ಕೆತ್ತಿಕಲ್ಲುಗಳ ಕಲೆಯಾಗಿಸಿದವ, ಬಲೆಬೀಸಿದವ
ಎದೆಯೊಳಗೆ ತುಂಬಿ ಚಿತ್ತಾರವ ಮರೆಯಾಗಿರುವ
ಜೀವತಂತುಗಳ ಮಿಡಿವ, ಜೀವಂತ ತಾವೆಂದು ನುಡಿವ
ಶಿಲೆಗಳಲ್ಲಿ ಬದುಕಾಗಿವೆ ನೋಡು, ಹೊಸ ಬೆಳಕಾಗಿವೆ.
ಯಾವ ವೈಭವದ ಸಿರಿಯೊ, ನೆನಪಿನುಡುಗೊರೆಯೊ
ಹೃದಯ ಮಂದಿರವನು ಬೆಳಗಿ, ಕಂಬನಿಯ ತರಿಸಿದೆ.
ಜಡದಲ್ಲಿ ಚೇತನವು ಅಡಗಿ, ಹೊಸಭಾವ ಬೆಡಗಿ
ಕಂಗಳಲಿ ತಾ ತುಂಬಿದೆ, ಪ್ರೀತಿಸುವವರನೆ ನಂಬಿದೆ.
ಯಾವ ಬಯಕೆಯ ಪರಿಯೊ, ಹಿರಿಮೆ ಚಿನ್ನದ ಗರಿಯೊ
ನಾಡಬೆಳಗುವ ನುಡಿಯೊ, ಭಕ್ತಿಭಾವದ ಕುಡಿಯೊ
ಮುಡಿದ ಮಲ್ಲಿಗೆ ಮಾಲೆ, ಕಂಪುಸೂಸುವ ಲೀಲೆ
ಅಲೆಅಲೆಯು ಎಲ್ಲೆಡೆಯೂ, ಅಂದವೀ ಕಲ್ಲುಗುಡಿಯು.
ಮೌನವಹಿಸಿ ಶಿಲೆಯಾಗುವೆಯೆ, ಮತ್ತೆ ಮರೆಯಾಗುವೆಯೊ
ಹೊಸತನದ ಹಾಡಾಗು ಮನವೆ ಚಿಂತನೆಯ ಬೀಡಾಗು,
ನಗುತ ಹೊಸಕಲೆಯ ಸಲಹು, ಅದುವೆ ಜೀವನ ಸೆಲೆಯು
ಹಸಿರಾಗು, ಹೆಸರಾಗು ಕಡೆಗೊಮ್ಮೆ ಜಗದ ಉಸಿರಾಗು. (ವರ್ಷ – 1999)