ಒಬ್ಬ ಲೇಖಕನ ಪುಸ್ತಕಗಳನ್ನು ಓದುತ್ತ ನಮಗೆ ಅವನ ಮನಸ್ಥಿತಿಯನ್ನು, ಆಲೋಚನೆಗಳನ್ನು, ಬದುಕಿನ ಕುರಿತಾದ ಧೋರಣೆಗಳನ್ನೆಲ್ಲ ತಿಳಿಯಬೇಕು ಅನ್ನುವ ಆಸಕ್ತಿ ಮೂಡುತ್ತದೆ. ಅವನ ಸಂಕಟ, ಅವನ ನಲಿವು ಮತ್ತು ಅವನ ಹಠ ಹೀಗೆ ಅವನ ಭಾವನೆಗಳು ನಮ್ಮಲ್ಲಿ ಆಗಾಗ ಮಿಂಚಿನ ಬೆಳಕು ಮೂಡಿಸುತ್ತ ಆಶಾಭಾವವನ್ನು ತುಂಬುತ್ತವೆ, ನಮ್ಮವೇ ಆಗುತ್ತವೆ. ಆತನ ಕುರಿತು ಒಂದು ಸಹಾನುಭೂತಿ ನಮ್ಮಲ್ಲಿ ಮೂಡುತ್ತದೆ. (ಸಹಾನುಭೂತಿ ಅಂದರೆ ಅನುಕಂಪ, ದಯೆ (ಮೇಲಿನವನು ಕೆಳಗಿನವನ ಮೇಲೆ ತೋರುವ ಭಾವ ಅಲ್ಲವೇ ಇವು?) ಅಂತ ಶಬ್ದಕೋಶದಲ್ಲಿದೆ. ಆದರೆ ನಾನು ಅವನೆತ್ತರಕ್ಕೆ ಏರುವ ಪ್ರಯತ್ನ, ಅವನ ಭಾವವನ್ನು ಅರಿಯುವ ಯತ್ನ ಅನ್ನುವ ಅರ್ಥದಲ್ಲಿ ಬಳಸುತ್ತಿದ್ದೇನೆ.) ಹಾಗೆ ಸಹಾನುಭೂತಿ ಮೂಡಿದಾಗಲೇ ಒಬ್ಬ ಲೇಖಕನನ್ನು ಓದಬೇಕು ಅನ್ನಿಸುತ್ತದೆ.
ಕೆಲವು ದಿನಗಳ ಹಿಂದೆ ಪರಿಚಯದವರೊಬ್ಬರು ಭಾರತೀಯ ಆಂಗ್ಲ ಲೇಖಕ ರಸ್ಕಿನ್ ಬಾಂಡ್ ಅವರ ಕವಿತೆಗಳನ್ನು ನನಗೆ ಕಳಿಸುವ ಮೂಲಕ ರಸ್ಕಿನ್ ರನ್ನು ಓದಲು ಪ್ರೇರೇಪಿಸಿದರು. ಓದಲು ಪ್ರಾರಂಭಿಸುತ್ತ, ನನ್ನಲ್ಲಿ ನನ್ನ ಬರವಣಿಗೆಗಳ ಕುರಿತಂತೆಯೂ ಒಂದು ಹೊಸ ಆಯಾಮ ತೆರೆಯಿತು ಅಂತ ಹೇಳಲು ಬಯಸುತ್ತೇನೆ. ರಸ್ಕಿನ್‌ರನ್ನು ನಾವು ರಸಿಕ (ಮಲೆಯಾಳಿಗಳು ರಸಿಕನ್) ಅಂತ ಕರೆಯಬಹುದೇನೋ. ಯಾಕೆಂದರೆ ನೋಡಿ, ಇಂಡಿಯಾ ಟುಡೆ ಹೇಳುತ್ತದೆ “ಬಾಂಡ್‌ರ ವಾಕ್ಯಗಳು ಇಬ್ಬನಿಯಿಂದ ಮತ್ತು ಬೆಟ್ಟದ ಗಾಳಿಯಿಂದ ನೆನೆದಿರುತ್ತವೆ, ಆಕರ್ಷಕತೆಯಿಂದ, ಗತಿಸಿದ ದಿನಗಳ ಹಂಬಲದಿಂದ, ಮತ್ತು ತೆಳುಹಾಸ್ಯದಿಂದ ಕೂಡಿರುತ್ತವೆ…. ಆತ ಪ್ರಸ್ತುತ ನಮ್ಮ ಗದ್ಯದ ವರ್ಡ್ಸ್‌ವರ್ಥ್.”
ರಸ್ಕಿನ್‌ರ ಅನೇಕ ಕಥೆ, ಲೇಖನ ಮತ್ತು ಕವಿತೆಗಳನ್ನೊಳಗೊಂಡ The Best of Ruskin Bond ಪುಸ್ತಕವನ್ನು ಓದಲಾರಂಭಿಸಿದ್ದೇನೆ. (ಪುಸ್ತಕಗಳ ಬೆಲೆ ಗಗನಕ್ಕೇರಿದೆ ಅನ್ನಿಸುತ್ತದೆ. ಮೊನ್ನೆ ಒಬ್ಬ ಪ್ರಕಾಶಕರು ಹೇಳುತಿದ್ದರು: ಈಗ ಅತಿ ಅವಶ್ಯಕ, ಪರೀಕ್ಷೆಗೆ ಬೇಕು ಅನ್ನುವ ಪುಸ್ತಕ ಮಾತ್ರ ಹೆಚ್ಚು ಮಾರಾಟವಾಗುತ್ತಿದೆ, ಉಳಿದವನ್ನು ಕೇಳುವವರು ಕಡಿಮೆ!) ಈ ಪುಸ್ತಕದಲ್ಲಿನ ಮುನ್ನುಡಿ ಓದುತ್ತ, ಅದರ ಕುರಿತು ಬರೆಯಬೇಕು ಅಂದುಕೊಂಡೆ:
“ಎಲ್ಲ ಯುದ್ದಗಳು ಮುಗಿದುಹೋದ ಮೇಲೂ, ಪತಂಗವೊಂದು ಸುಂದರವಾಗಿಯೇ ಉಳಿದಿರುತ್ತದೆ.”
“ಮತ್ತೆ ನಾನಿಲ್ಲಿಗೆ ಮರಳಿದ್ದೇನೆ, ನನ್ನ ಪುಟ್ಟ ಕೊಠಡಿಗೆ, ತೆಹ್ರಿ ಕಡೆಗೆ ಹೋಗುವ ಸೊಟ್ಟಪಟ್ಟ ರೋಡನ್ನು ಗಮನಿಸುತ್ತ, ಮತ್ತೊಂದು ಮುನ್ನುಡಿಯನ್ನು ಬರೆಯುತ್ತಿದ್ದೇನೆ. ಈವರೆಗೆ ಯಾರೂ ನನ್ನ ಯಾವುದೇ ಪುಸ್ತಕಗಳಿಗೆ ಮುನ್ನುಡಿಯನ್ನು ಬರೆಯಲು ಮುಂದೆ ಬಂದಿಲ್ಲ, ಅನಿವಾರ್ಯತೆಯಿಂದಾಗಿ ನಾನೇ ಈಗ ಮುನ್ನುಡಿ ಬರೆಯಬೇಕಾಗಿದೆ. ೧೯೫೦ ರ ದಶಕದಲ್ಲಿ ನನ್ನ ಮೊದಲ ಕಾದಂಬರಿಯನ್ನು ಬರೆದಾಗ, ಅಪರಿಚಿತ ಲೇಖಕರು ತಮ್ಮ ಪುಸ್ತಕಗಳಿಗೆ ತಮ್ಮ ಕಾಲದ ಪ್ರಸಿದ್ಧ ಲೇಖಕರಿಂದ ಮುನ್ನುಡಿ ಬರೆಸಿಕೊಳ್ಳಲು ತಿರುಗುತ್ತಿದ್ದರು. ಗ್ರಹಾಂ ಗ್ರೀನ್, ಜಾರ್ಜ್ ಆರ್ವೆಲ್, ಇ ಎಂ ಫಾಸ್ಟರ್ ಮತ್ತು ವಿ ಎಸ್ ಪ್ರಿಚೆಟ್‌ರಂತಹ ಎತ್ತರದ ಲೇಖಕರು ಇಂತಹ ಮುನ್ನುಡಿಗಳನ್ನು ಬರೆದುಕೊಡಲು ಸಿದ್ಧರಾಗಿಯೇ ಇರುತ್ತಿದ್ದರು. ಆದರೆ ಅಂತಹ ಲೇಖಕರನ್ನು ಭೇಟಿ ಮಾಡುವುದರಿಂದ ನನ್ನ ಸಂಕೋಚವೇ ತಡೆಯಿತು. ಜೊತೆಗೆ, ನಾನು ಯಾರದೇ ಸಹಾಯವಿಲ್ಲದೇ ನಾನೇ ಎದ್ದು ನಿಲ್ಲಬಲ್ಲೆ ಅಂದುಕೊಂಡಿದ್ದೆ. ಹಾಗೆಯೇ ನಾನು ಕೆಳಗೆ ಬಿದ್ದಾಗಲೆಲ್ಲಾ, ಲೇಖಕನಾಗಿ ಮತ್ತು ಒಬ್ಬ ವ್ಯಕ್ತಿಯಾಗಿ, ನಾನೇ ಏಕಾಂಗಿಯಾಗಿ ಎದ್ದು ನಿಲ್ಲಲು ಸಾಧ್ಯವಾಗಿದೆ. ನಾನು ಯಾರನ್ನೂ ಲೆಕ್ಕಿಸುವುದಿಲ್ಲ, ಯಾರನ್ನೂ ಅಂದರೆ ಮುನ್ನುಡಿಕಾರರು, ತಾರೆಗಳು ಮತ್ತು ಸಾಹಿತ್ಯ ವಿಮರ್ಶೆಯ ಸರಕನ್ನು ಒದಗಿಸುವವರನ್ನು! ಆದರೆ ನನ್ನನ್ನು ಅನೇಕರು ಲೆಕ್ಕಿಸಿದ್ದಾರೆ, ಗುರುತಿಸಿದ್ದಾರೆ. ಈ ಎಲ್ಲ ಬರಹಗಳು ಅವರ ಪ್ರೇಮದ ಪ್ರತೀಕವೇ ಆಗಿದೆ…”
“…ನನ್ನ ಶೈಲಿ ಏಕೆ ತುಂಬ ಸರಳ ಎಂದು ಜನರು ನನ್ನನ್ನು ಆಗಾಗ ಕೇಳುತ್ತಾರೆ. ಹೌದು, ನಿಜವಾಗಿ ಅದರಲ್ಲಿ ವಂಚಿಸುವಂತಹ ಸರಳತೆಯಿದೆ, ಯಾಕೆಂದರೆ ಅಲ್ಲಿ ಯಾವುದೇ ಎರೆಡು ವಾಕ್ಯಗಳು ಒಂದೇ ರೀತಿ ಇಲ್ಲ. ನಾನು ಸ್ಪಷ್ಟತೆಯನ್ನು ಪಡೆಯಲು ಪ್ರಯತ್ನಿಸುತ್ತಿದ್ದೇನೆ, ಸರಳತೆಯನ್ನಲ್ಲ. ಗೆಳೆಯನೊಬ್ಬ ಹೇಳಿದ, ‘ಆದರೆ, ನೀನು ಮಾತನಾಡುವಾಗ ತುಂಬಾ ಜಟಿಲತೆಯಿರುತ್ತದೆ’. ನನ್ನ ಶೈಲಿಯನ್ನು ಸರಳಗೊಳಿಸಲು ಮತ್ತು ನನ್ನ ಆಲೋಚನೆಗಳನ್ನು ಸ್ಪಷ್ಟಗೊಳಿಸಿಕೊಳ್ಳಲು ನನಗೆ ನಲವತ್ತು ವರ್ಷ ಹಿಡಿಯಿತು ಎಂದು ಅವನಿಗೆ ವಿವರಿಸಬೇಕಾಯಿತು. ಸಾಹಿತ್ಯವು ಜಟಿಲವಾಗಿರಬೇಕೆಂದು ‘ಬಯಸುವ’ ಅನೇಕ ಲೇಖಕರಿದ್ದಾರೆ. ಮತ್ತು ಕೆಲವರು ತಮ್ಮ ಓದುಗರು ಕಷ್ಟಪಡಬೇಕೆಂದು, ಬೆವರು ಹರಿಸಬೇಕೆಂದು ಬಯಸುತ್ತಾರೆ ಕೂಡಾ. ಆ ಮೂಲಕ ತಮ್ಮನ್ನು ಓದುಗರು ಗಂಭೀರವಾಗಿ ತೆಗೆದುಕೊಳ್ಳಲಿ ಎಂದು ಬಯಸುತ್ತಾರೆ. ನಾನು ಸುಲಭವಾದ ಮತ್ತು ಸಂಭಾಷಣೆಯ ಶೈಲಿಯ ಗದ್ಯವನ್ನು ನನ್ನದಾಗಿಸಿಕೊಳ್ಳಲು ಯಾವಾಗಲೂ ಪ್ರಯತ್ನಿಸಿದ್ದೇನೆ. ಮತ್ತು ಇದನ್ನು ಸರಳ ಎನ್ನುವವರು ತಾವೇ ಬರೆಯಲು ಪ್ರಯತ್ನಿಸಿ ನೋಡಲಿ…”
“…ಕಾಡು ಶುಂಟಿ ಹೂಬಿಡುತ್ತಿದೆ. ಅಗ್ರಿಮೊನಿ, ಲೇಡೀಸ್ ಲೇಸ್, ಕಾಡು ಜಿರೇನಿಯಮ್ ಸಹಾ. ಜರೀಗಿಡ ಹಳದಿ ತಿರುಗುತ್ತಿವೆ.ಸ್ನೇಕ್ ಲಿಲಿಯ ಹಣ್ಣು ಕೆಂಪಗಾಗುತ್ತಿದೆ, ಆ ಮೂಲಕ ಮಳೆಗಾಲ ಮುಗಿಯಿತೆಂದು ಸೂಚಿಸುತ್ತಿದೆ. ಹಾಡು ಹಕ್ಕಿಯೊಂದು ಒಣಗಿದ ಅಕ್ರೋಟದ ಮರದ ಮೇಲೆ ಕುಳಿತು ಆನಂದದಿಂದ ಹಾಡಿಕೊಳ್ಳುತ್ತಿದೆ.ಹೌದು, ಎಲ್ಲ ಯುದ್ದಗಳು ಮುಗಿದುಹೋದ ಮೇಲೂ, ಪತಂಗವೊಂದು ಸುಂದರವಾಗಿಯೇ ಉಳಿದಿರುತ್ತದೆ.”
>ಬರಹ ಮನಮುಟ್ಟಿತು. ನನ್ನ ಹುಟ್ಟುಹಬ್ಬಕ್ಕೆ ನನ್ ಅಣ್ಣ ರಸ್ಕಿನ್ ಬಾಂಡ್ ನ ಪುಟ್ಟ ಪುಸ್ತಕವೊಂದನ್ನು ಉಡುಗೊರೆ ನೀಡಿದ್ದರು. ನಂಗೂ ಅನಿಸಿದ್ದು ಇಷ್ಟೇ: ಹೌದು, ಎಲ್ಲ ಯುದ್ದಗಳು ಮುಗಿದುಹೋದ ಮೇಲೂ, ಪತಂಗವೊಂದು ಸುಂದರವಾಗಿಯೇ ಉಳಿದಿರುತ್ತದೆ.-ಚಿತ್ರಾ
>ದನ್ಯವಾದಗಳು ಚಿತ್ರಾ..
>ರಾಘವೇಂದ್ರ,ರಸ್ಕಿನ್ ಬಾಂಡ್ ಬರೆದ ಸಾಹಿತ್ಯವನ್ನು ನಾನು ಓದಿಲ್ಲ. ಆದರೆ ನೀವು ಅನುವಾದಿಸಿದ ‘ಮುನ್ನುಡಿ’ ಸ್ವಾರಸ್ಯಕರವಾಗಿದೆ.ನಿಮ್ಮ ಬ್ಲಾಗ್ ಮೂಲಕ ರಸ್ಕಿನ್ ಬಾಂಡ್ ಬಗೆಗೆ ಹೆಚ್ಚಿಗೆ ತಿಳಿಯುವ ಆಸೆ ನನ್ನದು.
Wow, fantastic weblog structure! How lengthy have you been running a blog for?
you make blogging glance easy. The whole glance of your
website is excellent, let alone the content! You can see
similar here ecommerce