ಆತ್ಮದ ಗೆಳತಿ ಎನ್ನಲೇ ನಿನ್ನ?
ಒಂದು ಮಾತಿಲ್ಲ, ಒಂದು ನೋಟವಿಲ್ಲ
ನನ್ನಷ್ಟಕ್ಕೇ ನಾನೇ ಮಾತನಾಡಿಕೊಳ್ಳುತ್ತೇನೆ
ನಿನ್ನ ಮಾತುಗಳನ್ನೂ!
ನಿನ್ನ ಹೆಸರು ನನ್ನ ಹೃದಯದ ಕಣಿವೆ ತುಂಬ
ಮಾರ್ದನಿಗೊಳ್ಳುತ್ತ ಪುಲಕ ತರುತ್ತದೆ.
ಮಾತಾಗದ ಭಾವಗಳೆಲ್ಲ ಪಲ್ಲವಿಸುತ್ತವೆ
ನಿನ್ನ ಕಂಗಳ ರೆಪ್ಪೆಗಳೊಮ್ಮೆ ಕದಲಿದರೂ ಸಾಕು
ಉಕ್ಕೇರುತ್ತದೆ ಶರಧಿ ಚಂದ್ರನೆಡೆಗೆ.
ನನ್ನ ಆತ್ಮದ ಸಖ್ಯಕ್ಕೆ ನಿನ್ನ ನಾಮ ಮತ್ತು ಭಾವರೂಪ
ನನ್ನ ಯಾತನೆಗೆ, ಸಂಭ್ರಮಕ್ಕೆ ನಿನ್ನದೇ ನೆನಪುಗಳ ಮಾಲೆ.
ನಿನಗೆ ಮಾತ್ರ ಯಾವ ಭಾವವೂ ತಲುಪುವುದಿಲ್ಲವೇ?
ದೂರದಲ್ಲೊಂದು ತಾರೆ ಮಿನುಗುತ್ತಲೇ ಇರುತ್ತದೆ;
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು, ನಿನ್ನ ದಾರಿಯಲ್ಲಿ
ನೀನು ನಡೆಯುತ್ತಲೇ ಇರುತ್ತೀಯ…..!