ಕವನದ ಜೀವ ಛಂದ

(ಒಂದು ಹಳೆ ಕವಿತೆ)

ಶಿಲಾಬಾಲಿಕೆಯಿವಳೆಂದೇ
ಪ್ರಾಸಬದ್ಧ ಕವನ ರಚಿಸತೊಡಗುತ್ತೇನೆ
ಅವಳಂತೆಯೇ ಒಪ್ಪ, ಓರಣ, ಚಂದ- ಈ ಛಂದ ಎಂದು.

ಕಟ್ಟುಗಳಿಗೆ, ಬೇಲಿಗಳಿಗೆ ಒಗ್ಗಿ ನಿಲ್ಲುವುದಿಲ್ಲ
ಉಕ್ಕಿ, ರೆಕ್ಕೆ ಚಿಮ್ಮಿ ಆಗಸದೆಡೆ,
ಬೆರಗುಗೊಳ್ಳುವಂತೆ ನೋಡುತ್ತಿರೆ
ಹರಿಯುತ್ತದೆ ಇವಳ ಹೃದಯ

ಹಕ್ಕಿಭಾವದಲಿ ಹಾರಿ, ನೀರಭಾವದಲಿ ಹರಿದು,
ಸುಮಭಾವ ಅರಳಿ, ಹಿಮಭಾವ ಕರಗಿ,
ಘಮಭಾವ ಘಮಿಸಿ, ಶಿವಭಾವ ನಮಿಸಿ,
ಕಿವಿಯಿಲ್ಲದೆಡೆ ಸ್ವಗತ, ಕಣ್ಣಿಲ್ಲದೆಡೆ ಸ್ವಚ್ಛಂದ,
ತಾನು ತಾನಾಗಿ ಸತ್ಯದೆಡೆಗೆ ಅಡಿಯಿಡುತ್ತಾಳೆ

ಛಂದಗಳು ಬಂಧಿಸದ ಇವಳ
ಹೆಜ್ಜೆ ಸಾಲುಗಳ ಹಿಂದೆ ಕಣ್ಣರಳಿಸಿ ನಡೆಯುತ್ತೇನೆ
ಕವಿತೆ ನದಿಯಾಗುತ್ತದೆ.

ಈ ಓಟದಲ್ಲೂ ನಯವಿದೆ, ಲಯವಿದೆ,
ಚಂದವಿದೆ, ಸಂಸ್ಕೃತಿಯ ಬಂಧವಿದೆ.
ಎಷ್ಟೇ ಅಲೆದರೂ
ಈ ಕವನದ ಜೀವ ಛಂದವಿದೆ.

5 comments

  1. >ರಾಘವೇಂದ್ರ,ಇಷ್ಟೆಲ್ಲಾ ಲೆಕ್ಕಾಚಾರ ಹಾಕಿದ ನಂತರ ಕವಿತೆ ಹುಟ್ಟುತ್ತಾಳೆಯೇ??!!ತುಂಬಾ ಸೊಗಸಾಗಿದೆ ಕವಿತೆ, ಶಿಲಾಬಾಲಿಕೆಯಂತೆ…

  2. >ಹಕ್ಕಿಭಾವದಲಿ ಹಾರಿ, ನೀರಭಾವದಲಿ ಹರಿದು,ಸುಮಭಾವ ಅರಳಿ, ಹಿಮಭಾವ ಕರಗಿ,ಘಮಭಾವ ಘಮಿಸಿ, ಶಿವಭಾವ ನಮಿಸಿ,ಕಿವಿಯಿಲ್ಲದೆಡೆ ಸ್ವಗತ, ಕಣ್ಣಿಲ್ಲದೆಡೆ ಸ್ವಚ್ಛಂದ,ತಾನು ತಾನಾಗಿ ಸತ್ಯದೆಡೆಗೆ ಅಡಿಯಿಡುತ್ತಾಳೆರಾಘವೇಂದ್ರ, ನನಗೆ ತುಂಬಾ ಹಿಡಿಸಿದ ಸಾಲುಗಳಿವು…ಕವನಕ್ಕೆ COG ಕೊಟ್ಟ ಸಾಲುಗಳಿವು…COG ಅಂದ್ರೆ…ಗುರುತ್ವ ಕೇಂದ್ರ….!!

Leave a Reply

Your email address will not be published. Required fields are marked *