ಕಾವ್ಯಾಭ್ಯಾಸಿಯ ಸಂಕಟಗಳು

ಎಷ್ಟು ದಿನಗಳಾಯಿತು ಪತ್ರ ಬರೆಯದೇ.

ನಿನ್ನ ಕಾಲ ಅಲ್ಲಿ ಬೇಸಿಗೆಯ ನದಿಯಂತೆ ನಿರಾಳವಾಗಿ ಸಾಗುತ್ತಿದ್ದಿರಬೇಕು. ಇಲ್ಲಿ ಹಾಗಲ್ಲ, ಇಲ್ಲಿ ಕಾಲಕ್ಕೊಂದು ವಿಚಿತ್ರ ವೇಗವಿದೆ. ಕಾಲವೂ ಹೆಣ್ಣಿನ ಹಾಗೇ ಇರಬಹುದೇ, ಹಿಡಿಯಬಯಸಿದಷ್ಟು ತಪ್ಪಿಸಿಕೊಂಡು ಹೋಗುವ ರೀತಿಯಲ್ಲಿ? ಈ ಪಟ್ಟಣದಲ್ಲಿ ಎಲ್ಲರೂ ಕಾಲವನ್ನು ಹಿಡಿಯುವ ಸ್ಪರ್ಧೆಗೆ ಬಿದ್ದವರಂತೆ ಕಾಣುತ್ತಾರೆ. ಇಲ್ಲಿನ ಜನ ಮಾನಸ ಒಂದು ರೀತಿಯ ವೇಗವನ್ನು ಕಂಡುಕೊಂಡಿದೆ, ನನಗೆ ನಮ್ಮ ಹಳ್ಳಿನಲ್ಲಿದ್ದಾಗ ಈ ವೇಗದ ಅನುಭವ ಇರಲಿಲ್ಲ. ಬಹುಶಃ ನಮ್ಮ ಸುತ್ತಮುತ್ತಲಿನ ಜನರ ದಾವಂತ ನಮ್ಮನ್ನೂ ಹಿಡಿದುಕೊಳ್ಳುತ್ತದೆ. ನೀರು ತನ್ನ ಮೇಲ್ಮಟ್ಟವನ್ನು ಕಾಯ್ದುಕೊಳ್ಳುವಂತೆ ಒಂದಿಡೀ ನಗರದ ಕಾಲಪ್ರಜ್ಞೆ ತನ್ನ ಸಮಾನತೆಯನ್ನು ಕಾಯ್ದುಕೊಳ್ಳುತ್ತದೆ.

ಕುಶಲ ವಿಚಾರಿಸುತ್ತ ಪತ್ರ ಆರಂಭಿಸಲೇ ಎಂದುಕೊಂಡರೆ ಕುಶಲದ ಪ್ರಶ್ನೆಗಳು ಏಳುತ್ತಲೇ ಲಯವಾಗುವ ಅಲೆಯಂತೆ ಮಾಯವಾಗುತ್ತವೆ. ಸೂರ್ಯ ಮೂಡಿ ಬೆಳಕು ಬಂದ ಮೇಲೆಯೇ ಹೂವು ಅರಳುತ್ತದೆ, ಆ ಮಧ್ಯದಲ್ಲಿ ಒಂದಷ್ಟು ಕಾಲದ ಪಯಣವಿದೆ. ನಿನ್ನ ಕುರಿತಾದ ಎಲ್ಲ ಪ್ರಶ್ನೆಗಳಿಗೂ ಉತ್ತರ ನನಗೆ ಗೊತ್ತಿದೆ, ಮತ್ತು ಆ ಪ್ರಶ್ನೆ ಉತ್ತರಗಳ ನಡುವೆ ಕಾಲದ ಹರಿವಿಲ್ಲ. ಹೀಗಿರುವಾಗ ನಿನ್ನ ಹತ್ತಿರ ಯಾವ ಕಾರಣಕ್ಕೆ ಸೌಜನ್ಯದ ಮಾತನಾಡಬೇಕು ನಾನು? ಪತ್ರ ಬರೆಯುವುದೆಂದರೆ ನಮ್ಮೊಳಗೆ ಆಳಕ್ಕೆ ಇಳಿದು, ಬೇರೆ ಯಾವ ರೀತಿಯಲ್ಲಿಯೂ ವ್ಯಕ್ತ ಪಡಿಸಲಾಗದಂತಹ ಸಂಗತಿಗಳನ್ನು ಅಕ್ಷರಗಳ ಮೂಲಕ ವ್ಯಕ್ತಪಡಿಸಲು ಪ್ರಯತ್ನಿಸುವುದು. ಏನೋ ಹೇಳಲು ಹೊರಟಿದ್ದೇನೆ ಎಂಬುದು ನನಗೆ ಗೊತ್ತಿದೆ, ಆದರೆ ಅದು ಹೇಗೆ ಬರುತ್ತದೆ ಎಂಬುದು ನನಗೆ ಗೊತ್ತಿಲ್ಲ. ನಿನಗೆ ಆಚಾರ್ಯ ಶಂಕರರ ಶಿಷ್ಯ ಪದ್ಮಪಾದನ ಕಥೆ ಗೊತ್ತಲ್ಲ? ಆತ ಶಂಕರರ ತೊಳೆದ ಬಟ್ಟೆಗಳನ್ನು ಕಲ್ಲಿನ ಮೇಲಿಟ್ಟಿದ್ದಾಗ ನದಿ ಉಕ್ಕಿ ಅವುಗಳನ್ನು ತೇಲಿಸಿಕೊಂಡು ಹೋಗುತ್ತದೆ, ಆತ ಆ ಉಕ್ಕಿದ ನದಿಯಲ್ಲಿ ನಡೆದು ಹೋಗಿ ಆ ಬಟ್ಟೆಗಳನ್ನು ತರುತ್ತಾನೆ. ಆತ ನದಿಯ ಮೇಲೆ ನಡೆಯಲು ಅನುವಾಗುವಂತೆ ಆತ ಪಾದ ಇಟ್ಟಲ್ಲಿ ಒಂದೊಂದು ಪದ್ಮ ಎದ್ದು ಆಸರೆ ನೀಡಿತಂತೆ. ಆತನಿಗೆ ತನ್ನ ಗುರುವಿನ ಮೇಲೆ ಗಾಢ ವಿಶ್ವಾಸ. ಹೀಗೆ ವಿಶ್ವಾಸವಿದ್ದವರನ್ನು ಪ್ರಕೃತಿಯೇ ಕಾಪಾಡುತ್ತದೆ ಎಂದು ಬೈಬಲ್ ಹೇಳುತ್ತದೆ. ಇದೇ ರೀತಿ, ಬರೆಯುವುದೆಂದರೆ ಹೀಗೇ ಒಂದು ಆಳವಾದ ವಿಶ್ವಾಸವನ್ನಿಟ್ಟುಕೊಂಡು ನದಿಯ ಮೇಲೆ ನಡೆದಂತೆ ಎಂಬುದು ಬರೆಯುವವರಿಗೆಲ್ಲ ಅನುಭವ ಆಗಿರಬೇಕು. ಬರೆಯುವ ಪಯಣದಲ್ಲಿ ಹೆಜ್ಜೆ ಹೆಜ್ಜೆಗೆ ಪದ್ಮಗಳು ಪಾದಕ್ಕೆ ತಾಕುತ್ತ ಗುರಿಯೆಡೆಗೆ ಕಳಿಸುತ್ತವೆ. ಕಾಲದ ಬಗ್ಗೆ ಹೇಳುತ್ತಿದ್ದೆನಲ್ಲವೇ?

ಹಿಡಿಯಲು ಪ್ರಯತ್ನಿಸದೇ ಇರುವಾಗ ಸುಮ್ಮನೇ ಗಾಳಿಯಂತೆ ಸುತ್ತ ಸುಳಿದಾಡಿಕೊಂಡಿರುತ್ತದೆ ಕಾಲ. ಆ ರೀತಿ ಕಾಲವನ್ನು ತನ್ನ ಪಾಡಿಗೆ ಬಿಟ್ಟು ನಮ್ಮ ಪಾಡಿಗೆ ನಾವು ಸುತ್ತಾಡಿಕೊಂಡಿದ್ದ ದಿನಗಳು ನಿನಗೆ ನೆನಪಾಗುವುದಿಲ್ಲವೇ? ಬಹುಶಃ ಸಸ್ಯಗಳು ಮತ್ತು ಪ್ರಾಣಿ-ಪಕ್ಷಿಗಳೆಲ್ಲ ಕಾಲದ ಕಟ್ಟು ಬಿಚ್ಚಿ ನಿರಾಳವಾಗಿರುತ್ತವೆ. ಹಾಗೆ ಮಾಡಲು ನನಗೆ ಸಾಧ್ಯವಾಗದಿರುವಾಗ ಜೀವನದ ಕುರಿತು ಒಂದು ಆಳವಾದ ವಿಶ್ವಾಸದ ಕೊರತೆ ಇದಕ್ಕೆ ಕಾರಣ ಅಂದುಕೊಳ್ಳುತ್ತೇನೆ. ನಾಲ್ಕು ಕಾಯಿ ಬಿಡುವ ಮತ್ತು ಸಾವಿರ ಕಾಯಿ ಬಿಡುವ ಎರಡು ಮಾವಿನ ಮರಗಳು ಅದು ಯಾವ ರೀತಿಯ ಭಿನ್ನ ಕಾರ್ಯಗಳನ್ನು ಮಾಡುತ್ತಿರುತ್ತವೆ ಎಂದು ಚಿಂತಿಸುತ್ತೇನೆ. ಈ ವ್ಯತ್ಯಾಸ ನಿಸರ್ಗದ ತಾರತಮ್ಯವೇ ಎಂದು ಕೂಡಾ. ನಾವಿಬ್ಬರೂ ಮಾವಿನ ಮರಗಳ ನಡುವೆ ಅಲೆಯುತ್ತಿದ್ದಾಗ ಇಂತಹ ಮಾತುಗಳನ್ನೆಲ್ಲ ಆಡಿಕೊಳ್ಳುತ್ತಿರಲಿಲ್ಲ. ಈಗ ಏನು ಇದೆಲ್ಲಾ ಎಂದು ಕೇಳಬೇಡ. ಈ ಎಲ್ಲ ಪ್ರಶ್ನೆಗಳಿಗೂ ದಾರಿ ಮಾಡುತ್ತಿರುವ ಮೂಲಭೂತ ಪ್ರಶ್ನೆಯೊಂದು ಹೃದಯದಲ್ಲಿದೆ, ಅದಕ್ಕೆ ಉತ್ತರ ದೊರಕುತ್ತಿಲ್ಲವಾಗಿ ಹೀಗೆ ಬೇರೆ ಬೇರೆ ಪ್ರಶ್ನೆಗಳು ಒಡೆದುಕೊಳ್ಳುತ್ತಿವೆ.

ನಿನ್ನೊಡನೆ ಇರುವಾಗ, ನಿನ್ನಿಂದ ದೂರ ಇರುವಾಗ, ಬೆಳದಿಂಗಳ ಬಯಲಿನಲ್ಲಿ, ಉರಿಬಿಸಿಲಿನಲ್ಲಿ, ಇಲ್ಲಿ ವಾಹನಗಳ ದಟ್ಟಣೆಯ ನಡುವೆ ಉಸಿರು ಹಿಡಿದು ನಿಂತಾಗಲೂ ಕಾಡುವ ಪ್ರಶ್ನೆ ಅದೇ. ಆದರೆ ನಾವು ಪರೀಕ್ಷೆಯಲ್ಲಿ ಪ್ರಶ್ನೆಗೊಂದು ಉತ್ತರ ಬರೆದಂತೆ ಜೀವನದ ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ. ಜೀವನದ ಪ್ರಶ್ನೆಗಳಿಗೆಲ್ಲ ಉತ್ತರ ಘಟಿಸಬೇಕು, ಜೀವಂತವಾಗಿ ಸಂಭವಿಸಬೇಕು. ನಮ್ಮ ಯಾವ ಕಲ್ಪನೆಗೂ, ಕನಸಿಗೂ ನಿಲುಕದ, ಈ ವಿರಾಟ್ ಅಸ್ತಿತ್ವದ ಎದುರು ನಿಂತು ನನ್ನದೆಯೆ ಪ್ರಶ್ನೆಗಳನ್ನು ಸುಮ್ಮನೇ ಕಾಗದದ ದೋಣಿಯಂತೆ ತೇಲಿಬಿಡುತ್ತೇನೆ. ಪೀತಾಂಬರ ತೊಟ್ಟವನೊಬ್ಬ ಎದುರು ಬಂದು ಉತ್ತರ ಹೇಳುವುದಿಲ್ಲ, ನನಗೆ ಗೊತ್ತು. ಉತ್ತರವನ್ನು ಅವನು ಎಲ್ಲೋ ಒಂದು ಹೂವಾಗಿ ಅರಳಿಸಿ ಮಾಯವಾಗಿಬಿಡುತ್ತಾನೆ. ಆ ಅರಳು ಹೂವನ್ನು ಕಂಡುಕೊಳ್ಳುವ ಜವಾಬ್ದಾರಿ ನಮ್ಮದು. ಆದರೆ ಪ್ರಶ್ನೆಗಳೇ ಇಲ್ಲದಿದ್ದರೆ? ಆಗ ಅರಳಿದ ಹೂವುಗಳೆಲ್ಲ ಅವನು ನಮಗೆ ನೀಡಿದ ಉತ್ತರವೇ. ಆದರೆ ನಮ್ಮ ಆಸೆ-ನಿರಾಸೆಗಳು ಭಗವಂತ ನೀಡಿದ ಉತ್ತರವನ್ನೂ ತಾರತಮ್ಯತೆಯಿಂದ ನೋಡುತ್ತವೆ ಅಲ್ಲವೇ?

ಹೀಗೆ ಹುಟ್ಟುವ ತರತಮವನ್ನು ಮೀರುವಲ್ಲಿಯೇ ಕಾವ್ಯ ಹುಟ್ಟುತ್ತದೆ ಎಂದು ನನಗನ್ನಿಸುತ್ತದೆ. ಈ ತರತಮವನ್ನು ಮೀರಿದ ಕ್ಷಣದಲ್ಲಿ ಕಾಲದ ಪರದೆಯೂ ಸರಿಯುತ್ತದೆ. ಈ ಕಾಲದ ಪರೆದೆ ಸರಿದಾಗ ಇಡೀ ಅಸ್ತಿತ್ವ ತೆರೆದುಕೊಳ್ಳುತ್ತದೆ, ಅಥವಾ ಯಾವಾಗಲೂ ತೆರೆದುಕೊಂಡೇ ಇರುವ ಅಸ್ತಿತ್ವದೆಡೆಗೆ ಕಾವ್ಯಾಭ್ಯಾಸಿ ಕಣ್ಣು ತೆರೆಯುತ್ತಾನೆ. ಈ ತೆರೆದುಕೊಂಡ ಕ್ಷಣದಲ್ಲಿ ಕವಿ ಹುಟ್ಟುತ್ತಾನೆ, ಮತ್ತು ಕಾವ್ಯವೂ ಹುಟ್ಟುತ್ತದೆ. ಅದೊಂದು ಮಿಂಚು ಸಂಚಾರಗೊಂಡ ಕ್ಷಣ. ಕಾವ್ಯದ ಅವಿರ್ಭಾವವಾದ ನಂತರ ಕವಿ ಆ ಅಸ್ತಿತ್ವದಲ್ಲಿ ಕಳೆದುಹೋಗಿ ಕೇವಲ ಕಾವ್ಯಾಭ್ಯಾಸಿ ಮಾತ್ರ ಉಳಿದುಕೊಳ್ಳುತ್ತಾನೆ. ಅಸ್ತಿತ್ವ ಆ ಒಂದು ಕ್ಷಣದಲ್ಲಿ ಕವಿಯ ಬೆಳಕಿನ ದೇಹವನ್ನು ದಾನ ಮಾಡಿ ಕಾವ್ಯದ ಜೇನನ್ನು ಪಡೆದುಕೊಳ್ಳಲು ಬಿಟ್ಟು, ಕಾವ್ಯ ಲಭ್ಯವಾಗುತ್ತಿದ್ದಂತೆಯೇ ಬೆಳಕಿನ ದೇಹವನ್ನು ಕಳೆದುಕೊಂಡು ಆತ ಸಾಮಾನ್ಯ ಕಾವ್ಯಾಭ್ಯಾಸಿಯಾಗಿ, ಆದರೆ ಬೊಗಸೆಯಲ್ಲಿ ಕಾವ್ಯದ ಜೇನನ್ನ ಹಿಡಿದುಕೊಂಡು ಇಹಕ್ಕೆ ಮರಳುತ್ತಾನೆ. ನಿನಗೆ ಬಾಲ್ಯದಲ್ಲಿ ಓದುತ್ತಿದ್ದ, ಮತ್ತು ನಾವೇ ಕಲ್ಪಿಸಿಕೊಳ್ಳುತಿದ್ದ ರೋಮಾಂಚಕಾರಿ ಕಥೆಗಳು ನೆನಪಿಲ್ಲವೇ? ರಾಜಕುಮಾರನೊಬ್ಬ ಅಮೃತವನ್ನು ತರಲು ಹೋಗುತ್ತಾನೆ, ಅಮೃತದ ಬಿಂದಿಗೆಯನ್ನು ಮುಟ್ಟಬೇಕಾದರೆ ಅವನಿಗೆ ಬೆಳಕಿನ ಕವಚ ಬೇಕಾಗುತ್ತದೆ, ಅದಿಲ್ಲದೇ ಅವನಿಗೆ ಅದನ್ನು ಮುಟ್ಟಲೂ ಸಾಧ್ಯವಾಗುವುದಿಲ್ಲ. ಅದನ್ನು ಧರಿಸಿ ಅಮೃತದ ಬಿಂದಿಗೆಯಿಂದ ಮೊಗೆದುಕೊಂಡು ಮರಳುತ್ತಾನೆ. ಕವಿ ಅನ್ನುವುದು ಅಂತಹ ಕವಚ. ಕಾವ್ಯ ರಚನೆಯಾದ ನಂತರ ಆ ಕವಚ ಕಳೆದುಹೋಗಿಬಿಡುತ್ತದೆ. ಹಾಗಾಗಿ ಯಾರನ್ನಾದರೂ ಕಾವ್ಯಾಭ್ಯಾಸಿ ಅನ್ನಬೇಕೇ ಹೊರತೂ ಕವಿ ಅನ್ನಬಾರದು ಎನ್ನುವುದು ನನ್ನ ವಾದ. ನಿನಗೇನನ್ನಿಸುತ್ತದೆ? ಕವಿ ಅಂತ ಕರೆಸಿಕೊಳ್ಳುವುದಕ್ಕೆ ಅತ್ಯಂತ ವಿಚಿತ್ರ ಮುಜುಗರ ಮತ್ತು ರಗಳೆ ನನಗಾಗುತ್ತದೆ. ಬಹುಶಃ ಅದು ಇದೇ ಕಾರಣಕ್ಕಿರಬೇಕು.

ಆದರೆ ಬೇಕೆಂದಾಗ ಈ ಕವಚ ಲಭ್ಯವಾಗುವುದಿಲ್ಲ. ಅದಕ್ಕಾಗಿ ಆಳವಾದ ಪ್ರತೀಕ್ಷೆ ಬೇಕಾಗುತ್ತದೆ. ಬಹುಶಃ ಇಂತಹ ಆಳವಾದ ಪ್ರತೀಕ್ಷೆಯೇ ಕಾವ್ಯಾಭ್ಯಾಸಿ ಮಾಡಬಹುದಾದ ಮುಖ್ಯ ಪ್ರಯತ್ನಗಳಲ್ಲಿ ಒಂದು ಎಂದು ನಾನಂದುಕೊಳ್ಳುತ್ತೇನೆ. ಆದರೆ ಈ ಪ್ರತೀಕ್ಷೆಯೂ ಸುಲಭವಾದುದಲ್ಲ, ಅದೂ ಒಂದು ರೀತಿಯ ಸಮುದ್ರ ಮಥನವೇ. ಈ ಪ್ರತೀಕ್ಷಾ ಕಾಲದಲ್ಲಿ ಅನೇಕ ಸಂಗತಿಗಳು ಹುಟ್ಟತೊಡಗುತ್ತವೆ. ಬೌದ್ಧಿಕ ಚಿಂತನೆಗಳು, ಅಭಿಪ್ರಾಯಗಳು, ತಲೆಬುಡವಿಲ್ಲದ ಕಲ್ಪನೆಗಳು, ಇವೆಲ್ಲವೂ ನಾವು ಈಗಾಗಲೇ ನಮ್ಮ ಬೌದ್ಧಿಕತೆಯ ಭಾಗವಾಗಿಸಿಕೊಂಡ ಸಂಗತಿಗಳು. ಇವು ಯಾವುವೂ ಕಾವ್ಯವನ್ನು ನೀಡುವುದಿಲ್ಲ. ಯಾವುದನ್ನು ಗದ್ಯವಾಗಿಸಬಹುದೋ ಅದನ್ನು ಕಾವ್ಯವಾಗಿಸುವುದನ್ನು ನಾನು ಒಪ್ಪುವುದಿಲ್ಲ. ಯಾವುದು ನಮ್ಮ ಬೌದ್ಧಿಕ ಅಳತೆಗೆ ಸಿಕ್ಕಿದೆಯೋ ಅದನ್ನ ಕಾವ್ಯವಾಗಿಸಬಾರದು, ಅದು ಕಾವ್ಯ ಆಗುವುದೂ ಇಲ್ಲ. ನನ್ನ ತಿಳುವಳಿಕೆಯ ಸರಹದ್ದನ್ನ ದಾಟಿ ಅಸ್ತಿತ್ವದಿಂದ ಬಂದರೇ ಅದು ಕಾವ್ಯಕ್ಕೆ ಸರಕು ಎಂಬುದು ನನ್ನ ಅಭಿಮತ.

ಈ ಬೌದ್ಧಿಕ ಕಾಲ್ಪನಿಕ ಸಂಗತಿಗಳೇ ಅಲ್ಲದೇ ಹಳೆಯ ಕವಿಗಳ ಕಾವ್ಯ ಪರಿಕರಗಳೂ ಎದ್ದು ಬರುತ್ತವೆ. ಅವೇ ಹಳೆಯ ಪದಗುಚ್ಛಗಳು ಮತ್ತು ಪ್ರತಿಮೆಗಳು. ಎಷ್ಟೇ ಪ್ರೀತಿಕರವಾಗಿದ್ದರೂ ಇವುಗಳನ್ನು ಒಡೆದು ಹಾಕುವುದು ನನಗೆ ಅತ್ಯಂತ ಅನಿವಾರ್ಯವೆನ್ನಿಸಿರುವ ಸಂಕಟದ ಸ್ಥಿತಿ. ಈವರೆಗೆ ನಾನು ನಿನಗೆ ಹೇಳಬೇಕೆಂದು ಬಯಸಿದ್ದೂ ಇದನ್ನೇ. ಸ್ವಾನುಭಾವಕ್ಕಾಗಿನ ತಹತಹದ ಜೊತೆ ಪರರ ಅನುಭವದ ಮೂರ್ತಿಯನ್ನು ಮುರಿಯುವ ಮತ್ತು ನನ್ನದೇ ಆದ ರೀತಿಯಲ್ಲಿ ಕಟ್ಟುವ ಅನಿವಾರ್ಯತೆಯ ಸಂಕಟ. ಪತ್ರದಲ್ಲಿ ಇಂತಹ ಅಸ್ತಿತ್ವದ ಪ್ರಶ್ನೆಯೇ ಆದಂತಹ ಸಂಕಟಗಳನ್ನು ಹೇಳಿಕೊಳ್ಳಲಾಗದಿದ್ದರೆ ಪತ್ರಕ್ಕೆ ಏನು ಮೌಲ್ಯ? ಇಂತಹ ಎದೆಯ ಸಂಕಟಗಳನ್ನು ಹೇಳಿಕೊಳ್ಳಲಾಗದಿದ್ದರೆ ನಿನ್ನೊಂದಿಗೆ ಮನಸ್ಸು ತೆರೆದುಕೊಳ್ಳುವುದು ಎಂದು ಯಾವುದಕ್ಕೆ ಹೇಳುವುದು?

ಸಮಾಜ ಅಂದರೆ ಏನು ಗೊತ್ತಾ ನಿನಗೆ? ಅದು ಒಂದಷ್ಟು ಚಿಂತನೆಗಳ, ನಂಬಿಕೆಗಳ ಗುಂಪು. ನಂಬಿಕೆಗಳು ಬದಲಾಗುತ್ತಿದ್ದಂತೆಯೇ ಸಮಾಜದ ರೀತಿನೀತಿಗಳೂ ಬದಲಾಗುತ್ತವೆ. ನಾವು ಎಷ್ಟೇ ಹಠ ಹಿಡಿದರೂ ಈ ನಾವು ಕಟ್ಟಿಕೊಂಡ ಮೌಲ್ಯಗಳು ಬದಲಾಗುತ್ತ ಸಮಾಜವೂ ಬದಲಾಗುತ್ತದೆ. ಆದರೆ ಕಾವ್ಯಾಭ್ಯಾಸಿಯಾದವನು ಈ ಸಮಾಜ ತನ್ನ ಮೇಲೆ ಹೊದ್ದುಕೊಂಡ, ರೂಢಿಗತವಾದ, ಸ್ವಯಂ ಚೈತನ್ಯವೇನೂ ಇರದ ಮತ್ತು ಅಭ್ಯಾಸವಾಗಿಬಿಟ್ಟ ಮೌಲ್ಯಗಳನ್ನು ಮೀರಿ ನೋಡಲು ಪ್ರಯತ್ನಿಸುತ್ತಾನೆ. ಅವನು ರೂಢಿಗತವಾಗಿ ಜಡವಾದುದನ್ನು ಬಿಟ್ಟು ಅಸ್ತಿತ್ವದಲ್ಲಿ ಚೈತನ್ಯದಾಯಕವಾದುದಕ್ಕಾಗಿ ಹುಡುಕುತ್ತಾನೆ ಮತ್ತು ಸಮಾಜದ ರೂಢಿಗತವಾದ ಜಡತ್ವವನ್ನು ವಿರೋಧಿಸುತ್ತಾನೆ ಮತ್ತು ದಿಕ್ಕರಿಸುತ್ತಾನೆ. ಹೀಗೆ ಮಾಡುವ ಮೂಲಕವೇ ಕವಿ ತನ್ನ ಚೈತನ್ಯವನ್ನು ಉಳಿಸಿಕೊಳ್ಳುತ್ತಾನೆ, ಚೈತನ್ಯದ ಮೂಲವನ್ನು ಕಂಡುಕೊಳ್ಳುತ್ತಾನೆ ಮತ್ತು ತಾನು ಕಂಡುಕೊಂಡ ಚೈತನ್ಯದಿಂದ ಸಮಾಜಕ್ಕೆ ಚೈತನ್ಯ ತುಂಬುತ್ತಾನೆ. ಹಾಗಾಗಿ ಕವಿ ಸಮಾಜ ವಿರೋಧಿಯಾಗುವುದು ಅವನ ಅಸ್ತಿತ್ವಕ್ಕೆ ಅತ್ಯಂತ ಅನಿವಾರ್ಯ ಮತ್ತು ಸಮಾಜದ ಒಳಿತಿಗಾಗಿ ಅದು ಅತ್ಯಗತ್ಯ. ಹಾಗಾಗಿ ಸಮಾಜಕ್ಕೆ ಕವಿ ಬೇಕು. ಆದರೆ ಕವಿ ದಿವ್ಯದೆಡೆಗೆ ಕೈಚಾಚುತ್ತಲೇ ಇರಬೇಕು ಮತ್ತು ಸಮಾಜದಲ್ಲಿದ್ದೂ ಇಲ್ಲದಂತೆ ಇರಬೇಕು. ಇದು ಮತ್ತೊಂದು ಸಂಕಟ.

ಹೆಣ್ಣು ನೀನು, ಪ್ರತಿನಿತ್ಯದ ಸಂಕಟಗಳು ನಿನಗೆ ಅರ್ಥವಾಗುತ್ತವೆ. ನೀನೂ ಒಂದಿಷ್ಟು ಸಂಕಟಪಟ್ಟುಕೊಳ್ಳುತ್ತೀಯ. ಆದರೆ ನಿನಗೆ ಇಂತಹ ಸಂಕಟಗಳೂ ಅರ್ಥವಾಗಬೇಕು. ಆ ಕಾರಣಕ್ಕೆ ಇದನ್ನೆಲ್ಲ ಹೇಳಿದೆ ಅಷ್ಟೇ. ಪ್ರೀತಿಯಿಂದ…

Leave a Reply

Your email address will not be published. Required fields are marked *