ದೇಗುಲದಲ್ಲಿ ಅಪ್ಪಿದಾಗ ಬಳುಕುತ್ತಿದ್ದೆಯಲ್ಲ,
ನಿನ್ನಲ್ಲಿ ನಾಚಿಕೆಯೂ, ಒಪ್ಪಿಗೆಯೂ
ಒಟ್ಟೊಟ್ಟಿಗೇ ತುಳುಕುತ್ತಿದ್ದವು ಅಲ್ಲವೇನೆ?
ಬಳುಕೊ ಜಲಪಾತವ ಬರಸೆಳೆದು
ಕಾಯುವಂತೆ ಹುಟ್ಟುವ ಭಾವಗಳಿಗೆ
ಎಲ್ಲಿಂದಲೋ ತುಳುಕುವ ಸಾಲುಗಳಿಗೆ
ಕಾದು ಹದವಾಗುವುದೆ ಕವಿತೆ.
ಎದೆಯ ಹೂಕಾಡು ಮಾಲೆಯಾದಂತೆ
ಕವಿತೆಯೂ, ಒಲವೂ ಅರಳುವುದು
ಹೇಳಲಾಗುವುದಷ್ಟೆ ಎದೆಯಲ್ಲಿ ಉಳಿಯುವುದು
ಹೇಳಲಾಗದ್ದು ಆಗಸಕ್ಕೆ ತೆರಳುವುದು.
ಒಲಿದ ಮೇಲೆಯೇ ಅಲ್ಲವೇನೆ
ಎಲ್ಲ ತುಳುಕುವುದು, ಬಳುಕುವುದು?