2. ನಿಮ್ಮ ಬಗ್ಗೆ ನೀವೇ ಏನಂದುಕೊಂಡಿದ್ದೀರಿ?
( Notes from THE 38 MOST COMMON FICTION WRITING MISTAKES (And How To Avoid Them) by Jack M. Bickham)
ನೇರವಾಗಿ ಈ ಪ್ರಶ್ನೆಯೊಂದಿಗೆ ಪ್ರಾರಂಭಿಸೋಣ. ಬರಹಗಾರನಾದವನು ಮೊದಲು ತನ್ನ ಕುರಿತು ತಾನು ಏನಂದುಕೊಳ್ಳುತ್ತಾನೆ, ಆತನ ಸಮಕಾಲೀನ ಲೇಖಕರು ಮತ್ತು ಓದುಗರ ಕುರಿತು ಯಾವ ಮನೋಭಾವನೆ ತನ್ನಲ್ಲಿದೆ ಎಂಬುದನ್ನು ಗ್ರಹಿಸಬೇಕಾಗುತ್ತದೆ. ಈ ಪ್ರಶ್ನೆಗಳನ್ನು ನಿಮ್ಮಲ್ಲಿಯೇ ಕೇಳಿಕೊಳ್ಳಿ:
- ನೀವು ಓದುವ ಸಮಕಾಲೀನ ಕಥೆ ಕಾದಂಬರಿಗಳಿಗಿಂತ ಬಹಳಷ್ಟು ಚೆನ್ನಾಗಿ ಬರೆಯಬಲ್ಲಿರಿ ಅಂದುಕೊಂಡಿದ್ದೀರಾ?
- ಸಮಕಾಲೀನ ಸಾಹಿತ್ಯ ನಿಮ್ಮ ಬೌದ್ಧಿಕ ಮಟ್ಟಕ್ಕಿಂತ ಕೆಳಗಿನದು ಎಂದುಕೊಳ್ಳುತ್ತೀರಾ?
- ನಿಮ್ಮ ಓದುಗರು ನಿಮಗಿಂತ ಬೌದ್ಧಿಕವಾಗಿ, ಮಾನಸಿಕವಾಗಿ ಕೆಳಮಟ್ಟದವರು ಎಂದುಕೊಳ್ಳುತ್ತೀರಾ?
- ಕುವೆಂಪು, ಮಾಸ್ತಿಯವರನ್ನು ಮಾತ್ರವೇ ಓದಿಕೊಳ್ಳುತ್ತಾ ಈ ಕಾಲದ ಎಲ್ಲಾ ಸಾಹಿತ್ಯವೂ ಬೂಸಾ ಎನ್ನುತ್ತೀರಾ?
ಈ ಪ್ರಶ್ನೆಗಳಿಗೆಲ್ಲಾ ಹೌದು ಎನ್ನುವುದೇ ನಿಮ್ಮ ಉತ್ತರವಾಗಿದ್ದರೆ, ಶುಭಾಶಯಗಳು. ಇಲ್ಲಿಗೆ ಲೇಖಕರಾಗಿ ನಿಮ್ಮ ಕಥೆ ಮುಗಿದಿದೆ. ನಿಜಕ್ಕೂ ನೀವು ಏನನ್ನೂ ಬರೆಯಲಾರಿರಿ. ಮೊದಲು ನೀವು ಮಾಡಬೇಕಾದ ಕೆಲಸವೆಂದರೆ ಈ ದೋರಣೆಯನ್ನು ಬದಲಾಯಿಸಿಕೊಳ್ಳುವುದು.
ಈ ಧೋರಣೆ ನಿಮ್ಮಲ್ಲಿದ್ದರೆ ಅದು ನಿಮ್ಮ ಬರವಣಿಗೆಯಲ್ಲಿಯೂ ಕಾಣಿಸಿಕೊಳ್ಳುತ್ತದೆ. ನಿಮ್ಮ ಬರವಣಿಗೆಯಲ್ಲಿ ಓದುಗರ ಕುರಿತು ಅಸಡ್ಡೆ ಅಥವಾ ತಿರಸ್ಕಾರದ ಭಾವನೆ ಇದೆ ಎಂದಾದರೆ ಅದನ್ನು ಓದುಗ ಬಹಳ ಬೇಗ ಗ್ರಹಿಸುತ್ತಾನೆ. ಸಾಹಿತ್ಯದಲ್ಲಿ ಬುದ್ಧಿ ಪ್ರದರ್ಶನ ಸಲ್ಲದು. ಈ ಕಾಲದ ಓದುಗ ಏನನ್ನು ಬಯಸುತ್ತಾನೆ ಎಂಬುದನ್ನು ಕಂಡುಕೊಂಡು, ಅವರಿಗಾಗಿ ಬರೆಯುವುದಾದರೆ ನೀವು ಲೇಖಕರಾಗಿ ಬೆಳೆಯಬಹುದು.
3. ಅತಿಬುದ್ಧಿ ಪ್ರದರ್ಶನ ಬೇಡ
ದೊಡ್ಡ ದೊಡ್ಡ ಶಬ್ದಗಳನ್ನು ಬಳಸಿ, ಉದ್ದುದ್ದ ವಾಕ್ಯಗಳಲ್ಲಿ ಬರೆದರೆ ಮಾತ್ರ ಒಂದು ಕಥೆ/ಕಾದಂಬರಿ ಪರಿಣಾಮಕಾರಿಯಾಗುತ್ತದೆ ಎಂಬ ಕಲ್ಪನೆಯೇನಾದರೂ ನಿಮಗಿದ್ದರೆ, ಮೊದಲು ಅದನ್ನು ತೆಗೆದುಹಾಕಿ. ಒಂದು ವಿಷಯವನ್ನು ಎಷ್ಟು ನೇರವಾಗಿ, ಸರಳವಾಗಿ ಹೇಳಲು ಸಾಧ್ಯವಾಗುತ್ತದೆಯೋ ಪ್ರಯತ್ನಿಸಿ ನೋಡಿ. ಸರಳವಾಗಿಯೇ ಪರಿಣಾಮಕಾರಿಯಾಗಿಯೂ ಹೇಳಬಹುದು.
ಎರಡನೆಯದಾಗಿ, ಕಥೆಗಳಲ್ಲಿ ಮಾಹಿತಿಯನ್ನು ತುಂಬುವ ಅಥವಾ ಲೇಖಕ ತನ್ನ ಅಭಿಪ್ರಾಯಗಳನ್ನು ತುರುಕುವ ಪ್ರಯತ್ನ ಸಹಾ ಓದುಗರ ಅನುಭವಕ್ಕೆ ತಡೆ ಉಂಟುಮಾಡುವಂತದ್ದು. ಕಥಾಸಾಹಿತ್ಯದಲ್ಲಿ ಬುದ್ಧಿವಂತಿಕೆಯ ಪ್ರದರ್ಶನ ಅಥವಾ ಓದುಗನ ಬುದ್ಧಿವಂತಿಕೆಯನ್ನು ಹೆಚ್ಚಿಸುವ ಉದ್ದೇಶ ಮುಖ್ಯವಲ್ಲ. ಕಥೆ ಆತನ ಹೃದಯದ ಭಾವನೆಗಳಿಗೆ ತಾಕುವಂತಿರಬೇಕು.
4. ಪವಾಡಗಳನ್ನು ನಿರೀಕ್ಷಿಸಬೇಡಿ.
ಯಾವುದೇ ಕುಶಲಕಲೆಯನ್ನು ಕಲಿಯುವ ವ್ಯಕ್ತಿ ಕನಿಷ್ಟ ನಾಲ್ಕೈದು ವರ್ಷಗಳ ನಿರಂತರ ಪರಿಶ್ರಮ ಪಡುತ್ತಾನೆ. ಬರವಣಿಗೆಯೂ ಅಂತದ್ದೇ ಕಠಿಣ ಪರಿಶ್ರಮ ಬೇಡುವ ಒಂದು ಕುಶಲ ಕರ್ಮದ ಕಲೆ. ಹಾಗಾಗಿ ನೀವು ರಾತ್ರೋರಾತ್ರಿ ಪ್ರಸಿದ್ಧ ಲೇಖಕರಾಗಿಬಿಡುತ್ತೀರಿ ಎಂಬುದನ್ನು ನಿರೀಕ್ಷಿಸಿದ್ದರೆ ಸೋಲು ಖಚಿತ. ಈ ಕಲೆಯ ಒಳಹೊರಗುಗಳನ್ನು ಅರ್ಥ ಮಾಡಿಕೊಳ್ಳಲು, ನಿಮ್ಮದೇ ಬರವಣಿಗೆಯ ಮಿತಿ ಮತ್ತು ದೋಷಗಳನ್ನು ಕಂಡುಕೊಳ್ಳಲು ನಿಮಗೆ ಒಂದಷ್ಟು ಕಾಲದವರೆಗೆ ಪ್ರಯತ್ನವಂತೂ ಮಾಡಲೇಬೇಕಾದ ಅಗತ್ಯವಿದೆ. ಪದಗಳನ್ನು ಜೋಡಿಸಿ ಮೆರುಗು ತರುವ, ಪ್ರತಿ ವಾಕ್ಯವನ್ನೂ ಕುಸುರಿಯಂತೆ ಜೋಡಿಸುವ ಸಾಮರ್ಥ್ಯ ಸುಲಭದ್ದಲ್ಲ. (ಈ ಕುಶಲ ಕಲೆಯ ಮೇಲೆ ಶ್ರದ್ಧೆ ನಿಮ್ಮಲ್ಲಿ ಮೂಡಿದಾಗ ಸಹ ಲೇಖಕರ ಕುರಿತು ಸಹಾನುಭೂತಿ ಮತ್ತು ಹಿರಿಯ ಲೇಖಕರ ಪರಿಶ್ರಮದ ಕುರಿತು ಗೌರವ ಮೂಡುತ್ತದೆ.)
ಇದೊಂದನ್ನು ಮಾಡಿ: ಇನ್ನು ಐದು ವರ್ಷಗಳಲ್ಲಿ ನೀವು ಲೇಖಕರಾಗಿ ಏನು ಮಾಡಲಿದ್ದೀರಿ, ನಿಮ್ಮ ಗುರಿ ಏನು ಎಂಬುದನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ. ಮತ್ತು, ಮೊದಲ ಒಂದು ವರ್ಷದಲ್ಲಿ, ಎರಡನೇ ವರ್ಷದಲ್ಲಿ ಏನು ಮಾಡಲಿದ್ದೀರಿ ಎಂಬುದನ್ನು ಗುರುತಿಸಿಕೊಳ್ಳಿ. ಈ ಬರವಣಿಗೆಯ ಉದ್ಯೋಗ ಕಾಲದಲ್ಲಿ ನೀವು ಕಂಡುಕೊಂಡ ಹೊಸ ಹೊಳಹುಗಳು, ಕಲಿತ ಕೌಶಲ್ಯಗಳ ಕುರಿತು ಪಟ್ಟಿ ಮಾಡಿಕೊಳ್ಳಿ. ಮತ್ತು ಪ್ರತೀ ವರ್ಷ ನೀವು ಲೇಖಕರಾಗಿ ಎಷ್ಟು ಬೆಳೆದಿದ್ದೀರಿ ಎಂಬುದನ್ನು ನೀವೇ ಲೆಕ್ಕ ಹಾಕಿಕೊಳ್ಳಬಹುದು.
5. ಕಥೆಯೆಲ್ಲಿ ಅಂದರೆ ಮುನ್ನೂರಡಿ ಮುಂದೆ ಬನ್ನಿ ಎನ್ನುವಿರೇ?
ಬರುವುದಿಲ್ಲ ಹೋಗಿ ಎನ್ನುತ್ತಾನೆ ಇಂದಿನ ಓದುಗ. ನಿಮ್ಮ ಕಥೆಯನ್ನು ಹೇಗೆ ಪ್ರಾರಂಭಿಸುತ್ತೀರಿ? ಕಥೆ ನಡೆಯುವ ಊರನ್ನು, ಒಂದು ಪ್ರದೇಶವನ್ನು, ಅಥವಾ ಕಥೆಯಲ್ಲಿ ಬರುವ ವ್ಯಕ್ತಿಯನ್ನು ವರ್ಣಿಸುವ ಮೂಲಕ? ಅಥವಾ ಕಥೆಯ ಹಿನ್ನೆಲೆಯನ್ನು ಹೇಳುವ ಮೂಲಕ? ಅಲ್ಲಿಯವರೆಗೆ ಈ ಕಾಲದ ಓದುಗರು ಕಾಯುತ್ತಾರೆಯೇ?
ಓದುಗರಷ್ಟೇ ಅಲ್ಲ, ಪ್ರಕಾಶಕರು, ಸಂಪಾದಕರೂ ಮೊದಲ ಒಂದು ಪುಟದಲ್ಲಿ ಏನಿದೆ ಎಂಬುದರ ಮೇಲೆ ನಿಮ್ಮ ಪುಸ್ತಕದ ಹಣೆಬರಹವನ್ನು ನಿರ್ಧರಿಸಿಬಿಡುತ್ತಾರೆ ಎನ್ನುತ್ತಾನೆ ಜಾಕ್. ಅವನು ಹೇಳುವಂತೆ ಮೊದಲು ಕತೆಯನ್ನು ಪ್ರಾರಂಭಿಸಿ, ಆನಂತರದಲ್ಲಿ ಬೇಕಿದ್ದರೆ ಹಿನ್ನೆಲೆಯನ್ನು ನೀಡಬಹುದು. ಆದರೂ, ಅನಗತ್ಯ ವರ್ಣನೆ ಮಾಡುವುದು ಕತೆಯ ಓಘಕ್ಕೆ ಅಡ್ಡಗಾಲು ಹಾಕುತ್ತದೆ. ಅನಗತ್ಯ ವರ್ಣನೆಯೆಂದರೆ ಗಾಲಿಗಳಿಲ್ಲದ ಗಾಡಿಯ ಮೇಲೆ ಓದುಗನನ್ನು ಪಯಣಕ್ಕೆ ಕಳಿಸಿದಂತೆ.
ಮೊದಲ ಸಾಲಿನಲ್ಲಿಯೇ ಕತೆ ಪ್ರಾರಂಭಗೊಂಡುಬಿಡಲಿ. ಕತೆ ವರ್ತಮಾನದಲ್ಲಿ ಪ್ರಾರಂಭಗೊಳ್ಳಲಿ, ಮತ್ತು ಆ ಪ್ರಾರಂಭದ ಬಿಂದು ಒಂದು ಸಂಘರ್ಷದಿಂದ, ಅಪಾಯ ಅಥವಾ ಭಯದ ಸಂಗತಿಯಾಗಿರಲಿ. ಈ ಸಂಘರ್ಷ ಅಥವಾ ಭಯ ಹೇಗೆ ಹುಟ್ಟುತ್ತದೆ? ನಾವು ಒಂದು ರುಟೀನಿಗೆ ಹೊಂದಿಕೊಂಡು ಹೋಗುತ್ತಿರುವವರು ಒಂದು ದಿನ ಆ ರುಟೀನ್ ಬದಲಾಗಿ ಹೊಸತೊಂದು ಘಟನೆಗೆ ತೆರೆದುಕೊಂಡಾಗ ಈ ಭಯ ಹುಟ್ಟಿಕೊಳ್ಳುತ್ತದೆ.
- ಒಂದು ದಿನ ಬಾಸ್ ನೌಕರನನ್ನು ಕರೆದು ನಿನಗೆ ಒಂದು ಮುಖ್ಯವಾದ ಸಂಗತಿ ಹೇಳುವುದಿದೆ ಅನ್ನುತ್ತಾನೆ
- ಒಬ್ಬ ಅಪರಿಚಿತ ಬಸ್ಸಿನಿಂದ ಇಳಿದು ಊರಿನೊಳಕ್ಕೆ ಬರುತ್ತಾನೆ
- ಒಂದು ಕುಟುಂಬ ಹೊಸದೊಂದು ಊರಿಗೆ ನೆಲೆಸಲು ಬರುತ್ತದೆ.
ಹೀಗೆ ಕಥೆ ಯಾವುದೋ ಒಂದು ಭಯ, ಆತಂಕದ ಬಿಂದುವಿನಿಂದ ಕತೆ ಪ್ರಾರಂಭವಾದಾಗ ಓದುಗನಿಗೆ ಕತೆಯ ಕುರಿತು ಆಸಕ್ತಿ ಮೂಡುತ್ತದೆ. (ಸಿನೆಮಾಗಳಲ್ಲಿ ಕಥೆಗಳನ್ನು ಹೇಗೆ ಕಟ್ಟುತ್ತಾರೆ ನೋಡಿದ್ದೀರಾ?) ಕಥೆ ಈ ಕ್ಷಣದಲ್ಲಿ ಪ್ರಾರಂಭವಾಗಲಿ ಮತ್ತು ಈ ಕ್ಷಣದಿಂದ ಮುಂದುವರೆಯಲಿ.
ಓದುಗನಿಗೆ ಏನು ಬೇಕು, ಯಾವುದು ಆಸಕ್ತಿ ತರುತ್ತದೆ, ಇಡೀ ಪುಸ್ತಕ ಓದುವಂತೆ ಯಾವುದು ಪ್ರೇರೇಪಿಸುತ್ತದೆ ಅದನ್ನು ನೀಡುವುದಕ್ಕೆ ಲೇಖಕ ಸಿದ್ಧಗೊಳ್ಳಬೇಕು.