ಒಂದು ದುಃಖದ ಗೀತೆಯನ್ನು
ನನ್ನಷ್ಟಕ್ಕೆ ನಾನು ಹಾಡಿಕೊಳ್ಳುವ ಹೊತ್ತು
ಸಂಜೆ ತನ್ನ ಮೌನ ಮುರಿಯಿತು,
ಮುಗುಳ್ನಕ್ಕಿತು.
ಗೀತೆ ದುಃಖವನ್ನೊ, ದುಃಖ ಗೀತೆಯನ್ನೊ
ಎರಡೂ ಕರಗಿಹೋದವು.
ಮೆಲ್ಲನೆ ಚಂದ್ರ ಮೂಡಿಬಂದ.
“ಸಾವಿಲ್ಲ ಹೋಗು”
“ದುಃಖಕ್ಕೇನು?”, ಆತಂಕದಿಂದ ಕೇಳಿದೆ, ಮುಗುಳ್ನಕ್ಕೆ.
“ಅರ್ಥವಾದ ಮೇಲೆ ಹಠ ಮಾಡ ಬಾರದು, ಹೊರಡು”
ಗಾಢ-ಗೂಢ ಗಾಳಿ ಬೀಸತೊಡಗಿತು.
ಕಣ್ಣಲ್ಲಿ ಸಂಭ್ರಮವನ್ನು ಗುರುತಿಸಿದ ತಂಗಿ
“ಏನು” ಅಂದಳು.
ಇನ್ನಾರದೋ ಬಳಿ ಹಂಚಿಕೊಂಡ ಗುಟ್ಟು,
ಆ ಲೋಕಕ್ಕೆ ನೀನಿನ್ನೂ ಬಂದಿಲ್ಲವಲ್ಲೇ ಕಂದ!
“ಏನಿಲ್ಲ” ಅಂದೆ.
ಮಾವಿನಮರವನ್ನು ವಸಂತ ಹತ್ತುತ್ತಿದ್ದ,
ಅವಳಿಗೆ ಕಾಣಲಿಲ್ಲ.