ಮೇಹುಗಾಡಿನಲಿ ಅಲೆಯುವೀ ಮೇಕೆಗಳಿಗೆ
ಮೇವೆಂದರೆ ಒಣಹುಲ್ಲು, ಮೇಯಿಸುವವನಿಗೆ ಉರಿಬಿಸಿಲು.
ಮೌನವೇ ಮೇಲೆನ್ನುವವು ಕೆಂಪು ಹೂವು ಅರಳಿ.
ಚದುರುತಿವೆ ಮೇಘಗಳು, ದಿಟ್ಟಿಸುವನು ಮೇಟಿಯವನು
ಮೇದಿನಿಯ ಮೇಲುಸಿರು ಗಾಳಿಯಲ್ಲಿ.
ಮಳೆಯಾಸೆಯ ಕೂಗು ಮೇಡುಗಳ ಮುಟ್ಟಿದೆ.
ಗಾಳಿ ಗೂಳಿ ಮೇಲಾಟಕೆ ಬಿದ್ದಿವೆ
ದರಕೆಲೆಗಳು ಸುಳಿದಾಳಿಗೆ ಎದ್ದಿವೆ,
ಕರಿಮೋಡಗಳು ಮೇರೆ ಮೀರಿವೆ,
ಮೇನೆಯೇರಿವೆ.
ಮೇಳೈಸಲಿ, ಮೇಘನಾದವಾಗಲಿ
ಮಳೆಸುರಿಯುವುದೆ ಮೇಳಗಾನ.
ಹನಿಮಳೆಯೆ ಮೇಲೋಗರ ಹಸಿದ ಒಲವಿಗೆ
ಮೇಳವಾಡೊ ಎದೆಗಳಿಗೆ ಬರುವುದೆಂದು ಆ ಘಳಿಗೆ?