೧
ಈ ಚಳಿಯಲ್ಲಿಯೂ ಬಾಡಿದ್ದಾಳೆ
ಬಯಲ ಹೂವಂತೆ ಕುಳಿತಿದ್ದಾಳೆ.
ನಿಟ್ಟುಸಿರು ಬಿಸಿನೀರ ಬುಗ್ಗೆಯಂತೆ!
೨
ಎಷ್ಟು ಬಾರಿ ನೋಡಿಲ್ಲ
ಅಂತಹ ಸುಂದರಿ ಅಂತೇನೂ ಅನ್ನಿಸಲಿಲ್ಲ
ಪ್ರೀತಿ ಹುಟ್ಟುವವರೆಗೂ!
೩
ಅರ್ಧ ಮೆಟ್ಟಿಲಿಗೇ ದಣಿವಾಗಿದೆ
ಕುಳಿತಲ್ಲಿಂದ ಗೋಪುರ ಮಾತ್ರ ಕಾಣುತ್ತಿದೆ
ಹೃದಯದೊಳಗೆ ತಂಗಾಳಿ.
೪
ಕನ್ನಡಿಯಲ್ಲಿ ತನ್ನನ್ನಷ್ಟೇ ಅಲ್ಲ
ತನ್ನ ನೋಡುವನನ್ನೂ ನೋಡಿಕೊಳ್ಳುತ್ತಾಳೆ
ಸುಂದರಿಯಾಗುತ್ತಾಳೆ.
೫
ಎಲೆ ಬಿದ್ದು ತೇಲುತ್ತಿದೆ
ಜೀವ ಹಿಡಿದಿಟ್ಟುಕೊಂಡಿತ್ತು ರೆಂಬೆಯಲ್ಲಿ
ಈಗ ದೈವ ನಡೆಸಿದ ಕಡೆಗೆ.
೬
ಹಸಿ ಮೈಯಿ, ಹಸಿ ಮನಸು
ನೆಲವಲ್ಲ ನಡು ಡೊಂಕು
ಪ್ರತಿ ಹೆಜ್ಜೆಗೆ ಕೊಡ ತುಳುಕುತ್ತದೆ.
೭
ಕಾಡಲ್ಲಿ ನಡೆಯುತ್ತಿದ್ದಾನೆ
ಮೈಯಿಲ್ಲ ಮನಸಿಲ್ಲ
ಕಾಡು ಹೀರಿ ಕಾಡಾಗುತ್ತಿದ್ದಾನೆ.
೮
ಕೆಂಪು ಹಣ್ಣಿನಂತಹ ಸೂರ್ಯ
ಹಿಡಿಯಬೇಕೆಂದು ಹಾರಿದ ಹನುಮ
ತಲುಪುವಷ್ಟರಲ್ಲಿ ಮೇಲೇರಿಬಿಟ್ಟಿದ್ದಾನೆ.
೯
ಗಂಟೆಗಟ್ಟಲೇ ಕನ್ನಡಿ ಮುಂದೆ ಕುಳಿತು
ಕಸರತ್ತು ನಡೆಸಿದ ಹುಡುಗಿ ಸಫಲವಾಗಿ
ಸೌಂದರ್ಯ ಕೆಡಿಸಿಕೊಂಡಿದ್ದಾಳೆ.
೧೦
ತೆರೆದ ಬಾಗಿಲ ದಾರಿ ಶಾಲೆವರೆಗೂ
ಒಲೆಯ ಮೇಲೆ ಬೆಂದ ಅನ್ನ
ಕಾದ ತಾಯಿ ಹೃದಯ ಭಾರ
೧೧
ನಗರ, ಸಂದಣಿ, ವಾಹನ, ವೇಗ
ನಡೆಯುವವ ಒಮ್ಮೆಲೇ ನಿಲ್ಲುತ್ತಾನೆ
ತನ್ನೊಳಗಿನ ನಿಶ್ಚಲತೆ ತಾಕಿ.
೧೨
ಹೊಂಚಿ ನಿಂತ ತೋಳಕ್ಕೆ ಕೂಗಿ ಹೇಳುತ್ತಾನೆ.
ನಾನು ಕುರುಬ ಅಷ್ಟೇ.
ಕುರಿ ಕಾಯುವವ ಗುಡಿಯ ಬೀರಪ್ಪ.
೧೩
ಚೌಟಗಿ ನುಡಿಸಿ ಹಾಡುತ್ತಿದ್ದಾನೆ ಜೋಗಿ
ನಂದಿ ಮೇವು ಮರೆತು ನೋಡುತ್ತಿದೆ
ಶಿವ ಮಾಯಾವಿ ಬಯಲಲ್ಲೆ ಕರಗಿದ್ದಾನೆ.
>wonderful expression !
>Thank you Venu..
>ರಘು ನಿಮ್ಮ ಬ್ಲಾಗ್ ನೋಡಿರ್ಲಿಲ್ಲ…ಖುಷಿಯಾಯ್ತು. ಕಾವ್ಯದ ಬಗ್ಗೆ ಇರುವ ನಿಮ್ಮ ಒಲವು ನೋಡಿ ನಾನು ಧನ್ಯ. ಹಾಯ್ಕುಗಳು ಚೆನ್ನಾಗಿವೆ. ಪದ್ಯಗಳ ಅನುವಾದ ಕೂಡ.. ಬರೆಯುತ್ತಿರಿ…-ಕುಮಾರ್