ಹಲ್ಲು ನಾಟಿಸಿ ಎರಡು ಹನಿ ತೊಟ್ಟಿಕ್ಕಿಸಿ
ನನ್ನ ನೀಲಿ ಆಗಸವಾಗಿಸಿ ಹೋದೆ
ಎಲ್ಲು ನಿಲ್ಲದ, ಎಲ್ಲು ಸಲ್ಲದ ಎಲ್ಲೆಯಿಲ್ಲದವನಾದೆ
ಭದ್ರತೆಯ ಪ್ರಯತ್ನಗಳೆಲ್ಲ ಅಭದ್ರನಾಗಿಸಿವೆ ನನ್ನ.
ಕಾಲಿಲ್ಲದ ನಿನ್ನ ಹೆಜ್ಜೆ ಗುರುತು ಅರಸುತ್ತ
ಕಿವಿಯಿಲ್ಲದ ನಿನ್ನ ಅತ್ತು ಅತ್ತು ಕರೆಯುತ್ತ
ಪೊದೆ ಸರಸರದಲ್ಲಿ, ಪೊರೆ ಉದುರಿದಲ್ಲಿ
ಜೀವನ ಕರಗುತಿದೆ ನಿನ್ನ ಹುಡುಕುತ್ತ.
ಗೂಬೆಗೊಂದು ಗೂಡು, ಬಾವಲಿಗೊಂದು ಕೋಡು
ಆತ್ಮ ಆತುಕೊಳ್ಳದು ಎಲ್ಲೂ, ತನ್ನಲ್ಲೆ ಹೊರತೂ
ತನಗೆ ತಾನೆ ಜೋತವ, ತನ್ನಲ್ಲೆ ನಿಂತವ ಮುಕ್ತ.
ಇನ್ನೊಮ್ಮೆ ನಾಟಿಸು ಹಲ್ಲು, ಹೀರು
ಪೂರ್ಣವಾಗಲಿ ಅರಿವು.