ಒಂದು ಮಧ್ಯಾಹ್ನ ಮುಗಿಯುವ ಹೊತ್ತು ಮನೆಯಿಂದ ನಡೆದು, ಬೇಲಿಯೊಂದನ್ನು ದಾಟಿ ಮುಂದೆ ಬೇಣದಲ್ಲಿ ನಡೆಯುತ್ತೇನೆ. ಹಕ್ಕಿಗಳು ಪುಟಪುಟನೆ ನಡೆಯುತ್ತ, ಅತ್ತಿಂದಿತ್ತ ಹಾರುತ್ತ ನಲಿಯುತ್ತಿರುತ್ತವೆ.ಮನೆಯೆಡೆಗೆ ನಡೆಯುವ ದನಗಳ ವಿರುದ್ಧ ದಿಕ್ಕಿನಲ್ಲಿ ನಡೆದು ಆ ಕೆರೆಯ ಹತ್ತಿರ ಹೋಗುತ್ತೇನೆ.ತಾವರೆಗಳ ಕಂಪು ಗಾಳಿಯಲ್ಲಿ ತೇಲಿ ಸೆಳೆಯುತ್ತದೆ. ಸುತ್ತ ಅರಳಿದ ಹಳದಿ ಹೂಗಳ ಮೇಲೆ ಸಂಜೆ ಸೂರ್ಯನ ಹೊಂಬಣ್ಣ. ನೆನಪಾಗುತ್ತಾನೆ ವರ್ಡ್ಸ್ವರ್ಥ್. ನಾವೆಲ್ಲ ಹೇಗೂ ಪ್ರಕೃತಿಯೊಂದಿಗೇ ಬದುಕುವವರು. ಪ್ರಕೃತಿಯ ಭಾಗವಾಗಿಯೇ ಬದುಕುವವರು. ಆದರೆ ನಾವು ಎಷ್ಟರವರೆಗೆ ಪ್ರಕೃತಿಗೆ ತೆರೆದುಕೊಳ್ಳುತ್ತೇವೆ, ಸ್ಪಂದಿಸುತ್ತೇವೆ? ಬದುಕುತ್ತ ಬದುಕುತ್ತ ಆ ಸ್ಪಂದನೆಯನ್ನು ಕಳೆದುಕೊಳ್ಳುತ್ತ ಹೋಗುತ್ತೇವೆ ಅಲ್ಲವೇ? ಅಂತಹ ಸ್ಪಂದನೆಯನ್ನು ಮರಳಿ ಪಡೆದುಕೊಳ್ಳುವಂತೆ ಎಚ್ಚರಿಸುವ ಕಾವ್ಯ ವರ್ಡ್ಸ್ವರ್ಥ್ನದು.
ಅವನ ಡೆಫೋಡಿಲ್ಸ್ ಕವಿತೆಯ ಸಾಲುಗಳು ನೆನಪಾಗುತ್ತವೆ:
I WANDER’D lonely as a cloud
That floats on high o’er vales and hills,
When all at once I saw a crowd,A host, of golden daffodils;
ಬೆಟ್ಟ ಕಣಿವೆಗಳ ಮೇಲೆ ಒಂಟಿ ಮೋಡದಂತೆ ನಡೆದವನು, ಒಮ್ಮೆಲೇ ನೆಲ ನೈದಿಲೆಗಳ (ಡೆಫೋಡಿಲ್) ಸಂದಣಿಯನ್ನು ಕಾಣುತ್ತಾನೆ, ಮೊದಲ ನೋಟಕ್ಕೆ ದಕ್ಕಿದ ಮೇಲೆ ಅವುಗಳು ಒಂದು ಸುಂದರವಾದ ಸಮೂಹದಂತೆ ಕಾಣತೊಡಗುತ್ತವೆ.
Fluttering and dancing in the breeze.
ಸುತ್ತಮುತ್ತಲ ಪರಿಸರದ ಅರಿವಾಗತೊಡಗುತ್ತದೆ ಅವನಿಗೆ. ಸರೋವರದ ಬಳಿ, ಮರಗಳ ಕೆಳಗೆ ತಂಗಾಳಿಗೆ ತಕ್ಕಂತೆ ರೆಕ್ಕೆ a ಹೂವುಗಳನ್ನು ನೋಡುತ್ತ ಮೈಮರೆಯುತ್ತಾನೆ.
Continuous as the stars that shine
And twinkle on the Milky Way,
They stretch’d in never-ending line
Along the margin of a bay:
Ten thousand saw I at a glance,
Tossing their heads in sprightly dance.
ಆ ನೆಲ ನೈದಿಲೆಗಳೋ ಆಗಸದಲ್ಲಿ ಹಾಲುದಾರಿಯ ಹೊಳೆವ ನಕ್ಷತ್ರಗಳಂತೆ ಒತ್ತಾಗಿ ಕಾಣಿಸುತ್ತವೆ, ಸರೋವರದ ಅಂಚಿನಲ್ಲಿ ಕೊನೆಯಿಲ್ಲದಂತೆ ಚಾಚಿಕೊಂಡಿರುವುದನ್ನು ನೋಡುತ್ತಾನೆ. ತಲೆಯಾಡಿಸುತ್ತ ಸಂಭ್ರಮಿಸುವ ಅವುಗಳಿಗೇನು ಲೆಕ್ಕವಿದೆಯೇ?
The waves beside them danced; but they
Out-did the sparkling waves in glee:A poet could not but be gay,In such a jocund company:
I gazed — and gazed — but little thought
What wealth the show to me had brought:
ಸರೋವರದ ಅಲೆಗಳೂ ನರ್ತಿಸುತ್ತವೆ, ನೈದಿಲೆಗಳ ನಾಟ್ಯಕ್ಕೆ ಹೇಗೆ ಹೋಲಿಸಲಾದೀತು ಅದನ್ನು. ಇಂತಹ ನೋಟವೊಂದರ ಸೆಳೆತಕ್ಕೆ ಸಿಕ್ಕುಹೋದ ಕವಿ ಸ್ವಚ್ಛಂದತೆಯಲ್ಲಿ ತನ್ನನ್ನೇ ಕಳೆದುಕೊಳ್ಳುತ್ತಾನೆ. ನೈದಿಲೆಗಳ ಉಲ್ಲಾಸದಲ್ಲಿ ತಾನೂ ಉಲ್ಲಾಸಭರಿತನಾಗಿ ಒಂದಾಗುತ್ತಾನೆ, ನೆಟ್ಟನೋಟದಿಂದ ನೋಡುತ್ತಲೇ ಇರುತ್ತಾನೆ, ತನ್ನ ಹೃದಯವನ್ನು ತುಂಬಿಕೊಳ್ಳುತ್ತಲೇ ಇರುತ್ತಾನೆ…
ವರ್ಡ್ಸ್ವರ್ಥ್ನ ಕಾವ್ಯದ ಮೂಲಸ್ರೋತವೇ ಪ್ರಕೃತಿಯ ಪ್ರಸಾದಕ್ಕೆ ಹೃದಯವನ್ನು ತೆರೆಯುವುದು. ಅಲ್ಲಿಯೇ ಆನಂದದ ಮೂಲವಿದೆ. ಇಷ್ಟೆಲ್ಲ ಆದ ಮೇಲೂ ವರ್ಡ್ಸ್ವರ್ಥ್ ಸಹಾ ಮನುಷ್ಯನೇ. ಹಾಗಾಗಿ ಅವನಿಗೆ ಪ್ರಾಣಿ-ಪಕ್ಷಿಗಳಂತೆ ಸಹಜವಾಗಿ ಬದುಕಲಾಗುವುದಿಲ್ಲ. ಅವನಿಗೆ ಆಕಸ್ಮಿಕವಾಗಿ ದೊರಕಿದ ಅಂತಹ ಒಂದು ಪ್ರಸಾದದ ನೆನಪು ಸಹಾ ಬೇಕು. ಯಾವ ಜೀವಿಗಳಿಗೂ ನೆನಪಿನ ಅಗತ್ಯವಿರುವುದಿಲ್ಲ, ಮನುಷ್ಯನಿಗೆ ಮಾತ್ರ ಅದು ಬೇಕೇ ಬೇಕು. ಅದಕ್ಕೆಂದೇ ಹೇಳುತ್ತಾನೆ:
For oft, when on my couch I lie
And dances with the daffodils.
‘ಚಿಂತಾಕ್ರಾಂತ’ನಾಗಿ ಹಾಸಿಗೆಯ ಮೇಲೆ ಕುಳಿತಿರುವಾಗ ನನ್ನ ಹೃದಯದ ಕಣ್ಣು ತೆರೆದು ನೆಲ ನೈದಿಲೆಗಳನ್ನು ನೆನಪಿಸಿಕೊಳ್ಳುತ್ತದೆ, ಮತ್ತೆ ನಾನು ಆನಂದತುಂದಿಲನಾಗುತ್ತೇನೆ. ಹೃದಯ ನೆಲ ನೈದಿಲೆಗಳಂತೆ ಕುಣಿಯತೊಡಗುತ್ತದೆ.