ಅತ್ಯುತ್ತಮ ಇ-ರೀಡಿಂಗ್ ಅಪ್ಲಿಕೇಶನ್‌ಗಳು

ಸ್ಮಾರ್ಟ್‌ಫೋನುಗಳು ಮತ್ತು ಟ್ಯಾಬ್ಲೆಟ್‌ಗಳು ಬಂದ ನಂತರದಲ್ಲಿ ಇ-ರೀಡಿಂಗ್‌ಗೆ ಹೆಚ್ಚಿನ ಮಹತ್ವ ಬಂದಿದೆ. ಎಲ್ಲರೂ ಇ-ಮಾಧ್ಯಮದಲ್ಲಿಯೇ ಓದುತ್ತಾರೆ ಎಂದಲ್ಲ, ಅಥವಾ ಪುಸ್ತಕಗಳನ್ನೆಲ್ಲ ಇ-ಮಾಧ್ಯಮದಲ್ಲಿ ಓದುವುದು ಸುಲಭ ಅಂತಲೂ ಅಲ್ಲ – ಆದರೆ ಸ್ಮಾರ್ಟ್ ಫೋನುಗಳು ಓದುವಿಕೆಯನ್ನು ಹೆಚ್ಚಾಗಿಸಿವೆ.

ಈ ಲೇಖನದಲ್ಲಿ ಎರಡು ರೀತಿಯ ಓದಲು ಸಹಾಯ ಮಾಡುವ ಅಪ್ಲಿಕೇಶನ್ ಗಳ ಕುರಿತು ನಾವು ತಿಳಿದುಕೊಳ್ಳೋಣ, ಮೊದಲನೆಯದಾಗಿ ಪುಸ್ತಕಗಳನ್ನು ಓದಲು ಅಗತ್ಯವಾದ ಅಪ್ಲಿಕೇಶನ್ ಗಳು ಮತ್ತು ಎರಡನೆಯದಾಗಿ ಲೇಖನ/ಸುದ್ದಿ ಓದುವ ಅಪ್ಲಿಕೇಶನ್ ಗಳು.

ಪುಸ್ತಕಗಳನ್ನು ಇ-ರೀಡಿಂಗ್ ಸಾಧನಗಳ ಮೂಲಕ ಓದುವುದನ್ನು ಮೊದಲು ಪರಿಚಯಿಸಿದ್ದು 2004 ರಲ್ಲಿ ಬಂದ ಸೋನಿ ಲಿಬ್ರಿ ಅನ್ನುವ ಕಪ್ಪುಬಿಳುಪಿನ ಸಾಧನ. ಈ ಸಾಧನಗಳನ್ನು ಪ್ರಸಿದ್ಧಿಗೆ ತಂದ ಕಂಪನಿಗಳಲ್ಲಿ ಅಮೇಜಾನ್ ಕೂಡಾ ಒಂದು. ಸದ್ಯ ಭಾರತದಲ್ಲಿ ಅಮೇಜಾನ್‌ನ ಕಿಂಡಲ್ ಸಾಧನಗಳು ಪ್ರಸಿದ್ಧವಾಗಿವೆ. ಇ-ಇಂಕ್ ಮೂಲಕ ಕಪ್ಪು-ಬಿಳುಪಿನ ಮಾಧ್ಯಮದಲ್ಲಿ ಪುಸ್ತಕಗಳನ್ನು ಓದಲು ಈ ಕಿಂಡಲ್ ಟ್ಯಾಬ್ಲೆಟ್‌ಗಳು ಉತ್ತಮವಾಗಿವೆ. ಈ ಅಮೇಜಾನ್ ಕಂಪನಿ ಈ ಟ್ಯಾಬ್ಲೆಟ್‌ಗಳನ್ನು ಓದಲು ಸುಲಭವಾಗುವಂತೆ ಕಿಂಡಲ್ ಎಂಬ ಅಪ್ಲಿಕೇಶನ್ (Kindle App) ರೂಪಿಸಿದ್ದು, ಇದು ಆಂಡ್ರಾಯ್ಡ್ ಮತ್ತು ಆಪಲ್‌ನ ಐಓಸ್‌ನಲ್ಲಿಯೂ ಲಭ್ಯವಿದೆ. ಕಿಂಡಲ್ ಆಪ್‌ನಲ್ಲಿ ಪುಸ್ತಕ ಡೌನ್‌ಲೋಡ್ ಮಾಡಿಕೊಂಡು ಓದಲು ನೀವು ಅಮೇಜಾನ್ ಅಕೌಂಟ್ ಹೊಂದಿರಬೇಕಾಗಿದ್ದು, ಅದನ್ನು ಉಚಿತವಾಗಿ ಮಾಡಿಕೊಳ್ಳಬಹುದಾಗಿದೆ.

ಅಮೇಜಾನ್ ನಲ್ಲಿ ನಿಮಗೆ ಇ-ಪುಸ್ತಕಗಳನ್ನು ಕೊಳ್ಳುವ ಅವಕಾಶವಿದೆ. ಅಲ್ಲದೇ ಈ ತಾಣದಲ್ಲಿ ಉಚಿತ ಪುಸ್ತಕಗಳು ಲಭ್ಯವಿವೆ. ಮೊದಲು ಅಪ್ಲಿಕೇಶನ್ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಸ್ಥಾಪಿಸಿಕೊಳ್ಳಿ, ನಂತರ ನಿಮಗೆ ಬೇಕಾದ ಪುಸ್ತಕಗಳನ್ನು ಹುಡುಕಿ ಅವುಗಳನ್ನು ನಿಮ್ಮ ಕಿಂಡಲ್ ಅಪ್ಲಿಕೇಶನ್‌ಗೆ ಕಳಿಸಿಕೊಳ್ಳಿ. ಅಮೇಜಾನ್ ಪ್ರಕಾರ ಇಲ್ಲಿ ಸಾವಿರಾರು ಉಚಿತ ಪುಸ್ತಕಗಳು ಲಭ್ಯವಿವೆ.  ಷೇಕ್ಸ್‌ಪಿಯರ್, ಟಾಲ್‌ಸ್ಟಾಯ್, ಜೇನ್ ಆಸ್ಟಿನ್ ಮುಂತಾದ ಲೇಖಕರ ಇಂಗ್ಲೀಷ್ ಸಾಹಿತ್ಯ ಕೃತಿಗಳನ್ನು ಇಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ಓದಬಹುದು.

ಗೂಗಲ್ ಪ್ಲೇ ಬುಕ್ ಸಹಾ ಇಂತಹುದೇ ಸೌಲಭ್ಯವನ್ನು ಒದಗಿಸುತ್ತದೆ.

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಪುಸ್ತಕಗಳನ್ನು ಕೊಳ್ಳಬಹುದು ಅಥವಾ ಉಚಿತ ಪುಸ್ತಕಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಇಲ್ಲಿ ಇನ್ನೊಂದು ಪ್ರಯೋಜನವೆಂದರೆ, ನಿಮ್ಮ ಯಾವುದೇ ಪಿಡಿಎಫ್ ಅಥವಾ ಇನ್ಯಾವುದೇ ಫಾರ್ಮ್ಯಾಟಿನ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಂಡು ಓದಬಹುದು.

ಇ-ರೀಡಿಂಗ್ ಆಪ್ ಗಳ ಪ್ರಯೋಜನಗಳು

  • ಸಾವಿರಾರು ಪುಸ್ತಕಗಳ ಲೈಬ್ರೆರಿಯೇ ನಿಮ್ಮ ಕೈಯಲ್ಲಿರುತ್ತದೆ, ಮತ್ತು ಯಾವುದೇ ಪುಸ್ತಕವನ್ನೂ ಸುಲಭದಲ್ಲಿ ಹುಡುಕಿ ಓದಬಹುದು.
  • ಪುಟಗಳನ್ನು ಬುಕ್ ಮಾರ್ಕ್ ಮಾಡಿಕೊಳ್ಳುವ, ನೋಟ್ಸ್ ಮಾಡಿಕೊಳ್ಳುವ ಸೌಲಭ್ಯವೂ ಇದೆ.
  • ಈ ಅಪ್ಲಿಕೇಶನ್ ಗಳು ಪದಕೋಶಗಳನ್ನೂ ಹೊಂದಿರುವುದರಿಂದ, ಒಂದು ಪದವನ್ನು ಒತ್ತಿ ಆಯ್ಕೆಮಾಡಿದರೆ, ಅದರ ಅರ್ಥ ವಿವರಗಳು ಅಲ್ಲಿಯೇ ಕಾಣಿಸಿಕೊಳ್ಳುತ್ತವೆ, ಮತ್ತೊಂದು ಪದಕೋಶ ಅಪ್ಲಿಕೇಶನ್ ಅನ್ನು ಅವಲಂಬಿಸುವ ಅಗತ್ಯವಿಲ್ಲ.
  • ಬಸ್ ಸ್ಟ್ಯಾಂಡ್ ಗಳಲ್ಲಿ, ಪ್ರಯಾಣದಲ್ಲಿ ಮತ್ತು ಯಾವುದೇ ಬಿಡುವಿನ ವೇಳೆಯಲ್ಲಿಯೂ ಸ್ವಲ್ಪ ಸ್ವಲ್ಪ ಓದಬಹುದು.

ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಲ್ಲಿ ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿ ಲೇಖನಗಳನ್ನು ಓದುವುದಕ್ಕೆ ಇರುವ ಎರಡು ಸಮಸ್ಯೆಗಳು ಅಂದರೆ, ಕಣ್ಣಿಗೆ ತೊಂದರೆ ಉಂಟುಮಾಡುವ ಸ್ಕ್ರೀನ್‌ನ ಬೆಳಕು ಮತ್ತು ಆ ಲೇಖನ ಪುಟಗಳಲ್ಲಿ ತುಂಬಿಕೊಂಡಿರುವ ಜಾಹೀರಾತುಗಳು. ಜಾಹೀರಾತುಗಳನ್ನು ಸಂಪೂರ್ಣ ತೆಗೆದುಹಾಕಿ, ಮತ್ತು ಸ್ಕ್ರೀನ್‌ನ ಬೆಳಕಿನ ಪ್ರಖರತೆಯನ್ನು ಸಾಕಷ್ಟು ಕಡಿಮೆ ಮಾಡಿ ಓದಲು ಅನುವು ಮಾಡಿಕೊಡುವುದಕ್ಕೆ ಸಹ ಅಪ್ಲಿಕೇಶನ್‌ಗಳಿವೆ. ಅಂತಹ ಎರಡು ಮುಖ್ಯ ಅಪ್ಲಿಕೇಶನ್‌ಗಳು ಅಂದರೆ ಪಾಕೆಟ್ (Pocket) ಮತ್ತು ರೀಡಬಿಲಿಟಿ (Readability).

ಪಾಕೆಟ್ ಸ್ಥಾಪಿಸಿಕೊಳ್ಳಿ, ನೀವು ಬ್ರೌಸರ್‌ನಲ್ಲಿ ತೆರೆದ ಲೇಖನವನ್ನು ಪಾಕೆಟ್‌ಗೆ ಶೇರ್ ಮಾಡಿದರೆ ಸಾಕು, ಆ ಲೇಖನ ಅಲ್ಲಿ ನಿಮಗೆ ಲಭ್ಯವಿರುತ್ತದೆ. ನಂತರ ಈ ಲೇಖನವನ್ನು ವೆಬ್‌ಸೈಟ್‌ನಲ್ಲಿ ಇರುವಂತೆ ನೋಡಬಯಸುತ್ತೀರೋ ಅಥವಾ ಒಂದು ಲೇಖನವಾಗಿ ನೋಡಬಯಸುತ್ತೀರೋ ಆಯ್ಕೆ ಮಾಡಿಕೊಳ್ಳಿ. ಲೇಖನವಾಗಿ ನೋಡುವಾಗ ಆ ಲೇಖನದ ಎಲ್ಲಾ ಜಾಹೀರಾತುಗಳು ಕಾಣೆಯಾಗುತ್ತವೆ. ಅಲ್ಲದೇ, ನೀವು ಡಿಸ್‌ಪ್ಲೇ ಸೆಟ್ಟಿಂಗ್ಸ್‌ಗೆ ಹೋಗಿ ಫಾಂಟ್ ಗಾತ್ರ ಬದಲಿಸಿಕೊಳ್ಳಬಹುದು, ಲೇಖನದ ಹಿನ್ನೆಲೆ ಬಣ್ಣವನ್ನು ಬಿಳಿ, ಕಪ್ಪು ಮತ್ತು ಸೇಪಿಯಾಗೆ ಬದಲಿಸಿಕೊಳ್ಳಬಹುದು. ಕಪ್ಪು ಹಿನ್ನೆಲೆಗೆ ಬದಲಿಸಿದಾಗ ಅಕ್ಷರಗಳು ಬಿಳಿ ಬಣ್ಣದಲ್ಲಿ ಕಾಣುತ್ತವೆ. ಇದು ರಾತ್ರಿ ಓದುವುದಕ್ಕೆ ಉತ್ತಮ. ಹೀಗೇ ನೂರಾರು ಲೇಖನಗಳನ್ನು ಈ ಆಪ್‌ಗಳಲ್ಲಿ ಒಂದು ಕಡೆ ಉಳಿಸಿಟ್ಟುಕೊಳ್ಳಬಹುದು.

ಇದೆಲ್ಲವನ್ನೂ ಬ್ರೌಸರ್‌ನಲ್ಲಿ ಮಾಡುವುದಕ್ಕೆ ಫೈರ್‌ಫಾಕ್ಸ್ ನಿಮಗೆ ಅವಕಾಶ ನೀಡುತ್ತದೆ. ಫೈರ್‌ಫಾಕ್ಸ್ ಬ್ರೌಸರ್‌ನ ಹುಡುಕುವ ಪಟ್ಟಿಯ ಪಕ್ಕದಲ್ಲಿ ಒಂದು ಪುಸ್ತಕದ ಚಿತ್ರವಿರುತ್ತದೆ. ಅದನ್ನು ಒತ್ತಿದರೆ ಸಾಕು, ಆ ವೆಬ್ ಪುಟ ಶುದ್ಧ ಲೇಖನ ರೂಪವಾಗಿ ಬದಲಾಗುತ್ತದೆ. ನಿಮ್ಮ ಫೋನಿನಲ್ಲಿರುವ ಗೂಗಲ್ ಪ್ಲೇ ಸ್ಟೋರ್ ಮೂಲಕ ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ.

Leave a Reply

Your email address will not be published. Required fields are marked *