ಅರಿಯದೊಲವು ಚಿತ್ತವ ಬಳಸಿ
ಬತ್ತಿದೆದೆಯಲಿ ಭಾವುಕತೆ ಬೆಳೆಸಿ
ಕಣ್ಣಪರದೆ ಮೀರಿ ಬರುವ ಹನಿಗಳು
ಮೌನ ಲೋಕವ ತಾನಾಗಿ ಆಕ್ರಮಿಸಿ
ಹೊಸ ಜಗವ ಕಿವಿಗಳಲಿ ತುಂಬಿಸಿ
ಚಿಲಿಪಿಲಿಯ ನಾದ ಮಾಡುವ ಹಕ್ಕಿಗಳು
ಹೊಸ ಜನುಮ ಪಡೆದ ಸಂತಸದಿ
ತನುಮನದಿ ಕಂಪನು ತಾ ಹೊಂದಿ
ಭಾವಜೀವಿಯ ಸೆಳೆದುಕೊಳ್ವ ಹೂವುಗಳು
ಸೋನೆ ಸುರಿದು ಜಗದಿ ಹರಡಿ
ತನುಮನದಿ ಕಂಪನು ತಾ ಹೊಂದಿ
ಭಾವಜೀವಿಯ ಸೆಳೆದುಕೊಳ್ವ ಹೂವುಗಳು
ಹೊಳೆ ಹೊಳೆವ ಕಿರಣ ಜೋಡಿಸಿ
ಹೊಸ ಬೆಳಕ ಜಗಕೆ ತೋರಿಸಿ
ನೋಡನೋಡಲು ತೊಳೆದು ಕೊಳೆಯ ರವಿ
ಮನವರಿತು ಮೆಲ್ಲನೆ ನೋಡಿದೆ
ಹೊರಗಡೆಗೆ ಹೊಸದೇನೋ ಕಾದಿದೆ
ಓಂಕಾರನಾದವು ತಂಗಾಳಿ ಸೇರಿ ಬರುತಿದೆ
ನಸುಕಿನಲಿ ಎನ್ನನು ತೊರೆದು
ಕಂಗಳಲಿ ಬೆಳಕ ಸುರಿದು
ನಿದ್ರಾದೇವಿಯು ತಾನು ದೂರಸಾಗುವಳು
ಹಸಿನೆಲದಿ ಹರಡಿ ತಾನಿಂದು
ಹಸಿರಾಗಿ ನಗುತಲೇ ನಿಂದು
ಮನಸೆಳೆದ ಲತೆಮಲ್ಲಿ ಅಲ್ಲಿ ಕಂಡಳು
ಶರಧಿಯ ಹವಳ ಕಂಡಂತೆ
ಮಂಜುಹನಿ ಹೊಳೆದು ಬಂದಂತೆ
ಮಲಗಿಹಳು ಮಲ್ಲಿಗೆ ಅರಳಿ ನಗದೆ
ತಂಪುಗಾಳಿಗೆ ತನುವು ಮುದದಿ
ಮಂಜುಹನಿಗೆ ಮನವು ಅರಳಿ
ಅರೆಗಳಿಗೆ ದೂರ ಲೋಕಕೆ ಎಳೆದಿದೆ
ನಲಿದಾಡಿದೆ ತಿಳಿಯೆ ಎನಿತು
ಮಿಡಿಯುತಿದೆ ಕಂಬನಿ ಮೊಳೆತು
ಅರಿಯದಾದೆ ಏನು ಏನಿದು ಎಂಬುದನು
ತನುಮರೆತು ಭಾವವು ಬೆರೆತು
ಮುದುಡುತಿದೆ ಕಣ್ಣವೆ ನಡುಗಿ
ಸೆಳೆಯುತಿದೆ ಶಶಿ ತಾರೆಗಳ ಲೋಕಕೆ
ಏನಾಗುತಿದೆ ಎನಗೆ ಹರಿಯೇ
ಹೊಸತೇನಿದು ಮನದಿ ಅರಿಯೆ
ಬೆಳೆಯುತಿದೆ ನವ ಭಾವನೆ ಹರಡಿ
ನಡುಗುತಿದೆ ದೇಹವು ಕಡೆಗೆ
ಹುಡುಕುತಿಹೆ ಆಗಸದ ಎಡೆಗೆ
ಆವಾಹಿತನು ಮಧು-ಮಧುರ ನಾನಾದೆ
ತುಡಿಯುತಿದೆ ಭಾವ ಆ ಎಡೆಗೆ
ಬಡಿಯುತಿದೆ ಹೃದಯ ಕರೆಗೆ
ಓಗೊಡುವಾಸೆ ಆಗಿ ನೋಡಿದೆ ರವಿಯ
ಮೂಡಣದಲಿ ಏರಿ ಬರುವ
ಹೊಸದಿನವ ಆತ ತರುವ
ಕೆಂಪುಓಕುಳಿ ಚೆಲ್ಲಿ ನೋಡಿದ ಭುವಿಯನು
ಹೊಸಜೀವನ ಇದೇ ಏನೋ?
ಕಣ್ಣತೆರೆದು ನೋಡೊ ಪರಿಯು
ಇದೇ ಏನೊ ಸ್ಪೂರ್ತಿ ದಿನದ ಆನಂದಕೆ
ತಂಪು ನೀರು ಮೊಗ ತೊಳೆದು
ಹನಿಹನಿಯೇ ಇಳಿದು ಹೋದವು
ಕಾಯುತಿಹೆನು ಮಲ್ಲಿ ಏಳುವ ಸಮಯಕೆ
ಮಾಮರದಲಿ ಕೂಗೊ ಕೋಗಿಲೆ
ತಿಳಿನೀರಿನ ನಡುವೆ ನೈದಿಲೆ
ಬಂದಿಹನು ಋತುರಾಜ ವಸಂತ ನಗುತ
ಕರೆಯುತಿವೆ ಎನ್ನ ಹೇಳಲೆಂದೊ
ಚಿಗುರುಗಳು ತಾವು ದನಿಗೂಡಿಸಿ
ಸವಿನೆನಪು ಅದು ಯಾವ ಜನುಮದೊ
ಹಸಿರೊಳಗೆ ಅಡಗಿ ಇರುವ
ಶುಕಗಳೆರಡು ನೋಡಿ ಎನ್ನನು
ಇಂಚರದಲಿ ಮೋಡಿ ಮಾಡುತ ಸೆಳೆದಿವೆ
ನೀಲಾಕಾಶವೇ ಏನೆಂದು ಹೇಳಲಿ
ಸಾಟಿಯಿರರು ಯಾರು ನಿನಗೆ
ಎಂದಹಂಕಾರ ಪಟ್ಟು ನಗುವೆಯಾ ಕೇಳಿಲ್ಲಿ
ಎದೆ ತುಂಬಿದ ಎನ್ನ ಭಾವಕೆ
ಒಲುಮೆಯುತ ಪುಷ್ಪ ಮನಕೆ
ನೀನುಪಮೆಯೇ ಎನ್ನ ಮಧುರ ಹೃದಯಕೆ
ನಿನ್ನೊಡನೆ ಏಕೆ ಮಾತೀಗ?
ಮೌನವಾಗು, ಕೂಗಿ ಕರೆದು,
ಜಗವನೇಳಿಸಿ ಮೌನ-ಶಾಂತಿಯ ಕದಡದೆ
ಭಾರತಾವನಿ ನಾನೇ ಸಿಕ್ಕೆನೇ?
ಕಾಣಲಾರರೇ ಬೇರಾರು ನಿನಗೆ
ಒಲುಮೆಯೆಲ್ಲ ನನ್ನೀ ಹೃದಯದಿ ತುಂಬಿದೆ
ತೆಂಗು ತೂಗಿ ಬೀಸಿ ತಂಗಾಳಿ
ಭಾವುಕತೆಯನು ತಂದು ಮಂದಾರ
ಸುಮಲತೆಯನು ತುಂಬಿ ಕಂಪನು ಬೀರುತಿದೆ
ಕಣ್ಣನರಳಿಸಿ ನೋಡೆ ಮಲ್ಲಿಗೆ
ಹಣ್ಣುಕಾಯಿಯ ತಂದೆ ಪೂಜೆಗೆ
ದೇವ ಆಲಯವು ನಿನ್ನ ಪೂಜೆಗೆ ಈ ಹೃದಯ
ಬೇಡದವನು ಎಂದೂ ಯಾರಲು
ಬೇಡುತಿಹೆನು ನಿನ್ನ ಸ್ನೇಹ
ಬಯಲಾಗದದು ದುಃಖ ಬಿಕ್ಕುತ ಕುಳಿತಿಹೆ
ನಾಕುದಿರುವ ಹೊಸ ಸಮಯ
ಅರಳಿರುವಳು ಮೆಲ್ಲ-ಮೆಲ್ಲಗೆ
ಮಧುರತೆಯನು ಹೊಂದಿ ನಗುವ ಮಲ್ಲಿಗೆ
(ನವೆಂಬರ್ 1997)