ಇಬ್ಬರು ಕವಿಗಳು ಮತ್ತು ಒಂದು ಶೋಕಗೀತೆ

Source: http://www.turismoroma.it/wp-content/uploads/2015/06/Keats-Shelley_630.jpg

‘ಅಡೋನೀಸ್’ ಒಂದು ಪ್ಯಾಸ್ಟೋರಲ್ ಎಲಿಜಿ (ಶೋಕಗೀತೆ). ಈ ಪ್ರಕಾರದ ಕಾವ್ಯವನ್ನು ಮೊದಲು ಗ್ರೀಕ್ ಮತ್ತು ರೋಮನ್ ಸಾಹಿತ್ಯದಲ್ಲಿ ಬರೆಯಲಾರಂಭಿಸಿದ್ದು, ಅದಕ್ಕೆ ನಿರ್ದಿಷ್ಟವಾದ ಛಂದಸ್ಸು ಬಳಕೆಯಲ್ಲಿತ್ತು. ಆದರೆ ಹದಿನಾರನೇ ಶತಮಾನದ ನಂತರ ಇಂಗ್ಲಿಷ್ ಸಾಹಿತ್ಯದಲ್ಲಿ ಈ ಪ್ರಕಾರವನ್ನು ಬೇರೆಯ ರೀತಿಯಲ್ಲಿಯೇ ಬಳಸಿಕೊಂಡರು. ಇಲ್ಲಿ ಕಾವ್ಯದ ಛಂದಸ್ಸಿಗಿಂತ ಅದರ ವಿಷಯವೇ ಮುಖ್ಯವಾಗುತ್ತದೆ, ಅಂದರೆ ಈ ಕಾಲದಲ್ಲಿ ಎಲಿಜಿಗಳು ನೋವು ಮತ್ತು ಸಾವನ್ನೇ ವಿಷಯವನ್ನಾಗಿಸಿಕೊಂಡು ಬರೆಯಲ್ಪಡುತ್ತವೆ. ಈ ಪ್ರಕಾರದ ಕವಿತೆಗೆ ಅತ್ಯುತ್ತಮ ಉದಾಹರಣೆ ಎಂದರೆ ಥಾಮಸ್ ಗ್ರೇ ಕವಿ ೧೭೫೧ ರಲ್ಲಿ ಬರೆದ “ಎಲಿಜಿ ರಿಟನ್ ಇನ್ ಅ ಕಂಟ್ರಿ ಚರ್ಚ್‌ಯಾರ್ಡ್”. “ಪ್ಯಾಸ್ಟೋರಲ್ ಎಲಿಜಿ”ಯೆಂದರೆ ಅದೇ ಶೋಕಗೀತೆಯನ್ನೇ ದನಗಾಹಿಯೋ, ಕುರುಬನೋ ಹಾಡುತ್ತಿರುತ್ತಾನೆ, ಅಥವಾ ಹಳ್ಳಿಗಾಡಿನ ಭಾಷೆಯಲ್ಲಿ ಬರೆಯಲ್ಪಟ್ಟಿರುತ್ತದೆ. ಕೀಟ್ಸ್‌ ಕವಿಯ ಸಾವನ್ನ ಕುರಿತಾಗಿ ಶೆಲ್ಲಿ ಬರೆದ‘ಅಡೋನೀಸ್’ ಅಂತಹ ಒಂದು ಶೋಕಗೀತೆ.

ಟ್ಯೂಬರ್ ಕ್ಯುಲೋಸಿಸ್‌ನಿಂದಾಗಿ ಕೀಟ್ಸ್ ಇಪ್ಪತ್ತಾರನೇ ವಯಸ್ಸಿನಲ್ಲಿಯೇ ಮರಣವನ್ನಪ್ಪುತ್ತಾನೆ. ಆದರೆ ಅವನ ಸಾವಿಗೆ ಇನ್ನೊಂದು ಕಾರಣವೆಂದರೆ ಅವನು ಬದುಕಿದ್ದ ಕಾಲದಲ್ಲಿ ವಿಮರ್ಶಕರು ಅವನ ಕಾವ್ಯದ ಕುರಿತು ವ್ಯಕ್ತಪಡಿಸಿದ ಖಾರವಾದ ಪ್ರತಿಕ್ರಿಯೆ. ಹೀಗೆಂದು ಅವನ ಕಾಲದ ಮತ್ತೊಬ್ಬ ಪ್ರತಿಭಾವಂತ ಕವಿ ಶೆಲ್ಲಿಯೇ ಆಪಾದಿಸುತ್ತಾನೆ. ನಂತರ ಕೀಟ್ಸ್‌ನ ಕುರಿತು ಈ ಪಾಸ್ಟೋರಲ್ ಎಲಿಜಿಯನ್ನು ಬರೆಯುತ್ತಾನೆ. ಈ ಇಬ್ಬರು ಕವಿಗಳು ಹತ್ತೊಂಬತ್ತನೇ ಶತಮಾನದ ರೊಮ್ಯಾಂಟಿಕ್ ಅಥವಾ ರಮ್ಯ ಕಾವ್ಯ ಸಂಪ್ರದಾಯದವರು. ಚಾಸರನಿಂದ ಮೊದಲುಗೊಂಡು ಹದಿನಾರನೇ ಶತಮಾನದಲ್ಲಿ ಉಜ್ವಲವಾಗಿ ಬೆಳಗಿದ ಇಂಗ್ಲೀಷ್ ಕಾವ್ಯ ಹತ್ತೊಂಬತ್ತನೆಯ ಶತಮಾನಕ್ಕೆ ಬಂದಾಗ ಅನೇಕ ಹಂತಗಳನ್ನು ದಾಟಿ ರಮ್ಯಕಾವ್ಯದ ಯುಗ ಪ್ರಾರಂಭವಾಗುತ್ತದೆ. ಇಂಗ್ಲೀಷ್ ರಮ್ಯಕಾವ್ಯಕ್ಕೆ ಎರಡು ಹಂತಗಳಿವೆ, ಮೊದಲನೆಯದರಲ್ಲಿ ವಿಲಿಯಮ್ ವರ್ಡ್ಸ್‌ವರ್ಥ್, ಕೋಲರಿಡ್ಜ್ ನಂತಹ ಕವಿಗಳು ಇದ್ದರೆ, ಎರಡನೆಯ ಹಂತದಲ್ಲಿ ಪಿ.ಬಿ.ಶೆಲ್ಲಿ, ಜಾನ್ ಕೀಟ್ಸ್, ಲಾರ್ಡ್ ಬೈರನ್ ಮುಂತಾದವರು ಬರುತ್ತಾರೆ. ಇದರಲ್ಲಿ ಬೈರನ್ ಮತ್ತು ಶೆಲ್ಲಿಗೆ ಪರಸ್ಪರ ಸ್ನೇಹ ಮತ್ತು ಗೌರವಗಳಿದ್ದರೆ, ಕೀಟ್ಸ್ ಮತ್ತು ಬೈರನ್ ಇಬ್ಬರಿಗೆ ಪರಸ್ಪರರ ಸ್ನೇಹವಾಗಲೀ, ಪರಸ್ಪರರ ಕಾವ್ಯದ ಕುರಿತು ಗೌರವವಾಗಲೀ ಇರಲಿಲ್ಲ ಎಂದು ವಿಮರ್ಶಕರು ಹೇಳುತ್ತಾರೆ. ಆದರೆ ತುಂಬ ವಿಶೇಷವಿರುವುದು ಕೀಟ್ಸ್ ಮತ್ತು ಶೆಲ್ಲಿಯ ನಡುವಿನ ಸಂಬಂಧದಲ್ಲಿ. ಇವರಿಬ್ಬರ ನಡುವಿನ ಸಂವಾದಗಳು, ಕಾವ್ಯ ಚರ್ಚೆ ಮತ್ತು ಸಂಬಂಧವೇ ಈ ಲೇಖನದ ವಿಷಯ.


ಇಬ್ಬರು ಕವಿಗಳೂ ಅತ್ಯಂತ ಪ್ರತಿಭಾವಂತರು. ಆದರೆ ದುರದೃಷ್ಟವೆಂದರೆ ಇಬ್ಬರೂ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಮರಣಕ್ಕೀಡಾಗುತ್ತಾರೆ. ಆದರೆ ಇಬ್ಬರೂ ಅತ್ಯಂತ ಶ್ರೇಷ್ಠವಾದುದನ್ನು ಸಾಹಿತ್ಯಲೋಕಕ್ಕೆ ನೀಡಿಹೋಗಿದ್ದಾರೆ ಅನ್ನುವುದಂತೂ ಸತ್ಯ. ಹಾಗಾಗಿ ಇವರ ಜೀವನ, ಕಾವ್ಯ, ಕಾವ್ಯಧೋರಣೆಗಳ ಕುರಿತು ತಿಳಿದುಕೊಳ್ಳಲು ಪ್ರಯತ್ನಿಸುವುದು ಅವರ ಕಾವ್ಯವನ್ನು ಓದಲು ಸಹಕಾರಿಯಾಗುತ್ತದೆ. ಕೀಟ್ಸ್ ಶೆಲ್ಲಿಗಿಂತ ಒಂದು ವರ್ಷಕ್ಕೆ ಕಿರಿಯ. ಆದರೆ ಶೆಲ್ಲಿ ಕೀಟ್ಸ್‌ನನ್ನು ಹೆಚ್ಚು ಗೌರವಿಸುತ್ತಾನೆ ಮತ್ತು ಆತನ ಕಾವ್ಯವನ್ನು ತುಂಬಾ ಮೆಚ್ಚಿಕೊಳ್ಳುತ್ತಾನೆ, ಜೊತೆಗೆ ಕೀಟ್ಸ್ ತನಗಿಂತ ಉತ್ತಮನಾದ ಕವಿ ಎನ್ನುವುದನ್ನು ಒಪ್ಪಿಕೊಳ್ಳುತ್ತಾನೆ. ಆದರೆ ಕೀಟ್ಸ್ ಶೆಲ್ಲಿಯ ಕುರಿತು ಅಂತಹ ಔದಾರ್ಯವನ್ನೇ ತೋರುವುದಿಲ್ಲ ಎಂದು ವಿಮರ್ಶಕರು ಹೇಳುತ್ತಾರೆ. ಕೀಟ್ಸ್ ಶೆಲ್ಲಿಯ ಕುರಿತು ಮನಬಿಚ್ಚಿ ಮಾತನಾಡುವುದಿಲ್ಲ, ಅಲ್ಲದೇ ಅವನ ಸ್ನೇಹಕ್ಕೆ ತಕ್ಕ ಪ್ರತಿಸ್ಪಂಧನೆಯನ್ನೂ ತೋರುವುದಿಲ್ಲ. ಶೆಲ್ಲಿಯದು ಲಂಪಟತನದ ಬದುಕೆಂಬ ಅಸಮಾಧಾನವನ್ನು ಅವನು ಹೊಂದಿರುತ್ತಾನೆ. ಜೊತೆಗೆ ಶೆಲ್ಲಿಯೊಡನೆ ಭೇಟಿಯಾದ ನಂತರ ಲೇ ಹಂಟ್‌ ಕೀಟ್ಸ್‌ನಿಗಿಂತ ಹೆಚ್ಚಾಗಿ ಶೆಲ್ಲಿಗೆ ಆತ್ಮೀಯನಾಗುತ್ತಾನೆ ಎಂಬುದೂ ಒಂದು ಕಾರಣ ಎಂದು ವಿಮರ್ಶಕರು ಹೇಳುತ್ತಾರೆ.

ಶೆಲ್ಲಿ ಮತ್ತು ಕೀಟ್ಸ್ ಲೇ ಹಂಟ್‌ನ ಮುಖಾಂತರ ೧೮೧೬ ರಲ್ಲಿ ಹ್ಯಾಮ್‌ಸ್ಟೆಡ್‌ನಲ್ಲಿ ಪರಸ್ಪರ ಪರಿಚಯವಾಗುತ್ತಾರೆ. ನಂತರದಲ್ಲಿ ಅವರಿಬ್ಬರೂ ಆಗಾಗ ಭೇಟಿಯಾಗುತ್ತಿರುತ್ತಾರೆ, ಮತ್ತು ಅಂತಹ ಒಂದು ಸಂದರ್ಭದಲ್ಲಿ ಶೆಲ್ಲಿ ಕೀಟ್ಸ್‌ಗೆ ತನ್ನ ಪ್ರಾರಂಭದ ಕಾವ್ಯವನ್ನು ಪ್ರಕಟಿಸಬಾರದು ಎಂದು ಹೇಳುತ್ತಾನಂತೆ. ಅವನ ಉದ್ದೇಶ ಒಳ್ಳೆಯದಿದ್ದರೂ ಕೀಟ್ಸ್‌ನಿಗೆ ಅದು ಕ್ಲೇಶಕರವಾದ ಮಾತಾಗುತ್ತದೆ. ನಂತರದಲ್ಲಿ ಇಟಲಿಯಲ್ಲಿರುವಾಗ ಇಬ್ಬರೂ ಪರಸ್ಪರರಿಗೆ ಪತ್ರ ಬರೆದುಕೊಳ್ಳುತ್ತಾರೆ. ಆ ಸಮಯದಲ್ಲಿ ಕೀಟ್ಸ್‌ನ ಕಾವ್ಯ ಪ್ರಬುದ್ಧತೆಯನ್ನು ಪಡೆದಿರುತ್ತದೆ ಮತ್ತು ಶೆಲ್ಲಿ ಅವನ ಕಾವ್ಯದ ಉತ್ಕಟ ಅಭಿಮಾನಿಯಾಗಿಬಿಟ್ಟಿರುತ್ತಾನೆ.

ಕೀಟ್ಸ್ ಅನಾರೋಗ್ಯದಿಂದ ಬಳಲುತ್ತಿರುವಾಗ ಶೆಲ್ಲಿ ಮತ್ತು ಅವನ ಮಡದಿ ತಮ್ಮೊಂದಿಗೆ ಇಟಲಿಯಲ್ಲಿ ಉಳಿದುಕೊಳ್ಳಬೇಕೆಂದು ಕೇಳಿಕೊಳ್ಳುತ್ತಾರೆ, ಆದರೆ ಅದಕ್ಕೆ ಕೀಟ್ಸ್ ಒಪ್ಪುವುದಿಲ್ಲ. ಶೆಲ್ಲಿಗೆ ಕೀಟ್ಸ್‌ನ ಅನಾರೋಗ್ಯದ ಸಮಯದಲ್ಲಿ ಸಹಾಯ ಮಾಡಬೇಕೆಂಬ ಸಹಜ ಕಾಳಜಿಯಿದ್ದರೂ, ಅವನ ದನಿಯಲ್ಲಿ ಆಶ್ರಯದಾತನ ದನಿ ಕಂಡು ಕೀಟ್ಸ್ ಅದನ್ನು ಬೇಡವೆನ್ನುತ್ತಾನೆ. ೧೮೨೦ ರಲ್ಲಿ ಕೀಟ್ಸ್‌ನ “ಹೈಪೀರಿಯನ್” ಪ್ರಕಟವಾದಾಗ ಮೆರಿಯನ್ ಹಂಟ್‌ಗೆ ಬರೆದ ಪತ್ರದಲ್ಲಿ ಶೆಲ್ಲಿ ಬರೆಯುತ್ತಾನೆ: “ಈಗ ಕೀಟ್ಸ್‌ ಎಲ್ಲಿದ್ದಾನೆ? ನಾನು ಇಟಲಿಯಲ್ಲಿ ಆತನಿಗಾಗಿ ತವಕದಿಂದ ಕಾಯುತ್ತಿದ್ದೇನೆ. ನಾನು ಅವನಿಗೆ ಎಲ್ಲ ಆರೈಕೆಯನ್ನೂ ಮಾಡುತ್ತೇನೆ. ಆತನ ಜೀವನ ಅತ್ಯಂತ ಬೆಲೆಯುಳ್ಳದ್ದು ಮತ್ತು ಆತನನ್ನು ಚೆನ್ನಾಗಿ ನೋಡಿಕೊಳ್ಳುವುದೇ ನನಗೆ ಅತ್ಯಂತ ಪ್ರಮುಖವಾದ ಕಾಳಜಿಯಾಗಿದೆ. ಆತನ ದೇಹ ಮತ್ತು ಆತ್ಮದ ವೈದ್ಯನಾಗಲು ನಾನು ಬಯಸುತ್ತೇನೆ, ದೇಹವನ್ನು ಬೆಚ್ಚಗಿಡಲು ಮತ್ತು ಆತ್ಮಕ್ಕಾಗಿ ಗ್ರೀಕ್ ಮತ್ತು ಸ್ಪ್ಯಾನಿಷ್ ಕಲಿಸಲು. ಈ ಮೂಲಕ ನಾನು ನನ್ನನ್ನು ಕಾವ್ಯದಲ್ಲಿ ತುಂಬ ಮೀರಿಸುವಂತಹ ಪ್ರತಿಸ್ಪರ್ಧಿಯೊಬ್ಬನನ್ನು ನಾನು ಪೋಷಿಸುತ್ತೇನೆ ಎಂಬುದರ ಅರಿವು ನನಗಿದೆ, ಆದರೆ ಇದು ನನ್ನ ಪಾಲಿಗೆ ಒಂದು ಹೆಚ್ಚಿನ ಪ್ರೇರಣೆ ಮತ್ತು ಆನಂದವೂ ಆಗಿದೆ.”

ಶೆಲ್ಲಿಯ ಜೀವನದ ಕುರಿತು ಹೇಳಬೇಕೆಂದರೆ, ಸ್ಥಳೀಯ ಭೂಮಾಲೀಕನೊಬ್ಬನ ಮಗನಾದ ಶೆಲ್ಲಿಯದು ಪ್ರಕ್ಷುಬ್ಧ ಸಾಗರದಂತಹ ಬದುಕು. ೧೭೮೨ ರಲ್ಲಿ ಜನಿಸಿದ ಶೆಲ್ಲಿ ೧೮೧೦ ರಲ್ಲಿ ಆಕ್ಸ್‌ಫರ್ಡ್ ಸೇರಿ ತತ್ವಶಾಸ್ತ್ರವನ್ನು ಓದುತ್ತಾನೆ. ಅಲ್ಲಿ ಆತ ವಿಲಿಯಮ್ ಗುಡ್‌ವಿನ್‌ನಂತಹ ಸಂದೇಹವಾದಿಗಳನ್ನು ಓದಿ ಅವರ ಪ್ರಭಾವಕ್ಕೊಳಗಾಗುತ್ತಾನೆ. ನಂತರದಲ್ಲಿ ತನ್ನ ಗೆಳೆಯ ಥಾಮಸ್ ಜಾಫರ್‌ಸನ್ ಹೋಗ್ ನ ಜೊತೆಗೂಡಿ ‘ನಿರೀಶ್ವರವಾದದ ಅಗತ್ಯ’ ಎಂಬುದರ ಕುರಿತು ಪಾಂಫ್ಲೆಟ್‌ ಒಂದನ್ನು ಪ್ರಕಟಿಸುತ್ತಾನೆ, ಮತ್ತು ಆ ಮೂಲಕ ಅವರಿಬ್ಬರೂ ವಿಶ್ವವಿದ್ಯಾಲಯದಿಂದ ಹೊರಹಾಕಲ್ಪಡುತ್ತಾರೆ. ಅದೇ ವರ್ಷದಲ್ಲಿ ಶೆಲ್ಲಿ ಹದಿನಾರು ವರ್ಷದ ಹ್ಯಾರಿಯಟ್ ವೆಸ್ಟ್‌ಬ್ರೂಕ್ ಎಂಬುವವಳೊಡನೆ ಪ್ರೇಮಪಲಾಯನಗೈಯುತ್ತಾನೆ, ಮತ್ತು ಅವರಿಗೆ ಇಬ್ಬರು ಮಕ್ಕಳಾಗುತ್ತಾರೆ. ನಂತರದಲ್ಲಿ ಸಾಮಾಜಿಕ ಪರಿವರ್ತನೆಯನ್ನೇ ಚಿಂತನೆಯಾಗಿಸಿಕೊಂಡು ನಿರಂತರವಾಗಿ ಪಾಂಫ್ಲೆಟ್‌ಗಳನ್ನು ಪ್ರಕಟಿಸುತ್ತಾನೆ.

೧೮೧೪ ರಲ್ಲಿ ಆತ ಪ್ರಭಾವಕ್ಕೊಳಗಾದ ವಿಲಿಯಮ್ ಗುಡ್‌ವಿನ್‌ನ ಮಗಳಾದ ಮೇರಿ ಗುಡ್‌ವಿನ್‌ಳೊಡನೆ ಫ್ರಾನ್ಸ್‌ಗೆ ಹೋಗುತ್ತಾನೆ. ಅವರಿಬ್ಬರೂ ಮೊದಲ ವರ್ಷದ ಬದುಕಿನಲ್ಲಿ ಸಾಮಾಜಿಕ ಬಹಿಷ್ಕಾರ ಮತ್ತು ಹಣಕಾಸಿನ ಸಮಸ್ಯೆಯಿಂದ ತೊಳಲಾಡುತ್ತಾರೆ. ಆದರೆ ೧೮೧೫ ರಲ್ಲಿ ಶೆಲ್ಲಿಯ ಅಜ್ಜ ತೀರಿಕೊಂಡು ಅವನಿಗೆ ಅಜ್ಜನಿಂದಾಗಿ ಒಂದಿಷ್ಟು ವಾರ್ಷಿಕ ಆದಾಯ ದೊರೆಯತೊಡಗುತ್ತದೆ. ೧೮೧೬ ರಲ್ಲಿ ಹ್ಯಾರಿಯಟ್ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ನಂತರ ಶೆಲ್ಲಿ ಮೇರಿಯನ್ನು ಅಧಿಕೃತವಾಗಿ ಮದುವೆ ಮಾಡಿಕೊಳ್ಳುತ್ತಾನೆ. ಕಾನೂನು ಹ್ಯಾರಿಯಟ್‌ಳಿಂದ ಹುಟ್ಟಿದ ಮಕ್ಕಳನ್ನು ನೋಡಿಕೊಳ್ಳಲು ಶೆಲ್ಲಿಗೆ ಅರ್ಹತೆಯಿಲ್ಲ ಎಂದು ಹೇಳಿ ಅವರನ್ನು ಅವಳ ಪೋಷಕರಿಗೆ ಒಪ್ಪಿಸುತ್ತದೆ. ನಂತರ ಶೆಲ್ಲಿ ಮೇರಿಯೊಡನೆ ಇಟಲಿಗೆ ಹೋಗಿ ವಾಸಿಸುತ್ತಾನೆ. ಮೇರಿಯಿಂದ ಅವನಿಗೆ ಮೂವರು ಮಕ್ಕಳು ಹುಟ್ಟುತ್ತಾರೆ. ಶೆಲ್ಲಿ ೧೮೨೨ ರ ಜುಲೈ ೮ ರಂದು ಬೇ ಆಫ್ ಸ್ಪೇಜಿಯಾ ದಲ್ಲಿ ಜಲಯಾನ ಮಾಡುತ್ತಿರುವಾಗ ಮುಳುಗಿ ಸಾಯುತ್ತಾನೆ.

ಸಿರಿವಂತ ಮನೆತನದಲ್ಲಿ ಬೆಳೆದ ಪ್ರತಿಭಾವಂತ ಕವಿ ಶೆಲ್ಲಿಗೆ ಬೈರನ್‌ನಂತೆ ಕೀಟ್ಸ್‌ನ ಕಾವ್ಯ ಪ್ರತಿಭೆಯನ್ನು ಗುರುತಿಸಲು ಕಷ್ಟವಾಗುವುದಿಲ್ಲ. ಆದರೆ ಕೀಟ್ಸ್‌ನೇ ಶೆಲ್ಲಿಯ ಕಾವ್ಯವನ್ನು ಪ್ರಶಂಸೆಮಾಡುವಲ್ಲಿ ಬಿಗುಮಾನ ತೋರಿಸುತ್ತಾನೆ. ಮತ್ತೆ ಈ ಬಿಗುಮಾನಕ್ಕೆ ಅವನು ಕಾವ್ಯದ ಶ್ರೇಷ್ಠತೆ ಮತ್ತು ಅದರ ಆದರ್ಶದ ಕುರಿತು ಇಟ್ಟುಕೊಂಡ ಗೌರವವೇ ಕಾರಣವೆನ್ನಿಸುತ್ತದೆ.

ಕೀಟ್ಸ್‌ನ ಸಾವಿನ ಕುರಿತು ಕೇಳಿದ ತಕ್ಷಣದಲ್ಲಿಯೇ ಶೆಲ್ಲಿ ‘ಅಡೋನೀಸ್’ ಬರೆಯಲು ಪ್ರಾರಂಭಿಸುತ್ತಾನಂತೆ. ಹದಿನೇಳನೆ ಶತಮಾನದ ಪ್ರಮುಖ ಕವಿ ಜಾನ್ ಮಿಲ್ಟನ್‌ನ ‘ಲೈಸಿಡಾಸ್’ ಎಂಬ ಪ್ಯಾಸ್ಟೋರಲ್ ಎಲೆಜಿಯ ಪ್ರಕಾರದಲ್ಲಿಯೇ ಇದನ್ನು ಬರೆಯುತ್ತಾನೆ. ೧೮೨೧ ರಲ್ಲಿ ಬರೆಯಲ್ಪಟ್ಟಿರುವ ಈ ಕವಿತೆ ೪೯೫ ಸಾಲುಗಳದ್ದಾಗಿದ್ದು ೫೫ ಸ್ಪೆನ್ಸೇರಿಯನ್ ಸ್ಟಾಂಜಾಗಳಲ್ಲಿದೆ. ( ಇದು ೧೮೨೧ ರ ಜುಲೈನಲ್ಲಿ ಪ್ರಕಟವಾದಾಗ ಇದಕ್ಕೆ ಮುನ್ನುಡಿ ಬರೆಯುತ್ತಾ ಕೀಟ್ಸ್‌ನ ಸಾವಿಗೆ ಅವನ ಕೃತಿಗಳ ಕುರಿತು ಇಂಗ್ಲೆಂಡಿನ ಅತ್ಯಂತ ಜನಪ್ರಿಯ ಪತ್ರಿಕೆಗಳಲ್ಲೊಂದಾದ ‘ಕ್ವಾರ್ಟರ್ಲಿ ರಿವೀವ್’ ನಂತಹ ಪತ್ರಿಕೆಯಲ್ಲಿ ಪ್ರಕಟವಾದ ಅಪ್ರಿಯ ವಿಮರ್ಶೆಯೇ ಕಾರಣವಾಯಿತು ಎಂದು ಶೆಲ್ಲಿ ಹೇಳುತ್ತಾನೆ.)

ಈ ಶೋಕಗೀತೆಯಲ್ಲಿ ಬರುವ ಅಡೋನೀಸ್ ಗ್ರೀಕ್ ಪುರಾಣದ ಒಬ್ಬ ವೀರ. ಸೈಪ್ರಸ್ ನ ರಾಜ ಸಿನೆರಾಸ್ ಮತ್ತು ಆತನ ಮಗಳ ಮಗ ಅಡೋನಿಸ್. ಆಕೆ ತಂದೆಗೆ ಗೊತ್ತಿಲ್ಲದಂತೆಯೇ ಆತನನ್ನು ಸೇರುತ್ತಾಳೆ. ಮತ್ತು ನಂತರ ಅವನಿಂದ ತಪ್ಪಿಸಿಕೊಳ್ಳಲು ದೇವತೆಗಳ ಸಹಾಯದಿಂದ ಮರವಾಗಿ ಪರಿವರ್ತನೆಗೊಳ್ಳುತ್ತಾಳೆ. ಆ ಮರದ ಕಾಂಡದಿಂದ ಅಡೋನಿಸ್ ಹುಟ್ಟಿಬರುತ್ತಾನೆ. ಆತ ಗ್ರೀಕ್ ಪುರಾಣಗಳಲ್ಲಿ ಬರುವ ಅತ್ಯಂತ ಸುಂದರ ಪುರುಷರಲ್ಲಿ ಒಬ್ಬ. ಆಫ್ರೋಡೈಟ್ ಪ್ರೇಮ, ಸೌಂದರ್ಯ ಮತ್ತು ರತಿಯ ದೇವತೆ. ಆಕೆಗೆ ಅಡೋನಿಸ್‌ನಲ್ಲಿ ಉತ್ಕಟವಾದ ಪ್ರೇಮ. ಆತ ಒಂದು ಕಾಡು ಹಂದಿಯನ್ನು ಬೇಟೆಯಾಡುವಾಗ ಅದರಿಂದ ಕೊಲ್ಲಲ್ಪಡುತ್ತಾನೆ. ನಂತರ ಆಕೆ ಅಡೋನಿಸ್ ಗೆ ಜೀವ ನೀಡು ಎಂದು ಜಿಯಸ್‌ನನ್ನು ಬೇಡಿಕೊಳ್ಳುತ್ತಾಳೆ. ಆತ ಒಂದು ಒಪ್ಪಂದದ ಮೇಲೆ ಆತನಿಗೆ ಜೀವ ನೀಡುತ್ತಾನೆ. ಅದೆಂದರೆ, ಚಳಿಗಾಲದಲ್ಲಿ ಆತ ಅಧೋಲೋಕದಲ್ಲಿರಬೇಕು, ಮತ್ತು ಬೇಸಿಗೆಯಲ್ಲಿ ಅಫ್ರೋಡೈಟ್‌ಳೊಡನೆ. ಈ ಪ್ರಕಾರವಾಗಿಯೇ, ಹಸಿರು ಚಳಿಗಾಲದಲ್ಲಿ ಜೀವ ಕಳೆದುಕೊಳ್ಳುತ್ತದೆ, ಮತ್ತು ಬೇಸಿಗೆಯಲ್ಲಿ ಚಿಗುರುತ್ತದೆ, ಎನ್ನುತ್ತದೆ ಪುರಾಣ.

ಅಡೋನಿಸ್‌ಗೆ ಹೋಲಿಸುತ್ತ ಬರೆದಿರುವ ಈ ಕವಿತೆ ಕವಿ ಕೀಟ್ಸ್ ತೀರಿಕೊಂಡಿದ್ದಾನೆ ಎನ್ನುವುದನ್ನು ವ್ಯಕ್ತಪಡಿಸುತ್ತ ಪ್ರಾರಂಭವಾಗುತ್ತದೆ. ೫೫ ಚರಣಗಳ “ಅಡೋನಿಸ್‌” ಸುಮಾರು ೩೫ ನೇ ಚರಣದವರೆಗೂ ಆ ದುಃಖವನ್ನೇ ವ್ಯಕ್ತಪಡಿಸುತ್ತ ಹೋಗುತ್ತದೆ. ಒಂದು ಆಳವಾದ ನಿರಾಶೆಯನ್ನೇ ಹೊತ್ತುಕೊಂಡ ಕವಿ ಅಡೋನಿಸ್ ನ ತಾಯಿ ಯುರೇನಿಯಾಳನ್ನು ಆತನ ಸಾವಿಗಾಗಿ ದುಃಖಿಸುವಂತೆ, ಆತನ ಕೊನೆಯ ಕಾರ್ಯಗಳನ್ನು ನಡೆಸುವಂತೆ ಕೋರುತ್ತಾನೆ. ನಂತರದಲ್ಲಿ ಪ್ರಕೃತಿಯ ಅನೇಕ ರೂಪಗಳು ಮತ್ತು ಮತ್ತು ಅನೇಕ ವ್ಯಕ್ತಿಗಳು ದುಃಖಿಸುತ್ತಾರೆ. ಅವನ ಯವ್ವನಭರಿತ ಆತ್ಮದ ತೊರೆಯ ಬಳಿ ಉಂಡು ಬೆಳೆದ, ಭಾವೋತ್ಕಟತೆಯ ರೆಕ್ಕೆಯನ್ನ ಹೊಂದಿದ ಅವನ ಚಿಂತನೆಗಳೇ, ಕನಸುಗಳೇ ಒಬ್ಬನಿಂದ ಇನ್ನೊಬ್ಬನೆಡೆಗೆ ಅಲೆಯಬೇಡಿ, ಅವನಿಗಾಗಿ ದುಃಖಿಸಿ ಎನ್ನುತ್ತಾನೆ ಶೆಲ್ಲಿ. ಮುಂದೆ ಮೃತ ಕವಿಯ ಭಾವನೆಗಳು, ದೃಷ್ಠಿ, ಅವನ ಪ್ರತಿಭೆಗಳೆಲ್ಲ ವ್ಯಕ್ತಿರೂಪ ತಾಳಿ ಬರುತ್ತವೆ. ಯುರೇನಿಯಾ ಮಗನಿಗಾಗಿ ಹಂಬಲಿಸಿ, ಅವನನ್ನು ಎಚ್ಚರಗೊಳ್ಳುವಂತೆ ಗೋಗರೆಯುತ್ತಾಳೆ, ಪ್ರಲಾಪಿಸುತ್ತಾಳೆ. ಲಾರ್ಡ್ ಬೈರನ್, ಜಾರ್ಜ್ ಗೋರ್ಡನ್, ಥಾಮಸ್ ಮೂರ್ ಮುಂತಾದವರೆಲ್ಲ ದುಃಖಿಸುವುದರ ಪ್ರಸ್ತಾಪ ಬರುತ್ತದೆ. ಲೇ ಹಂಟ್ ಮತ್ತು ಶೆಲ್ಲಿ ಸಹಾ ಶವಯಾತ್ರೆಯ ಭಾಗವಾಗಿ ಶೋಖಿಸುತ್ತಾರೆ.

ನಂತರದಲ್ಲಿ ಕೀಟ್ಸ್ ನ “ಎನ್ಡಿಮಿಯನ್” ಕವಿತೆಯ ಕುರಿತು ತೀಕ್ಷ್ಣವಾಗಿ ವಿಮರ್ಶೆ ಮಾಡಿ, ಆತನ ಸಾವಿಗೆ ಮತ್ತೊಂದು ಕಾರಣವೂ ಆದ ವಿಮರ್ಶಕನನ್ನು ಒಂದು ಕ್ರಿಮಿಯೆಂದು, ಕಳಂಕವೆಂದು ಹೇಳುತ್ತಾ ಪಶ್ಚಾತ್ತಾಪ ನಿನ್ನನ್ನು ಆವರಿಸಲಿ, ಕ್ರಿಮಿಯೇ ನೀನು ಬದುಕಬೇಕು, ಬದುಕುವ ಶಿಕ್ಷೆ ನಿನಗೆ ಎಂದು ಅವನಿಗೆ ಹೇಳುತ್ತಾನೆ. ಇನ್ನೂ ಬೆಳೆಯಬೇಕಿದ್ದ ಉನ್ನತ ಪ್ರತಿಭೆಯ ಕೀಟ್ಸ್ ತೀರಿಕೊಂಡನೆಂದು ಸಂಕಟಪಡುವ ಶೆಲ್ಲಿ ಆತ ಮಾನವಜನ್ಮವನ್ನು ಮೀರಿ ಅನಂತತೆಯಲ್ಲಿ ಸೇರಿಹೋದನೆಂದು ಸಮಾಧಾನಪಡುತ್ತಾನೆ. ನಂತರದಲ್ಲಿ, ಈಗ ಅಡೋನಿಸ್ (ಕೀಟ್ಸ್) ಪ್ರಕೃತಿಯೊಡನೆ ಸೇರಿ ತನ್ನ ಪೂರ್ಣತೆಯ ಬದುಕನ್ನು ಬದುಕುತ್ತಿದ್ದಾನೆಂದು ಸಂತಸ ವ್ಯಕ್ತಪಡಿಸುತ್ತಾನೆ. ಕೊನೆಯಲ್ಲಿ ಕೀಟ್ಸ್‌ನ ಆತ್ಮ ಅನಂತತೆಯಲ್ಲಿ ಬೆಳಗುವ ನಕ್ಷತ್ರವಾಗಿದೆ ಎಂಬ ಭಾವವನ್ನು ತಾಳುತ್ತಾನೆ.

ಮರುವರ್ಷವೇ ಶೆಲ್ಲಿ ಬೇ ಆಫ್ ಸ್ಪೇಜಿಯಾ ದಲ್ಲಿ ಜಲಯಾನ ಮಾಡುತ್ತಿರುವಾಗ ಮುಳುಗಿ ಸಾಯುತ್ತಾನೆ. ಅವನನ್ನು ನೀರಿನಿಂದ ಹೊರತೆಗೆದಾಗ, ಅವನ ಬಳಿ ಕೀಟ್ಸ್‌ನ ಕವನ ಸಂಕಲನವೊಂದು ದೊರೆಯುತ್ತದೆ.

 

Leave a Reply

Your email address will not be published. Required fields are marked *