ಹಸಿರು ಬೆಟ್ಟದ ಮೇಲೆ
ಎಳೆಬಿಸಿಲು ಹಾಸಿದಂತೆ ಇವಳ ಮಂದಹಾಸ
ತಿಳಿಗಾಳಿಯಂತಹ ಬೆಳಕು ಮೂಡುವಾಗ
ತೆಳುವಲೆಗಳು ನದಿಯಲ್ಲಿ ಮೂಡುವಂತೆ
ತಿಳಿದೇಳುವ ಮೊದಲು ನಿದ್ದೆಯಲಿ ಮಂದಹಾಸ
ಉದಯನುದಯಿಸಿ ಬಗೆಯಲಿ
ಅದರದಳಗಳನರಳಿಸುವಂತೆ ತೋರುವುದು
ಶಿಶಿರಕರ್ಪೂರವುರಿಸಿ ವಸಂತಮಂಗಳಾರತಿ
ಹಸಿರುದೇಗುಲವ ಬೆಳಗುವ ಕಾಲ..
ಕಣ್ಣು ಬಿಡುತ್ತಾಳೆ ಮೆಲ್ಲಗೆ, ಇಬ್ಬನಿ ಕರಗುವಂತೆ
ರಾತ್ರಿ ಕಳೆದ ಪ್ರಕೃತಿ,
ಮುಂಜಾನೆಗೆ ನೀಡಿದ ಹೊಸಜನ್ಮದಲಿ
ಹೊಸಮಗುವಂತೆ ಕಣ್ಣರಳಿಸುತ್ತಾಳೆ.