ಅವರು ತಂದೆಯ ಕುರಿತು ಮಾತನಾಡಿದ್ದರು…

“ಅವರು ಆಸ್ಪತ್ರೆಗೆ ಸೇರಿದ್ದರು. ನನಗೆ ಒಂದೇ ಅತಂಕವಿತ್ತು. ಅವರೇನಾದರೂ ಆತ್ಮಸಾಕ್ಷಾತ್ಕಾರವಾಗದೇ ಸತ್ತುಬಿಟ್ಟಿದ್ದರೆ?

ಒಂದು ವೇಳೆ ಸತ್ತು ಬಿಟ್ಟಿದ್ದರೆ, ನಿಮಗೆಲ್ಲ ಒಂದು ವಿಶ್ವಾಸ ಕಳೆದು ಹೋಗುತ್ತಿತ್ತು. ಅವರಂತಹ ವ್ಯಕ್ತಿಯೇ ಸಂಬುದ್ಧತ್ವ ಪಡೆಯದೇ ಸತ್ತುಹೋಗಿದ್ದರೆ, ನಿಮ್ಮ ಕುರಿತು ನಾನು ನಿರಾಶನಾಗಬೇಕಾಗುತ್ತಿತ್ತು. ಏಕೆಂದರೆ ಅವರು ಅಂತಹ ವ್ಯಕ್ತಿಯಾಗಿದ್ದರು…
 
“ಅವರು ನನ್ನ ತಂದೆಯಾಗಿದ್ದರು ಅನ್ನುವ ಕಾರಣಕ್ಕೆ ಈ ಮಾತನ್ನು ಹೇಳುತ್ತಿಲ್ಲ, ಆದರೆ ಅವರು ಅಂತಹ ವ್ಯಕ್ತಿಯಾಗಿದ್ದರು. ಚಿಕ್ಕವನಿದ್ದಾಗ, ನಾನು ತುಂಬ ಉದ್ದ ತಲೆಗೂದಲನ್ನು ಬಿಟ್ಟಿರುತ್ತಿದ್ದೆ. ಅದು ನನ್ನ ತಂದೆಗೆ ಇಷ್ಟವಾಗುತ್ತಿರಲಿಲ್ಲ. ಅಲ್ಲದೇ ಊರಿನವರೆಲ್ಲ ಅವರನ್ನು ಕೇಳುತ್ತಿದ್ದರು, “ಯಾಕೆ ನಿಮ್ಮ ಮಗ ಹೀಗೆ ಕೂದಲು ಬಿಟ್ಟಿರುತ್ತಾನೆ” ಎಂದು. ಯಾವಾಗಲೂ ಅವರು ಹೇಳುತ್ತಿದ್ದರು, ಕೂದಲನ್ನು ಸಣ್ಣದಾಗಿ ಮಾಡಿಸಿಕೊ ಎಂದು. ಒಂದು ದಿನ ಅವರು, ನನ್ನನ್ನು ಕರೆದುಕೊಂಡು ಹೋಗಿ ನನ್ನ ತಲೆಗೂದಲನ್ನು ಸಣ್ಣದಾಗಿ ಮಾಡಿಸಿಕೊಂಡು ಬಂದರು. ಆದರೆ ನಾನು ಆಮೇಲೆ ಹೋಗಿ ಸಂಪೂರ್ಣವಾಗಿ ತೆಗೆಸಿಕೊಂಡು ಬಂದಿದ್ದೆ. ಮತ್ತೆ ಸಮಸ್ಯೆ ಪ್ರಾರಂಭವಾಗಿತ್ತು. ಊರಿನ ಜನರೆಲ್ಲ ಅಂದುಕೊಂಡುಬಿಟ್ಟಿದ್ದರು ನನ್ನ ತಂದೆ ಹೋಗಿಬಿಟ್ಟಿರಬೇಕೆಂದು. ಹಾಗೆ ಕೂದಲು ತೆಗೆಸುವುದು ಅಶುಭಸೂಚಕವಾಗಿತ್ತು. ಆದರೇನು, ನಾನು ನಿರ್ಧರಿಸಿಬಿಟ್ಟಿದ್ದೆ, ಇದ್ದರೆ ಪೂರ್ತಿ ಉದ್ದ
ವಾಗಿ ಬೆಳೆಯಬೇಕು, ಇಲ್ಲವೇ ಸ್ವಲ್ಪವೂ ಇರಬಾರದು. ಅದನ್ನು ನನ್ನ ತಂದೆಗೂ ಹೇಳಿಬಿಟ್ಟೆ. ಅದೇ ಕೊನೆ. ಆನಂತರದಲ್ಲಿ ಅವರು ಯಾವತ್ತೂ ನನಗೆ ಹೀಗೆ ಮಾಡು ಎಂದು ಯಾವುದಕ್ಕೂ ಒತ್ತಾಯಿಸಲಿಲ್ಲ.
 
“ಇನ್ನು ನಾನು ವಿಶ್ವವಿದ್ಯಾಲಯದಿಂದ ಬಂದ ಮೇಲೂ ಕೂಡಾ ಅವರು ನನಗೆ ಯಾವುದನ್ನೂ ಮಾಡಲು ಹೇಳಲಿಲ್ಲ. ನನಗೆ ಮದುವೆಯಾಗು ಎಂದು ಹೇಳಬೇಕೆಂದುಕೊಂಡಿದ್ದರು ಅವರು. ಆದರೆ, ಅವರು ಒಂದು ಹೇಳಿ ನೋಡುವ ಸಾಹಸಕ್ಕೆ ಕೈ ಹಾಕಲಿಲ್ಲ. ಏಕೆಂದರೆ, ನಾನು ಒಮ್ಮೆ ಇಲ್ಲ ಅಂದುಬಿಟ್ಟರೆ ಅದು ಮತ್ತೆ ಆಗುವುದಿಲ್ಲ ಎಂಬುದು ಅವರಿಗೆ ತಿಳಿದಿತ್ತು. ಹಾಗಾಗಿ, ಅವರು ತಮ್ಮ ಗೆಳೆಯರಿಂದ ಹೇಳಿಸಿ ನೋಡುತ್ತಿದ್ದರೇ ವಿನಃ ತಾವೇ ಯಾವತ್ತೂ ಹೇಳಲಿಲ್ಲ. ಅವರ ಗೆಳೆಯರು ನನಗೆ ಹೇಳಿದಾಗ ನಾನು, “ನೀವು ಯಾಕೆ ಹೇಳುತ್ತೀರಿ, ಇದು ತಂದೆ ಮಗನ ವಿಚಾರ. ಅವರೇ ಹೇಳಲಿ ಅನ್ನುತ್ತಿದ್ದೆ. ಅವರು ಹೇಳಲಿಲ್ಲ, ನನಗೆ
ಮದುವೆಯೂ ಆಗಲಿಲ್ಲ…:-)!”
 
“ಅವರು ನಿಜಕ್ಕೂ ಅಪರೂಪದ ವ್ಯಕ್ತಿಯಾಗಿದ್ದರು. ಮತ್ತು ಅಂತಹ ತಂದೆ ಇರುವುದೂ ಅಪರೂಪವೇ! ಒಬ್ಬ ತಂದೆ ತನ್ನ ಮಗನ ಶಿಷ್ಯನಾಗುವುದು: ಅದು ನಿಜಕ್ಕೂ ಅಪರೂಪ. ಇತಿಹಾಸದಲ್ಲಿಯೇ ಇದೊಂದು ಅಪರೂಪದ ಘಟನೆ. ಮತ್ತು ಒಮ್ಮೆ ಶಿಷ್ಯನಾದ ಬಳಿಕ ಅವರು ಯಾವತ್ತೂ ತಂದೆಯಾಗಿ ವರ್ತಿಸಲಿಲ್ಲ, ಶಿಷ್ಯನಾಗಿ
ಯೇ ವರ್ತಿಸಿದರು. ಜೀಸಸ್‌ನ ತಂದೆ ಆ ಧೈರ್ಯ ಮಾಡಲಿಲ್ಲ. ಬುದ್ಧನ ತಂದೆ ಅನೇಕ ವರ್ಷಗಳ ವರೆಗೆ ಹಿಂಜರಿದ. ನನ್ನ ತಂದೆ ಅನೇಕ ವರ್ಷಗಳ ವರೆಗೆ ಧ್ಯಾನ ಮಾಡುತ್ತಲೇ ಇದ್ದರು. ಪ್ರತಿದಿನ ಸುಮಾರು ಮೂರು ಗಂಟೆಗಳ ಕಾಲ, ಮುಂಜಾನೆ ಮೂರರಿಂದ ಆರರ ತನಕ. ಮತ್ತು ಆಸ್ಪತ್ರೆಯಲ್ಲಿದ್ದಾಗಲೂ. ಹೀಗೆ ಧ್ಯಾನ ಮಾಡುತ್ತಾ ಮಾಡುತ್ತಾ.. ಕೊನೆಯ ದಿನ ಅವರಿಗೆ ಅದು ಸಾಧ್ಯವಾಯಿತು. ಅವರು ಸಂಪೂರ್ಣವಾಗಿ ಪರಿಶುದ್ಧರಾದರು. ಬುದ್ಧರಾದರು. ಮನುಷ್ಯನಿಗೆ ಅದಕ್ಕಿಂತ ಇನ್ನೇನು ಬೇಕು?
 
“ಅವರೊಬ್ಬ ಅಪರೂಪದ ತಂದೆಯಾಗಿದ್ದರು. ಅವರು ತಂದೆಯಾಗಿದ್ದರೂ ಕೂಡಾ ಶಿಷ್ಯನಾದ ತಕ್ಷಣ ತನ್ನ ಮಗನ ಪಾದವನ್ನೇ ಸ್ಪರ್ಶಿಸಿದರು ಮತ್ತು ಮಗನ ಶಿಷ್ಯನಾಗಿ ಉಳಿದರು. ಆ ಶ್ರೇಷ್ಠತೆ ಅವರಲ್ಲಿತ್ತು. ಅವರು ಪಾದ ಸ್ಪರ್ಶ ಮಾಡಲು ಬಯಸಿದಾಗ ನಾನು ಹೇಳಿದೆ, “ಎಷ್ಟಾದರೂ, ನೀವು ನನ್ನ ತಂದೆ. ತಂದೆಯೊಬ್ಬ ಮಗನ ಪಾದವನ್ನು ಸ್ಪರ್ಶಿಸಬಾರದು.” ಆದರೆ ಅವರು “ತಾನು ಈಗ ಶಿಷ್ಯನಾಗಿದ್ದೇನೆ” ಎಂದು ಹೇಳಿದರು. ಮತ್ತು ಅದು ಕೊನೆಯ ಬಾರಿಯಾಗಿತ್ತು. ನಾನು ಮತ್ತೆ ಅವರಿಗೆ
ಹಾಗೆ ಮಾಡಲು ಬಿಡಲಿಲ್ಲ.
 
ಅವರು ಆಸ್ಪತ್ರೆಯಲ್ಲಿದ್ದ ಒಂದು ತಿಂಗಳಲ್ಲಿ ನಾನು ಕೇವಲ ಮೂರು ಬಾರಿ ಅವರನ್ನು ನೋಡಲು ಹೋಗಿದ್ದೆ. ನನಗೆ ಯಾವಾಗ ಅವರು ಸಾವಿನ ಹತ್ತಿರವಿದ್ದಾರೆ ಅನ್ನಿಸುತ್ತಿತ್ತು, ಆಗ ನಾನು ಅವರನ್ನು ನೋಡಲು ಹೋಗುತ್ತಿದ್ದೆ. ಮೊದಲ ಎರಡು ಬಾರಿ ನಾನು ಹೋದಾಗಲೂ ನನಗೆ ತುಸು ಭಯವಾಗಿತ್ತು, ಅವರು ತೀರಿಕೊಂಡರೆ ಮತ್ತೆ ಹುಟ್ಟುತ್ತಾರೆಂಬ ಭಯವಿತ್ತು. ಏಕೆಂದರೆ ಅವರ ಧ್ಯಾನ ಪ್ರತಿದಿನವೂ ಆಳಕ್ಕೆ ಹೋಗುತ್ತಾ ಇದ್ದರೂ ಅವರಲ್ಲಿ ಆಗ ದೇಹದೊಂದಿಗೆ ಇನ್ನೂ ಅಂಟಿಕೊಂಡಿದ್ದರು. ಒಂದು ದಿನ ಮುಂಜಾನೆ ಮೂರು ಗಂಟೆಯ ಹೊತ್ತಿಗೆ ಅವರಿಗೆ ಭಗವತ್ತೆಯ ಮೊದಲ ದರ್ಶನವಾಯಿತು, ಮತ್ತು ಆ ಕ್ಷಣದಲ್ಲಿಯೇ ಅವರಿಗೆ ಅನಿಸಿತು, ತಾನು ದೇಹ ತ್ಯಾಗ ಮಾಡುವವನಿದ್ದೇನೆ ಎಂದು. ಆಗ ಅದೇ ಮೊದಲ ಬಾರಿಗೆ ಅವರು ನನಗೆ ಬರಲು ಹೇಳಿ ಕಳು
ಹಿಸಿದ್ದರು. ಆ ಮೊದಲೆರಡು ಬಾರಿ ನಾನೇ ಹೋಗಿದ್ದೆ. ಅವರು ನನಗೆ ಕೊನೆಯ ವಿದಾಯ ಹೇಳಲು ಕರೆಸಿದ್ದರು, ಮತ್ತು ಯಾವುದೇ ಕಣ್ಣೀರು, ಜೀವನಕ್ಕಾಗಿ ಹಂಬಲ ಅವರಲ್ಲಿ ಇರಲಿಲ್ಲ. ಹಾಗಾಗಿ ಅವರ ಸಾವು ಸಾವಾಗಿರದೇ ಅನಂತತೆಯ ದಿಕ್ಕಿನಿಂದ ಹೊಸ ಜನನವೇ ಆಗಿತ್ತು.
“ಅವರು ಬುದ್ಧತ್ವವನ್ನು ಪಡೆದು ದೇಹತ್ಯಾಗ ಮಾಡಿದ್ದರು. ನಾನು ಹಾಗೆಯೇ ನನ್ನ ಸನ್ಯಾಸಿಗಳೆಲ್ಲ ದೇಹತ್ಯಾಗ ಮಾಡಬೇಕೆಂದು ಬಯಸುತ್ತೇನೆ. ನೀವು ಭಗವತ್ತೆಯನ್ನು ಪಡೆಯದಿದ್ದರೆ ಜೀವನ ಅಷ್ಟು ಅಸಹ್ಯದ್ದಾಗಿಬಿಡುತ್ತದೆ. ನೀವು ಸಾಕ್ಷಾತ್ಕಾರ
ಪಡೆದವರಾದರೆ ನಿಮ್ಮ ಸಾವು ದೈವದೆಡೆಗೆ ದಾರಿಯಾಗುತ್ತದೆ.
 
ಮತ್ತು ಸಾಯುವ ಕೊನೆಯ ಗಳಿಗೆಯಲ್ಲಿ ನನಗೆ ಅವರು ಈ ಮಾತು ಹೇಳಿದರು, “ದಯವಿಟ್ಟು ನಮ್ಮನ್ನೆಲ್ಲ ಕ್ಷಮಿಸಿಬಿಡು–ನಾವೆಲ್ಲ ಸೇರಿ ನಿನ್ನ ಈ ಸಮಾಜದ ಭಾಗವನ್ನಾಗಿ ಮಾಡಲು ತುಂಬಾ ಪ್ರಯತ್ನಿಸಿದೆವು. ನೀನು ಇಷ್ಟು ದೃಢವಾಗಿ ತಡೆಯದಿದ್ದರೆ ನಾವು ಹಾಗೆಯೇ ಮಾಡಿಬಿಡುತ್ತಿದ್ದೆವು. ಆದರೆ ನೀನು ತುಂಬ ದೃಢನಾಗಿದ್ದೆನಾದ್ದರಿಂದ ನಾವು ಸೋಲಬೇಕಾಯಿತು. ಈಗ ನಾನು ಹೃದಯತುಂಬಿ ಹೇಳುತ್ತೇನೆ, ನಮ್ಮ ಸೋಲು ಒಳ್ಳೆಯದಕ್ಕೇ ಆಗಿತ್ತು. ನಮ್ಮ ಸೋಲು ನಿನಗೆ ನಿನ್ನತನವನ್ನು ನೀಡಿತು.”

“ಅವರ ಕಾಯವನ್ನು ಬುದ್ಧ ಹಾಲ್‌ನಲ್ಲಿ ತಂದಿಟ್ಟಾಗ ನಾನು ಅವರ ನೆತ್ತಿಯ ಮೇಲಿರುವ ಏಳನೆಯ ಚಕ್ರವನ್ನು ಸ್ಪರ್ಶಿಸಿದೆ. ಆಗ ವಿಶೇಷವಾದದ್ದು ಒಂದು ಘಟಿಸಿತು. ಹತ್ತು ಸಾವಿರ ಜನರಿದ್ದ ಈ ಹಾಲ್‌‍ನಲ್ಲಿ ಯಾರು ಮೌನದಲ್ಲಿ, ಧ್ಯಾನದಲ್ಲಿ, ಸ್ವೀಕೃತಿಯ ಸ್ಥಿತಿಯಲ್ಲಿದ್ದರೋ ಅವರಿಗೆ ಅದರ ಅನುಭವವಾಗಿರಬೇಕು. ಆತ್ಮ ಸಾಕ್ಷಾತ್ಕಾರದ ಶತಮಾನಗಳ ಇತಿಹಾಸದಲ್ಲಿ ಮಾನವ ಅರಿತ ಸಂಗತಿ
ಯೆಂದರೆ, ಪ್ರತಿಯೊಬ್ಬನ ಜೀವಶಕ್ತಿ ಆತ ಸಾಯುವಾಗ ಆತ ಜೀವಿಸಿದ್ದ ಚಕ್ರದಿಂದ ಹೊರ ಸಾಗುತ್ತದೆ. ಪ್ರತಿಯೊಬ್ಬನೂ ಒಂದು ಚಕ್ರದಲ್ಲಿಯೇ ಜೀವಿಸುತ್ತಾನೆ. ಅನೇಕರು ಅತ್ಯಂತ ಕೆಳಗಿನ ಚಕ್ರವಾದ ಕಾಮಕೇಂದ್ರದಿಂದಲೇ ತಮ್ಮ ಜೀವವನ್ನು ಬಿಡುತ್ತಾರೆ. ಅತ್ಯಂತ ಎತ್ತರದ ಚಕ್ರ ನೆತ್ತಿಯ ಮೇಲಿರುತ್ತದೆ, ಮತ್ತು ನೀವು ಸಾಕ್ಷಾತ್ಕಾರ ಪಡೆಯದವರಾಗದ ಹೊರತೂ ನಿಮ್ಮ ಪ್ರಾಣ ಅಲ್ಲಿಂದ ಹೊರ ಚಲಿಸುವುದಿಲ್ಲ. ನನ್ನ ತಂದೆಯ ಏಳನೆಯ ಚಕ್ರವನ್ನು ಸ್ಪರ್ಶಿಸಿದಾಗ ಅದು ಬೆಚ್ಚಗಿತ್ತು. ಜೀವ ಅಲ್ಲಿಂದ ಹೋಗಿತ್ತಾದರೂ ದೈಹಿಕ ಚಕ್ರದಲ್ಲಿ ಸ್ಪಂದನೆ ಉಳಿದಿತ್ತು…

 “ಅವರು ತೀರಿಕೊಂಡ ನಂತರದಲ್ಲಿ ಗೆಳೆಯರೊಬ್ಬರು ಒಂದು ಪತ್ರ ಬರೆದಿದ್ದರು, “ಈಗೇನು ಮಾಡುತ್ತೀಯ? ನಿನ್ನ ತಲೆಯನ್ನು ಬೋಳಿಸಿಕೊಳ್ಳುತ್ತೀಯ?”, ಎಂದು ಕೇಳಿದ್ದರು. ನಾನು ಹೇಳಿದೆ, “ನಾನು ಅದನ್ನು ಈಗಾಗಲೇ ಮಾಡಿದ್ದೇನೆ, ನಲವತ್ತು ವರ್ಷಗಳ ಹಿಂದೆ! ಮತ್ತು ಒಮ್ಮೆ ಮಾತ್ರ ಮಾಡಲು ಸಾಧ್ಯ. ಅಲ್ಲದೇ ನನ್ನ ತಂದೆಯೇನೂ ಸಾಯಲಿಲ್ಲ. ಹಾಗೆ ನೋಡಿದರೆ ಅವರು ಇಲ್ಲಿಯವರೆಗೂ ಸತ್ತಿದ್ದರು. ಈಗವರು ಚಿರಂತನ ಜೀವನಕ್ಕೆ ಪ್ರವೇಶಿಸಿದ್ದಾರೆ, ಮೊದಲ ಬಾರಿಗೆ ಜೀವನ ಅಂದರೆ ಏನು ಎಂಬುದನ್ನು ಕಂಡುಕೊಂಡಿದ್ದಾರೆ. ಅವರು ಸತ್ತಿದ್ದಾರೆ ಎಂದು ನಾನು ಅಂದುಕೊಳ್ಳಲಾರೆ. ಈಗವರು ಹಿಂದೆಂದಿಗಿಂತಲೂ ಹೆಚ್ಚು ಜೀವಂತವಾಗಿದ್ದಾರೆ. “ನನ್ನ ತಂದೆ ಭೂಮಿಯಲ್ಲಿ ಈಗಿಲ್ಲ, ಆದರೆ ಯಾವಾಗಲಾದರೂ ನಾನು ಅವರಂತೆಯೇ ವರ್ತಿಸುತ್ತಿದ್ದೇನೆ ಅನ್ನುವುದು ಅರಿವಾಗಿ ಅವರ ನೆನಪಾಗುತ್ತದೆ. ಅವರ ಚಿತ್ರ ನೋಡಿದಾಗ ನಾನೂ ಎಪ್ಪತ್ತೈದು ವಯಸ್ಸಿನವನು ಅನ್ನಿಸುತ್ತದೆ. ದೇವರ ಇಚ್ಛೆಯಿದ್ದರೆ ನಾನು ಅವರಂತೆ ಕಾಣುತ್ತೇನೆ. ಮತ್ತು ನಾನು ಕೊನೆಯ ಉಸಿರಿನ ವರೆಗೂ ಅವರಂತೆಯೇ ಕಾಣುತ್ತೇನೆ ಎಂಬುದು ಹೃದಯಕ್ಕೆ ತೃಪ್ತಿ ತರುತ್ತದೆ…. “ನನ್ನ ದೇಹ ಅವರ ದೇಹದಂತೆಯೇ ಕೆಲಸ ಮಾಡುತ್ತದೆ, ಅನಾರೋಗ್ಯದಲ್ಲಿಯೂ ಕೂಡಾ. ನನಗೆ ಅದರ ಕುರಿತು ಹೆಮ್ಮೆಯಿದೆ. ನನ್ನ ತಂದೆಗೆ ಅಸ್ತಮಾ ಇತ್ತು, ಮತ್ತು ನನಗೆ ಅಸ್ತಮಾದ ತೊಂದರೆ ಉಂಟಾದಾಗ, ನನಗೆ ಈ ದೇಹ ನನ್ನ ತಂದೆಯಿಂದ, ಮತ್ತು ಎಲ್ಲಾ ದೋಷಗಳೊಂದಿಗೆ, ಬಂದಿದೆ ಎಂಬುದು ನೆನಪಾಗುತ್ತದೆ. ಅವರಿಗೆ ಮಧುಮೇಹ ಇತ್ತು, ನನಗೂ ಇದೆ. ಅವರಿಗೆ ಮಾತನಾಡುವುದು ಇಷ್ಟವಾಗುತ್ತಿತ್ತು, ಮತ್ತು ನಾನು ಜೀವನಪೂರ್ತೀ ಮಾತನಾಡುವುದನ್ನು ಬಿಟ್ಟು ಬೇರೇ ಏನನ್ನೂ ಮಾಡಲಿಲ್ಲ. ಎಲ್ಲಾ ರೀತಿಯಲ್ಲೂ ನಾನು ಅವರ ಮಗನಾಗಿದ್ದೆ. 
“ನನ್ನ ತಾಯಿ ಸನ್ಯಾಸ ತೆಗೆದುಕೊಂಡ ನಾಲ್ಕು ವರ್ಷಗಳ ನಂತರ ನನ್ನ ತಂದೆ ಸನ್ಯಾಸ ಸ್ವೀಕರಿಸಿದರು. ಆಗ ಅವರಿಗೆ ತಾನು ಅಷ್ಟು ಧೈರ್ಯ ತೋರಿಸುತ್ತಿಲ್ಲವೇನೋ ಎಂಬ ಭಾವ ಇತ್ತು. ಆದರೆ ಅವರು ಧ್ಯಾನ ಮಾಡಲು ಪ್ರಾರಂಭಿಸಿದ್ದರು. ಅದಕ್ಕೆ ಮೊದಲೂ ಅವರಿಗೆ ಬೆಳಿಗ್ಗೆ ಮೂರರ ಹೊತ್ತಿಗೆ ಎಚ್ಚರವಾಗುತ್ತಿತ್ತು. ನಿದ್ರಿಸಲು ಪ್ರಯತ್ನಿಸಿ ಸೋತುಹೋಗುತ್ತಿದ್ದರು. ಆದರೆ ಅವರಿಗೆ ಅಷ್ಟು ನಿದ್ರೆ ಸಾಕಾಗುತ್ತಿತ್ತು. ಮುಂಜಾನೆ ಮೂರರ ಹೊತ್ತಿಗೆ ಅವರು ನಿದ್ರೆ ಪೂರ್ಣವಾಗಿಸಿ ಎದ್ದಿರುತ್ತಿದ್ದರು. ಒಮ್ಮೆ ನಾನು ಅವರಿಗೆ ಧ್ಯಾನವನ್ನು ನೀಡಿದೆನಲ್ಲ, ಆಗ ಅವರಿಗೆ ಆ ನಿದ್ರೆಯಿಲ್ಲದಿರುವಿಕೆ ಒಂದು ಲಾಭದ ಸಂಗತಿಯಾಯಿತು. ಅವರು ಮೂರರಿಂದ ಧ್ಯಾನಕ್ಕೆ ತೊಡಗುತ್ತಿದ್ದರು. “ಧ್ಯಾನದ ಆಳಕ್ಕೆ ಇಳಿಯುತ್ತ ಇಳಿಯುತ್ತ ಅವರು ಮಗುವಿನಂತಾದರು. ಆದರೂ ಅವರು ಧ್ಯಾನ ಅತ್ಯಂತ ಆಳಕ್ಕೆ ಇಳಿಯುವವರೆಗೂ ಸನ್ಯಾಸಕ್ಕಾಗಿ ಹಂಬಲಿಸಲಿಲ್ಲ. ಜನ ಧ್ಯಾನಕ್ಕೆ ಇಳಿಯುವುದಕ್ಕಾಗಿ ಸನ್ಯಾಸ ತೆಗೆದುಕೊಳ್ಳುತ್ತಾರೆ, ಆದರೆ ಅವರು ಕಾದರು. ನನ್ನ ತಾಯಿ ಸನ್ಯಾಸ ತೆಗೆದುಕೊಂಡರು, ಅವರ ಸಹೋದರರು ಸನ್ಯಾಸ ತೆಗೆದುಕೊಂಡರು, ಆದರೆ ತಂದೆ ಕಾದರು. ಎಲ್ಲರೂ ಕೇಳುತ್ತಿದ್ದರು ನನಗೆ, “ನೀನೇಕೆ ನಿನ್ನ ತಂದೆಗೆ ಸನ್ಯಾಸ ತೆಗೆದುಕೊಳ್ಳುವಂತೆ ಹೇಳುವುದಿಲ್ಲ?”ನಾನು ಹೇಳಿದೆ, “ಅವರು ನನಗೆ ಯಾವತ್ತೂ ಇಂತದ್ದನ್ನು ಮಾಡು ಎಂದು ಹೇಳಲಿಲ್ಲ, ಯಾವುದಕ್ಕೂ ಒತ್ತಾಯಿಸಲಿಲ್ಲ. ಈಗ ನಾನು ಒತ್ತಾಯಿಸುವುದು ಸರಿಯಾಗುವುದಿಲ್ಲ. ಅವರಿಗೆ ಬೇಕಾದಾಗ ಅವರೇ ಹೇಳುತ್ತಾರೆ, ನಾನು ಹೇಳುವುದಿಲ್ಲ. ಅವರು ಕಾಯುತ್ತಿದ್ದಾರೆಂದು ನನಗೆ ಗೊತ್ತಿದೆ, ಏಕೆಂದರೆ ಅವರು ನಿರಂತರವಾಗಿ ತಮ್ಮ ಧ್ಯಾನದ ಅನುಭವದ ಕುರಿತು ನನ್ನೊಂದಿಗೆ ಮಾತನಾಡುತ್ತಿದ್ದರು. “ಒಂದಿನ ಮುಂಜಾನೆ, ಮೂರರಿಂದ ಧ್ಯಾನ ಆರಂಭಿಸಿದ್ದರು. ಸುಮಾರು ಆರು ಗಂಟೆಯಾಗಿತ್ತು. ಆಗ ಲಕ್ಷ್ಮಿ ಓಡಿ ಬಂದು ಹೇಳಿದಳು, “ತಂದೆ ನಿಮ್ಮನ್ನು ನೋಡಬೇಕಂತೆ. ಹಾಗೆಯೇ ಮಾಲೆ ಮತ್ತು ಸನ್ಯಾಸದ ನಮೂನೆಯನ್ನೂ ತರಬೇಕಂತೆ. ಅವರಿಗೆ ಏನಾಗಿದೆ ನನಗೆ ತಿಳಿಯುತ್ತಿಲ್ಲ…”ನಾನು ಅವರ ಕೋಣೆಗೆ ಹೋದಾಗ ಅವರು ಹೇಳಿದರು, “ಈಗ ಸಮಯ ಬಂದಿದೆ. ನನಗೆ ಸನ್ಯಾಸವನ್ನು ನೀಡು.”
ಅವರಿಗೆ ಸಮಾಜದಲ್ಲಿ ನನಗಿದ್ದ ಕೆಟ್ಟ ಹೆಸರು, ಎಲ್ಲ ಶ್ರೇಷ್ಠವೆನ್ನಿಸಿಕೊಂಡ ಸ್ಥಳಗಳಿಂದ ನನ್ನೆಡೆಗೆ ತಿರಸ್ಕಾರ ಹರಿದು ಬರುವುದು ಎಲ್ಲವೂ ಅವರಿಗೆ ಗೊತ್ತಿತ್ತು. ಹಾಗಿದ್ದರೂ ಅವರು ನನ್ನ ಶಿಷ್ಯರಾದರು. ಅದಕ್ಕೆ ಅಸಾಧಾರಣವಾದ ಧೈರ್ಯವೇ ಬೇಕಾಗುತ್ತದೆ.  “ಅವರು ಮೊದಲ ಬಾರಿಗೆ ನನ್ನ ಪಾದವನ್ನು ಸ್ಪರ್ಶಿಸಿದಾಗ ನನಗೆ ಅಚ್ಚರಿಯಾಗಿತ್ತು. ರೂಮಿಗೆ ಹೋಗಿ ಅತ್ತುಬಿಟ್ಟೆ, ಅದನ್ನು ಯಾರೂ ನೋಡುವುದು ಬೇಡವಾಗಿತ್ತು ಎಂಬ ಕಾರಣಕ್ಕಾಗಿ. ಆ ಕಣ್ಣೀರುಗಳು ಈಗಲೂ ನನ್ನಲ್ಲಿವೆ ಎನ್ನಿಸುತ್ತದೆ ನನಗೆ. ಅವರು ಸನ್ಯಾಸಕ್ಕಾಗಿ ಕೇಳಿದಾಗ ನನಗೆ ನಂಬಲಾಗಲಿಲ್ಲ. ನಾನು ಮೌನಿಯಾಗಿದ್ದೆ, ನನಗೆ ತಲ್ಲಣವಾಗಿತ್ತು, ಅಚ್ಚರಿಯಾಗಿತ್ತು! “ಸನ್ಯಾಸ ನೀಡುವಾಗ ಅವರಿಗೆ ಹೇಳಿದ್ದೆ,”ನೋಡಿ, ನೀವು ಈಗ ಯಾವುದಕ್ಕೂ ಬಾರದ ಏನೂ ಅಲ್ಲದವನ(“ಗುಡ್ ಫಾರ್ ನಥಿಂಗ್” ) ಶಿಷ್ಯರಾಗಲಿದ್ದೀರಿ. ಮತ್ತು ನಾನು ನಿಮಗಾಗಿ ಏನಾದರೂ ಮಾಡುವುದಿದ್ದರೆ ಅದು ನಿಮ್ಮನ್ನೂ ಏನೂ ಅಲ್ಲದವನನ್ನಾಗಿ (“ಗುಡ್ ಫಾರ್ ನಥಿಂಗ್” ) ಮಾಡುವುದು…” 
ಚಿಕ್ಕವರಿದ್ದಾಗ ಓಶೋ ಅವರನ್ನು “ಗುಡ್ ಫಾರ್ ನಥಿಂಗ್” ಅನ್ನುತ್ತಿದ್ದರಂತೆ. ನಥಿಂಗ್ ಅಂದರೆ ನಿರ್ವಾಣ ಅಥವಾ ಸಾಕ್ಷಾತ್ಕಾರ ಅಂತಲೂ ಅರ್ಥವಾಗುತ್ತದೆ.

Leave a Reply

Your email address will not be published. Required fields are marked *