ನಿನಗೆ ಗೊತ್ತಿಲ್ಲ
ಯಾವ ಮೂರ್ತಿಯನು ನಾನು
ಕಾಡಿನಲ್ಲಿ ಕಳೆದು ಬಂದಿರುವೆನೆಂದು.
ದುಃಖ ಬಂದಿದೆಯೆಂದು ದುಃಖಿಸುತ್ತೀಯ
ಹೆಚ್ಚು ಹೆಚ್ಚಾಗಿ.
ದುಃಖ ಶುದ್ಧಗೊಳಿಸುವ ಅಗ್ನಿ
ಅದರೆದುರು ಮನಸು ಬಿಚ್ಚು.
ಸುಖ ತೋರುತ್ತದೆ ನೂರು ದಾರಿಗಳನು
ದುಃಖವೊಂದೆ ತೆರೆದೀತು ನಿನ್ನೊಳಗಿನ ಬಾಗಿಲನು.
ಅದೋ ನೋಡು ಆ ಕಪ್ಪು ಕಲ್ಲುಗಳು
ನನ್ನ ಎಡವಿಸಿ ಬೀಳಿಸಿದವು
ಪ್ರತಿಬಾರಿಯೂ ಶಪಿಸಿದ್ದೆ,
ಇಷ್ಟು ಎತ್ತರಕೆ ಬಂದು ನಿಂತ ಮೇಲೆ
ಎದೆ ತುಂಬ ಪ್ರೇಮವಿದೆ.
ಪ್ರತೀ ದುಃಖದಲೂ ಎಚ್ಚರವಿದೆ
ಪ್ರತೀ ಸುಖದಲೂ ಮರೆವು.
ಕಾಡಿನಲ್ಲಿ ಕಳೆದ ಮೂರ್ತಿ ಕಾಡಾಗಿದೆ
ಕಾಡು ಕಡಲಾಗಿದೆ, ಕಡಲು ಮುಗಿಲಾಗಿದೆ.
ನಡೆಯಬಯಸುವೆಯ ನದಿಯ ಮೇಲೆ ಅಲೆಯೇಳದಂತೆ?
ಅದಕ್ಕೆ ನದಿಯಾಗಬೇಕು ನೀನು.
ಬೆಳಕು ಕತ್ತಲೆ ಸೇರುವಲ್ಲಿ ನಿಂತುಬಿಡು,
ಅಲ್ಲಿ ಕರಗುತ್ತವೆ ಎಲ್ಲ ಸುಖ-ದುಃಖದ ಅಲೆಗಳು.