ಬರಹಗಾರರು ಮಾಡಬಾರದ ತಪ್ಪುಗಳು: ಟಿಪ್ಪಣಿ – 1

ಓದುವುದು, ಮಾತನಾಡುತ್ತ ಭಾಷೆ ಕಲಿಯುವುದು ಬೇರೆ. ಬರವಣಿಗೆಯನ್ನು ಮಾತ್ರ ಬರೆದೇ ಕಲಿಯಬೇಕು. ಪ್ರಬಂಧಗಳೊಂದಿಗೆ ಪ್ರಾರಂಭಿಸಿ, ಕವಿತೆ, ಸಣ್ಣಕತೆಗಳನ್ನು ಪ್ರಯತ್ನಿಸುವ ನಾವೆಲ್ಲ ಅನೇಕ ಲೇಖಕರಿಂದ ಸ್ಪೂರ್ತಿಗೊಂಡು ಹೊಸ ಹೊಸ ಪ್ರಕಾರಗಳಲ್ಲಿ ಕೈಯಾಡಿಸುತ್ತ ಕಲಿಯತೊಡಗುತ್ತೇವೆ. ಕಥೆಗಾರರು, ಕಾದಂಬರಿಕಾರರಾಗುವ ಕನಸಿರುವ ನಾವು ನಮಗೆ ಅರಿವಿಲ್ಲದೆಯೇ ಅನೇಕ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಬರವಣಿಗೆಯ ತಪ್ಪುಗಳು, ಅಥವಾ ನಮ್ಮ ಗ್ರಹಿಕೆಗಳಲ್ಲಿ ಇರುವ ಮೂಢ ನಂಬಿಕೆಗಳು.

ಪುಸ್ತಕವೊಂದನ್ನು ಬರೆಯುತ್ತ, ಒಂದು ಕಾದಂಬರಿಯ ರಚನೆ, ವಿನ್ಯಾಸಗಳ ಕುರಿತು ಅಧ್ಯಯನ ಮಾಡೋಣ ಎಂದುಕೊಂಡು ಹುಡುಕಿದಾಗ ಇದೊಂದು ಪುಸ್ತಕ ಸಿಕ್ಕಿತು. The 38 Most Common Fiction Writing Mistakes ಎಂಬ ಈ ಪುಸ್ತಕದ ಲೇಖಕ Jack M. Bickham ಸುಮಾರು 75 ಕಾದಂಬರಿಗಳನ್ನು ಬರೆದಿರುವ ಅಮೇರಿಕಾದ ಲೇಖಕ. ಬರವಣಿಗೆಯ ಪ್ರಪಂಚಕ್ಕೆ ಕಾಲಿಡುತ್ತಿರುವ ಬರಹಗಾರರು ಒಮ್ಮೆ ಈ ಪುಸ್ತಕವನ್ನು ಓದಬೇಕು. ಆತ ಯಾವುದೇ ಲೇಖಕ ಮಾಡಬಹುದಾದ ಈ 38 ತಪ್ಪುಗಳನ್ನು ತೋರಿಸುವ, ಮತ್ತು ತಿದ್ದಿಕೊಳ್ಳುವ ಸಾಧ್ಯತೆಗಳನ್ನು ವಿವರಿಸುವ ಮೂಲಕ ಲೇಖಕನಿಗೆ ಒಂದು ಮಾನಸಿಕ ತಳಹದಿಯನ್ನು ನಿರ್ಮಿಸಿಕೊಡುತ್ತಾನೆ. ಈ ಪುಸ್ತಕದಿಂದ ನನಗಾಗಿ ಮಾಡಿಕೊಂಡ, ನನಗೇ ಹೇಳಿಕೊಂಡ ಟಿಪ್ಪಣಿಗಳನ್ನು ನಿಮಗೆ ನೀಡುತ್ತಿದ್ದೇನೆ. ನಿಮಗೇನನ್ನಿಸುತ್ತದೆ ಹೇಳಿ.

ಸಬೂಬು ಹೇಳಬೇಡಿ:
“Writers write; everyone else makes excuses” ಎನ್ನುತ್ತಾನೆ ಜಾಕ್ ಬಿಖಾಮ್. ಬರೆಯಲಾಗದ ನಾವು ಏನೆಲ್ಲ ಕಾರಣ ಹೇಳಿಕೊಳ್ಳುತ್ತೇವೆ, ‘ಇಡೀ

ದಿನ ಕೆಲಸ ಮಾಡಿ ಸುಸ್ತಾಗಿದೆ, ಇವತ್ತು ಬೇಡ, “ನಾಳೆ” ಬೆಳಿಗ್ಗೆ ಎದ್ದು ಎರಡು ತಾಸು ಬರೆದರೆ ಆಯಿತಲ್ಲ’,”ಬರೆಯುವುದಕ್ಕೆ ಸ್ಪೂರ್ತಿ ಬೇಕಲ್ಲ, ಅದಕ್ಕಾಗಿ ಕಾಯುತ್ತಿದ್ದೇನೆ’, ಇವತ್ತು ಪೆನ್ನು ಕಾಗದಗಳನ್ನು ಹೊಂದಿಸಿಕೊಂಡು, ಮೇಜು ಸ್ವಚ್ಛಗೊಳಿಸಿಕೊಂಡಿದ್ದೇನೆ, ಇನ್ನೇನು ನಾಳೆಯಿಂದ ಪ್ರಾರಂಭವೇ’ ಎಂಬಂತಹ ಸಣ್ಣ ಸಣ್ಣ ಕಾರಣಗಳನ್ನು ನಮಗೆ ನಾವು ಕೊಟ್ಟುಕೊಳ್ಳುತ್ತಲೇ ಇರುತ್ತೇವೆ.23

ಇವುಗಳಲ್ಲದೇ ಇನ್ನೂ ದೊಡ್ಡ ಕಾರಣಗಳಿವೆ, “ಕುವೆಂಪು, ಅನಂತಮೂರ್ತಿ ಮೂವತ್ತೆರೆಡು ವರ್ಷವಿದ್ದಾಗ ಕಾದಂಬರಿ ಬರೆದಿದ್ದರು, ನನಗಿನ್ನೂ ಇಪ್ಪತ್ತೆಂಟೇ ವರ್ಷ; ಹಾಗಾಗಿ ಕಾಯಬಹುದು (ಅಥವಾ ನನಗೆ ನಲವತ್ತಾಗಿಬಿಟ್ಟಿದೆ, ಇನ್ನೆಲ್ಲಿ ಕಾದಂಬರಿ)”, “ನನ್ನ ಕಲ್ಪನೆಯ ಕಾದಂಬರಿ ಒಡೆದು ಬರಲು ಇನ್ನೂ ಸಾಕಷ್ಟು ಕಾವು ಪಡೆಯಬೇಕಿದೆ” ಎಂಬಂತಹ ಕಾರಣಗಳು. ಇವುಗಳ ಹೊರತಾಗಿ ಇತರ ಲೇಖಕರನ್ನೋ, ಪ್ರಕಾಶನಗಳನ್ನೋ, ಅಥವಾ ಇನ್ಯಾರನ್ನೋ ದೂಷಿಸುವ ಮೂಲಕ ನಮ್ಮ ಬರೆಯದಿರುವಿಕೆಗೆ ಕೊಟ್ಟುಕೊಳ್ಳುವ ಕಾರಣಗಳು. ಏನೇ ಹೇಳಿದರೂ, ಅದು ಕಾರಣವೇ ಹೊರತೂ ಫಲಿತಾಂಶ ಶೂನ್ಯ ಎಂಬುದು ಮಾತ್ರ ಅಂತಿಮ ಸತ್ಯ. ಬರೆದು ಸಫಲರಾದ ಲೇಖಕರಿಗೆ ನಮಗಿಂತ ಹೆಚ್ಚಿನ ಸಮಯ ಅಥವಾ ಸೌಲಭ್ಯ ಇತ್ತೇ? ಬರವಣಿಗೆ ಅವರಿಗೆ ದೈವದತ್ತವಾಗಿ ಬಂದದ್ದು ಎಂಬುದಾಗಲೀ ಅವರಿಗೆ ಬರವಣಿಗೆಯೇ ವ್ಯಾಮೋಹವಾಗಿತ್ತು, ನನ್ನಲ್ಲಿ ಅಂತಹ ವ್ಯಾಮೋಹ ಇಲ್ಲ ಎಂಬುದಾಗಲೀ ಮತ್ತದೇ ಕಾರಣಗಳು. ನಿಜವೆಂದರೆ, ಯಾರಿಗೇ ಆಗಲೀ, ಬರವಣಿಗೆಯೆಂಬುದು ನಿಜಕ್ಕೂ ಕಷ್ಟದ ಕಾರ್ಯವೇ!

ದಿನದಿನವೂ ಬರೆಯುವುದು, ಅದನ್ನು ತಿದ್ದುವುದು, ವಾರಗಟ್ಟಲೇ ಬರೆಯುತ್ತಲೇ ಇರುವುದು ಯಾರಿಗೆ ಬೇಕು. ನಿನ್ನೆ ಬರೆದಿದ್ದೇನಲ್ಲ, ಇವತ್ತೊಂದಿನ ಸ್ವಲ್ಪ ಟಿವಿ ನೋಡಿಬಿಡುತ್ತೇನೆ, ಇವತ್ತೊಂದು ದಿನ ಒಂದು ಸಿನೆಮಾ ನೋಡಿಬಿಟ್ಟರೆ ಏನಾಗಿಬಿಡುತ್ತದೆ ಮಹಾ? ಆದರೆ ವೃತ್ತಿಪರ ಬರಹಗಾರ ಇಂತಹ ಸಬೂಬುಗಳಿಗೆ ಸೊಪ್ಪುಹಾಕುವುದಿಲ್ಲ. ಮೇಲೆ ಹೇಳಿದ ಯಾವುದೇ ಕಾರಣಗಳೂ ಆ ದಿನದ ಬರವಣಿಗೆಗೆ ಅಡ್ಡಗಾಲು ಹಾಕುವುದಿಲ್ಲ, ಹಾಕಬಾರದು ಎಂದು ಜಾಕ್ ಹೇಳುತ್ತಾನೆ.

“ಸುಮ್ಮನೇ ಬರೆದು ನೋಡಿ, ದಿನಕ್ಕೆ ಒಂದು ಪುಟ ಬರೆದರೂ ಸಾಕು, ವರ್ಷಕ್ಕೆ 365 ಪುಟಗಳ ಒಂದು ಕಾದಂಬರಿ ಸಿದ್ಧವಾಗಿಬಿಡುತ್ತದೆ. ಇನ್ನೊಂದು ವರ್ಷ ಕುಳಿತು ತಿದ್ದಿ, ಪ್ರಕಾಶಕರನ್ನು ಹುಡುಕಿ ಪ್ರಕಟಣೆಗೆ ಸಿದ್ಧಗೊಳಿಸಿ. ವೃತ್ತಿಪರ ಬರಹಗಾರನೂ ಒಂದು ಪುಸ್ತಕ ಮುಗಿಸಲು ಇಷ್ಟೇ ಸಮಯ ತೆಗೆದುಕೊಳ್ಳುತ್ತಾನೆ. ಅದೇ ಕಾರಣಗಳನ್ನು ಹೇಳುವುದೇ ನಿಮ್ಮ ಕೆಲಸವಾದರೆ, ಎರಡು ವರ್ಷವಿದ್ದದ್ದು ನಾಲ್ಕುವರ್ಷ ಹಿಡಿಯುತ್ತದೆ, ಅಥವಾ ಇನ್ನೂ ಹೆಚ್ಚು.”

ಹಗಲು-ರಾತ್ರಿ, ನಿರಂತರವಾಗಿ ಅವುಡುಗಚ್ಚಿ ಬರೆಯುವುದೇ ವೃತ್ತಿಪರ ಬರಹಗಾರನ ಮಾರ್ಗ.

ಕಾರಣಗಳನ್ನು ಬದಿಗೊತ್ತಿ ಬರವಣಿಗೆಯನ್ನು ಕೈಗೊಳ್ಳಲು ಒಂದು ಉಪಾಯವನ್ನು ಈ ಲೇಖಕ ನೀಡುತ್ತಾನೆ:

ಒಂದು (ಅಗ್ಗದ್ದಾದರೂ ಸರಿ) ಕ್ಯಾಲೆಂಡರ್ ಇಟ್ಟುಕೊಳ್ಳಿ. ಅದರಲ್ಲಿ ಪ್ರತಿ ರಾತ್ರಿ ಮಲಗುವ ಮೊದಲು 1. ಆ ದಿನ ಎಷ್ಟು ತಾಸು ಬರೆದಿರಿ, 2. ಎಷ್ಟು ಪುಟಗಳನ್ನು

ಬರೆದಿರಿ ಎಂಬುದನ್ನು ನಮೂದಿಸುತ್ತ ಹೋಗಿ. ಯಾವುದಾದರೂ ಒಂದು ದಿನ ಏನೂ ಬರೆಯದಿದ್ದರೆ, ಆ ರಾತ್ರಿ ಕುಳಿತು, ಯಾಕೆ ಬರೆಯಲಾಗಲಿಲ್ಲ ಎಂಬುದಕ್ಕೆ 250 ಶಬ್ದಗಳ ಕಾರಣಗಳನ್ನು ಬರೆಯಿರಿ. ಇದನ್ನು ಕಡ್ಡಾಯವಾಗಿ ಮಾಡಬೇಕು.

ಇದನ್ನು ತಪ್ಪದೇ ಮಾಡಿದರೆ, ಕಾಲಕ್ರಮೇಣ ಕಾರಣಗಳನ್ನು ಕೊಡುವುದಕ್ಕಿಂತ ನಿಮ್ಮ ಪುಸ್ತಕವನ್ನು ಬರೆಯುವುದೇ ಹೆಚ್ಚು ಸುಲಭವಾಗಿ ತೋರುತ್ತದೆ.

ಇನ್ನು, ಸ್ಪೂರ್ತಿಯ ಕುರಿತು ನನ್ನ ಅನುಭವವನ್ನು ಹೇಳುತ್ತೇನೆ, ನಿಮಗೆ ಏನನ್ನಿಸುತ್ತದೆ ಹೇಳಿ: ಸ್ಪೂರ್ತಿ ಅಚಾನಕ್ಕಾಗಿ, ನಾವು ಬರೆಯುವುದಕ್ಕೆ ಸಿದ್ಧರೇ ಆಗಿರದಿದ್ದಾಗ ಬಂದುಹೋಗುವುದು ನಿಜ. ಆದರೆ ನಾವು ನಿಜಕ್ಕೂ ಬರೆಯಲು ಕುಳಿತಾಗ ಮಾತ್ರ ಅದು ನಮ್ಮೊಡನೆ ತಾನೂ ಕುಳಿತುಕೊಳ್ಳುತ್ತದೆ. ನಾವು ಮೊದಲ ಹೆಜ್ಜೆಯಿಟ್ಟರೆ ಸಾಕು, ಅದು ಮುಂದೆ ನಡೆಸಿಕೊಂಡು ಹೋಗುತ್ತದೆ. ನಿಮಗೆ ಪದ್ಮಪಾದನ ಕಥೆ ನೆನಪಿದೆಯಲ್ಲ.

ಬರಹಗಾರರು ಮಾಡಬಾರದ ತಪ್ಪುಗಳು ಮುಂದಿನ ಟಿಪ್ಪಣಿಗಳು, ಮುಂದಿನ ಭಾಗದಲ್ಲಿ..

Leave a Reply

Your email address will not be published. Required fields are marked *