“ಈ ನದಿ ತನ್ನ ಹಿಂದೆ ಸಮುದ್ರವನ್ನೇ ಎಳೆದುಕೊಂಡು ಹೋಗುತ್ತಿದೆ”, ಎಂದು ಗುರುವೇ ತನ್ನ ಶಿಷ್ಯನ ಕುರಿತು ಹೇಳುತ್ತಾನೆ. ಆ ಗುರು ಅತ್ತರ್, ಮತ್ತು ಶಿಷ್ಯ ರೂಮಿ. ರೂಮಿ ಅತ್ಯಂತ ಪ್ರಸಿದ್ಧ ಹಾಗೂ ಮೆಚ್ಚಲ್ಪಟ್ಟ ಸೂಫಿ ಕವಿ.
ಸೂಫಿಸಂ ಎಂದರೆ ಇಸ್ಲಾಂನ ಯೋಗಿಕ ಆಯಾಮೆವೆನ್ನುತ್ತಾರೆ. ಸೂಫಿ ಎಂದರೆ ಯೋಗಿ. ಅಂದರೆ ಸೂಫಿ ಸಂಪ್ರದಾಯದ ಮೂಲಕ ಭಗವತ್ತೆಯನ್ನು ಪಡೆದವನು ಎಂದು. ಇಸ್ಲಾಂ ಸಾವಿನ ನಂತರ ಸ್ವರ್ಗ ಎಂದು ಮಾತನಾಡಿದರೆ, ಸೂಫಿ ಬದುಕಿರುವಾಗಲೇ ಮುಕ್ತಿ ಅಥವಾ ದೈವ ಸಾಕ್ಷಾತ್ಕಾರ ಸಾಧ್ಯ ಎನ್ನುತ್ತದೆ.
ಜಲಾಲುದ್ದೀನ್ ರೂಮಿಯ ಒಂದು ಕವಿತೆ ಹೀಗಿದೆ:
ಯಾರು ನನ್ನ ಕಣ್ಣಿಂದ ನೋಡುತ್ತಾರೆ?
ಏನದು ಆತ್ಮ?
ಕೇಳದೇ ನನಗೆ ವಿಧಿಯಿಲ್ಲ.
ಉತ್ತರದ ಒಂದು ಹನಿ ಸವಿಯಲಾದರೂ ಸಾಕು ನನಗೆ
ಈ ಕುಡುಕರ ಬಂಧೀಖಾನೆಯೊಡೆದು ಹೊರಬರುತ್ತೇನೆ.
ನನ್ನದೇ ಬಯಕೆಯಿಂದಾಗಿ ನಾನಿಲ್ಲಿ ಬಂದಿಲ್ಲ,
ನಾನೇ ಬಯಸಿ ಮರಳುವಂತೆಯೂ ಇಲ್ಲ.
ನನ್ನ ಇಲ್ಲಿಗೆ ಯಾರು ತಂದಿರುವರೋ
ಅವರೇ ಕರೆದೊಯ್ಯಬೇಕಿದೆ ನನ್ನ ಮನೆಗೆ.