ಇದ್ದಬದ್ದ ಕೆಲಸಗಳನ್ನೆಲ್ಲ ತಡಬಡಾಯಿಸಿ ಮುಗಿಸಿ ಹಳದಿ-ಗೆಂಪು ಬಸ್ಸು ಹತ್ತಿ ಸೂರ್ಯ ಮನೆಗೆ ಹೊರಡುವ ಹೊತ್ತು, ನಾನೂ ಅಂತದ್ದೇ ಬಸ್ಸನ್ನೇರುತ್ತೇನೆ.
ಏರು ಯವ್ವನವನ್ನು ಪಡೆದ ಸಂಭ್ರಮದಲ್ಲಿ ನೈಟ್‌ಔಟ್ ಅನ್ನುತ್ತಾ ಅಪ್ಪ ಅಮ್ಮಂದಿರಿಗೆ ಟಾಟಾ ಮಾಡಿ ಹದಿ-ಹರೆಯದ ನಕ್ಷತ್ರಗಳು ಬೆಳದಿಂಗಳ ಪಾರ್ಟಿಗೆ ಹೊರಡುತ್ತವೆ. ಅಲ್ಲಿ ಆಗಸದಲ್ಲಿ ನೈಟ್‌ಲೈಪ್ ತೆರೆದುಕೊಳ್ಳುವ ಹೊತ್ತಿಗೆ, ಇಲ್ಲಿ ನನ್ನ ಬಸ್ಸು ಸ್ಟಾಪು ಸ್ಟಾಪಿಗೆ ನಿಲ್ಲುತ್ತಾ ನಾನು ಇಳಿಯುವ ಸ್ಟಾಪಿನೆಡೆಗೆ ಹೊರಡುತ್ತದೆ. ಮುಂದೆ ಎಲ್ಲಿಗೆ ಹೋದರೆ ನನಗೇನು, ಆಗ ಅದು ನನ್ನ ಬಸ್ಸಾಗಿ ಉಳಿಯುವುದಿಲ್ಲ. ನನ್ನ ನಿಲ್ದಾಣ ಬರುವವರೆಗೆ ಮಾತ್ರ ನಾನು ಆತು ಕುಳಿತುಕೊಂಡಿರುತ್ತೇನೆ.
ಚಿಕ್ಕವನಿದ್ದಾಗ, ಅಜ್ಜನ ಮನೆಯಿಂದ ದೂರದ ಬಯಲಲ್ಲಿದ್ದ, ಧ್ಯಾನಿಸುತ್ತ ಒಂಟಿಗಾಲಿನಲ್ಲಿ ನಿಂತ ಹಕ್ಕಿಯಂತೆ ಕಾಣುತ್ತಿದ್ದ ಮಾವಿನ ಮರವೊಂದು, ಹೀಗೆ ಸಂಜೆಯಾಗುತ್ತ ದಟ್ಟ ನೀಲಿಯ ಹಿನ್ನೆಲೆಯಲ್ಲಿ ಗುಮ್ಮನಂತೆ ಕಾಣುವುದನ್ನು ನೋಡುತ್ತಿದ್ದೆ. ಮತ್ತೊಂದು ದಿಕ್ಕಿಗೆ ತುಂಬ ಎತ್ತರವಾದ ಇನ್ನೊಂದು ಮರ. ಸಂಜೆಯಾಗುತ್ತಿದ್ದಂತೆಯೇ ಆ ಮರದ ಹತ್ತಿರಕ್ಕೆ ನೂರಾರು ಕಾಗೆಗಳು ಹಾರಿ ಬರುತ್ತಿದ್ದವು. ಸಂಜೆಯ ತುಂಬಾ ‘ಕಾ..ಕಾ’ ಸದ್ದು ಹರಡಿಬಿಡುತ್ತಿತ್ತು. ಅದೇಕೆ ಇಷ್ಟೆಲ್ಲ ಹಕ್ಕಿಗಳು ಒಂದೇ ಮರಕ್ಕೆ ಬರುತ್ತವೆ ಎಂಬುದು ಅರ್ಥವಾಗದೇ ಆ ಮರವನ್ನೇ ನೋಡುತ್ತಾ ನಿಲ್ಲುತ್ತಿದ್ದೆ. ಆರು ಗಂಟೆಯಾಗುತ್ತಿದ್ದಂತೆಯೇ, ಗುಂಪು ಗುಂಪು ಹಕ್ಕಿಗಳಂತೆ ಜನರು ಬಸ್ಸಿನಲ್ಲಿ ಬಂದಿಳಿದು ಮುಖ್ಯ ಬಸ್ ನಿಲ್ದಾಣಗಳಲ್ಲಿ ತುಂಬಿಕೊಳ್ಳುತ್ತಾರೆ, ಇತರೆ ನಿಲ್ದಾಣಗಳಲ್ಲಿ ಕಾಯುತ್ತಿರುತ್ತಾರೆ. ಮುಂಜಾನೆ ಗೂಡು ಬಿಟ್ಟು ಹೊರಡುವ, ಸಂಜೆ ಮರಳುವ ಹಕ್ಕಿಗಳ ದಂಡಿನಂತೆ ಈ ಜನರ ಗುಂಪನ್ನು ನೋಡುತ್ತೇನೆ. ನಾನೂ ಈ ಗುಂಪಿನ ಹಕ್ಕಿಯೊಂದು ಎಂಬುದನ್ನು ನೆನಪಿಗೆ ತಂದುಕೊಳ್ಳುತ್ತೇನೆ. ಚೆಲ್ಲಿದ ಮೂರು ಕಾಳಿಗೆ ಬರುವ ನೂರು ಹಕ್ಕಿಗಳಂತೆ, ಇಳಿಯುವವರನ್ನೂ ಇಳಿಯ ಬಿಡದೇ ನುಗ್ಗುವ, ಸೀಟಿಗಾಗಿ ಚಡಪಡಿಸಿ ಜಗಳವಾಡುವವರ ಪೈಕಿ ನಾನೂ ಒಬ್ಬ. ಬಸ್ಸು ನನ್ನ ನಿಲ್ದಾಣದಲ್ಲಿ ನಿಲ್ಲುತ್ತಿದ್ದಂತೆ ಆವರೆಗೆ ಮುಚ್ಚಿಕೊಂಡಿರುವ ನನ್ನ ಲೋಕ ತೆರೆದುಕೊಳ್ಳುತ್ತದೆ. ಆವರೆಗೆ, ಅವರಿವರ ನಡುವೆ ಕಳೆದುಹೋದ ನಾನು ನನ್ನೊಡನೆ ಸಾಗುತ್ತೇನೆ, ಮರಗಳ ನಡುವಿನ ದಾರಿಯಲ್ಲಿ.
ನನ್ನ ಓದುವ ಟೇಬಲ್ಲಿನ ಮೇಲೆ, ಹಾಸಿಗೆಯ ಸುತ್ತ ಅರೆತೆರೆದು ಹಾಗೇ ಬಿದ್ದಿವೆ ಪುಸ್ತಕಗಳು. ಅರ್ಧಕ್ಕೆ ನಿಂತ ಚಲಿಸುವ ಕನಸಿನ ಚಿತ್ರಗಳು, ಬಾರಿಸಿದ ದೇವಾಲಯದ ಗಂಟೆ ಡಣ್ ಅಂದಿದೆ ಅಷ್ಟೇ, ಇನ್ನೂ ಅನುರಣನವಾಗುವ ಮೊದಲೇ ಸ್ಥಬ್ಧವಾಗಿದ್ದು ನನ್ನ ದಾರಿ ಕಾಯುವಂತೆ ಕಾಯುತ್ತಿವೆ. ಸಂಜೆಯ ತಣ್ಣೀರಿನ ಸ್ನಾನದಿಂದ ಮೈ ಬೆಚ್ಚಗೆನ್ನಿಸುತ್ತದೆ. ಉರಿಯುವ ಪುಟ್ಟ ದೀಪದ ಬೆಳಕು, ಧೂಪದ ಕಂಪು ನನ್ನನ್ನು ನನ್ನೊಳಗೇ ಸ್ಥಿರವಾಗಿಸುತ್ತದೆ. ಮೆಲ್ಲಗೆ ಹೊಸ ಯಾತ್ರೆಗೆ ಸಿದ್ಧವಾಗುತ್ತದೆ ಮನಸ್ಸು, ಕದಲುತ್ತದೆ ಕವಿತೆ:
ಯಾವ ದ್ವೇಷಕ್ಕೋ, ಯಾರ ಪ್ರೇಮಕ್ಕೋ
ಯಾವ ಹುನ್ನಾರವಿದೆಯೋ ಈ ಶಬ್ದ-ಸಾಲುಗಳಲಿ?
ಕಾಡು ತುಂಬಿ ಅರಳುತ್ತವೆ ಹೂಗಳು
ಸುರಿಯುತ್ತದೆ ಬೆಳದಿಂಗಳು,
ಬಿರಿಯುತ್ತದೆ ನೆಲ, ಚಿಗುರೇಳುತ್ತದೆ..
ಟೆರೇಸಿನ ಮೇಲೆ ಮಲಗಿ ನಕ್ಷತ್ರಲೋಕದ ಕಡೆಗೆ ಕಣ್ಣು ಹಾಯಿಸುತ್ತೇನೆ. ಮುಂಜಾನೆಯಿಂದ ಸೇರಿಕೊಳ್ಳುತ್ತ ಹೋದ ಊರ ಗದ್ದಲವೆಲ್ಲ ಆಗಸದ ಮೌನಕ್ಕೆ ದಾರಿ ಕೊಡುತ್ತದೆ, ಎದೆಯೊಳಗೆ ಹಾಲುದಾರಿ ಹರಿಯುತ್ತದೆ:
ದಿಟ್ಟಿಸಿ ನೋಡುತ್ತಿದ್ದರೆ ಸಾಕು ಆಗಸದೆಡೆ
ಕಣ್ಣ ಪರದೆ ಸರಿದು ಕಿಟಕಿ ತೆರೆಯುತ್ತದೆ
ಹೃದಯದ ದಾರಿ ತೆರೆಯುತ್ತದೆ
ಕಣ್ಣ ಮೂಲಕ ಹರಿಯುತ್ತದೆ ಬೆಳಕು,
ಆಗಸದ ಮೌನ, ಹಾಲುದಾರಿ.
ಯಾವ ಊರು, ಯಾವ ಟ್ಯೂರೂ ನೀಡದ ನೆಮ್ಮದಿಯನ್ನು ನನಗೆ ನನ್ನೊಡನಿರುವುದು ನೀಡುತ್ತದೆ. ನನಗೆ ನನ್ನೊಡನೆಯೇ ಆಡಿಕೊಳ್ಳಬೇಕಾದ ಮಾತುಗಳಿವೆ, ಗುನುಗುನಿಸಬೇಕಾದ ಸಾಲುಗಳಿವೆ, ಕಣ್ಮುಚ್ಚಿ ಸಂಭ್ರಮಿಸಬೇಕಾದ ಕನಸುಗಳಿವೆ, ಕಣ್ಣುಗಳು ನೋಡದಲ್ಲಿ, ಕಿವಿಗಳು ಕೇಳದಲ್ಲಿ.