ತೋಳಗಳು ಬದಲಿಸಿದವು ನದಿಯ ಪಥವ

ಜೇಡರ ಬಲೆಯಲ್ಲಿ ಒಂದು ಹುಳು ಸಿಕ್ಕಿಬಿದ್ದಾಗ, ಓತಿಕ್ಯಾತದ ಬಾಯಿಗೆ ಚಿಟ್ಟೆಯೊಂದು ಸಿಕ್ಕಾಗ ಅಥವಾ ಹಾವೊಂದು ಕಪ್ಪೆಯನ್ನು ನುಂಗುವಾಗ ನಮಗೆ ಅದೊಂದು ನಗಣ್ಯ ಘಟನೆಯೆನ್ನಿಸುತ್ತದೆ, ಅದನ್ನು ನಾವು ಒಂದು ಬೃಹತ್ ಕ್ರಿಯೆಯ ಭಾಗ ಅಂದುಕೊಳ್ಳುವುದೇ ಇಲ್ಲ. ಆದರೆ, ದುಂಬಿಯೊಂದು ಹೂವಿನ ಮೇಲೆ ಕುಳಿತುಕೊಳ್ಳುವ, ಇರುವೆಯೊಂದು ಅಕ್ಕಿ ಕಾಳನ್ನು ಹೊತ್ತೊಯ್ಯುವಂತಹ ಅತ್ಯಂತ ಸಣ್ಣ ಕ್ರಿಯೆಯೂ ಬೃಹತ್ ಆಹಾರ ಸರಪಳಿಯ ಅತ್ಯಗತ್ಯ ಪ್ರಕ್ರಿಯೆ ಎಂಬುದನ್ನು ನಾವು ಗ್ರಹಿಸಿ, ಅದನ್ನು ವಿಸ್ಮಯ ಭಾವದಲ್ಲಿಯೇ ಯಾಕೆ ನೋಡಬೇಕಾಗುತ್ತದೆ ಗೊತ್ತೇ?

ಆಹಾರ ಸರಪಳಿ ಎಷ್ಟು ಸೂಕ್ಷ್ಮವಾಗಿ ಜೋಡಣೆಯಾಗಿದೆಯೆಂದರೆ, ಒಂದು ಕೊಂಡಿ ಬಿಚ್ಚಿಕೊಂಡರೂ, ಇಡೀ ವ್ಯವಸ್ಥೆಯ ಸ್ವರೂಪವೇ ಬದಲಾಗಿಬಿಡುತ್ತದೆ. ಅದು ಎಷ್ಟರ ಮಟ್ಟಿಗೆ ಬದಲಾಗುತ್ತದೆ ಎಂದರೆ ತೋಳಗಳು ನದಿಯ ದಿಕ್ಕನ್ನು ಬದಲಿಸುವಷ್ಟು. ಹೌದು, ಇಂತಹದ್ದೊಂದು ವಿಶಿಷ್ಟ ಘಟನೆ ಸಂಭವಿಸಿದ್ದು, ಅಮೇರಿಕಾದ ಎಲ್ಲೋ ಸ್ಟೋನ್ ನ್ಯಾಷನಲ್ ಪಾರ್ಕಿನಲ್ಲಿ. ತೋಳಗಳು ಹೇಗೆ ಒಂದು ಜೀವಜಾಲ ವ್ಯವಸ್ಥೆಯಷ್ಟೇ ಅಲ್ಲದೇ ಭೌಗೋಳಿಕ ರೂಪಾಂತರಕ್ಕೂ ನಾಂದಿ ಹಾಡಿದವು ಎಂಬುದು ಒಂದು ರೋಚಕ ಘಟನೆ.

ಅದಕ್ಕೂ ಮೊದಲು ಟ್ರಾಫಿಕ್ ಕ್ಯಾಸ್ಕೇಡ್ (Trophic cascade) ಅಂದರೆ ಏನು ಎಂದು ಮೊದಲು ತಿಳಿದುಕೊಳ್ಳೋಣ. ಟ್ರಾಫಿಕ್ ಅನ್ನುವ ಪದ ಗ್ರೀಕ್ ಮೂಲದ್ದು. ಅದರ ಅರ್ಥ ಆಹಾರ ಅಥವಾ ಪೋಷಣೆ ಎಂದು. ಟ್ರಾಫಿಕ್ ಕ್ಯಾಸ್ಕೇಡ್ ಅಂದರೆ ಒಂದು ಪ್ರದೇಶದ ಆಹಾರ ಸರಪಳಿಯಲ್ಲಿ ಭಕ್ಷಕ ಮತ್ತು ಎರೆಗಳ (ತಿನ್ನಲ್ಪಡುವ ಪ್ರಾಣಿ) ನಡುವಿನ ಸಂಬಂಧದಲ್ಲಿ ಆದ ಬದಲಾವಣೆ ಆ ಪರಿಸರದ ವ್ಯವಸ್ಥೆಯಲ್ಲಿ ಉಂಟುಮಾಡುವ ಬದಲಾವಣೆ. ಅಂದರೆ ಒಂದು ಪ್ರದೇಶದಲ್ಲಿ ಹೊಸದೊಂದು ಭಕ್ಷಕ ಪ್ರಾಣಿಯ ಆಗಮನವಾದಾಗ, ಅದು ಅಲ್ಲಿ ಪ್ರಸ್ತುತದಲ್ಲಿದ್ದ ಎರೆಗಳನ್ನು ಆಹಾರವಾಗಿಸಿಕೊಳ್ಳುವ ಮೂಲಕ ಆ ಆಹಾರ ಸರಪಳಿಯನ್ನು ಬದಲಿಸುವುದು, ಅಥವಾ ನಿರ್ಗಮನವಾದಾಗ ಆ ಭಕ್ಷಕ ಪ್ರಾಣಿಯ ಆಹಾರವಾಗಿದ್ದ ಪ್ರಾಣಿಗಳ ಸಂಖ್ಯೆ ಹೆಚ್ಚಾಗುವುದು.wolves

ಅಂದರೆ ಮೂರು ಹಂತದ ಆಹಾರ ಸರಪಳಿಯಲ್ಲಿ ಮೇಲಿನ ಹಂತದ ಮಾಂಸಾಹಾರಿ ಪ್ರಾಣಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಅವುಗಳ ಆಹಾರವಾದ ಮಧ್ಯ ಹಂತದ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ಸಸ್ಯಾಹಾರಿಗಳ ಆಹಾರವಾದ ಪ್ರಾಥಮಿಕ ಹಂತದಲ್ಲಿರುವ ಸಸ್ಯ ಸಂತತಿ ಕಡಿಮೆಯಾಗುತ್ತದೆ. ಮೇಲಿನ ಹಂತದ ಭಕ್ಷಕ ಪ್ರಾಣಿಗಳ ಸಂಖ್ಯೆಯನ್ನು ಪ್ರಾಯೋಗಿಕವಾಗಿ ಬದಲಿಸುವ ಕಾರಣದಿಂದ ಒಂದು ಆಹಾರ ಸರಪಳಿಯಲ್ಲಿ ಉಂಟಾಗುವ ಬದಲಾವಣೆಗಳನ್ನು ವಿವರಿಸಲು ಅಮೇರಿಕಾದ ಜೀವಶಾಸ್ತ್ರಜ್ಞ ರಾಬರ್ಟ್ ಪೈನೆ ಟ್ರಾಫಿಕ್ ಕ್ಯಾಸ್ಕೇಡ್ ಎಂಬ ಪದವನ್ನು 1980 ರಲ್ಲಿ ಮೊದಲಬಾರಿಗೆ ಬಳಸಿದ.

ಹಾಗಿದ್ದರೆ ಎಲ್ಲೋಸ್ಟೋನ್ ನ್ಯಾಶನಲ್ ಪಾರ್ಕಿನಲ್ಲಿ ಏನು ಸಂಭವಿಸಿತು?


ಉತ್ತರ ಅಮೇರಿಕಾದಲ್ಲಿ ಸ್ವಚ್ಛಂದವಾಗಿ ಜೀವಿಸಿದ್ದ ತೋಳಗಳನ್ನು ಕಳದ ಶತಮಾನದಲ್ಲಿ ಬೇಟೆಯಾಡಿ ಕೊಲ್ಲಲಾಗಿತ್ತು. ಹುಲ್ಲುಗಾವಲುಗಳ ದನಗಾಹಿಗಳು ತಮ್ಮ ಪಶುಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿಯೋ, ಅಥವಾ ತಮ್ಮ ಬಂದೂಕುಗಳ ಹಸಿವು ತೀರಿಸುವುದಕ್ಕಾಗಿಯೋ ಹೆಚ್ಚಾನೆಚ್ಚು ತೋಳಗಳನ್ನು ಕೊಂದಿದ್ದರು. ಆದ್ದರಿಂದ, ವಿನಾಶದ ಅಂಚಿಗೆ ಬಂದಿದ್ದ ಈ ತೋಳಗಳ ಸಂತತಿಯ ಸಂರಕ್ಷಣೆಯ ಉದ್ದೇಶದಿಂದ 1995-96 ರಲ್ಲಿ ಹದಿನಾಲ್ಕು ಬೂದು ಬಣ್ಣದ ತೊಳಗಳನ್ನು ಕೆನಡಾದಿಂದ ತರಿಸಿ ಎಲ್ಲೋ ಸ್ಟೋನ್ ಉದ್ಯಾನವನದಲ್ಲಿ ಬಿಡಲಾಯಿತು. ನಂತರದ ವರ್ಷದಲ್ಲಿ ಇನ್ನೂ ಹದಿನೇಳು ತೋಳಗಳನ್ನು ಬಿಡಲಾಯಿತು. ಕರಡಿಗಳು ಮತ್ತು ಬೆಟ್ಟದ ಸಿಂಹಗಳಂತೆ ತೋಳಗಳೂ ಅಗ್ರ ಬೇಟೆಗಾರ ಪ್ರಾಣಿಗಳಾದ್ದರಿಂದ, ಅವುಗಳನ್ನು ಈ ಉದ್ಯಾನವನದಲ್ಲಿ ಬಿಡುವ ಮೂಲಕ ಇಲ್ಲಿನ ಪರಿಸರದಲ್ಲಿ ಸಮತೋಲನವನ್ನು ಪುನಃ ಸ್ಥಾಪಿಸಬಹುದು ಎಂಬುದು ಜೀವಶಾಸ್ತ್ರಜ್ಞರ ಆಶಯವಾಗಿತ್ತು.

ಸುಮಾರು ಎಪ್ಪತ್ತು ವರ್ಷಗಳವರೆಗೆ ಈ ಪ್ರದೇಶದಲ್ಲಿ ಬೂದು ತೋಳಗಳು ಇರದಿದ್ದರಿಂದಾಗಿ ಇಲ್ಲಿನ ಜೀವಾವರಣದಲ್ಲಿ ಮಹತ್ವದ ಬದಲಾವಣೆಗಳು ಜರುಗಿದ್ದವು. ಪ್ರಮುಖವಾಗಿ ಕಾಡೆಮ್ಮೆಗಳು, ಕವಲುಗೊಂಬಿನ ಜಿಂಕೆಗಳಂತಹ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಅಮಿತವಾಗಿ ಬೆಳೆದಿತ್ತು. ನಿರೀಕ್ಷೆಯಂತೆ ಉದ್ಯಾನವನಕ್ಕೆ ತಂದುಬಿಟ್ಟ ತೋಳಗಳು  ಈ ಕವಲುಗೊಂಬಿನ ಜಿಂಕೆಗಳನ್ನು ಕೊಂದು ತಿನ್ನತೊಡಗಿದವು. ಅಲ್ಲದೇ, ತೋಳಗಳು ತಮ್ಮ ಪುರಾತನ ಸ್ವಭಾವದಂತೆ ಗುಂಪುಗೂಡಿಕೊಂಡು ಅಮೇರಿಕಾದ ಬೃಹದಾಕಾರದ ಕಾಡೆಮ್ಮೆಗಳನ್ನು ಕೊಲ್ಲತೊಡಗಿದವು.

ಹೀಗೆ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದಂತೆ ಅನೇಕ ಪಾರಿಸಾರಿಕ ಬದಲಾವಣೆಗಳು ಕಾಣತೊಡಗಿದವು. ಆವರೆಗಾದರೆ, ಈ ಬೃಹತ್ ಸಂಖ್ಯೆಯಲ್ಲಿದ್ದ ಸಸ್ಯಾಹಾರಿ ಪ್ರಾಣಿಗಳು ಉದ್ಯಾನದಲ್ಲಿದ್ದ ಸಸ್ಯಸಂಕುಲವನ್ನೆಲ್ಲ ಆಹಾರವಾಗಿಸಿಕೊಳ್ಳುತ್ತಿದ್ದುದರಿಂದ, ಅಲ್ಲಿ ಹುಲ್ಲು ಸಸಿಗಳಿರಲಿ, ದೊಡ್ಡ ಮರಗಳು ಯಾವುವೂ ಬೆಳೆಯುವ ಅವಕಾಶವೇ ಇರದಂತೆ ಮಾಡಿದ್ದವು. ತೋಳಗಳ ಭಯದಿಂದ ಜಿಂಕೆಗಳು ಸುಲಭವಾಗಿ ದಾಳಿಗೆ ತುತ್ತಾಗುವ ಸಾಧ್ಯತೆಯಿದ್ದ ಕಣಿವೆ ಪ್ರದೇಶಗಳಲ್ಲಿ ಮೇಯುವುದನ್ನು ಬಿಟ್ಟುಬಿಟ್ಟವು. ಹಾಗಾಗಿ ಅಂತಹ ಪ್ರದೇಶಗಳಲ್ಲಿ ಮತ್ತೆ ಹಸಿರು ಬೆಳೆದು ಆ ಪ್ರದೇಶಗಳು ಪುನಃಶ್ಚೇತನಗೊಂಡವು. ಕೆಲವು ಪ್ರದೇಶಗಳಲ್ಲಂತೂ ಆರೇಳು ವರ್ಷಗಳಲ್ಲಿ ಮರಗಳು ದೊಡ್ಡದಾಗಿ ಬೆಳೆದು ಆ ಪ್ರದೇಶಗಳು ಅರಣ್ಯವಾಗಿ ಪರಿವರ್ತನೆಗೊಂಡವು.

ಕಾಡು ಬೆಳೆಯುತ್ತಿದ್ದಂತೆಯೇ ಅಲ್ಲಿಗೆ ವಿವಿಧ ಪ್ರಕಾರದ ಪಕ್ಷಿಗಳ ಆಗಮನವಾಯಿತು. ಸಸ್ಯರಾಶಿ ವಿಫುಲಗೊಳ್ಳುತ್ತಿದ್ದಂತೆ, ಬೀವರ್ ನಂತಹ ಸಸ್ಯಾಹಾರಿಗಳ ಸಂತತಿ ಹೆಚ್ಚಾಗತೊಡಗಿತು. ಈ ಬೀವರ್ ಗಳು ದೊಡ್ಡ ಹಲ್ಲಿನ ಮೂಷಕ ಜಾತಿಯ ಪ್ರಾಣಿಗಳು. ಇವು ಮರಗಳ ಕಾಂಡಗಳನ್ನು ತಮ್ಮ ಹಲ್ಲಿನಿಂದ ಕೊರೆದು ಬೀಳಿಸಿ, ಅವುಗಳನ್ನು ಒಯ್ದು ಒಡ್ಡು ಕಟ್ಟುತ್ತವೆ. ಅವುಗಳು ಒಡ್ಡು ಕಟ್ಟಿ ಕೆರೆ ಕೊಳ್ಳಗಳನ್ನು ನಿರ್ಮಿಸತೊಡಗಿದಂತೆ ಆ ಪ್ರದೇಶದಲ್ಲಿ ಹಸಿರು ಇನ್ನಷ್ಟು ಹೆಚ್ಚಾಗತೊಡಗಿತು. ಇದರ ಪರಿಣಾಮವಾಗಿ ಮಣ್ಣಿನ ಸವಕಳಿ ಕಡಿಮೆಯಾಗಿ ನದಿಯ ಹರಿವಿನ ದಿಕ್ಕು ಬದಲಾಗತೊಡಗಿತು. ಬೀವರ್ ಗಳು ಕಟ್ಟಿದ ಕೆರೆಕೊಳ್ಳಗಳಲ್ಲಿ ಮೀನುಗಳು ಮತ್ತಿತರ ಸರಿಸೃಪಗಳು ಮತ್ತು ಉಭಯ ಜೀವಿಗಳ ಸಂಖ್ಯೆ ಅಭಿವೃದ್ಧಿಯಾಗತೊಡಗಿತು.

ಅಲ್ಲದೇ, ಈ ತೋಳಗಳು ಆ ಪ್ರದೇಶದಲ್ಲಿದ್ದ ಕಯೋಟಿ ಎಂದು ಕರೆಯಲ್ಪಡುವ ಮಾಂಸಾಹಾರಿ ಪ್ರಾಣಿಗಳನ್ನೂ ಕೊಲ್ಲತೊಡಗಿದವು. ತೋಳದ ಜಾತಿಯ ಈ ಕಯೋಟಿ ಎಂಬ ಪ್ರಾಣಿಗಳು ನರಿಗಳಿಗಿಂತ ದೊಡ್ಡ ಗಾತ್ರದಲ್ಲಿದ್ದು, ತೋಳಗಳಿಗಿಂತ ಚಿಕ್ಕದಾಗಿರುತ್ತವೆ. ಇವು ಹೆಚ್ಚಾಗಿ ಉತ್ತರ ಅಮೇರಿಕಾದಲ್ಲಿ ಕಂಡುಬರುತ್ತವೆ. ಈ ಪ್ರಾಣಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಅವುಗಳ ಆಹಾರವಾಗಿದ್ದ ಮೊಲಗಳು ಮತ್ತು ಇಲಿಗಳ ಸಂಖ್ಯೆ ಹೆಚ್ಚಾಗತೊಡಗಿತು. ಅದಕ್ಕನುಗುಣವಾಗಿ ಈ ಮೊಲ ಮತ್ತು ಇಲಿಗಳನ್ನು ತಿನ್ನುವ ನರಿಗಳು, ವೀಸಲ್ ಎಂಬ ಜೀವಿಗಳ ಸಂಖ್ಯೆ ಹೆಚ್ಚಾಯಿತು. ಕಾಗೆಗಳು, ಹದ್ದು, ಗಿಡುಗಗಳು ತೋಳಗಳು ತಿಂದುಳಿದ ಆಹಾರ ತಿನ್ನತೊಡಗಿ, ಅವುಗಳ ಸಂಖ್ಯೆಯೂ ಹೆಚ್ಚಾಗತೊಡಗಿತು. ಕರಡಿಗಳಿಗೂ ಆ ಆಹಾರ ಸಿಗುತ್ತಿದ್ದರಿಂದ ಮತ್ತು ಕಾಡು ಬೆಳೆದಿದ್ದರಿಂದ, ಅವುಗಳ ಸಂಖ್ಯೆಯೂ ಹೆಚ್ಚಾಗತೊಡಗಿತು.

ಕಾಡು ಬೆಳೆಯುತ್ತಿದ್ದಂತೆ ಮಣ್ಣಿನ ಸವಕಳಿ ಕಡಿಮೆಯಾಗಿ ನದಿ ತೊರೆಗಳ ವಕ್ರ ಹರಿವು ಕಡಿಮೆಯಾಯಿತು ಮತ್ತು ನದಿಯ ಪಾತ್ರ ಸಪೂರಗೊಳ್ಳತೊಡಗಿತು. ನದಿ ದಂಡೆಗಳಲ್ಲಿ ಗಿಡಮರಗಳು ಬೆಳೆದು, ದಂಡೆಗಳು ಸ್ಥಿರಗೊಂಡವು ಮತ್ತು ಅದರ ಪರಿಣಾಮವಾಗಿ ನದಿಯ ನಿರ್ದಿಷ್ಟ ಮಾರ್ಗದಲ್ಲಿ ಹರಿಯತೊಡಗಿದವು.

ಇಪ್ಪತ್ತನೇ ಶತಮಾನದ ಆದಿಯಲ್ಲಿ, ಇಲ್ಲಿ ತೋಳಗಳು ಜೀವಿಸುತ್ತಿದ್ದಾಗ ಆಸ್ಪೆನ್ ವಿಲ್ಲೋ (ನೀರು ಹಿಪ್ಪೆ ಗಿಡ) ದಂತಹ ಮರಗಳು ಸಾಕಷ್ಟಿದ್ದವು. ಮುಂದಿನ ಮೂವತ್ತು ವರ್ಷಗಳಲ್ಲಿ, ಈ ತೋಳಗಳೆಲ್ಲ ಕೊಲ್ಲಲ್ಪಟ್ಟಾಗ, ಕಾಡಿ ನಶಿಸತೊಡಗಿತ್ತು. ಆದರೆ ಈಗ ತೋಳಗಳು ಬಂದ ಮೇಲೆ ಮತ್ತೆ ಪರಿಸ್ಥಿತಿ ಬದಲಾಗತೊಡಗಿತು. ಒಣ ಬೆಂಗಾಡಾಗಿದ್ದ ಈ ಉದ್ಯಾನವನವನ್ನು ಇಪ್ಪತ್ತೈದು ಮೂವತ್ತು ತೋಳಗಳು ಸೇರಿ ಮತ್ತೆ ಹಸಿರಿನ ಉದ್ಯಾನವನವನ್ನಾಗಿ, ಶತಮಾನದ ಹಿಂದಿದ್ದ ವಿಫುಲ ಉದ್ಯಾನವನ್ನು ಮತ್ತೆ ಸೃಷ್ಟಿಸಿದವು. ಅವು ಈ ಎಲ್ಲೋಸ್ಟೋನ್ ಉದ್ಯಾನವನದ ಜೀವವೈವಿದ್ಯವನ್ನಷ್ಟೇ ಅಲ್ಲ, ಅಲ್ಲಿನ ಭೌಗೋಳಿಕ ರಚನೆಯನ್ನೂ ಬದಲಿಸಿದವು.

ನಮ್ಮ ಪರಿಸರದಲ್ಲಿಯೂ ಹುಲಿ, ಕಾಡಾನೆ, ಕೃಷ್ಣ ಮೃಗ, ಕತ್ತೆ ಕಿರುಬ, ಕಾಡೆಮ್ಮೆಯಂತಹ ಅನೇಕ ಪ್ರಾಣಿಗಳು ಅಳಿವಿನಂಚಿನಲ್ಲಿವೆ. ನಮ್ಮ ಸರಕಾರ ಹಾಗೂ ವಿಜ್ಞಾನಿಗಳು ನಿರಂತರವಾಗಿ ಅವುಗಳ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ. ಆದರೆ ಒಂದೊಂದು ಪ್ರಾಣಿಯೂ ಒಂದೊಂದು ಕೊಂಡಿಯಾಗಿ ಇಡೀ ಪರಿಸರ ವ್ಯವಸ್ಥೆಯನ್ನು ಕಾಪಾಡುತ್ತಿವೆ ಎಂಬುದನ್ನು ಅರ್ಥ ಮಾಡಿಕೊಂಡು, ಈ ಸಮತೋಲನ ಕಾಯ್ದುಕೊಳ್ಳುವಲ್ಲಿ ನಮ್ಮೆಲ್ಲರ ಪಾತ್ರವೂ ದೊಡ್ಡದು.

ಎಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನವನ

ಎಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನವನ ಅಮೇರಿಕಾ ಸಂಯುಕ್ತ ಸಂಸ್ಥಾನದ ವ್ಯೋಮಿಂಗ್ ರಾಜ್ಯದಲ್ಲಿದ್ದು, ಮೊಂಟಾನಾ ಮತ್ತು ಇದಾಹೊ ರಾಜ್ಯಗಳಲ್ಲಿಯೂ ವ್ಯಾಪಿಸಿದೆ. ಇದನ್ನು ಮಾರ್ಚ್ ೧, ೧೮೭೨ ರಲ್ಲಿ ಸ್ಥಾಪಿಸಲಾಯಿತು. ಇದನ್ನು ಜಗತ್ತಿನ ಮೊದಲ ರಾಷ್ಟ್ರೀಯ ಉದ್ಯಾನವನ ಎನ್ನಲಾಗುತ್ತದೆ. ಈ ಉದ್ಯಾನವನ ಸುಮಾರು8,983 ಚದರ ಕಿಮಿ ಪ್ರದೇಶವನ್ನು ಒಳಗೊಂಡಿದೆ. ಇದರಲ್ಲಿ ಅನೇಕ ನದಿಗಳು ಮತ್ತು ಪರ್ವತಪ್ರದೇಶಗಳು ಕೂಡಿವೆ. ಈ ಪ್ರದೇಶದಲ್ಲಿ ನದಿಗಳು, ಬ್ರುಹತ್ ಕಮರಿಗಳು ಮತ್ತು ಪರ್ವತ ಪ್ರದೇಶಗಳ ಸುತ್ತಮುತ್ತ ಸಾವಿರಾರು ಬಿಸಿನೀರಿನ ಬುಗ್ಗೆಗಳಿವೆ. ಇಲ್ಲಿ ಬಿಸಿ ನೀರು ಮತ್ತು ನೀರಾವಿ ನೂರಾರು ಅಡಿಗಳಷ್ಟು ಎತ್ತರಕ್ಕೆ ಚಿಮ್ಮುತ್ತದೆ. ಇದಲ್ಲದೇ ಇದರಲ್ಲಿ ಕ್ಯಾಲ್ಡೇರಾ ಎಂದು ಕರೆಯಲ್ಪಡುವ ಒಂದು ಅಗ್ನಿಪರ್ವತ ಕೂಡಾ ಇದ್ದು ಇದರಿಂದ ಹೊರಬಂದ ಲಾವಾ ಮತ್ತು ಕಲ್ಲಿನಿಂದ ಈ ಪ್ರದೇಶ ಮಾಡಲ್ಪಟ್ಟಿದೆ. ಇಲ್ಲಿ ನೂರಾರು ಪ್ರಕಾರದ ಸಸ್ತನಿಗಳು, ಪಕ್ಷಿಗಳು, ಮೀನುಗಳು ಮತ್ತು ಸರಿಸ್ರುಪಗಳು ಜೀವಿಸಿದ್ದು, ಅನೇಕ ಅಳಿವಿನಂಚಿನಲ್ಲಿರುವ ಜೀವಿಗಳೂ ಸೇರಿವೆ. ಇದರ ವಿಶಾಲವಾದ ಅರಣ್ಯ ಮತ್ತು ಹುಲ್ಲುಗಾವಲು ಪ್ರದೇಶದಲ್ಲಿ ಅನೇಕ ಪ್ರಕಾರದ ಸಸ್ಯವರ್ಗಗಳಿವೆ. ಈ ಪ್ರದೇಶದಲ್ಲಿ 11,000 ವರ್ಷಗಳಷ್ಟು ಕಾಲದಿಂದ ಅಮೇರಿಕನ್ ಮೂಲನಿವಾಸಿಗಳು ವಾಸಿಸಿದ್ದರು ಎನ್ನಲಾಗುತ್ತದೆ.

ಈ ಆಗಾಗ ಪ್ರದೇಶ ಬ್ರುಹತ್ ಕಾಡ್ಗಿಚ್ಚಿಗೆ ತುತ್ತಾಗುತ್ತಿದ್ದು,  1988 ರ ಕಾಡ್ಗಿಚ್ಚಿನಲ್ಲಿ ಸುಮಾರು ಮೂರನೇ ಒಂದರಷ್ಟು ಕಾಡು ಸುಟ್ಟುಹೋಗಿತ್ತು. ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಸಕ್ರಿಯವಾಗಿದ್ದು, ಜನರು ನಿಸರ್ಗ ವೀಕ್ಷಣೆ, ಬೆಟ್ಟ ಹತ್ತುವುದು, ದೋಣಿವಿಹಾರ, ಮೀನು ಹಿಡಿಯುವಿಕೆ ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.

Leave a Reply

Your email address will not be published. Required fields are marked *