ಬಿಡಿ ಗುರುವೆ ಎಷ್ಟು ತುಂಬುವಿರಿ ಮದ್ಯ

ಬಿಡಿ ಗುರುವೆ ಎಷ್ಟು ತುಂಬುವಿರಿ ಮದ್ಯ, ಮತ್ತೇರುವುದಿಲ್ಲ
ಹಿಂಬಾಲಿಸಿದಷ್ಟು ದೂರ, ಅವನು ಹಠಮಾರಿ ಗೊಲ್ಲ.
ಒಲಿಯದವನಿಗೆ ಸಿಗುವುದಿಲ್ಲ, ಒಲಿದೆನೆಂದವನಿಗೂ ಇಲ್ಲ,
ಒಲವಾದವನಲ್ಲೆ ಅವನು, ಅವನು ಹಠಮಾರಿ ಗೊಲ್ಲ.

ಈ ದಾರಿಗಳೆಲ್ಲ ಎಷ್ಟು ಮುಗ್ಧ, ದಾರಿತಪ್ಪಿದರೂ ಅರಿವಾಗುವುದಿಲ್ಲ
“ನೂರು ದಾರಿಗಳ ಮೊದಲು ನಿಂತವನು, ದೋರಗಾಯಿಯಾದವನು
ದೂರವಾಗುವನು ನಾಮರೂಪಗಳಿಂದ, ಹಣ್ಣಾಗುವನು”
ಈ ಹುಣ್ಣುನಾಲಿಗೆ ಕರೆ ಕೇಳದು, ಅವನು ಹಠಮಾರಿ ಗೊಲ್ಲ.

“ಕಣ್ಣು ಕಾಣುವವರೆಗೆ ದಿಟ್ಟಿಸು, ಕಿವಿ ಕೇಳುವವರೆಗೆ ಆಲಿಸು,
ಮನಃಕಂಪನದ ಒಂದು ಅಲೆಹಿಂದೆ ಭಗವಂತ ಬರುವನಂತೆ”
ಅಲೆಗೆ ಸೋತು ಅಲೆದಾಡುವವ ನಾನು, ನನ್ನ ಹಠ ಕರಗುವುದಿಲ್ಲ,
ಹೆಣ್ಣಾದರಷ್ಟೇ ಬರುವ ಕಳ್ಳ, ಅವನು ಹಠಮಾರಿ ಗೊಲ್ಲ.

ಕುಡಿಯದೇ ಹುಟ್ಟಲಿ ಮತ್ತು, ಹುಡುಕದೇ ಸಿಗಲಿ ಮುತ್ತು
ಸುಮ್ಮನಿರಿ ನನಗೆ ಬೇಡ, ಅವನು ಹಠಮಾರಿ ಗೊಲ್ಲ.

8 comments

  1. >ರಾಘವೇಂದ್ರ,ಹಠಮಾರಿ ಗೊಲ್ಲನ ಚೆಹರೆಯನ್ನು ಸರಿಯಾಗಿ ಗುರುತಿಸಿದ್ದೀರಿ. ಆ ಭಾವವನ್ನು ಅಷ್ಟೇ ಸರಿಯಾದ ಛಂದದಲ್ಲಿ, ಛಂದಾಗಿ ಹಿಡಿದಿದ್ದೀರಿ. ಮನಸ್ಸಿಗೆ ಮುದ ಕೊಡುವ, ಚಿಂತನೆಯನ್ನು ಚಾಲೂ ಮಾಡುವ ಕವನವಿದು. ಅಭಿನಂದನೆಗಳು.

  2. >ರಾಘು,ನಿನ್ನದೊಂದು ಕತೆಯಲ್ಲಿ ಸಹ ಇದೇ ಭಾವ ಕಾಣಿಸಿತ್ತು. ಭಾವವನ್ನು ಹಿಡಿದಿಟ್ಟ ರೀತಿ ಕತೆಗಿಂತ ಹೆಚ್ಚು ಶಕ್ತವಾಗಿ ಮೂಡಿದೆ ಇಲ್ಲಿ.

Leave a Reply to sunaath Cancel reply

Your email address will not be published. Required fields are marked *