು ಬರೆದರೂ ನಿಮ್ಮ ಓದುಗರು ನಿಮ್ಮ ಬರವಣಿಗೆಗಾಗಿ, ನಿಮ್ಮ ವಿಚಾರಗಳಿಗಾಗಿ ಓದುತ್ತಾರೆ. ಅಲ್ಲದಿದ್ದ ಪಕ್ಷದಲ್ಲಿ ವಿಷಯಾಧಾರಿತ ಬ್ಲಾಗ್ ಓದುಗರನ್ನು ಸೆಳೆಯುವ ದೃಷ್ಟಿಯಿಂದಲೂ ಅಗತ್ಯ. ಓದುಗರಿಗೆ ತಮ್ಮದೇ ಆಸಕ್ತಿಯ ಕ್ಷೇತ್ರಗಳಿರುತ್ತವೆ. ತಮ್ಮ ಆಸಕ್ತಿಯದೇ ಒಂದು ಬ್ಲಾಗ್ ಇದ್ದರೆ, ಅವರು ಓದಲು ಮತ್ತೆ ಮತ್ತೆ ಬರುತ್ತಾರೆ. ನಿಮ್ಮ ಬ್ಲಾಗ್ ಅತ್ಯುತ್ತಮ ವಿದೇಶೀ ಸಿನೆಮಾಗಳ ಕುರಿತು ಇದ್ದದ್ದಾದರೆ ಅದನ್ನೇ ಓದಲು ಬರುವವರು ಇರುತ್ತಾರೆ. ಆದರೆ ಆ ಕುರಿತು ಎಲ್ಲೋ ಒಂದು ಲೇಖನ ಇದೆ ಎಂದಾದರೆ ಆ ಓದುಗರು ಮತ್ತೆ ಬರುವುದಿಲ್ಲ.
ನೀವು ಕರ್ನಾಟಕದ ಹಕ್ಕಿಗಳ ಕುರಿತು ನಿರಂತರವಾಗಿ ಬರೆಯುತ್ತಿದ್ದರೆ, ನಿಮ್ಮ ಬ್ಲಾಗ್ ಕಾಲಾಂತರದಲ್ಲಿ ನಾಡಿನ ಪಕ್ಷಿಗಳ ಕುರಿತಾದ ಒಂದು ರೆಫರೆನ್ಸ್ ಗೈಡ್ ಆಗಿ ಬೆಳೆಯುತ್ತದೆ. ಈ ಕುರಿತು ಆಸಕ್ತಿ ಇರುವವರೆಲ್ಲ ನಿಮ್ಮ ಬ್ಲಾಗ್‌ನ ಅಭಿಮಾನಿಗಳಾಗುವುದರಿಂದ ನಿಮ್ಮದೇ ಒಂದು ಓದುಗ ವರ್ಗ ಹುಟ್ಟಿಕೊಳ್ಳುತ್ತದೆ.
ಒಂದು ವಿಷಯದ ಕುರಿತು ನೀವಷ್ಟೇ ಪರಿಣಿತಿ ಪಡೆಯುವುದಿಲ್ಲ, ನಿಮ್ಮ ಓದುಗರಿಗೂ ಅದರ ಕುರಿತು ಕಲಿಸುತ್ತಿರುತ್ತೀರಿ. ಮತ್ತು ನಿಮ್ಮದೇ ಓದುಗರ ಒಂದು ಬಳಗ ಬೆಳೆಯುತ್ತದೆ.
ಹಾಗಿದ್ದರೆ ವಿಷಯಾಧಾರಿತ ಬ್ಲಾಗ್ ಮಾಡುವುದು ಹೇಗೆ?
ಒಂದು ವಿಷಯಾಧಾರಿತ ಬ್ಲಾಗ್ ಪ್ರಾರಂಭಿಸುವ ಮೊದಲು ನೀವು ಯಾವುದು ನಿಮ್ಮ ಅತ್ಯಂತ ಆಸಕ್ತಿಯ ಕ್ಷೇತ್ರ ಎನ್ನುವುದನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ಅಂದರೆ ನೀವು ಬರೆಯುವ ವಿಷಯದಲ್ಲಿ ನಿಮಗೆ ರುಚಿ ಇರಬೇಕು. ಇಲ್ಲದಿದ್ದರೆ ಆ ಬ್ಲಾಗ್ ಅನ್ನು ಬಹಳ ದಿನಗಳ ಕಾಲ ಮುಂದುವರೆಸಿಕೊಂಡು ಹೋಗಲು ನಿಮ್ಮಿಂದ ಸಾಧ್ಯವಾಗದಿರಬಹುದು.
ನಿಮ್ಮ ಸಂಭಾವ್ಯ ಓದುಗರ ಆಸಕ್ತಿ ಏನಿರಬಹುದು ಎಂಬುದನ್ನು ಗುರುತಿಸಿಕೊಂಡು ವಿಷಯಾಧಾರಿತ ಬ್ಲಾಗ್ ಪ್ರಾರಂಭಿಸುವುದು ಒಳ್ಳೆಯದೇ. ಆದರೆ, ಆ ಕ್ಷೇತ್ರ ನಿಮಗೂ ಆಸಕ್ತಿಕರ ಆಗಿರಬೇಕು. ನಿಮಗೆ ಕ್ರಿಕೇಟ್ ಕುರಿತು ಆಸಕ್ತಿಯೇ ಇಲ್ಲದಿದ್ದ ಪಕ್ಷದಲ್ಲಿ ನೀವು ಓದುಗರಿಗೆ ಇಷ್ಟವಾದೀತು ಎಂದುಕೊಂಡು ಪ್ರಾರಂಭಿಸಬೇಡಿ. ನಿಮಗೆ ಯಾವುದು ಅತ್ಯಂತ ಆಸಕ್ತಿಕರ ಕ್ಷೇತ್ರವೋ ಅದನ್ನೇ ಆಯ್ಕೆಮಾಡಿ.
ಜೊತೆಗೆ, ನಿಮ್ಮ ಬ್ಲಾಗ್ ಪ್ರಚಲಿತ ಒಂದು ವಿಷಯದ ಕುರಿತು, ಅಂದರೆ ಯಾವುದೋ ಟಿವಿ ಕಾರ್ಯಕ್ರಮ, ನಿರ್ದಿಷ್ಟ ಧಾರಾವಾಹಿಯಂತಹ ವಿಷಯಗಳಿಗೆ ಸೀಮಿತವಾಗುವುದಾದರೆ, ಆ ಕಾರ್ಯಕ್ರಮ ಮುಗಿದು ಹೋಗುತ್ತಿದ್ದಂತೆ ನಿಮ್ಮ ಬ್ಲಾಗ್ ಕೂಡಾ ನಿಂತುಹೋಗುತ್ತದೆ. ಹಾಗಾಗಿ ದೀರ್ಘಕಾಲ ಪ್ರಚಲಿತವಿರುವಂತಹ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಇನ್ನು, ಈಗಾಗಲೇ ಇರುವ ನಿಮ್ಮ ಬ್ಲಾಗ್‌ನಲ್ಲಿ ನಿಮ್ಮ ಆಸಕ್ತಿಯ ಕ್ಷೇತ್ರಕ್ಕೆ ಸಂಬಂಧಿಸಿದ ಬರಹಗಳಿದ್ದರೆ, ಅವುಗಳನ್ನು ನಿಮ್ಮ ವಿಷಯಾಧಾರಿತ ಬ್ಲಾಗಿನಲ್ಲಿ ಮತ್ತೆ ಪ್ರಕಟಿಸಿ.
ಒಂದು ಎಚ್ಚರ ಇರಲಿ: ಇಂಟರ್ನೆಟ್‌ನಲ್ಲಿ ಈಗಾಗಲೇ ವಿಷಯ, ವಿಚಾರಗಳ ಕಸ ಬಹಳಷ್ಟಿದೆ, ನಿಮ್ಮ ಬ್ಲಾಗ್ ಇನ್ನೊಂದು ಕಸದ ಬುಟ್ಟಿಯಾಗಬಾರದು. ಹಾಗಾಗಿ, ನಿಮ್ಮ ಬ್ಲಾಗ್ ಅನ್ನು ನೀವು ಆಯ್ಕೆ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿದ ಅತ್ಯುತ್ತಮ ಬ್ಲಾಗ್ ಆಗಿಸುವುದಕ್ಕೆ ಪ್ರಯತ್ನಿಸಿ.
ಕನ್ನಡದಲ್ಲಿ ಪ್ರಸಿದ್ಧವಾಗಿರುವ ವಿಷಯಾಧಾರಿತ ಬ್ಲಾಗ್ ಗಳು:
- ಇಜ್ಞಾನ – ವಿಜ್ಞಾನ
- ಸಲ್ಲಾಪ – ಸಾಹಿತ್ಯ
- ಅಲೆಮಾರಿಯ ಅನುಭವಗಳು – ಪ್ರವಾಸ
ಈಗಾಗಲೇ ನೀವು ವಿಷಯಾಧಾರಿತ ಬ್ಲಾಗ್ ಹೊಂದಿದ್ದರೆ, ಕಮೆಂಟ್ ಬಾಕ್ಸ್‌ನಲ್ಲಿ ಲಿಂಕ್ ನೀಡಿ. ಅಥವಾ ಈ ವಿಷಯದ ಕುರಿತಂತೆ ಯಾವುದೇ ಪ್ರಶ್ನೆಯಿದ್ದರೆ ಕೇಳಿ.