ಕಾಗದದ ದೋಣಿ

‘ನನ್ನ ನಿಮ್ಮ ನಡುವೆ ಏನು ಬಂಧವಿದೆ?’ ಎಂದು ಆಕೆ ಕೇಳಿದಳು.
ಅದು ಬೆಳದಿಂಗಳ ಸಂಜೆ, ಮತ್ತು ನದಿ ತೀರದ ಮರಳು ಮುಂಜಾನೆಯ ಬಿಸಿಲಿಂದಾಗಿ ಇನ್ನೂ ಬೆಚ್ಚಗಿತ್ತು. ಮತ್ತೊಂದು ದಡದಲ್ಲಿ ಮನೆಯೊಳಗಿನ ದೀಪ ಬೆಳದಿಂಗಳನ್ನು ಮೀರಿಸಿ ಬೆಳಗುತ್ತಿತ್ತು. ಇಷ್ಟುಹೊತ್ತಿಗೆ ಗುರುಗಳು ಮಲಗಿರಬಹುದು, ಮತ್ತು, ಮನೆಗೆ ಹೋಗುವುದನ್ನು ಮರೆತು ನಾವಿಬ್ಬರೂ ಇಲ್ಲಿ ಕುಳಿತಿದ್ದೇವೆ.
‘ಆಚೆ ದಡಕ್ಕೂ ಈಚೆ ದಡಕ್ಕೂ ಏನು ಸಂಬಂಧವಿದೆ?’ ಎಂದು ಕೇಳಿದೆ? ಆವಳು ಉತ್ತರ ಅರಿವಾಗದವಳಂತೆ ಮುಖವನ್ನೇ ನೋಡಿದಳು.
‘ಎರೆಡೂ ದಡಗಳನ್ನು ನದಿ ಸೇರಿಸಿದೆ. ನದಿಯಿಲ್ಲದಿದ್ದರೆ, ಅವುಗಳು ಪರಸ್ಪರ ಅಪರಿಚಿತ. ನಾವೂ ಹಾಗೆಯೇ, ಒಂದು ನದಿಯ ನಡುವೆ ನಾವಿದ್ದೇವೆ. ಒಂದು ದಾರಿ ಮಾತ್ರ ನಮ್ಮ ನಡುವೆ ಬಂಧವನ್ನು ನಿರ್ಮಿಸಿದೆ.’
….
ಅವರ ಬಳಿಗೆ ಮೊದಲ ಬಾರಿಗೆ ಅಪ್ಪ ಕರೆದುಕೊಂಡು ಹೋದಾಗ ನಾನು ತುಂಬಾ ಚಿಕ್ಕವನಿದ್ದೆ. ಐದು ವರ್ಷ? ಇರಬೇಕು. ಅವರ ಬೆಳ್ಳಗೆ ತಿರುಗುತ್ತಿದ್ದ ಕಪ್ಪನೆಯ ಉದ್ದ ಗಡ್ಡ, ಅವರ ಮೈಮೇಲಿದ್ದ ಬೆಳ್ಳನೆಯ ಉಡುಗೆ, ಅಷ್ಟೇ ನನಗೆ ನೆನಪಿರುವುದು. ಎರಡನೆಯ ಬಾರಿಯೂ ಅಪ್ಪನ ಜೊತೆಗೆ ಅವರ ಮನೆಗೆ ಒಂದು ರಾತ್ರಿ ಹೋಗಿದ್ದೆ. ಆಗ ನನಗೆ ಹದಿನಾರು ವರ್ಷ ವಯಸ್ಸಿರಬೇಕು. ನನಗೆ ಈಗಲೂ ಚೆನ್ನಾಗಿ ನೆನಪಿದೆ, ಅಲ್ಲಿ ಅನೇಕ ಜನರು ಅವರನ್ನು ನೋಡಲು ಬಂದಿದ್ದರು, ಮತ್ತು ಅವರು ಆಗ ಧ್ಯಾನದ ಕುರಿತು ಮಾತನಾಡುತ್ತಿದ್ದರು. ಯಾವುದೋ ಸನ್ಯಾಸಿಗೆ ಹೀಗೆ ಕಾಲು ಬೀಳುವವರಂತೆ ಹೋಗುವುದು ಏನು ಚಂದ ಕಾಣುತ್ತದೆ. ಅದೂ ಸನ್ಯಾಸಿ ಬೇರೇ ಅಲ್ಲ, ಅವರಿಗೆ ಮದುವೆಯೂ ಆಗಿದೆ, ಮಕ್ಕಳೂ ಇದ್ದಾರೆ. ಅವರೆಲ್ಲ ಮಾತನಾಡುತ್ತ ಕುಳಿತಾಗ ನಾನು ಹೊರಗಡೆ ಬಂದು ಕಟ್ಟೆಯ ಮೇಲೆ ಕುಳಿತಿದ್ದೆ. ‘ಯಾರಾದರೂ ಒಬ್ಬ ಸನ್ಯಾಸಿ ತಪ್ಪು ಮಾಡುತ್ತಿರುವುದನ್ನು ನೋಡಿದರೆ, ಅವರನ್ನು ಹಿಯಾಳಿಸಬೇಡ, ನಾನು ಸನ್ಯಾಸಿಯಾದರೆ ಅಂತಹ ತಪ್ಪು ಮಾಡುವುದಿಲ್ಲ ಅಂತ ನಿರ್ಧಾರ ಮಾಡಿಕೊ’ ಅಂತ ಯಾವಾಗಲೋ ಓದಿದ ಮಾತು, ಅದನ್ನೇ ನೆನಪಿಸಿಕೊಳ್ಳುತ್ತ ಕುಳಿತಿದ್ದೆ.


ಅವರ ಮಾತು ಸುಮಾರು ಹೊತ್ತಿನವರೆಗೂ ಮುಂದುವರೆಯಿತು, ನನಗೆ ಚಡಪಡಿಕೆ, ಒಳಗೆ ಹೋಗಲೋ ಅಂತ. ಆದರೆ ಅವರ ಮಾತನ್ನೇನು ಕೇಳುವುದು ಅಂದುಕೊಂಡು ಹೊರಗಡೆಯೇ ಕುಳಿತವನು ಈಗ ಅಲ್ಲಿ ಹೋದರೆ ನನ್ನ ಘನತೆ ಏನಾಗಬೇಕು? ಸುಮಾರು ಒಂದು ತಾಸಿನ ನಂತರ ಅಪ್ಪ ಬಂದು ಒಳಗೆ ಕರೆದ ಮೇಲೆ ನಾನು ಅವರ ಮನೆಗೆ ಹೋದೆ. ಅವರಿಗೆ ನನ್ನನ್ನ ಪರಿಚಯಿಸಿ, ನನ್ನ ಓದಿನ ಕುರಿತು ಹೇಳಿದರು. ಆಮೇಲೆ ಅವರ ಕಾಲಿಗೆ ಬೀಳು ಎಂದು ನನಗೆ ಹೇಳಿದರು, ಆದರೆ ನನಗೆ ಅದು ಬೇಕಾಗಿರಲಿಲ್ಲ. ಇಷ್ಟು ವರ್ಷಗಳಲ್ಲಿ ನನಗೆ ನನ್ನ ಅಪ್ಪ ಒತ್ತಾಯಿಸಿದ್ದು ಇದೊಂದಕ್ಕೆ ಮಾತ್ರ, ಅಪ್ಪ ನನ್ನ ಕುತ್ತಿಗೆಯನ್ನು ಒತ್ತಿ ಅವರ ಕಾಲಿಗೆ ಬೀಳಿಸಿದರು. ನನಗೆ ಕೋಪ ಉಕ್ಕಿಬಂದಿತ್ತು, ಆದರೂ ಅವರ ಕಾಲಿಗೆ ಬಿದ್ದು ಎದ್ದೆ. ಮೂರನೆಯ ಬಾರಿಗೆ, ಅವರ ಬಳಿಗೆ ನಾನೇ ಹೋದೆ.

ಕುಳಿತುಕೊಂಡು ಸುಮ್ಮನೇ ಒಮ್ಮೆ ನಾನು ಈ ಇಪ್ಪತ್ತಾರು ವರುಷಗಳ ಬದುಕಿನಲ್ಲಿ ಬಂದಂತಹ ಅನೇಕ ಗುರುಗಳ ಕುರಿತು ಯೋಚಿಸಿದರೆ, ನನಗೆ ಅಲ್ಲಿ ಹೆಚ್ಚು ಜನರು ಕಾಣಿಸುವುದೇ ಇಲ್ಲ. ಯಾರಾದರೂ ಒಬ್ಬ ಹಿರಿಯ ವ್ಯಕ್ತಿಯೊಡನೆ ನಾನು ಹೃದಯದ ಸಂಬಂಧವನ್ನು ಹೊಂದಿದ್ದೇನೆ, ಅವರೊಡನೆ ನನ್ನ ಹೃದಯದ ಮಾತುಗಳನ್ನು ಹೇಳಿಕೊಳ್ಳುತ್ತೇನೆ, ಚರ್ಚಿಸುತ್ತೇನೆ ಅಂತ ತಿರುಗಿ ನೋಡಿದರೆ, ಅಲ್ಲಿ ನನ್ನ ತಂದೆಯ ಹೊರತಾಗಿ ಮತ್ತೆ ಯಾರೂ ಕಾಣುವುದಿಲ್ಲ ನನಗೆ. ಅಷ್ಟರಮಟ್ಟಿಗೆ ನಾನು ಏಕಾಂಗಿಯೇ ಅಂತ ಹೇಳಬೇಕು. ಯಾವುದಾದರೂ ಒಬ್ಬ ಹಿರಿಯ ವ್ಯಕ್ತಿಯೊಡನೆ ನನ್ನ ಬಂಧ?

ಅದು ನನಗೆ ಸಾಧ್ಯವೇ ಆಗಲಿಲ್ಲ. ನನಗೆ ಅಂತಹುದು ಯಾವುದೂ ಒಮ್ಮೆಯೂ ಬೇಕು ಅನ್ನಿಸಲೇ ಇಲ್ಲ. ಅದೆಂತಹ ಏಕಾಂತದಲ್ಲಿರುವ ನನಗೆ, ಯಾರೂ ತೀರಾ ಅವರೊಡನೆ ಇರಬೇಕು ಅನ್ನಿಸುವಂತಹ ಹಂಬಲವನ್ನು ಹಚ್ಚಲೇ ಇಲ್ಲ. ಆದರೆ, ಅಂತಹ ಬಂಧ ತೀರಿಕೊಂಡವರೊಡನೆ ನನಗೆ ಬಹಳ ಸುಲಭವಾಗಿ ಆಯಿತು ಅನ್ನಿಸುತ್ತದೆ, ಪುಸ್ತಕಗಳ ಮಾಧ್ಯಮದಲ್ಲಿ.

‘ಒಂದು ವಯಸ್ಸಿನವರೆಗೆ ತಂದೆಯೆಂದರೆ ಹೀರೋ, ಅವರನ್ನು ಬಿಟ್ಟರೆ ಇನ್ನೊಬ್ಬರಿಲ್ಲ ಅಂದುಕೊಳ್ಳತ್ತ ಬೆಳೆಯುತ್ತಾರೆ ಮಕ್ಕಳು, ಯವ್ವನಕ್ಕೆ ಬರುತ್ತಿದ್ದಂತೆಯೇ ಅವರಿಗೆ ತಂದೆ ಏನೂ ಗೊತ್ತಿಲ್ಲದವ ಎನ್ನುವುದು ಅರಿವಾಗುತ್ತದೆ, ಕೊನೆಗೆ ಮಧ್ಯವಯಸ್ಸಿಗೆ ಬರುತ್ತಿದ್ದಂತೆಯೇ ತಂದೆಗೆ ಏನೆಲ್ಲ ಗೊತ್ತಿತ್ತು, ಆತನ ಅನುಭವ ಎಂತಹ ಹಿರಿಯದಾಗಿತ್ತು ಎನ್ನುವುದು ಅರಿವಾಗುತ್ತದೆ’ ಎಂದು ಎಲ್ಲೋ ಓದಿದ್ದು ನೆನಪು. ನನಗೆ ಯಾವತ್ತೂ ತಂದೆಗೆ ಎಲ್ಲವೂ ಗೊತ್ತು, ಆವರು ಹೀರೋ ಅನ್ನುವ ಅನುಭವವೇ ಆಗಲಿಲ್ಲ, ಹೆಚ್ಚಾಗಿ ಆ ಸಮಯದಲ್ಲೆಲ್ಲ, ಅವರು ತಮ್ಮದೇ ಕೆಲಸಗಳಲ್ಲಿ ತೊಡಗಿರುತ್ತಿದ್ದರೆ, ನಾನು ನನ್ನದೇ ಏಕಾಂತದಲ್ಲಿ ಕಳೆದುಹೋಗಿರುತ್ತಿದ್ದೆ. ಯಾವತ್ತೂ ನನಗೆ ನನ್ನ ಅಪ್ಪ ಎತ್ತಿಕೊಂಡು ಮುದ್ದು ಮಾಡಿದ್ದು ನೆನಪಿಲ್ಲ; ಆದರೆ, ನನಗೆ ನೆಗಡಿ ಕೆಮ್ಮು ಆದಾಗ ವಿಕ್ಸ್ ಹಚ್ಚಿ ಮೈಯ ಸಂದುಗಳನ್ನೆಲ್ಲ ತಿಕ್ಕುತ್ತಿದ್ದ, ಅನಾರೋಗ್ಯವಾದಾಗ ಹತ್ತಿರವೇ ಕುಳಿತಿರುತ್ತಿದ್ದ ಅಪ್ಪನ ನೆನಪಿದೆ. ಯಾವತ್ತೂ ಅಪ್ಪ ನನಗೆ ನೀನು ಇದನ್ನು ಮಾಡು ಅಂತ ಒತ್ತಾಯಿಸಿ ಹೇಳಿದ್ದು ನೆನಪಿಲ್ಲ, ನಾನು ಓದುತ್ತಿದ್ದಾಗಿನ ಸಂದರ್ಭದಲ್ಲಿಯೂ ನನಗೆ ಕಡಿಮೆ ಅಂಕಗಳು ಬಂದಾಗಲೂ ಅಪ್ಪ ಹೇಳುತ್ತಿದ್ದುದು ಅಷ್ಟೇ, ‘ಮುಂದಿನ ಸಾರಿ ಹೆಚ್ಚಿನ ಮಾರ್ಕುಗಳನ್ನು ತೆಗೆಯಲು ಪ್ರಯತ್ನ ಮಾಡು’. ಅವರು ಬರೆಯುತ್ತಿದ್ದ ಪತ್ರಗಳಲ್ಲೂ ಅದೇ, ‘ಮುಂದಿನ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ತೆಗೆಯಲು ಪ್ರಯತ್ನಿಸುವುದು.’

ಇನ್ನು ನನ್ನ ಸಹಪಾಠಿಗಳೆಲ್ಲ ಸರ್ ಗಳ ಹತ್ತಿರ ಹೋಗುವಾಗ, ಅವರೊಡನೆ ಅನೇಕ ಚರ್ಚೆಗಳನ್ನು ಮಾಡುವಾಗೆಲ್ಲ, ನನಗೆ ಅದೇನೂ ಬೇಕು ಅನ್ನಿಸುತ್ತಿರಲಿಲ್ಲ. ನಾನು ಆರನೇ ತರಗತಿಯಲ್ಲಿಯೇನೋ, ಒಬ್ಬ ಮೇಷ್ಟ್ರು ಬೇರೆ ಕಡೆಗೆ ವರ್ಗವಾಗಿ ಹೋದಾಗ ನನ್ನ ಹೃದಯ ಒಡೆದಂತಾಗಿತ್ತು, ಅತ್ತುಬಿಟ್ಟಿದ್ದೆ; ಆದರೆ ಅದೇ ಕೊನೆ, ಮತ್ತೆ ಯಾವ ಮಾಸ್ತರಿಗಾಗಿಯೂ ನಾನು ಅಳಲಿಲ್ಲ, ಮತ್ತೆ ಯಾರನ್ನೂ ನಾನು ಹಚ್ಚಿಕೊಳ್ಳಲಿಲ್ಲ. ಅವರೆಲ್ಲ ಯಾವುದೋ ಮಾಸ್ತರರ ಕುರಿತಾಗಿ ಸಂಭ್ರಮಿಸುತ್ತ ಮಾತನಾಡುತ್ತಿರುವಾಗ ನಾನು ನನ್ನಷ್ಟಕ್ಕೇ ಇರುತ್ತಿದ್ದೆ. ಯಾರನ್ನಾದರೂ ಯಾಕೆ ಭೇಟಿಯಾಗಬೇಕು, ನನಗೆ ಅರ್ಥವೇ ಆಗುತ್ತಿರಲಿಲ್ಲ. ನಮ್ಮೂರಿಗೆ ಕೆಲವೊಮ್ಮೆ ಸಾಹಿತಿಗಳು, ಸ್ವಾಮೀಜಿಗಳು ಬಂದಾಗಲೆಲ್ಲಾ ಎಲ್ಲರೂ ಅವರನ್ನು ಭೇಟಿಯಾಗಲು ಓಡುತ್ತಿದ್ದುದು ನೆನಪಿದೆ. ಕೆಲವೊಮ್ಮೆ ನಾನೂ ಹೋಗಿದ್ದೇನಾದರೂ ಯಾವುದೋ ಮೂಲೆಯಲ್ಲಿ ದೂರ ನಿಂತು ನೋಡಿ, ಸುಮ್ಮನೇ ಮರಳುತ್ತಿದ್ದೆ. ಅವರ ಬಳಿ ಮಾತನಾಡುವಂತಹುದು ಏನಿದೆ? ಅವರಷ್ಟಕ್ಕೆ ಅವರಿರಲಿ, ನಾನು ಯಾಕೆ ಸುಮ್ಮನೇ ಅವರನ್ನು ಡಿಸ್ಟರ್ಬ್ ಮಾಡಬೇಕು? ಏನಿದೆ ಈ ಮಾತುಗಳಿಗೆಲ್ಲ ಅರ್ಥ?

ಗೆಳೆಯರೂ ಕೇಳುತ್ತಾರೆ, ನೀನೇನು ನಮ್ಮನ್ನು ನೋಡಲೂ ಬರುವುದಿಲ್ಲ ಎಂದು. ಅವರಿಗೆ ಹೇಳುತ್ತೇನೆ, “ನಿಮ್ಮಷ್ಟಕ್ಕೆ ನೀವು ಆನಂದವಾಗಿದ್ದುಬಿಡಿ, ನಾನು ಯಾಕೆ ನಿಮ್ಮ ಏಕಾಂತಕ್ಕೆ, ಮೌನಕ್ಕೆ ಭಂಗ ತರಬೇಕು? ಅಷ್ಟಕ್ಕೂ ಮಾತನಾಡುವಂತಹ ಮಹತ್ತರವಾದ ಸಂಗತಿ ಏನಿದೆ? ನಾನೂ ಒಂದಿಷ್ಟು ವಿಚಾರಧಾರೆಯೆಂಬ ಗಲೀಜನ್ನು ನಿಮ್ಮ ಮನಸ್ಸಿಗೇಕೆ ತುಂಬಲಿ?”

ಹಾಗಂತ ನಾನು ಎಲ್ಲರನ್ನೂ ತಿರಸ್ಕರಿಸಿ, ಎಲ್ಲರಿಂದಲೂ ದೂರವಾಗಿರುತ್ತೇನೆ ಎಂದಲ್ಲ; ನಾನು ಎಲ್ಲರನ್ನೂ, ಎಲ್ಲವನ್ನೂ ನನ್ನಲ್ಲಿ ಒಳಗೊಂಡಿರುತ್ತೇನೆ. ನನ್ನೊಳಗೆ ಅರಳುವ ಪ್ರೇಮದ ಸುಗಂಧ ಹರಡುತ್ತಲೇ ಇರುತ್ತದೆ. ಅಕಾಲಿಕವಾದದ್ದು, ಅಪಕ್ವವಾದದ್ದು ನನ್ನಿಂದ ಹೊರಡಬಾರದು, ಹರಡಬಾರದು ಎಂದು ಮಾತ್ರ ನಾನು ನನ್ನಷ್ಟಕ್ಕೇ ಇರುತ್ತೇನೆ. ಆದರೂ ಕೆಲವು ವರ್ಷಗಳ ವರೆಗೆ ಆಗಾಗ ನನಗೆ ನನ್ನದೇ ಸ್ವಭಾವದ ಕುರಿತು ಅನುಮಾನ ಬರುತ್ತಿತ್ತು. ಏನಾಗಿದೆ ನನಗೆ? ಎಲ್ಲರೂ ಗೆಳೆಯರೆಂದು ಹುಡುಕಿಕೊಂಡು ಹೋಗುತ್ತಾರೆ, ಪರಸ್ಪರ ಆನಂದವನ್ನು ಹಂಚಿಕೊಳ್ಳುತ್ತಾರೆ, ಸಂಭ್ರಮಿಸುತ್ತಾರೆ, ಗುರು-ಹಿರಿಯರೊಡನೆ ವಿಚಾರ-ವಿನಿಮಯದಲ್ಲಿ ತೊಡಗಿರುತ್ತಾರೆ. ಆದರೆ ನನಗೆ ಏನಾಗಿದೆ, ಯಾಕೆ ಈ ಯಾವುದರಲ್ಲೂ ಆಸಕ್ತಿಯಿಲ್ಲ? ಯಾಕೆ ನಾನು ಯಾವ ಮನುಷ್ಯನ ಕುರಿತೂ ಪ್ರೀತಿ, ಆಸಕ್ತಿಯನ್ನು ತೋರಿಸುವುದಿಲ್ಲ? ನನ್ನಲ್ಲಿ ಏನಾದರೂ ಮನುಷ್ಯದ್ವೇಷದ ಸ್ವಭಾವವಿದೆಯೇ? ನಾನು ಯಾರೊಡನೆಯೂ ಖುದ್ದಾಗಿ ಹೋಗಿ ಮಾತನಾಡುವುದಿಲ್ಲ, ಹಂಚಿಕೊಳ್ಳುವುದಿಲ್ಲ, ಸ್ನೇಹ-ಪ್ರೀತಿ ತೋರಿಸುವುದಿಲ್ಲ, ಇದೆಂತಹ ಸ್ವಾರ್ಥ ಬುದ್ಧಿ ನನ್ನದು?

ಆದರೆ ಇವರ ಬಳಿಗೆ ಮೂರನೆಯ ಬಾರಿಗೆ ಹೋಗುವವರೆಗೂ ನನ್ನ ಸ್ವಭಾವದ, ದ್ವಂದ್ವಗಳ ಸ್ವರೂಪ ಸ್ವಲ್ಪವೂ ಸ್ಪಷ್ಟವಾಗಿ ಅರ್ಥವಾಗಲಿಲ್ಲ. ಅನೇಕ ವರ್ಷಗಳ ನಂತರ ಅವರ ಮನೆಯೆಡೆಗೆ ನಾನು ಹೋದಾಗ ನನ್ನ ಜೊತೆ ಅಪ್ಪ ಇರಲಿಲ್ಲ. ಅವರು ನಮ್ಮೂರಿನ ಪಕ್ಕದ ಒಂದು ಹಳ್ಳಿಯಲ್ಲಿ ತಮ್ಮ ತೋಟದ ಮನೆಯಲ್ಲಿ ವಾಸವಾಗಿದ್ದರು. ಮಣ್ಣಿನ ದಾರಿಯಲ್ಲಿ ನಡೆದು, ತೋಟದ ಅಂಚಿನಲ್ಲಿ ನಡೆದು ಸಂಕೋಚಪಡುತ್ತಾ ಅವರ ಮನೆಗೆ ಹೋದೆ. ಹಳೆಯ ಕಾಲದ ಹೆಂಚಿನ ಮನೆ. ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಎಂದು ಅಪ್ಪ ಯಾವಾಗಲೋ ಹೇಳಿದ್ದರು, ಅದಕ್ಕಾಗಿ ನನ್ನ ಸಂಕೋಚ ಇನ್ನೂ ಜಾಸ್ತಿಯಾಗಿತ್ತು. ಸಂಜೆಯ ಹೊತ್ತು ಮನೆಯ ಹೊರಗಡೆ ಸುಮ್ಮನೇ ಕುಳಿತಿದ್ದರು. ಅವರ ಬಳಿಗೆ ಮೆಲ್ಲಗೆ ಹೆಜ್ಜೆಗಳನ್ನಿಡುತ್ತ ಹೋದೆ. ನಮಸ್ಕಾರ ಅನ್ನಬೇಕಾ ಗೊತ್ತಾಗಲಿಲ್ಲ. ಸುಮ್ಮನೇ ಅವರ ಮುಖ ನೋಡುತ್ತ ಹೋದೆ, ನನ್ನನ್ನು ನೋಡಿದವರು ಬಾ ಎಂದು ಪಕ್ಕದಲ್ಲಿ ಕುಳಿತುಕೊಳ್ಳಲು ಹೇಳಿದರು. ಸುಮ್ಮನೆ ಕುಳಿತೆ. ಸ್ವಲ್ಪ ಹೊತ್ತಿನ ನಂತರ ಏನು ಓದ್ತಿದ್ದೀ ಎಂದು ಹೇಳಿದರು. ಬಿಎ ಸೇರಿ ಒಂದೆರೆಡೇ ತಿಂಗಳಾಗಿತ್ತು. ಹೇಳಿದೆ. ಯಾಕೆ ಅಲ್ಲಿಯವರೆಗೆ ನಡೆದುಬಂದೆನೋ, ಯಾಕೆ ಅವರನ್ನು ಭೇಟಿಯಾಗಬೇಕೆನ್ನಿಸಿತೋ ನನಗೆ ಗೊತ್ತಾಗಲಿಲ್ಲ್ಲ. ಅಲ್ಲಿಂದ ಹೊರಡಬೇಕು ಅನ್ನಿಸಿತು, ಮೆಲ್ಲಗೆ ಎದ್ದು ಹೊರಡುತ್ತೇನೆ ಎಂದೆ. ಹೋಗಬಹುದು ಕುಳಿತುಕೋ ಎಂದರು. ಆ ಹೊತ್ತಿಗೆ ಅವರ ಮಡದಿ ನಮಗಿಬ್ಬರಿಗೂ ಕಷಾಯವನ್ನು ತಂದರು. ನನಗೆ ಯಾಕೋ ಬರಬಾರದಿತ್ತು ಅನ್ನಿಸುತ್ತಿತ್ತು. ಅವರು, ನಾವಿಬ್ಬರೂ ತೋಟಕ್ಕೆ ಹೋಗಿಬರುತ್ತೇವೆ ಎಂದು ತಮ್ಮ ಮಡದಿಯ ಬಳಿ ಹೇಳಿ ಎದ್ದರು. ನಾನೂ ಅವರೊಡನೆ ಹೊರಟೆ.

ಮೊದಲ ದಿನ ಹಾಗೆ ತಿರುಗಾಡುತ್ತಾ ಅವರು ತೋಟದಲ್ಲಿದ್ದ ಗಿಡ-ಮರಗಳ ಕುರಿತು, ಅಲ್ಲಿ ಬರುವ ಹಕ್ಕಿಗಳ ಕುರಿತು ಮಾತನಾಡಿದರು. ಮುಂದೆ ಅನೇಕ ಬಾರಿ ನಾನು ಬಂದಾಗಲೂ ಅವರು ಹಾಗೇ ಒಬ್ಬ ಸಹಜ ಕೃಷಿಕನ ಹಾಗೆ ಇರುತ್ತಿದ್ದರು. ಹಿಂದೆ ಐದು ವರ್ಷಗಳ ಮೊದಲು ಅಪ್ಪನೊಡನೆ ಹೋದಾಗ ಅವರು ಬೋಧನೆಯ ಮಾತುಗಳನ್ನು ಆಡುತ್ತಿದ್ದುದು ನೆನಪಾಗಿ ಈಗ ಯಾಕೆ ಇವರು ಯಾವುದೇ ವೇದಾಂತದ ಮಾತನ್ನಾಡುತ್ತಿಲ್ಲ, ಇವರು ನಿಜವಾಗಿಯೂ ಸಾಕ್ಷಾತ್ಕಾರ ಪಡೆದ ಮಹಾಪುರುಷರೇ ಹೌದೇ ಎಂದು ಅನುಮಾನವಾಗುತ್ತಿತ್ತು. ನನ್ನೊಳಗಿದ್ದ ಸನ್ಯಾಸಿಯೆಂದರೆ ಹೀಗಿರಬೇಕು ಎಂಬ ಕಲ್ಪನೆಗೆ ತೀರಾ ವಿಪರೀತವಾಗಿದ್ದರು ಅವರು. ಆದರೆ, ನಿಧಾನವಾಗಿ ನನ್ನ ಪ್ರಶ್ನೆಗಳನ್ನು ಅವರೆದುರು ಇಡತೊಡಗಿದೆ, ಮತ್ತು ಅವರು ಸೋದಾಹರಣವಾಗಿ ಎಲ್ಲವನ್ನೂ ವಿವರಿಸುತ್ತಿದ್ದರು. ನಿನ್ನ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೇನೆ ಅಂದುಕೊಳ್ಳಬೇಡ, ಆ ಪ್ರಶ್ನೆಗಳೆಂಬ ಕಳೆಯನ್ನು ಕೀಳುತ್ತಿದ್ದೇನೆ ಅನ್ನುತ್ತಿದ್ದರು. ಕ್ರಮೇಣ ಎಷ್ಟೋ ಪ್ರಶ್ನೆಗಳು ಅರ್ಥಹೀನ ಅನ್ನಿಸುತ್ತ ಕೇಳುವ ಮೊದಲೇ ಅವು ನನ್ನಿಂದ ಮಾಯವಾಗುತ್ತಿದ್ದವು. ಹೀಗೆ,
ಅನಂತರದ ಮೂರು ವರ್ಷಗಳಲ್ಲಿ ಅವರ ಬಳಿಗೆ ಅದೆಷ್ಟು ಬಾರಿ ಹೋಗಿದ್ದೇನೋ ಲೆಕ್ಕವಿಲ್ಲ, ಎಷ್ಟೋ ಬಾರಿ ರಾತ್ರಿ ಎಷ್ಟೋ ಹೊತ್ತಿನವರೆಗೆ ಅವರು ಮಾತನಾಡುತ್ತಲೇ ಇರುತ್ತಿದ್ದರು, ಮತ್ತು ನಾನು ಸುಮ್ಮನೇ ಅವರ ಮಾತುಗಳಲ್ಲಿ ಕಳೆದುಹೋಗುತ್ತಿದ್ದೆ. ಅವರ ಮಾತುಗಳಿಗಿಂತ ಹೆಚ್ಚಾಗಿ ಅವರ ಉಕ್ಕಿ ಹರಿವ ಪ್ರೇಮ ನನ್ನನ್ನು ಮತ್ತೆ ಮತ್ತೆ ಅವರಲ್ಲಿಗೆ ಸೆಳೆಯುತ್ತಿತ್ತು. ಅಂತದರಲ್ಲೂ, ಈ ನಡುವೆ ನಾನು ಅವರೊಡನೆ ಎಷ್ಟೋ ಬಾರಿ ಬೇಸರ ಮಾಡಿಕೊಂಡು ಇವರು ಯಾವ ಉಪಯೋಗಕ್ಕೂ ಬಾರದವರು, ನನಗೆ ಇವರಿಂದ ಏನೂ ಆಗಬೇಕಿಲ್ಲ ಎಂದುಕೊಂಡು ತಿಂಗಳುಗಟ್ಟಲೇ ಅವರ ಬಳಿಗೆ ಹೋಗದೇ ಇದ್ದುಬಿಟ್ಟಿದ್ದೇನೆ. ಆದರೆ ಅವರ ಮೇಲಿನ ತಿರಸ್ಕಾರ ಭಾವವೆಲ್ಲ ಕಳೆದು ಮತ್ತೆ ಅವರ ಬಳಿಗೆ ಹೋಗಬೇಕು ಅನ್ನುವ ಹಂಬಲ ತುಂಬುತ್ತಿತ್ತು. ಒಮ್ಮೆ ಕೇಳಿದ್ದೆ, “ಕೆಲವು ಪವಾಡಪುರುಷರ, ಸನ್ಯಾಸಿಗಳ ಬಳಿ ಲಕ್ಷಾಂತರ ಜನ ಹೋಗುತ್ತಾರೆ ಅವರು ಪವಾಡಗಳನ್ನು ಮಾಡಿ ಜನರ ಆಸೆಗಳನ್ನು ಈಡೇರಿಸುತ್ತಾರೆ. ನೀವು ಯಾಕೆ ಯಾವ ಪವಾಡವನ್ನೂ ಮಾಡುವುದಿಲ್ಲ? ನಿಮಗೆ ಆ ಶಕ್ತಿಯಿಲ್ಲವೇ?”
ಮುಗುಳ್ನಕ್ಕು ಹೇಳಿದರು, “ಇಲ್ಲ, ನಾನು ಅಂತಹ ಪವಾಡಗಳನ್ನು ಮಾಡುವ ಶಕ್ತಿಯುಳ್ಳವನಲ್ಲ. ನಾನೊಬ್ಬ ಸಾಮಾನ್ಯ ವ್ಯಕ್ತಿ.”
ಆಮೇಲೆ ಹೇಳಿದರು, “ಪವಾಡಗಳು, ಪ್ರಾಪಂಚಿಕ ಸುಖಗಳು ಬೇಕಾದವರು ಅದನ್ನು ನೀಡುವವರ ಬಳಿಗೆ ಹೋಗುತ್ತಾರೆ. ನನಗೆ ಅದೆಲ್ಲಾ ಗೊತ್ತಿಲ್ಲ. ನನಗೆ ಗೊತ್ತಿರುವುದು ಭಗವಂತ ಮಾತ್ರ. ಜಗತ್ತಿನ ಸುಖ ಬೇಕೆನ್ನುವವರು ಅಲ್ಲಿಗೆ ಹೋಗುತ್ತಾರೆ, ಕೇವಲ ಭಗವಂತ ಮಾತ್ರ ಬೇಕು ಅನ್ನುವವರು ನನ್ನ ಹತ್ತಿರ ಬರುತ್ತಾರೆ.”

ಆದರೆ ಜಗತ್ತಿನ ಸುಖ ಇವರೂ ಪಡೆಯುತ್ತಿದ್ದಾರಲ್ಲ ಅನ್ನಿಸುತ್ತಿತ್ತು. ಮದುವೆಯಾಗಿದೆ, ಇಬ್ಬರು ಹೆಣ್ಣುಮಕ್ಕಳೂ ಇದ್ದಾರೆ, ಇಷ್ಟೆಲ್ಲ ತೋಟ, ಗದ್ದೆ, ವ್ಯವಹಾರ ಎಲ್ಲವೂ ಇದೆ. ಆಸೆಪಟ್ಟು ವೀಳ್ಯ ಹಾಕಿಕೊಳ್ಳುತ್ತಾರೆ, ರುಚಿಕಟ್ಟಾಗಿ ಊಟ ಹೊಡೆಯುತ್ತಾರೆ! ಆದರೆ, ಈವರೆಗೆ ಯಾರೂ ನನ್ನ ಹಾಗೆ ಅವರೊಡನೆಯೇ ಇದ್ದುದನ್ನು ನಾನು ನೋಡಲಿಲ್ಲ. ಯಾವಾಗಲಾದರೂ ಯಾರಾದರೂ ಬರುತ್ತಿದ್ದರು, ಹಣ್ಣುಹಂಪಲು ತರುತ್ತಿದ್ದರು, ಇವರ ಮುಂದೆ ಕುಳಿತುಕೊಂಡು ತಮ್ಮ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳುತ್ತಾ ಕೆಲವು ತಾಸುಗಳವರೆಗೆ ಇರುತ್ತಿದ್ದರು. ಅವರು ಏನು ಪ್ರಶ್ನೆಗಳನ್ನು ಕೇಳುತ್ತಿದ್ದರೋ ನಾನು ಕೇಳಿಸಿಕೊಳ್ಳುತ್ತಿರಲಿಲ್ಲ, ನನಗೆ ಇವರ ಉತ್ತರ ಮುಖ್ಯವಾಗುತ್ತಿತ್ತು, ನಾನೂ ಮೈಮರೆತು ಕೇಳುತ್ತಿದ್ದೆ. ಒಮ್ಮೆ ಕೇಳಿದ್ದೆ, “ನೀವು ಭಗವಂತನನ್ನು ನೋಡಿರುವಿರಾದರೆ ಜಗತ್ತಿನಲ್ಲಿ ಎಷ್ಟೆಲ್ಲ ಜನ ಸಂಕಟಪಡುತ್ತಿದ್ದಾರಲ್ಲ ಅವರಿಗೆ ಯಾಕೆ ಸಹಾಯ ಮಾಡಬಾರದು? ಇಲ್ಲಿ ಯಾಕೆ ಹೀಗೆ ನಿಮ್ಮಷ್ಟಕ್ಕೇ ಇರುತ್ತೀರಿ?”
ಅದಕ್ಕವರು, “ಎಲ್ಲವೂ ನಿನ್ನ ಕಣ್ಣಿಗೆ ಕಾಣುವಂತೆಯೇ ನಡೆಯಬೇಕೋ? ಯಾರಿಗೆ ಮಾರ್ಗದರ್ಶನ ಬೇಕೋ ಅವರು ತಾವಾಗಿ ಬಂದು ಮಾರ್ಗದರ್ಶನ ಪಡೆಯುತ್ತಾರೆ, ಇಲ್ಲವೇ ನಾನೇ ಅವರ ಬಳಿಗೆ ಹೋಗುತ್ತೇನೆ. ಅಥವಾ, ಯಾವುದೋ ನಿಮಿತ್ತಗಳ ರೂಪದಲ್ಲಿ ಮಾರ್ಗದರ್ಶನ ದೊರೆಯುತ್ತಲೇ ಇರುತ್ತದೆ. ಹೃದಯವನ್ನು ತೆರೆದುಕೊಂಡವನಿಗೆ ಅದೆಲ್ಲವೂ ಅರಿವಾಗುತ್ತದೆ. ನಿನ್ನ ಮೊಂಡುತನದ ಪ್ರಶ್ನೆಗಳನ್ನು ಮೀರಿ, ನಿನ್ನ ಶ್ರದ್ಧೆ ಎಲ್ಲಿದೆ ಅನ್ನುವುದನ್ನು ಕಂಡುಕೊಳ್ಳಲು ಪ್ರಯತ್ನಿಸು.”

ಅವರ ಮನೆಯಿಂದ ಸ್ವಲ್ಪ ದೂರದಲ್ಲಿಯೇ ಹರಿಯುತ್ತಿದ್ದಳು ವರದೆ. ನಾನು ಈ ಧ್ಯಾನ-ಮೌನ ಕರ್ಮಕಾಂಡ ಯಾವುದೂ ಬೇಡವೆಂದುಕೊಂಡಾಗಲೆಲ್ಲ ಅಲ್ಲಿ ಹೋಗಿ ಗಂಟೆಗಟ್ಟಲೇ ಕುಳಿತುಕೊಂಡಿರುತ್ತಿದ್ದೆ. ಸಂಜೆ ಅರಳಿ ಬೆಳದಿಂಗಳ ಘಮ ಹರಡಿದರೂ ಇನ್ನೂ ಬೆಚ್ಚಗಿರುವ ಮರಳಿನ ಮೇಲೆ ಒರಗಿಯೇ ಇರುತ್ತಿದ್ದೆ. ಯಾವಾಗಲಾದರೊಮ್ಮೆ ಅವರು ಬಂದು ನನ್ನನ್ನು ಅಲ್ಲಿಂದ ಕರೆದೊಯ್ಯುತ್ತಿದ್ದರು. ಈ ಎರೆಡು ವರ್ಷಗಳಲ್ಲಿ ಅವರನ್ನು ಸ್ವಲ್ಪ ಸ್ವಲ್ಪವಾಗಿ ನಂಬಲು ಪ್ರಾರಂಭಿಸಿದ್ದೆ, ಮತ್ತು ಮೂರನೇ ವರ್ಷದ ಆರಂಭದಲ್ಲಿ ಈ ಹುಡುಗಿ ಅಲ್ಲಿಗೆ ಬಂದಳು.

ಅವತ್ತು ಸಂಜೆ ನಾನು ಅವರ ಮನೆಗೆ ಹೋದಾಗ ಖುರ್ಚಿಯ ಮೇಲೆ ಕುಳಿತು ಕಷಾಯ ಕುಡಿಯುತ್ತಿದ್ದ ಅವಳ ಮೇಲ್ದುಟಿಗೆ ಕಷಾಯದ ಹನಿ ತಾಗಿ ಅವಳಿಗೆ ಮೀಸೆ ಬಂದಿತ್ತು. ನಾನು ಅದನ್ನು ನೋಡಿ ಮುಗುಳ್ನಕ್ಕಿದ್ದಕ್ಕೆ, ಅವಳಿಗೆ ಕೋಪವೂ ಸಂಕೋಚವೂ ಆಗಿತ್ತು. ಅವಳೆದುರು ಕುಳಿತು ಆಗಲೇ ಏನನ್ನೋ ಹೇಳಲು ಪ್ರಾರಂಭಿಸಿದ್ದ ಗುರುಗಳು, “ಶ್ವೇತಕೇತು ವರುಷಗಳವರೆಗೆ ಆ ಜಾನುವಾರುಗಳೊಂದಿಗೆ ಕಾಡಿನಲ್ಲಿಯೇ ಉಳಿದುಬಿಟ್ಟ. ನೋಡುವ ಕಣ್ಣುಗಳಿರಲಿಲ್ಲ, ನೋಟಕ್ಕೆ ತನ್ನನ್ನು ಸಿದ್ಧಗೊಳಿಸಿಕೊಳ್ಳಬೇಕಾದ ಅಗತ್ಯ ಅವನಿಗೆ ಕಾಣಲಿಲ್ಲ; ಪ್ರಶ್ನೆ ಕೇಳುವ ಬಾಯಿಗಳು, ಉತ್ತರ ನಿರೀಕ್ಷಿಸುವ ಕಿವಿಗಳಿರಲಿಲ್ಲ, ಉತ್ತರಕ್ಕೆ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುವ ತನ್ನನ್ನು ತಾನು ರೂಪಿಸಿಕೊಳ್ಳುವ ಅಗತ್ಯವೆಲ್ಲ ಕಾಣಲೇ ಇಲ್ಲ, ಅವನು ಶಾಂತನಾಗುತ್ತಾ ಹೋದ…”

ಮೊದಲನೇ ದಿನವೇ ಈ ಹುಡುಗಿಗೆ ಕಥೆ! ನನಗೆ ಮೊದಲ ದಿನ ತೋಟದಲ್ಲಿ ಏನೋ ಕೆಲಸ ಹೇಳಿದ್ದರು. ನಾನು ಇಷ್ಟು ದಿನ ಅವರೊಡನೆ ಎಷ್ಟೆಲ್ಲ ಆರಾಂ ಆಗಿ, ಇಲ್ಲಿ ಎಲ್ಲವೂ ನಾನೇ ಎಂಬಂತೆ ಇದ್ದೆ ಅವರ ಬಳಿಯಲ್ಲಿ. ಒಂದಿನ ಅಚಾನಕ್ಕಾಗಿ ಒಬ್ಬ ಹುಡುಗಿ ಬಂದು ನನ್ನ ಸ್ಥಾನವನ್ನು ಆಕ್ರಮಿಸಿಕೊಂಡುಬಿಟ್ಟಿದ್ದಾಳೆ. ನನಗೆ ಕೋಪ ಬಂದುಬಿಟ್ಟಿತು. ಅಲ್ಲಿಂದ ಹೊರಟವನು ನೇರವಾಗಿ ನದಿ ತೀರಕ್ಕೆ ಹೋದೆ. ಅಲ್ಲಿಯೇ ಸಂಜೆಯವರೆಗೆ ಕುಳಿತವನು ನೇರವಾಗಿ ಮನೆಗೆ ಹೋಗಿಬಿಟ್ಟೆ. ಒಂದಿಡೀ ವಾರ ಅಲ್ಲಿಗೆ ಕಾಲಿಡಲಿಲ್ಲ.

ಆ ವಾರ ಕಾಲೇಜಿನಲ್ಲಿ ಒಂದಿನ ಆಫೀಸ್ ರೂಮಿಗೆ ಹೋದಾಗ ಆ ಹುಡುಗಿ ಕಾಣಿಸಿದಳು. ಹೊಸತಾಗಿ ಬಂದವಳೇ? ನನ್ನ ಮುಖವನ್ನು ತುಂಬ ಸೂಕ್ಷ್ಮವಾಗಿ ನೋಡಿದಳು. ಆಮೇಲೆ ಆಕೆ ಸೈನ್ಸ್ ಸೆಕ್ಷನ್ನಿನ ಕಡೆಗೆ ಹೋಗುವುದನ್ನು ನೋಡಿದೆ. ಮರುದಿನ ಅಲ್ಲಿಗೆ ಹೋಗಿ ಅವಳು ಸೈನ್ಸ್ ಕ್ಲಾಸಿನಲ್ಲಿರುವುದನ್ನು ಖಚಿತಪಡಿಸಿಕೊಂಡೆ. ಆದರೆ, ನಾನು ಕಾರಿಡಾರಿನಲ್ಲಿ ನಡೆದು ಅವಳ ಕ್ಲಾಸನ್ನು ದಾಟಿ ಅವಳನ್ನು ಹುಡುಕಿದ್ದನ್ನು ಅವಳೂ ಗಮನಿಸಿದ್ದಳು. ಆ ವಾರದ ನಂತರ ಅವರ ಮನೆಗೆ ಹೋಗಬೇಕೆಂದು ತೀವ್ರವಾಗಿ ಅನ್ನಿಸಿತು. ಈ ಎರೆಡು ವರ್ಷಗಳಲ್ಲಿ ಅವರೊಡನೆ ಇರುತ್ತ ನನ್ನ ಇಡೀ ಅಸ್ತಿತ್ವ ಹೊಸತೊಂದು ಬೆಳಕನ್ನು ಕಂಡುಕೊಂಡಿತ್ತು. ಅವರನ್ನು ನೋಡುತ್ತ ನೋಡುತ್ತ, ಸನ್ಯಾಸಿಯಾಗುವುದಕ್ಕೆ, ಸ್ವಾಮಿಯಾಗುವುದಕ್ಕಾಗಿಯೇ ಮೂರು ವರ್ಷ ವಯಸ್ಸಿನಿಂದಲೇ ಸಿದ್ಧರಾಗುವ, ಶಾಸ್ತ್ರಗಳನ್ನು ಅಧ್ಯಯನ ಮಾಡಿ ಬೋಧಿಸುವ ಆಶ್ರಮದ ಗಿಳಿಗಳಿಗೂ, ತನ್ನ ಸ್ವಂತ ಅರಿವಿನಿಂದ ಹುಟ್ಟಿಕೊಂಡ ಅನುಭಾವದ ಮಾತನ್ನಾಡುವ ಸಂಬುದ್ಧ ಪುರುಷನಿಗೂ ಇರಬಹುದಾದ ವ್ಯತ್ಯಾಸವನ್ನು ಗ್ರಹಿಸತೊಡಗಿದ್ದೆ. ಇಷ್ಟೆಲ್ಲ ಆದ ಮೇಲೂ ನಾನು ಆ ಹುಡುಗಿಯ ಅಸ್ತಿತ್ವದಿಂದ ಇಷ್ಟೆಲ್ಲ ಚಡಪಡಿಸುತ್ತಿದ್ದೇನಲ್ಲ ಅನ್ನಿಸಿ ನಾಚಿಕೆಯಾಗತೊಡಗಿತು. ಮರುದಿನ ಅವರ ಮನೆಗೆ ಹೋದೆ.

ಅವರ ಮಡದಿಯನ್ನು ನಾನು ಅಮ್ಮಾ ಅನ್ನುತ್ತಿದ್ದೆ. ಅವರು ಮನೆಯ ಹೊರಗಡೆ ಕಟ್ಟೆಯ ಮೇಲೆ ಕುಳಿತಿದ್ದರು. ಗುರುಗಳು ಎಲ್ಲಿದ್ದಾರೆ ಎಂದು ಕೇಳಿದೆ. ‘ಗೋದಾವರಿಯ ಮನೆಗೆ ಹೋಗಿದ್ದಾರೆ’ ಅಂದರು.
‘ಯಾರು ಗೋದಾವರಿ?’
‘ಈಗೊಬ್ಬಳು ಹೊಸ ಶಿಷ್ಯೆ ಬರುತ್ತಿದ್ದಾಳೆ. ಎರೆಡು ಮೂರು ದಿನಗಳಿಂದ ಅವಳು ಈ ಕಡೆ ಬಂದಿರಲಿಲ್ಲ. ಅವರ ಮನೆಗೆ ಹೋಗಿದ್ದಾರೆ.’
ಎಲ್ಲಿಯೋ ಚುಚ್ಚಿದಂತಾಯಿತು. ಈ ಎರೆಡು ವರ್ಷಗಳಲ್ಲಿ ಅವರು ಯಾವತ್ತೂ ನನ್ನನ್ನು ಹುಡುಕಿಕೊಂಡು ನಮ್ಮ ಮನೆಗೆ ಬರುತ್ತಿರಲಿಲ್ಲ. ಮನೆಯಲ್ಲಿಯೂ ಸಹಾ ನಾನು ಎಲ್ಲಿಗೆ ಹೋಗುತ್ತೇನೆ ಎಂದು ಹೇಳಿರಲಿಲ್ಲ. ಒಂದಿನ ಅಪ್ಪ-ಅಮ್ಮ ಮಾತನಾಡುತ್ತಿದ್ದರು, ಹೀಗೆ ನಡು ರಾತ್ರಿಯವರೆಗೆ ಎಲ್ಲಿಗೆ ಹೋಗಿ ಬರುತ್ತೇನೆ ಎಂದು. ಅಮ್ಮ ನನ್ನ ಬಳಿಯೇ ಕೇಳಿದರು. ಅವರಿಗೆ ಬೆಳೆದ ಮಗ ನಡು ರಾತ್ರಿಯವರೆಗೆ ಎಲ್ಲಿಗೋ ಹೋಗಿ ಬರುತ್ತಾನೆ ಎಂದರೆ ಆತಂಕ. ಏನೇನು ಕಲ್ಪಿಸಿಕೊಂಡಿದ್ದರೋ. ನಾನು ಆ ರಾತ್ರಿಗಳಲ್ಲಿ ಗುರುಸಮ್ಮುಖದಲ್ಲಿರುತ್ತೇನೆ ಎಂದು ಹೇಳಿದ್ದೆ. ತಂದೆ ಗುರುಗಳ ಬಳಿ ಕೆಲವೊಮ್ಮೆ ಬರುತ್ತಿದ್ದರು. ಆದರೆ, ಒಂದು ವಾರದಲ್ಲಿಯೇ ಗುರುಗಳು ಅವಳ ಮನೆಗೆ ಹೋದರೆಂದರೆ, ಅವಳು ನನಗಿಂತ ಎತ್ತರವನ್ನು ಸಾಧಿಸಿರುವ ಶಿಷ್ಯಳೇ?

ಅಲ್ಲಿಂದ ನದಿ ತೀರಕ್ಕೆ ನಡೆದವನು, ಮರಳ ಮೇಲೆ ಒರಗಿಕೊಂಡೆ. ಆ ಹುಡುಗಿ ಗೋದಾವರಿಯ ನೆನಪು ಬಂತು. ಅವಳ ಪುಟ್ಟ ಕಂಗಳು ಮತ್ತು ಮೌನ ನೆನಪಾಯಿತು. ಯಾಕೋ ಅಕ್ಕರೆ ಉಕ್ಕಿ ಬಂತು. ನಾನು ಇಷ್ಟು ವರ್ಷಗಳವರೆಗೆ ನಾನು ಏನನ್ನಾದರೂ ಪ್ರೀತಿಯಿಂದ ಕಲಿತಿದ್ದೇನಾ, ಕಲಿತವರ, ಸಾಧಕರ ಬಳಿಗೆ ಹೋಗಿದ್ದೇನಾ, ಅಥವಾ ನನ್ನದೇ ಅಂತ ಹೇಳಿಕೊಳ್ಳುವ ಯಾವುದಾದರೂ ಸಾಧನೆಯ ಮಾರ್ಗ ಇದೆಯಾ ಅಂತ ನೋಡಿದರೆ ಶೂನ್ಯ. ಅವಳ ಮುಖದಲ್ಲಿನ ಚೈತನ್ಯ ನೋಡಿದರೆ ಅವಳು ತುಂಬಾ ಆನಂದಿತಳಾಗಿ ಇರುವ ಹಾಗೆ ಕಾಣುತ್ತಾಳೆ. ಅವಳಿಗೆ ಮಾರ್ಗ ದೊರೆತಿರಬಹುದು. ಹೀಗೆ ಹೋಲಿಸಿಕೊಳ್ಳುವುದರಲ್ಲಿ ಏನಿದೆ? ಅವಳ ದಾರಿ ಅವಳಿಗೆ, ನನ್ನದು ನನಗೆ. ಇನ್ನು ಗುರುವನ್ನು ಕೇವಲ ನನ್ನವರು ಅಂದುಕೊಳ್ಳುವುದು ತಪ್ಪಾಗುತ್ತದೆ. ಅವರಿಗೆ ಸರಿಯೆನ್ನಿಸಿದ್ದನ್ನು ಅವರು ಮಾಡುತ್ತಾರೆ. ಅವಳನ್ನು ಹುಡುಕಿಕೊಂಡು ಹೋಗುವ ನಿರ್ಧಾರ ಅವರದಾದರೆ, ಅದಕ್ಕೆ ನಾನು ವಿರೋಧಭಾವ ತಾಳುವುದು ಎಷ್ಟು ಸರಿಯಾಗುತ್ತದೆ?

ಮರುದಿನ ಸಂಜೆ ಅವರ ಮನೆಗೆ ಹೋದಾಗ ಗೋದಾವರಿ ನನ್ನನ್ನು ನೋಡಿ ಮುಗುಳ್ನಕ್ಕಳು. ಅನಂತರದಲ್ಲಿ ನಮ್ಮ ಪರಿಚಯ ಬೆಳೆಯಿತು. ಅವಳು ಅವರ ಮನೆಯಲ್ಲಿಯೇ ಹೆಚ್ಚಾಗಿ ಇರತೊಡಗಿದ್ದಳು. ಮನೆಯೊಳಗೆಲ್ಲ ತುಂಬ ಸ್ವಚ್ಛಂದವಾಗಿ ಓಡಾಡಿಕೊಂಡಿರುತ್ತಿದ್ದಳು. ನನಗೆ ಮಾತ್ರ ಅದು ಸಾಧ್ಯವಾಗುತ್ತಿರಲಿಲ್ಲ. ಅವಳೂ ಬ್ರಾಹ್ಮಣಳಾಗಿದ್ದರಿಂದಲೇ ಅವಳಿಗೆ ಇಷ್ಟೆಲ್ಲ ಸ್ವಚ್ಛಂದವಾಗಿ ಅವರ ಮನೆಯಲ್ಲಿ ಓಡಾಡುವುದು ಸಾಧ್ಯವಾಗಿದೆಯೇನೋ ಅನ್ನಿಸುತ್ತಿತ್ತು. ಅಥವಾ ಅವಳ ಸ್ವಭಾವದಲ್ಲಿಯೇ ಅಂತಹದೊಂದು ಸ್ವಚ್ಛಂದತೆ ಅಂತ ಯೋಚಿಸುತ್ತಿದ್ದೆ. ನನಗೂ ಹಾಗೆ ಓಡಾಡಬೇಕು ಅನ್ನುವ ಭಾವ ಇದೆಯಾ ಕೇಳಿಕೊಂಡೆ. ಒಬ್ಬರ ಮನೆಯಲ್ಲಿ ಸ್ವಚ್ಛಂದವಾಗಿ ಓಡಾಡುವುದು ಸಾಧ್ಯವಾಗುವುದರಿಂದ ಯಾವ ಸಾರ್ಥಕತೆ ಉಂಟಾದೀತು ಯೋಚಿಸತೊಡಗಿದೆ.

ಕೆಲವೊಮ್ಮೆ ಅದೆಂತಹ ಗಾಢವಾದ ಮನಃಕ್ಷೋಭೆ ಉಂಟಾಗುತ್ತಿತ್ತು ಅಂದರೆ, ನಿಮ್ಮ ಹತ್ತಿರ ಬರುವುದರಿಂದಾಗಿಯೇ ನನ್ನ ಆನಂದವೆಲ್ಲ ಹಾಳಾಗಿ ಬರೀ ಗೊಂದಲವೇ ತುಂಬಿಕೊಳ್ಳೂತ್ತಿದೆ, ಅಶಾಂತಿ ಹೆಚ್ಚಾಗುತ್ತಿದೆ ಎಂದು ಅವರೆದುರು ಹೇಳಿದ್ದೆ. ಅವರು ಮುಗುಳ್ನಕ್ಕಿದ್ದರು. ಇನ್ನು ನಾನು ನಿಮ್ಮಲ್ಲಿಗೆ ಬರುವುದಿಲ್ಲ ಎಂದು ಹೇಳಿ ಹೋದವನು ತಿಂಗಳ ನಂತರ ಮತ್ತೆ ಅವರಲ್ಲಿಗೆ ಹೋದಾಗ, ಮತ್ತೆ ಯಾಕೆ ಬಂದೆ ಅಂತ ಕೇಳಿದ್ದರು. ಬಹುಶಃ ಅವತ್ತು ರಾತ್ರಿಯೇ ಅತ್ಯಂತ ದೀರ್ಘವಾಗಿ ಮಾತನಾಡಿದರು. “ಏಳು ಬೆಟ್ಟಗಳನ್ನೇರುವುದು, ಏಳು ಸಮುದ್ರವನ್ನು ದಾಟುವುದು ಸುಲಭವೆಂದುಕೊಂಡಿದ್ದೀಯಾ? ಜೀವವನ್ನೇ ಒತ್ತೆಯಿಡುವಂತಹ ಸಂಕಲ್ಪವಿದ್ದರೆ ಮಾತ್ರ ನೀನು ಮುಂದುವರೆಯಬಹುದು. ಭಗವಂತನಿಗೆ ನಿನ್ನ ಯಾವ ಆಮಿಷಗಳನ್ನೂ ತೋರಿಸಿ ಅವನನ್ನು ಗೆಲ್ಲಲಾರೆ. ಜನ ಭಗವಂತನಿಗೂ ಕಾಣಿಕೆಯ ಭಿಕ್ಷೆ ಹಾಕುತ್ತಾರೆ. ಒಂದು ರೂಪಾಯಿಯಾಗಲೀ, ಬಂಗಾರದ ಕಿರೀಟವೇ ಆಗಲಿ ಎಲ್ಲವೂ ಭಗವಂತನಿಗೆ ನೀಡುವ ಭಿಕ್ಷೆಯೇ. ಅದು ಅವನಿಗೆ ತೋರುವ ಅಗೌರವವೇ. ತಮ್ಮನ್ನೇ ಅರ್ಪಿಸಿಕೊಳ್ಳಲು ಯಾರಾದರೂ ಸಿದ್ಧರಿದ್ದಾರೇನು? ಬಹಳ ಜನರು ಕೇಳುತ್ತಾರೆ, ದೇವರಿದ್ದಾನೆಯೇ ಎಂದು.

ಅದು ಜೀವನ ಮರಣದ ಪ್ರಶ್ನೆ. ಉತ್ತರ ಬೇಕಾದವನು ಸಾವಿಗೂ ಸಿದ್ಧನಾಗಬೇಕು. ಗೇಲಿ ಮಾಡಿಕೊಂಡು ಓಡಾಡುವ ಪುಂಡು-ಪೋಕರಿ ಬುದ್ಧಿಜೀವಿಗಳಿಗೆಲ್ಲಾ ಆ ಪ್ರಶ್ನೆಯ ಮಹತ್ವವೂ ಗೊತ್ತಿಲ್ಲ. ನಿನಗೆ ಈ ಪ್ರಶ್ನೆ ನಿನ್ನ ಜೀವನ ಮರಣದ ಪ್ರಶ್ನೆಯಾದರೆ ಮಾತ್ರ ನನ್ನ ಬಳಿಗೆ ಬಾ. ಉತ್ತರ ಬೇಕಾದವನು ಎಲ್ಲವನ್ನೂ ಸಹಿಸಲು ಸಿದ್ಧನಾಗಬೇಕಾಗುತ್ತದೆ…”

ನಂತರದಲ್ಲಿ, ನಾನು ಗೋದಾವರಿ ಇಬ್ಬರೂ ಭೇಟಿಯಾದಾಗಲೆಲ್ಲ ನದಿ ತೀರಕ್ಕೆ ಹೋಗಿ ಕುಳಿತುಕೊಳ್ಳುತ್ತಿದ್ದೆವು. ಆಕೆ ಹೆಚ್ಚಿನ ಕಾಲ ಮೌನವಾಗಿರುತ್ತಿದ್ದಳು. ಆದರೆ, ಇನ್ನೂ ಚಿಕ್ಕ ಮಗುವಿನಂತೆ ತನ್ನಷ್ಟಕ್ಕೆ ತಾನೇ ಏನೋ ಆಟವಾಡಿಕೊಳ್ಳುತ್ತಿದ್ದಳು. ಅವಳಷ್ಟಕ್ಕೆ ಅವಳನ್ನು ಬಿಟ್ಟು ನಾನು ನದಿಯ ಗುಂಟ ನಡೆದುಹೋಗುತ್ತಿದ್ದೆ. ಕೆಲವೊಮ್ಮೆ ನಾವಿಬ್ಬರೂ ಮಿಂಚುಳ್ಳಿಯನ್ನು ಹುಡುಕುತ್ತ ಹೋಗುತ್ತಿದ್ದೆವು, ಹಕ್ಕಿ ಗೂಡುಗಳನ್ನು, ಹೂವುಗಳನ್ನು, ಹಣ್ಣುಗಳನ್ನು ಹುಡುಕಿಕೊಂಡು ಕಾಡ ತುಂಬೆಲ್ಲ ಅಲೆಯುತ್ತಿದ್ದೆವು. ಹೀಗೆ ಒಂದಿನ ಬೇಸರ ಮಾಡಿಕೊಂಡು ಮರಳನ್ನೆಲ್ಲ ಒದೆಯುತ್ತ ಕುಳಿತಿದ್ದಳು. ಅವಳ ಸ್ನೇಹಿತೆಯೊಬ್ಬಳಿಗೆ ತಾನು ಗುರುಗಳ ಮನೆಗೆ ಬರುವ ಸಂಗತಿಯನ್ನೆಲ್ಲ ಹೇಳಿದಳಂತೆ. ಅದಕ್ಕೆ ಅವಳು, ‘ಏನೇ ನೀನು ಸನ್ಯಾಸಿಯಾಗ್ತಿಯೇನೇ’ ಅಂತ ಹೀಯಾಳಿಸಿಬಿಟ್ಟಳಂತೆ.

ನಾನು ಏಳೆಂಟು ವರ್ಷಗಳ ಹಿಂದೆ ನಡೆದಿದ್ದ ಒಂದು ಘಟನೆಯನ್ನು ಅವಳಿಗೆ ಹೇಳಿದೆ. “ನಾನು ಎಂಟನೇ ತರಗತಿಯಲ್ಲಿದ್ದಾಗ ಅನ್ನಿಸುತ್ತದೆ, ಪಕ್ಕದ ಮನೆಗೊಬ್ಬ ಹುಡುಗ ಬಂದಿದ್ದ. ಆರನೇ ತರಗತಿಗೆ ನಮ್ಮೂರಲ್ಲೇ ಶಾಲೆಗೆ ಸೇರಿಸಿದ್ದರು. ಅವನು ನಮ್ಮನೆ ಪಕ್ಕದಲ್ಲಿದ್ದ ಅಜ್ಜಿ ಮನೆಯಲ್ಲಿ ಇದ್ದುಕೊಂಡು ಶಾಲೆಗೆ ಹೋಗುತ್ತಿದ್ದ. ನಾವಿಬ್ಬರೂ ಸುಮ್ಮನೇ ತಿರುಗುತ್ತಿದ್ದೆವು. ಅದೊಂದು ಶನಿವಾರ, ಊರ ಹೊರಗೆ ಹುಳಿಮಾವಿನ ಮರದ ಕೆಳಗೆ ಜೋಡಿಸಿಟ್ಟಿದ್ದ ದೊಡ್ಡ ಪೈಪುಗಳ ಮೇಲೆ ಕುಳಿತು ಹರಟೆಹೊಡೆಯುತ್ತಿದ್ದೆವು. ಚರಂಡಿಗೆ ಹಾಕಲೆಂದು ತಂದಿಟ್ಟಿದ್ದ ಆ ಪೈಪುಗಳಲ್ಲಿ ಒಬ್ಬ ವ್ಯಕ್ತಿ ಆರಾಮಾಗಿ ಮಲಗಬಹುದಿತ್ತು. ನಾವೂ ಕೆಲವೊಮ್ಮೆ ಕಳ್ಳ ಪೋಲಿಸ್ ಆಡುತ್ತಾ ಅವುಗಳಲ್ಲಿ ಅಡಗಿಕುಳಿತುಕೊಳ್ಳುತ್ತಿದ್ದೆವು. ಅವನು ಮರುದಿನ ತನ್ನ ಅಪ್ಪ-ಅಮ್ಮ ಬರುತ್ತಿದ್ದಾರೆಂದು ಖುಷಿಯಿಂದ ಹೇಳಿದ. ನಾನು ತುಂಬ ಗಂಭೀರವಾಗಿ(?) ಆಧ್ಯಾತ್ಮದ ಪುಸ್ತಕಗಳನ್ನು ಓದುತ್ತಿದ್ದ ದಿನಗಳವು. ಅವನ ಹತ್ತಿರ, “ಹಾಗೆಲ್ಲಾ ಯಾರನ್ನೂ ತುಂಬಾ ಹಚ್ಚಿಕೊಳ್ಳಬಾರದು. ಅದು ನಾಳೆ ನೋವು ಕೊಡುತ್ತದೆ”, ಅಂದುಬಿಟ್ಟೆ. ಮೆಲ್ಲಗೆ ಅವನ ಮುಖಚರ್ಯೆ ವಿವರ್ಣಗೊಳ್ಳುತ್ತಾ, ಕಣ್ಣೆಲ್ಲ ಕೆಂಪಾಗಿ ಬಿಕ್ಕಿ ಬಿಕ್ಕಿ ಅಳತೊಡಗಿದ. ನಾನು ಕೊನೆಗೆ ನನ್ನದು ತಪ್ಪಾಯಿತು ಎಂದು ಕೇಳಿಕೊಂಡು ಅವನಿಗೆ ಸಮಾಧಾನ ಮಾಡಿದೆ. ಆದರೆ ಮುತ್ತು ಒಡೆದು ಹೋಗಿತ್ತು. ಈ ಸಂಗತಿ ನನ್ನ ಮನಸ್ಸಿನ ಮೇಲೆ ತುಂಬಾ ಪರಿಣಾಮಭೀರಿತು. ಅನೇಕ ದಿನಗಳವರೆಗೆ ಅದನ್ನೇ ಯೋಚಿಸುತ್ತಿದ್ದೆ. ನನ್ನ ತಪ್ಪು ಎಂತಹುದೆಂದು ಅರಿವಾಗಿತ್ತು. ಅವತ್ತಿನಿಂದ ನಾನು ಇನ್ನು ಇಂತಹ ನನಗೇ ಅರ್ಥವಾಗದ ಬೋಧನೆಗಳನ್ನು ಮಾಡಬಾರದೆಂದು ನಿರ್ಧರಿಸಿದೆ. ಇನ್ನು ನನ್ನ ಯಾವುದೇ ಆಲೋಚನೆ, ಓದೂ ಇನ್ನೊಬ್ಬರಿಗೆ ಗೊತ್ತಾಗದಂತೆ ಆಗಬೇಕು ಅಂದುಕೊಂಡೆ. ಅನೇಕ ಧ್ಯಾನ ಪ್ರಯೋಗಗಳನ್ನು ಅನಂತರದಲ್ಲಿ ಮಾಡಿದರೂ ಅವೆಲ್ಲ ನನ್ನ ಪಕ್ಕದ ಇನ್ನೊಂದು ಜೀವಿಗೆ ಗೊತ್ತಾಗದಂತೆ ಮಾಡಿದೆ.

“ಸುತ್ತ ಮುತ್ತಲಿನ ಸಮಾಜವನ್ನು ನೋಡು, ಭಗವತ್ತೆಯ ದಾರಿಯ ಕುರಿತು ಹೇಳಿಕೊಳ್ಳಲಾಗದ ತಿರಸ್ಕಾರವೂ, ತಡೆದುಕೊಳ್ಳಲಾಗದ ಆಕರ್ಷಣೆಯೂ, ಕುತೂಹಲವೂ ಜನರಲ್ಲಿ ತುಂಬಿಕೊಂಡಿರುತ್ತದೆ. ಅಲ್ಲದೇ, ಅದರ ಸುತ್ತ ಎಷ್ಟು ಕಿಲುಬು ಕಸ ತುಂಬಿಕೊಂಡಿದೆಯೆಂದರೆ, ಅದರ ಮಹತ್ವ ಸುಲಭದಲ್ಲಿ ಅರ್ಥವಾಗುವುದೇ ಇಲ್ಲ. ಅದು ಅಪಾರ್ಥವಾದದ್ದೇ ಹೆಚ್ಚು. ನಾವಿನ್ನೂ ದೈವಕಿರಣದ ಅನುಭವ ಪಡೆಯದೇ, ಆ ಕುರಿತು ಮಾತನಾಡಲು ಹೋಗಬಾರದು. ನಾವಿನ್ನೂ ಕಂಡುಕೊಳ್ಳುವ ಹಂತದಲ್ಲಿದ್ದೇವೆ. ನನ್ನ ಆಂತರ್ಯದ ಪ್ರಯೋಗಗಳಿಗೆ ಭಂಗ ಬರಬಾರದು ಅಂತಾದರೆ ನಾನು ಜಗತ್ತಿನ ಉಳಿದ ಜನರಂತೆಯೇ ಇರಬೇಕು, ಜಗತ್ತಿನ ಆಗುಹೋಗುಗಳೊಡನೆ ಇದ್ದುಕೊಂಡೇ ಇದನ್ನೆಲ್ಲ ಮಾಡಬೇಕು. ಇದಿನ್ನೂ ಈಗಷ್ಟೇ ಚಿಗುರೊಡೆದಿರುವುದರಿಂದ, ಆ ಚಿಗುರು ಯಾವ ಸಣ್ಣ ಕಾರಣಕ್ಕೂ ಮುರುಟಿ ಹೋಗಬಹುದು. ಯಾರ ಸಣ್ಣ ತಿರಸ್ಕಾರದ ಮಾತೂ ಆ ಚಿಗುರನ್ನು ಸಾಯಿಸಬಹುದು. ಅದನ್ನು ಎದೆಯ ಗರ್ಭಗುಡಿಯಲ್ಲಿಟ್ಟುಕೊಂಡು ಕಾಪಾಡಬೇಕೇ ಹೊರತೂ ಅದು ನಮ್ಮ ವಿಶೇಷತೆಯೆಂಬ ರೀತಿಯಲ್ಲಿ ಸಮಾಜಸಲ್ಲಿ ವರ್ತಿಸಬಾರದು. ಹೀಗೆಲ್ಲ ಪ್ರದರ್ಶನಕ್ಕೆ ಪ್ರಯತ್ನಿಸಿದಾಗಲೆಲ್ಲಾ ನಾನು ಎಲ್ಲಿಂದಲೋ ಕೆನ್ನೆಗೆ ಏಟು ತಿಂದಿದ್ದೇನೆ. ನೀನು ಅಂತಹ ತಪ್ಪು ಮಾಡಬೇಡ.”

ಆಕೆ ಸುಮ್ಮನೇ ಕೇಳಿಸಿಕೊಂಡಳು. ನಂತರದಲ್ಲಿ ಆಕೆ ತನಗೆ ಗುರುಗಳಲ್ಲಿ ಕೇಳಲಾಗದ ಪ್ರಶ್ನೆಗಳನ್ನು ನನ್ನ ಹತ್ತಿರ ಕೇಳುತ್ತಿದ್ದಳು. ಕೆಲವೊಮ್ಮೆ ನಾನು ನನಗೆ ಗೊತ್ತಿದ್ದುದನ್ನು ಹೇಳುತ್ತಿದ್ದೆ. ಇಲ್ಲವೆಂದರೆ ನಾವು ಅದನ್ನು ಗುರುಗಳ ಬಳಿ ಕೇಳುತ್ತಿದ್ದೆವು. ಎಷ್ಟೋ ದಿನಗಳು ಹೀಗೆ ನಾವಿಬ್ಬರೂ ಪರಸ್ಪರ ಚರ್ಚೆಗಳಲ್ಲಿ ಮುಳುಗಿರುತ್ತಿದ್ದೆವು. ಕೆಲವೊಮ್ಮೆ ಕೆಲವು ಧ್ಯಾನ ಪ್ರಯೋಗಗಳನ್ನು ಮಾಡುತ್ತಿದ್ದೆವು.

ಪ್ರಯೋಗವೆಂದರೆ ನಿಮಗೆ ಏನೇನೋ ತಾಂತ್ರಿಕ, ಮಾಂತ್ರಿಕ ಕಲ್ಪನೆಗಳು ಬರಬಹುದು. ಆದರೆ ಅಂತಹದ್ದು ಯಾವುದೂ ನಮಗೆ ಗೊತ್ತಿರಲೇ ಇಲ್ಲ. ಆಗಾಗ ನನ್ನನ್ನು ಕಾಡಿನೊಳಕ್ಕೆ ಕರೆದೊಯ್ಯುತ್ತಿದ್ದ ಗುರುಗಳು, ಒಂದಿನ ಬಂಡೆಯೊಂದರ ಅಂಚಿನಲ್ಲಿ ಬೆಳೆದಿದ್ದ ಗರಿಕೆಯೊಂದನ್ನು ತೋರಿಸಿ ಹೇಳಿದ್ದರು, “ಈ ಗರಿಕೆಯ ಮೇಲೆ ಪ್ರೇಮ ಭಾವ ನಿನ್ನಲ್ಲಿ ಹುಟ್ಟಿದರೆ ಸಾಕು, ಅದೇ ನಿನಗೆ ವಿರಾಟ್ ನ ದರ್ಶನ ಮಾಡಿಸುತ್ತದೆ”. “ಈ ಕಾಡಿನ ಅಂಚಿನಿಂದ ನಡೆಯುತ್ತ ಹೋಗು, ಯಾವ ಗಿಡವನ್ನು, ಯಾವ ಹೂವನ್ನು, ಬಂಡೆಯನ್ನು, ಪಕ್ಷಿಯನ್ನು ನೋಡುತ್ತ ನಿನ್ನಲ್ಲಿ ಯಾವ ಭಾವ ಹುಟ್ಟುತ್ತದೆ ಗಮನಿಸು.” ಮತ್ತೊಮ್ಮೆ ಸಂತೆಗೆ ಕರೆದೊಯ್ದು, ಆ ಸಂತೆಯಲ್ಲಿ ನಡೆಯಲು ಹಚ್ಚುತ್ತಿದ್ದರು. ಅತ್ತಲಿಂದ ಇತ್ತ ಸುಮ್ಮನೇ ನಡೆಯುತ್ತ, ಯಾವುದು ನನ್ನಲ್ಲಿ ಯಾವ ಭಾವವನ್ನು ಹುಟ್ಟಿಸುತ್ತಲಿದೆ ಅದನ್ನು ಗಮನಿಸಬೇಕಿತ್ತು. ನಂತರ ರಾತ್ರಿ ಅವರು ಆ ಕುರಿತು ಮಾತನಾಡುತ್ತಿದ್ದರು. ಹೀಗೆ ಅವರು ಪ್ರತೀಸಾರಿಯೂ ನನಗೆ ಜೀವನವೇ ಯೋಗವಾಗುವ ಗುಟ್ಟುಗಳನ್ನು ಬಿಡಿಸಿಹೇಳುತ್ತ ಹೋದರು. ಅವರ ಪ್ರೇಮದಲ್ಲಿ ನಾನು ಕಳೆದುಹೋದೆ. ಆದರೂ ಕೆಲವೊಮ್ಮೆ ಅವರು ನನ್ನನ್ನು ಅವಹೇಳನ ಮಾಡುತ್ತಿದ್ದಾರೆ ಅನ್ನಿಸುತ್ತಿತ್ತು. ಒಮ್ಮೆ ಗೋದಾವರಿಗೆ ಅವರು ನದಿತೀರದಲ್ಲಿ ಧ್ಯಾನಧೀಕ್ಷೆ ನೀಡಿ ‘ಧನ್ಯಾ’ ಎಂದು ಹೆಸರಿಟ್ಟರು. ಎರೆಡು ವರ್ಷವಾದರೂ ಅವರು ನನಗೆ ಯಾವುದೆ ಹೆಸರಿಟ್ಟಿರಲಿಲ್ಲ. ಮನೆಗೆ ಬಂದ ಮೇಲೆ ಆಕ್ಷೇಪವೆತ್ತಿದೆ. ನಾನು ನನಗೆ ಶ್ವೇತಕೇತು, ಶುಕ ಎಂದೆಲ್ಲ ಹೆಸರಿಡಬಹುದು ಎಂಬ ಸಂಭ್ರಮದಲ್ಲಿದ್ದೆ. ಅವರು ಹೇಳಿದರು, “ಹಾಗಿದ್ದರೆ ನಿನ್ನ ಹೆಸರು, ‘ಶುನಶ್ಯೇಪ’.”
“ಓಹ್, ಏನೂ ಬೇಡ. ಹಳೆಯ ಹೆಸರೇ ಇರಲಿ” ಎಂದು ಅಲ್ಲಿಂದ ಎದ್ದೆ. ಗೋದಾವರಿಯೊಡನೆ ಸೇರಿ ಅವರೂ ನಕ್ಕರು. ಎಂತಹ ಋಷಿಯ ಹೆಸರೇ ಆದರೂ, ‘ನಾಯಿ ಬಾಲ’ ಅಂತ ಯಾರು ಹೆಸರಿಟ್ಟುಕೊಳ್ಳಲು ಬಯಸುತ್ತಾರೆ!?

ಹಿಂದಿನ ದಿನ ಯಾವುದೋ ಕಾರಣಕ್ಕೆ ಗೋದಾವರಿ ನನ್ನೊಡನೆ ಜಗಳ ಮಾಡಿ ಹೋಗಿದ್ದಳು. ಮರುದಿನ ನಾನು ನದಿ ತೀರದಲ್ಲಿ ಕುಳಿತಿದ್ದಾಗ ಬಂದು ಪಕ್ಕದಲ್ಲಿ ಕುಳಿತಳು. “ನಿನಗೆ ನನ್ನ ಮೇಲೆ ಕೋಪವಿದೆಯಲ್ಲವೇ” ಅಂದೆ. ಅದಕ್ಕವಳು “ಇಲ್ಲ” ಅಂದಳು.
“ಇಲ್ಲ ನಿನ್ನ ಸುಪ್ತ ಮನಸ್ಸಿನಲ್ಲಿ ಇದೆ.”
“ಸುಪ್ತ ಮನಸ್ಸು ಎಂಬುದೇ ಇಲ್ಲ” ಎಂದು ವಾದಕ್ಕೆ ತೊಡಗಿದಳು.
“ಗುರುಗಳ ಮಾತು ಕೇಳಿ ಕೆಡಬೇಡ. ಅದು ಇದೆ” ಅಂದೆ ನಗುತ್ತ. ಆಕೆಗೆ ಕೋಪ ಬಂತು. ಹೀಗೆ ಅನೇಕ ಬಾರಿ ಗುರುಗಳ ವಿರುದ್ಧ ಮಾತನಾಡುತ್ತ ಆಕೆಯನ್ನು ರೇಗಿಸುತ್ತಿದ್ದೆ ಹೀಗೆ ನಾವಿಬ್ಬರೂ ತುಂಬ ಮಾತನಾಡುತ್ತ ನದಿ ತೀರ ಕಾಡಿನಲ್ಲಿ ಅಲೆದಾಡುತ್ತಾ ಆನಂದವಾಗಿರುತ್ತಿದ್ದೆವು. ಒಮ್ಮೊಮ್ಮೆ ಅವಳು ಶೇಂಗಾ ಮಿಠಾಯಿಯಂತಹ ತಿನಿಸನ್ನು ಬ್ಯಾಗಿನಲ್ಲಿಟ್ಟುಕೊಂಡು ತರುತ್ತಿದ್ದಳು, ಅದಕ್ಕೆ ‘ಚಿಕ್ಕಿ’ ಅನ್ನುತ್ತಾರೆ ಅನ್ನುತ್ತಿದ್ದಳು. ಮರಳಿನಲ್ಲಿ ಕುಳಿತಾಗ ನಾನು ಅವಳಿಗೆ ಕಾಗದದ ದೋಣಿ, ರಾಕೇಟ್ ಮಾಡುವುದನ್ನೆಲ್ಲ ಹೇಳಿಕೊಡುತ್ತಿದ್ದೆ.

ಒಂದು ದಿನ ಕಾಲೇಜಿನಲ್ಲಿ ಪಾಠ ನಡೆಯುತ್ತಿರುವಾಗ ಗೆಳತಿಯರಿಗೆ ರಾಕೇಟ್ ಮಾಡುವುದನ್ನು ಹೇಳಿಕೊಡಲು ಹೋಗಿ, ಅದನ್ನು ಅವಳ ಲೆಕ್ಚರರ್ ನೋಡಿಬಿಟ್ಟರಂತೆ. ಅವಳನ್ನ ಸ್ಟೇಜಿಗೆ ಕರೆದು ಇನ್ನೊಮ್ಮೆ ರಾಕೇಟ್ ಮಾಡಲು ಹೇಳಿದರಂತೆ. ಅಲ್ಲಿ ಆಕೆಗೆ ಸರಿಯಾಗಿ ಮಾಡಲು ಬರದೇ, ಮರುದಿನ ಆ ಕೋಪವನ್ನೆಲ್ಲ ನನ್ನ ಮೇಲೆ ತೋರಿಸಿಬಿಟ್ಟಳು. ನಾನು ರಾಕೇಟ್ ಮಾಡಲು ಹೇಳಿಕೊಟ್ಟಿದ್ದೇ ಆ ಎಲ್ಲದಕ್ಕೂ ಕಾರಣವೆಂದೂ, ಜೊತೆಗೆ ನಾನು ಸರಿಯಾಗಿ ಹೇಳಿಕೊಟ್ಟಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ ಎಂದು ಹೇಳಿದ್ದಳು. ಹೀಗೆ ಒಂದಿನ ಜಗಳ ಮಾಡುವುದು, ಮತ್ತೊಂದು ದಿನ ತುಂಬ ಆನಂದದಿಂದ ಮಾತನಾಡುವುದು, ಮತ್ತೆ ಒಂದಿನ ತುಂಬ ಮೌನವಾಗಿ ಕುಳಿತುಕೊಂಡುಬಿಟ್ಟಿರುತ್ತಿದ್ದೆವು. ಅಂತಹ ಒಂದು ದಿನವೇ ಆಕೆ ಕೇಳಿದ್ದಳು: ನಮ್ಮಿಬ್ಬರ ನಡುವೆ ಏನು ಬಂಧವಿದೆ?
….

ನನ್ನ ಬಿಎ ಅಂತಿಮ ವರ್ಷ ಮುಗಿಯುತ್ತ ಬಂದಿತ್ತು. ಇನ್ನು ಪರೀಕ್ಷೆಗಳಿದ್ದವು ಅಷ್ಟೇ. ಮುಂದೆ ನಮ್ಮ ಭೇಟಿಯೂ ಅನಿಶ್ಚಿತವಾಗಿತ್ತು. ಅದಕ್ಕಾಗಿಯೇ ಕೇಳಿದ್ದಳು ಅನ್ನಿಸುತ್ತದೆ. ಹೀಗೆ ಕೊನೆಗೊಂದು ದಿನ ಬಂತು. ಬೆಂಗಳೂರಿನಲ್ಲಿ ಯಾವುದೋ ಕೆಲಸ. ಪಟ್ಟಣಕ್ಕೆ ಹೋಗುವುದು ಬೇಡ ಅಂತ ಮೊದಲೇ ತೀರ್ಮಾನ ಮಾಡಿದ್ದೆ. ಗುರುಗಳ ಬಳಿಗೆ ಹೀಗೇ ಹೇಳಿದ್ದೆ, “ಪಟ್ಟಣದ ಪರಿಸರದಿಂದ ನನ್ನ ಧ್ಯಾನಕ್ಕೆ ಧಕ್ಕೆಯಾಗುತ್ತದೆ”. ಅದಕ್ಕವರು, “ಮತ್ತೆ ಹಿಮಾಲಯಕ್ಕೆ ಹೋಗಬೇಕೆಂದುಕೊಂಡಿದ್ದೀಯಾ? ಏನಿರುತ್ತದೆ ಹೇಳು ಅಲ್ಲಿ? ಬೆಟ್ಟದಲ್ಲಿ, ಕಾಡಿನಲ್ಲಿ ಯಾರು ಬೇಕಾದರೂ ಯೋಗಿಯಾಗಬಹುದು. ಆದರೆ ಎಲ್ಲ ಪ್ರಲೋಭನೆಗಳೂ ಇರುವಲ್ಲಿ ನಿನ್ನನ್ನು ನೀನು ತೆರೆದುಕೊಳ್ಳಲು ಸಿದ್ಧನಿದ್ದೀಯಾ? ಅಲ್ಲಿಯೇ ನಿಜವಾದ ಯೋಗಿಗೆ ಎಲ್ಲ ಸವಾಲುಗಳೂ, ಅವಕಾಶಗಳೂ ಇವೆ. ನಿನ್ನ ಹೃದಯದೃಢತೆ ನಿನಗೆ ಅರ್ಥವಾಗುತ್ತದೆ. ಹೋಗಿ ಬಾ.”

ಮರುದಿನ ಊರು ಬಿಡುವುದಾಗಿತ್ತು. ಸಂಜೆಯ ಹೊತ್ತು ನಾನು, ಗೋದಾವರಿ ನದಿ ತೀರದಲ್ಲಿ ಕುಳಿತಿದ್ದೆವು. ಅವಳು ತನ್ನ ನೋಟ್‌ಬುಕ್ ನಿಂದ ಕಾಗದವೊಂದನ್ನು ಹರಿದು ದೋಣಿ ಮಾಡಿದಳು. ಎದ್ದು ಹೋಗಿ ನದಿಯಲ್ಲಿ ಅದನ್ನು ತೇಲಿಸಿ ನೋಡತೊಡಗಿದಳು. ಪ್ರಶಾಂತವಾಗಿ ಹರಿಯುತ್ತಿದ್ದ ನದಿಯಲ್ಲಿ ದೋಣಿ ಮೆಲ್ಲಗೆ ಸಾಗತೊಡಗಿತು. ಆಮೇಲೆ ನನ್ನ ಬಳಿಗೆ ಬಂದಳು. “ಈ ಒಂದು ವರ್ಷದಲ್ಲಿ ನೀವು ನನಗೆ ನೀಡಿದ ಅಪರೂಪದ ಉಡುಗೊರೆ ಅಂದರೆ ಈ ದೋಣಿ ಕಲಿಸಿದ್ದು” ಅಂದಳು.
ನನಗೆ ಅಚ್ಚರಿಯಾಯಿತು. ಆಕೆಗೆ ಈ ಒಂದು ವರ್ಷದಲ್ಲಿ ನನ್ನ ಅನೇಕ ಧ್ಯಾನದ ಅನುಭವಗಳನ್ನು ಬಿಡಿಸಿ ಹೇಳಿದ್ದೆ, ಪ್ರಯೋಗಗಳ ಕುರಿತು ಮಾತನಾಡಿದ್ದೆ, ಸೂಚನೆ ಎಚ್ಚರಿಕೆಗಳನ್ನು ನೀಡಿದ್ದೆ. ಧ್ಯಾನದ ದಾರಿಯಲ್ಲಿ ಎಷ್ಟೆಲ್ಲ ಸಹಾಯ ಮಾಡಿದ್ದೆ. ಆದರೆ ದೋಣಿ ಕಲಿಸಿದ್ದೇ ಅಪರೂಪದ್ದೇ? ಮುಗುಳ್ನಕ್ಕೆ. ನಾವೆಲ್ಲ ಏನೇನೋ ಸಾಧನೆಗಳನ್ನು ಮಾಡುತ್ತೇವೆ ಅಂದುಕೊಳ್ಳುತ್ತೇವೆ. ಆದರೆ ಭಗವಂತನ ಪ್ರಸಾದರೂಪವಾಗಿ ಯಾವುದು ಬರುತ್ತದೋ ಅದು ಎಷ್ಟೆಲ್ಲ ಸೌಂದರ್ಯವನ್ನು ಒಳಗೊಂಡಿರುತ್ತದೆ. ಎಷ್ಟೆಲ್ಲ ಆನಂದವನ್ನು ತಂದುಕೊಡುತ್ತದೆ. ಆತನ ಕರುಣೆಯ ಸಮಷ್ಠಿಯಿಂದ ಬರುವುದು ನಮ್ಮ ಪ್ರಯತ್ನಗಳಿಂದ ಮಾಡಿದುದಕ್ಕಿಂತ ಎಷ್ಟೆಲ್ಲ ಪರಿಪೂರ್ಣ ಸೌಂದರ್ಯವನ್ನು ಸುಖವನ್ನು ಹೊಂದಿರುತ್ತದೆ; ಯಾವ ಹೆಸರೂ ಬಂಧಿಸದ ನಮ್ಮಿಬ್ಬರ ನಡುವಿನ ಬಂಧದಂತೆ!

10 comments

  1. >ಕಾಗದದ ದೋಣಿ ಮಹಾಸಾಗರವನ್ನೇ ತಲುಪಿಸುತ್ತದೆ, ಸದಾ ಹರಿಯುತ್ತಿರುವ ಆ ಒಂದು ನದಿಯ ಮೂಲಕ.. -ಭಗವತೀ

  2. >ಈ ಕತೆಯನ್ನು ಓದಿ ಆಶ್ಚರ್ಯವಾಯಿತು.ಇಂತಹ ತವಜ್ಞಾನಪೂರ್ಣಕತೆಯನ್ನು ಒಬ್ಬ ಯುವಕ ಬರೆದಿದ್ದಾನೆಯೇ ಅಂತ. ಒಳ್ಳೆ ದರ್ಶನವನ್ನು ಒಳಗೊಂಡಿರುವಂತಹ ಅತ್ಯುತ್ತಮ ಕತೆ.

  3. >ododakke shuru madide, madhuravagiye Odisikondu hoyitu lekhana, ee bagge enadaroo bareyabahude anta nodidare, beda, aa harivu haage irali, doNi adarashtakke sagali annisitu. matte, kamemts odidaga, summanirade bareyabekennisitu. Idu katheye? Khandita katheyalla…summane bareda ondu lEkhanave? adoo alla….matte..matte, hhaaa… anubhavadha anavaraNave irabeku, allave?

  4. >ಭಗವತಿ, ಸುನಾತ್ ಸರ್, ಗುರುಮೂರ್ತಿ, ದಿನೇಶ್, ಸುಧನ್ವಾ, ಮಹೇಶ್, ನಾಗಮಣಿ, ಧರಿತ್ರಿ ನಿಮ್ಮೆಲ್ಲರ ಪ್ರತಿಕ್ರಿಯೆಗೆ ವಂದನೆಗಳು..ಹೇಮಾಶ್ರಿ, ಈ ಸಿನೆಮಾ ಕುರಿತು ತಿಳಿಸಿದ್ದಕ್ಕೆ ವಂದನೆಗಳು..

Leave a Reply

Your email address will not be published. Required fields are marked *