ಈ ಹಸಿರು ಬಯಲ

ಒಂದು ಗಾಢ ಮೌನ ನನ್ನನ್ನು ಆವರಿಸುತ್ತದೆ. ಈಗ ತಾನೇ ಮಳೆ ಬಂದು ನಿಂತಿದೆ, ಎದುರಿಗಿರುವ ಮರಗಳ ಹಸಿರು ಎಲೆಗಳಿಂದ ಒಂದೊಂದೇ ಹನಿ ತೊಟ್ಟಿಕ್ಕುತ್ತಿದೆ, ಮತ್ತು ಅದರ ಸದ್ದನ್ನು ಕೇಳಬೇಕು ಎಂಬ ಹಂಬಲ ಮತ್ತು ಪ್ರತೀಕ್ಷೆಯಂತೆ ಈ ಮೌನ. ತುಂಬು ತೃಪ್ತಿ, ಎಲ್ಲೋ ಒಂದು ಕಡೆ ಆತಂಕ. ಏನು ಮಾತನಾಡಬೇಕು, ಹೇಗೆ ಸುಮ್ಮನಿರಬೇಕು, ಪ್ರಶ್ನೆಗಳು ಆಗೊಮ್ಮೆ ಈಗೊಮ್ಮೆ ಗಾಳಿಯ ನೆವಕ್ಕೆ ನಿಂತ ನೀರಿನ ಮೇಲೆ ಅಲೆಯಾಗುತ್ತವೆ. ಚಿಗುರತೊಡಗಿವೆ ಬರಿದಾಗಿದ್ದ ಬಯಲಲ್ಲಿ ಹುಲ್ಲುದಳಗಳು, ಇನ್ನು ಮೇಲೆಲ್ಲ ಬಣ್ಣ ಬಣ್ಣದ ಚಿಕ್ಕ ಹೂಗಳ ಸಂಭ್ರಮ.

ಈಗ ನನಗರಿವಾಗುತ್ತಿದೆ, ಶಬ್ದಗಳ ನಿಶ್ಫಲತೆ, ಯಾವ ಪದವೂ ಈ ಮೌನವನ್ನು ತುಂಬುತ್ತಿಲ್ಲ, ಅಲ್ಲಿರುವ ಸಂಭ್ರಮವನ್ನು ತುಂಬುವ ಪಾತ್ರೆಯಾಗುತ್ತಿಲ್ಲ. ವಿಶ್ವದಲ್ಲಿ ಯಾವುದಕ್ಕೂ ಕಡಿಮೆಯಿಲ್ಲ, ಬಯಸಿದಷ್ಟು ದೊರಕುತ್ತದೆ, ಬಯಕೆ ಮಾತ್ರ ದೊಡ್ಡದಿರಲಿ ಎಂಬ ಯಾರದೋ ಮಾತು ಎಷ್ಟೆಲ್ಲ ಸರಿ… ಇನ್ನು ಬತ್ತುವುದೇ ಇಲ್ಲ ಈ ಜೋಗದ ಸಿರಿ. ಬೊಗಸೆ ತುಂಬ ಜಲಪಾತದ ಪರಿಶುದ್ಧ ಪಾದ್ಯವಿರುವಂತೆ, ಸುಮ್ಮನೇ ಪಾದಗಳ ಮೇಲೆ ಸುರಿದು ಹಿಂದೆ ಸರಿವಂತೆ..
ಈ ಹಸಿರು ಬಯಲ ತುಂಬ ಒಮ್ಮೆ ನಡೆದಾಡಲಿ…
ಯಾರು ನಿನ್ನ ಹೆಸರನ್ನು ಕೂಗುವರು, ಬೆಟ್ಟದ ಎತ್ತರದಿಂದ, ಎಲ್ಲಿಂದ ಮಳೆನಿಂತ ಮೇಲೆ ನೀರು ಜಾರುತ್ತಿರುತ್ತದೆ, ಹೇಗೆ ಪ್ರತಿಧ್ವನಿಸುತ್ತದೆ, ಅಲೆಯಂತೆ ಬೆಟ್ಟಶ್ರೇಣಿಗಳ ಗುಂಟ ಸಾಗುತ್ತ, ಒಂದಾಗುತ್ತ, ಎರೆಡಾಗುತ್ತ, ಏಳಾಗುತ್ತ… ನಿನ್ನ ಹೆಸರು ಮಾತ್ರ ಅಲ್ಲಿ ದನಿಯಾಗಿ ಮೊಳಗುವಾಗ, ಗುಡುಗು ಹೆಜ್ಜೆಯಿಟ್ಟಂತೆ ಮಾಡಿ ಹಿಂದೆ ಸರಿಯುವಾಗ, ನೀನೊಮ್ಮೆ ತಿರುಗಿ ನೋಡಿದರೆ ಸಾಕು, ಮೆಲ್ಲಗೆ ಬಿಸಿಲು ಅರಳಿ, ಮಳೆಬಿಲ್ಲು ಮೂಡುತ್ತದೆ.
ನಿನಗೇನನ್ನಾದರೂ ನೀಡಬೇಕೆಂಬ ಆಸೆ ಯಾಕೋ ದುರಾಸೆಯಾಗಿ ಕಾಣುತ್ತದೆ, ಕೈಯಲ್ಲಿದ್ದ ಹಳದಿ ಹೂಗಳು ಕೈಯಿಂದ ಜಾರಿ ಹೋಗುತ್ತವೆ… ಹರಿವ ಮಳೆ ನೀರಿನ ಕಾಲುವೆಯಲ್ಲಿ ಸೇರಿ…
ಕಳೆದುಹೋಗುತ್ತದೆ ಆತಂಕ..
ಯಾವ ಮಾತೂ ಇಲ್ಲ…

4 comments

  1. >ರಾಘವೇ೦ದ್ರ ಅವರೇ…ತು೦ಬಾ ಚೆನ್ನಾಗಿ ಬರೆದಿದ್ದೀರಿ…ಧರಿತ್ರಿ ಅವರ “ತು೦ತುರು ಮಳೆಯಲ್ಲಿ ನೆನಪುಗಳ ಮೆರವಣಿಗೆ” ಓದಿದಾಗ ಆದ ಅನುಭೂತಿ ನನಗೆ ಇಲ್ಲೂ್ ಆಯಿತು..ಓದಿ ಮುಗಿಸಿದ ಮೇಲೆ ಮನದ ತು೦ಬೆಲ್ಲಾ ಗಾಢ ಮೌನ….ಬರುತ್ತಿರುತ್ತೇನೆ…- ಸುಧೇಶ್

Leave a Reply

Your email address will not be published. Required fields are marked *