ಇದ್ದ ಹಕ್ಕಿಗಳೆಲ್ಲ ಹಾರಿ ಹೋದವು,
ಈ ಬಯಲಿಗೆ ಬರುವ ಹೊತ್ತಿಗೆ
ನಾನು ಮತ್ತೆ ಏಕಾಂಗಿ..
ಅದು ಎಂತಹ ನಿರಾಸೆಯೆಂಬುದು ಗೊತ್ತೇ ನಿಮಗೆ?
ಮುಖ್ಯರಸ್ತೆಯಿಂದ ಬೇಲಿದಾಟಿ ಬಯಲು ಬೇಣಕ್ಕೆ ಹೆಜ್ಜೆಯಿಟ್ಟು ನಡೆಯುತ್ತಿದ್ದಂತೆಯೇ ಮೇಯುತ್ತಿದ್ದ ಹಕ್ಕಿಗಳೆಲ್ಲ ಪಕ್ಕನೇ ಹಾರಿ ದೂರ ಹೋಗಿಬಿಡುತ್ತವೆ. ಮತ್ತೆ ಬಯಲಲ್ಲಿ ಒಂಟಿತನ!
ಕೆಲವು ದಿನಗಳ ಹಿಂದೆ, ಮೆಜೆಸ್ಟಿಕ್‌ನಿಂದ ಬಸ್ಸಲ್ಲಿ ಬಂದು ಮೇಯೋಹಾಲ್ ಹತ್ತಿರ ಇಳಿಯುತ್ತಿದ್ದ ಹಾಗೆಯೇ ಉಲ್ಲಸಿತನಾದೆ. ಸುತ್ತಮುತ್ತಲ ಮರಗಳ ಮೇಲೆ ಮಾಗಿ ಹೂಗಳ ರಾಶಿ. ದೀರ್ಘವಾಗಿ ಉಸಿರೆಳೆದುಕೊಂಡೆ. ಬೆಂಗಳೂರಿನಲ್ಲಿರುವ ದಿನಗಳಲ್ಲೆಲ್ಲ ಒಂದೇ ಅಸಹನೆ, ಎಲ್ಲಿ ನೋಡಿದರೂ ಜನರ ಸಂತೆ. ಎಲ್ಲಿ ಹೋದರೂ ಏಕಾಂತವಿಲ್ಲ. ಈ ಬಯಲಿಷ್ಟು ಈ ಕ್ಷಣಕ್ಕೆ ನನ್ನದು, ಇಲ್ಲಿ ಸೂಸುವ ಹೂಕಂಪು ಈ ಕ್ಷಣಕ್ಕೆ ನನ್ನದು, ಈ ಮರಗಳ ನಡುವಿನ ಮೌನ ನನ್ನದು, ನನ್ನದೇ ಏಕಾಂತದ ಮಾತುಗಳನ್ನು ಕೇಳುವ ಈ ಪ್ರದೇಶವೆಲ್ಲ ನನ್ನದೇ ಎಂದು ಹಳ್ಳಿಯ ಊರಿನಲ್ಲಿ ಮಾತ್ರ ಅಂದುಕೊಳ್ಳಬಹುದು. ಈ ಬೆಂಗಳೂರಿನಲ್ಲಿ ಯಾವುದೂ ನನ್ನದಲ್ಲ ಎನ್ನುವ ಭಾವ. ಇಂತಹ ಮನಃಸ್ಥಿತಿಯವನು, ಒಂದು ಕ್ಷಣ ಫುಟ್‌ಪಾತ್ ಮೇಲೆ ಸರಿದು ಒಂದು ಮರದ ಬಳಿ ನಿಂತು ಆ ಅರಳಿದ ಹೂಗಳನ್ನೇ ನೋಡತೊಡಗಿದೆ. ಈ ಜನರ ಜಂಗುಳಿ ನನ್ನನ್ನು ಇಷ್ಟೆಲ್ಲ ಕಾಡುತ್ತದೆಯಲ್ಲ, ಈ ಮರಗಳಿಗೆ ಕಾಡಿಸುವುದಿಲ್ಲವೇ ಅನ್ನಿಸಿತು. ಇಂತಹ ಜನ ಸಂದಣಿಯ, ನಿತ್ಯ ವಿಷವುಗುಳುವ ವಾಹನಗಳ ನಡುವೆ ಈ ಗಿಡಗಳು ಅದು ಹೇಗೆ ತಮ್ಮ ಚೈತನ್ಯವನ್ನು ಉಳಿಸಿಕೊಳ್ಳುತ್ತವೆ,ಹೂ ರಾಶಿಗಳನ್ನು ತುಂಬಿಕೊಂಡು ನಳನಳಿಸುತ್ತವೆ?(ಬೆಂಗಳೂರಿನ ಈ ದಟ್ಟವಾದ ಟ್ರಾಫಿಕ್, ಮಾಲಿನ್ಯದ ನಡುವೆಯೂ ಮುಂಜಾನೆ ಎಷ್ಟೊಂದು ಸಮೃದ್ಧ, ಶುದ್ಧಗಾಳಿ ದೊರೆಯುತ್ತದೆಯೆಂದರೆ ನಾವೆಲ್ಲ ಈ ಗಿಡಮರಗಳಿಗೆ ಎಷ್ಟು ಕೃತಜ್ಞರಾಗಿರಬೇಕು?) ನನಗೆ ಆಗುವಂತಹ ಈ ಜನಸಂದಣಿಯ ಗಲಾಟೆ ಕುರಿತ ಕಿರಿಕಿರಿ ಈ ಮರಗಳಿಗೆಲ್ಲ ಆಗುವುದಿಲ್ಲವೇ? ಕಾಡಿನಲ್ಲಿನ ಉತ್ತಮ ಪರಿಸರವೇ ಮರಗಿಡಗಳಿಗೆ ಒಳ್ಳೆಯದಲ್ಲವೇ ಅನ್ನಿಸುತ್ತ ಇನ್ನೊಂದು ಯೋಚನೆಯೂ ಮನಸಿಗೆ ಬಂತು; ನನಗೆ ಹೇಗೆ ಬೆಂಗಳೂರೆಂದರೆ ಜನ ಸಂದಣಿಯೋ, ಹಾಗೆಯೇ ಕಾಡೆಂದರೆ ಈ ಮರಗಳಿಗೂ?
ಇನ್ನು ಮಳೆಗಾಲ ಪ್ರಾರಂಭವಾಗಿದೆ; ಮತ್ತೆ ಅದೇ ಮನೆಯ ನೆನಪು. ಎಲ್ಲ ಕಾಲಗಳೂ ಪದರ ಪದರವಾಗಿ ಎದೆಯನ್ನು ಸುತ್ತಿಹೋಗಿವೆ. ಮಳೆಯೆಂದರೆ, ಮತ್ತೆ ಊರಿನದೇ ಚಿತ್ರಗಳು ತೆರೆಯುತ್ತವೆ:
ಮಳೆನಿಂತು ಹೋದ ಮೇಲೂ ಗಗನಚುಂಬಿ ಮರಗಳಿಂದ
ಇಳಿಯತೊಡಗುತ್ತದೆ ನೀರು.
ಧರೆಯಿಂದ ಎದ್ದು ಹರಡುತ್ತದೆ ಗಂಧ.
>ಮರಗಳ ಮನದಾಳದ ಮಾತುಗಳನ್ನು ಸರಿಯಾಗಿ ಸೆರೆ ಹಿಡಿದಿರುವಿರಿ, ರಾಘವೇಂದ್ರ!
>wonderful, keep writing