ಕಲ್ಗುಡಿ (ಕಾದಂಬರಿಯ ಕೆಲವು ಪುಟಗಳು)

ಎರಡನೇ ಭಾಗ – ಮಳೆಗಾಲ

– ವರ್ಷ –

– ಶ್ರಾವಣ – 

ಕಲ್ಗುಡಿ ಒಂದು ರೀತಿಯಲ್ಲಿ ವಿಶೇಷವಾದ ಊರೇ ಎನ್ನಬೇಕು. ಅದಕ್ಕೆ ವಿಭಿನ್ನ ಆಯಾಮಗಳಿವೆ. ಅದು ಅನೇಕ ಪದರಗಳಲ್ಲಿ ಮುಚ್ಚಲ್ಪಟ್ಟ ಊರು. ಅಲ್ಲಿನ ಸಾಮಾನ್ಯ ಜನರಿಗೆ ಕಲ್ಗುಡಿ ಒಂದು ರೀತಿ ತೆರೆದುಕೊಂಡರೆ, ಅಲ್ಲಿನ ಮಾಂತ್ರಿಕರಿಗೆ ಅದು ಇನ್ನೊಂದು ರೀತಿಯಲ್ಲಿಯೇ ತೆರೆದುಕೊಳ್ಳುತ್ತದೆ. ಕಲ್ಗುಡಿಯ ಯಾವ ಆಯಾಮದಲ್ಲಿ ತಾಂತ್ರಿಕರಿದ್ದಾರೆ, ಅವಧೂತರಿದ್ದಾರೆ ಹೇಳುವುದು ಕಷ್ಟ. ಇಲ್ಲಿನ ಮಣ್ಣಿಗೂ ವಿಶೇಷ ಶಕ್ತಿಗಳಿವೆ ಎನ್ನುತ್ತಾರೆ. ಈ ಊರಿಗೆ ವಿಚಿತ್ರವಾದ ಇತಿಹಾಸವಿದೆ, ವೈವಿಧ್ಯಮಯವಾದ ಪುರಾಣ ಕಥೆಗಳಿವೆ. ಇಲ್ಲಿನ ಜನರ ಪ್ರಮುಖವಾಗಿ ಗಮನಿಸಬಹುದಾದ ಗುಣಲಕ್ಷಣವೆಂದರೆ ಮೌನ. ಹೊರಗಿನಿಂದ ಬಂದವರಿಗೆ ಕಾಣುವುದು ಒಂದು ಸಾಮಾನ್ಯ ಹಳ್ಳಿಯ ನಾಗರಿಕ ಜೀವನ ಮಾತ್ರ. ಆದರೆ ಊರಿನಲ್ಲಿಯೇ ಇರುವವರಿಗೆ ಈ ವಿಭಿನ್ನ ಆಯಾಮಗಳು ಕೆಲವೊಮ್ಮೆ ಮಿಂಚಿನಂತೆ ಹೊಳೆದು, ತೋರಿ ಮತ್ತೆ ಮಾಯವಾಗುತ್ತವೆ. ಆದರೆ ಹೆಚ್ಚಿನವರಿಗೆ ಆ ಸಂಗತಿಗಳ ಕುರಿತಂತೆ ನಾಲಿಗೆಗಳು ಜಡವಾಗಿಬಿಟ್ಟಿವೆ. ಅವರಿಗೆ ಆಗುವ ಅನುಭವಗಳು, ಮತ್ತು ಅಪರೂಪಕ್ಕೆ ಕಾಣುವ ಸಂಗತಿಗಳು ಗಾಸಿಪ್ ಮಾಡಿ ಮಾತನಾಡುವುದಕ್ಕೆ ತಕ್ಕ ಸಂಗತಿಗಳೇ ಅಲ್ಲ. ಆ ಮಿಂಚಿನಂತೆ ತೋರುವ ಲೋಕಗಳು ಹುಟ್ಟಿಸುವ ಭಯಾನಕತೆ ಮತ್ತು ಬೆರಗನ್ನು ತಾವು ತಮ್ಮಲ್ಲಿಯೇ ಮುಚ್ಚಿಟ್ಟುಕೊಂಡು ಏನೂ ಅರಿಯದವರಂತೆ ಬದುಕಲು ಕಲ್ಗುಡಿಯ ಪ್ರತಿಯೊಬ್ಬ ಮನುಷ್ಯನೂ ಬಯಸುತ್ತಾನೆ. 

Image

ಕಲ್ಗುಡಿಯಲ್ಲಿ ಎಲ್ಲಿ ಯಾವ ದೇವತೆಗಳಿವೆ, ಯಾವ ಪ್ರದೇಶದಲ್ಲಿ ನಿಧಿಯಿರಬಹುದು ಯಾವುದನ್ನೂ ಹೇಳಲು ಸಾಧ್ಯವಿಲ್ಲ. ಆದರೆ ಅಲ್ಲಿ ಒಂದು ಅಗೋಚರವಾದ ಆದರೆ ಆ ಊರಿನ ಪ್ರತಿಯೊಬ್ಬನ ಆಂತರ್ಯದ ಪ್ರಜ್ಞೆಗೂ ಬಹುಸೂಕ್ಷ್ಮವಾಗಿ ತಾಕುವಂತಹ ಒಂದು ವ್ಯವಸ್ಥೆಯಿದೆ. ದುಷ್ಟ ವರ್ಗವಿರುವಂತೆಯೇ ಒಂದು ಕಾಯುವ ವರ್ಗವೂ ಇಲ್ಲಿದೆ. ಅವುಗಳ ಹರಹು ಏನು, ಅವುಗಳ ಕಾರ್ಯ ಕ್ಷೇತ್ರ ಏನು ಎಂಬುದನ್ನ ಯಾರೂ ಅರಿಯರು. ಊರಿನಲ್ಲಿ ಒಂದು ಉರಗ ಸೈನ್ಯವಿದೆ, ಅದು ಊರಿನಲ್ಲಿ ಬೇರೆ ಬೇರೆ ದಿಕ್ಕಿನಲ್ಲಿರುವ ನಿಧಿಯನ್ನ ಕಾಪಾಡುತ್ತದೆ, ದಿಕ್ಪಾಲಕರ ಅಣತಿಯಂತೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನ ಊರಿನ ಹಿರಿಯರು ಹೇಳುತ್ತಾರೆ. ಈ ಉರಗ ಸೈನ್ಯ ಯಾವುದೋ ಕಾರ್ಯವನ್ನು ನಿರ್ವಹಿಸುತ್ತಿದೆ, ಯಾವುದೋ ವ್ಯವಸ್ಥೆಯನ್ನು ಕಾಪಾಡುತ್ತಿದೆ ಎಂಬುದರ ಅತೀ ಮಬ್ಬುಮಬ್ಬಾದ ತಿಳುವಳಿಕೆ ಜನರಲ್ಲಿದೆ. ಹಾಗಾಗಿ ಊರಿನವರು ಎಲ್ಲಿಯೇ ಉರಗಗಳು ಕಂಡರೂ, ಅವುಗಳಿಗೆ ಹೋಗಲು ಅವಕಾಶ ಮಾಡಿಕೊಟ್ಟು ನಂತರ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಅವರು ಈ ವಿಶೇಷಗಳ ಕುರಿತಾಗಿ ಹೊರಗಿನವರೊಂದಿಗಾಗಲೀ ಅಥವಾ ತಮಗೆ ತಾವೇ ಆಗಲಿ ಮಾತನಾಡಿಕೊಳ್ಳುವುದಿಲ್ಲ. ತಮ್ಮ ಸುತ್ತ ಯಾವ ರೀತಿಯ ಬಲೆಗಳು ಹರಡಿಕೊಂಡಿವೆಯೋ ಯಾರಿಗೆ ಗೊತ್ತು? ಯಾವ ಅಗೋಚರ ವ್ಯಕ್ತಿಗಳು ತಮ್ಮ ಸುತ್ತ ಅಡ್ಡಾಡಿಕೊಂಡಿರುತ್ತಾರೋ ಯಾರಿಗೆ ಗೊತ್ತು? ಅನಗತ್ಯವಾಗಿ ತಾವು ಏನಾದರೂ ಮಾತನಾಡಿ ಆ ವ್ಯವಸ್ಥೆ ತಮ್ಮ ಕುರಿತು ಜಾಗೃತವಾಗುವಂತೆ ಮಾಡುವುದಾದರೂ ಏಕೆ ಎಂಬ ಎಚ್ಚರದಲ್ಲಿ ಅವರು ಕನಸು-ಮನಸಿನಲ್ಲಿಯೂ ಆ ಸಂಗತಿಗಳ ಕುರಿತು ಯೋಚಿಸುವುದಿಲ್ಲ. ಹೆಚ್ಚೆಂದರೆ ನೂರೈವತ್ತು ಮನೆಗಳಿರುವ, ದುರ್ಗಮ ಕಾಡಿನ ಅಂಚಿನಲ್ಲಿಯೇ ಇರುವ ಈ ಕಲ್ಗುಡಿ ಎಂಬ ಊರಿನ ಜನ ಅತ್ಯಂತ ಸಾಮಾನ್ಯರಾಗಿ ಬದುಕುತ್ತಾರೆ ಮತ್ತು ಹಾಗೆ ಬದುಕುವುದಕ್ಕೆ ನಿತ್ಯ ಪ್ರಯತ್ನಿಸುತ್ತಾರೆ ಕೂಡಾ. ಪ್ರೀತಿಯಲ್ಲಿ, ಜಗಳದಲ್ಲಿ ಎಲ್ಲದರಲ್ಲಿಯೂ ಒಂದು ಸಾಮಾನ್ಯ ನಾಗರೀಕ ಸಂಭ್ರಮದಲ್ಲಿ ಮುಳುಗುವ ಈ ಜನ ಒಂದು ಎಚ್ಚರವನ್ನು ಮಾತ್ರ ಯಾವತ್ತೂ ಕಾಯ್ದುಕೊಂಡಿರುತ್ತಾರೆ: ತಾವು ವಾಸಿಸುತ್ತಿರುವ ಈ ಊರು ಕಲ್ಗುಡಿ ಸಾಮಾನ್ಯವಾದ ಊರಲ್ಲ.

ಇಂತಹ ಸೂಕ್ಷ್ಮಗಳುಳ್ಳ ಊರಿನಲ್ಲಿ ಒಂದು ಶತಮಾನ ಕಳೆದ ನಂತರ ಮೊದಲ ಬಾರಿಗೆ ಈ ದೈವಿಕವಾದ ವ್ಯಾಪ್ತಿಯ ಒಳಗೆ ತನ್ನದೇ ಆದ ರೀತಿಯಲ್ಲಿ, ತನಗೆ ಅರಿವಿಲ್ಲದೇ ಹೋಗಲು ಪ್ರಯತ್ನಿಸಿದವನು ರಾಮ. ಅದು ಆಗಿದ್ದು ಅವನಿನ್ನೂ ಐದಾರು ವರ್ಷದವನಿದ್ದಾಗಲೇ. ಅವನು ತನ್ನ ಪುಟ್ಟ ಹೆಜ್ಜೆಯನ್ನು ಆ ವ್ಯಾಪ್ತಿಯಲ್ಲಿ ಇಟ್ಟಾಗ ಇಡೀ ವ್ಯವಸ್ಥೆ ಮೆಲ್ಲಗೆ ಕಣ್ಣು ತೆರೆದು ಅವನನ್ನು ಒಮ್ಮೆ ನೋಡಿ, ಮತ್ತೆ ಅದೇ ಎಚ್ಚರದಲ್ಲಿಯೇ ಕಣ್ಣು ಮುಚ್ಚಿತು. ಊರಿನ ದಶದಿಕ್ಕುಗಳೂ ಎಚ್ಚರಗೊಂಡವು. ಹೇಗೆ ದುಷ್ಟ ಶಕ್ತಿಗಳಿಗೆ ಅವನ ಅರಿವಾಯಿತೋ ಹಾಗೇ, ಕಾಪಾಡುವ ಶಕ್ತಿಗಳಿಗೂ. ಹಾಗೇ ರಾಮನ ಸುತ್ತ ಒಂದು ದುಷ್ಟ ವರ್ಗವೂ, ಕಾಯುವ ವರ್ಗವೂ ಸಿದ್ಧಗೊಂಡವು. ದುಷ್ಟ ವರ್ಗಕ್ಕಿಂತ ಕಾಯುವ ವರ್ಗ ಅತ್ಯಂತ ಶಕ್ತಿಶಾಲಿಯಾಗಿದ್ದರಿಂದಾಗಿ ದುಷ್ಟ ವರ್ಗ ತಕ್ಕ ಕಾಲಕ್ಕಾಗಿ ಕಾಯುತ್ತಿತ್ತು. ಆದರೆ ರಾಮನಿಂದ ಏನು ಸಾಧ್ಯವಾಗಲಿದೆ, ಆತನೊಂದಿಗೆ ತಾವು ಏನು ಮಾಡಬೇಕು ಎಂಬುದರ ಸ್ಪಷ್ಟ ಅರಿವು ಆ ದುಷ್ಟ ವರ್ಗಕ್ಕೆ ಇರಲಿಲ್ಲ. ಆದರೆ ಕಾಯುವ ವರ್ಗಕ್ಕೆ ರಾಮನನ್ನು ಶತಾಯಗತಾಯ ಕಾಯಲೇ ಬೇಕಾಗಿತ್ತು.


ಈ ಯಾವುದರ ಕುರಿತೂ ಸ್ವಲ್ಪವೂ ಅರಿವಿಲ್ಲದೇ ರಾಮ ತನ್ನಷ್ಟಕ್ಕೇ ಕಾಡೆಲ್ಲ ಅಲೆದಾಡಿಕೊಂಡಿದ್ದ. ತನ್ನ ಭವಿಷ್ಯದಲ್ಲಿ ಏನು ಅಡಗಿದೆ ಎಂಬುದರ ಕುರಿತು ಅವನಿಗೆ ಏನೂ ಗೊತ್ತಿರಲಿಲ್ಲ. ತನಗೆ ಬೇಕಾದದ್ದನ್ನು ಓದುತ್ತಾ, ಕವಿತೆಗಳನ್ನು ಬರೆಯುತ್ತಾ, ಉಮಾಳ ನೆನಪಿನಲ್ಲಿ ಇರುತ್ತಾ ಆನಂದವಾಗಿದ್ದ. ತನ್ನ ಸುತ್ತಲಿನ ಜಗತ್ತನ್ನು, ಜನ ಜೀವನವನ್ನು ತನ್ನದೇ ಆದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾ, ವ್ಯಾಖ್ಯಾನಿಸುತ್ತಾ, ತನಗೆ ಬೇಕಾದ್ದನ್ನು ಮಾಡಿಕೊಂಡಿದ್ದ. ಕಲ್ಗುಡಿ ಅವನಿಗೆ ದೇವಾಲಯಗಳು ತುಂಬಿರುವ, ದಟ್ಟ ಕಾಡಿನ ಪ್ರಕೃತಿಯ ಸನ್ನಿಧಿಯಾಗಿತ್ತು. ಅದರೊಡನೆ ಬೆರೆಯುತ್ತಾ ಬದುಕನ್ನು ಸವಿಯುತ್ತಿದ್ದ. ಆದರೆ ಅವನು ಹೀಗೆಲ್ಲಾ ಸವಿಯುವ ಸಂದರ್ಭದಲ್ಲಿ ಕಲ್ಗುಡಿಯ ಯಾವ ನಿಗೂಢ ತಂತುಗಳನ್ನು ತುಳಿದಿದ್ದಾನೆ, ಯಾವ ಪದರಗಳಲ್ಲಿ ಪ್ರವೇಶಿಸಿದ್ದಾನೆ ಎಂಬುದರ ಅರಿವು ಅವನಿಗೆ ಇರಲಿಲ್ಲ.

2 comments

Leave a Reply

Your email address will not be published. Required fields are marked *