ಬಯಲಿಗೊಂದು ಬೇಲಿ

‘ರಾಘೂ..’, ಎಂದು ಕರೆಯುತ್ತ ಹೊರಬಂದೆ. ಅಂಗಳದಲ್ಲಿ ಎಲ್ಲೂ ಇಲ್ಲ ಅವನು. ಕೊಯ್ಲು ಮುಗಿದ ಗದ್ದೆಯ ಹಾಳೆಯ ಬದುವಿನ ಮೇಲೆ ಹೆಜ್ಜೆಯಿಡುತ್ತ, ಅತ್ತ ಇತ್ತ ನೋಡುತ್ತ ಮತ್ತೆ ಕರೆದೆ, ‘ರಾಘೂ..’.

ನಾನು ರಾಘವ. ಮತ್ತು ‘ರಾಘೂ’ ಅಂದರೂ ನಾನೇ. ಆದರೆ ರಾಘವನಿಗೀಗ ಇಪ್ಪತ್ತಮೂರು ವರ್ಷ ವಯಸ್ಸು ಮತ್ತು ರಾಘುಗೆ ಐದು. ಕಣ್ಣೆದುರಿಗಿನ ಗಿಡವೊಂದು ದಿನೇದಿನೇ ಬೆಳೆದು ದೊಡ್ಡ ಮರವಾದುದನ್ನು ನೋಡಿದಂತೆ, ನಾನು ನನ್ನನ್ನು ನೋಡಿಕೊಳ್ಳುತ್ತಲೇ ಬಾಲ್ಯದಿಂದ ಯವ್ವನಕ್ಕೆ ಏರಿಬಿಟ್ಟೆ. ಮೈಯೆಲ್ಲ ಮುಗ್ಧತೆ ಮತ್ತು ಅಚ್ಚರಿಯ ಹಸಿರು ತುಂಬಿದ ಸಸಿಯೊಂದು ಬಿಗಿಗೊಳ್ಳುತ್ತ, ಸಾಂಧ್ರಗೊಳ್ಳುತ್ತ ಗಟ್ಟಿ, ಒರಟು ಕಾಂಡವಾಗುತ್ತ ಬಣ್ಣ ಕಳೆದುಕೊಂಡೆ. ‘ರಾಘೂ’ ರಾಘವನಾದ ಪರಿಯನ್ನು ನಾನು ಅಚ್ಚರಿಯಿಂದ ಗಮನಿಸಿದ್ದೇನೆ. ಇದೊಂದು ಅದ್ಭುತವಾದ ಮರಳಲಾಗದಂತಹ ಪಯಣ. ಮರವಾದ ‘ರಾಘವ’ನಿಂದ ಮತ್ತೆ ಚಿಗುರಿದ ‘ರಾಘು’ ಮುಂಜಾನೆಯೇ ಎದ್ದು ಎಲ್ಲಿಗೋ ಹೋಗಿಬಿಟ್ಟಿದ್ದ. ಅಮ್ಮ ಕರೆಯುತ್ತಿದ್ದಳು, ಹಾಲನ್ನು ಬಿಸಿಮಾಡಿ ಸಕ್ಕರೆ ಸೇರಿಸಿ ಕದಡಿಟ್ಟು.

‘ಎಲ್ಲಿ ಹೋದ ನೋಡು’ ಅಂದಳು ಅಮ್ಮ. ಅವಳ ಮುಖವನ್ನೇ ತಟಸ್ಥ ಕಂಗಳಿಂದ ನೋಡಿದೆ. ಅವಳು ಏನು ಹೇಳಿದಳೋ ಅದು ಇನ್ನೂ ತಲೆಯೊಳಗೆ ಹೋಗಿರಲಿಲ್ಲ ನನಗೆ. ಮುಂಜಾನೆ ಇನ್ನೂ ಏಳುವ ಮೊದಲಷ್ಟೇ ಒಂದು ಸುಂದರವಾದ ಕನಸಿನ ಹೂವರಳಿ, ಎದ್ದ ಮೇಲೂ ನನ್ನನ್ನು ಆವರಿಸಿ ಬಂದಿತ್ತು ಅದರ ಕಂಪು. ಏನಾಗಿತ್ತು ಕನಸಿನಲ್ಲಿ ಯೋಚಿಸತೊಡಗಿದರೆ ಅದರ ಮಾಧುರ್ಯ ಎಲ್ಲಿ ಕಳೆದು ಹೋಗುತ್ತದೆಯೋ ಎಂದು ಸುಮ್ಮನೇ ಅದೇ ಲಹರಿಯಲ್ಲಿ ಇದ್ದವನಿಗೆ ಅಮ್ಮ ಮತ್ತೆ ಹೇಳಿದಳು, ‘ಹೇಳಿದ್ದು ಕೇಳಿಸಲಿಲ್ಲವೇ, ರಾಘು ಎಲ್ಲಿ ಹೋದ ನೋಡು. ಕರೆದುಕೊಂಡು ಬಾ’.

ಗದ್ದೆಯ ಅಂಚಿನ ತಾವರೆಕೆರೆಯ ಹತ್ತಿರ ಯಾರೋ ನಿಂತಂತೆ ದೂರದಿಂದಲೇ ಕಾಣಿಸಿತು. ಅದು ಅವನೇ. ‘ಅರೆ, ಅಲ್ಲಿ ಯಾಕೆ ಹೋಗಿದ್ದಾನೆ ಇವನು’ ಎಂದುಕೊಳ್ಳುತ್ತ ಸ್ವಲ್ಪ ವೇಗವಾಗಿ ಧಾವಿಸಿದೆ. ಈಗಾಗಲೇ ಬೇಸಿಗೆ ಶುರುವಾಗಿದೆ. ಕೆರೆಯ ನೀರೆಲ್ಲ ಬತ್ತಿಹೋಗುತ್ತ ಬಂದಿದೆ. ಮಧ್ಯಕ್ಕೆ ಹೋದರೆ ನನಗೆ ತೊಡೆಯವರೆಗೂ ಬರಬಹುದೇನೋ. ಜಲವಾಸಿ ಸಸ್ಯಗಳಿಂದ ಕೂಡಿದ ಕೆರೆಯ ಶುಭ್ರವಾದ ನೀರು ಅಲ್ಲಲ್ಲಿ ಕಾಣುತ್ತದೆ. ಮುಂಜಾನೆ ಸೂರ್ಯನ ಬೆಳಕು ನೀರನ್ನು ಮಣಿಯಂತೆ ಹೊಳೆಯಿಸುತ್ತಿದೆ. ಕೆರೆಯ ಏರಿಯ ಮೇಲೆ ಹೋದವನು, ‘ರಾಘೂ’ ಅಂತ ಕರೆಯಹೋಗಿ ಸುಮ್ಮನಾದೆ. ಆತ ಮೀನಖಂಡದ ಮಟ್ಟ ನೀರಿನಲ್ಲಿಳಿದು ಬಗ್ಗಿಕೊಂಡು, ಎಡಗೈಯನ್ನು ಎಡ ಮೊಣಕಾಲ ಮೇಲೆ ಊರಿಕೊಂಡು ಏನೋ ಮಾಡುತ್ತಿದ್ದ. ಕುತೂಹಲವಾಯಿತು. ಸ್ವಲ್ಪಹೊತ್ತು ಹಾಗೆಯೇ ನೋಡಿದೆ. ಮೊಣಕಾಲ ಮೇಲೆ ಊರಿದ ಕೈಯಲ್ಲಿ ಒಂದು ಗರಟೆ. ಒರಳುಕಲ್ಲಿನ ನೀರು ತೆಗೆಯಲು, ಅದರ ಜುಟ್ಟನ್ನೆಲ್ಲ ಕಿತ್ತು ಅಮ್ಮ ಮಾಡಿಟ್ಟುಕೊಂಡಿದ್ದದು. ಮೆಲ್ಲನೆ ಹೆಜ್ಜಯಿಡುತ್ತ ಹತ್ತಿರ ಹೋಗಿ ಅವನ ಹಿಂದೆ ನಿಂತೆ. ಬಲಗೈಯಲ್ಲಿ ಚಿಕ್ಕದಾದ ಒಂದು ಮರದ ಸವುಟು. ಅಜ್ಜಿಯ ಕಾಲದ್ದು. ಅದನ್ನು ನೀರಿನಲ್ಲಿ ಹಾಕಿ, ಈಜುತ್ತ, ಅಲೆಯುತ್ತ ಆಟವಾಡುತ್ತಿದ್ದ ಸಣ್ಣಸಣ್ಣ ಮೀನುಗಳನ್ನು ಹಿಡಿಯುವ ಪ್ರಯತ್ನವನ್ನು ಮಾಡುತ್ತಿದ್ದ. ಹತ್ತಾರು ಮೀನುಗಳು ಅವನ ಸುತ್ತಲೇ ಆಟವಾಡುತ್ತಿದ್ದವು. ಸೌಟಿನ ಹತ್ತಿರ ಒಂದು ಮೀನು ಬರುತ್ತಿದ್ದಂತೆಯೇ ಅದನ್ನು ಎತ್ತಿಬಿಟ್ಟ, ಅದು ಪುಳಕ್ಕನೇ ಜಾರಿ, ಬರಿಯ ಸೌಟು ಮೇಲೆ ಬಂತು. ಅದರ ನೀರು ಚಿಮ್ಮಿತು.
‘ರಾಘೂ’, ಮೆಲ್ಲಗೆ ಕರೆದೆ. ತಿರುಗಿ ನೋಡಿದವ ನಾನು ಅಲ್ಲಿಗೆ ಬಂದಿದ್ದನ್ನು ಮೊದಲೇ ತಿಳಿದವನಂತೆ ‘ಸುಮ್ಮನಿರು’ ಅಂದ. ಮತ್ತೆ ಎರೆಡು ಮೂರು ಬಾರಿ ಅದೇ ರೀತಿ ಮೀನನ್ನು ಹಿಡಿಯುವ ಪ್ರಯತ್ನ ಮಾಡಿದ. ಅದು ಫಲಕಾರಿಯಾಗದಿದ್ದಾಗ ಎರೆಡು ಹೆಜ್ಜೆ ಮುಂದೆ ನಡೆದ. ನೀರು ಮೊಳಕಾಲಿಗೆ ಬಂತು. ನಾನು ತಟ್ಟನೇ ಹೋಗಿ ಅವನ ತೋಳನ್ನು ಹಿಡಿದುಕೊಂಡೆ. ‘ಬಿಡು ನನ್ನ’ ಅಂತ ಕೈ ಹೊಡಹಿಕೊಂಡ. ಎಷ್ಟುಹೊತ್ತಿನಿಂದ ಪ್ರಯತ್ನಿಸುತ್ತಿದ್ದನೋ, ಮೀನು ಸಿಕ್ಕಿಲ್ಲವೆಂದು ಕೋಪ ಬಂದುಬಿಟ್ಟಿತ್ತು ಅವನಿಗೆ.

‘ಈ ರೀತಿ ಚಮಚ ಹಾಕಿದರೆ ಮೀನು ಸಿಗುತ್ತವೇನೋ ಮಳ್ಳು ಹುಡುಗ’ ಅಂದೆ.
‘ಸಾರಿನಲ್ಲಿರೋ ಮೀನನ್ನು ಚಮಚದಲ್ಲಿ ಹಿಡಿತೇವಲ್ಲ, ಹಾಗೇ ನೀರಿನಲ್ಲಿರೋ ಮೀನನ್ನು ಹಿಡಿಯೋಕಾಗಲ್ಲೇನು?’ ಅಂತ ಕೇಳಿದ. ನಗು ಬಂದುಬಿಟ್ಟಿತು ನನಗೆ. ಯಾವಾಗಲೋ ಅಮ್ಮನ ಜೊತೆ ಬಟ್ಟೆ ತೊಳೆಯಲು ಬಂದವನು ಇಲ್ಲಿ ಮೀನುಗಳನ್ನು ನೋಡಿದ್ದಾನೆ. ನಿನ್ನೆ ದಿನ ರಾತ್ರಿ ಮೀನು ಸಾರು ಊಟ ಮಾಡುವಾಗ ಅದೇ ಸೌಟಿನಲ್ಲಿ ಮೀನು ಎತ್ತಿಕೊಂಡಿದ್ದನ್ನು ನೋಡಿದ್ದಾನೆ. ಹಾಗೆ ಇಲ್ಲಿ ಬಂದು ಹಿಡಿಯಬಹುದು ಅನ್ನುವ ಯೋಚನೆ ಬಂದಿರಬೇಕು ಅನ್ನಿಸಿತು ನನಗೆ.
‘ಸಾರಿನಲ್ಲಿರೋ ಮೀನು ಸತ್ತು ಹೋಗಿರುತ್ತದೋ. ಇಲ್ಲಿ ನೀರಿನಲ್ಲಿರೋ ಮೀನು ಜೀವಂತ ಮೀನು’ ಅಂತ ಹೇಳಿದೆ.
‘ಹಂಗಂದರೆ?’ ಅಂತ ಕೇಳಿದ.
‘ಸಾರಿನಲ್ಲಿದ್ದ ಮೀನು ಹೀಗೆ ಈಜುತ್ತಿದ್ದವಾ?’ ಅಂತ ಕೇಳಿದೆ. ಯೋಚಿಸುತ್ತಿದ್ದವನಂತೆ ಆ ಸೌಟಿನಲ್ಲಿ ತಲೆಕೆರೆದುಕೊಳ್ಳುತ್ತ ನನ್ನ ಮುಖವನ್ನೇ ನೋಡಿದ.
‘ನಿನಗೆ ಮೀನು ಹಿಡಿಯಬೇಕು ತಾನೆ’ ಅಂತ ಕೇಳಿದೆ. ಹೌದು ಅಂತ ಆಸೆಯಿಂದ ಕಣ್ಣರಳಿಸಿದ. ‘ಸರಿ ಆಮೇಲೆ ಬರೋಣ ಬಾ’ ಅಂತ ಅವನನ್ನು ಎತ್ತಿಕೊಂಡೆ.
‘ಇಲ್ಲ ಈಗಲೇ ಹಿಡಿಯೋಣ’ ಅಂತ ಹಠ ಮಾಡತೊಡಗಿದ.
‘ಹಿಡಿಯೋದಕ್ಕೆ ಒಂದು ದೊಡ್ಡ ಬಟ್ಟೆ ಬೇಕು. ಮನೆಗೆ ಹೋಗಿ ತರೋಣ. ಅಮ್ಮ ಹಾಲು ಬಿಸಿ ಮಾಡಿಟ್ಟು ಎಷ್ಟು ಹೊತ್ತಾಯಿತು’ ಅಂತ ಅವನನ್ನು ಮನೆಗೆ ಕರೆದುಕೊಂಡು ಹೋದೆ. ದಾರಿಯಲ್ಲಿ ಮೆಲ್ಲಗೆ ‘ರಾಘವಾ’ ಅಂತ ಕರೆದ. ಏನು ಅಂತ ಅವನ ಮುಖ ನೋಡಿದೆ. ಅಮ್ಮ ಬೈತಾಳಾ ಅಂತ ಕೇಳಿದ. ಯಾಕೆ ಅಂತ ಕೇಳಿದ್ದಕ್ಕೆ ಕೈಯಲ್ಲಿದ್ದ ಗರಟೆ, ಸೌಟು ತೋರಿಸಿದ.

ರಾಘುನನ್ನು ಎತ್ತಿಕೊಂಡು ಒಳಗೆ ಕರೆದುಕೊಂಡು ಹೋದೆ. ಅಮ್ಮ ನಿರಾಳಭಾವದಿಂದ ನೋಡುತ್ತ, ‘ಎಲ್ಲಿ ಹೋಗಿದ್ದ’ ಅಂತ ಕೇಳಿದಳು. ನಾನು ಉತ್ತರಿಸಲಿಲ್ಲ. ಕೆಳಗಿಳಿಸಿದ್ದೇ ತಡ ಓಡಿಹೋಗಿ ಬಚ್ಚಿಟ್ಟುಕೊಂಡಿದ್ದ ಆ ಗರಟೆ ಮತ್ತು ಸೌಟನ್ನು ಒರಳುಕಲ್ಲಿನ ಹಿಂದೆ ಇಟ್ಟು ಬಂದ. ಒಲೆಯ ಮುಂದೆ ಕುಳಿತುಕೊಂಡು ಹಾಲಿನ ಲೋಟವನ್ನು ಎತ್ತಿಕೊಂಡ. ನಾನು ಒಂದು ಲೋಟಕ್ಕೆ ಚಹ ಸುರಿದುಕೊಂಡೆ. ಒಂದು ಗುಟುಕು ಕುಡಿದವನು ನನ್ನ ಮುಖ ನೋಡಿದ. ‘ಏನು, ತಣ್ಣಗಿದೆಯಾ’ ಅಂತ ಕೇಳಿದೆ. ‘ಸಕ್ಕರೆ ಬೇಕು’ ಅಂತ ಸಣ್ಣಗೆ ಹೇಳಿದ. ಅಮ್ಮ ಇದ್ದಾಳಾ ಅಂತ ನೋಡಿದೆ. ಹಿತ್ತಲಿಗೆ ಹೋಗಿದ್ದಿರಬೇಕು, ಬೇಗನೇ ಡಬ್ಬಿ ತೆಗೆದು ಒಂದು ಚಮಚ ಸಕ್ಕರೆಯನ್ನು ಅವನ ದೊಡ್ಡದಾದ ಲೋಟಕ್ಕೆ ಹಾಕಿದೆ. ಖುಷಿಯಿಂದ ಮುಖ ಅರಳಿಸಿಕೊಂಡು ನನ್ನನ್ನೇ ನೋಡಿದ. ‘ಸುಮ್ಮನೇ ಕುಡಿ’ ಅಂತ ಗದರಿಸಿದೆ.
ಅಮ್ಮ ಒಳಗೆ ಬಂದವಳು ಏನನ್ನೋ ಹುಡುಕುತ್ತಾ ಒರಳು ಕಲ್ಲಿನ ಹಿಂದಿದ್ದ ಸೌಟು ಮತ್ತು ಗರಟೆಯನ್ನು ನೋಡಿದಳು. ‘ತಮ್ಮಾ, ಆವಾಗಿನಿಂದ ಹುಡುಕುತ್ತಿದ್ದೇನೆ. ಇಲ್ಲಿರಲಿಲ್ಲ. ಈಗ ಹೇಗೆ ಈ ಸೌಟು, ಗರಟೆ ಇಲ್ಲಿಗೆ ಬಂತು’ ಅಂತ ಕೇಳಿದಳು. ಕೆಲವೊಮ್ಮೆ ಅಮ್ಮ ನನ್ನನ್ನು ತಮ್ಮಾ ಅಂತ ಕರಿತಾಳೆ. ರಾಘೂನನ್ನೂ. ‘ಬೆಕ್ಕು ಒಯ್ದಿತ್ತೇನೋ ತಂದಿಟ್ಟಿರಬೇಕು’ ಅಂದೆ. ರಾಘು ಹಾಲಿನ ಲೋಟದಿಂದ ಬಾಯಿ ತೆರೆದು ಕಿಸಕ್ಕನೆ ನಕ್ಕ. ಅವನ ಮೂಗಿನ ಕೆಳಗಿನ ರೋಮಗಳಿಗೆಲ್ಲ ಹಾಲು ಅಂಟಿಕೊಂಡು ಅವನು ಒಂದು ಬೆಕ್ಕಿನಂತೆಯೇ ಕಾಣುತ್ತಿದ್ದ.

‘ರಾಘವಾ, ಬಚ್ಚಲು ಮನೆಯಲ್ಲಿ ನೀರು ಕುದಿಯುತ್ತಾ ಇದೆ, ಒಂದೆರೆಡು ಕೊಡ ತಣ್ಣೀರು ತಂದು ಹಾಕು’ ಅಂದಳು ಅಮ್ಮ. ಆಯ್ತು ಅಂತ ಎದ್ದವನು ನೀನು ಬೇಗ ಸ್ನಾನ ಮಾಡೋ ಅಂದೆ. ಅದಕ್ಕೆ ಅವನು ಆಮೇಲೆ ಅಂತ ಮೈ ಸೊಟ್ಟಗೆ ಮಾಡುತ್ತ ಹಿಂಜರಿದ. ತುಟಿಯಲ್ಲೇ ‘ಮೀನು’ ಅಂತ ಅವನಿಗಷ್ಟೇ ತಿಳಿಯುವ ಹಾಗೆ ಸನ್ನೆ ಮಾಡಿದೆ. ಅವನು ಖುಷಿಯಿಂದ ಬಚ್ಚಲಿಗೆ ಓಡಿದ.
ತುಂಬಿದ ಕೊಡವೊಂದನ್ನು ಹೊತ್ತುಕೊಂಡು ಬಚ್ಚಲಿಗೆ ಬಂದೆ. ಅಮ್ಮ ಅಂಟವಾಳಕಾಯಿ ನೊರೆ ಅವನ ತಲೆಗೆ ತಿಕ್ಕುತ್ತ ಸ್ನಾನ ಮಾಡಿಸುತ್ತಿದ್ದಳು. ಬೆಳಿಗ್ಗೆ ಎಲ್ಲಿಗೆ ಹೋಗಿದ್ದೇಯೋ ಅಂತ ಕೇಳುತ್ತಿದ್ದಳು. ಅವನು ‘ಅಮ್ಮ ಕಣ್ಣುರಿ’ ಅಂತ ಚೀರಲು ಶುರು ಮಾಡಿದ. ನಾನು ನೀರನ್ನು ಹಂಡೆಗೆ ಸುರಿದು ಮತ್ತೆ ಬಾವಿಯ ಹತ್ತಿರ ಸಾಗಿದೆ.
ನಾಲ್ಕನೇ ದಾರಿ ಎಳೆಯುವ ಹೊತ್ತಿಗೆ ಬಿಳಿಯ ಟವೆಲೊಂದನ್ನು ಉಟ್ಟುಕೊಂಡು ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ ನಡೆಯುತ್ತ ಬಾವಿಯ ಹತ್ತಿರ ಬಂದ. ಕೆನ್ನೆಯಂಚಿಗೆ ನೀರಿಳಿಯುತ್ತಿತ್ತು. ಮುಖ, ಕಂಗಳೆಲ್ಲ ಹೊಳೆಯುತ್ತಿದ್ದವು. ತುಂಬ ಮುದ್ದು ಅನ್ನಿಸಿದ. ಎತ್ತಿಕೊಂಡು ಕೆನ್ನೆತುಂಬ ಮುತ್ತನ್ನಿಡುವ ಆಸೆಯಾಯಿತು. ಅವನ ಉಬ್ಬಿದ ಪುಟ್ಟ ಹೊಟ್ಟೆಯನ್ನು ನೋಡಿದೆ. ಅಲ್ಲಲ್ಲಿ ನೀರ ಬಿಂದುಗಳು ನಿಂತು ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತಿದ್ದವು. ತಲೆಯಿಂದ ನೀರು ಸಣ್ಣಗೆ ಇಳಿಯುತ್ತಿತ್ತು. ‘ತಲೆ ಸರಿಯಾಗಿ ಒರೆಸಿಕೊಳ್ಳೋ ಹೊಟ್ಟೆಡುಮ್ಮ’ ಅಂದೆ. ‘ನೀನೇ ಹೊಟ್ಟೆಡುಮ್ಮ’ ಅನ್ನುತ್ತ ತನ್ನ ಅಂಗೈಗಳಿಂದ ತಲೆಯ ಮೇಲೆ ಒತ್ತಿ ಒರೆಸುತ್ತ ನೀರನ್ನು ಹೊರಹಾಕುವ ಪ್ರಯತ್ನ ಮಾಡಿದ. ಬಾ ಒರೆಸುತ್ತೇನೆ ಎಂದು, ಬಾವಿಯ ಹಗ್ಗವನ್ನು ಕಾಲಲ್ಲಿ ಒತ್ತಿ ಹಿಡಿದು, ಅವನ ಸೊಂಟದಲ್ಲಿದ್ದ ಟವೆಲು ತೆಗೆದು ಒರೆಸಿದೆ. ಆ ಟವೆಲನ್ನು ಮತ್ತೆ ಉಟ್ಟುಕೊಳ್ಳುತ್ತ ಆತ ಬೇಲಿಯ ಅಂಚಿನ ಮಾವಿನ ಮರದ ಕಡೆಗೆ ನಡೆದ.
‘ಅಲ್ಲಿ ಹೋಗಬೇಡ, ಮರದ ಮೇಲೆ ಕಾಗೆ ಕುಳಿತಿದೆ’ ಅಂತ ಕೂಗಿ ಹೇಳಿದೆ.
‘ಶೀ’ ಅನ್ನುತ್ತ ಓಡಿಬಂದ. ಒಮ್ಮೆ ಅನುಭವವಾಗಿತ್ತು ಅವನಿಗೆ. ಆಮೇಲೆ ಮರದ ಮೇಲೆ ಕಾಗೆ ಕುಳಿತರೆ ಸಾಕು ಕಲ್ಲು ಹೊಡೆದು ಓಡಿಸುತ್ತಿದ್ದ. ಯಾವಾಗಲೋ ತರಿಸಿಟ್ಟಿದ್ದ ಜಲ್ಲಿಕಲ್ಲಿನ ಗುಡ್ಡೆ ಸುಮಾರು ಖಾಲಿಯಾಗಿ ಅಪ್ಪ ಸರಿಯಾಗಿ ಬೈಯುವವರೆಗೆ ಆ ಕಲ್ಲುಗಳನ್ನೆಲ್ಲ ಕಾಗೆಗಳ ಮೇಲೆ ಪ್ರಯೋಗ ಮಾಡಿ ಆಗಿತ್ತು. ಹತ್ತಿರ ಬಂದವನು ಬಾವಿಕಟ್ಟೆಯಿಂದ ಬಗ್ಗಿ ನೀರನ್ನು ನೋಡುವ ಪ್ರಯತ್ನ ಮಾಡಿದ.
‘ರಾಘವಾ, ಬಾವಿಯಲ್ಲೂ ಮೀನಿರ್ತಾವಾ’ ಅಂತ ಕೇಳಿದ.
‘ಇಲ್ಲ, ನಾವು ಕೆರೆಯಿಂದ ಹಿಡಿದುಕೊಂಡುಬಂದು ಬಾವಿಯಲ್ಲಿ ಬಿಡೋಣ’ ಅಂದೆ. ಸ್ವಲ್ಪ ಹೊತ್ತು ಯೋಚಿಸಿದವನು,
‘ನಾವು ಎಷ್ಟು ಮೀನು ಹಿಡಿಯೋಣ’ ಅಂತ ಕೇಳಿದ.
‘ಸಿಕ್ಕಷ್ಟು’ ಅಂದೆ.
‘ಎಲ್ಲ ಮೀನುಗಳನ್ನೂ ಹಿಡಿದುಬಿಡೋಣವೇ?’
‘ಬೇಡ, ಹಾಗೆ ಮಾಡಿದರೆ ಕೆರೆಗೆ ಬೇಸರವಾಗುತ್ತದೆ ಅಲ್ಲ? ಮುಂದಿನ ಸಾರಿ ಅದು ನಮಗೆ ಮೀನನ್ನೇ ಕೊಡುವುದಿಲ್ಲ’
‘ಮತ್ತೆ ಎಷ್ಟು ಹಿಡಿಯೋಣ?’
‘ಹತ್ತು?’ ಕೇಳಿದೆ.
ಐದು, ಆರು ಎನ್ನುತ್ತ ಬೆರಳಲ್ಲಿ ಹತ್ತರವರೆಗೆ ಏಣಿಸಿ, ‘ಹಾ, ಹತ್ತು ಹಿಡಿಯೋಣ’ ಅಂದ.
ನೀರು ತುಂಬಿಸಿ ಎರೆಡೂ ಕೊಡಗಳನ್ನು ಕೈಯಲ್ಲಿ ಹಿಡಿದುಕೊಂಡೆ.
‘ರಾಘವಾ ನೀರು ಸಾಕು. ಬೇಗ ಸ್ನಾನ ಮಾಡು’ ಅಂದ.
‘ಸರಿ ನೀನು ಹೋಗಿ ತಿಂಡಿ ತಿಂದು ಮುಗಿಸು’ ಅಂದೆ.
‘ಇಲ್ಲ, ನಾನು ನಿನ್ನ ಜೊತೆಗೇ’ ಅನ್ನುತ್ತ ಮನೆಯೊಳಗೆ ಓಡಿದ.

ಹಗ್ಗದ ಮೇಲೆ ಬಿಟ್ಟಿದ್ದ ಪಂಚೆ ತೊಳೆಯಲು ಇಟ್ಟಿದ್ದಾ ಅಂತ ಅಮ್ಮನಿಗೆ ಕೇಳಿದಾಗ ಹೌದು ಅಂದಳು. ಅದನ್ನು ಎತ್ತಿ ಮಡಿಚಿಟ್ಟುಕೊಂಡೆ. ಹಳೆಯ ಹಾರ್ಲಿಕ್ಸ್ ಬಾಟಲಿಯಲ್ಲಿದ್ದ ಸಾಸಿವೆಯನ್ನು ಮತ್ತೊಂದು ಡಬ್ಬಿಗೆ ಹಾಕಿ ಅದನ್ನು ಎತ್ತಿಕೊಂಡು ಮನೆಯ ಮುಂದೆ ಬಂದೆ. ಆಗಲೇ ಗೇಟಿನ ಹತ್ತಿರ ನಿಂತು ಕಾತರದಿಂದ ನನ್ನನ್ನೇ ಕಾಯುತ್ತಿದ್ದ ರಾಘು. ಪಂಚೆಯನ್ನು ಅವನ ಕೈಗೆ ಕೊಟ್ಟು, ಬಾಟಲಿಯಲ್ಲಿ ನೀರು ತುಂಬಿಸಿಕೊಂಡು ಬರುತ್ತೇನೆ, ಮೀನು ಹಾಕಲು ಅಂದೆ. ಕೆರೆಯಲ್ಲೇ ತುಂಬಿಸಬಹುದಲ್ಲ ಅಂತ ಹೇಳಿದ. ಛೆ, ಹೌದಲ್ಲವೇ ಅಂದುಕೊಳ್ಳುತ್ತ, ಅವನ ಕೈಹಿಡಿದುಕೊಂಡು ಬೇಲಿಯನ್ನು ದಾಟಿ ಗದ್ದೆಯ ಹಾಳೆಗೆ ಇಳಿದೆವು. ಬದುವಿನ ಮೇಲೆ ತಾನೇ ಮುಂದೆ ಹೋಗುತ್ತೇನೆ ಅಂದ.

‘ಈ ವರ್ಷ ನಾನು ದೊಡ್ಡ ಶಾಲೆಗೆ ಹೋಗುತ್ತೇನೆ. ಒಂದನೇ ಕ್ಲಾಸು’, ಅಂದ ರಾಘು, ಹೆಮ್ಮೆಯಿಂದ ಕುಣಿಯುತ್ತ ಆ ಕಿರಿದಾದ ಬದುವಿನ ಮೇಲೆ ನಡೆಯುತ್ತ. ನಾನು ಏನೂ ಪ್ರತಿಕ್ರಿಯಿಸದಿದ್ದುದನ್ನು ನೋಡಿ ಹಿಂದೆ ತಿರುಗಿದ. ನಾನು ಹುಬ್ಬು ಹಾರಿಸಿ ಮೆಚ್ಚುಗೆ ಸೂಚಿಸಿದೆ. ‘ಆದ್ರೆ ಅಲ್ಲಿ ಪ್ರಾರ್ಥನೆ ಹಾಡುತ್ತಾರಲ್ಲ, ಯಾ ಕುಂದೇಂದು ತುಷಾರ ಹಾರ ದವಳಾ.. ಅದು ನನಗೆ ಬರಲ್ಲ’ ಅಂದ. ಅಲ್ಲಿ ಹೋದ ಮೇಲೆ ಕಲಿಯಬಹುದು ಅಂದೆ. ಅವನ ಬಾಲವಾಡಿ ರಸ್ತೆಯ ಒಂದು ಪಕ್ಕದಲ್ಲಿದ್ದರೆ ಆ ‘ದೊಡ್ಡ ಶಾಲೆ’ ಮತ್ತೊಂದು ಪಕ್ಕದಲ್ಲಿತ್ತು. ಆ ಶಾಲೆಯಲ್ಲಿ ಪ್ರತಿದಿನದ ಮುಂಜಾನೆ ಪ್ರಾರ್ಥನೆಯನ್ನು ಆತ ಕೇಳುತ್ತಿದ್ದ ಅನ್ನಿಸಿತು.
‘ರಾಘವಾ, ನೀನು ಎಷ್ಟನೇ ಕ್ಲಾಸು’ ಅಂತ ಕೇಳಿದ.
‘ಹದಿನೇಳು ಮುಗಿಯಿತು’ ಅಂದೆ. ಎಂ ಎ ಅಂತಿಮ ವರ್ಷದ ಪರೀಕ್ಷೆಗಳನ್ನು ಮುಗಿಸಿ ಮನೆಗೆ ಬಂದಿದ್ದೆ. ರಾಘುಗೆ ಇವತ್ತು ಬಾಲವಾಡಿಗೆ ಹೋಗಬೇಕಿತ್ತು. ಆದರೆ ಅವನೆಲ್ಲಿ ಪ್ರತಿನಿತ್ಯ ಹೋಗುತ್ತಾನೆ.
‘ಡಾಕ್ಟರ್ ಆಗಬೇಕು ಅಂದರೆ ಎಷ್ಟನೇ ಕ್ಲಾಸಿನವರೆಗೆ ಓದಬೇಕು?’ ಅಂತ ಕೇಳಿದ.
‘ಈಗ ನಿನಗೆ ಡಾಕ್ಟರ್ ಆಗಬೇಕು ಅಂತ ಯಾರು ಹೇಳಿದ್ದು’ ಅಂದೆ.
‘ಅಮ್ಮ ಗೀತಾ ಆಂಟಿ ಹತ್ರ ಹೇಳುತ್ತಿದ್ದಳು, ನಮ್ಮ ರಾಘು ಡಾಕ್ಟರ್ ಆಗುತ್ತಾನೆ ಅಂತ.’
‘ಓಹೋ, ನಿನಗೆ ಡಾಕ್ಟರ್ ಆಗೋದಕ್ಕೆ ಆಸೆಯಿದೆಯಾ’ ಅಂತ ಕೇಳಿದೆ.
‘ಇಲ್ಲ ನಾನು ದೊಡ್ಡವನಾದ ಮೇಲೆ ಬಹಳಷ್ಟು ಮೀನು ಹಿಡಿತೇನೆ’ ಅಂದ.

ಪಂಚೆಯ ಎರೆಡು ತುದಿಗಳನ್ನು ಅವನಿಗೆ ಹಿಡಿದುಕೊಳ್ಳಲು ಹೇಳಿ ಮತ್ತೆರೆಡು ತುದಿಗಳನ್ನು ನಾನು ಹಿಡಿದುಕೊಂಡು ಕೆರೆಯ ಒಳಗೆ ಇಳಿದೆ. ನೀರಿನಲ್ಲಿ ಪಂಚೆಯನ್ನು ಮುಳುಗಲು ಬಿಟ್ಟು, ಮೀನುಗಳು ಬಂದ ತಕ್ಷಣ ಎತ್ತಬೇಕು ಅಂತ ಹೇಳಿದೆ. ನೋಡುತ್ತ ಕಾಯತೊಡಗಿದೆವು. ಇನ್ನೂ ಮೀನುಗಳು ಬರಲಿಲ್ಲ.
ರಾಘು ಕೇಳಿದ, ‘ರಾಘವಾ, ನೀನು ಹದಿನೇಳನೇ ಕ್ಲಾಸು ಓದಿದ್ದೀಯಲ್ಲ, ಏನು ಆಗ್ತೀಯ?’
ಈ ಹದಿನೇಳು ಕ್ಲಾಸುಗಳಲ್ಲಿ ಏನಾದರೂ ಆಗುವಂತಹುದನ್ನು ನಾನು ಏನಾದರೂ ಕಲಿತಿದ್ದೇನಾ ಅಂತ ಯೋಚಿಸಿದೆ.
‘ನನಗೂ ಬಹಳ ಮೀನು ಹಿಡಿಯುವುದು ಇಷ್ಟ’ ಅಂದೆ. ಅವನು ಜೋರಾಗಿ ನಕ್ಕ. ಸುಮ್ಮನಿರು ಮೀನು ಬರುತ್ತವೆ ಅಂದೆ. ಅಷ್ಟುಹೊತ್ತಿಗೆ ಒಂದಿಷ್ಟು ಮೀನುಗಳು ಗುಂಪಾಗಿ ಅತ್ತಕಡೆ ಬಂದವು. ತಕ್ಷಣ ರಾಘು ತನ್ನ ಕಡೆಯಿಂದ ಪಂಚೆ ಎತ್ತಿಬಿಟ್ಟ. ಬಂದಿದ್ದ ಎಲ್ಲ ಮೀನುಗಳೂ ತಪ್ಪಿಸಿಕೊಂಡು ಒಂದು ಮಾತ್ರ ಮಧ್ಯ ಉಳಿಯಿತು. ‘ಆಹಾ ಒಂದು ಸಿಕ್ತು’ ಅಂದ. ಅಷ್ಟುಹೊತ್ತಿಗೆ ಅದು ಫಣಫಣ ಅಂತ ಜಿಗಿಯುತ್ತಾ, ಅಂಚಿಗೆ ಬಂದು ನೀರಿಗೆ ಬಿತ್ತು. ಛೇ, ಹೋಯಿತು ಅಂತ ಬೇಸರ ಮಾಡಿಕೊಂಡ. ಅವಸರ ಮಾಡಬೇಡ ಅಂದೆ. ಹೇಗೆ ಪಂಚೆಯನ್ನು ಹಿಡಿಯಬೇಕು, ಮೀನುಗಳು ಬಂದ ತಕ್ಷಣ ಹೇಗೆ ಎತ್ತಿ ಮಡಿಚಬೇಕು ಅಂತೆಲ್ಲ ಹೇಳಿಕೊಟ್ಟೆ. ಹಾಗೆ ಮಾಡಿ ಒಂದಿಷ್ಟು ಮೀನು ಹಿಡಿದೆವು. ಪಂಚೆಯನ್ನು ತೆಗೆದುಕೊಂಡು ಹೋಗಿ ಬಯಲಲ್ಲಿ ಹರಡಿ ಜಿಗಿಯುವ ಮೀನುಗಳನ್ನು ಹಿಡಿದು ಬಾಟಲಿಗೆ ಹಾಕತೊಡಗಿದೆವು. ರಾಘು ನಾನು ಹಿಡಿಯುತ್ತೇನೆ ಅನ್ನುತ್ತ ಪಂಚೆಯಿಂದ ಹಾರಿ ಹೊರಕ್ಕೆ ಪುಟಿಯುತ್ತಿದ್ದ ಮೀನುಗಳನ್ನು ಹಿಡಿದು ಬಾಟಲಿಗೆ ಹಾಕತೊಡಗಿದ. ಹೀಗೆ ಮಾಡುತ್ತ ಹತ್ತಾರು ಮೀನುಗಳನ್ನು ಹಿಡಿದೆವು. ಸಾಕು ಹೋಗೋಣ ಅಂದಿದ್ದಕ್ಕೆ, ಎಷ್ಟಿವೆ ಅಂತ ಏಣಿಸೋಣ ಅಂದ. ಮನೆಗೆ ಹೋಗಿ ಏಣಿಸೋಣ ಅಂತ ಕರೆದುಕೊಂಡು ಮನೆಯ ಕಡೆ ಹೊರಟೆ. ಬಾಟಲಿ ತಾನೇ ಹಿಡಿದುಕೊಳ್ಳುತ್ತೇನೆ ಅಂತ ಹಠ ಮಾಡಿದ. ಬಿಸಿಲೇರಿಬಿಟ್ಟಿತ್ತು.

ಮಧ್ಯಾಹ್ನ ಊಟ ಮಾಡಿ ಮಲಗಿದವನು ಸಂಜೆ ಅರಳುವ ಹೊತ್ತಿಗೆ ಎದ್ದು ಕಣ್ಣುಜ್ಜುತ್ತ ನನ್ನ ಕೋಣೆಗೆ ಬಂದ.
‘ರಾಘವ, ನೇರಳೇಹಣ್ಣಿಗೆ ಹೋಗೋಣ ಅಂತ ಹೇಳಿದ್ದೆಯಲ್ಲ’ ಅಂದ.
ಕವಿತೆಯೊಂದನ್ನು ಓದುತ್ತಿದ್ದವನು, ಅವನ ಕಡೆಗೆ ತಿರುಗಿ ‘ಯಾವಾಗ ಕನಸಿನಲ್ಲಿಯೇ?’ ಅಂತ ಕೇಳಿದೆ.
‘ನಿನ್ನೆ ಹೇಳಿದ್ದೆಯಲ್ಲ’ ಅಂತ ಬೆನ್ನಿಗೆ ಹೊಡೆದ.
‘ಹೋಗಿ ಮುಖ ತೊಳೆದು ಹಾಲು ಕುಡಿ. ಆಮೇಲೆ ಹೋಗೋಣ. ಅಮ್ಮನಿಗೆ ಹೇಳಬೇಡ’ ಅಂದೆ.

ಏರುಪೇರಾದ ಬಯಲಿನ ಒಂದು ಅಂಚಿನಲ್ಲಿದ್ದ ತುಂಬ ಎತ್ತರದ್ದಲ್ಲದ ನೇರಳೆ ಮರ ಅದು. ಒಂದು ಗುಂಡಿಯ ಒಳಗಿಂದ ಬೆಳೆದಂತೆ ಇದೆ. ಬೇಲಿಯ ಅಂಚಿನ ತುಂಬ ಬಿದಿರಿನ ಮಟ್ಟಿಗಳು ಹರಡಿವೆ. ನೇರಳೆಯ ಮರದ ಸುತ್ತ ಒಂದಷ್ಟು ಗುಂಪುಗುಂಪು ಗಿಡಗಳು ಬೆಳೆದು ಒಂದು ರೀತಿಯಲ್ಲಿ ನಿಗೂಢವಾಗಿ ಕಾಣುತ್ತದೆ ಆ ಪ್ರದೇಶ. ನೇರಳೆ ಮರದಿಂದ ಸ್ವಲ್ಪ ದೂರದ ಜಾಗದಲ್ಲಿ ಹೆಣಗಳನ್ನು ಹೂಳುತ್ತಾರೆ ಅಥವಾ ಸುಡುತ್ತಾರೆ. ಅದಕ್ಕಾಗಿ ಅಪ್ಪ, ಅಮ್ಮ ಅಲ್ಲಿಗೆ ಹೋಗಬೇಡಿ ಅನ್ನುವುದರಿಂದಾಗಿ ಅವರಿಗೆ ಹೇಳದೇ ಬಂದದ್ದಾಯಿತು. ನೇರಳೆ ಹಣ್ಣುಗಳು ಗೊಂಚಲು ಗೊಂಚಲಾಗಿ ಬಿಟ್ಟಿವೆ. ಮುತ್ತಲ ಎಲೆಗಳ ಎರೆಡು ಕೊಟ್ಟೆಗಳನ್ನು ಮಾಡಿಕೊಂಡೆವು. ಅವುಗಳಲ್ಲಿ ಹಾಕಿಕೊಂಡು ಬಯಲಲ್ಲಿ ಅಲೆಯುತ್ತ ತಿಂದು ಮುಗಿಸಿ ಮನೆಗೆ ಹೋಗುವುದು ನಮ್ಮ ಐಡಿಯಾ ಆಗಿತ್ತು. ದೂರದಲ್ಲಿ ಬೇಲಿಯ ಹತ್ತಿರ ಹಸಿರು ಬಯಲಿನ ನಡುವೆ ಕೆಂಪು ಮಣ್ಣಿನ ಆಯತಾಕಾರದ ಗುಡ್ಡೆಯನ್ನು ಅದರ ಮೇಲಿದ್ದ ಮಾಲೆಯನ್ನು ರಾಘು ನೋಡಿದ. ಏನದು ಅಂತ ಕೇಳಿದ.
ಅದು ಭೂತಪ್ಪ. ಅದಕ್ಕೆ ಪೂಜೆ ಮಾಡಿ ಕೋಳಿ ಕೊಯ್ದಿರಬೇಕು ಅಂದೆ.
‘ಆದರೆ ನಮ್ಮ ಭೂತಪ್ಪ ಕಲ್ಲಿನ ಭೂತಪ್ಪ ಅಲ್ಲ? ದೇವಸ್ಥಾನಕ್ಕೆ ಹೋಗೋ ದಾರಿಯಲ್ಲಿ ಇದೆಯಲ್ಲ ಅದು. ಈ ಭೂತಪ್ಪನಿಗೆ ನಾವು ಯಾವತ್ತೂ ಪೂಜೆ ಮಾಡಿಲ್ಲ, ಕೋಳಿ ಕೊಯ್ದಿಲ್ಲ’ ಅಂದ.
‘ಅದು ನಮ್ಮ ಭೂತಪ್ಪ ಅಲ್ಲ, ಪಕ್ಕದ ಊರಿನದು’, ಅನ್ನುತ್ತಾ ಅವನನ್ನು ನೇರಳೆ ಮರದ ಬುಡಕ್ಕೆ ಕರೆದುಕೊಂಡು ಹೋದೆ. ಮರ ಹತ್ತಿ ಒಂದಿಷ್ಟು ಹಣ್ಣುಗಳನ್ನು ಕೊಯ್ದುಕೊಂಡೆ. ಆಮೇಲೆ ನಾವು ಆ ಸಂಜೆಯಲ್ಲಿ ರಸ್ತೆಯ ಮೇಲೆ ನಡೆಯುತ್ತಾ, ನೇರಳೇ ಹಣ್ಣುಗಳನ್ನು ತಿನ್ನುತ್ತಾ ಹರಟೆ ಹೊಡೆಯುತ್ತಾ ನಡೆದೆವು. ಅವನು ತನ್ನ ಬಾಯಿಯೇ ಹೆಚ್ಚು ಕೆಂಪಾಗಿದೆ, ನಿನ್ನದು ನೀಲಿ ಅಂತ ನನ್ನೊಡನೆ ವಾದ ಮಾಡುತ್ತ ನಡೆಯುತ್ತಿದ್ದ. ಮನೆಗೆ ಹೋದವರು ನೇರ ಬಚ್ಚಲ ಮನೆಗೆ ಹೋಗಿ, ಅಮ್ಮನಿಗೆ ಗೊತ್ತಾಗಬಾರದೆಂದು ಸರಿಯಾಗಿ ಬಾಯಿ ತೊಳೆದುಕೊಂಡು ಒಳಗೆ ಹೋದೆವು.

ರಾತ್ರಿ ಊಟ ಮಾಡಿ ನನ್ನ ಕೋಣೆಯಲ್ಲಿ ಇಬ್ಬರೂ ಸುಮ್ಮನೇ ಬಿದ್ದುಕೊಂಡಿದ್ದೆವು. ಅಪ್ಪ ಇನ್ನೂ ಪೇಟೆಗೆ ಹೋದವರು ಬಂದಿರಲಿಲ್ಲ. ಕೊನೆಯ ಬಸ್ಸಿಗೆ ಬರುವುದಿತ್ತು. ಅಮ್ಮ ಅಡಿಗೆ ಕೋಣೆಯಲ್ಲಿಯೇ ಇದ್ದಳು. ರಾಘು ಕಥೆ ಹೇಳು ಅಂತ ಶುರು ಮಾಡಿದ. ಸುಮ್ಮನೆ ಮಲಗು ಅಂತ ಗದರಿಸಿದೆ. ಇಲ್ಲ ಕತೆ ಹೇಳು ಅಂತ ನನ್ನ ಮುಖಕ್ಕೆ ತನ್ನ ಪುಟ್ಟ ಹಸ್ತವನ್ನಿಟ್ಟು ಸವರತೊಡಗಿದ. ‘ಸರಿ, ಒಂದೂರಲ್ಲಿ ರಾಘು ಮತ್ತೆ ರಾಘವ ಅಂತ ಇಬ್ಬರು ಇದ್ದರಂತೆ’ ಅಂದೆ. ‘ಹೂಂ’ ಅಂದ. ‘ಅವರಿಬ್ಬರೂ ನೇರಳೇ ಮರದ ಹತ್ತಿರ ಹೋದಾಗ ಒಂದು ಮಂಗ ನೇರಳೇ ಮರ ಹತ್ತಿ ಹಣ್ಣು ಬೀಳಿಸಿತಂತೆ’ ಅಂತ ಕತೆ ಕಟ್ಟತೊಡಗಿದೆ. ಅಮ್ಮ ಒಳಗಿನಿಂದಲೇ ‘ತಮ್ಮಾ, ನೇರಳೇ ಮರದ ಹತ್ತಿರ ಹೋಗಿದ್ದಿರಾ? ಹೋಗಬೇಡ ಅಂತ ಎಷ್ಟು ಹೇಳಿದರೂ ಕೇಳುವುದಿಲ್ಲ…’ ಅಂತ ಬೈಯಲು ಶುರು ಮಾಡಿದಳು.
‘ಇಲ್ಲ ಅಮ್ಮಾ, ಕತೆ ಹೇಳ್ತಿದ್ದೇನೆ ಅಷ್ಟೇ’ ಅಂತ ಅಸಮಾಧಾನವನ್ನು ಧನಿಯಲ್ಲಿ ತುಂಬಿ ಹೇಳಿದೆ. ಈಗ ಕತೆ ಬೇಡ ಅಂತ ರಾಘುಗೆ ಹೇಳಿದೆ. ಅವನು ಸುಮ್ಮನೆ ಮಲಗಿದ.
ಸ್ವಲ್ಪ ಹೊತ್ತಿಗೆ ಬಾಗಿಲ ಸದ್ದಾಯಿತು. ಅಪ್ಪ ಬಂದಿರಬೇಕು. ಅಮ್ಮ ಬಾಗಿಲು ತೆಗೆದಳು. ಅಪ್ಪ ಒಳಗೆ ಬಂದರು. ‘ತಮ್ಮ ಎಲ್ಲಿದ್ದಾನೆ’ ಅಂತ ಕೇಳಿದರು. ಅಪ್ಪ ಸಹ ಕೆಲವೊಮ್ಮೆ ತಮ್ಮ ಅಂತ ಕರೆಯುತ್ತಾರೆ ನನ್ನನ್ನು.
‘ಊಟ ಮಾಡಿ ಆಯಿತು ಮಲಗಿದ್ದಾನೆ’ ಅಂದಳು ಅಮ್ಮ.
‘ಎಂಎ ಮುಗಿಯಿತಲ್ಲ ಮುಂದೆ ಏನು ಮಾಡುತ್ತಾನಂತೆ’ ಅಂತ ಕೇಳಿದರು ಅಪ್ಪ.
‘ಈಗ ತಾನೆ ಓದು ಮುಗಿಸಿ ರಜೆಗೆ ಬಂದಿದ್ದಾನೆ. ಒಂದಿಷ್ಟು ದಿನ ಮನೆಯಲ್ಲಿರಲಿ. ಆಮೇಲೆ ಏನಾದರೂ ಕೆಲಸ ನೋಡಿಕೊಳ್ಳುತ್ತಾನೆ’ ಅಂದಳು ಅಮ್ಮ.
‘ಎಂಎ ಮಾಡಿದವರಿಗೆಲ್ಲ ಏನು ಕೆಲಸ ಸಿಗುತ್ತದೋ’ ಅಂದುಕೊಳ್ಳುತ್ತ ಒಳಗೆ ಹೋದರು ಅಪ್ಪ.
ಇಷ್ಟು ದಿನ ಬದುಕು ಒಂದು ಆಹ್ಲಾದಕತೆಯಾಗಿತ್ತು. ಇನ್ನುಮುಂದೆ ಅದೊಂದು ಅನಿವಾರ್ಯತೆಯಾಗಲಿದೆ ಅನ್ನಿಸಿ ಸಂಕಟವಾಯಿತು. ಪಕ್ಕಕ್ಕೆ ತಿರುಗಿದೆ, ರಾಘು ಅಲ್ಲಿ ಇರಲಿಲ್ಲ.

6 comments

  1. >ಬಹಳ ದಿನಗಳ ಮೇಲೆ ಇಂತಹ ಒಂದು introspectiveಕತೆಯನ್ನು ಓದಿದೆ. ಭಾವಪೂರ್ಣವಾದ ಕಥನ ಶೈಲಿ. ಅಭಿನಂದನೆಗಳು.

  2. >ರಾಘು, ತುಂಬಾ ಆಪ್ತವಾದಂತಹ ಬರಹ. ಇನ್ನೂ ಎನೋ ಇದೆ ಅನ್ನಿಸುತ್ತಲೇ ದುತ್ತನೆ ಎದುರಾಗುವ ವಾಸ್ತವವದ ಅರಿವು ತಿಳಿಸುವ ಕೊನೆಯ ಸಾಲು,ಮಳೆಯ ಎದುರು ನೋಡುತ್ತಿದ್ದವನ ಮೇಲೆರಗಿದ ಸಿಡಿಲಂತೆ ಇದೆ. ಸೂಪರ್… ತುಂಬಾ ಚೆನ್ನಾಗಿದೆ ಕಥೆ. ಕಥೆಗಳಲ್ಲೂ ಕೂಡಾ ಕಾವ್ಯತ್ವದ ಗುಣ ತುಂಬಿದ್ದಿಯಾ. ಖುಷಿಯಾಯ್ತು….

  3. >ದಿನೇಶ್,‘ರಾಘು’ ಅಂತ ಕರೆದರೆ ಅದು ಪಾತ್ರದೊಡನೆ ಮಾತನಾಡಿದಂತೆ…Call me ರಾಘವೇಂದ್ರ here!! ಈ ಕತೆ ಬರೆದ ಹಿಂದಿನ ದಿನ ಬಸ್ಸಿನಲ್ಲಿ ಯೋಚಿಸುತ್ತ ಬರುತ್ತಿದ್ದೆ, ನನ್ನ ಬಾಲ್ಯ ಇನ್ನೂ ನನ್ನಲ್ಲಿ ಹಾಗೇ ಇದೆಯಲ್ಲಾ ಎಂದು. ಹಾಗೆಯೇ ಕತೆ ರೂಪುಗೊಂಡಿತು.ಈ ಎರೆಡು ಕತೆಗಳಿಗೆ ಸಿಕ್ಕ ಪ್ರತಿಕ್ರಿಯೆಗಳಿಂದ ನಾನೂ ಕತೆ ಬರೆಯಬಲ್ಲೆ ಅನ್ನುವ ಧೈರ್ಯ ಬಂದಿದೆ..ಖುಷಿ…

  4. >ನಿನ್ನ ಬಾಲ್ಯ ನಿನ್ನಲ್ಲಿ ಇದೇ ಅಂತಲೇ ನಾನು ನಿನ್ನ ಹಾಗೆ ಕರೆಯುವುದು…

Leave a Reply to sunaath Cancel reply

Your email address will not be published. Required fields are marked *