ರಂಗ ಪ್ರವೇಶಕ್ಕೆ ಕಾಯಬೇಕು..

ರಂಗಕ್ಕೀಗ ಕೌರವನ ಪ್ರವೇಶದೊಡ್ಡೋಲಗ
ಎಲ್ಲರೂ ಮೆಚ್ಚುವ ಪ್ರವೇಶಕ್ಕೆ ಭಾಗವತಿಕೆ ಆರಂಭ.
ಹಾಡಲಾರಂಭಿಸಿದ್ದಾರೆ ಭಾಗವತರು, ಚಂಡೆ-ಮದ್ದಳೆಯೊಡಗೂಡಿ.
ಆತ ವೀರ, ತನ್ನಲ್ಲೇ ಸ್ಥಿರ.
ಅರ್ಜುನನೋ ಚರ, ಜೊತೆಗಿರಬೇಕು ಕೃಷ್ಣ.
ಸ್ವಾದಿಸ್ಠಾನಸ್ಥ ಸುಯೋಧನ ಒಬ್ಬನಲ್ಲ
ಮತ್ತೆ ಮತ್ತೆ ಜನಿಸುತ್ತಲೇ ಇರುತ್ತಾರೆ.
ಗೀತಾಕಾರಂಜಿಯೇ ಮನುಕುಲಕ್ಕನುಪಮ, ಅನನ್ಯ.
ಅರ್ಜುನಸಹಸ್ರರೂ ಇದ್ದಾರೆ, ಬೇಕಿದೆ ಗೋವಿಂದಬೋಧೆ.
*
ಇದೋ ನೋಡು,
ಗುರುಕೃಪಾವೃಷ್ಠಿಗೆ ಕುಡಿಯೊಡೆದಿದೆ
ಹೊರಚಿಗುರಿದೆ ನೋಡು ಪ್ರಶ್ನೆಗಳ ವಿಷಾದಯೋಗ.
ಬೇಲಿಕಟ್ಟಿ ಆರೈಕೆ ಮಾಡಲು ಬೇಕು ವನಮಾಲಿ.
ಧನವರ್ಷ ಹರ್ಷತರುವುದಿಲ್ಲ, ಕೀರ್ತಿಕೋಟೆಯೂ ಬಂಧಿಸುತ್ತದೆ.
ಹಣವಂತರು, ಧನದಾಹಿಗಳು, ಹಸಿವಿನಿಂದ ಕಂಗೆಟ್ಟವರು
ಸುತ್ತಮುತ್ತ; ಯುದ್ಧ ಮಾಡಲೇ ಬೇಕೇ ಮಾಧವ?
*
ಬೇರೆ ದಾರಿಯೆಲ್ಲಿದೆ; ಪರಧರ್ಮೋ ಭಯಾವಹಃ!
ನಿದ್ದೆಯಲ್ಲವರು ಮಾತನಾಡುತ್ತಾರೆ, ಹೊಡೆದಾಡುತ್ತಾರೆ,
ಹಸಿವಿನಿಂದ ಅರಭಡಿಸುತ್ತಾರೆ.
ನೀನಾದರೂ ಎದ್ದೇಳು, ಹೋಗು ಹರಿಯುತ್ತಿದ್ದಾಳಲ್ಲಿ
ಸ್ವಧರ್ಮಗಂಗೆ ಶಾಂತಳಾಗಿ, ಪವಿತ್ರಳಾಗಿ.
ಧುಮುಕು ಪ್ರವಾಹಪ್ರಪಾತಕ್ಕೆ, ಆಳಕ್ಕಿಳಿದು ಹೋಗು
ಅಲ್ಲಿದ್ದಾನೆ ಅಮೃತರೂಪಿ ಆತ್ಮಲಿಂಗ-ಪರಮೇಶ್ವರ.
*
ಶತ್ರುಸಮ್ಮುಖದಲ್ಲಿ ಇದೆಂತಹ ತ್ರಿಶಂಕುಸ್ಥಿತಿ ನಿನ್ನದು?
ಈಗತಾನೇ ಸುಯೋಧನನೊಳಗಿಂದ ಎದ್ದುಬಂದೆ
ಅಚ್ಯುತ, ನಿನ್ನೊಳಗೆ ನನ್ನ ಸ್ವೀಕರಿಸು.
*
ಹೃದಯದೌರ್ಬಲ್ಯಪೊರೆ ಕಳಚಿತು, ತತ್ಕಾಲಕ್ಕೊದಗಿತು
ಗೀತೌಷಧ. ಯುದ್ಧ ಮುಗಿದ ಮೇಲೆ
ಮತ್ತೆ ಮರಳಿದ ಪರಂತಪ ಕೃಷ್ಣಸನ್ನಿಧಿಯಿಂದ ಕೌರವಸ್ಥಿತಿಗೆ.
*
ನನಗೀ ಉಪಶಮನ ಬೇಡ; ಅಮೃತವನ್ನೇ ನೀಡು.
ರತಿ ಉಪರತಿಯರ ನಡುವೆ ಮಲಗಬೇಕು
ವ್ಯಕ್ತಮಧ್ಯದಲ್ಲಿಯೇ ಸಾಧ್ಯವಾಗಬೇಕು ಮಿಲನ.
ಕಾಲವಿನ್ನೂ ಮೀರಿಲ್ಲ, ಎದ್ದೇಳು ಮುಮುಕ್ಷು.
*
ಗಾನಲೀನ ಭಾಗವತರ ಹೃದಯದ ತುಂಬ
ಕೃಷ್ಣನಾಗಮನದ ಹಂಬಲ
(ಅಂತ)ರಂಗದ ತುಂಬ ಕೌರವನ ಅಟ್ಟಹಾಸ;
ಅದು ಇದ್ದೇ ಇರುತ್ತದೆ.
ಅವರಿಗೆ ಅವನೊಡನೆ ಹೋರಾಡಲಾಗುವುದಿಲ್ಲ.
ಅವನ ಆಸೆಗಳಿಗೆ, ಕಾಮ-ಕ್ರೋಧಗಳಿಗೆ ತಾಳ ಹಾಕಲೇ ಬೇಕು.
ಹೃದಯದಲ್ಲಿ ಮಾತ್ರ ಮಧುಹರನ ಪಾದಪದ್ಮದೊಡನೆ ಮಧುಕರವೃತ್ತಿ.
ಯದುನಂದನನ ಹೃದಯರಂಗ ಪ್ರವೇಶಕ್ಕೆ ಕಾಯಬೇಕು;
ಅಲ್ಲಿಯವರೆಗೂ ಬೇಯಬೇಕು.

1 comment

Leave a Reply

Your email address will not be published. Required fields are marked *