ಒಂದು ಸ್ಮಾರ್ಟ್‌ಫೋನ್ ಹಿಡಿದುಕೊಂಡು ಒಬ್ಬ ಬರಹಗಾರ ಓಡಾಡುತ್ತಾನೆ ಅಂದರೆ, ಅವನು ಏನೇನು ಮಾಡುತ್ತಾನೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ?
ಸ್ಮಾರ್ಟ್‌ಫೋನುಗಳು ಬಂದ ಮೇಲೆ ಮಲ್ಟಿಟಾಸ್ಕಿಂಗ್ ಸುಲಭವಾಗಿದೆ. ಇದ್ದ ಸಮಯದಲ್ಲಿಯೇ ಬಹುಕಾರ್ಯಗಳು ಸಾಧ್ಯವಾಗುತ್ತಿವೆ. ಒಬ್ಬ ಬರಹಗಾರನಾಗಿ ಈ ಸ್ಮಾರ್ಟ್‌ಫೋನ್ ಅನ್ನು ಹೇಗೆ ಮಲ್ಟಿಟಾಸ್ಕಿಂಗ್‌ಗೆ ಬಳಸಿಕೊಳ್ಳಬಹುದು ಅಂತ ಯೋಚಿಸುತ್ತಿದ್ದೆ. ಸುಮ್ಮನೇ ಕುಳಿತಿದ್ದಾಗ, ನಡೆದಾಡುವಾಗ ಏನಾದರೂ ಕಲಿಯುವುದಕ್ಕಿದ್ದರೆ ಚೆನ್ನ ಅಂದುಕೊಂಡು ಹುಡುಕಿದಾಗ ಸಿಕ್ಕಿದ್ದು ಈ ಪೋಡ್‌ಕಾಸ್ಟಿಂಗ್ ಅಪ್ಲಿಕೇಶನ್. ಆಂಡ್ರಾಯ್ಡ್‌ನಲ್ಲಿ ನಾಲ್ಕೈದು ಉತ್ತಮ ಅನ್ನಿಸಬಹುದಾದ ಪಾಡ್‌ಕಾಸ್ಟಿಂಗ್ ಅಪ್ಲಿಕೇಶನ್‌ಗಳಿವೆ. ನನಗೆ ಅತ್ಯುತ್ತಮ ಅನ್ನಿಸಿದ್ದು ಪಾಕೆಟ್‌ಕಾಸ್ಟ್ಸ್. ಈ ಅಪ್ಲಿಕೇಶನ್ ಬಳಸಿಕೊಂಡು ನಾನು ಇಂಗ್ಲೀಷ್ ಕಲಿಯುತ್ತೇನೆ (6 ಮಿನಿಟ್ ಇಂಗ್ಲಿಷ್, ಎ ವೇ ವಿತ್ ವರ್ಡ್ಸ್, ಆಲ್ ಇಯರ್ಸ್ ಇಂಗ್ಲೀಷ್ ಮುಂತಾದ ಪೋಡ್‌ಕಾಸ್ಟ್‌ಗಳು) ಹಾಗೂ ಸೃಜನಶೀಲ ಬರವಣಿಗೆಯ ಕುರಿತು ಇರುವ ಪೋಡ್‌ಕಾಸ್ಟ್‌ಗಳನ್ನು ಕೇಳುತ್ತೇನೆ (ಇನ್‌ಸೈಡ್ ಕ್ರಿಯೇಟಿವ್ ರೈಟಿಂಗ್, ಮೀಟ್ ದ ಆಥರ್, ರೈಟರ್ಸ್ ಆನ್ ರೈಟಿಂಗ್, ರೈಟಿಂಗ್ ಎಕ್ಸ್‌ಕ್ಯೂಸಸ್, ಹೆಲ್ಪಿಂಗ್ ರೈಟರ್ಸ್ ಬಿಕಮ್ ಆಥರ್ಸ್ ಮುಂತಾದ ಪೋಡ್‌ಕಾಸ್ಟ್‌ಗಳು). ಇಂಗ್ಲೀಷ್ ಚೆನ್ನಾಗಿ ಕಲಿಯಬೇಕು ಅಂದುಕೊಳ್ಳುವವರಿಗೆ, ಭಾಷೆಯ ಪ್ರಯೋಗ, ಉಚ್ಚಾರಣೆ ಎಲ್ಲವನ್ನೂ ಕಲಿಸುತ್ತವೆ ಈ ಆಡಿಯೋ ಪೋಡ್‌ಕಾಸ್ಟ್‌ಗಳು. ವೈಫೈನಲ್ಲಿ ಡೌನ್‌ಲೋಡ್ ಮಾಡಿಟ್ಟುಕೊಂಡರೆ ಸಾಕು, ವಾಕಿಂಗ್ ಮಾಡುತ್ತ ಕೇಳಬಹುದು.
ನನಗೆ ಇಂಗ್ಲೀಷ್ ಬೇಡ, ಸಾಹಿತ್ಯ ಬೇಕು ಅಂದರೆ ಅದಕ್ಕೂ ಒಂದು ಅತ್ಯುತ್ತಮ ಅಪ್ಲಿಕೇಶನ್ ಇದೆ. ಲಿಬ್ರಿವೋಕ್ಸ್ ಅಪ್ಲಿಕೇಶನ್ ಒಂದು ಡಿಜಿಟಲ್ ಲೈಬ್ರೆರಿ. ಇಲ್ಲಿ ಜಗತ್ಪ್ರಸಿದ್ಧ ಕಥೆ ಕಾದಂಬರಿಗಳ ಆಡಿಯೋಗಳು ಲಭ್ಯವಿವೆ. ವೈಫೈನಲ್ಲಿ ಡೌನ್‌ಲೋಡ್ ಮಾಡಿಟ್ಟುಕೊಂಡರಾಯಿತು. ಸದ್ಯ ನಾನು ಜಾಕ್ ಲಂಡನ್ ನ “ಸ್ಟೋರೀಸ್ ಆಫ್ ಶಿಪ್ಸ್ ಅಂಡ್ ದ ಸೀ” ಕೇಳುತ್ತಿದ್ದೇನೆ. ಶೆರ್ಲಾಕ್ ಹೋಮ್ಸ್ ಕಥೆಗಳು, ಓ ಹೆನ್ರಿ, ಥಾಮಸ್ ಹಾರ್ಡಿ, ಜೇನ್ ಆಸ್ಟಿನ್ ಹೀಗೆ ಅನೇಕ ಲೇಖಕರ ಪುಸ್ತಕಗಳು ಆಡಿಯೋದಲ್ಲಿ ಲಭ್ಯವಿವೆ.
ನಡೆದಾಡುತ್ತ ಕೇಳುವುದಕ್ಕೆ ಇವು ಉಪಯುಕ್ತವಾದರೆ, ಇನ್ನು ನಡೆಯುವುದಕ್ಕೇ ಪ್ರೇರೇಪಿಸುವ ಅಪ್ಲಿಕೇಶನ್ ಒಂದರ ಕುರಿತು ಹೇಳಬೇಕು. ಇದು ಪೆಡೋಮೀಟರ್. ಇದು ನಡೆಯುವ ನಿಮ್ಮ ಹೆಜ್ಜೆಯ ಲೆಕ್ಕ ಹಾಕುತ್ತದೆ. ಎಷ್ಟು ಹೆಜ್ಜೆ ಹಾಕಿದಿರಿ, ಎಷ್ಟು ಸಮಯ ತೆಗೆದುಕೊಂಡಿರಿ, ಒಟ್ಟು ಎಷ್ಟು ದೂರ ನಡೆದಿರಿ, ಇದೆಲ್ಲವನ್ನೂ ನಿಮಗೆ ಅರಿವಿಲ್ಲದೇ ಲೆಕ್ಕ ಹಾಕುತ್ತದೆ, ಮತ್ತು ಅದಕ್ಕೆ ಜಿಪಿಎಸ್ ಅಗತ್ಯವೂ ಇಲ್ಲ. ಪ್ರತಿನಿತ್ಯ ಪಾರ್ಕಿನಲ್ಲಿ ಒಂದು ಗಂಟೆ ನಡೆಯುವುದಕ್ಕೆ, ನಡೆಯುತ್ತ ಕೇಳುವುದಕ್ಕೆ, ಕೇಳುತ್ತ ಕಲಿಯುವುದಕ್ಕೆ ‘ವಾಕಿಂಗ್ ವಿತ್ ಅ ಸ್ಮಾರ್ಟ್‌ಫೋನ್’ ಅನ್ನುವುದು ಸೂಕ್ತ.
(ವಿಸೂ: ಮೇಲೆ ತಿಳಿಸಿದ ಅಪ್ಲಿಕೇಶನ್‌ಗಳು ಫ್ರೀ ಮತ್ತು ಪೇಯ್ಡ್ ಅಪ್ಲಿಕೇಶನ್‌ಗಳಾಗಿ ಲಭ್ಯವಿವೆ. ಆಯ್ಕೆ ನಿಮ್ಮದು.)