ಎರಡಲ್ಲ – ಕಥೆ

ಒಂದು ಮುಂಜಾನೆ ಆಟಕ್ಕೆಂದು ಹೋಗಿದ್ದ ರಾಮ, ಬರುವಾಗ ತನ್ನ ಜೊತೆ ಹಾವೊಂದನ್ನು ಕರೆದುಕೊಂಡು ಮನೆಗೆ ಬಂದ. ಮಗನ ದನಿ ಕೇಳಿ ಹೊರಗೆ ಬಂದ ಅಮ್ಮ ಬೆಚ್ಚಿಬಿದ್ದಳು. ಎರಡು ಮಾರು ಉದ್ದವಿರಬೇಕು, ಮಿರಿಮಿರಿ ಮಿಂಚುವ ಕರಿಮೈಯ ಹಾವು ಅದು. ಚೀರುತ್ತ ಒಳಗೆ ಓಡಿ ಬಂದದ್ದನ್ನು ನೋಡಿ ರಾಮನ ಅಪ್ಪ ಹೊರ ಬಂದರು. ಅಂಗಳದಲ್ಲಿ ರಾಮನ ಎತ್ತರಕ್ಕೆ ಹೆಡೆಯೆತ್ತಿಕೊಂಡು ನಿಂತ ಸರ್ಪದ ಕುತ್ತಿಗೆಯನ್ನು ಅವನ ಕೈ ಅವನಿಗರಿವಿಲ್ಲದಂತೆ ಸವರುತ್ತಿವೆ. ಹಿಂದೆ, ಬೇಲಿಯ ಗೇಟಿಗೆ ಒರಗಿಕೊಂಡು, ಚಡಪಡಿಕೆಯಲ್ಲಿ ನಿಂತಿದ್ದಾಳೆ ಧನ್ಯಾ.

ಮುಂಜಾನೆಯೇ ಎಲ್ಲಿಗೋ ರಾಮ ಹೋಗುತ್ತಿದ್ದುದನ್ನು ನೋಡಿದವಳು, ಕಟ್ಟೆಯ ಮೇಲಿಂದ ಜಿಗಿದು, ತನ್ನ ಪುಟ್ಟ ಕಾಲುಗಳಿಂದ ಪಟಪಟ ಸದ್ದು ಮಾಡುತ್ತಾ ಅವನ ಹಿಂದೆ ಓಡಿದಳು. ಅವಳ ಕಾಲ್ಗೆಜ್ಜೆ ಸದ್ದಿನಿಂದ ಅವಳು ಹಿಂಬಾಲಿಸುತ್ತಿದ್ದಾಳೆ ಎಂಬುದು ಗೊತ್ತಾದರೂ, ಅದಕ್ಕಿಂತಲೂ ಮುಖ್ಯವಾದ ಏನೋ ಮಹಾ ಕಾರ್ಯವಿದ್ದವನಂತೆ ರಾಮ ನಡೆದು ಹೋಗುತ್ತಿದ್ದ. ಇಬ್ಬರೂ ದೊಡ್ಡ ದೊಡ್ಡ ಮರಗಳ ನಡುವೆ ಇದ್ದ ಕಾಲು ದಾರಿಯಲ್ಲಿ ನಡೆದರು. ಏನೋ ಹೇಳಬೇಕೆಂದುಕೊಂಡು ಬಾಯ್ತೆರೆಯುತ್ತ, ಮತ್ತೆ ಅವನು ತುಂಬ ಗಂಭೀರನಾಗಿ ಏನನ್ನೋ ಹುಡುಕುವಂತೆ ನಡೆಯುತ್ತಿದ್ದ ಅವನನ್ನು ನೋಡಿ ಸುಮ್ಮನಾಗುತ್ತ, ಎಲ್ಲಿಗೆ ಯಾಕೆ ಎಂಬುದು ಗೊತ್ತಿಲ್ಲದೇ ನಡೆಯುತ್ತಿದ್ದಳು. ಅವಳ ಕಡೆ ತಿರುಗಿ ನೋಡಿ, “ಹಕ್ಕಿ ಗೂಡು ಕಟ್ಟಿದೆ” ಅಂದ. ಅವಳು ಹೌದಾ! ಅನ್ನುತ್ತ ಕಣ್ಣರಳಿಸಿದಳು.

ಕಾಲು ದಾರಿ ಬಿಟ್ಟು ರಾಮ ಕಾಡಿನ ಒಳಗೆ ನಡೆದು, ಒಂದು ಪೊದೆಯ ಬಳಿ ನಿಂತ. ಪೊದೆಯ ಒಳಕ್ಕೆ ಇಣುಕುತ್ತಿದ್ದಂತೆ ಒಂದು ಪಿಕಳಾರ ಹಕ್ಕಿ ಕಿಚಕ್ಕಿಚ ಕೂಗುತ್ತಾ ಪೊದೆಯಿಂದ ಹೊರಬಿದ್ದು ಮೇಲೆ ಹಾರಿ ಮರವೊಂದರ ಮೇಲೆ ಕುಳಿತಿತು. ಮೆಲ್ಲ ಹೆಜ್ಜೆಯಿಡುತ್ತ ಅವನ ಹಿಂದೆ ಬಂದ ಧನ್ಯಾ ಅವನೊಡನೆ ಇಣುಕಿ ಗೂಡಿನ ಕಡೆ ನೋಡಿದಳು. ಅಲ್ಲೊಂದು ಬೃಹತ್ ಸರ್ಪ ಆ ಪೊದೆಯನ್ನು ಏರಿ ಗೂಡಿನಲ್ಲಿ ಇಣುಕುತ್ತಿತ್ತು. ಧನ್ಯಾ ‘ಅಮ್ಮಾ’ ಎಂದು ಚೀರುತ್ತಾ ಹಿಂದಕ್ಕೆ ಓಡಿದಳು. ಕಾಲು ದಾರಿ ಬಂದ ಮೇಲೆ ನಿಂತು ತಿರುಗಿ ನೋಡಿದರೆ, ರಾಮ ಇನ್ನೂ ಅಲ್ಲಿಯೇ ಇದ್ದಾನೆ. ಮನೆಗೆ ಓಡಿಬಿಡಲೇ ಎಂದು ನೋಡಿದಳು. ‘ಮನೆಗೆ ಹೋಗೋಣ ಬಾ’ ಅಂತ ಕಿರುಚಿದಳು. ಅವನು ತಿರುಗಿ ನೋಡಲಿಲ್ಲ. ಮೆಲ್ಲ ಅವನಿದ್ದಲ್ಲಿಗೆ ನಡೆದು ಬಂದು, ಹಿಂದೆ ನಿಂತಳು. “ಏನೂ ಇಲ್ಲ ಅಲ್ಲ? ಈಗಷ್ಟೇ ಗೂಡು ಕಟ್ಟಿದೆ” ಅಂದ. ಆ ಹಾವು ಅವನ ಕಡೆ ನೋಡಿತು. “ಅದು ನಿನಗೆ ಪರಿಚಯಾನಾ?” ಅಂತ ಕೇಳಿದಳು. “ಇಲ್ಲ, ಈಗಷ್ಟೇ” ಅಂದ.

“ನಮ್ಮನೆಗೆ ಬಾ, ನಿನಗೆ ಮೊಟ್ಟೆ ಕೊಡ್ತೇನೆ” ಅಂದ. ಅದು ಕೆಳಕ್ಕಿಳಿಯಿತು. ತಮ್ಮ ಕಡೆ ಬರುತ್ತಿದ್ದಂತೆ ಮತ್ತೆ ಧನ್ಯಾ ಓಡಿದಳು. ನಾಲಿಗೆ ಹೊರಚಾಚುತ್ತಾ ಅದು ರಾಮನ ಹಿಂದೆ ಅದು ಬರತೊಡಗಿತು. ಆರೆಂಟು ಮಾರು ಮುಂದೆ ಮುಂದೆ ಓಡುತ್ತಾ, ಹಿಂತಿರುಗಿ ಅವರು ಬರುತ್ತಿದ್ದಾರೋ ಇಲ್ಲವೋ ಎಂಬುದನ್ನು ನೋಡುತ್ತಾ ಮತ್ತೆ ಓಡತೊಡಗಿದಳು ಧನ್ಯಾ.

ಈಗ ನೇರವಾಗಿ ಮನೆಯಂಗಳಕ್ಕೆ ಬಂದು ನಿಂತಿದ್ದಾನೆ. ಬೇಲಿಯಂಚಿನಲ್ಲಿಯೇ ನಿಂತು ರಾಮನ ಅಪ್ಪ ಅಮ್ಮ ಏನು ಹೇಳುತ್ತಾರೋ ಎಂದು ನೋಡಿದಳು. ಗೆಳೆಯನನ್ನು ಕರೆದುಕೊಂಡು ಬಂದ ಸಹಜತೆಯಲ್ಲಿ ಮನೆಯೊಳಗೆ ಕರೆದು ತರಲೋ ಎಂಬ ಪ್ರಶ್ನೆ ಹೊತ್ತುಕೊಂಡಂತೆ ರಾಮ ನೋಡುತ್ತಿದ್ದಾನೆ.

ರಾಮನ ಅಮ್ಮ ಮಾತ್ರ ಏನು ಹೇಳುವುದು ತಿಳಿಯದೇ ನಿಂತಿದ್ದಾಳೆ. ಕಲ್ಗುಡಿಯ ಪೊದೆಪೊದೆಗಳಲ್ಲಿ ಹಾವುಗಳಿರುತ್ತವೆ, ಹೆಜ್ಜೆ ಹೆಜ್ಜೆಗೆ ಕಾಣಸಿಗುತ್ತವೆ. ಊರ ಜನ ಅವುಗಳ ಇರುವಿಕೆಯನ್ನು ಸಹಜವಾಗಿ ಸ್ವೀಕರಿಸಿ, ಅವುಗಳಿಗೆ ಯಾವುದೇ ಹಾನಿಯಾಗದಂತಹ ನಾಜೂಕಿನಲ್ಲಿ ಜೀವಿಸುತ್ತಿದ್ದಾರೆ ಎಂಬುದು ಮದುವೆಯಾಗಿ ಬಂದ ದಿನದಿಂದ ಆಕೆಗೆ ಗೊತ್ತು. ಆದರೆ ಮಗ ಒಂದು ದಿನ ಹೀಗೆ ಕಾಳಿಂಗ ಸರ್ಪವೊಂದನ್ನು ಮನೆಗೇ ಕರೆತರುತ್ತಾನೆಂದು ಕನಸಿನಲ್ಲಿಯೂ ನೆನೆಸಿರಲಿಲ್ಲ. ಯಾವುದಾದರೊಂದು ಬೀದಿ ನಾಯಿ ಬಂದರೆ ಅದರ ಕಿವಿ ಹಿಡಿದು ದರದರ ಎಳೆದುಕೊಂಡು ಬರುತ್ತಿದ್ದ, ದನ ಬಂದರೆ ಅದರ ಬಾಲ ಎಳೆಯುತ್ತಿದ್ದ. ನಾಯಿ ಎಲ್ಲಾದರೂ ಕಚ್ಚಿದರೆ ಏನು ಗತಿ ಅಂತ ಭಯವಾಗುತ್ತಿತ್ತು. ಆದರೆ ಅಂತದ್ದೇನೂ ಆಗಿರಲಿಲ್ಲ. ಆದರೆ ಇದು ಮಾತ್ರ ಭಯಂಕರ. ಅಪ್ಪ ಆಕೆಯ ಬುಜ ಮುಟ್ಟಿ, ‘ಅವನ ಎದುರು ಭಯ ತೋರಿಸಬೇಡ’ ಅಂದರು.

“ಅದನ್ಯಾಕೆ ಮನೆಗೆ ಕರೆದುಕೊಂಡು ಬಂದೆ” ಕೇಳಿದಳು. “ಅವನಿಗೆ ಹಸಿವಂತೆ” ಅಂದವನು ಅದರ ಕಡೆ ತಿರುಗಿ ನೋಡಿ ಕೇಳಿದ, “ಹಾಲು ಬೇಕಾ?” ಅದು ಬೇಡವೆಂಬಂತೆ ತಲೆಯಾಡಿಸಿತು.  “ಮೊಟ್ಟೆ?” ಅದು ಸುಮ್ಮನೇ ನೋಡಿತು. ಮನೆಯೊಳಗೆ ಓಡಿ ಹೋಗಿ, ಅಕ್ಕಿ ಗಡಿಗೆಯಲ್ಲಿದ್ದ ಎರೆಡು ಕೋಳಿ ಮೊಟ್ಟೆಗಳನ್ನು ಎರೆಡೂ ಕೈಗಳಲ್ಲಿ ಒಂದೊಂದರಂತೆ ಹಿಡಿದುಕೊಂಡು ಬಂದು, ಅದರ ಎದುರಿಗಿಟ್ಟ. ಅದು ಒಂದೊಂದಾಗಿ ನುಂಗುವುದನ್ನು ನಾಲ್ಕು ಜನರೂ ನೋಡಿದರು. ಅನಂತರದಲ್ಲಿ ರಾಮ ಹೇಳಿದ, “ಆಯ್ತು, ಇನ್ನು ನೀನು ಹೋಗು”. ಅದು ಮೆಲ್ಲಗೆ ಹಿಂತಿರುಗಿ ಧನ್ಯಾಳನ್ನು ನೋಡಿ, ಮತ್ತೊಂದು ದಿಕ್ಕಿನಲ್ಲಿ ಹರಿದು ಹೋಯಿತು.  ಅಮ್ಮ ರಾಮನನ್ನು ನೇರ ಬಚ್ಚಲಿಗೆ ಕರೆದುಕೊಂಡು ಹೋಗಿ, ಉಜ್ಜಿ ಉಜ್ಜಿ ಮೈತೊಳೆಸಿದಳು. ಗಾಭರಿಯಲ್ಲಿ ಅವಳ ಕೈಗಳಿನ್ನೂ ನಡುಗುತ್ತಿದ್ದವು.

ರಾತ್ರಿ ಊಟ ಮುಗಿಸಿ ಮನೆಯ ಹೊರಗೆ ಕುಳಿತಿದ್ದರು. ರಾಮ ಅಮ್ಮನ ಮಡಿಲಲ್ಲಿ ಮಲಗಿದ್ದವ, ನಿದ್ದೆ ಹೋಗಿದ್ದ. ಅವನ ತಲೆ ನೆವರಿಸುತ್ತ, ಅಮ್ಮ ಹೇಳಿದಳು, “ಇನ್ನೂ ಮೈ ನಡುಗ್ತಾ ಇದೆ. ಆ ಹಾವು ಏನಾದ್ರೂ ಮಾಡಿದ್ರೆ ಏನು ಗತಿ”. “ಏನೂ ಮಾಡೋದಿಲ್ಲ” ಅಂದರು ಅಪ್ಪ.  “ಅದು ಹ್ಯಾಗೆ ಹೇಳ್ತೀರಿ?” “ಅವನಿಗೆ ಅದು ಬೇರೆ, ತಾನು ಬೇರೆ ಅನ್ನೋ ವ್ಯತ್ಯಾಸ ಇಲ್ಲ” “ಅಂದರೆ?” “ಆ ಬೀದಿ ನಾಯಿ ಕಿವಿ ಹಿಡಿದು ಎಳಿತಾನಲ್ಲ, ನಾವು ಅದನ್ನ ಮುಟ್ಟೋಕಾದ್ರು ಬಿಡತ್ತಾ ಅದು? ಯಾಕೆ ಅಂತ ಯೋಚಿಸಿದ್ದೀಯ? ನಮಗೆ ಅದು ಬೇರೆ ನಾವು ಬೇರೆ ಅನ್ನೋ ಭಾವನೆ ಇದೆ, ಅವನಿಗೆ ಆ ವ್ಯತ್ಯಾಸ ಇಲ್ಲ. ಅದು ಇದ್ದಿದ್ರೆ ಅವನು ಆ ಹಾವಿನ ಹತ್ರಾನೂ ಹೋಗ್ತಿರಲಿಲ್ಲ. ಎಲ್ಲಿವರೆಗೆ ಅದು ನಾನು ಒಂದು ಅನ್ನೋ ಭಾವ ನನ್ನೊಳಗೆ ಇದೆ, ಅಲ್ಲಿವರೆಗೆ ಅದು ಏನೂ ಮಾಡುವುದಿಲ್ಲ. ಅದರ ಮೇಲೆ ನಮಗೆ ಭಯ ಹುಟ್ಟಿದ್ದರೆ, ಅದೇ ಭಯದ ಭಾವ ಅದರಲ್ಲೂ ಭಯವನ್ನು ಹುಟ್ಟಿಸುತ್ತದೆ. ಮನುಷ್ಯರ ವಿಚಾರದಲ್ಲೂ ಹೀಗೇ..” ಹೇಳುತ್ತ ಹೋದರು. ಅಮ್ಮ ಸ್ವಲ್ಪ ಹೊತ್ತು ಮೌನವಾದಳು. “ಏನಾಯಿತು? ಏನು ಯೋಚಿಸ್ತಿದ್ದಿ”?

“ನಾನು ಹೇಗೆ ಬದಲಾದೆ ಅಂತ”.

Leave a Reply

Your email address will not be published. Required fields are marked *