ಹೊಸ ಬರಹಗಾರರಿಗೆ ಲೇಖಕ ಸ್ಟೀಫನ್ ಕಿಂಗ್ ನೀಡುವ ಸೂಚನೆಗಳು

ಅಮೇರಿಕಾದ ಲೇಖಕ ಸ್ಟೀಫನ್ ಕಿಂಗ್ “On Writing” ಎಂಬ ತನ್ನ ಪುಸ್ತಕದಲ್ಲಿ ಉತ್ತಮ ಕತೆಗಾರರಾಗಲು ಅಗತ್ಯವಾದ ನಿಯಮಗಳು ಮತ್ತು ಸೂಚನೆಗಳನ್ನು ನೀಡಿದ್ದು, ಕೆಲವು ಇಲ್ಲಿವೆ. ಸ್ಟೀಫನ್ ಕಿಂಗ್ ನೂರಿಪ್ಪತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದು, ಆತನ ಸೈನ್ಸ್ ಫಿಕ್ಷನ್, ಫ್ಯಾಂಟಸಿ ಮತ್ತು ಹಾರರ್ ಸರಣಿಯ ವಸ್ತುವಿಷಯಗಳಿರುವ ಕಾದಂಬರಿಗಳು ಅತ್ಯಂತ ಪ್ರಸಿದ್ಧವಾಗಿವೆ. ಈ ಲೇಖಕನ ಪುಸ್ತಕಗಳು ಮೂವತ್ತೈದು ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ.

`ನಿಯಮಗಳು’

1. ಏನು ಬರೆದರೂ ಅದನ್ನು ಮೊದಲು ನಿಮಗಾಗಿ ಬರೆದುಕೊಳ್ಳಿ, ಆನಂತರ ಓದುಗರ ಕುರಿತು ಚಿಂತಿಸಿದರಾಯಿತು. ಇತರರಿಗೆ ಸಮಾಧಾನ ಮಾಡಲು ಅಥವಾ ಸಂತೋಷಪಡಿಸಲು ಬರೆಯುವ ಮನಃಸ್ಥಿತಿ ನಿಮ್ಮಲ್ಲಿದೆಯೇ ನೋಡಿಕೊಳ್ಳಿ. ಅದರ ಅಗತ್ಯವಿಲ್ಲ.

2. ನೀವು ಓದುವುದು ಮತ್ತು ಬರೆಯುವುದು ಇದಿಷ್ಟರಿಂದಲೇ ಲೇಖಕರಾಗುತ್ತೀರಿ. ಹೆಚ್ಚು ಹೆಚ್ಚು ಓದಿದಷ್ಟೂ, ಹೆಚ್ಚು ಹೆಚ್ಚು ಬರೆದಷ್ಟೂ ಹೆಚ್ಚು ಕಲಿಯುತ್ತೀರಿ.

3. ನಿರಂತರವಾಗಿ ಓದಿ. ಓದಲು ನಿಮಗೆ ಸಮಯವಿಲ್ಲವೆಂದಾದರೆ, ಬರೆಯಲೂ ಸಮಯ (ಅಥವಾ ಸಾಧನಗಳು) ಇಲ್ಲವೆಂದುಕೊಳ್ಳಿ.

4. ಕತೆಯ ಮಾಯಾಲೋಕ ನಿಮ್ಮಲ್ಲೇ ಇದೆ. ಬರೆಯುವ ಕುರಿತು ಅಥವಾ ನಿಮ್ಮ ಬರವಣಿಗೆಯ ಕುರಿತು ಯಾವ ಭಯ, ಆತಂಕವನ್ನೂ ಇಟ್ಟುಕೊಳ್ಳಬೇಡಿ. ಹೆದರಿಕೆ ನಿಮ್ಮ ಬರವಣಿಗೆಯ ಸಹಜತೆಯನ್ನು ಹಾಳುಮಾಡುತ್ತದೆ.

5. ನಿಮ್ಮ ಬರವಣಿಗೆಯಲ್ಲಿ ಕರ್ಮಣಿ ಪ್ರಯೋಗವನ್ನು (Passive Voice) ಬಳಸಬೇಡಿ.
ಕ್ರಿಯಾ ವಿಶೇಷಣ (Adverb) ಬಳಕೆ ಮಾಡಬೇಡಿ

6. ಟಿವಿ ಆಫ್ ಮಾಡಿ, ದೂರವಾಣಿಯಿಂದ ದೂರವಿರಿ (ಬಹುಶಃ ಟಿವಿ ಗಿಂತ ನಾವು ಫೇಸ್ ಬುಕ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದೇವೆ ಅಂತಾದರೆ ಅದನ್ನೂ ಪರಿಶೀಲಿಸುವ ಅಗತ್ಯವಿದೆ.)

7. ಮೂರು ತಿಂಗಳು – ಯಾವುದೇ ಒಂದು ಪುಸ್ತಕದ ಮೊದಲ ಡ್ರಾಫ್ಟ್ ಬರೆಯಲು ಮೂರು ತಿಂಗಳುಕ್ಕಿಂತ ಹೆಚ್ಚು ಅಗತ್ಯವಿಲ್ಲ. ಈ ನಿಯಮವಿಟ್ಟುಕೊಂಡು ಬರೆಯಿರಿ.

https://www.youtube.com/watch?v=QtNmE28tgos

8. ಒಮ್ಮೆಗೆ ಒಂದು ಪದ ಎಂಬಂತೆ ಬರೆಯಿರಿ. ಒಂದು ಪುಟದ ವಿವರಣೆಯಿರಲಿ ಅಥವಾ ಒಂದಿಡೀ ಕಾದಂಬರಿ ಸರಣೀಯೇ ಇರಲಿ, ನಾವು ಒಮ್ಮೆಗೆ ಒಂದೇ ಪದ ಬರೆಯುತ್ತೇವೆ. (ಅಂದರೆ ಒಂದೊಂದೆ ಇಟ್ಟಿಗೆ ಇಟ್ಟು ಗೋಡೆ ಕಟ್ಟಿದಂತೆ. ನಾವು ಗೋಡೆ ಕಟ್ಟುವುದಿಲ್ಲ, ಒಂದೊಂದೇ ಇಟ್ಟಿಗೆ ಇಡುತ್ತೇವೆ, ಗೋಡೆ ತಾನಾಗಿಯೇ ಕಟ್ಟಲ್ಪಡುತ್ತದೆ. ಎಲ್ಲ ಸಾಧನೆಗಳೂ ಹೀಗೇ ಸಾಧ್ಯವಾಗುತ್ತವೆ ಎಂದು ಪ್ರಸಿದ್ಧ ನಟ ವಿಲ್ ಸ್ಮಿತ್ ಒಂದು ಕಡೆ ಹೇಳಿದ್ದಾನೆ. ಅಂದರೆ ಪ್ರತೀ ಪದದ ಸೂಕ್ತತೆ ಮತ್ತು ಪ್ರಸ್ತುತತೆಯ ಕುರಿತು ನಾವು ಗಮನವಿಟ್ಟರೆ ಸಾಕು, ಅವುಗಳು ಒಟ್ಟೂ ಕತೆಯ ಪೂರ್ಣತೆಗೆ ದುಡಿಯುತ್ತವೆ.)

9. ನಿಮ್ಮ ಪ್ರೀತಿಯ ಪಾತ್ರವನ್ನು ಸಾಯಿಸಿ. (ಹೌದು, ಇದನ್ನು ಹ್ಯಾರಿ ಪಾಟರ್ ಲೇಖಕಿ ಜೆ.ಕೆ.ರೌಲಿಂಗ್ ಕೂಡಾ ಹೇಳುತ್ತಾಳೆ. ಕ್ರೈಮ್ ಫಿಕ್ಷನ್ ಲೇಖಕನಾದ ಸ್ಟಿಫನ್ ಕಿಂಗ್ ಬಹುಶಃ ಇದನ್ನು ತುಂಬ ಶ್ರದ್ಧೆಯಿಂದ ಪಾಲಿಸಿದ್ದಾನೆ. ಓದುಗರ ಹೃದಯವನ್ನು ಕಲಕಲು ಬಹುಶಃ ಇದು ಅತೀ ಮುಖ್ಯ.

10. ಕತೆಗೆ ಮುನ್ನ ಒಂದಷ್ಟು ಸಂಶೋಧನೆ, ಮಾಹಿತಿ ಸಂಗ್ರಹ ಅಗತ್ಯವಿರಬಹುದು, ಸಂಶೋಧನೆಯೇ ಕತೆಯನ್ನು ತಿಂದುಬಿಡುವಷ್ಟು ಆಗಿರದಂತೆ ಎಚ್ಚರವಹಿಸಿ. (ಕೆಲವೊಮ್ಮೆ ಕತೆಗೆ ಅಗತ್ಯ ಮಾಹಿತಿ ಕಲೆ ಹಾಕುತ್ತ, ಆ ವಿಷಯದ ಮೇಲೆ ಪ್ರೀತಿ ಹುಟ್ಟಿ, ಅದನ್ನು ಪೂರ್ಣ ಅರಿಯುವ ಹುಚ್ಚಿನಲ್ಲಿ ಕತೆ ಬರೆಯುವ ಉತ್ಸಾಹ ಕಳೆದುಹೋಗುತ್ತದೆ.)

ಇದರಲ್ಲಿ ಹೆಚ್ಚಿನ ನಿಯಮಗಳು ನಮಗೆಲ್ಲ ಗೊತ್ತಿವೆ (ಆದರೆ ಅನುಸರಿಸುತ್ತೇವೆಯೇ?). ಇದರಲ್ಲಿ ಅತ್ಯಂತ ಮುಖ್ಯ ಹಾಗೂ ಅರ್ಥವಾಗದ ಎರಡು ನಿಯಮಗಳೆಂದರೆ ’ನಿಮ್ಮ ಬರವಣಿಗೆಯಲ್ಲಿ ಕರ್ಮಣಿ ಪ್ರಯೋಗವನ್ನು (Passive Voice) ಬಳಸಬೇಡಿ’ ಮತ್ತು ‘ಕ್ರಿಯಾ ವಿಶೇಷಣ (Adverb) ಬಳಕೆ ಮಾಡಬೇಡಿ’ ಎಂಬುದು. ಈ ಮೊದಲು ಒಬ್ಬ ಆಂಗ್ಲ ಲೇಖಕರೊಡನೆ ಮಾತನಾಡುವಾಗ ಅವರು ನನಗೆ ಈ ಎರಡು ಸೂಚನೆಗಳನ್ನು ನೀಡಿದ್ದರು. ಈ ಎರಡು ನಿಯಮಗಳ ಕುರಿತು ವಿವರವಾಗಿ ಇನ್ನೊಮ್ಮೆ ಬರೆಯುತ್ತೇನೆ.

ಈ ನಿಯಮಗಳ ಕುರಿತು ನಿಮಗೇನೆನ್ನಿಸಿತು ತಿಳಿಸಿ.

Leave a Reply

Your email address will not be published. Required fields are marked *