ತುಮ್ ಇಕ್ ಗೋರಖ ದಂದಾ ಹೋ..

ಚಿಕ್ಕವನಿದ್ದಾಗ ಒಂದು ಕೀರ್ತನೆಯನ್ನು ಕೇಳಿದ್ದು ನೆನಪಿದೆ, ಅದು ಅಲ್ಲಮಪ್ರಭುವಿನ ಕುರಿತದ್ದು. ಸಿದ್ಧನಾದ ಪ್ರಭುದೇವರಿಗೆ ಒಮ್ಮೆ ದಾರಿಯಲ್ಲಿ ಹಠಯೋಗಿ ಗೋರಕ್ಷ ಸಿಗುತ್ತಾನೆ. ಆತ ಯೋಗ ಸಾಧನೆಯಿಂದ ತನ್ನ ದೇಹವನ್ನು ವಜ್ರಕಾಯವನ್ನಾಗಿ ಮಾಡಿಕೊಂಡಿರುತ್ತಾನೆ. ಅಲ್ಲಮಪ್ರಭು ಎದುರಾದಾಗ ಆತ ತನ್ನ ಸಾಧನೆಯ ಕುರಿತು ಹೆಮ್ಮೆಯನ್ನು ವ್ಯಕ್ತಪಡಿಸುತ್ತಾನೆ, ಒಂದು ದೊಡ್ಡ ಖಡ್ಗವನ್ನು ಅಲ್ಲಮಪ್ರಭುವಿಗೆ ಕೊಟ್ಟು ತನ್ನ ದೇಹದ ಮೇಲೆ ಪ್ರಹಾರ ಮಾಡುವಂತೆ ಹೇಳುತ್ತಾನೆ. ಪ್ರಭುದೇವರು ಆ ಖಡ್ಗವನ್ನೆತ್ತಿ ಅವನ ದೇಹಕ್ಕೆ ಹೊಡೆಯುತ್ತಾರೆ, ಮಿಂಚು ಏಳುತ್ತದೆ, ದೊಡ್ಡ ಶಬ್ದ ಉಂಟಾಗುತ್ತದೆ, ಆದರೆ ಗೋರಕ್ಷನಿಗೆ ಏನೂ ಆಗುವುದಿಲ್ಲ. ಆತ ಗಹಗಹಿಸಿ ನಗತೊಡಗುತ್ತಾನೆ. ಅಲ್ಲಮಪ್ರಭುವೂ ಸಹಾ ಮೊದಲು ಹಠಯೋಗದಿಂದಲೇ ಪ್ರಾರಂಭಿಸಿದವರು, ಆ ಹಂತವನ್ನು ಮೀರಿ ಮುನ್ನಡೆದವರು. ಪ್ರಭುವಿಗೆ ಗೋರಕ್ಷನ ಮನಸ್ಥಿತಿ ತುಂಬ ಸುಲಭವಾಗಿ ಅರ್ಥವಾಗುತ್ತದೆ.

ಪ್ರಭು ಹೇಳುತ್ತಾರೆ, “ನಗಬೇಡ ಗೋರಕ್ಷಾ, ಸತ್ತು ಹೋಗುವ ಈ ದೇಹವನ್ನು ವಜ್ರಕಾಯವನ್ನಾಗಿಸುವುದರಿಂದ ಏನೂ ಸಾಧ್ಯವಾಗುವುದಿಲ್ಲ. ಈ ಖಡ್ಗದಿಂದ ನನ್ನ ಮೈಗೂ ಒಮ್ಮೆ ಪ್ರಹಾರ ಮಾಡಿನೋಡು”.
ಗೋರಕ್ಷ ಪ್ರಹಾರ ಮಾಡುತ್ತಾನೆ, ಖಡ್ಗ ಪ್ರಭುವಿನ ದೇಹದಲ್ಲಿ ಗಾಳಿಯಲ್ಲಿ ಸಾಗಿದಂತೆ ದಾಟಿ ಹೊರಬರುತ್ತದೆ, ಯಾವ ಶಬ್ದವಿಲ್ಲದೇ, ಪ್ರಭುವಿನ ದೇಹಕ್ಕೆ ಕಿಂಚಿತ್ತೂ ಘಾಸಿಯಾಗದೇ. ಅನಂತರದಲ್ಲಿ ಗೋರಕ್ಷ ಪ್ರಭುವಿನ ಶರಣಕ್ಕೆ ಬರುತ್ತಾನೆ, ಆತ್ಮೋದ್ಧಾರದ ದಾರಿಯನ್ನು ಕಂಡುಕೊಳ್ಳುತ್ತಾನೆ ಎಂಬುದು ಕತೆ.
ಆಚಾರ್ಯ ರಜನೀಶರು ಭಾರತೀಯ ಆಧ್ಯಾತ್ಮದ ಪರಂಪರೆಯಲ್ಲಿ ಮಾನವ ಕುಲಕ್ಕೆ ಅತ್ಯಂತ ಶ್ರೇಷ್ಠವಾದ ಕೊಡುಗೆ ನೀಡಿದವರಲ್ಲಿ ನಾಲ್ವರು ಮೂಲ ಪುರುಷರನ್ನು ಗುರುತಿಸುತ್ತಾರೆ. ಅವರು ಶ್ರೀಕೃಷ್ಣ, ಶ್ರೀ ಭಗವಾನ್ ಬುದ್ಧ, ಪಾತಂಜಲಿ ಮಹಾಮುನಿ ಮತ್ತು ಗೋರಖ. ಕೃಷ್ಣ ಪ್ರೇಮವನ್ನು, ಬುದ್ಧ ಧ್ಯಾನವನ್ನು, ಪಾತಂಜಲಿ ಯೋಗವನ್ನು ನೀಡಿದರೆ ಗೋರಖ ಸಾಕ್ಷಾತ್ಕಾರದ ಹಾದಿಯಲ್ಲಿ ಸಾಗಲು ಬೇಕಾದ ಮಹತ್ತರವಾದ ತಾಂತ್ರಿಕ ಸಾಧನೆಗಳನ್ನು ಆವಿಷ್ಕಾರ ಮಾಡಿದ ಮಹಾನುಭಾವ ಎನ್ನುತ್ತಾರೆ. ಆಂತರ್ಯದ ಹುಡುಕಾಟಕ್ಕಾಗಿ ಆತ ಮಾಡಿದ ಆವಿಷ್ಕಾರ, ಆತ ನೀಡಿದ ವಿಧಿಗಳ ಸಂಖ್ಯೆಗೆ ಎಷ್ಟಿತ್ತೆಂದರೆ ಅದರಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಬಿಡಬೇಕು ಅನ್ನುವುದೇ ಅರ್ಥವಾಗದೇ ದಿಗ್ಭ್ರಮೆಗೊಳಗಾಗಿಬಿಟ್ಟರಂತೆ ಜನ. ಹೀಗೆ ಯಾವುದು ಮಾಡಬೇಕು ಯಾವುದು ಬಿಡಬೇಕೆಂಬ ಗೊಂದಲದಲ್ಲಿರುವವರಿಗೆ ‘ಏನು ಗೋರಖ ದಂದೆಯಲ್ಲಿ ತೊಡಗಿದ್ದೀಯ’ ಎನ್ನುತ್ತಾರಂತೆ ಉತ್ತರದಲ್ಲಿ. (ಆದರೆ ಗೋರಖ ಆ ಎಲ್ಲ ವಿಧಿಗಳನ್ನೂ, ಪ್ರಯೋಗಗಳನ್ನೂ ನಗುತ್ತ, ಆಡುತ್ತ, ಮಗುವಿನಂತೆ ನಿಶ್ಚಿಂತನಾಗಿ ಮಾಡಬೇಕೆಂದು ಹೇಳುತ್ತಾನೆ.)
ಅಲ್ಲಮ ಪ್ರಭುವಿಗೆ ಸಿಗುವ ಗೋರಕ್ಷ ಇದೇ ಗೋರಖನೇ ಹೌದೋ ಅಲ್ಲವೋ ನನಗೆ ಗೊತ್ತಿಲ್ಲ. ಈ ಹಾಡು “ತುಮ್ ಇಕ್ ಗೋರಖ್ ದಂದಾ ಹೋ” ಕೇಳುತ್ತ ಇದೆಲ್ಲ ನೆನಪಾಯಿತು. ಇದನ್ನು ಹಾಡಿದ ಉಸ್ತಾದ್ ನುಸ್ರತ್ ಫತೇಹ್ ಅಲಿ ಖಾನ್ ರ ದನಿಯಲ್ಲಿ ದೈವಿಕತೆಯಿದೆ. ಈ ಹಾಡನ್ನು ಬರೆದವನು ನಾಝ್ ಖಿಯಾಲ್ವಿ ಎಂದೇ ಖ್ಯಾತನಾದ ಪಾಕಿಸ್ತಾನದ ಕವಿಯ ನಿಜ ಹೆಸರು ಮಹಮ್ಮದ್ ಸಿದ್ಧಿಕ್.
ಗೀತೆಯನ್ನು ಕೇಳುತ್ತ, ಅದರ ಅನುವಾದವನ್ನು ಓದಿ ಬೆರಗಾಗಿ ಹೋದೆ. ಅದೆಷ್ಟು ಮಧುರ ಪ್ರೇಮದಿಂದ ಈ ಕವಿ ಭಗವಂತನೊಡನೆ ಮಾತನಾಡುತ್ತಾನೆ ಎಂದು. ಆತ ಗೀತೆಯನ್ನು “ತುಮ್ ಇಕ್ ಗೋರಕ್ ದಂಧಾ ಹೋ” ಅಂತಲೇ ಭಗವಂತನನ್ನು ಸಂಬೋಧಿಸುತ್ತ ಗೀತೆಯನ್ನು ಪ್ರಾರಂಭಿಸುತ್ತಾನೆ, ಮತ್ತು ಗೀತೆಯುದ್ದಕ್ಕೂ ನೀನೊಬ್ಬ ಗೊಂದಲ, ನೀನೊಬ್ಬ ದಿಗ್ಭ್ರಮೆ ಎಂದು ಮತ್ತೆ ಮತ್ತೆ ಹೇಳುತ್ತ, ಅದಕ್ಕೆ ಕಾರಣಗಳನ್ನು ಕೊಡುತ್ತ ಹೋಗುತ್ತಾನೆ. ಭಗವಂತನನ್ನು ಹಾಸ್ಯ ಮಾಡುತ್ತಲೇ, ಆತನ ವಿರಾಟ್ ರೂಪವನ್ನು, ಸರ್ವವ್ಯಾಪಿತ್ವವನ್ನು ಒಪ್ಪಿಕೊಳ್ಳುತ್ತಾನೆ ಈ ಕವಿ. ನಾವು ಕನ್ನಡದ ಅನೇಕ ಭಕ್ತಿ ಕವಿಗಳಲ್ಲಿ, ದಾಸರ ಗೀತೆಗಳಲ್ಲಿ ದೇವನ ಕುರಿತ ಇಂತಹ ಅಪಹಾಸ್ಯ ಮಾಡುವ ಪ್ರೇಮಪೂರ್ಣವಾದ ಮಾತುಗಳನ್ನು ಅನೇಕ ಬಾರಿ ಕಂಡಿದ್ದೇವೆ. ಆದರೆ ಪ್ರಸ್ತುತ ಜೀವಿಸುತ್ತಿರುವ ಒಬ್ಬ ಕವಿಯು ಈ ರೀತಿ ಭಗವಂತನೊಡನೆ ಮಾತನಾಡುವುದನ್ನು, ತನ್ನ ಪ್ರೇಮವನ್ನು ವ್ಯಕ್ತಪಡಿಸುವುದನ್ನು ಕೇಳುವುದು ಅತ್ಯಂತ ವಿಶೇಷವಾದ ಮತ್ತು ಭರವಸೆ ತರುವಂತಹ ಸಂಗತಿ. ಈ ಗೀತೆಯ ಕುರಿತು ಸ್ವಲ್ಪ ಹೇಳುತ್ತೇನೆ. ನನಗೆ ಉರ್ದು ಗೊತ್ತಿಲ್ಲ, ಇಂಗ್ಲೀಷ್ ಅನುವಾದವೂ ಸಂಕ್ಷೀಪ್ತವಾಗಿದೆ. ನಾನು ಇನ್ನೂ ಸಂಕ್ಷೀಪ್ತವಾಗಿ ವಿವರಿಸುವ ಪ್ರಯತ್ನ ಮಾಡುತ್ತೇನೆ. ನಗುತ್ತಾ, ಆಡುತ್ತಾ ಗೋರಖ ಹೇಳುವ ರೀತಿಯಲ್ಲಿಯೇ ಇಲ್ಲಿ ಭಗವದ್‌ಪ್ರೇಮವನ್ನು ವ್ಯಕ್ತಪಡಿಸಿದ್ದಾನೆ ಕವಿ. ನುಸ್ರತ್ ಫತೇಹ್ ಅಲಿ ಖಾನ್ ನ ಆಂತರ್ಯದ ಆಳದಿಂದ ಉಕ್ಕಿ ಬರುತ್ತದೆ ಈ ಹಾಡು. ಗೀತೆ ಹೀಗೆ ಪ್ರಾರಂಭವಾಗುತ್ತದೆ:
ಕಭಿ ಯಹಾಂ ತುಮೆ ಢೂಂಡಾ, ಕಭಿ ವಹಾಂ ಪಹುಂಚಾ
ತುಮ್ಹಾರಿ ದೀದ್ ಕಿ ಖಾತಿರ್ ಕಹಾಂ ಕಹಾಂ ಪಹುಂಚಾ
ಗರೀಬ್ ಮಿಟ್ ಗಯೇ, ಪಾಮಾಲ್ ಹೋ ಗಯೇ ಲೇಕಿನ್
ಕಿಸಿ ತಲಕ್ ನ ತೇರಾ ಆಜ ತಕ್ ನಿಶಾನ್ ಪಹುಂಚಾ
ಹೋ ಭಿ ನಹಿ ಔರ್ ಹರ್ ಜಾ ಹೋ
ಹೋ ಭಿ ನಹಿ ಔರ್ ಹರ್ ಜಾ ಹೋ
ತುಮ್ ಇಕ್ ಗೋರಖ ದಂದಾ ಹೋ

“ಎಲ್ಲಿ ಹುಡುಕಿದರೂ ನೀನು ಸಿಗಲಿಲ್ಲ, ನಿನಗಾಗಿ ಜಗತ್ತು ಏನೇನೆಲ್ಲಾ ಆಯಿತು, ಆದರೆ ನಿನ್ನ ಗುರುತನ್ನು ಯಾರೂ ಕಂಡುಹಿಡಿಯಲೂ ಆಗಲಿಲ್ಲ. ಆದರೂ ಎಲ್ಲೆಲ್ಲೂ ಇರುವೆ, ನೀನೊಬ್ಬ ದಿಗ್ಭ್ರಮೆ, ನೀನೊಂದು ಗೊಂದಲ” ಎನ್ನುತ್ತಾ ಪ್ರೇಮದ ಮಾತನಾಡುತ್ತಾನೆ ಕವಿ. 190 ಕ್ಕಿಂತ ಹೆಚ್ಚು ಸಾಲುಗಳಿರುವ ಈ ಗೀತೆಯ ತುಂಬ ಭಗವಂತನಿಂದ ಏನೇನಾಯಿತು ಎಂಬುದನ್ನು ವಿವರಿಸುತ್ತ, ಘಟನೆಗಳ ವೈರುಧ್ಯಗಳ ಕುರಿತು ಹೇಳುತ್ತಾ, ಯಾರೂ ಅರ್ಥಮಾಡಿಕೊಳ್ಳಲಾಗದ ಭಗವಂತನ ಲೀಲಾರೂಪಿ ನಡೆಯ ಕುರಿತು ಅಚ್ಚರಿ ವ್ಯಕ್ತಪಡಿಸುತ್ತಾ ಹೋಗುತ್ತಾನೆ ಕವಿ:

“ನೀನು ಕಣಕಣದಲ್ಲೂ ದಿವ್ಯ ರೂಪದಲ್ಲಿ ಕಾಣುತ್ತೀಯ, ಆದರೂ ಮನಸ್ಸು ಗೊಂದಲದಲ್ಲಿರುವುದರಿಂದಾಗಿ ನೀನು ಹೇಗಿದ್ದೀಯ, ನೀನು ಯಾರು ಎಂಬುದೂ ಗೊತ್ತಾಗುವುದಿಲ್ಲ, ನೀನೇ ಒಂದು ಗೊಂದಲ. ಪೂಜಾ ಸ್ಥಳಗಳಲ್ಲಿ ಹುಡುಕಿದರೆ ಕಾಣಲಿಲ್ಲ, ನನ್ನೆದೆಯಲ್ಲಿ ಕಂಡೆಯಲ್ಲ, ನೀನೊಂದು ಗೊಂದಲ. ಎಲ್ಲಿ ಹುಡುಕಿದರೂ ಸಿಗಲಿಲ್ಲ, ಆದರೆ ನಾವಿರುವಲ್ಲಿಯೇ ಇರುವ ನೀನೊಂದು ಗೊಂದಲ. ನೀನೊಬ್ಬನಲ್ಲದೇ ಮತ್ತೊಂದಿಲ್ಲ, ಆದರೂ ಯಾಕೆ ನನ್ನೆದುರು ಈ ಪರದೆ?
“ದೇಗುಲಗಳಲ್ಲಿ ಕಾಣಲಿಲ್ಲ, ನೀನು ಒಡೆದ ಹೃದಯದಲ್ಲಿ ಕಂಡೆ. ಕೆಲವೊಮ್ಮೆ ಅಸ್ತಿತ್ವವೇ ಇಲ್ಲದಂತೆ ಕಳೆದುಹೋಗುತ್ತೀಯ, ಮತ್ತೆ ಅಸ್ತಿತ್ವವನ್ನು ಪಡೆದುಕೊಳ್ಳುತ್ತೀಯ. ನೀನು ಇಲ್ಲವೇ ಇಲ್ಲ ಎಂದಾದರೆ, ಈ ಇಲ್ಲಗಳೆಯುವಿಕೆ ಯಾಕೆ? ಇಲ್ಲವೆಂಬುದರ ಪುನರುಕ್ತಿಯೇ ಸಾರುತ್ತದೆ ನಿನ್ನ ಇರುವಿಕೆಯನ್ನು. ನನ್ನ ಅಸ್ತಿತ್ವವೇ ಎಂದು ನಾನು ಯಾರನ್ನು ಕರೆಯುವೆನೋ ಅವನು ನೀನಲ್ಲವಾದರೆ ಮತ್ತಾರು? ನನ್ನ ಹಂಬಲಗಳಲ್ಲಿ ನೀನು ಉಕ್ಕಿ ಬರದಿರುತ್ತಿದ್ದರೆ ನಾನು ನಿನ್ನನ್ನು ದೇವರೆಂದಾದರೂ ಹೇಗೆ ತಿಳಿಯುತ್ತಿದ್ದೆ? ನೀನೊಂದು ಗೊಂದಲ.
“ಜ್ಞಾನವನ್ನು ಪ್ರವೇಶಿಸಿದವನು ಸಾವಿಲ್ಲದವನು ಹೇಗಾದಾನು? ಮನಸಿನ ಹಿಡಿತಕ್ಕೆ ಸಿಕ್ಕವನು ದೇವರು ಹೇಗಾದಾನು? ತತ್ವಜ್ಞಾನಿಗೆಲ್ಲಿ ಸಿಕ್ಕಾನು ದೇವರು, ಮುಳುಗಿಹೋಗುತ್ತಾನೆ ಆತ ತನ್ನದೇ ಚರ್ಚೆಗಳಲ್ಲಿ. ಮನೆಯಿಲ್ಲದವನೆಂದು ಹೇಳಿಕೊಳ್ಳುತ್ತೀಯ, ಒಡೆದ ಹೃದಯಗಳನ್ನೇ ಮನೆಯಾಗಿಸಿಕೊಳ್ಳುತ್ತೀಯ. ನೀನಲ್ಲದೇ ಬೇರೇನೂ ಇಲ್ಲವೆಂದಾಗಿದ್ದರೆ ಯಾಕಿದೆ ಇಷ್ಟೆಲ್ಲ ಗೊಂದಲ? ನೀನೊಂದು ಗೊಂದಲ.
“ನಿನ್ನನ್ನು ನೀನು ಅಡಗಿಸಿಟ್ಟುಕೊಳ್ಳುವುದಿಲ್ಲ, ನಿನ್ನನ್ನು ನೀನು ತೋರಿಸಿಕೊಳ್ಳುವುದಿಲ್ಲ ಕೂಡಾ. ಬೇರಾವುದೋ ರೂಪದಲ್ಲಿ ನೀನು ವ್ಯಕ್ತವಾಗುತ್ತೀಯ, ಆದರೆ ನೀನೇ ಕಾಣುವುದಿಲ್ಲ. ನಿನ್ನ ಪೂಜಿಸಲೆಷ್ಟು ಪ್ರಕಾರಗಳಿವೆ, ಅವುಗಳ ನಡುವಿನ ಗೊಂದಲವನ್ನು ನೀನು ಬಗೆಹರಿಸುವುದಿಲ್ಲ, ಸತ್ಯವನ್ನು ತೋರಿಸುವುದಿಲ್ಲ. ಹಾಗಿದ್ದೂ ನನ್ನ ಹೃದಯದಲ್ಲಿದ್ದೀಯೆಂದೆ ನನಗೆ ಅಚ್ಚರಿ. ಎರೆಡು ಜಗತ್ತುಗಳೂ ಸಾಕಾಗದೇ ದೇಗುಲದಲ್ಲೂ ಇರುವ ನೀನು, ನಿನ್ನ ಮುಖವನ್ನು ತೋರಿಸದಿರುವ ಕಾರಣಕ್ಕಾಗಿ ವಿಶ್ವಾಸಾರ್ಹನೂ ಅಲ್ಲ, ನೀನೊಬ್ಬ ಗೊಂದಲ.
“ಸಮಯ ಆರಂಭವಾದಾಗಿನಿಂದಲೂ ಇದೇನು ಆಟ ಆಡುತ್ತಿರುವೆ ನೀನು? ಆತ್ಮವನ್ನು ದೇಹದ ಪಂಜರದಲ್ಲಿ ಬಂಧಿಸಿರುವೆ, ಮತ್ತೆ ಸಾವನ್ನು ಕಾಯಲಿರಿಸಿರುವೆ. ಶತಮಾನಗಳವರೆಗೆ ಜಗತ್ತನ್ನು ಸಿಂಗರಿಸಿಟ್ಟಿರುವೆ, ಜೊತೆಗೆ ಅದನ್ನು ಹಾಳುಗೆಡುವಲೂ ಉಪಾಯ ಮಾಡಿರುವೆ. ಮನೆಯಿಲ್ಲದವನೆಂದು ಹೇಳಿಕೊಳ್ಳುತ್ತೀಯೆ, ಆದರೆ ಕುಟುಂಬ, ಬಂಧು ಬಳಗದವರ ಅಗತ್ಯದ ಕುರಿತೂ ಬೋಧಿಸುತ್ತೀಯ. ಇದು ಕೆಟ್ಟದ್ದು, ಇದು ಒಳ್ಳೆಯದು, ಇದು ನರಕ, ಇದು ಸ್ವರ್ಗ, ದಯವಿಟ್ಟು ಹೇಳು, ಈ ಗೊಂದಲಗಳಲ್ಲಿ ಏನಿದೆ? ಆದಂ ನ ತಪ್ಪಿಗಾಗಿ ಅವನ ಮಕ್ಕಳನ್ನು ಶಿಕ್ಷಿಸುತ್ತೀಯ, ಇದೇ ನಿನ್ನ ನ್ಯಾಯವೇ? ನಿನ್ನನ್ನೇ ಗುರುತಿಸಿಕೊಳ್ಳಲು ಈ ಜಗತ್ತನ್ನೆಲ್ಲ ಸೃಷ್ಟಿಸಿದ್ದೀಯ, ಆದರೆ ಜಗತ್ತಿನಿಂದಲೇ ತಪ್ಪಿಸಿಕೊಂಡು ತಿರುಗುತ್ತೀಯ, ನೀನೊಂದು ಗೊಂದಲ.
“ನಿನ್ನನ್ನೇ ರಚಿಸಿಕೊಳ್ಳುತ್ತೀಯ, ಅಳಿಸಿಕೊಳ್ಳುತ್ತೀಯ. ಯಾವ ಹಂಬಲದ ತಪ್ಪಿಗಾಗಿ ಹೀಗೆ ನಮ್ಮನ್ನು ಶಿಕ್ಷಿಸುತ್ತೀಯ? ಕೆಲವೊಮ್ಮೆ ಕಲ್ಲನ್ನು ವಜ್ರವನ್ನಾಗಿ ಮಾಡುತ್ತೀಯ, ಮತ್ತೊಮ್ಮೆ ವಜ್ರವನ್ನೇ ಧೂಳಾಗಿಸುತ್ತೀಯ. ಸತ್ತ ಅನೇಕರಿಗೆ ಜೀವವನ್ನು ಕೊಟ್ಟವನನ್ನು ನೀನು ಶಿಲುಬೆಗೇರಿಸಿದೆ. ಅಬ್ರಾಮನನ್ನು ಬೆಂಕಿಗೆಸೆಯುವಂತೆ ಮಾಡಿದೆ, ಕೊನೆಗೆ ಬೆಂಕಿಯನ್ನೇ ಹೂಗಳನ್ನಾಗಿಸಿದೆ. ಜಾಕೋಬನ ಕಣ್ಣುಗಳನ್ನ ಕಳೆದೆ. ಜೋಸೆಫನನ್ನು ಗುಲಾಮರ ಮಾರುಕಟ್ಟೆಯಲ್ಲಿ ಬಿಟ್ಟೆ, ಕೊನೆಗೆ ಅವನನ್ನೇ ಈಜಿಪ್ಟಿನ ರಾಜನನ್ನಾಗಿ ಮಾಡಿದೆ.
“ಭಗವತ್ತೆಯನ್ನು ಪಡೆದವನನ್ನು ‘ನಾನೇ ಸತ್ಯ’ ಎನ್ನುವಂತೆ ಮಾಡುತ್ತೀಯ, ಕೊನೆಗೆ ಕಾನೂನಿನ ಪ್ರಕಾರ ಅವನನ್ನು ವಿಶ್ವಾಸದ್ರೋಹಿಯಾಗಿಸುತ್ತೀಯ. ಅಂತೆಯೇ, ಮನ್ಸೂರನನ್ನು ಶಿಲುಬೆಗೇರಿಸಿ ಕೊಂದೆ. (ಪರ್ಶೀಯಾದ ಸೂಫಿ ಸಂತ ಅಲ್ ಮನ್ಸೂರ್ ‘ಅನಲ್ ಹಕ್’ (ಅಹಂ ಬ್ರಹ್ಮಾಸ್ಮಿ) ಎಂದು ಹೇಳಿದ ಕಾರಣಕ್ಕಾಗಿ ಆತನನ್ನು ಚಿತ್ರಹಿಂಸೆ ಕೊಟ್ಟು ಸಾಯಿಸುತ್ತಾರೆ.) ನಿನ್ನನ್ನು ಹುಡುಕಿಕೊಂಡು ಹೊರಟ ರಾಂಜಾನನ್ನು ಜಾತ್ರೆಯಲ್ಲಿ ಕುಳಿತು ಅಳುವಂತೆ ಮಾಡುತ್ತೀಯ, ನಿನ್ನ ಹುಡುಕಿದ ಮಜ್ನುವಿಗೆ ಯಾವುದೋ ಲೈಲಾಳ ಪ್ರೇಮಿಯನ್ನಾಗಿಸುತ್ತೀಯ, ಸಸಿಗೆ ನಿನ್ನ ಮೇಲೆ ಪ್ರೇಮ ಬೆಳಗಿದರೆ ಆಕೆಯನ್ನು ಮರುಭೂಮಿಯ ಬೇಗೆಯಲ್ಲಿ ಬೇಯಿಸುತ್ತೀಯ, ಸೋಹ್ನಿ ನಿನ್ನನ್ನು ತನ್ನ ಮಹಿವಾಲನೆಂದುಕೊಂಡರೆ ಆಕೆಯನ್ನು ನೀರಲ್ಲಿ ಮುಳುಗಿಸುತ್ತೀಯ. (ಸಸಿ, ಸೋಹ್ನಿಯರು ಲೈಲಾಳಂತೆ ಪಂಜಾಬ್ ಪ್ರಾಂತ್ಯದ ಅಮರ ಪ್ರೇಮಿಗಳು.)
“ನಾನು ಹೇಳುವುದು ನಿನಗೆ ಕೆಟ್ಟದೆನಿಸಬಹುದೆಂದು ನನಗೆ ಗೊತ್ತು, ಆದರೂ ನನ್ನಲ್ಲಿ ಒಂದಿಷ್ಟು ಆಪಾದನೆಗಳಿವೆ. ಮಹಮ್ಮದನ ಮೊಮ್ಮಗ ಕರ್ಬಲಾದ ಮರಳುಗಾಡಲ್ಲಿ ಮೂರು ದಿನಗಳವರೆಗೆ ಬಾಯಾರಿ ನರಳಿದರೂ, ಆತ ನಿನ್ನ ಪ್ರೇಮಕ್ಕಾಗಿ ಬೆಂದರೂ ನೀನು ನಿನ್ನ ಸಿಂಹಾಸನದಲ್ಲಿಯೇ ಕುಳಿತಿದ್ದೆಯೇ ಹೊರತೂ ಅವನಿಗೆ ಹನಿ ನೀರು ನೀಡಲಿಲ್ಲ. ಶತ್ರುಗಳು ಶತ್ರುಗಳೇ, ಅವರು ಕೊಡಲಾರರು, ಆದರೆ ನೀನಾದರೂ ಕೊಡಬಹುದಿತ್ತು. ಪ್ರತೀ ದಮನದ ಕಾರ್ಯವೂ ದಮನಕಾರರ ಆಸ್ತಿಯೇ ಹೌದು, ಆದರೆ ದಮನಕ್ಕೊಳಗಾದವರನ್ನು ಕೇಳುವವರು ಯಾರು? ನಿನ್ನೆ ಕಿರೀಟ ಧರಿಸಿದ್ದವ ಇವತ್ತು ಭಿಕ್ಷಾಪಾತ್ರೆ ಹಿಡಿದು ತಿರುಗುವುದನ್ನು ನೋಡಿದ್ದೇನೆ. ಯಾಕೆಂದು ಕೇಳಿದರೆ, ಈ ಗುಟ್ಟನ್ನು ಯಾರೂ ಅರಿಯಲಾರರು ಅನ್ನುತ್ತೀಯ. ನೀನೊಂದು ಗೊಂದಲ.
“ಜಗತ್ತಿನ ಕನ್ನಡಿಯನ್ನು ನೋಡುವಾಗ ಒಂದೇ ದೃಷ್ಠಿಗೆ ಅದೆಷ್ಟು ವೈರುಧ್ಯಗಳು ಕಾಣುತ್ತವೆ. ಎಲ್ಲೋ ದಾರಿದ್ರ್ಯ ಮಾಗಿಹೊಗೆಯನ್ನು ಕಾಣುತ್ತೇನೆ, ಇನ್ನೆಲ್ಲೋ ವರವೇ ಮುಂಗಾರಾಗಿ ಸುರಿಯುವುದನ್ನು ಕಾಣುತ್ತೇನೆ. ಇಲ್ಲಿ ಬುಸುಗುಟ್ಟುವ ನದಿಗಳು, ಮತ್ತೆ ಅಲ್ಲಿ ಮೌನಿ ಬೆಟ್ಟಗಳು; ಇಲ್ಲಿ ದಟ್ಟ ಕಾಡುಗಳು, ಅಲ್ಲಿ ಮರುಭೂಮಿ ಮತ್ತೆಲ್ಲೋ ತೋಟಗಳು. ಈ ವಿಭಿನ್ನತೆ ನನ್ನನ್ನು ವಿಲಿವಿಲಿ ಒದ್ದಾಡಿಸುತ್ತದೆ. ಇಲ್ಲಿ ಒಂದಿಷ್ಟು ಬಡವರು, ಅಲ್ಲಿ ಸಿರಿವಂತರು. ಬೆಳಗಿಗೆ ಒಬ್ಬನೇ ಸೂರ್ಯ, ಆದರೆ ರಾತ್ರಿಯನ್ನು ಲಕ್ಷ ನಕ್ಷತ್ರಗಳು ತುಂಬಿಕೊಳ್ಳುತ್ತವೆ. ಇಲ್ಲಿ ಸತ್ಯದ ಹೂಗಳು ಬಾಡಿ ಬಿದ್ದಿರುವುದನ್ನು ನೋಡುತ್ತೇನೆ, ಅಲ್ಲಿ ಸುಳ್ಳಿನ ಮುಳ್ಳುಗಳು ಅರಳುವುದನ್ನು. ಶಮಾಸ್ ಫಕೀರರ ಚರ್ಮ ಸುಲಿಯುವುದನ್ನು, ಸರ್ಮಾದರ ತಲೆ ಕಡಿಯುವುದನ್ನು ನೋಡುತ್ತೇನೆ. ರಾತ್ರಿಯೆಂದರೇನು, ಹಗಲೆಂದರೇನು? ಬೆಳಕೆಂದರೇನು, ಕತ್ತಲೆಂದರೇನು? ಹೇಗಿದ್ದರೂ ನಾನೂ ನಿನ್ನ ಪ್ರತಿನಿಧಿಯೇ ಅಲ್ಲವೇ, ನನಗೂ ಯಾಕೆ ಕೇಳುತ್ತೀಯ, “ಯಾವುದು ನಿನ್ನದು” ಎಂದು. ನೀನೊಬ್ಬ ಗೊಂದಲ. ನೋಡುವವನು ನಿನ್ನನ್ನು ಹೇಗಾದರೂ ನೋಡುತ್ತಾನೆ? ನೀನು ಎಲ್ಲ ರೀತಿಯಲ್ಲೂ ನಿನ್ನನ್ನ ಮುಚ್ಚಿಕೊಂಡಿದ್ದೀಯ. ನೀನೊಂದು ಗೊಂದಲ.
“ಆ ಮಸೀದಿಗಳು, ದೇವಾಲಯ, ಪಾನಗೃಹಗಳು; ಕೆಲವರು ಇದರಲ್ಲಿ ನಂಬಿಕೆಯಿಟ್ಟರೆ, ಇನ್ನು ಕೆಲವರು ಅದರಲ್ಲಿ ನಂಬಿಕೆಯಿಡುತ್ತಾರೆ. ಎಲ್ಲವೂ ನಿನ್ನ ಮನೆಯೇ ಪ್ರಿಯನೇ. ನಿನ್ನ ಅದ್ವಿತೀಯತೆಯ ಕುರಿತು ನಮಗೆ ಮನವರಿಕೆಯಾಗಿದೆ. ಒಬ್ಬ ಸೃಷ್ಠಿಯೊಡನೆ ತನ್ನನ್ನು ಒಂದಾಗಿಸಿಕೊಳ್ಳುತ್ತಾನೆ, ಮತ್ತೊಬ್ಬ ಅದರಿಂದ ಹೊರಗೆ ನಿಲ್ಲುತ್ತಾನೆ, ಆದರೆ ಇಬ್ಬರೂ ನಿನ್ನ ಭಕ್ತರೇ. ಎಲ್ಲರೂ ನಿನ್ನ ಹೆಸರಿನ ಭಕ್ತರೇ ಆದರೆ, ಮತ್ತೆ ಯಾಕೆ ನಿನ್ನ ಹೆಸರಿನ ಕುರಿತು ಇಷ್ಟೆಲ್ಲಾ ಗೊಂದಲಗಳು? ನೀನೊಬ್ಬ ಗೊಂದಲ.
“ನೀನು ನಮ್ಮ ಹುಡುಕಾಟದ ಕೇಂದ್ರವಾಗಿರುವೆ. ಎಲ್ಲ ಸಮಯದಲ್ಲಿಯೂ ಪ್ರಕಟಗೊಳ್ಳುವೆ, ಸರ್ವವ್ಯಾಪಿಯಾಗಿರುವೆ. ನೀನೇ ಪ್ರಿಯನಾದವನು, ಪರಿಪೂರ್ಣನಾದವನು. ಎರೆಡೂ ಜಗತ್ತುಗಳ ಹಂಬಲಕ್ಕೆ ನೀನೇ ಗಳಿಕೆ. ನೀನು ನಮಗೆ ಕಂಗಳನ್ನು ನೀಡಿದೆ, ಕಣ್ಣೀರಿನಿಂದ ಶುದ್ಧಿಕ್ರಿಯೆ ಮಾಡುವಂತೆ ಮಾಡಿದೆ. ಈಗ ನಿನ್ನನ್ನು ನೀನು ಪ್ರಕಟಗೊಳಿಸು ಒಮ್ಮೆ. ನಿನ್ನ ಪರದೆ ತೆರೆದು ನೀನೇ ಒಮ್ಮೆ ನನ್ನೆದುರು ಬಾ. ಒಂದು ಚಿಕ್ಕ ಭೇಟಿ ಮತ್ತು ಮಾತುಕತೆ ನಡೆದುಹೋಗಲಿ. ಆಮೇಲೆ ನಾಝ್ ಎಲ್ಲೆಡೆಗೂ ಊರು ಊರಲ್ಲಿ, ಓಣಿ ಓಣಿಗಳಲ್ಲಿ ಹೇಳುತ್ತಾ ತಿರುಗುತ್ತಾನೆ; ಅಲ್ಲಾ ಒಬ್ಬನೇ, ಅವನಿಗೆ ಯಾರೂ ಸಂಗಾತಿಯಿಲ್ಲ… ಅಲ್ಲಾಹು, ಅಲ್ಲಾಹು, ಅಲ್ಲಾಹು…..”
ಇಡೀ ಜಗತ್ತಿನ ಎಲ್ಲ ಗೊಂದಲಗಳನ್ನೂ, ಬದುಕಿನ ವಿಸ್ಮಯವನ್ನೂ, ವಿಧಿಯ ನಿಗೂಢ ನಡೆಯನ್ನೂ ಪ್ರಶ್ನಿಸುತ್ತಾ ಭಗವಂತನೆದುರು ಕವಿ ತನ್ನ ಹೃದಯವನ್ನು ಬಿಚ್ಚಿಡುವ ಈ ಪರಿ ಅತ್ಯಂತ ಆಳವಾದದ್ದು ಅನ್ನಿಸುತ್ತದೆ. ಹೀಗೆ ಮಾಡುತ್ತಲೇ, ಆತ ಆ ಎಲ್ಲ ಗೊಂದಲ, ವಿಸ್ಮಯ ಮತ್ತು ನಿಗೂಢತೆಯನ್ನು ಭಗವಂತನ ರೀತಿಯೆಂದು ಒಪ್ಪಿಕೊಳ್ಳುತ್ತಾ, ಕೊನೆಗೆ ನೀನೊಬ್ಬನೇ, ನೀನೇ ಸರ್ವಸ್ವ ಎಂದು ಆತನನ್ನು ಅಪ್ಪಿಕೊಳ್ಳುತ್ತಾನೆ.
ಈ ಗೀತೆಯ ಪಠ್ಯ ನಿಮಗೆ ಇಲ್ಲಿ ದೊರೆಯುತ್ತದೆ. ಹಾಡಿನ ಲಿಂಕ್ ಕವಿಯ ಕುರಿತು: ಆತ ಖಿಯಾಲಿ ಎಂಬ ಊರಿನವನು. ಅದು ಪಾಕಿಸ್ತಾನದ ಫೈಸಲಾಬಾದ್ ಜಿಲ್ಲೆಯ ತಂಡ್ಲಿನ್‌ವಾಲಾ ಎಂಬ ಪಟ್ಟಣದ ಬಳಿಯಿದೆ. ಉರ್ದು ಮತ್ತು ಪಂಜಾಬಿಯಲ್ಲಿ ಬರೆಯುತ್ತಿರುವ ಈ ಕವಿಗೆ ಹೆಚ್ಚಿನ ಪ್ರಸಿದ್ಧಿ ಬರದಿರಲು ಕಾರಣ ಆತ ಹಳ್ಳಿಯಲ್ಲಿ ಉಳಿದು ತನ್ನಷ್ಟಕ್ಕೆ ಬರೆದುಕೊಂಡಿದ್ದೇ ಕಾರಣ ಅನ್ನುತ್ತಾರೆ. ಫೈಸಲಾಬಾದ್ ನಿಂದ ಪ್ರಸಾರವಾಗುವ ಪಂಜಾಬಿ ರೇಡಿಯೋದಲ್ಲಿ ಒಂದು ಕಾರ್ಯಕ್ರಮವನ್ನು ಮಾಡಿಕೊಡುತ್ತಾ ಜೀವಿಸುತ್ತಿರುವ ಈತ ಪ್ರಸಿದ್ಧಿಗೆ ಬಂದಿದ್ದು ನುಸ್ರತ್ ಫತೇಹ್ ಅಲಿ ಖಾನ್‌ ನಿಂದಾಗಿ. ಈ ಕವಿಯ ಕುರಿತು ಹೆಚ್ಚಿನ ಮಾಹಿತಿ ಎಲ್ಲೂ ಸಿಗುವುದಿಲ್ಲ. ಸ್ವತಃ ಕವಿಯಾಗಿರುವ ಈತನ ಶಿಷ್ಯ ಮುನೀರ್ ಖಾಸಿಮ್ ಬರೆದ ಪ್ರಕಾರ ನಾಝ್ ನ ವಯಸ್ಸು 55 ಮತ್ತು ಆತ ಅವಿವಾಹಿತ. (ಅಂತರ್ಜಾಲದಲ್ಲಿ ಸಿಕ್ಕ ಈ ಲೇಖನ ಯಾವ ವರ್ಷದಲ್ಲಿ ಬರೆದಿದ್ದು ಎಂದು ಗೊತ್ತಿಲ್ಲ.)
ನಾಝ್ ಸಾಹಿಬ್ “ತುಮ್ ಇಕ್ ಗೋರಖ್ ದಂದಾ ಹೋ” ಗೀತೆಯನ್ನು ಉಸ್ತಾದ್ ನುಸ್ರತ್‌ ಫತೇಹ್ ಅಲಿ ಖಾನ್ ಗಾಗಿ ಬರೆದುಕೊಡುತ್ತಾನೆ. ಫೈಸಲಾಬಾದ್‌ನವನಾದ ನುಸ್ರತ್ ಗೆ ಅಲ್ಲಿನ ರೇಡಿಯೋದವರ ಮೂಲಕ ನಾಝ್‌ನ ಪರಿಚಯವಾಗುತ್ತದೆ. ನುಸ್ರತ್ ತನಗಾಗಿ ಒಂದು ಖವ್ವಾಲಿಯನ್ನು ಬರೆದುಕೊಡೆಂದು ವೈಯಕ್ತಿಕವಾಗಿ ಕೇಳಿಕೊಳ್ಳುತ್ತಾನೆ. ಮತ್ತು ನಾಝ್ ತುಂಬ ಕಡಿಮೆ ಹಣಕ್ಕೆ ಆ ಗೀತೆಯನ್ನು ಬರೆದುಕೊಡುತ್ತಾನೆ. ಆದರೆ, ಆ ಗೀತೆಯ ಆಲ್ಬ ಆ ಮೊದಲಿನ ಮಾರಾಟದ ಎಲ್ಲ ದಾಖಲೆಗಳನ್ನು ಮುರಿದು ಪ್ರಸಿದ್ಧವಾಗುತ್ತದೆ. ಸಧ್ಯ ತಂಡ್ಲಿನ್‌ವಾಲಾದಲ್ಲಿ ಬಾಡಿಗೆ ಮನೆಯೊಂದರಲ್ಲಿ ಜೀವಿಸುತ್ತಿರುವ ನಾಝ್ ನ ಮನೆಯಲ್ಲಿ ಸ್ನಾನಕ್ಕೆ ಸರಿಯಾದ ಕೋಣೆಯಿರದಿದ್ದರೂ, ಪುಸ್ತಕಗಳೇ ತುಂಬಿವೆಯಂತೆ. ಮತ್ತು, ಕವಿ ಯಾವಾಗಲೂ ಬರೆಯುತ್ತಲೋ, ಓದುತ್ತಲೋ ಇರುತ್ತಾನಂತೆ. ಕಾವ್ಯ ಆತನ ಹೆಂಡತಿ, ಆತ ಜೀವಿಸುವುದಕ್ಕೆ ಕಾರಣ ಮತ್ತು ಆತನ ಎಲ್ಲವೂ ಆಗಿದೆ ಎನ್ನುತ್ತಾನೆ ಮುನೀರ್. 36 ವರ್ಷದ ಮುನೀರ್ ಖಿಯಾಲಿಯಲ್ಲಿ ನಾಝ್ ನ ಪಕ್ಕದ ಮನೆಯಲ್ಲಿಯೇ ಜೀವಿಸಿದ್ದು, ತಾವು ಒಟ್ಟಿಗೇ ತಂಡ್ಲಿನ್‌ವಾಲಾ ಗೆ ವಲಸೆಗೊಂಡೆವು ಅನ್ನುತ್ತಾನೆ.
ಆತ ಯಾವತ್ತೂ ಪ್ರಸಿದ್ಧಿಗಾಗಿ ಬರೆಯಲಿಲ್ಲ. ಆತ ಪ್ರಸಿದ್ಧನಾಗುವುದೂ ಇಲ್ಲ, ಯಾಕೆಂದರೆ ಆತನನ್ನು ಪಾಕಿಸ್ತಾನದ ಮುಖ್ಯ ಕವಿಗಳು ಮುಂದೆ ಬರಲು ಬಿಡುವುದೂ ಇಲ್ಲ. ಅಂತರರಾಷ್ಟ್ರೀಯ ಸಮುದಾಯದಲ್ಲಿ ಯಾರಾದರೂ ಮುಂದೆ ಬಂದರೆ ಮಾತ್ರ ಆತನ ಕಾವ್ಯವನ್ನು ಪ್ರಸಿದ್ಧಿಗೊಳಿಸಬಹುದು, ಎನ್ನುತ್ತಾನೆ ಮುನೀರ್.

6 comments

  1. >ನಿಜ ಸಂಗೀತಕ್ಕೆ ಮತ ಧರ್ಮದ ಗೋಡೆಯಿರುವದಿಲ್ಲ….ಮಹಮದ್ ಸಿದ್ದಿಕ್ ಬಗೆಗೆ ಕೇಳಿದ್ದೆ…ಹೆಚ್ಚಿಅ ವಿವರ ಗೊತ್ತಿಲ್ಲವಾಗಿತ್ತು…ಎಷ್ಟು ಸುಂದರ ಹಾಡು…!ಆ .. ಹಾಡಿನ ಮೋಡಿಯಲ್ಲಿ ತೇಲಿಹೋದೆ… ವಾಹ್…!ಅದರ ಭಾವಾರ್ಥ ಕೂಡ….ಪಾಕಿಸ್ತಾನದ ರತ್ನ ಅವರು….ಒಳ್ಳೆಯ ಹಾಡು, ಅದರ ಅದರ ಅರ್ಥ ವಿವರಣೆಗಗಿ ನಿಮ್ಮನ್ನು ಅಭಿನಂದಿಸುವೆ….

  2. >ಭಾವಪೂರ್ಣವಾದ ಈ ಕವನದ ಸಾಲುಗಳನ್ನು ಓದಿ ಬೆರಗಾದೆ. ಕವಿ ಪರಿಚಯ ಮಾಡಿದ್ದಕ್ಕಾಗಿ ಧನ್ಯವಾದಗಳು.

  3. >ಅಬ್ಬಾ! ಅಭಿನಂದನೆಗಳು ಸರ್..ಮಹಮ್ಮದ್ ಸಿದ್ದಿಕ್ ಬಗ್ಗೆ ಕೇಳಿದ್ದೆ..ಇಷ್ಟು ಗೊತ್ತಿರಲಿಲ್ಲ.ತುಂಬಾಬಾಬಾ ಖುಷಿ ಆಯ್ತು…ಯುವಕವಿಗೆ ಹಾಕಿದ್ರಾ? ಇದನ್ನು..?-ಧರಿತ್ರಿ

Leave a Reply

Your email address will not be published. Required fields are marked *