ಕಲ್ಲು ದೇವರು ದೇವರೇ?
ಕಲ್ಲು ದೇವರಲ್ಲ ನಿಮ್ಮ ಭಾವವೇ ನಿಮ್ಮ ದೇವರು ಅಂದಿದ್ದಾನೆ ಚಾಣಕ್ಯ. ಕಲ್ಲು ಮೂರ್ತಿಯ ಮೇಲೆ ಉಚ್ಚೆ ಮಾಡಿ ದೇವರಿದ್ದಾನೆಯೇ ಎಂದು ಪರೀಕ್ಷಿಸುವುದು ನಾಗರೀಕತೆಯ ಆರಂಭದಿಂದಲೇ ಪ್ರಯತ್ನಿಸಿದ ಪ್ರಯೋಗ, ಅದೇನೂ ಹೊಸದಲ್ಲ.
ಉಚ್ಚೆಯಲ್ಲಿ ಕಲ್ಲಿನಲ್ಲಿ ಇಲ್ಲದ್ದು ಅಂತದ್ದೇನಿದೆ? ಎರಡೂ ಅದೇ ಮೂಲಸತ್ವಗಳಿಂದಲೇ ಮಾಡಲ್ಪಟ್ಟಿವೆ. ಅದು ಜಲ ಮತ್ತು ಲವಣಗಳ ಒಂದು ದ್ರವವಷ್ಟೇ – ಉಚ್ಚವೂ ಅಲ್ಲ ನೀಚವೂ ಅಲ್ಲ. ಕುಡಿದ ಹಣ್ಣಿನ ರಸವೇ ಆ ವಿಸರ್ಜನೆಯಾಗುತ್ತದೆ, ಮತ್ತು ಅದೇ ವಿಸರ್ಜನೆಯೇ ಕಾಲಂತರದಲ್ಲಿ ಹಣ್ಣಿನ ರಸವಾಗುತ್ತದೆ. ಭಾವ ಮಾತ್ರ ಕಲ್ಲನ್ನು ದೇವರಾಗಿಸುತ್ತದೆ. ಉಪಾಸಕ ದೇವರನ್ನು ಕಲ್ಲಿನ ಹಂತಕ್ಕೆ ಇಳಿಸುವುದಿಲ್ಲ, ಆತ ಕಲ್ಲನ್ನೇ ದೇವರ ಸ್ತರಕ್ಕೆ ಏರಿಸುತ್ತಾನೆ.
ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ಆತ ಕಲ್ಲಿನ ರೂಪದ ಮೂಲಕ ಅದರ ಅರೂಪ ಚೈತನ್ಯವನ್ನು ಕಾಣಲು ಪ್ರಯತ್ನಿಸುತ್ತಾನೆ. ರೂಪಕ್ಕೆ ಒಂದು ಮಿತಿಯಿದೆ, ಅದರೆ ಅರೂಪ ಚೈತನ್ಯಕ್ಕೆ ಗಡಿಯಿಲ್ಲ. ಅಂದರೆ, ಅದರ ಅರೂಪ, ಎಲ್ಲದರ ಅರೂಪವೂ ಹೌದು. ಅರೂಪದಲ್ಲಿ ಎಲ್ಲವೂ ಒಂದೇ. ಕಲ್ಲನ್ನು ಆರಾಧಿಸುತ್ತಾ, ಕಲ್ಲಿನ ಅರೂಪವನ್ನು ಪ್ರವೇಶಿಸುವ ಉಪಾಸಕ ತನ್ನೊಳಗಿನ ಅರೂಪವನ್ನೂ ಕಂಡುಕೊಳ್ಳುತ್ತಾನೆ, ಆ ಮೂಲಕ ಯಾವುದನ್ನು ಕಲ್ಲಿನ ಅರೂಪದೊಂದಿಗೆ ಒಂದಾಗುತ್ತಾನೆ. ಹೀಗೆ ಒಬ್ಬ ಉಪಾಸಕ ಒಂದು ವಸ್ತು ಅಥವಾ ವ್ಯಕ್ತಿಯ ಅರೂಪ ಚೈತನ್ಯದೊಂದಿಗೆ ಒಂದಾಗಿರುವುದು ಇತರರಿಗೆ ಕಾಣುವುದಿಲ್ಲ.
ಹಾಗಾಗಿಯೇ ಕಲ್ಲಿನ ಪೂಜೆ ಅದು ಇತರರಿಗೆ ಕಲ್ಲಿನ ಪೂಜೆಯೇ ಆಗಿ ಕಾಣಿಸುತ್ತದೆ. ಇದನ್ನು ಸರಳವಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ – ನೀವು ನಿಮ್ಮ ತಂದೆ ಅಥವಾ ತಾಯಿಯೊಂದಿಗೆ ಹೊರಗೆ ಕಾಣದ ಒಂದು ಬಂಧದಲ್ಲಿ ಇದ್ದೀರಿ. ಅದು ಹೊರಗೆ ಕಾಣುವ ಬಂಧವಲ್ಲ, ಅದನ್ನು ಇತರರಿಗೆ ವಿವರಿಸಲೂ ಸಾಧ್ಯವಿಲ್ಲ. ಆ ಇತರರೂ ತಮ್ಮ ತಂದೆ ತಾಯಿಗಳೊಂದಿಗೆ ಬಂಧವನ್ನು ಹೊಂದಿದ್ದಾಗ ಮಾತ್ರ ಅವರಿಗೆ ಅದು ಅರ್ಥವಾಗುತ್ತದೆ. ನಾವು ನಮ್ಮ ಕೌಟುಂಬಿಕ, ಸ್ನೇಹದ ಮತ್ತು ಸಾಮಾಜಿಕ ಸಂಬಂಧಗಳೂ ಹೀಗೆ ಒಂದು ಭಾವದಿಂದಲೇ ರೂಪುಗೊಂಡಿವೆ. ಯಾವಾಗ ನಾವು ಒಂದು ಸಂಬಂಧದಿಂದ ಅದರೊಳಗಿನ ಭಾವವನ್ನು ಬಿಡಿಸುತ್ತೇವೆ, ಆಗ ಆ ಸಂಬಂಧವೂ ಬಿಟ್ಟು ಹೋಗುತ್ತದೆ. ಒಬ್ಬ ವ್ಯಕ್ತಿ ತಂದೆ ತಾಯಿಗಳ ಪ್ರೀತಿ ಅನ್ನುವುದೇ ಇಲ್ಲ, ಪ್ರಕೃತಿಯಲ್ಲಿ ಮನುಷ್ಯನನ್ನು ಬಿಟ್ಟರೆ ಯಾವ ಪ್ರಾಣಿಯೂ ತಂದೆತಾಯಿಗಳನ್ನು ಮುಪ್ಪಿನಲ್ಲಿ ನೋಡಿಕೊಳ್ಳುವುದಿಲ್ಲ, ಇದು ಅಪ್ರಾಕೃತಿಕ ಎಂದು ವಾದಿಸಬಹುದು. ಇವೆಲ್ಲವೂ ವೈಯಕ್ತಿಕ ಭಾವಗಳು. ಪ್ರತಿಯೊಬ್ಬ ವ್ಯಕ್ತಿ ಹೇಗೆ ಭಾವಿಸುತ್ತಾನೋ ಹಾಗೆ ಅವನ ಜಗತ್ತು ಸಿದ್ಧಗೊಳ್ಳುತ್ತದೆ.
ಹಾಗೆ ನೋಡಿದರೆ, ನೇಗಿಲಲ್ಲಿ ಏನಿದೆ, ಚಕ್ರದಲ್ಲಿ ಏನಿದೆ, ಬಿದಿರಿನಲ್ಲಿ ಏನಿದೆ? ರೈತ ನೇಗಿಲನ್ನು ತುಳಿದೇ ಕೆಲಸ ಆರಂಭಿಸುತ್ತಾನಾದರೂ, ಅದಕಿಂತ ಮೊದಲು ಅದನ್ನು ಮುಟ್ಟಿ ನಮಿಸುತ್ತಾನೆ ಯಾಕೆ? ಕಲ್ಲಿಗೆ ನಮಿಸುವುದು ಅಥವಾ ಕಲ್ಲಿನ ಮೇಲೆ ಮೂತ್ರ ಮಾಡುವುದು ಅವರವರ ಭಾವ ಮತ್ತು ಭಕ್ತಿಗೆ ಸಂಬಂಧಿಸಿದ್ದುದು. ಮೂತ್ರ ಮಾಡಿ ದೇವರಿದ್ದಾನೆಯೇ ಎಂದು ಪರೀಕ್ಷಿಸುವವರು ಅದೇ ಕಲ್ಲನ್ನು ಪೂಜಿಸಿಯೂ ದೇವರಿದ್ದಾನೆಯೇ ಎಂದು ಪ್ರಯೋಗ ಮಾಡಿ ಹೇಳಬೇಕಾಗುತ್ತದೆ. ಏಕಮುಖಿ ಪ್ರಯೋಗವನ್ನು ಪ್ರಕಟಪಡಿಸುವುದು ಸಾಮಾಜಿಕ ಜವಾಬ್ದಾರಿಯಲ್ಲ. ಪ್ರಹ್ಲಾದನಿಗೆ ಕಂಬದಲ್ಲಿ ಹರಿ ಕಂಡನೆಂದರೆ ಹಿರಣ್ಯಕಷಿಪುವಿಗೂ ಕಾಣಬೇಕೆಂದಿಲ್ಲ. ಕಲ್ಲಿನಲ್ಲಿ ತನ್ನನ್ನು ಕಾಣಲಿಲ್ಲ ಎಂಬ ಕಾರಣಕ್ಕಾಗಿಯೇ ನರಸಿಂಹಾವತಾರ ಆಗುವುದೂ ಇಲ್ಲ.
ಕವಿ ಭಾವದಿಂದಲೇ ಹೂವಿನೊಡನೆ, ಹಕ್ಕಿಯೊಡನೆ ಅಥವಾ ತನ್ನ ಯಾವುದೇ ಕಾವ್ಯದ ವಸ್ತುವಿನೊಡನೆ ಸಂವಾದದಲ್ಲಿ ತೊಡಗುತ್ತಾನೆ – ಭಾವದಲ್ಲಿ ಒಂದಾಗುತ್ತಾನೆ. ಹಾಗೆ ಒಂದಾದಾಗ ಮಾತ್ರ ಆ ಕಾವ್ಯದ ವಸ್ತು ತನ್ನ ರಹಸ್ಯಗಳನ್ನು ಬಿಟ್ಟುಕೊಡುತ್ತದೆ. ಪೂಜೆಯೂ ಒಂದಾಗುವ ಪ್ರಕ್ರಿಯೆಯೇ. ಆ ಒಂದಾಗುವಿಕೆಯೇ ಭಾವ. ಈ ಭಾವ ವೈಯಕ್ತಿಕವಾದದ್ದು, ಮಾನಸಿಕವಾದದ್ದು. ಆದರೆ ತಾನು ಕಂಡುಕೊಂಡದ್ದೇ ಸಾರ್ವತ್ರಿಕ ಎಂದು ಹೇಳುವ ಪ್ರಯತ್ನದಲ್ಲಿ ಒಂದು ರೀತಿಯ ಮನೋವ್ಯಾಪಾರದ ಬಳಲಿಕೆ ಇದೆ, ಮನಃಶ್ಶಾಂತಿಯ ಹಂಬಲವಿದೆ.
ಧರ್ಮ ಯಾಕೆ ಸಾಮಾಜಿಕ ವ್ಯವಸ್ಥೆಯಲ್ಲ?
ಧರ್ಮ ಒಂದು ಸಾಮಾಜಿಕ ವ್ಯವಸ್ಥೆಯಂತೆ ಕಾಣುತ್ತದೆ. ನಾವು ಅದನ್ನು ಸಾಮೂಹಿಕವಾಗಿ ಆಚರಿಸುತ್ತೇವೆ ನಿಜ ಆದರೂ ಧರ್ಮ ವೈಯಕ್ತಿಕ. ಒಟ್ಟಿಗೇ ಕುಳಿತು ಉಂಡರೂ ಪ್ರತಿಯೊಬ್ಬನೂ ತನ್ನ ಹೊಟ್ಟೆಯನ್ನೇ ತುಂಬಿಸಿಕೊಂಡಂತೆ.
ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಎಷ್ಟು ಧರ್ಮಗಳನ್ನು ಬೇಕಾದರೂ ಸ್ವೀಕರಿಸಿ ಸಾಧನೆ ಮಾಡಬಹುದು. ಯಾವ ಧರ್ಮ ಯಾವ ಧರ್ಮ, ಯಾವ ಪಥ ತನ್ನನ್ನು ಸ್ಥಿರವಾಗಿ, ಸುಖವಾಗಿ ಇರಿಸುತ್ತದೆಯೋ ಅದನ್ನು ಸ್ವೀಕರಿಸುವ ಹಕ್ಕು ಮತ್ತು
ಸ್ವಾತಂತ್ರ್ಯ ಆತನಿಗಿದೆ. ಒಂದು ವೇಳೆ ದೇವರೇ ಸುಳ್ಳು, ದೇವರೆಂಬುದೇ ಇಲ್ಲ ಎನ್ನುವುದೇ ಒಬ್ಬ ವ್ಯಕ್ತಿಯನ್ನು ಸ್ವಸ್ಥನನ್ನಾಗಿ ಇರಿಸುತ್ತದೆ ಎಂದಾದರೆ ಆತ ಅದನ್ನೇ ವೈಯಕ್ತಿಕ ಪಥವನ್ನಾಗಿ ಸ್ವೀಕರಿಸಲು ಯಾವ ಅಡೆತಡೆಯಿದೆ? ಆದರೆ ಇನ್ನೊಬ್ಬರು ದೇವರಿದ್ದಾನೆ ಎನ್ನುವ ಪಥದಲ್ಲಿ ನಡೆಯುವುದು ಆತನನ್ನೇಕೆ ಅಸ್ವಸ್ಥನನ್ನಾಗಿಸಬೇಕು?
ಆದರೆ ಅಸ್ವಸ್ಥನನ್ನಾಗಿಸುತ್ತದೆ. ಶಿವನ ಮೇಲೆ ನಿರಂತರ ಧ್ಯಾನ ಮಾಡುವವನಿಗೆ ಕೃಷ್ಣನ ರೂಪು ಭಂಗವೇ. ಆತ ಅದನ್ನು ದೂರ ಮಾಡಲು ಪ್ರಯತ್ನಿಸುತ್ತಾನೆ. ಕೃಷ್ಣ ಭಕ್ತನಿಗೂ ಶಿವ ಸಮಸ್ಯೆಯೇ. ಎರಡೂ ಮನಸ್ಸಿನಲ್ಲಿವೆ – ಒಂದನ್ನು ತೆಗೆದುಹಾಕಬೇಕು. ಈ ಮಾನಸಿಕ ಸಮಸ್ಯೆ ಸಮಾಜದ ಕಡೆಗೆ ಸಹಜವಾಗಿ ಚಾಚುತ್ತದೆ. ಒಂದು ಧರ್ಮವನ್ನು ಪಾಲಿಸುವವನಿಗೆ ಇನ್ನೊಂದು ಧರ್ಮದ ದೇಗುಲ, ಪೂಜಾ ಪದ್ಧತಿ ಅನ್ಯವಾಗಿ ಕಾಣುವುದು, ಆತನ ಅನುಷ್ಠಾನಕ್ಕೆ ಅಡ್ಡಿಯಾಗುವುದು ಅವನದೇ ಮಾನಸಿಕ ಸಮಸ್ಯೆ. ಆದರೆ, ಅದನ್ನು ಮಾನಸಿಕವಾಗಿ ಮೀರುವುದು ಬೇರೆ, ಇನ್ನೊಂದು ಧರ್ಮವನ್ನೇ ಅಳಿಸಿಹಾಕುವ ಪ್ರಯತ್ನ ಮಾಡುವುದು ಬೇರೆ.
ಪ್ರತಿಯೊಬ್ಬರಿಗೂ ತಮ್ಮ ಇಷ್ಟ ಧರ್ಮ, ಇಷ್ಟ ದೈವ ಶ್ರೇಷ್ಟ ಅನ್ನುವುದರಿಂದಲೇ ಅವರ ಸಾಧನೆ ಶುರುವಾಗುತ್ತದೆ. ಆದರೆ ಇತರರ ಮೇಲೂ ಅದನ್ನು ಹೇರಲು ಪ್ರಾರಂಭವಾದಾಗ ಮಾತ್ರ ಸಮಸ್ಯೆ. ಧರ್ಮ ಸಾಮಾಜಿಕವಾದಾಗ ಅದೊಂದು ಸಾಮಾಜಿಕ ಸಮಸ್ಯೆಯಾಗುತ್ತದೆಯೇ ಹೊರತೂ ಪರಿಹಾರವಲ್ಲ.
ಪಟ್ಟಣಗಳಲ್ಲಿ ವಾಸಿಸುವ ನಾವು ಚೈನೀಸ್, ಕಾಂಟಿನೆಂಟಲ್, ಇಟಾಲಿಯನ್ ಅಂತೆಲ್ಲ ವಿದೇಶಿ ತಿನಿಸನ್ನು ವಾರಕ್ಕೋ, ತಿಂಗಳಿಗೊಮ್ಮೆಯೋ ತಿನ್ನುತ್ತೇವೆ. ಮನೆಗೆ ಬಂದರೆ ಮತ್ತದೇ ಅನ್ನ ಸಾಂಬಾರು. ಧರ್ಮವನ್ನೂ ಇದೇ ದೃಷ್ಟಿಯಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಇನ್ನೊಬ್ಬರ ಧರ್ಮದ ಫ್ಲೇವರ್ ಹೇಗಿದೆ ಎಂದು ನೋಡಿ ಬರುವ ಅವಕಾಶ ಇದೆ. ಆದರೆ ನಿಮ್ಮ ಊಟಕ್ಕಿಂತ ನಮ್ಮದೇ ಶ್ರೇಷ್ಟ ಎಂದು ಅವರ ಬಳಿ ಜಗಳ ಆಡುವುದು ಬುದ್ಧಿವಂತಿಕೆಯಲ್ಲ. ಜೊತೆಗೆ ಒಂದು ದಿನ ಬಿಳಿ ಅನ್ನಕ್ಕೆ ಚಿಲ್ಲಿಸಾಸ್ ಸುರಿದುಕೊಂಡು ಕಿವುಚಿ ತಿಂದರೆ ಏನು? ಮಣಿಸರ ಹಿಡಿದುಕೊಂಡು ಜಪ ಮಾಡುವುದು ಸಾಕೆನಿಸಿದಾಗ ಬುದ್ಧನಂತೆ ಕುಳಿತು ನೋಡುತ್ತೇನೆ ಎಂದು ಪ್ರಯತ್ನಿಸುವುದರಲ್ಲಿ ಏನು ಅಡ್ಡಿಯಿದೆ? ಧ್ಯಾನವನ್ನು ಅರ್ಥ ಮಾಡಿಕೊಳ್ಳಲು ಕಷ್ಟವೆನಿಸಿದಾಗ ಜೆನ್ ಅಥವಾ ಸೂಫಿ ದೃಷ್ಟಿಯಿಂದಲೂ ಪ್ರಯತ್ನಿಸಬಹುದು ಅಲ್ಲವೇ? ಬೇಡವೆಂದರೆ ಎಲ್ಲಾ ಧರ್ಮವನ್ನೂ ಬದಿಗಿಟ್ಟು, ಪಾಶ್ಚಾತ್ಯರಂತೆ ಮಾಡುವ ಕೆಲಸವನ್ನೇ ಇನ್ನಷ್ಟು ಶ್ರದ್ಧೆಯಿಂದ ಮಾಡಿದರಾಯಿತು.
ಹೀಗೆ ಎಲ್ಲ ಧರ್ಮಗಳೂ ಎಲ್ಲರಿಗೂ ಸಮಾನವಾಗಿ ಲಭ್ಯವಿರುವ, ಸಮಾನ ಗೌರವ ನೀಡುವ ವ್ಯವಸ್ಥೆಯಿದ್ದಾಗ, ಬಸವಣ್ಣ ಪೂರ್ವಾಶ್ರಮದಲ್ಲಿ ಶೂದ್ರನಾಗಿದ್ದ, ವಾಲ್ಮೀಕಿ ಬ್ರಾಹ್ಮಣನಾಗಿದ್ದ ಅನ್ನುವಂತಹ ‘ಐತಿಹಾಸಿಕ’ ಸಂಶೋಧನೆಗಳಿಗೆ ಅಂತಹ ಮೌಲ್ಯಗಳೇನೂ ಇರುವುದಿಲ್ಲ.
ಆದರೆ, ಯಾರಾದರೂ ತಮ್ಮ ಅನುಭವವನ್ನೇ ಸಾರ್ವಕಾಲಿಕ, ಸಾರ್ವಜನಿಕ ಎಂದು ಅಪ್ಪಣೆ ಹೊರಡಿಸುವಂತೆ ಮಾತನಾಡಿದಾಗ ಮಾತ್ರ ಸಮಸ್ಯೆ ಶುರುವಾಗುತ್ತದೆ.
ವಿವೇಕಾನಂದರು ಮತ್ತು ಮೂರ್ತಿ ಭಂಜನೆ
ಭಾರತದಲ್ಲಿ ಇತಿಹಾಸಕ್ಕಿಂತ ಪುರಾಣಗಳಿಗೇ ಹೆಚ್ಚು ಮಹತ್ವ. ಇಲ್ಲಿ ಪೌರಾಣಿಕ ವ್ಯಕ್ತಿಗಳು ಕೇವಲ ವ್ಯಕ್ತಿಗಳಲ್ಲ, ಅವು ಒಂದು ಆದರ್ಶಗಳು. ಕೃಷ್ಣ ಲಂಪಟನಾಗಿದ್ದ, ರಾಮ ಅನುಮಾನಿಸುವ ಗಂಡನಾಗಿದ್ದ ಅನ್ನುವಂತಹ ಸಂಗತಿಗಳು ವೈಚಾರಿಕರಿಗೇ ಹೊರತೂ ಭಕ್ತರಿಗಲ್ಲ. ಭಕ್ತರಿಗೆ ರಾಮ ಅನ್ನುವ ಪದವೇ ಕಾಮವನ್ನು (ದುರಾಸೆ ಅಂತ ಓದಿಕೊಳ್ಳೋಣ) ಕರಗಿಸುವ ಆಯುಧ. ಸುಮ್ಮನೇ ವಿಚಾರ, ಚರ್ಚೆ ಮಾಡುವವರಿಗೆ ಭಕ್ತರ ಅಂತರಂಗ ಅರ್ಥವಾಗುವುದಿಲ್ಲ. ಇದನ್ನು ಕಿಂಚಿತ್ ಸಾಧನೆ ಮಾಡಿ ಅನುಭವಿಸಿ ನೋಡುವ ಅಗತ್ಯವಿದೆ.
ಇಲ್ಲಿ ಪ್ರತಿ ರಸ್ತೆಯ ತುದಿಗೊಂದು ದೇವಸ್ಥಾನ, ಅಲ್ಲೊಂದು ಮೂರ್ತಿ ಇದ್ದೇ ಇರುತ್ತದೆ. ಈ ಪ್ರತಿ ಮೂರ್ತಿಗಳೂ ಒಂದೊಂದು ಆದರ್ಶವನ್ನು ಬಿಂಬಿಸುತ್ತಿರುತ್ತವೆ. ಬೌದ್ಧ ಧರ್ಮ ಆಚರಣೆಯಲ್ಲಿರುವ ದೇಶಗಳಲ್ಲಿಯೂ ಹೀಗೆ ಬುದ್ಧ ಮೂರ್ತಿಗಳು ಎಲ್ಲಿ ನೋಡಿದರೂ ಕಾಣಸಿಗುತ್ತವೆ. ಇದು ಗೌತಮ ಬುದ್ಧನ ಪೂಜೆಗಾಗಿ ಅಲ್ಲ, ಇದು ಪ್ರತಿಯೊಬ್ಬನಲ್ಲಿಯೂ ಇರುವ ಬುದ್ಧನನ್ನು ನೆನಪಿಗೆ ತರುವ, ಜಾಗೃತಗೊಳಿಸುವ ಪ್ರಯತ್ನ. ಇಂತಹ ಆದರ್ಶಗಳೇ ಮುಕ್ಕೋಟಿ ದೇವತೆಗಳಾಗಿ ನಮ್ಮಲ್ಲಿವೆ. ಪ್ರತಿಯೊಬ್ಬನಿಗೂ ಅವನದೇ ಆದರ್ಶ, ಅವನದೇ ಜೀವನದ ದಾರಿ – ಅವನದೇ ದೇವರು. ದೇವರಿಗೆ ನಾಮರೂಪ ಇಲ್ಲ ಅನ್ನುವವರೂ ಒಂದು ನಾಮದಿಂದಲೇ ಕರೆದು ಪ್ರಾರ್ಥಿಸುತ್ತಾರೆ, ಒಂದು ದಿಕ್ಕಿಗೆ ತಿರುಗಿಯೇ ಪ್ರಾರ್ಥಿಸುತ್ತಾರೆ. ಇದು ಮನುಷ್ಯನ ಮಿತಿ. ಆತನಿಗೆ ಒಂದು ರೂಪ ಬೇಕು, ಒಂದು ಆಶಯ ಬೇಕು, ಒಂದು ಆದರ್ಶ ಬೇಕು.
ಹಾಗೆಯೇ ಸದೃಢ ದೇಹಕ್ಕೆ, ಸಚ್ಚಾರಿತ್ರ್ಯಕ್ಕೆ ಆದರ್ಶವಾಗಿ ವಿವೇಕಾನಂದರು ಎಂದು ಆದರ್ಶವಾಗಿಟ್ಟುಕೊಂಡರೆ ಏನು ತಪ್ಪು? ವಿವೇಕಾನಂದರಿಗೆ ರೋಗವಿತ್ತು , ಎಂದು ಮೂರ್ತಿ ಭಂಜನೆ ಮಾಡುವುದರಿಂದ ಅಂತಹ ಪ್ರಯೋಜನವೇನಿದೆ? ಒಪ್ಪಿಕೊಳ್ಳೋಣ, ಅವರಿಗೆ ವಿವೇಕಾನಂದರನ್ನು ಬಿಟ್ಟುಬಿಡೋಣ. ಆದರೆ ಪರ್ಯಾಯವಾಗಿ ಯಾರಿದ್ದಾರೆ? ವಿವೇಕಾನಂದ ಅನ್ನುವ ವ್ಯಕ್ತಿ ಹೇಗಿದ್ದರು ಅನ್ನುವುದರ ಐತಿಹಾಸಿಕ ಸತ್ಯಕ್ಕಿಂತ ವಿವೇಕಾನಂದ ಅನ್ನುವ ಆದರ್ಶ ಹೆಚ್ಚು ಪ್ರಯೋಜನಕಾರಿ. ಮತ್ತು ಹೀಗೆ ಆದರ್ಶಗಳನ್ನಿಟ್ಟುಕೊಂಡಾಗ ಮನುಷ್ಯ ಬಹುಬೇಗ ತನ್ನ ಗುರಿಯನ್ನು ಮುಟ್ಟುತ್ತಾನೆ ತಲುಪುತ್ತಾನೆ ಅನ್ನುವುದು ಮನಃಶಾಸ್ತ್ರೀಯವಾಗಿ ಕಂಡುಕೊಂಡ ಸತ್ಯ. ಈ ಕುರಿತು ಬರೆದರೆ ಇನ್ನೊಂದು ಲೇಖನವಾಗುತ್ತದೆ.
ಸಾಮಾನ್ಯ ಮನುಷ್ಯ ಅಥವಾ ಭಕ್ತ ಒಬ್ಬ ಭಾವನಾಜೀವಿ. ಆತನಿಗೆ ಬುದ್ಧಿಜೀವಿಗಳಂತೆ ಚಿಂತನೆ ಮಾಡಲಾರ. ನೀನು ಪೂಜಿಸುವ ದೇವರು ನಿಜಕ್ಕೂ ದೇವರಲ್ಲ, ಆತನೊಬ್ಬ ಯತಿ ಅಷ್ಟೇ ಅಂದ ತಕ್ಷಣ ಆತನಿಗೆ ಕೋಪ ಬರುತ್ತದೆ. ಕೋಪಕ್ಕಿಂತ ಹೆಚ್ಚಾಗಿ ದುಃಖವಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಆತನಿಗೆ ತಾನು ವರ್ಷಗಳಿಂದ ಪೂಜಿಸುವ ದೇವರು ದೇವರೇ ಅಲ್ಲವೇ ಎಂಬ ಅನುಮಾನ ಮೂಡಿದರೆ ಅತನಲ್ಲಿ ಎಡಬಿಡಂಗಿತನ ಪ್ರಾರಂಭವಾಗುತ್ತದೆ. ಆತ ಚಿಂತಿಸಲಾರ, ಭಾವಿಸುತ್ತಾನೆ, ನಂಬುತ್ತಾನೆ. ಆತನ ಮನಸ್ಸಿನ ಮೂರ್ತಿಯನ್ನು ಭಂಜಿಸುವ ಕೆಲಸವನ್ನು ಬುದ್ಧಿವಂತರಾದವರು ಯಾಕಾದರೂ ಮಾಡುತ್ತಾರೆ?
ಯಾವ ವಿರಾಟ್ ಸ್ವರೂಪಿ ಪರಮಾತ್ಮ ಉಡುಪಿ ಕೃಷ್ಣನಲ್ಲಿ ಪೂರ್ಣನಾಗಿ ಸ್ಥಿತನಾಗಿದ್ದಾನೆಯೋ ಅದೇ ಪರಮಾತ್ಮ ರಾಘವೇಂದ್ರರಲ್ಲಿಯೂ, ನನ್ನ ನಿಮ್ಮಲ್ಲಿಯೂ ಅದೇ ಪೂರ್ಣರೂಪದಲ್ಲಿಯೇ ಇದ್ದಾನೆ. ಅಲ್ಲಿಯೂ ಇಲ್ಲಿಯೂ ಪೂರ್ಣನಾಗಿಯೇ ಉಳಿಯದಿದ್ದರೆ, ಪರಮಾತ್ಮ ಪೂರ್ಣನಾಗುತ್ತಾನೆ ಹೇಗೆ? ಇದು ಕಾಣುವವರಿಗಷ್ಟೇ ಸತ್ಯ.
ಹೊರಗಿನಿಂದ ನೋಡುವವರಿಗೆ ಸಾಯಿಬಾಬಾ, ರಾಘವೇಂದ್ರರು, ವಿವೇಕಾನಂದರು ಕೇವಲ ವ್ಯಕ್ತಿಗಳಾಗಿಯೇ ಕಾಣಬಹುದು, ಆದರೆ ಅವರನ್ನು ಪ್ರೀತಿಸುವವರಿಗೆ ಅವರ ಒಳಗಿನ ವಿರಾಟ್ ಸ್ವರೂಪ ಕಂಡಿರಬಹುದು. ಹೊರಗಿನಿಂದ ನೋಡುವವರು ದಿಕ್ಕರಿಸುವ ಮಾತನಾಡುವುದು ಸಮಾಜಕ್ಕೆ ಶ್ರೇಯಸ್ಕರವಲ್ಲ.
ಒಂದು ಜನ ಸಮುದಾಯ ಶ್ರದ್ಧೆಯಿಂದ ಆಚರಿಸುವುದರ ವಿರುದ್ಧ ಏಕಾಏಕಿ ಮಾತನಾಡುವುದು ಒಂದು ಶುದ್ಧ ಹುನ್ನಾರವೇ ಎಂದು ನೋಡಿದರೆ, ಹಾಗೂ ಇರುವುದಿಲ್ಲ. ಈ ಬುದ್ಧಿವಂತರೂ ತಮ್ಮದೇ ಆದ ವೈಚಾರಿಕತೆಯಿಂದ, ತಮ್ಮದೇ ನಂಬಿಕೆಗಳಿಂದ ಬಂಧಿತರಾಗಿರುತ್ತಾರೆ. ಮತ್ತು ತಮ್ಮದೇ ಆದ ಧರ್ಮಗ್ರಂಥಗಳ ಭಾರದಲ್ಲಿ ಬಳಲಿಯೇ ಮಾತನಾಡುತ್ತಿರುತ್ತಾರೆ.
ಅಂತಃಕರಣವೇ ಧರ್ಮಗ್ರಂಥವಾದಾಗ..
ಧರ್ಮ ಒಂದು ವೈಯಕ್ತಿಕ ಸಾಧನೆ. ಒಂದು ನಿರ್ದಿಷ್ಟ ದೇವರ ಮೇಲೆಏಕಾಗ್ರತೆ ಸಾಧಿಸಲು ಪ್ರಯತ್ನಿಸುವ ಸಾಧಕ ಇತರೆ ದೇವತೆಗಳು ತನ್ನ ಮನಸ್ಸಿಗೆ ಬರದಂತೆ ತಡೆಯಲು , ಅದನ್ನು ತಿರಸ್ಕರಿಸಲು ಪ್ರಯತ್ನ ಮಾಡುತ್ತಿರುತ್ತಾನೆ. ಈ ಪ್ರಯತ್ನವೇ ಆತನ ಸಾಮಾಜಿಕ ಜೀವನಕ್ಕೂ ವಿಸ್ತರಿಸುತ್ತದೆ. ಆತ ತನಗೆ ಕಾಣುವ ಅನ್ಯ ದೇವರನ್ನೂ ಹೀಗೇ ತಿರಸ್ಕರಿಸಲು ಮುಂದಾಗುತ್ತಾನೆ. ಈ ಕಾರಣಕ್ಕಾಗಿಯೇ ಇಷ್ಟೊಂದು ಮತಾಂತರ ಪ್ರಯತ್ನಗಳು ಮತ್ತು ಧರ್ಮದ ಹೆಸರಿನಲ್ಲಿ ಯುದ್ಧಗಳು. ಮನಸ್ಸಿನಲ್ಲಿ ಒಂದರ ಮೇಲೆ ಏಕಾಗ್ರತೆ ಸಾಧಿಸುವ ಪ್ರಯತ್ನದ ವಿಸ್ತಾರವೇ ಜಗತ್ತಿನಲ್ಲಿ ಒಂದು ಧರ್ಮ, ಅದೂ ತಾನು ನಂಬಿ ಪಾಲಿಸುವ ಧರ್ಮವೇ ಆಗಿರಬೇಕು ಎಂದೂ ಆತ ಬಯಸುತ್ತಾನೆ. ಹಾಗೆ ಒಂದೇ ಧರ್ಮ ಇಡೀ ಜಗತ್ತಿನಲ್ಲಿ ಆಚರಣೆಗೆ ಬಂದರಾದರೂ ಈ ಎಲ್ಲ ಧಾರ್ಮಿಕ ಧ್ವಂದ್ವಗಳು, ಯುದ್ಧಗಳು ನಿಲ್ಲುತ್ತವೆಯೇ ಎಂದರೆ ಅದೂ ಸಾಧ್ಯವಿಲ್ಲ.
ಪ್ರತೀ ಧರ್ಮದಲ್ಲಿಯೂ ಕವಲುಗಳಿವೆ – ಆ ಕವಲೆದ್ದ ಧರ್ಮಗಳೇ ಪರಸ್ಪರ ಯುದ್ಧದಲ್ಲಿ ತೊಡಗಿವೆ. ಇದಕ್ಕೆ ಕಾರಣವನ್ನೇ ನೋಡಿದರೆ, ಪ್ರತಿಯೊಂದು ಧರ್ಮವೂ ತಾನು ಪಾಲಿಸುವ ಧರ್ಮಗ್ರಂಥವನ್ನು ಆಚರಣೆಗೆ ತರುವ ಪ್ರಯತ್ನ. ಈ ಧರ್ಮ ಗ್ರಂಥಗಳು ರಚನೆಯಾಗಿ ಶತಮಾನಗಳೇ ಕಳೆದಿರುವುದರಿಂದ ಪ್ರಸ್ತುತ ಜೀವನಾ ಸಮಸ್ಯೆಗಳಿಗೆ ಎಷ್ಟು ನಿಷ್ಟವಾಗಿ ಪರಿಹಾರ ನೀಡುತ್ತವೆ ಎಂಬುದು ಗೊತ್ತಿಲ್ಲವಾದರೂ ಅವುಗಳನ್ನು ಅವು ದೇವರದೇ ನಿರ್ದೇಶನಗಳು ಎಂದು ಅವಲಂಬಿಸುತ್ತೇವೆ. ಅವುಗಳಲ್ಲಿ ಶುದ್ಧ ಉತ್ತರವಿದ್ದರೂ, ಅವುಗಳನ್ನು ಕಂಡುಕೊಳ್ಳುವುದೂ ನಮ್ಮದೇ ಬೌದ್ಧಿಕ ಮಿತಿಯಲ್ಲಿ.
ಆದರೆ ಈಗಿನ ಸಮಸ್ಯೆಗಳಿಗೆ ಈ ಕ್ಷಣದಲ್ಲಿಯೇ ಪರಿಹಾರ, ಮತ್ತು ಶುದ್ಧ ಪರಿಹಾರ ಅಂತ ಏನಾದರೂ ಇದ್ದರೆ, ಅದು ನಮ್ಮ ಅಂತಃಕರಣದಿಂದಲೇ ಬರಬೇಕು. ಅಂತಃಕರಣ, ಸದಾ ಲಭ್ಯವಿರುವ ಪರಮಾತ್ಮ. ಅದು ಯಾವುದೇ ಧರ್ಮಗ್ರಂಥದಲ್ಲಿ ಒಣಗಿದ ಪರಮಾತ್ಮನಲ್ಲ. ಈ ಅಂತಃಕರಣವೆಂಬ ಪರಮಾತ್ಮನಿಗೆ ಕಿವಿಗೊಟ್ಟಾಗ ಮಾತ್ರ ಆ ಕ್ಷಣದ ಸಮಸ್ಯೆಗಳಿಗೆ ಪರಿಹಾರ ಒದಗುತ್ತದೆ. ಒಂದು ಕೆನ್ನೆಗೆ ಹೊಡೆದನೆಂದು ಇನ್ನೊಂದು ಕೆನ್ನೆ ನೀಡುವುದು ಸಾರ್ವಕಾಲಿಕ ಉತ್ತರವಾಗಲಾರದು. ಕೆಲವೊಮ್ಮೆ ತಿರುಗಿ ಹೊಡೆಯುವುದೂ ಸರಿಯಾದ ಉತ್ತರವೇ ಆಗಬಹುದು. ಆದರೆ ಯಾವ ಕಾಲಕ್ಕೆ ಯಾವುದು ಸರಿ ಅನ್ನುವುದನ್ನು ಅಂತಃಕರಣ ಮಾತ್ರ ನೀಡಬಲ್ಲದು.
Wow, incredible blog format! How lengthy have you ever been running a blog for?
you make blogging glance easy. The whole look of your site is fantastic, as smartly as the content!
You can see similar here sklep online
Wow, incredible blog format! How long have you
been blogging for? you make running a blog glance easy.
The full glance of your web site is magnificent,
as neatly as the content material! You can see
similar here dobry sklep
valtrex 500 mg cost
canadian happy family pharmacy
propecia online prescription
combivent 250 mg
where can i buy diflucan without a prescription